ಆಹಾರದ ಕೀಳ್ಬೆರಕೆ- ಒಳ್ಳೆಯ ಅಚ್ಚ ಆಹಾರ ಪದಾರ್ಥಕ್ಕೆ ಕೇವಲ ವ್ಯಾಪಾರದ ಲಾಭಕ್ಕಾಗಿ ಕೀಳಾದ ಅಗ್ಗದ ವಸ್ತುಗಳನ್ನು ಬೆರೆಸುವುದು (ಅಡಲ್ಟರೇಶನ್), ಮುಂದುವರಿದ ನಾಡುಗಳಲ್ಲಿ ಮೊದಲಿಗೆ ದೊಡ್ಡ ಸಮಸ್ಯೆ ಆಗಿದ್ದು ಈಗ ಬಹುಮಟ್ಟಿಗೆ ಇಳಿಮುಖವಾಗಿದೆ. ಆಹಾರ ತಯಾರಕರ ನ್ಯಾಯ, ನೀತಿ ವರ್ತನೆ, ಸರ್ಕಾರಗಳ ಆಹಾರ, ಮದ್ದುಗಳ ಕಾಯಿದೆಗಳು ಈ ಇಳಿಮುಖಕ್ಕೆ ಮುಖ್ಯಕಾರಣಗಳು. ಬಳಕೆಗಾರನ ಆರೋಗ್ಯ ಕಾಪಾಡುವುದೇ ಈ ಕಾಯಿದೆಗಳ ಮುಖ್ಯ ಗುರಿ. ತಯಾರಾದ ಆಹಾರದಲ್ಲಿ ಅಪಾಯಕರ ವಸ್ತುಗಳು ಏನೂ ಸೇರದಂತೆ, ವಿವರ, ವರ್ಣನೆ, ಮೇಲಂಟಿಸಿದ ಚೀಟಿಗಳು, ಜಾಹೀರಾತುಗಳ ಮೂಲಕ ಮೋಸಗೊಳಿಸದಂತೆ ನೋಡಿಕೊಳ್ಳುವುದು ಇನ್ನೊಂದು ಗುರಿ.
ತಯಾರಾದ ಆಹಾರದ ಡಬ್ಬಿ, ಸೀಸೆಗಳ ಮೇಲಿನ ಚೀಟಿಯಲ್ಲಿ, ಅದರೊಳಗಿರುವ ವಸ್ತುಗಳ ನಿಜವಾದ ಹೆಸರು, ಪ್ರಮಾಣಗಳನ್ನು ಸರಿಯಾದ ಕ್ರಮದಲ್ಲಿ ಸೂಚಿಸಿರಬೇಕೆನ್ನುವುದು ಕಾಯಿದೆಯಲ್ಲಿ ಮುಖ್ಯವಾದ ಒಂದು ಕಡ್ಡಾಯ ಸೂಚನೆ. ತಯಾರಕರು ಇದನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಕೀಳ್ಬೆರಕೆಯ ಮೋಸಕ್ಕೆ ದಾರಿಯೇ ಇರದು. ಮೇಲುಗಡೆ ಬಾದಾಮಿ ಎಣ್ಣೆ (ಅಲ್ಮಂಡ್ ಆಯಿಲ್) ಎಂದು ಚೀಟಿ ಅಂಟಿಸಿ, ಒಳಗಡೆ ಬಾದಾಮಿ ವಾಸನೆ, ರೂಪಗಳಿರುವ ರಾಸಾಯನಿಕ ದ್ರವವನ್ನು ಸೀಸೆಯಲ್ಲಿ ತುಂಬುವುದು ಕಾಯಿದೆ ಮುರಿದಂತೆ. ಅಲ್ಲದೆ ಚೀಟಿಯಲ್ಲಿ ಬಲವರ್ಧಕ, ರಕ್ತಶೋಧಕ, ಸಕಲನೋವುಹರ, ಮುಟ್ಟುಕಾರಕ-ಹೀಗೆಲ್ಲ ವರ್ಣನೆಗಳು, ವೈದ್ಯಶಾಸ್ತ್ರಕ್ಕೆ ಎದುರಾಗಿ ಬರೆವಂತಿಲ್ಲ. ಹಾಗೆ ಬರೆದ ವಿಷಯಗಳೆಲ್ಲ ಶಾಸ್ತ್ರೀಯವಾಗಿ ಒಪ್ಪುವಂತಿರಬೇಕು. ಜನ ಬಳಸುವ ಉಳಿದ ಎಷ್ಟೋ ವಸ್ತುಗಳಿಗೆ ಇರುವ ಹಾಗೇ ಆಹಾರದ ವಿಚಾರಗಳಲ್ಲೂ ಗೊತ್ತಾದ ಆಯಮಾನಗಳಿವೆ. ತಕ್ಕಾಳಿ ಪಳಿದ್ಯ (ಟೊಮ್ಯಾಟೊ ಕೆಚಪ್) ಎಂದರೆ ಅದರಲ್ಲಿ ಇರಬೇಕಾದ ತಕ್ಕಾಳಿಯ ಪ್ರಮಾಣ, ಬಣ್ಣ, ವಾಸನೆ ಕೊಡುವ ಇತರ ವಸ್ತುಗಳ ಪ್ರಮಾಣ, ಗುಣಗಳು ನಿರ್ಧಾರವಾಗಿದೆ. ಮದ್ಯ ಪಾನೀಯಗಳಲ್ಲೂ ಅಷ್ಟೆ. ವೈನ್ ಅಂದರೆ ವೈನೇ ಆಗಿರಬೇಕು. ಅದರಲ್ಲಿ ಇಂತಿಷ್ಟಾದರೂ ಮದ್ಯಸಾರ ಇರಬೇಕೆಂದಿದೆ. ಯಾವ ಹಣ್ಣಿಂದ ಮಾಡಿದೆ, ನೀರೆಷ್ಟಿದೆ ಎಂದೂ ಸೂಚಿಸಬೇಕು. ಮೇಜಿನ ಮೇಲೆ ಸೀಸೆಯಲ್ಲಿ ಇಟ್ಟುಕೊಂಡು ಊಟದ ತಟ್ಟೆಗೆ ಉದುರಿಸಿಕೊಳ್ಳುವ ಮೇಜು ಉಪ್ಪಿನ ಪುಡಿ ಗೆಡ್ಡೆಗಟ್ಟದೆ ಸರಾಗವಾಗಿ ಬರುವಂತೆ ಎಷ್ಟು ಪಾಲು ಮೇಗ್ನೀಷಿಯಂ ಕಾರ್ಬೊನೇಟನ್ನು ಹಾಕಿದೆ ಎನ್ನುವುದನ್ನೂ ಸೀಸೆಯ ಮೇಲೆ ಸೂಚಿಸಬೇಕು.
ಭಾರತದಲ್ಲಿ ಆಹಾರದ ಕೀಳ್ಬೆರಕೆ ಆಗುತ್ತಿರುವುದನ್ನು ನೋಡಿದರೆ, ಒಬ್ಬನಿಗೆ ಅಮೃತ, ವರ ಆದದ್ದು ಸಾವಿರಾರು ಮಂದಿಗೆ ವಿಷವೋ ಶಾಪವೋ ಆಗುವಂತಿದೆ. ಭಾರತ ಸರ್ಕಾರದ ಆರೋಗ್ಯ ಇಲಾಖೆಯವರು ಇತ್ತೀಚೆಗೆ ನಡೆಸಿದ ಪರೀಕ್ಷೆಯಂತೆ, ಮೂರು ಪದಾರ್ಥಗಳಲ್ಲಿ ಒಂದು ಆಹಾರ ಪದಾರ್ಥ ಕೀಳ್ಬೆರಕೆಯಾಗಿತ್ತು. ಅಷ್ಟೇ ಅಲ್ಲ, ಚೆನ್ನಾಗಿರದ, ಕೆಟ್ಟಿರುವ ಆಹಾರಗಳಿಗೆ ಬಣ್ಣ ಕಟ್ಟಲು ಬಳಸಿದ ರಾಸಾಯನಿಕ ಬಣ್ಣಗಳು ಏಡಿಗಂತಿ (ಕ್ಯಾನ್ಸರ್) ಆಗಿಸುವಂತಿದ್ದುವು. ಬಾಯಲ್ಲಿ ನೀರೊರಿಸುವಂತೆ ಹೊನ್ನಿನ ಹಳದಿ ಬಣ್ಣ ಕೊಡಲು ಜಿಲೇಬಿಗಳಿಗೆ ಮೆಟಾನಿಲ್ ಯೆಲ್ಲೊ ಬಟಾಣಿ ಕಾಳುಗಳು ಅಚ್ಚ ಹಸುರಾಗಿ ಕಾಣುವಂತೆ ಬ್ಲೊ ವಿಆರ್ಸ್ (ಇದೊ ಒಂದು ಏಡಿಗಂತಿ ಜನಕ) ಹಾಕುವುದು ರೂಢಿಯಲ್ಲಿವೆ. ಇವೆರಡದು ಬಣ್ಣಗಳೂ ಕಲ್ಲಿದ್ದಲ ಟಾರೆಣ್ಣೆಯ ಕೃತಕ ಉತ್ಪನ್ನಗಳು. ಆದ್ದರಿಂದ ಹೊಟ್ಟೆಗೆ ಸೇರಿದರೆ ಇವು ಏಡಿಗಂತಿಕಾರಕಗಳು. ಕಣ್ಸೆಳೆವಂತೆ ಹಪ್ಪಳಗಳಿಗೆ ಕೆಂಪು ರಂಗು ಕೊಡಲು ಬಳಸುವ ರೊಡಮೀನ್-ಬಿ ಬಲವಾದ ಏಡಿಗಂತಿಜನಿಕ ರಾಸಾಯನಿಕ. ಬೇಳೆ ಕಾಳುಗಳಿಗೂ ಈ ಬಗೆಯ ಬಣ್ಣಗಳನ್ನು ಸೇರಿಸುವುದುಂಟು. ಬಹಳ ಮಂದಿ ಬಳಸುವ ಅರಿಶಿನಕ್ಕೂ ಉಳಿಗಾಲವಿಲ್ಲ. ಅದರ ಹಳದಿ ಬಣ್ಣ ಇನ್ನಷ್ಟು ನಿಗಿನಿಗಿಯಾಗಿ ಹೊಳೆವಂತೆ ಮಾಡಲು ಸೀಸದ ಕ್ರೋಮೇಟನ್ನು ಸೇರಿಸುವರು. ಇದರಿಂದ ಸೀಸದ ವಿಷವೇರಿಕೆಯಾಗಿ ರಕ್ತಕೊರೆ, ಅರೆನಾರಿಬೇನೆ (ಪೆರಾಲಿಸಿಸ್), ಮೈಯಿಳಿತಗಳು ಆಗುವುದುಂಟು.
ನಗರಗಳಲ್ಲಂತೂ ದುಡ್ಡು ತೆತ್ತರೂ ನೂರಕ್ಕೆ 50-60 ಬಾರಿ ಅಪ್ಪಟವಾದ ಹಾಲು ದೊರೆಯದಿರುವಾಗ, ಕೀಳ್ಬೆರಕೆಯ ಅಪಾಯವನ್ನು ಅರಿಯಬಹುದು. ದಿನದ ಮಾರಾಟದಲ್ಲಿ ಉಳಿದುಬಿಟ್ಟ ಹಾಲನ್ನು ಕೆಡದಂತಿರಿಸಲು ಹಿಂದೆ ಒಂದು ಚಿಟಿಕೆಯಷ್ಟು ಕೋರಿಕಾಮ್ಲವನ್ನು ಸೇರಿಸುತ್ತಿದ್ದರು. ಇದರಿಂದ ಬೋರಾನು ವಿಷವೇರಿಕೆಯಾಗಿದ್ದರಿಂದ ಇದಕ್ಕೆ ಕಾನೂನು ಎದುರಾಗಿದೆ. ಹೀಗೇ ಬೆಣ್ಣೆ, ತುಪ್ಪಗಳಲ್ಲೂ ವನಸ್ಪತಿ ಬೆರೆಸುವುದುಂಟು. ಇದನ್ನು ತಪ್ಪಿಸುವಂತೆ, ವನಸ್ಪತಿಗೇ ಸೇರಿಸಿದರೆ ಸುಲಭವಾಗಿ ಕಂಡುಕೊಳ್ಳಬಹುದಾದ ಒಂದು ಬಣ್ಣವನ್ನು ಕಂಡುಹಿಡಿವುದು ಇನ್ನೂ ಕೈಗೂಡಿಲ್ಲ. ಬದಲಾಗಿ ಈ ವನಸ್ಪತಿಗೆ ತುಪ್ಪದ ಬಣ್ಣ ಕೊಡುತ್ತಿರುವರು. ಚಹ, ಚಾಕೊಲೇಟು, ಚಿಕೊರಿಗಳು ಕೂಡ ಕೀಳ್ಬೆರಕೆಗೆ ಹೊರತಾಗಿಲ್ಲ. ಹಿಂದಿನ ಕಾಲದಲ್ಲಿ, ಕಾಫಿಗೆ ಕೀಳ್ಬೆರಕೆಯಾಗಿ ಚಿಕೊರಿ ಸೇರುತ್ತಿದ್ದುದೇ ಜನರಿಗೆ ಅಭ್ಯಾಸವಾಗಿಬಿಟ್ಟು, ಈಗ ಚಿಕೊರಿ ಇದ್ದರೇ ಕಾಫಿ ರುಚಿಕರ ಎನ್ನುವ ಗತಿಗೆ ಬಂದಿದೆ. ಕಾಫಿಪುಡಿಯಲ್ಲಿ ಹುರಿದ ಹುಣಿಸೆಬೀಜದ ಪುಡಿಯನ್ನೂ ಬಾದಾಮಿ ಹಾಲಿಗೆ ಕಡಲೆಕಾಯಿ ಬೀಜವನ್ನೂ ಕೀಳ್ಬೆರಸಿ ರುಚಿ ಕಟ್ಟಿಸುವುದುಂಟು. ಈ ತೆರನ ಕೀಳ್ಬರೆಕೆಯೇ ಈಗ ಕೈಗಾರಿಕೆಯಾಗಿ ನಿಂತಿದೆ.
ತೂಕದಲ್ಲಿ ಅಳೆವ ದವಸಗಳಿಗೆ ಕಲ್ಲು ಮಣ್ಣನ್ನೂ ನೀರನ್ನೂ ಬೆರೆಸುವುದು ಇನ್ನೊಂದು ತೆರನ ಕೀಳ್ಬೆರಕೆ. ಜನರು ದಿನವೂ ಬಳಸುವ ಆಹಾರಗಳಲ್ಲಿ, ಕುಡಿವ ಪಾನೀಯಗಳಲ್ಲಿ ಯಾವುವೂ ಕೀಳ್ಬೆರಕೆಗಾರನ ಕಣ್ಣು ತಪ್ಪಿಸಿಲ್ಲ. ಕೀಳ್ಬೆರೆಸುವ ವಸ್ತುಗಳ ಹರವು ಹಿಂದಿನ ಕಾಲದವರನ್ನು ಹಿಂಬೀಳಿಸಿವೆ. ಅಡಿಗೆಗಾಗಿ ಬಳಸುವ ಎಳ್ಳು, ಸೇಂಗಾ, ಕೊಬ್ಬರಿ, ಕುಸುಬಿ ಎಣ್ಣೆಗಳ ಕೀಳ್ಬೆರಕೆಗಾಗಿ ಖನಿಜದ ಎಣ್ಣೆ (ಮಿನರಲ್ ಆಯಿಲ್), ಡೀಸೆಲ್ ಎಣ್ಣೆಗಳನ್ನು ಕೂಡ ಬಿಟ್ಟಿಲ್ಲ. ಹೊಟ್ಟೆಗೆ ಸೇರಿದರೆ ಇವೂ ಏಡಿಗಂತಿಕಾರಕಗಳೇ. ಹಾಗೇ ಬಂಗಾಳ, ಉತ್ತರ ಭಾರತದಲ್ಲಿ ಎಲ್ಲೆಲ್ಲೂ ಬಳಸುವ ಸಾಸಿವೆ ಎಣ್ಣೆಯೊಂದಿಗೆ ಶಿಯಲ್ಕಾಂತ (ಅರ್ಜಿಮೋನ್) ಎಣ್ಣೆ ಕೀಳ್ಬೆರೆಸುವುದುಂಟು. ಈ ಎಣ್ಣೆಯಿಂದ ಸಾಂಕ್ರಾಮಿಕವಾಗಿ ಶೋಬೆ, ಹತ್ತುಗಣ್ಣು (ಗ್ಲಾಕೋಮ), ಆಗುವುದಲ್ಲದೆ, ಏಡಿಗಂತಿಗಳಾಗುವುವೆಂದೂ ಇತ್ತೀಚೆಗೆ ಗೊತ್ತಾಗಿದೆ.
ಕೀಳ್ಬೆರಕೆಯ ಕೆಟ್ಟ ಚಾಳಿ ನಗರಗಳಲ್ಲಿ ವಿಪರೀತಕ್ಕೇರಿದ್ದರೂ ಹಳ್ಳಿಗಳೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎನಿಸುತ್ತಿದೆ. ಹಳ್ಳಿಯಿಂದ ತಂದು ಹಾಲು ಮಾರುವವರು ಕೂಡ ಯಾವ ವಿಶಿಷ್ಟ ಗುರುತ್ವದ (ಸ್ಟೆಸಿಫಿಕ್ ಗ್ರಾವಿಟಿ) ಹಾಲು ಬೇಕೆಂದು ತಿಳಿದು ಅದಕ್ಕೆ ಸರಿಯಾಗಿ ಹಾಲನ್ನು ಕೀಳ್ಬೆರಸುವರು.
ಭಾರತದಲ್ಲಿ 1954ರಲ್ಲಿ ಕಾಯಿದೆಯಾಗಿ ಬಂದ ಆಹಾರದ ಕೀಳ್ಬೆರಕೆ ತಡೆಗಟ್ಟುವ ಶಾಸನ, 1964ರಲ್ಲಿ ತಿದ್ದುಪಡಿಯಾಗಿ ಇನ್ನೂ ಕಟ್ಟುನಿಟ್ಟಿನ ಹತೋಟಿಗಳು ಕಾಯಿದೆಯಲ್ಲಿ ಸೇರಿದುವು. ಇಷ್ಟಾದರೂ ಇದು ಶಾಸನ ಕಡತಗಳಿಂದ ಇಳಿದು ಜಾರಿಗೆ ಬರುವುದರಲ್ಲಿ ತೊಡರುಗಳಿವೆ. ಆರೋಗ್ಯ ಸಂರಕ್ಷಣೆಯ ಕಾಯಿದೆಯನ್ನು ಜಾರಿಗೆ ತರುವ ಹೊಣೆ ಆಯಾ ರಾಜ್ಯ ಸರ್ಕಾರಗಳ ಮೇಲೆ ಬಿದ್ದಿರುವುದೇ ಈಗ ಕೆಲವೆಡೆಗಳಲ್ಲಿ ನಡೆಯುತ್ತಿರುವ ತಡೆಬಡೆಯಿಲ್ಲದ ಕೀಳ್ಬೆರಕೆಗೆ ಕಾರಣ. ಇದನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳ ಕೈಲಿ ಹಣಕಾಸು ಸಾಕಷ್ಟಿರದು. ಅಲ್ಲದೆ, ಈ ಕಾಯಿದೆಯನ್ನು ಜಾರಿಗೆ ತರಲು ನುರಿತ ಅಧಿಕಾರಿಗಳ ನಿರೋಧ ಸಿಬ್ಬಂದಿಯೂ ವಶಪಡಿಸಿಕೊಂಡ ಎಲ್ಲ ಬಗೆಗಳ ಆಹಾರವಸ್ತುಗಳನ್ನೂ ಸರಿಯಾಗಿ ಪರೀಕ್ಷಿಸಲು ವಿಶೇಷ ಪರಿಕರ, ಪರಿಣತರೂ ಅನುಕೊಲಗಳೂ ಇರುವ ಪರೀಕ್ಷಾ ಪ್ರಯೋಗಾಲಯಗಳೂ (ಟೆಸ್ಟಿಂಗ್ ಲ್ಯಾಬೊರೇಟರೀಸ್) ಒಂದೊಂದು ಜಿಲ್ಲೆಯಲ್ಲೂ ಇರಬೇಕು. ಇದು ಇನ್ನೂ ಸಾಧ್ಯವಾಗಿಲ್ಲ.
ಆಹಾರದ ಕೀಳ್ಬೆರಕೆ ತಡೆಗಟ್ಟುವ ಕಾಯಿದೆಯನ್ನು ಚೆನ್ನಾಗಿ ಜಾರಿಗೆ ತರಲು ಇರುವ ಅಡ್ಡಿ, ತೊಡರುಗಳನ್ನು ಕಂಡುಕೊಳ್ಳಲು, ಎರಡು ವರ್ಷಗಳ ಹಿಂದೆ ಭಾರತ ಸರ್ಕಾರ ನೇಮಿಸಿದ್ದ ಸಮಿತಿ ಕೆಲವು ಸಲಹೆಗಳನ್ನು ಮುಂದಿಟ್ಟಿದೆ. ಸಮಿತಿಯ ವರದಿಯಂತೆ, ಮುಖ್ಯವಾಗಿ ನಗರಗಳಲ್ಲಾದರೂ ಮೊಟ್ಟಮೊದಲಾಗಿ 50,000 ಜನರಿಗೆ ಒಬ್ಬರಂತೆ (ಮುಂದೆ ಇಬ್ಬರಂತೆ) ಆಹಾರ ತನಿಖಾಧಿಕಾರಿಗಳನ್ನು ನೇಮಿಸಬೇಕು. ಈಗ ಒಂದೂ ಕಾಲು ಕೋಟಿ ಜನರಿಗೆ ಒಬ್ಬನಿದ್ದಾನೆ. ಹಾಗೇ ಒಂದೊಂದು ಜಿಲ್ಲೆಗೂ ನಗರಕ್ಕೂ ಒಂದೊಂದರಂತೆ, 500 ಪರೀಕ್ಷಾ ಪ್ರಯೋಗಾಲಯಗಳು ಇರಬೇಕು. ಈಗ ಕೇವಲ 63 ಇವೆ.
ಸರ್ಕಾರದ ಕ್ರಮಗಳೊಂದಿಗೆ ಭಾರತದ ಮಾನಕ ಸಂಸ್ಥೆ (ಇಂಡಿಯನ್ ಸ್ಟಾಂಡಡ್ರ್ಸ್ ಇನ್‍ಸ್ಟಿಟ್ಯೊಟ್) ಸೂಚಿಸಿ ಒಪ್ಪುವ ಗುರುತು ಮುದ್ರೆಗಳಿರುವ ತಯಾರಿಕೆಗಳನ್ನು ಮಾತ್ರ ಕೊಳ್ಳುವುದರ ಮೂಲಕ, ಬಿಕರಿಗಿರುವ ನಕಲಿ ಮಾಲು ಎಷ್ಟೇ ಅಗ್ಗವಾದರೂ ಕೊಳ್ಳದಿದ್ದು ಜನರೂ ನೆರವಿತ್ತರೆ, ಕಾಯಿದೆಗಳನ್ನೂ ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಆಹಾರದ ಕೀಳ್ಬೆರಕೆಯನ್ನು ಬಹುಮಟ್ಟಿಗೆ ಅಣಗಿಸಬಹುದು.
(ನೋಡಿ- ಅಪಮಿಶ್ರಣ) (ನೋಡಿ- ಆರೋಗ್ಯ,-ಸುರಕ್ಷಣಾ-ಕಾಯಿದೆಗಳು) (ಡಿ.ಎಸ್.ಎಸ್.)