(1838-97). ಪೋಲೆಂಡಿನ ಕವಿ, ನಾಟಕಕಾರ, ಕಥೆಗಾರ. 1863ರ ದಂಗೆ ವಿಫಲವಾದ ಮೇಲೆ ಇಟಲಿ ಮತ್ತು ಜರ್ಮನಿಗಳಲ್ಲಿ ತತ್ತ್ವಶಾಸ್ತ್ರಧ್ಯಯನ ನಡೆಸಿದ. ಸ್ವಲ್ಪಕಾಲ ವಿಧ್ಯರ್ಥಕ (ಪಾಸಿಟೆವಿಸ್ಟ) ಪಂಥಕ್ಕೆ ಸೇರಿದ್ದು ಅನಂತರ ಮಾನವಹೃದಯಕ್ಕೆ ಹೆಚ್ಚು ಪ್ರಾಧಾನ್ಯ ನೀಡಿದ. ಪ್ರಾರಂಭದ ದಿನಗಳಲ್ಲಿ ರಾಷ್ಟ್ರೀಯ ಬಲಿದಾನವನ್ನು ಮೆಚ್ಚಿದ್ದನಾದರೂ ಅನಂತರ ಕ್ರಿಯಾತ್ಮಕ ಸಮಾಜಸೇವೆಯನ್ನು ಪ್ರತಿಪಾದಿಸಿದ. ಇವನೂ ಕನೋಪ್ನಿಕ್ನೊ ಪೋಲೆಂಡಿನಲ್ಲಿ ಈ ಶತಮಾನದ ಉತ್ತರಾರ್ಧದ ಅತ್ಯುತ್ತಮ ಭಾವಗೀತೆಗಳ ಕವಿಗಳು. ಇವನ ಭಾವಗೀತೆಗಳಲ್ಲಿ ಯಾವ ನಿರ್ದಿಷ್ಟತತ್ತ್ವದ ಪ್ರತಿಪಾದನೆಯ ಗುರಿಯೂ ಇಲ್ಲ. ಮಾನವಹೃದಯದ ಹಲವು ಭಾವಗಳನ್ನು ಚಿತ್ರಿಸುವ ಕವನಗಳು ಶ್ರೇಷ್ಠವಾದುವು. ಇವನ ಚಾರಿತ್ರಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಂಥ ಸತ್ತ್ವವಿಲ್ಲದಿದ್ದರೂ ಅಷ್ಟೇನೂ ಅವು ನೀರಸವಲ್ಲ. ಇವನ ಕಾವ್ಯನಾಮ ಈಲಿ.