ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಥಿಕ ಯೋಜನೆಗಳು

ವ್ಯಾಪಕಾರ್ಥದಲ್ಲಿ ಈ ಪದವನ್ನು, ಒಂದು ರಾಷ್ಟ್ರದ ಸಮಗ್ರ ಆರ್ಥಿಕ ವ್ಯವಸ್ಥೆಯನ್ನು ಸಮಾಜವಾದಿ ತತ್ತ್ವದ ತಳಹದಿಯ ಮೇಲೆ ಪುನಾರಚಿಸುವ ಪ್ರಯತ್ನಕ್ಕೆ ಅನ್ವಯಿಸಲಾಗಿದೆ.

ಸಂಕುಚಿತಾರ್ಥದಲ್ಲಿ, ಒಂದು ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿಯ ಕೆಲವೇ ವಿಭಾಗಗಳನ್ನು, ಅಂದರೆ ಸಂಪತ್ತಿನ ಉತ್ಪಾದನೆ ಹಾಗೂ ವಿತರಣೆಗಳನ್ನಷ್ಟೇ ಯೋಜನಾಬದ್ಧ ವ್ಯವಸ್ಥೆಗೆ ಒಳಪಡಿಸುವ ಪ್ರಯತ್ನಕ್ಕೆ ಅನ್ವಯಿಸಲಾಗಿದೆ. ಆರ್ಥಿಕ ಯೋಜನೆಗಳು ಸಾಮಾನ್ಯವಾಗಿ ಒಂದು ರಾಷ್ಟ್ರದ ಪರಿಮಿತಿಗೆ ಒಳಗಾಗಿರುವುದರಿಂದ ಅಂಥ ಯೋಜನೆಗಳನ್ನು ರಾಷ್ಟ್ರೀಯ ಆರ್ಥಿಕ ಯೋಜನೆಗಳೆಂದು ಹೇಳಬಹುದು.


ಇಂಥ ಯಾವುದೇ ಯೋಜನೆಯಿರಲಿ, ಅದು ಒಂದು ಸಾಮಾನ್ಯ ಊಹೆಯ ಮೇಲೆ ಆಧಾರಿತವಾಗಿರುತ್ತದೆ. ಇಂಥ ಊಹೆ ಬಂಡವಾಳಗಾರಿಕೆಯ ಮುಖ್ಯ ದುರ್ಬಲತೆಯಾದ ವಾಣಿಜ್ಯ ಆವರ್ತದ (ಟ್ರೇಡ್ ಸೈಕಲ್) ದುಷ್ಪರಿಣಾಮಗಳ ವಿಚಾರವಾಗಿ ಇರುವುದು. ಬಂಡವಾಳಶಾಹಿ ಪದ್ಧತಿಯ ಆರ್ಥಿಕ ವ್ಯವಸ್ಥೆಯಲ್ಲಿ ತಾತ್ಪೂರ್ತಿಕ ಆರ್ಥಿಕ ಸಮೃದ್ಧಿಕಾಲ (ಬೂಮ್) ಹಾಗೂ ಆರ್ಥಿಕ ಮುಗ್ಗಟ್ಟಿನ ಕಾಲ (ಡಿಪ್ರೆಷನ್)ಗಳು ಒಂದನ್ನೊಂದು ಹಗಲು ರಾತ್ರಿಗಳಂತೆ ಅನುಸರಿಸುತ್ತ ಸ್ವಯಂನಿರ್ಧಾರಿತ ಗತಿಯಲ್ಲಿ ಬರುವುವು. ಈ ವಾಣಿಜ್ಯ ಆವರ್ತ ಒಂದೇ ದೇಶದ ಪರಿಮಿತಿಗೆ ಒಳಗಾಗದೆ ಬಂಡವಾಳಗಾರಿಕೆಯ ಪದ್ಧತಿಯ ಮೇಲೆ ಆಧರಿಸಿದ ಹಾಗೂ ಅಂತಾರಾಷ್ಟ್ರೀಯ ಅನಿರ್ಬಂಧಿತ ವ್ಯಾಪಾರದಲ್ಲಿ ಭಾಗವಹಿಸುವ ಎಲ್ಲ ದೇಶಗಳ ಆರ್ಥಿಕ ವ್ಯವಸ್ಥೆಯನ್ನೂ ಬಾಧಿಸುವುದು.


ವಾಣಿಜ್ಯ ಆವರ್ತನೆಯಲ್ಲಿ ಮುಖ್ಯವಾಗಿ ಆರ್ಥಿಕ ಮುಗ್ಗಟ್ಟಿನ ಕಾಲ ಮುಗಿದು ತಿರುಗಿ ಆರ್ಥಿಕ ವ್ಯವಸ್ಥೆ ಚೇತನಗೊಳ್ಳುವಾಗಿನ ಪರಿಸ್ಥಿತಿ ಬಹಳ ಕಷ್ಟದಾಯಕವಾಗುವುದು. ಕೂಲಿಕಾರವರ್ಗ ಹಾಗೂ ಸಾಮಾನ್ಯ ಜನತೆ ನಿರುದ್ಯೋಗ ಹಾಗೂ ಬಡತನದ ಪರಿಸ್ಥಿತಿಯಿಂದ ಘಾಸಿಗೊಳ್ಳುವುದು. ಇಂಥ ದುಃಸ್ಥಿತಿಯಿಂದ ಅನೇಕ ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳು ಉದ್ಭವಿಸುವುವು. ದೇಶದಲ್ಲಿಯ ಇಂಥ ಪ್ರಕ್ಷುಬ್ಧ ಪರಿಸ್ಥಿತಿಗೆ ಪರಿಹಾರವನ್ನು ಯೋಚಿಸುವುದು ಬಂಡವಾಳಶಾಹಿ ಪದ್ಧತಿಗೆ ನಿಲುಕದ ಮಾತಾಗಿತ್ತು. ಬಂಡವಾಳಶಾಹಿಯ ಮುಖ್ಯ ಚಾಲಕಶಕ್ತಿ, ಲಾಭದ ಧೋರಣೆ, ಆರ್ಥಿಕ ಮುಗ್ಗಟ್ಟು ಉಂಟಾದಾಗ ಬೆಲೆಗಳು ನಿರಂತರ ಇಳಿಮುಖವಾಗುವುವು. ಇಂಥ ಪರಿಸ್ಥಿತಿಯಲ್ಲಿ ಉತ್ಪಾದನೆಯನ್ನು ಮುಂದುವರಿಸು ವುದು ಅಥವಾ ಹೊಸ ಉತ್ಪಾದನೆಯನ್ನು ಕೈಗೊಳ್ಳುವುದು ಲಾಭಧೋರಣೆಗೆ ವಿಸಂಗತ. ಇದರಿಂದ ಕಾರ್ಖಾನೆಗಳು ಮುಚ್ಚುವುವು. ನಿರುದ್ಯೋಗ ಹೆಚ್ಚಿದಾಗ ಜನರ ಆದಾಯದ ಮೇಲೆ ಪರಿಣಾಮವಾಗುವುದರಿಂದ ಪೇಟೆಯಲ್ಲಿ ಬೇಡಿಕೆ ಕುಗ್ಗುವುದು. ಇಂಥ ಬೇಡಿಕೆಯ ಕುಗ್ಗು ಪುನಃ ಬೆಲೆಯ ಇಳಿಮುಖ ಪ್ರವೃತ್ತಿಯನ್ನು ಮತ್ತಷ್ಟು ತೀವ್ರಗೊಳಿಸುವುದು. ಇಂಥ ಪರಿಸ್ಥಿತಿಗೆ ಬಂಡವಾಳಶಾಹಿ ಸೂಚಿಸುವ ಚಿಕಿತ್ಸೆ-ಕೂಲಿಕಾರರ ವೇತನದಲ್ಲಿ ಕಡಿತ ಮತ್ತು ಬಂಡವಾಳದ ಮೇಲಿನ ಬಡ್ಡಿದರದಲ್ಲಿ ಹೆಚ್ಚಳ ಇವೆರಡೂ-ಬಂಡವಾಳಗಾರರಿಗೇ ಲಾಭದಾಯಕವಾದುವು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಕೂಲಿಕಾರ ಆಂದೋಲನ ಈ ಚಿಕಿತ್ಸೆಗಳಿಗೆ ತೀವ್ರವಾದ ವಿರೋಧವನ್ನು ತೋರಿದುದರಿಂದ ಪರಿಸ್ಥಿತಿ ಮತ್ತೂ ಜಟಿಲವಾಗತೊಡಗಿತು.


ಒಂದನೆಯ ಮಹಾಯುದ್ಧದ ಅನಂತರ ೧೯೨೯ರ ಸುಮಾರಿಗೆ ಇಡೀ ಯುರೋಪ್ ಖಂಡವೇ ಬಹು ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. ಇದರಿಂದ ಅನೇಕ ರಾಷ್ಟ್ರಗಳಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ಸರ್ವಾಧಿಕಾರ ರಾಜ್ಯಪದ್ಧತಿಗೆ ಅನುವು ಮಾಡಿಕೊಟ್ಟಿತು. ಈ ಆರ್ಥಿಕ ಮುಗ್ಗಟ್ಟು ಬಂಡವಾಳಶಾಹಿ ಪದ್ಧತಿಯ ಅಳತೆ ಗೋಲಾಗಿ ಪರಿಣಮಿಸಿತು. ಇದೇ ಸಮಯದಲ್ಲಿ ಸೋವಿಯಕ್ ರಷ್ಯ ಆರ್ಥಿಕ ಯೋಜನೆ ಯನ್ನು ಪ್ರಾರಂಭಿಸಿದುದರಿಂದ ಯುರೋಪಿನ ಆರ್ಥಿಕ ಮುಗ್ಗಟ್ಟು ಆ ದೇಶದ ಮೇಲೆ ಏನೂ ಪರಿಣಾಮ ಮಾಡಲಿಲ್ಲ. ಈ ಘಟನೆಯಿಂದ ಯುರೋಪಿನ ಅನೇಕ ಅರ್ಥಶಾಸ್ತ್ರಜ್ಞರು ಪ್ರಭಾವಿತರಾದರು.


ವ್ಯಾಪಾರೀ ಧೋರಣೆಯ ದುಷ್ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಸರ್ಕಾರ ಕ್ರಿಯಾತ್ಮಕ ಹೆಜ್ಜೆಯನ್ನಿಡುವುದು ಅವಶ್ಯ ಎಂಬ ತತ್ತ್ವವನ್ನು ಪ್ರತಿಪಾದಿಸಿದವರಲ್ಲಿ ಇಂಗ್ಲೆಂಡಿನ ಲಾರ್ಡ್ ಕೇನ್ಸ್ ಎಂಬ ಅರ್ಥಶಾಸ್ತ್ರಜ್ಞರು ಮೊದಲಿಗರೆನ್ನಬಹುದು. ಲಾರ್ಡ್ ಕೇನ್ಸ್‌ರ ಪ್ರತಿಪಾದನೆ ಅರ್ಥಶಾಸ್ತ್ರದಲ್ಲಿ ಈವರೆಗೆ ಪ್ರಚಲಿತವಾಗಿದ್ದ ಬಂಡವಾಳಶಾಹಿಯ ತತ್ತ್ವವಾದ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರ ಸಕ್ರಿಯ ಭಾಗವಹಿಸುವುದು ಅನಪೇಕ್ಷ (ಲೇಜೆಫೇರ್) ಅಥವಾ ವೈಯಕ್ತಿಕ ಸ್ವಾತಂತ್ರ್ಯ ತತ್ವವನ್ನು ಬುಡಮೇಲು ಮಾಡಿತು. ಇವರ ವಿಚಾರಧಾರೆ ಯಿಂದ ಪ್ರಭಾವಿತನಾದ ಅಮೆರಿಕದ ಆಗಿನ ಅಧ್ಯಕ್ಷ ರೂಸ್ವೆಲ್ಟ್ ಆರ್ಥಿಕ ಮುಗ್ಗಟ್ಟಿನಿಂದುಂ ಟಾದ ಪರಿಸ್ಥಿತಿಯನ್ನು ಪರಿಹರಿಸಲು ನ್ಯೂ ಡೀಲ್ ಎಂಬ ತಾತ್ಪೂರ್ತಿಕ ಯೋಜನೆ ಯನ್ನು ಪ್ರಾರಂಭಿಸಿದ. ಆಗ ಸರ್ಕಾರ ಆರಂಭಿಸಿದ ಟಿ.ವಿ.ಎ. ಅಥವಾ ಟೆನನ್ಸಿ ವ್ಯಾಲಿ ಅಥಾರಿಟಿ ಸಂಸ್ಥೆ ಇನ್ನೂ ಅಮೆರಿಕದ ಯೋಜನಾ ಸಾಹಸದ ಮಧುರ ಸ್ಮೃತಿಯಾಗಿ ನಿಂತಿದೆ. ಅನಂತರ ನಾಜಿ ಜರ್ಮನಿಯಲ್ಲಿ ಸರ್ವಾಧಿಕಾರಿಯಾದ ಹಿಟ್ಲರ್ ನಾಲ್ಕು ವರ್ಷಗಳ ಯೋಜನೆಯನ್ನು ಆರಂಭಿಸಿದ. ಅಲ್ಲದೆ ಇಂಗ್ಲೆಂಡಿನಲ್ಲೂ ಕೂಲಿಕಾರ ಹಿತವನ್ನು ಸಾಧಿಸುವ ಬೆವರಿದಡ್ಜ್ ಪ್ಲಾನ್ ಎಂಬ ಕಾರ್ಯಕ್ರಮವೂ ಪ್ರಾರಂಭಿಸಲ್ಪಟ್ಟಿತು.

೨೦ನೆಯ ಶತಮಾನವನ್ನು ನಾವು ಯೋಜನಾಯುಗವೆಂದು ಕರೆದರೆ ಅತಿಶಯೋಕ್ತಿ ಯೆನಿಸದು. ಯೋಜನಾಬದ್ಧ ಆರ್ಥಿಕ ವ್ಯವಸ್ಥೆ ಒಂದಲ್ಲ ಒಂದು ಹೆಸರಿನಿಂದ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಆವಿರ್ಭಾವಗೊಂಡಿದೆ. ಸಾಮ್ರಾಜ್ಯಶಾಹಿಯ ಹಿಡಿತದಿಂದ ಮುಕ್ತವಾದ ಏಷ್ಯ ಹಾಗೂ ಆಫ್ರಿಕದ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಂತೂ ಯೋಜನಾತಂತ್ರ ಪ್ರಗತಿಯ ಆಶಾಕಿರಣವಾಗಿ ಪರಿಣಮಿಸಿದೆ. ಬಂಡವಾಳಶಾಹಿಯ ಪದ್ಧತಿಯನ್ನು ಅನುಸರಿಸುವ ಅಭಿವೃದ್ಧಿ ರಾಷ್ಟ್ರಗಳಲ್ಲಿ ಆರ್ಥಿಕ ಆವರ್ತದಿಂದ ಉಂಟಾಗುವ ಪರಿಸ್ಥಿತಿಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಮಾನ್ಯ ಆರ್ಥಿಕ ಪರಿಸ್ಥಿತಿಗೂ ಬಹಳ ಸಾಮ್ಯವಿದೆ. ನಿರುದ್ಯೋಗ, ಬಡತನ, ಬೇಡಿಕೆಯಲ್ಲಿ ಜನರ ಹಾಗೂ ಬಂಡವಾಳಶಾಹಿಯ ನಿರುತ್ಸಾಹ-ಇವು ಸಾಮಾನ್ಯ ಅಂಶಗಳು. ಜನಸಾಮಾನ್ಯರ ಸಾಂಪ್ರದಾಯಿಕತೆ, ಸಾಮಾಜಿಕ ಹಿಂದುಳಿಕೆ, ನಿರಕ್ಷರತೆ ಹಾಗೂ ಬಂಡವಾಳದ ಅಭಾವ-ಇವು ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿನ ಹೆಚ್ಚಿನ ಅಂಶಗಳು.


ಆರ್ಥಿಕ ಯೋಜನೆಯನ್ನು ಕೈಗೊಳ್ಳುವ ದೇಶದಲ್ಲಿ ಮುಖ್ಯವಾಗಿ ಉತ್ಪಾದನೆಯನ್ನು ಸರ್ಕಾರವೇ ನಿರ್ವಹಿಸಬಹುದು ಅಥವಾ ಪ್ರೋತ್ಸಾಹಿಸಬಹುದು. ಇಲ್ಲಿ ಉತ್ಪಾದನೆಯ ಮುಖ್ಯ ಗುರಿ ವೈಯಕ್ತಿಕ ಲಾಭದ ಆಸೆಯಲ್ಲ, ದೇಶದ ಆವಶ್ಯಕತೆ. ಇದರಿಂದ ಯೋಜನಾಬದ್ಧ ಆರ್ಥಿಕ ವ್ಯವಸ್ಥೆ ಆರ್ಥಿಕ ಆವರ್ತದಿಂದ ಉಂಟಾಗುವ ಪರಿಸ್ಥಿತಿಯನ್ನು ತಡೆಗಟ್ಟಿ ಮುಂದೆ ಆರ್ಥಿಕ ಆವರ್ತ ಪರಿಣಾಮವನ್ನು ಮಾಡುವಂತೆ ಉಪಾಯ ಯೋಜಿಸಲು ಸಹಾಯಕ ಎಂಬುದು ಅನುಭವಿಸಿದ್ಧ ಮಾತಾಗಿದೆ.

ಬಂಡವಾಳಗಾರಿಕೆಯ ಪದ್ಧತಿಯೂ ಒಂದು ಸುವ್ಯವಸ್ಥಿತ ಯೋಜನೆಯನ್ನೊಳ ಗೊಂಡಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಅದಕ್ಕೆ ಬೆಲೆಯ ಯಾಂತ್ರಿಕತೆ ಎನ್ನುವರು. ಬೆಲೆಯ ಯಾಂತ್ರಿಕತೆಯ ತತ್ತ್ವ ಸಫಲವಾಗಬೇಕಾದರೆ ಆರ್ಥಿಕ ವ್ಯವಸ್ಥೆಯಲ್ಲಿ ಗ್ರಾಹಕರ ಪ್ರಭುತ್ವ, ಅನಿರ್ಬಂಧಿತ ವ್ಯಾಪಾರ, ಉತ್ಪಾದಕರ ಹಾಗೂ ಗ್ರಾಹಕರ ವರ್ಗದಲ್ಲಿ ಪರಸ್ಪರ ಪೈಪೋಟಿ ಅಥವಾ ಸ್ಪರ್ಧೆ (ಫ್ರೀ ಕಾಂಪಿಟಿಷನ್) ಇವು ಅತ್ಯಾವಶ್ಯಕ ಅಂಶಗಳು. ಆದರೆ ಬಂಡವಾಳಶಾಹಿ ತನ್ನ ಐತಿಹಾಸಿಕ ಉದ್ದೇಶವಾದ ಕೇವಲ ಉತ್ಪಾದನೆಯ ಹೆಚ್ಚಳವನ್ನು ಸಾಧಿಸುವ ಪ್ರಯತ್ನದಿಂದ ಅನಿರ್ಬಂಧಿತ ವ್ಯಾಪಾರ ಹಾಗೂ ಉತ್ಪಾದಕರ ಸ್ಪರ್ಧೆಯ ಅಂಶಗಳನ್ನು ಬದಿಗೊತ್ತಿ ಗುತ್ತಿಗೆದಾರಿ ಅಥವಾ ಏಕಸ್ವಾಮ್ಯ ಪದ್ಧತಿಗೆ ಎಡೆಮಾಡಿಕೊಟ್ಟಿದೆ. ಇದರಿಂದ ಉತ್ಪಾದಿತ ಸಂಪತ್ತಿನ ವಿತರಣೆಯಲ್ಲೂ ವಿಷಮತೆ ಉಂಟಾಗಿ ಬಂಡವಾಳಶಾಹಿ ಪ್ರಭುತ್ವಕ್ಕೆ ಎಡೆಮಾಡಿಕೊಟ್ಟಿದೆ. ಇಂಥ ಪರಿಸ್ಥಿತಿಗೆ ಔದ್ಯೋಗಿಕ ಕ್ರಾಂತಿಯ ತರುವಾಯ ಉಂಟಾದ ಬಂಡವಾಳದ ಪ್ರಾಬಲ್ಯವುಳ್ಳ ಯಾಂತ್ರೀಕೃತ ಉತ್ಪಾದನೆಯ ಪದ್ಧತಿಯೂ ಕೆಲಮಟ್ಟಿಗೆ ಕಾರಣ. ಉತ್ಪಾದನೆ ಏಕಸ್ವಾಮಿತ್ವದ ಕೈಯಲ್ಲಿ ಸಿಕ್ಕುವುದರಿಂದ ಪೇಟೆಗಳ ಮೇಲೆ ಅವುಗಳ ಪ್ರಭುತ್ವ ಹೆಚ್ಚಾಗಿ ಬೆಲೆಯ ಯಾಂತ್ರಿಕತೆಗೆ ವ್ಯತ್ಯಯ ಉಂಟಾಗುವುದು. ಏಕಸ್ವಾಮ್ಯ ಬಂಡವಾಳಗಾರರು ಕೇವಲ ಹೆಚ್ಚಿನ ಲಾಭದ ಆಸೆಯಿಂದಲೇ ಉತ್ಪಾದನೆಯನ್ನು ಪ್ರಾರಂಭಿಸುವರು. ಹಾಗೂ ಯಾವ ವಸ್ತುಗಳ ಉತ್ಪಾದನೆ ಹೆಚ್ಚು ಲಾಭಕಾರಕವೋ ಅಂಥ ವಸ್ತುಗಳ ಉತ್ಪಾದನೆಯನ್ನೇ ಹೆಚ್ಚಿಸುವರು. ಇಂಥ ಪರಿಸ್ಥಿತಿ ಆರ್ಥಿಕ ಮುಗ್ಗಟ್ಟನ್ನು ತೀವ್ರಗೊಳಿಸುವುದು. ಆದರೆ ಆರ್ಥಿಕ ಯೋಜನೆಯನ್ನು ಅನುಸರಿಸುವುದರಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸರ್ಕಾರದ ವರ್ಚಸ್ಸು ಹೆಚ್ಚಾಗಿ ಉತ್ಪಾದನೆ ಹಾಗೂ ವಿತರಣೆಗಳು ಸಾಮಾಜಿಕ ಹಿತವನ್ನೇ ಹೆಚ್ಚಿಸುವ ರೀತಿಯಲ್ಲಿ ಮಾರ್ಪಡುತ್ತವೆ. ಅಲ್ಲಿ ಕೆಲವೇ ವ್ಯಕ್ತಿಗಳ ಹಾಗೂ ಗುಂಪುಗಳ ಹಿತಕ್ಕಿಂತ ಸಮಾಜದ ಆವಶ್ಯಕತೆಯ ಕಡೆಗೇ ಹೆಚ್ಚು ಗಮನವಿರುವುದು. 2೦ನೆಯ ಶತಮಾನದಲ್ಲಿ ಇಡೀ ಜಗತ್ತಿನ ಗಮನವನ್ನೇ ಸೆಳೆದ ಸಮಾಜವಾದ, ಆರ್ಥಿಕ ರಾಷ್ಟ್ರೀಯತೆ (ಎಕನಾಮಿಕ್ ನ್ಯಾಷನಲಿಸಂ) ಮತ್ತು ಕ್ಷೇಮರಾಜ್ಯ ಈ ಮೂರು ರಾಜಕೀಯ ತತ್ತ್ವಗಳು ಆರ್ಥಿಕ ಯೋಜನೆಯ ಅಡಿಗಲ್ಲುಗಳಾಗಿವೆ.


ಆರ್ಥಿಕ ಯೋಜನೆಯೆಂದರೆ ಸಾಮಾನ್ಯವಾಗಿ ಒಂದು ಆರ್ಥಿಕ ಕಾರ್ಯಕ್ರಮವನ್ನು ನಿರ್ದಿಷ್ಟ ಅವಧಿಯಲ್ಲಿ ಪುರ್ತಿಗೊಳಿಸಲು ನಿಶ್ಚಯಿಸಿ ಅದಕ್ಕಾಗಿ ಕೈಗೊಳ್ಳುವ ಸಮಗ್ರ ವ್ಯವಸ್ಥೆ ಅಥವಾ ಕ್ರಮ ಎಂದು ಅರ್ಥ ಮಾಡಬಹುದು. ಯಾವುದೇ ಯೋಜನೆಯಲ್ಲಿ ಎರಡು ಮೂಲತತ್ತ್ವಗಳು ಅಡಕವಾಗಿರಬೇಕು. ಒಂದು ನಿರ್ದಿಷ್ಟ ಗುರಿ; ಅದನ್ನು ಸಾಧಿಸಲು ಅಷ್ಟೇ ನಿರ್ದಿಷ್ಟ ಸಾಧನ. ಇವು ಪ್ರತಿಯೊಂದು ಯೋಜನೆಯಲ್ಲಿರತಕ್ಕ ಮುಖ್ಯ ಗುಣಗಳು. ಇದೇ ಒಂದು ಯೋಜನೆಗೂ ಕೇವಲ ಒಂದು ಕಾರ್ಯಕ್ರಮಕ್ಕೂ ಇರುವ ಅಂತರ. ಬೇರೆ ಬೇರೆ ಯೋಜನೆಗಳನ್ನು ಸಾಧಿಸಲು ಬೇರೆ ಬೇರೆ ಚಟುವಟಿಕೆಗಳಿಗೆ ಸಂಬಂಧಿಸಿದ ಒಂದು ಕಾರ್ಯಕ್ರಮವನ್ನು ಪುರೈಸುವುದಕ್ಕಾಗಿ ನಿಶ್ಚಯಿಸಿದ ಸಮಗ್ರ (ಆರ್ಥಿಕ ವ್ಯವಸ್ಥೆಯ ವಿವಿಧ ಭಾಗಗಳಿಗೂ ಅನ್ವಯಿಸುವ) ಒಂದು ಏರ್ಪಾಡು ಎಂದು ಮಾಡಬಹುದು. ಇದರಿಂದ ಆರ್ಥಿಕ ಯೋಜನೆ ಜನರ ಸಮಸ್ತ ಆರ್ಥಿಕ ಜೀವನಕ್ಕೆ, ಅಂದರೆ ಉತ್ಪಾದನೆ ವಿತರಣೆ ಹಾಗೂ ಬಂಡವಾಳ ವಿನಿಯೋಗ ಮುಂತಾದ ಎಲ್ಲ ಆರ್ಥಿಕ ಚಟುವಟಿಕೆಗಳಿಗೂ ಅನ್ವಯಿಸುವ ಒಂದು ವಿಶಾಲವಾದ ಕಾರ್ಯಕ್ರಮವೆಂಬುದು ಸ್ಪಷ್ಟವಾಗುವುದು. ಉತ್ಪಾದನೆಯನ್ನು ಸಾಮಾಜಿಕ ಆವಶ್ಯಕತೆಗಳಿಗೆ ಹೊಂದಿಸಿಕೊಳ್ಳುವುದೇ ಯೋಜನೆ ಎಂದೂ ವ್ಯಾಖ್ಯೆಯನ್ನು ಮಾಡಬಹುದಾಗಿದೆ.


ಯೋಜನೆಯ ತಂತ್ರದಲ್ಲಿ ವಿರಳವಾದ ಸಂಪನ್ಮೂಲಗಳನ್ನು ಕಡಿಮೆ ಸಮಯದಲ್ಲಿಯೇ ತೀವ್ರವಾದ ಆರ್ಥಿಕ ಬೆಳೆವಣಿಗೆಗಾಗಿ ಉಪಯೋಗಿಸುವ ಪ್ರಯತ್ನವಿರುವುದರಿಂದ ಹೆಚ್ಚಿನ ಶಿಸ್ತು ಹಾಗೂ ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿಯ ಹೊಂದಾಣಿಕೆ ಮುಖ್ಯವಾಗಿದೆ. ಯೋಜನೆಯಲ್ಲಿ ಆರ್ಥಿಕ ಬೆಳೆವಣಿಗೆಯನ್ನು ನಿದರ್ಶಿಸಲು ಕೆಲವು ಸಲ ಒಂದು ಬೆಳೆವಣಿಗೆಯ ಮಾದರಿಯನ್ನು (ಗ್ರೋತ್ ಮಾಡೆಲ್) ರಚಿಸುವರು. ಆದರೆ ಆರ್ಥಿಕ ಬೆಳೆವಣಿಗೆಯಲ್ಲಿ ಅನೇಕ ಸ್ಥಿತ್ಯಂತರ ಹೊಂದುವಂಥ ಘಟಕಗಳು ಬೆಳೆವಣಿಗೆಯ ಮೇಲೆ ಪರಿಣಾಮ ಬೀರುವುದರಿಂದ ಅಂಥ ಘಟಕಗಳನ್ನೆಲ್ಲ ಒಂದುಗೂಡಿಸಿ ಒಂದು ಮಾದರಿಯನ್ನು ರಚಿಸುವುದು ಬೆಳೆವಣಿಗೆಯಲ್ಲಿ ಹುದುಗಿರುವ ಕ್ಲಿಷ್ಟ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳ ದೃಷ್ಟಿಯಿಂದ ಬಹಳ ಕಾಲ್ಪನಿಕವೂ ಅವಾಸ್ತವಿಕವೂ ಆಗಬಹುದು. ಯೋಜನೆ ಕೇವಲ ವ್ಯಾಪಾರೀ ಜನರಿಂದ ಉಂಟಾದ ಸಮತೋಲದಲ್ಲಿನ ವ್ಯತ್ಯಯವನ್ನು ಸರಿಪಡಿಸಲು ಕೈಗೊಳ್ಳುವ ಉಪಾಯವಲ್ಲ. ಅದು ಶೀಘ್ರವಾದ ಆರ್ಥಿಕ ಬೆಳೆವಣಿಗೆಯನ್ನು ಸಾಧಿಸುವ ಉದ್ದೇಶದಿಂದ ಒಂದು ದೇಶದೊಳಗಿನ ಆರ್ಥಿಕ ಸಂಸ್ಥೆಗಳನ್ನೂ ಜನರ ಪ್ರವೃತ್ತಿಗಳನ್ನೂ ನಿರ್ದಿಷ್ಟವಾದ ಶಿಸ್ತಿಗೆ ಒಳಪಡಿಸುವ ಒಂದು ಕ್ರಮ. ಒಂದು ದೃಷ್ಟಿಯಿಂದ ಅದೊಂದು ಸಮಾಜದ ರಚನೆಯಲ್ಲಿಯೇ ಮೂಲಭೂತ ಸಾಮಾಜಿಕ ಆರ್ಥಿಕ ಬದಲಾವಣೆಗಳನ್ನು ಪ್ರಚಾರ ಮಾಡುವ ಸಕ್ರಿಯ ಆಂದೋಲನವೇ ಆಗಿರಬೇಕು. ಇಚ್ಛಿತ ಬದಲಾವಣೆಗಳನ್ನು ಸಾಧಿಸುವುದಕ್ಕೋಸ್ಕರ ಮೇಲಿಂದ ಮೇಲೆ ವಸ್ತುನಿಷ್ಠವಾಗಿ ಆರ್ಥಿಕ ವಿಶ್ಲೇಷಣೆಯನ್ನು ಮಾಡಿ ಯೋಗ್ಯ ನೀತಿಯನ್ನು ಪ್ರತಿಪಾದಿಸುವ ನಿರ್ದೇಶನಗಳನ್ನು ನೀಡುತ್ತಿರಬೇಕು. ಯಾವುದೇ ಯೋಜನೆಯಲ್ಲಿ ಒಂದಲ್ಲ ಒಂದು ರೀತಿಯಿಂದ ಮುನ್ನೋಟ ಹಾಗೂ ಮಾರ್ಗದರ್ಶನಗಳ ಸಂಯೋಜನವಿರಬೇಕು. ಐತಿಹಾಸಿಕ ಕಾರ್ಯಗತಿಯಂ ತೆಯೇ ಯೋಜನೆ ವಸ್ತುನಿಷ್ಠ ಹಾಗೂ ವ್ಯಕ್ತಿನಿಷ್ಠ ತತ್ತ್ವಗಳ ಸಮ್ಮಿಶ್ರಣವಾಗಿರುವುದು ಆವಶ್ಯಕ. ಐತಿಹಾಸಿಕ ಸಮಯದಿಂದಲೂ ನಡೆದುಬಂದ ಆರ್ಥಿಕ ಬೆಳೆವಣಿಗೆಯನ್ನು ಸದ್ಯದ ಕೆಲವೇ ತೀವ್ರ ಕ್ರಿಯಾತ್ಮಕ ವರ್ಷಗಳಲ್ಲಿ ಸಾಧಿಸುವ ಒಂದು ಪ್ರಯತ್ನ ಯೋಜನಾಕ್ರಮ. ಆದ್ದರಿಂದ ಪ್ರತಿಯೊಂದು ಯೋಜನೆಯೂ ವಸ್ತುನಿಷ್ಠೆಯ ದೃಷ್ಟಿಯಿಂದ ನೋಡಿದಾಗ ಯಾವುದು ಅನಿವಾರ್ಯವೋ ಅಂಥ ಪರಿಸ್ಥಿತಿಗಳನ್ನು ಕುರಿತು ಮುಂದಾಲೋಚನೆ ಹಾಗೂ ಅಪೇಕ್ಷಿತ ವಿಷಯಗಳ ಬಗ್ಗೆ ಯೋಜನೆ ಈ ಎರಡೂ ತತ್ತ್ವಗಳ ಸಮ್ಮಿಶ್ರಣ.


ಆರ್ಥಿಕ ಯೋಜನೆಗಳು ವ್ಯಕ್ತಿಸ್ವಾತಂತ್ರ್ಯಕ್ಕೆ ಬಾಧಕವಾದ್ದರಿಂದ ಪ್ರಜಾಪ್ರಭುತ್ವ ಮತ್ತು ಆರ್ಥಿಕಯೋಜನೆಗಳು ಒಟ್ಟಿಗೆ ಬಾಳುವುದು ಅಸಾಧ್ಯ ಎಂಬ ತರ್ಕ ಸ್ವಲ್ಪಮಟ್ಟಿಗೆ ಕೇಳಿಬರುತ್ತಿತ್ತು. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಸ್ವಾತಂತ್ರ್ಯ ಒಂದು ಮೂಲತತ್ತ್ವ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನಸ್ಸಿಗೆ ಸರಿಯೆನಿಸಿದ ಆರ್ಥಿಕ ವ್ಯವಹಾರವನ್ನು ನಡೆಸಲು ಸಂಪೂರ್ಣ ಸ್ವತಂತ್ರನಾಗಿರುತ್ತಾನೆ. ಆದರೆ ಯೋಜನಾಬದ್ಧ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆ ಹಾಗೂ ವಿತರಣೆಗಳು ಪುರ್ವ ನಿರ್ದಿಷ್ಟವಾದುವು. ವ್ಯಕ್ತಿಗಳೂ ಸಂಸ್ಥೆಗಳೂ ತಮ್ಮ ಆರ್ಥಿಕ ಚಟುವಟಿಕೆಗಳನ್ನು ಯೋಜನೆಯ ನಿರ್ದೇಶನಕ್ಕನುಗುಣವಾಗಿ ರೂಪಿಸಿಕೊಳ್ಳುವುದು ಅನಿವಾರ್ಯ. ಕೆಲವೊಮ್ಮೆ ಒಬ್ಬ ವ್ಯಕ್ತಿ ಯಾವ ಸರಕುಗಳನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಬೇಕೆಂಬುದನ್ನು ಯೋಜನಾಮಂಡಳಿಯೇ ನಿರ್ಣಯಿಸಬಹುದು. ಯೋಜನೆಯಲ್ಲಿ ವ್ಯಕ್ತಿಯ ಆವಶ್ಯಕತೆಗಿಂತ ಒಟ್ಟು ಸಮಾಜದ ಆವಶ್ಯಕತೆಯ ಕಡೆಗೇ ಹೆಚ್ಚು ಗಮನವಿರು ವುದು. ಸಮಾಜದ ಆವಶ್ಯಕತೆಗಳನ್ನು ನಿರ್ಧರಿಸುವ ಸಂಸ್ಥೆ ಸರ್ಕಾರದಿಂದ ರಚಿಸಲ್ಪಟ್ಟ ಯೋಜನಾಮಂಡಳಿ. ಇದರಿಂದ ವ್ಯಕ್ತಿಸ್ವಾತಂತ್ರ್ಯಕ್ಕೆ ಚ್ಯುತಿಯುಂಟಾಗುವ ಸಂಭವವಿದೆ ಎಂಬುದು ಆವಾದ.


ಆದರೆ ನಿಷ್ಪಕ್ಷಪಾತ ಭಾವನೆಯಿಂದ ವಿಚಾರ ಮಾಡಿದಾಗ ಆರ್ಥಿಕಜೀವನದಲ್ಲಿ ವ್ಯಕ್ತಿಸ್ವಾತಂತ್ರ್ಯವೆಂಬುದು ಕೇವಲ ಕಾಲ್ಪನಿಕವೇ ಹೊರತು ವಾಸ್ತವಿಕವಲ್ಲವೆಂಬುದು ಕಂಡು ಬರುವುದು. ವಾಸ್ತವಿಕ ಜಗತ್ತಿನಲ್ಲಿ ವ್ಯಕ್ತಿ ಯಾವ ವಸ್ತುಗಳನ್ನು ಅನುಭೋಗಿಸುವನೆಂಬುದು, ಅವನ ಆದಾಯ, ಅನುಭೋಗದ ಅಭ್ಯಾಸ ಹಾಗೂ ಸುತ್ತಲಿನ ವಾತಾವರಣ ಇವುಗಳನ್ನು ಅವಲಂಬಿಸಿರುವುದು. ಅಂಚಿನ ತತ್ತ್ವದ ಪ್ರತಿಪಾದಕರ ವಿಚಾರದಂತೆ ಬಂಡವಾಳಗಾರನ ಸ್ವತಂತ್ರ ಆರ್ಥಿಕವ್ಯವಸ್ಥೆಯಲ್ಲಿ ಗ್ರಾಹಕರ ಪ್ರಭುತ್ವ, ಅವರಿಗೆ ಸ್ವತಂತ್ರ ಆಯ್ಕೆಗೆ ಅವಕಾಶ ಕಲ್ಪಿಸಿಕೊಡುವುದರಿಂದ ಉತ್ಪಾದಕ ಹಾಗೂ ಮಾರಾಟಗಾರ ಗ್ರಾಹಕ ವರ್ಗದ ಅಭಿರುಚಿಗೆ ಅನುಗುಣವಾಗಿ ಉತ್ಪಾದಕ ಹಾಗೂ ಮಾರಾಟವನ್ನು ಕೈಗೊಳ್ಳುವರು. ಗ್ರಾಹಕರು ಸಾಮಾನ್ಯ ವಾಗಿ ಹೆಚ್ಚು ಬೆಲೆ ತೆರಲು ಸಿದ್ಧವಿರುವುದರಿಂದ ತಮ್ಮ ಅಭಿರುಚಿಯನ್ನು ಪ್ರದರ್ಶಿಸುವರು. ಆದರೆ ಇಂದಿನ ಉತ್ಪಾದನೆಯಲ್ಲಿಯ ಯಂತ್ರೀಕರಣ ಹಾಗೂ ಏಕಸ್ವಾಮಿತ್ವದ ಪ್ರಾಬಲ್ಯದಿಂದ ಪೇಟೆಯ ಗ್ರಾಹಕರ ಪ್ರಭುತ್ವ ಕೇವಲ ಕಾಲ್ಪನಿಕಸಿದ್ಧಾಂತವಾಗಿದೆ. ಅದಲ್ಲದೆ ಯೋಜನಾಬದ್ಧ ಆರ್ಥಿಕವ್ಯವಸ್ಥೆಯ ಮುಖ್ಯ ಉದ್ದೇಶ ಸಾಮಾನ್ಯ ಗ್ರಾಹಕರ ಗಳಿಕೆಯನ್ನು ಹೆಚ್ಚಿಸಿ ಉತ್ಪಾದನೆಗೆ ಪ್ರೋತ್ಸಾಹ ನೀಡುವುದೇ ಆಗಿದೆ. ಆದ್ದರಿಂದ ಎಲ್ಲ ತರ್ಕಬದ್ಧ ಯೋಜನೆಗಳೂ ಸಾಮಾನ್ಯ ಗ್ರಾಹಕರ ಸ್ವಾತಂತ್ರ್ಯವನ್ನು ಪುರಸ್ಕರಿಸುವುದು.


ಇನ್ನು ಪ್ರಜಾಪ್ರಭುತ್ವದಲ್ಲಿಯ ಉದ್ಯೋಗ ಉತ್ಪಾದನಾ ಸ್ವಾತಂತ್ರ್ಯ ಕೇವಲ ಐತಿಹಾಸಿಕ ಸತ್ಯವಾಗಿದೆ. ಇಂದಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾಮುದಾಯಿಕ ಸಂಸ್ಥೆಗಳು ಪ್ರಬಲವಾಗಿದ್ದು ದೊಡ್ಡ ಬಂಡವಾಳಗಾರರಿಗಷ್ಟೇ ಹೆಚ್ಚಿನ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಲಕ್ಷಾಂತರ ಗ್ರಾಹಕರನ್ನು ತೃಪ್ತಿಗೊಳಿಸುವ ದೊಡ್ಡ ಉದ್ದಿಮೆಗಳು ಯಂತ್ರಗಳ ಉಪಯೋಗ ವನ್ನು ಅವಲಂಬಿಸಿವೆ. ಅಂಥ ಉದ್ಯೋಗಗಳನ್ನು ಕೇವಲ ದೊಡ್ಡ ಬಂಡವಾಳಗಾರರೇ ಕೈಗೊಳ್ಳಬಲ್ಲರು. ಕೂಲಿಕಾರ ವರ್ಗದವರು ಯಂತ್ರಗಳ ಬಳಕೆಯಿಂದ ಉಂಟಾಗುವ ನಿರುದ್ಯೋಗವನ್ನು ತಪ್ಪಿಸಿಕೊಳ್ಳಲು ಯಾವುದೇ ಉದ್ಯೋಗವನ್ನು ಅನುಸರಿಸಬೇಕಾಗುವುದು ಅಲ್ಲದೆ ಇಂದಿನಿಂದ ಕೆಲವು ಉದ್ಯೋಗಗಳಿಗೆ ಪುರ್ವ ತಯಾರಿಯಾಗಿ ಪಡೆಯುವ ಶಿಕ್ಷಣ ಕೂಡ ಬಹಳ ವೆಚ್ಚದ್ದೂ ದೀರ್ಘವಾದದ್ದೂ ಆಗಿದ್ದು, ಅವು ಕೇವಲ ಶ್ರೀಮಂತವರ್ಗಕ್ಕೆ ಮೀಸಲಾಗಿವೆ. ಆರ್ಥಿಕ ವಿಷಮತೆ ಹೆಚ್ಚಿಗೆ ಇರುವ ದೇಶಗಳಲ್ಲಿ ಹಾಗೂ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಉದ್ಯೋಗಸ್ವಾತಂತ್ರ್ಯಕ್ಕೆ ಸಾಕಷ್ಟು ಅವಕಾಶವಿರದು. ಆದರೆ ಯೋಜನಾಬದ್ಧ ಆರ್ಥಿಕವ್ಯವಸ್ಥೆ ಸಮಾಜವಾದೀ ತತ್ತ್ವದ ಮೇಲೆ ಆಧಾರಿತವಾಗಿರುವುದ ರಿಂದ ಸಾಮಾನ್ಯ ವ್ಯಕ್ತಿಗೂ ಸಹ ತನ್ನ ಯೋಗ್ಯತೆಗೆ ತಕ್ಕಂತೆ ಉದ್ಯೋಗವನ್ನು ದೊರಕಿಸುವ ಅವಕಾಶವಿರುವುದು.


ಯೋಜನೆಗಳಲ್ಲಿ ಸಾಮಾನ್ಯವಾಗಿ ಕೇಂದ್ರೀಕೃತ ಹಾಗೂ ವಿಕೇಂದ್ರೀಕೃತ ಯೋಜನೆಗಳೆಂಬ ಎರಡು ಪ್ರಕಾರಗಳನ್ನು ಕಲ್ಪಿಸುವರು. ಕೇಂದ್ರೀಕೃತಯೋಜನೆಯಲ್ಲಿ ಒಂದೇ ಒಂದು ಆರ್ಥಿಕ ಯೋಜನಾಮಂಡಳಿ ರಚಿಸಲ್ಪಟ್ಟಿರುವುದು. ಮಂಡಳಿ ಎಲ್ಲ ಮಹತ್ವದ ಆರ್ಥಿಕ ನಿರ್ಣಯಗಳನ್ನು ಮಾಡುವುದು. ಅಂಥ ಮಹತ್ವದ ನಿರ್ಣಯಗಳಾವುವು ಎಂಬುದು ಕಾಲ ಮತ್ತು ಪರಿಸ್ಥಿತಿಯನ್ನು ಅನುಸರಿಸಿ ಬದಲಾಗಬಹುದು. ಆದರೆ ಮುಖ್ಯವಾದ ನಿಷ್ಕರ್ಷೆಗಳು ಬೆಲೆಗಳ ನಿರ್ಣಯ, ಬಂಡವಾಳ ವಿನಿಯೋಗದ ಪರಿಮಾಣ ಕೂಲಿಕಾರರಿಗೆ ಸಲ್ಲತಕ್ಕ ವೇತನ ಅಥವಾ ಉತ್ಪಾದನೆ ಮತ್ತು ಬಂಡವಾಳ ವಿನಿಯೋಗದ ಸ್ಥೂಲರೂಪುರೇಷೆಗೆ ಸಂಬಂಧಿಸಿದುದಾಗಿರಬಹುದು. ಕೇಂದ್ರೀಕೃತ ಯೋಜನೆಯಲ್ಲಿ ನಿಷ್ಕರ್ಷೆಗಳನ್ನು ಮಾಡುವ ಪೂರ್ಣ ಉಪಕ್ರಮ ಕೇಂದ್ರೀಯ ಯೋಜನಾಮಂಡಳಿಗೇ ಇರುವುದೆಂದು ಭಾವಿಸುವುದು ಸರಿಯಲ್ಲ. ದೇಶದಲ್ಲಿ ಅನೇಕ ಔದ್ಯೋಗಿಕ ಸಂಸ್ಥೆಗಳು ಹಾಗೂ ಸ್ಥಾನಿಕಸರ್ಕಾರಗಳು ತಮ್ಮ ಆವಶ್ಯಕತೆಗಳಿಗನುಸಾರವಾಗಿ ಸೂಚನೆಗಳನ್ನು ಕೇಂದ್ರಯೋಜನಾಮಂಡಳಿಗೆ ಕಳಿಸುವರು. ಅಂಥ ಯೋಜನೆಗಳನ್ನು ಕೂಡಿಸಿ ದೇಶದ ಸಮಗ್ರ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾಧ್ಯತೆಯನ್ನು ಗಮನಿಸಿ ಕೇಂದ್ರ ಯೋಜನಾಮಂಡಳಿ ನಿರ್ಧರಿಸುವುದು. ಇಲ್ಲಿ ಆಯ್ಕೆ ಕೇಂದ್ರೀಕೃತವಾದರೂ ನಿಷ್ಕರ್ಷೆಯು ಸಾಮಾಜಿಕವಾದುದು. ಸಮಾಜವಾದೀ ತತ್ತ್ವದ ಮೇಲೆ ಆಧರಿಸಿದ ದೇಶಕ್ಕೆ ಯೋಗ್ಯವಾದ ಆರ್ಥಿಕರಚನೆ ಇದೊಂದೇ. ಕೇಂದ್ರೀಯ ಯೋಜನೆಯಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಸಮಾಜದ ರಚನೆಗೆ ಅನುಗುಣವಾಗಿ ಹೊಂದಿಸಿಕೊಳ್ಳಲು ಅವಕಾಶವಿರುವುದು. ಅದು ತೀವ್ರ ಆರ್ಥಿಕ ಅಸ್ಥಿರತೆಯಿಂದ ಉಂಟಾಗುವ ಸಂಪನ್ಮೂಲಗಳ ನಷ್ಟವನ್ನೂ ತಪ್ಪಿಸಬಲ್ಲುದು.


ವಿಕೇಂದ್ರೀಕೃತ ಯೋಜನೆಯಲ್ಲಿ ಯೋಜನೆಯನ್ನು ತಯಾರಿಸುವ ಹೊಣೆ ಒಂದೇ ನಿರ್ದಿಷ್ಟ ಯೋಜನಾಮಂಡಳಿಯ ಮೇಲಿರದೆ ಅನೇಕ ಸ್ಥಾನಿಕಸಂಸ್ಥೆಗಳಲ್ಲಿ ಹಾಗೂ ಖಾಸಗೀ ಸಂಸ್ಥೆಗಳಲ್ಲಿ ಹಂಚಿಹೋಗಿರುವುದು. ಇಂಥ ಯೋಜನೆಗಳು ಹೆಚ್ಚು ವಾಸ್ತವಿಕವೂ ದೇಶದ ಪ್ರತಿಯೊಂದು ಭಾಗವೂ ಬೆಳೆವಣಿಗೆ ಹೊಂದಲು ಅವಕಾಶ ಕಲ್ಪಿಸಿಕೊಡುವಂಥವೂ ಆಗಿವೆ. ಆಡಳಿತ ವೆಚ್ಚದಲ್ಲಿ ಮಿತವ್ಯಯ ಸಾಧಿಸಬಹುದು. ಏಕೆಂದರೆ ಯೋಜನೆಯನ್ನು ರಚಿಸುವ ಕಾರ್ಯ ಅನೇಕ ಸಂಸ್ಥೆಗಳಲ್ಲಿ ಹಂಚಿಹೋಗಿರುವುದು. ಇಂಥ ಯೋಜನೆಗಳು ಪ್ರಜಾಪ್ರಭುತ್ವ ಪದ್ಧತಿಗೆ ಹೆಚ್ಚು ಹೊಂದುತ್ತವೆ. ಆದರೆ ಇಂಥ ಯೋಜನೆಗಳಲ್ಲಿ ದೇಶದ ಸಮಗ್ರತೆಗೆ ಧಕ್ಕೆ ತಗಲುವ ಸಂಭವವೂ ಇದೆ. ಯೋಜನೆ ತಯಾರಿಸಲು ಹಾಗೂ ಕಾರ್ಯಗತಗೊಳಿಸಲು ಸುಸಂಘಟಿತ ಮತ್ತು ಸಮರ್ಥ ಆಡಳಿತವರ್ಗದ ಆವಶ್ಯಕತೆಯಿದೆ. ಇಂಥ ಯೋಜನೆಗಳು ತಮ್ಮ ಗುರಿಯನ್ನು ಸಾಧಿಸಲು ಬಂಡವಾಳಶಾಹಿಯ ಅನಿರ್ಬಂಧಿತ ವ್ಯಾಪಾರ ಹಾಗೂ ಬೆಲೆಯ ಯಾಂತ್ರಿಕತೆಯ ತತ್ತ್ವಗಳನ್ನು ಅವಲಂಬಿಸಿರಬೇಕು. ಪೇಟೆಯ ಮುಖ್ಯ ಸಾಧನಗಳಾದ ಬೇಡಿಕೆ ಹಾಗೂ ಪುರವಟೆಗಳಲ್ಲಿ ಬದಲಾವಣೆಗಳನ್ನುಂಟುಮಾಡಿ ತನ್ನ ಗುರಿ ಸಾಧಿಸಬೇಕಾಗುವುದು. ಈ ಪದ್ಧತಿಯಲ್ಲಿ ಮುಂಚಿತವಾಗಿ ಆರ್ಥಿಕ ಲೆಕ್ಕಾಚಾರ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಆರ್ಥಿಕ ನಿಯಮಗಳು ತರ್ಕಬದ್ಧವಾಗಿರುವುದು ಕಠಿಣ. ಅನೇಕ ಸಲ ತಪ್ಪು ನಿರ್ಣಯಗಳಿಂದಾಗಬಹುದಾದ ಸಂಪನ್ಮೂಲದ ನಷ್ಟದ ಅನಂತರವೇ ಹೊಂದಾಣಿಕೆಯನ್ನು ಸಾಧಿಸುವ ಪ್ರಸಂಗ ಬರಬಹುದು. ಇದು ಯೋಜನಾ ತತ್ತ್ವಕ್ಕೆ ವಿಸಂಗತ. ವಿಕೇಂದ್ರೀಕೃತ ಯೋಜನೆಯಲ್ಲಿ ಯೋಜನಾಮಂಡಳಿ ಕೇವಲ ಒಂದು ಸಲಹಾಮಂಡಳಿಯಲ್ಲದೆ ಕಾರ್ಯಗತಗೊಳಿಸುವಂಥದಲ್ಲ. ವಿಕೇಂದ್ರೀಕೃತ ಯೋಜನೆಯ ಯಶಸ್ಸಿಗೆ ಮುಂದುವರಿದ ಸುಶಿಕ್ಷಿತ ಸಮಾಜ ಹಾಗೂ ಯೋಜನಾ ಘಟಕಗಳಲ್ಲಿ ಪರಸ್ಪರ ಸಹಕಾರ ಆವಶ್ಯಕ.


ಯೋಜನೆಗಳಲ್ಲಿ ಹಣಕಾಸಿನ ಯೋಜನೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಯೋಜನೆಯೆಂದು ಪ್ರಕಾರಗಳನ್ನು ಕಲ್ಪಿಸಬಹುದು. ನೈಸರ್ಗಿಕ ಸಂಪನ್ಮೂಲಗಳ ಯೋಜನೆ ಯಲ್ಲಿ ದೇಶದಲ್ಲಿ ಸದ್ಯದಲ್ಲೇ ಇರುವ ಸಂಪನ್ಮೂಲಗಳನ್ನು ನಿರ್ದಿಷ್ಟ ಗುರಿಯನ್ನು ಸಾಧಿಸುವುದಕ್ಕಾಗಿ ಹೆಚ್ಚು ಲಾಭದಾಯಕವಾಗುವಂತೆ ಉಪಯೋಗಿಸುವುದಕ್ಕೆ ಮಹತ್ವವಿದೆಯೇ ಹೊರತು ಕೇವಲ ಬಂಡವಾಳದ ವಿನಿಯೋಗಕ್ಕಲ್ಲ.


ಇಂಥ ಯೋಜನೆಗಳಲ್ಲಿ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚು ಹೆಚ್ಚಾಗಿ ಬಳಕೆಗೆ ತರುವುದೇ ಮುಖ್ಯ ಉದ್ದೇಶ. ಆದುದರಿಂದ ಪ್ರತಿಯೊಂದು ಆರ್ಥಿಕ ವಿಭಾಗಗಳಲ್ಲೂ ಒಂದಕ್ಕೊಂದು ಹೊಂದಿಕೆಯಾಗುವಂಥ ಲಕ್ಷ್ಯಗಳನ್ನು ನಿರ್ಧರಿಸಿ ಅವುಗಳನ್ನು ಸಾಧಿಸಲು ಯೋಗ್ಯವಾಗುವಂತೆ ಬಹು ವ್ಯಾಪಕವಾದ ನಿಯಮ ಹಾಗೂ ಕಟ್ಟಳೆಗಳನ್ನು ನಿರ್ಮಿಸಬೇಕಾಗು ವುದು. ಈ ಲಕ್ಷ್ಯಗಳು ಕೇವಲ ಪ್ರಗತಿಯ ದರ್ಶಕಗಳಾಗಿರದೆ ಸಂಪತ್ತಿಯಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಸಾಧಿಸುವಂತಿರಬೇಕು. ಆದ್ದರಿಂದ ಇಂಥ ಯೋಜನೆಗಳನ್ನು ರಚಿಸುವಾಗ ದೇಶದ ನೈಸರ್ಗಿಕ ಸಂಪನ್ಮೂಲಗಳ ವಿಷಯವಾಗಿ ಪೂರ್ಣ ಪರಿಜ್ಞಾನವಿರುವುದು ಆವಶ್ಯಕ. ಅದಕ್ಕಾಗಿ ಯೋಜನೆಯ ರಚನೆಯ ಪುರ್ವದಲ್ಲಿ ವಿವರವಾದ ನೈಸರ್ಗಿಕ ಸಂಪನ್ಮೂಲಗಳ ವೀಕ್ಷಣೆ ಮಾಡಿ ಅಂಕೆ ಸಂಖ್ಯೆಗಳನ್ನು ಕಲೆಹಾಕಬೇಕಾಗುವುದು. ಹಣಕಾಸಿನ ಯೋಜನೆಗಳಲ್ಲಿ ಮುಖ್ಯವಾಗಿ ಬೇಡಿಕೆ ಹಾಗೂ ಪುರೈಕೆಗಳಲ್ಲಿಯ ಅಂತರ ಕಡಿಮೆಯಾಗುವಂತೆ ಉತ್ಪಾದನೆಯನ್ನು ಏರಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ಅತಿ ಹೆಚ್ಚಿನ ಉಪಯೋಗಕ್ಕೆ ತೊಡಗಿಸುವುದು ಮುಖ್ಯ ಗುರಿ. ಅದಕ್ಕಾಗಿ ನಿರ್ದಿಷ್ಟ ಸಮಯದಲ್ಲಿ ವಿನಿಯೋಗಿಸುವ ಹಣಕಾಸಿನ ಬಂಡವಾಳ ಲಕ್ಷ್ಯಗಳು ಮೊದಲು ನಿರ್ಣಯಿಸಲ್ಪಡುವುವು. ಈ ಲಕ್ಷ್ಯಗಳನ್ನು ಪುರೈಸಲು ಬೇಕಾಗಿರುವ ಹಣಕಾಸಿನ ಬಂಡವಾಳವನ್ನು ದೇಶದಲ್ಲಿಯ ತೆರಿಗೆಗಳನ್ನು ಹೆಚ್ಚಿಸಿ ಪರದೇಶಗಳಿಂದ ಸಾಲ ಪಡೆದು ಹಾಗೂ ಕೊರತೆಯ ಧನ ವಿನಿಯೋಗ ಪದ್ಧತಿಯಿಂದ (ಡಿಫಿಸಿಟ್ ಫಿನಾನ್ಸಿಂಗ್) ಕೊಡಿಸಲಾಗುವುದು. ಇಂಥ ಯೋಜನೆಗಳಲ್ಲಿ ರಾಷ್ಟ್ರೀಯ ಆದಾಯದ ಹೆಚ್ಚಳ ಮತ್ತು ಜನರ ತಲಾ ಆದಾಯದಲ್ಲಿ ಹೆಚ್ಚಳ ಇವು ಆರ್ಥಿಕಪ್ರಗತಿಯ ದರ್ಶಕಗಳೆಂದು ಪರಿಗಣಿಸಲಾಗುವುದು.


ಇಂಥ ಯೋಜನೆಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ವಿನಿಯೋಗ ಆವಶ್ಯಕವಾಗಿದ್ದರೂ ಹಣಕಾಸಿನ ಲಕ್ಷ್ಯಗಳ ಪುರ್ತಿಗೇ ಹೆಚ್ಚಿನ ಪ್ರಾಮುಖ್ಯ ನೀಡಲಾಗುವುದು. ಆದರೂ ನೈಸರ್ಗಿಕ ಸಂಪನ್ಮೂಲಗಳಯೋಗ್ಯ ಬೆಳೆವಣಿಗೆಯಾಗದೆ ರಾಷ್ಟ್ರೀಯ ಆದಾಯದಲ್ಲಿ ಹೆಚ್ಚಳ ಸಾಧಿಸುವುದಸಾಧ್ಯ. ಆದ್ದರಿಂದ ಎರಡೂ ಪ್ರಕಾರಗಳ ಯೋಜನೆಗಳ ಗುಣಾವಗುಣಗಳೇನೇ ಇದ್ದರೂ ಇವುಗಳ ಉದ್ದೇಶ ವಿವಿಧ ಆರ್ಥಿಕ ವಿಭಾಗಗಳ ಬೆಳೆವಣಿಗೆಯ ಪ್ರತಿಯೊಂದು ಮೇಲಿನ ಸ್ತರದಲ್ಲಿಯೂ ಸಮತೋಲನ ಕಾಯ್ದುಕೊಳ್ಳವುದೇ ಆಗಿರುವುದರಿಂದ ಎರಡೂ ಯೋಜನೆಗಳು ಒಂದಕ್ಕೊಂದು ಪುರಕವಾಗಿರುವುದು.

ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಸಾಧಿಸುವಲ್ಲಿ ಯೋಜನೆಯ ಮಹತ್ವ ಭಾರತದಲ್ಲಿ ಸುಮಾರು ಮೂರು ದಶಕಗಳ ಹಿಂದೆಯೇ ಪ್ರಚಾರಗೊಂಡಿತು. ೧೯೪೩ರಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಪ್ಲಾನ್ಡ್ ಇಕಾನಮಿ ಫಾರ್ ಇಂಡಿಯ ಎಂಬ ಪುಸ್ತಕದಲ್ಲಿ ಹತ್ತು ವರ್ಷಗಳ ಯೋಜನೆಯನ್ನು ಪ್ರತಿಪಾದಿಸಿ ರಾಷ್ಟ್ರೀಯ ಆದಾಯವನ್ನು ಎರಡು ಪಟ್ಟು ಬೆಳೆಸುವ ಸಾಧ್ಯತೆಯನ್ನು ಸೂಚಿಸಿದರು. ಅವರು ಸೋವಿಯೆತ್ ರಷ್ಯದಲ್ಲಿ ೧೯೨೭ರಿಂದ ೩೨ರವರೆಗೆ ನಡೆದ ಪಂಚವಾರ್ಷಿಕ ಯೋಜನೆಯ ಯಶಸ್ಸಿನಿಂದ ತುಂಬ ಪ್ರಭಾವಿತರಾಗಿದ್ದರು. ಇದಾದ ಐದು ವರ್ಷಗಳ ಅನಂತರ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಜವಾಹರಲಾಲ್ ನೆಹರೂರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾಮಂಡಳಿ ಯೊಂದನ್ನು ರಚಿಸಿತು. ಆದರೆ ಮುಂದೆ ರಾಷ್ಟ್ರೀಯ ಆಂದೋಲನ ಪ್ರಾರಂಭವಾಗಿ ಈ ಮಂಡಳಿಯ ಕಾರ್ಯ ಕುಂಠಿತವಾಯಿತು. ೧೯೪೪ರಲ್ಲಿ ಮುಂಬಯಿಯ ಕೆಲವು ಪ್ರಗತಿಪರ ಉದ್ದಿಮೆದಾರರು ಒಂದು ಯೋಜನೆಯನ್ನು ಸಿದ್ಧಪಡಿಸಿದರು. ಇದಲ್ಲದೆ ಎಂ.ಎನ್.ರಾಯ್ ಅವರು ದಿ ಪೀಪಲ್ಸ್ ಪ್ಲ್ಯಾನ್ ಎಂಬ ಯೋಜನೆಯನ್ನೂ ಶ್ರೀಮನ್ನಾರಾಯಣ್ ಗಾಂಧಿಯನ್ ಪ್ಲ್ಯಾನ್ ಎಂಬ ಯೋಜನೆಯನ್ನು ತಯಾರಿಸಿದರು. ಹೀಗೆ ಯೋಜನೆಗಳ ವಿಷಯವಾಗಿ ಸಾಕಷ್ಟು ವರ್ಷಗಳವರೆಗೆ ನಮ್ಮ ದೇಶದಲ್ಲೂ ನಡೆದಿದ್ದವು.


ಸ್ವಾತಂತ್ರ್ಯಾನಂತರ ಮೊದಲಿನ ಕೆಲವು ವರ್ಷಗಳವರೆಗೆ ಪುರ್ವಸಿದ್ಧತೆ ನಡೆದು ಮಾರ್ಚ್ ೧೫, ೧೯೫೦ರಲ್ಲಿ ಭಾರತದಲ್ಲಿ ಯೋಜನಾ ಆಯೋಗ ರಚಿಸಲ್ಪಟ್ಟಿತು. ಭಾರತದ ಯೋಜನಾ ಆಯೋಗ ಕೇವಲ ಸಲಹಾಮಂಡಳಿಯಾಗಿದೆ. ಆದರೆ ಸಲಹೆಗಳನ್ನು ಕಾರ್ಯಗತ ಮಾಡುವಲ್ಲಿ ಸರ್ಕಾರದ ಪಾತ್ರವೇ ಮುಖ್ಯ. ಭಾರತದ ಯೋಜನೆಯ ಒಂದು ವೈಶಿಷ್ಟ್ಯವೆಂದರೆ ಸಮ್ಮಿಶ್ರ ಆರ್ಥಿಕವ್ಯವಸ್ಥೆಯ ತತ್ತ್ವವನ್ನು ಅನುಸರಿಸುವುದು. ಆದ್ದರಿಂದ ಯೋಜನೆಗಳು ಆರ್ಥಿಕ ವ್ಯವಸ್ಥೆಯಲ್ಲಿ ಸರಕಾರೀ ರಂಗ ಹಾಗೂ ಖಾಸಗೀ ರಂಗ ಎಂಬ ಎರಡು ವಿಭಾಗಗಳನ್ನು ಕಲ್ಪಿಸುವುವು. ಸರ್ಕಾರೀ ರಂಗದ ವಿಷಯವಾಗಿ ಯೋಜನೆ ವಿವರವಾಗಿ ತಯಾರಿಸಲ್ಪಡುವುದು. ಖಾಸಗೀ ರಂಗಗಳ ವಿಷಯದಲ್ಲಿ ಕೇವಲ ಲಕ್ಷ್ಯಗಳನ್ನು ನಿರ್ಧರಿಸಿ ಅವುಗಳನ್ನು ಪುರ್ತಿಗೊಳಿಸಲು ಸರ್ಕಾರ ಸಹಾಯಕವಾಗುವುದು. ಭಾರತದ ಯೋಜನೆಗಳೂ ರಷ್ಯ ದೇಶದ ಯೋಜನೆಗಳಂತೆ ಐದು ವರ್ಷಗಳ ಯೋಜನೆಗಳು. ಈ ಯೋಜನೆಗಳನ್ನು ಪಂಚವಾರ್ಷಿಕ ಯೋಜನೆಗಳೆಂದು ಕರೆಯುವರು. ಯೋಜನಾ ಆಯೋಗ ತಜ್ಞ ಆಡಳಿತಗಾರರು, ಅರ್ಥಶಾಸ್ತ್ರಜ್ಞರು ಹಾಗೂ ಸಂಖ್ಯಾಶಾಸ್ತ್ರಜ್ಞರನ್ನು ಒಳಗೊಂಡಿರುವುದು. ಪಂಚವಾರ್ಷಿಕ ಯೋಜನೆಗಳನ್ನು ತಯಾರಿಸುವ ಹೊಣೆ ಹಾಗೂ ಅವುಗಳ ಪ್ರಗತಿಯನ್ನು ಅವಲೋಕಿಸುವ ಹೊಣೆ ಯೋಜನಾ ಆಯೋಗದ್ದು. ಮೊದಲಿಗೆ ದೇಶದ ಸಂಪನ್ಮೂಲ ಮತ್ತು ಬಂಡವಾಳದ ವಿನಿಯೋಗದ ಸಾಧ್ಯತೆಯನ್ನು ಲಕ್ಷಿಸಿ ಐದು ವರ್ಷಗಳಲ್ಲಿ ಸಾಧಿಸಬಹುದಾದ ಲಕ್ಷ್ಯಗಳನ್ನು ನಿರ್ಧರಿಸಿ, ಒಂದು ಕರಡು ಯೋಜನೆಯನ್ನು ತಯಾರಿಸಿ ಪ್ರಕಟಿಸುವರು. ದೇಶದ ಅನೇಕ ತಜ್ಞರ ಹಾಗೂ ಆರ್ಥಿಕಸಂಸ್ಥೆಗಳ ಸಲಹೆ ಸೂಚನೆಗಳನ್ನು ಗಮನಿಸಿ ಈ ಕರಡು ಯೋಜನೆಯಲ್ಲಿ ತಿದ್ದುಪಡಿ ಮಾಡಿದ ಮೇಲೆಯೇ ನಿಜವಾದ ಪಂಚವಾರ್ಷಿಕ ಯೋಜನೆ ತಯಾರಾಗುವುದು. ಅಂಥ ಯೋಜನೆಗೆ ಪಾರ್ಲಿಮೆಂಟಿನ ಒಪ್ಪಿಗೆ ದೊರೆತ ಮೇಲೆ ಪಂಚವಾರ್ಷಿಕ ಯೋಜನೆ ಏಪ್ರಿಲ್ ೧, ೧೯೫೧ರಂದು ಜಾರಿಯಲ್ಲಿ ಬಂದಿತು. ೨೦೦೨-೨೦೦೭ರ ವರೆಗೆ ಹತ್ತು ಪಂಚವಾರ್ಷಿಕ ಯೋಜನೆಗಳು ಆಗಿವೆ. ಭಾರತದ ಪಂಚವಾರ್ಷಿಕ ಯೋಜನೆಗಳಲ್ಲಿ ಸಾಧಿಸಬೇಕಾದ ಪ್ರಗತಿಯನ್ನು ಪ್ರಾರಂಭದಲ್ಲಿಯೇ ನಿರ್ಧರಿಸಲಾಗಿದೆ. ಅದಕ್ಕೆ ನಿರೀಕ್ಷಿತ ಯೋಜನೆ (ಪ್ರಾಸ್ಪೆಕ್ಟಿವ್ ಪ್ಲ್ಯಾನಿಂಗ್) ಎನ್ನುವರು. ಪ್ರತಿಯೊಂದು ಯೋಜನೆಯೂ ಮುಂದಿನ ಯೋಜನೆಗೆ ಪುರ್ವ ಪೀಠಿಕೆಯಾಗಿರುವುದು. ಅದರಿಂದ ಎಲ್ಲ ಯೋಜನೆಗಳೂ ಒಂದಕ್ಕೊಂದು ಹೊಂದಿಕೊಂಡಿವೆ. ಪಂಚವಾರ್ಷಿಕ ಯೋಜನೆಗಳನ್ನು ಪುರ್ತಿಗೊಳಿಸುವಲ್ಲಿ ಅನೇಕ ಅಡೆತಡೆಗಳು ಉಂಟಾಗಿದ್ದರೂ ಯೋಜನೆಯ ಪದ್ಧತಿಯನ್ನು ಅನುಸರಿಸಿ ಕೆಲವೇ ವರ್ಷಗಳಲ್ಲಿ ಭಾರತ ಗಣನೀಯ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಭಾರತದ ಪಂಚವಾರ್ಷಿಕ ಯೋಜನೆಗಳು,ರಷ್ಯದ ಆರ್ಥಿಕ ಯೋಜನೆಗಳು, ಟೆನೆಸ್ಸಿ ವ್ಯಾಲಿ ಅಥಾರಿಟಿ