ಆಳ್ವಾರ್ ರಾಜಾಸ್ಥಾನದಲ್ಲಿನ ಒಂದು ಪಟ್ಟಣ. ದೆಹಲಿ ಮತ್ತು ಜಯಪುರಗಳ ನಡುವೆ ಇದೆ. ದೆಹಲಿಯಿಂದ 164 ಕಿ.ಮೀ. ಜಯಪುರದಿಂದ 143 ಕಿ.ಮೀ. ಇಲ್ಲಿಯ ಅರಮನೆ, ವಸ್ತುಸಂಗ್ರಹಾಲಯ ಪ್ರಸಿದ್ಧಿ ಪಡೆದಿವೆ. ಶಿಕಾರಿಗಳಿಗೆ ಹೆಸರಾಗಿತ್ತು. ವಿವಿಧ ಪದ್ಧತಿಗಳಲ್ಲಿ ನಿರ್ಮಿಸಿರುವ, ಕಟ್ಟಡಗಳ ಸಮೂಹವಾಗಿರುವ ನಗರದ ಅರಮನೆಯನ್ನು ಸಾಗರ ಎಂದು ಕೆರೆಯೊಂದು ಬೆಟ್ಟದ ಬುಡದಿಂದ ಪ್ರತ್ಯೇಕಿಸುತ್ತದೆ. ಅರಮನೆಯ ಒಂದು ಭಾಗವಾಗಿರುವ ವಸ್ತುಸಂಗ್ರಹಾಲಯದಲ್ಲಿ ಹಸ್ತಪ್ರತಿಗಳು, ವರ್ಣಚಿತ್ರಗಳು ತುಂಬಿವೆ. ಹಿಂದಿ, ಸಂಸ್ಕøತ ಮತ್ತು ಪರ್ಷಿಯನ್ ಭಾಷೆಯ 7,000 ಹಸ್ತಪ್ರತಿಗಳಲ್ಲಿ 24 ಮೀ. (80) ಉದ್ದವಾಗಿರುವ ಸಚಿತ್ರ ಭಾಗವತದ ಸುರುಳಿ ಎದ್ದು ಕಾಣುವ ಕೃತಿ. ಅರಬ್ಬೀ ಭಾಷೆಯ ಕುರಾನಿನ ಹಳೆಯ ಒಂದು ಪ್ರತಿ ಇದೆ; ಅದರ ಪಾರ್ಸಿ ಅನುವಾದವನ್ನು ಕೆಂಪು ಅಕ್ಷರಗಳಲ್ಲಿ ಬರೆಯಲಾಗಿದೆ. ಷೇಕ್ ಸಾದಿ ಬರೆದ ಗುಲಿಸ್ತಾನ ಕಾವ್ಯದ ಸಚಿತ್ರ ಪ್ರತಿಯಿದೆ.

ಶಸ್ತ್ರಾಲಯದಲ್ಲಿ ಅಕ್ಬರ್, ಷಹಜಹಾನ್, ದಾರಾ ಶಿಕೋ, ನಾದಿರ್ ಷಾ ಮತ್ತು ಔರಂಗಜೇಬ್ ಮೊದಲಾದವರು ಉಪಯೋಗಿಸುತ್ತಿದ್ದ ಶಸ್ತ್ರಗಳಿವೆ. ಇಲ್ಲಿಗೆ 13 ಕಿ.ಮೀ ದೂರದಲ್ಲಿ ನೈಋತ್ಯದ ಕಡೆ ನಿಸರ್ಗ ರಮಣೀಯವಾದ ಶಿಲಿಶೇಢ ಸರೋವರವಿದೆ. ಸರೋವರದ ಸುತ್ತ ವಿಪುಲವಾದ ಕಾಡುಗಳೂ ಅಲ್ಲಲ್ಲಿ ನೆರಳಿರುವ ತಂಗುದಾಣಗಳೂ ಇವೆ. ಅಣೆಕಟ್ಟೊಂದರಿಂದ ನಿರ್ಮಾಣವಾದ ಈ ಸರೋವರದ ವಿಸ್ತೀರ್ಣ 4 ಚ.ಮೈ. ಸರೋವರದ ಮೇಲಿರುವ ಸುಂದರವಾದ ಅರಮನೆ ಪ್ರಶಾಂತ ಸ್ಥಳದಲ್ಲಿದ್ದು ರಜಾದಿನಗಳನ್ನು ಕಳೆಯಲು ಅತ್ಯುತ್ತಮ ಸ್ಥಳವಾಗಿದೆ. ಇದರ ಹತ್ತಿರವಿರುವ ಪಿಲಾನಿಯಲ್ಲಿ ಬಿರ್ಲಾ ಶಿಕ್ಷಣ ಟ್ರಸ್ಟಿನವರು ಸ್ಥಾಪಿಸಿರುವ ಶೈಕ್ಷಣಿಕ ಕೇಂದ್ರವಿದೆ. ಇಲ್ಲಿಂದ 32 ಕಿ.ಮೀ ದೂರದಲ್ಲಿ ಶ್ರೀಶಿಕಾ ವನ್ಯಜಂತು ಸಂರಕ್ಷಣಾಲಯವಿದೆ. ಇಲ್ಲಿ ಹುಲಿ, ಚಿರತೆ, ಜಿಂಕೆ ಮತ್ತು ಇತರ ಪ್ರಾಣಿಗಳು ಅವುಗಳ ಸ್ವಾಭಾವಿಕ ವಾತಾವರಣದಲ್ಲಿರುವುದನ್ನು ಕಾಣಬಹುದು.