ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಬೇನಿಯಾ ಭಾಷೆ ಮತ್ತು ಸಾಹಿತ್ಯ

ಆಲ್ಬೇನಿಯಾ ಭಾಷೆ ಮತ್ತು ಸಾಹಿತ್ಯ: ಆಲ್ಬೇನಿಯ ಭಾಷೆ ಇಂಡೊ- ಯುರೋಪಿಯನ್ ಭಾಷಾವರ್ಗಕ್ಕೆ ಸೇರಿದೆ. ಇದು ಎಪಿರಸಿನ ಉತ್ತರ ಪರ್ವತಗಳಲ್ಲಿ, ಮಾಂಟೆನೀಗ್ರೋನ ದಕ್ಷಿಣದಲ್ಲಿ ಮತ್ತು ಏಡ್ರಿಯಾಟಿಕ್ ಪುರ್ವಭಾಗದಲ್ಲಿ ಸುಮಾರು ಹತ್ತು ಲಕ್ಷಕ್ಕೆ ಮೇಲ್ಪಟ್ಟು ಜನ ಆಡುವ ಭಾಷೆ. ಇದು ಕಣ್ಮರೆಯಾದ ಇಲಿರಿಯನ್ ಎಂಬ ಭಾಷಾಶಾಖೆಯ ಅವಶೇಷವೆಂದು ಕೆಲವರು ಭಾವಿಸಿದ್ದರು. ಹಾಗಿದ್ದರೆ ಇದು ಇಂಡೋ-ಯುರೋಪಿಯನ್ ವರ್ಗದ ಸೆಂಟಮ್ ಗುಂಪಿಗೆ ಸೇರಬೇಕಾಗುತ್ತದೆ. ಆದರೆ ಇದರ ಸೂಕ್ಷ್ಮಾವಲೋಕನದಿಂದ ಇದರಲ್ಲಿ ಶತಂ ಗುಂಪಿನ ಅಂಶಗಳೇ ಹೆಚ್ಚಾಗಿ ಕಂಡುಬರುವುದ ರಿಂದ ಮೇಲಿನ ಊಹೆ ನಿರಾಧಾರವೆನಿಸುತ್ತದೆ. ಆದ್ದರಿಂದ ಇದನ್ನು ಒಂದು ಭಾಷಾಗುಂಪು ಎನ್ನುವುದಕ್ಕಿಂತ ಗೆಗ್, ಟೋಸ್ಕ್ ಗ್ರಿಸಿಯೋ-ಆಲ್ಬೇನಿಯನ್ ಮತ್ತು ಕೆಲೆಬ್ರಿಯನ್ ಎಂಬ ನಾಲ್ಕು ಪ್ರಮುಖ ಉಪಭಾಷೆಗಳುಳ್ಳ ಒಂದು ಭಾಷೆಯೆಂದು ಪರಿಗಣಿಸಬಹುದು. ಇಂಡೋ-ಯುರೋಪಿಯನ್ ವರ್ಗದ ಭಾಷೆ ಎಂಬ ಅಂಶಕ್ಕೆ ಪುಷ್ಟಿ ಕೊಡುವ ಆಲ್ಬೇನಿಯ ಭಾಷೆಯ ಆಂತರಿಕ ವೈಶಿಷ್ಟ್ಯಗಳು ವಿಪುಲವಾಗಿವೆ. ಉದಾಹರಣೆಗೆ ಸರ್ವನಾಮಗಳನ್ನು ಅವಲೋಕಿಸಬಹುದು.

ty=ನೀನು, na= ನಾವು, ರಿu=ನೀವು. ಇವು ಅನುಕ್ರಮವಾಗಿ ಇಂಗ್ಲಿಷಿನ thou, we, you - ಇವನ್ನು ಸ್ಮರಣೆಗೆ ತರುತ್ತವೆ. ಹೀಗೆಯೇ ಕ್ರಿಯಾಪದಗಳಲ್ಲ್ಲೂ ಕೆಲಸಾಮ್ಯಗಳನ್ನು ಗುರುತಿಸಬಹುದು : thou ನಾನು ಹೇಳುತ್ತೇನೆ, thomi ನಾವು ಹೇಳುತ್ತೇವೆ, ಣhoಣe ಅವನು ಹೇಳುತ್ತಾನೆ, thome ಅವರು ಹೇಳುತ್ತಾರೆ ಇಂಥ ರೂಪಗಳು ಇಂಡೋ-ಯುರೋಪಿಯನ್ ವ್ಯಾಕರಣಾಂಶಗಳಿಗೆ ಸನಿಹದಲ್ಲಿವೆ. ಆದರೆ ಶತಮಾನಗಳ ಅವಧಿಯಲ್ಲಿ ಆಲ್ಬೇನಿಯನ್ ಭಾಷೆ ಇತರ ಇಂಡೋ-ಯುರೋಪಿಯನ್ ಭಾಷೆಗಳಿಂದ ಸ್ವಲ್ಪ ದೂರ ಸರಿದು ನಿಂತಂತೆ ತೋರುತ್ತದೆ. ಈ ಭಾಷೆಯಲ್ಲಿ ಉಪಪದ ನಾಮಪದದ ಮುಂದೆ ಬರುತ್ತದೆ. ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಅದು ನಾಮಪದದ ಹಿಂದೆ ಇರುವುದು ಎಲ್ಲರಿಗೂ ವಿದಿತ. ಭವಿಷ್ಯತ್ಕ್ರಿಯೆ ಸಹಾಯಕ ಕ್ರಿಯಾಪದದ ಮೂಲಕ ನಿಷ್ಪನ್ನವಾಗುತ್ತದೆ. ಉದಾಹರಣೆಗೆ ನಾನು ಕೆಲಸ ಮಾಡುವೆನು ಎಂಬುದು dote punoj ನಾನು ಕೆಲಸ ಮಾಡಬೇಕೆಂದು ನನಗೆ ಮನಸ್ಸಿದೆ ಅಥವಾ Kame puntue ನಾನು ಕೆಲಸ ಮಾಡಬೇಕಾಗುತ್ತದೆ-ಎಂದಾಗುತ್ತದೆ.

ಒಂದೆರಡು ಮೌಲಿಕ ಶಾಸನಗಳ ಹೊರತು ಬೇರೆ ಲಿಖಿತ ಆಧಾರಗಳು ದೊರೆಯದಿರು ವುದರಿಂದ ಆಲ್ಬೇನಿಯನ್ ಭಾಷೆಯ ಪ್ರಾಚೀನ ಸ್ವರೂಪನಿರ್ಣಯ ಕಷ್ಟದ ಕೆಲಸವಾಗಿದೆ. ಇಲ್ಲಿಯವರೆಗೆ ದೊರೆತಿರುವ ಈ ಭಾಷೆಯ ಅತಿ ಪುರಾತನ ಲಿಖಿತ ಆಧಾರವೆಂದರೆ 1462ರಲ್ಲಿ ರಚಿತವಾಗಿದ್ದು ಚರ್ಚೆಗೆ ಒಳಗಾಗಿರುವ ಒಂದು ದಾಖಲೆ. ಅನಂತರ 1555ರಲ್ಲಿ ಆಲ್ಬೇನಿಯನ್ ಭಾಷೆಯಲ್ಲಿ ಬೈಬಲ್ ಭಾಷಾಂತರವಾಗಿದೆ. ಇದೇ ಎರಡನೆಯ ಕೃತಿ.

ಆಲ್ಬೇನಿಯನ್ ಭಾಷೆಯ ಮೇಲೆ ಅನೇಕ ಭಾಷೆಗಳ ಪ್ರಭಾವವಾಗಿರುವುದು ಕಂಡುಬರುತ್ತದೆ. ಅವುಗಳಲ್ಲಿ ಮುಖ್ಯವಾದುವು ಲ್ಯಾಟಿನ್, ಸ್ಲ್ಯಾವಿಕ್, ಗ್ರೀಕ್. ಉದಾಹರಣೆಗೆ pes ಐದು, het ಹತ್ತು, katre ನಾಲ್ಕು, quind ನೂರು, kanis-gen ನಾಯಿ, lirroj= ಕೆಲಸ ಮಾಡು-laboro - ಇವು ಲ್ಯಾಟಿನ್ ಭಾಷೆಯ ಪ್ರಭಾವವನ್ನು ಎತ್ತಿ ತೋರಿಸುತ್ತವೆ. ಆಲ್ಬೇನಿಯನ್ ಶಬ್ದಕೋಶ ಲ್ಯಾಟಿನ್ಮಯವಾಗಿದ್ದರೂ ಧ್ವನಿ ಮತ್ತು ವ್ಯಾಕರಣ ದೃಷ್ಟಿಯಿಂದ ಅದು ತನ್ನ ಸ್ವಂತ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಇದರಂತೆ ಗ್ರೀಕ್ ಭಾಷೆಯ ಪ್ರಭಾವಮುದ್ರೆಯನ್ನೂ ಆಲ್ಬೇನಿಯನ್ ಭಾಷೆಯಲ್ಲಿ ಗುರುತಿಸಬಹುದು. ಗ್ರೀಕ್, ಲ್ಯಾಟಿನ್ ಅಲ್ಲದೆ ಸ್ಲ್ಯಾವಿಕ್, ರೊಮನ್ಸ್ ಮುಂತಾದ ಇನ್ನೂ ಕೆಲವು ಅನ್ಯಭಾಷೆಯ ಶಬ್ದಗಳು ಆಲ್ಬೇನಿಯನ್ ಶಬ್ದಕೋಶಗಳಲ್ಲಿ ಸೇರಿರುವುದರಿಂದ ಅದರ ಸ್ವಂತ ಶಬ್ದಭಂಡಾರ ಕಡಿಮೆಯಾಗಿದೆ.

ಸಾಹಿತ್ಯ ಸಂಪಾದಿಸಿ

ಆಲ್ಬೇನಿಯ ಸಾಹಿತ್ಯದಲ್ಲಿ ಬೇರೆ ಬೇರೆ ಕಾಲಕ್ಕೆ ಸಂಬಂಧಪಟ್ಟ ಜನಪದ ಗೀತೆಗಳು ಯಥೇಚ್ಛವಾಗಿವೆ. ಇವು ಇತರ ಬಾಲ್ಕನ್ ದೇಶಗಳಲ್ಲಿರುವ ಸಾಮಾನ್ಯ ವಸ್ತು ವಿಷಯಗಳನ್ನು ಕುರಿತವು ಮತ್ತು ಸಾಧಾರಣವಾಗಿ ಅದೇ ರೀತಿಯವು. ಇವು ಗ್ರಾಮಸ್ಥರಾದ ಮತ್ತು ಸ್ವಾತಂತ್ರ್ಯಪ್ರಿಯರಾದ ಗುಡ್ಡಗಾಡಿನ ಜನಗಳಿಗೆ ಸಂಬಂಧಪಟ್ಟು ಪರ್ವತಗಳ ನಡುವೆ ಮತ್ತು ಕಣಿವೆಗಳಲ್ಲಿ ನಡೆದ ಒಳಪಂಗಡಗಳ ಮನಸ್ತಾಪಗಳನ್ನು ವಿವರಿಸುತ್ತವೆ. ಆಲ್ಬೇನಿಯದ ನ್ಯಾಯಶಾಸ್ತ್ರ ಪಿತಾಮಹನಾದ ಲೆಕ್ನನ್ನು ಕುರಿತು ಅನೇಕ ಕಥನಕವನಗಳಿವೆ. ಆದರೆ ಅತ್ಯಂತ ಜನಪ್ರಿಯವಾದ ವಸ್ತುವಿಷಯವೆಂದರೆ ಅರಸ ಸ್ಕ್ಯಾಂಡರ್ ಬೆಗ್ನ (1410-67) ಜೀವನ. ಈತ ತನ್ನ ಅಲ್ಪಾಯುಷ್ಯದಲ್ಲಿ ಆಲ್ಬೇನಿಯದ ಅನೇಕ ಒಳಪಂಗಡಗಳನ್ನು ಒಟ್ಟುಗೂಡಿಸಿ, ತುರ್ಕಿಯ ದಂಡಯಾತ್ರೆಗಳನ್ನು ತಡೆಗಟ್ಟಿ, ಆಲ್ಬೇನಿಯದ ಮಾದರಿ ಶೂರನಾಗಿ ಪರಿಗಣಿಸಲ್ಪಟ್ಟು, ಅನೇಕ ಪ್ರಾಚೀನ ಜನಪದಗೀತೆಗಳಿಗೂ ಮತ್ತು ಅರ್ವಾಚೀನ ಕವಿಗಳಿಗೂ ಸ್ಫೂರ್ತಿಯನ್ನು ಕೊಟ್ಟಿದ್ದಾನೆ.

ಫ್ರಾನ್ಸಿಸ್ಕೊ ಬ್ಲಾಂಕೊನ ಡಿಜಿಯೊನೇರಿಯೋ ಲ್ಯಾಟನೊ ಎಪರೋಟ (1635) ಎಂಬುದು ಆಲ್ಬೇನಿಯದ ಮೊಟ್ಟಮೊದಲ ಮುದ್ರಿತ ಪುಸ್ತಕ. ಆಲ್ಬೇನಿಯದ ಮೊದಲ ಪ್ರತಿಭಾವಂತ ಬರೆಹಗಾರ ಜೂಲಿಯ ವಾರಿಬೋಬ ಏಸುಕ್ರಿಸ್ತನ ತಾಯಿ ಮೇರಿಯ ಜೀವನವನ್ನು ಪದ್ಯರೂಪದಲ್ಲಿ ನಿರೂಪಿಸಿದ್ದಾನೆ (1762). ಜನಪ್ರಿಯ ಸಂಪ್ರದಾಯವನ್ನು ಒತ್ತಿಹೇಳಿದ ಜಿರೋನಿಮ್ದ ರಾಡ (1813-1903) ಎಂಬ ಪುನರುಜ್ಜೀವನ ಕಾಲದ ಕವಿ ಜಾನಪದ ಮತ್ತು ನಾಡಪದಗಳನ್ನು ಸಂಗ್ರಹಿಸಲು ಪ್ರಾರಂಭಿಸಿ, ತಾನೇ ಸ್ವಂತ ಕವನಗಳನ್ನು ರಚಿಸತೊಡಗಿದ. ಈತನ ಮುಖ್ಯವಾದ ಬರೆವಣಿಗೆಗಳಲ್ಲಿ ಶೂರ ಸ್ಕ್ಯಾಂಡರ್ ಬೆಗ್ನ ಜೀವನಚರಿತ್ರೆಯೂ ಒಂದು. ಸಾಹಿತ್ಯ ವಿಮರ್ಶೆಯ ಒಂದು ಪತ್ರಿಕೆಯ ಸಂಪಾದಕನಾಗಿದ್ದ ಜರ್ಚ್ ಫಿಷ್ಟ (1866-1941) ತನ್ನ ಲಾಹುಟ ಎ ಮಾಲ್ಸಿಸ್ ಎಂಬ ಬರೆವಣಿಗೆಯಿಂದಲೂ ಈತನ ಸಂಗಡಿಗನಾದ ವಿನ್ಸೆಂಕ್ ಪ್ರೆನುಷಿ ತನ್ನ ಆಲ್ಬೇನಿಯದ ಜನಪದ ಗೀತೆಗಳ ಸಂಗ್ರಹದಿಂದಲೂ (1911) ಪ್ರಸಿದ್ಧರಾದರು. ಸಾಮಿ ಬೇ ಫ್ರಾಷೇರಿ ಬೇಸ ಎಂಬ ತನ್ನ ನಾಟಕದಲ್ಲಿ ಆಲ್ಬೇನಿಯ ದೇಶದ ಸ್ವಾತಂತ್ರ್ಯಪ್ರಿಯರಾದ ಪರ್ವತವಾಸಿಗಳನ್ನು ಲಂಚಕೋರರಾದ ಆಳುವ ಜನಾಂಗದೊಡನೆ ಹೋಲಿಸಿ ಎರಡನೆಯ ಫ್ರಾಷೇರಿ (1846-1901) ಒಂದು ಗ್ರಾಮಾಂತರ ಜನಪದ ಕತೆಯನ್ನೂ ಸ್ಕ್ಯಾಂಡರ್ ಬೆಗ್ ಕುರಿತ ಹಾಡು ಎಂಬುದನ್ನೂ ಬರೆದ. ಜಿಸಿಪೆ ಸಿ್ಖರೊ (1865-1927), ಪಿರ್ರಸ್ನ ಸಾವು (1906) ಎಂಬ ದೇಶಪ್ರೇಮದ ದುರಂತ ನಾಟಕವನ್ನು ಬರೆದ ಮಿಹಲ್ ಗ್ರೆಮೀನೊ ಮತ್ತು ಕ್ರಿಸ್ಪೋ ಫ್ಲಾಕಿಯರ ಆಲ್ಬೇನಿಯದ ಕವನ ಸಂಗ್ರಹ (1923) ಸ್ವತಂತ್ರ ಆಲ್ಬೇನಿಯದ ಪಾಠಶಾಲೆಗಳಲ್ಲಿ ಉಪಯೋಗಿಸಲ್ಪಟ್ಟಿತು.

ಆಲ್ಬೇನಿಯದ ಪರವಾಗಿ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದ ಫೈಕ್ ಕೊನಿಟ್ಟ (1875-1942) ಒಬ್ಬ ಪ್ರಬಂಧಕಾರ, ಕವಿ ಮತ್ತು ವಿಮರ್ಶಕ. ಈತ ಆಲ್ಬೇನಿಯ ಎಂಬ ವಿಮರ್ಶನ ಪತ್ರಿಕೆಗೆ ಬ್ರಸೆಲ್ಸ್ ಮತ್ತು ಲಂಡನ್ ಪಟ್ಟಣಗಳಲ್ಲಿ 1896-1909ರವರೆಗೆ ಸಂಪಾದಕನಾಗಿದ್ದ. ಫ್ಯಾನ್ ಎಸ್. ನೋಲಿ ಎಂಬಾತ ಷೇಕ್ಸ್, ಇಬ್ಸನ್, ಪೋ, ಉಮರ್ ಖಯ್ಯಾಮ್, ಇಬನೆಜ್ ಮೊದಲಾದÀ ಕವಿಗಳ ಮುಖ್ಯವಾದ ಕಾವ್ಯಗಳನ್ನು ಆಲ್ಬೇನಿಯ ಭಾಷೆಗೆ ತರ್ಜುಮೆಮಾಡಿದ್ದಾನೆ.

ತರುಣ ಜನಾಂಗದವರ ಪೈಕಿ ಸಂಕೇತವಾದ ಮತ್ತು ತದನಂತರ ಬಂದ ಮಾರ್ಗಗಳಿಂದ ಪ್ರಭಾವಿತರಾದವರಲ್ಲಿ ಸ್ಕೆಂಡರ್ಬಾರ್ಧಿ ಮುಖ್ಯನಾದವ. ಈತ ಸಾಮಿ ಬೇ ಫ್ರಾಷೇರಿಯ ಬೇಸ ಕಾವ್ಯವನ್ನು ಇಂಗ್ಲಿಷಿಗೆ ಮೊಟ್ಟ ಮೊದಲಿಗೆ ಅನುವಾದಿಸಿದ್ದಾನೆ. ಗದ್ಯದಲ್ಲಿ ಮಿಲ್ಟೋ ಸೊಟಿರ್ ಗುರ್ರ ಬರೆದ ಷೇಕ್ಸ್ ಪಿಯರ್ ಎ ಕುರ್ಬೆಟಟ್ (1938) ಎಂಬ ಕೃತಿಯಲ್ಲಿ ಓ. ಹೆನ್ರಿ ಮತ್ತು ಮೊಪಾಸಾ ಇವರ ಪ್ರಭಾವಗಳನ್ನು ಗುರುತಿಸಬಹುದು.

ಆಲ್ಬೇನಿಯನ್ ಭಾಷೆಯ ವ್ಯಾಕರಣ ಆಧುನಿಕ ಗ್ರೀಕ್ ಮತ್ತು ರೊಮೆನಿಯನ್ ಭಾಷೆಗಳ ವ್ಯಾಕರಣಗಳನ್ನು ಹೋಲುತ್ತದೆ. ಲ್ಯಾಟಿನ್, ರೊಮೇನಿಯನ್ ಮತ್ತು ಬಾಲ್ಟನ್ ಭಾಷೆಗಳಿಂದ ಹಲವು ಪದಗಳನ್ನು ಈ ಭಾಷೆಯಲ್ಲಿ ಬಳಸಲಾಗಿದೆ.

16ನೆಯ ಶತಮಾನದಿಂದ 20ನೆಯ ಶತಮಾನದವರೆಗೆ ತುರ್ಕಿ ಮತ್ತು ಗ್ರೀಸಿನ ಮತಗಳ ಕಥೆಗಳೂ ಪೌರಾಣಿಕ ಕಥೆಗಳೂ ಆಲ್ಬೇನಿಯದ ಜಾನಪದದ ಮೇಲೆ ಪ್ರಭಾವವನ್ನು ಬೀರಿದವು. ವೀರರ ಕಥೆಗಳು ಮತ್ತು ಕಾವ್ಯಗಳಿಂದ ಈ ಕಥೆಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದವು. ಈ ಮೌಖಿಕ ಪರಂಪರೆ ಈ ದೇಶವು ತನ್ನತನವನ್ನು ಉಳಿಸಿಕೊಳ್ಳುವಲ್ಲಿ ನೆರವಾಯಿತು. ನೈಮ್ ಫ್ರಷೆಂ ಮತ್ತು ಸಾಮಿ ಫ್ರಷೆಂ ಸಹೋದರರು 19ನೆಯ ಶತಮಾನದ ಉತ್ತರಾರ್ಧದಲ್ಲಿ ಭೂಗತ ಆಲ್ಬೇನಿಯನ್ ಸಾಹಿತ್ಯವನ್ನು ಬೆಳೆಸಿದರು. ಒಂದು ರಾಷ್ಟ್ರೀಯ ಆಂದೋಳನ ಪ್ರಾರಂಭವಾಯಿತು. ಹಲವಾರು ಸಾಹಿತಿಗಳನ್ನು ಆಕರ್ಷಿಸಿತು. 1920ರ ದಶಕದಲ್ಲಿ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದಿದ್ದ ಬಿಷಪ್ ಫಾನ್ ನೊಲಿ ರಾಷ್ಟ್ರೀಯ ನಿಷ್ಠೆಯನ್ನು ಪ್ರಕಟಿಸಿದ ಮತ್ತೊಬ್ಬ ಬರೆಹಗಾರ. ಈತ ಬೇರೆ ಸಾಹಿತ್ಯದ ಕೃತಿಗಳನ್ನು ಆಲ್ಬೇನಿಯನ್ ಭಾಷೆಗೆ ಅನುವಾದಿಸಿದ. ಕಮ್ಯುನಿಸ್ಟರು ದೇಶವನ್ನು ಆಳುತ್ತಿದ್ದಾಗ ಸಾಹಿತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರಲಿಲ್ಲ. ಈ ಆಡಳಿತವು ಕುಸಿದನಂತರ ಸಾಹಿತಿಗಳಿಗೆ ಸ್ವಾತಂತ್ರ್ಯದ ವಾತಾವರಣ ಸೃಷ್ಟಿಯಾಯಿತು. `ದಿ ಜನರಲ್ ಆಫ್ ದಿ ಡೆಡ್ ಆರ್ಮಿ’ (1963) ಎನ್ನುವ ಕಾದಂಬರಿಯನ್ನು ಬರೆದ ಇಸ್ಮೇಲ್ ಕದಾಕಿ, 20ನೆಯ ಶತಮಾನದ ಉತ್ತರಾರ್ಧದ ಪ್ರಸಿದ್ಧ ಸಾಹಿತಿ.