ಕನ್ನಡ ವರ್ಣಮಾಲೆಯ ಮೂರನೆಯ ಅಕ್ಷರವಾದ ಇ ಕಾರ ಕ್ರಿ.ಪೂ. ಮೂರನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ತ್ರಿಕೋಣಾಕಾರದ ಮೂರು ಬಿಂದುಗಳ ರೂಪದಲ್ಲಿತ್ತು. ಅನಂತರ ಕ್ರಿ.ಶ. ಎರಡನೆಯ ಶತಮಾನದ ಶಾತವಾಹನರ ಕಾಲದಲ್ಲಿ ರೂಪದಲ್ಲಿ ವಿಶೇಷ ಬದಲಾವಣೆಗಳು ಆಗದಿದ್ದರೂ ಬಿಂದುಗಳು ದೊಡ್ಡದಾದುವು. ಐದನೆಯ ಶತಮಾನದ ಕದಂಬರ ಕಾಲದಲ್ಲಿ ಒಂದು ಬಿಂದು ಮಾಯವಾಗಿ ಸೇರಿಕೊಂಡ ಎರಡು ಖಂಡ ವೃತ್ತಗಳ ಕೆಳಭಾಗದಲ್ಲಿ ಎರಡು ಬಿಂದುಗಳು ಮುಂದುವರಿದವು. ಮುಂದಿನ ಶತಮಾನದಲ್ಲಿ ಖಂಡ ವೃತ್ತಗಳು ಅಗಲವಾದವು. ಒಂಬತ್ತನೆಯ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿ ಬಲಭಾಗದ ಖಂಡವೃತ್ತ ಕೆಳಗಿನವರೆಗೂ ಹರಿದು ಅಕ್ಷರಕ್ಕೆ ಒಂದು ಹೊಸ ರೂಪವೇ ಬಂತು. ಎರಡು ಬಿಂದುಗಳು ಮಾತ್ರ ಹಾಗೆಯೆ ಮುಂದುವರಿದುವು. ಹನ್ನೊಂದನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಲಿಪಿಯಲ್ಲಿ ಈ ಎರಡು ಬಿಂದುಗಳೂ ಬಲಭಾಗದ ಖಂಡವೃತ್ತಕ್ಕೆ ಸೇರಿ ಕೆಳಭಾಗದ ತುದಿಯಲ್ಲಿ ಒಂದು ಕೊಂಡಿಯ ಆಕಾರವನ್ನು ಹೊಂದಿದುವು. ಹದಿಮೂರನೆಯ ಶತಮಾನದ ಸಮಯಕ್ಕೆ ಅಕ್ಷರದ ಆಕಾರ ಸ್ಥಿರಗೊಂಡಿತು. ಬಲಭಾಗದ ಕೊಂಡಿಯತುದಿ ಕೆಳಕ್ಕೆ ಬಾಗಿತು. ಅನಂತರ ವಿಶೇಷ ಬದಲಾವಣೆಗಳಿಲ್ಲದೇ ಇದೇ ರೂಪ ಮುಂದುವರಿದಿದೆ.
ಈ ಅಕ್ಷರ ಪೂರ್ವ-ಸಂವೃತ ಅಗೋಳ ಹ್ರಸ್ವಸ್ವರವನ್ನು ಸೂಚಿಸುತ್ತದೆ.
(ಎ.ವಿ.ಎನ್.)