ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಯೋಜೋ಼ನ್ ಕೆನಡೆನ್ಸಿಸ್

ಇಯೋಜೋನ್ ಕೆನಡೆನ್ಸಿಸ್

ಕೆನಡದಲ್ಲಿ ನಿಕ್ಷೇಪಗೊಂಡ ಪೂರ್ವ ಕೇಂಬ್ರಿಯನ್ ಕಲ್ಪದ (600 ದಶಲಕ್ಷ ವರ್ಷಗಳಿಂದಲೂ ಹಿಂದಿನ ಕಾಲ) ಕೆಲವು ಸುಣ್ಣ ಕಲ್ಲುಗಳಲ್ಲಿ ಏಕಕೇಂದ್ರಿಯವಾಗಿ ವಿನ್ಯಾಸಗೊಂಡಿದ್ದ ಪಟ್ಟಿಗಳನ್ನು ಇ. ಕೆನಡೆನ್ಸಿಸ್ ಎಂಬ ಜೀವಿಗಳ ಅವಶೇಷಗಳೆಂದು ಕರೆದರು. ಪೂರ್ವ ಕೇಂಬ್ರಿಯನ್ ಶಿಲಾಸ್ತೋಮಗಳು ಸಂಪೂರ್ಣವಾಗಿ ಜೀವಾವಶೇಷರಹಿತ ಶಿಲೆಗಳು. ಆದರೂ ಆ ಕಾಲದಲ್ಲಿ ಜೀವಿಗಳು ಇದ್ದಿರಬಹುದೆಂಬ ಅನುಮಾನವನ್ನು ಹುಟ್ಟಿಸುವ ಹಲವು ಕುರುಹುಗಳು ದೊರಿತುದರಿಂದ ಕೆಲವು ಭೂ ವಿಜ್ಞಾನಿಗಳು ಆ ದಿಶೆಯಲ್ಲಿ ತೀವ್ರ ಪ್ರಯತ್ನ ಮಾಡಿದರು. ಸರ್ ವಿಲಿಯಂ ಲೋಗನ್ ಕೆನಡದ ಲಾರೆನ್ಸಿಯನ್ ನೈಸ್ ಶಿಲೆಯಲ್ಲಿ ಒಂದು ಕುತೂಹಲಕರವಾದ ಖನಿಜಶೇಖರಣೆಯನ್ನು ವರದಿ ಮಾಡಿದ (1858). ಅದರಲ್ಲಿ ಕ್ಯಾಲ್ಸೈಟ್ ಮತ್ತು ಸರ್ಪೆಂಟೈನ್ ಖನಿಜಗಳು ಒಂದಾದ ಮೇಲೆ ಒಂದರಂತೆ ಅನೇಕ ಪಟ್ಟಿಗಳಾಗಿ ನಿಕ್ಷೇಪಗೊಂಡಿವೆ. ಸರ್ಪೆಂಟೈನ್ ಡೊಂಕುಪಟ್ಟಿಗಳಾಗಿಯೂ ಕ್ಯಾಲ್ಸೈಟ್ ಪ್ರಧಾನವಾಗಿ ಗೂಡುಗಳನ್ನು ತುಂಬಿದಂತೆಯೂ (ಕ್ಯಾವಿಟಿ ಫಿಲ್ಲಿಂಗ್) ಇವೆ. ಇಂಥ ರಚನೆ ಖನಿಜಗಳಲ್ಲಿ ಇರುವುದು ಬಲು ವಿರಳ. ಆದ್ದರಿಂದ ಇದಕ್ಕೆ ಜೀವಸಂಬಂಧವಿರಬೇಕೆಂಬ ನಿರ್ಧಾರಕ್ಕೆ ಆತ ಬಂದುದೇ ಅಲ್ಲದೆ ಇಯೋಜೋನ್ ಕೆನಡೆನ್ಸಿಸ್ ಎಂಬ ಹೆಸರನ್ನೂ ಆ ಜೀವಿಗೆ ನೀಡಿದ. ಕಾರ್ಪೆಂಟರ್ ಎಂಬಾತ ಈ ಜೀವಿಯನ್ನು ಕುರಿತು ಹೆಚ್ಚು ವಿವರಗಳನ್ನು ವರದಿ ಮಾಡಿದ್ದಾನೆ. ಆದರೆ ಕಿಂಗ್ ಮತ್ತು ಗೆಲವೇಯದ ರೊಮ್ನೆ ಇವರು ಇಯೋಜೋನ್ ಕೆನಡೆನ್ಸಿಸ್ನಲ್ಲಿರುವ ಪಟ್ಟಿಗಳು ಸರ್ಪೆಂಟೈನ್ ಖನಿಜದ ಸುಣ್ಣ ದ್ರಾವಣ ತೇಯುವ ಕಾರ್ಯಗತಿಯಿಂದ (ವೇಸ್ಟಿಂಗ್ ಆಕ್ಷನ್) ಆದವುಗಳೆಂದೂ ಅವುಗಳ ಕ್ರಮ ಖನಿಜದ ಸೀಳುಗಳ ಪ್ರಭಾವದಿಂದ ಉಂಟಾದವುಗಳೆಂದೂ ಹೇಳಿದ್ದಾರೆ. ಆದ್ದರಿಂದ ಇಲ್ಲಿ ಜೀವಿ ಇದ್ದಿರಬಹುದೇ ಎಂಬ ಸಂದೇಹ ಆಧಾರ ರಹಿತವೆಂದು ಅವರ ಅಭಿಪ್ರಾಯ. ಮೊದಲೇ ಇದ್ದ ಗೂಡುಗಳಲ್ಲಿ ಕ್ಯಾಲ್ಸೈಟ್ ಮತ್ತು ಸರ್ಪೆಂಟೈನ್ ಖನಿಜ ದ್ರಾವಣಗಳು ಒಳಹರಿದು ನಿಕ್ಷೇಪಗೊಳ್ಳುವಿಕೆಯಿಂದ ಈ ಪಟ್ಟಿಗಳು ಆಗಿವೆಯೆಂದು ಕೀಲ್‍ನ ಪ್ರೊಫೆಸರ್ ಮೋಬಿಯಸ್ ಹೇಳಿದ್ದಾನೆ. ಇಯೋಜೋನ್ ಕೆನಡೆನ್ಸಿಸ್ ರೀತಿಯ ವಿನ್ಯಾಸ ಖನಿಜಪ್ರಪಂಚದಲ್ಲಿ ಎಲ್ಲೂ ಕಂಡು ಬಂದಿಲ್ಲದಿರುವುದೇನೋ ನಿಜ. ಆದರೆ ಅಂಥ ಜೀವಿಯೊಂದು ಇದ್ದಿದ್ದರೆ ಅದರ ಪಳೆಯುಳಿಕೆ ಅಷ್ಟು ಕಲಕಿ ರೂಪಾಂತರಗೊಂಡಿರುವ ಶಿಲೆಗಳಲ್ಲಿ ಉಳಿದಿರುವ ಅವಕಾಶವಂತೂ ತೀರ ಅಸಂಭಾವ್ಯ. ಆದ್ದರಿಂದ ಇಂಥ ಸಂದರ್ಭಗಳಲ್ಲಿ ನಿಖರವಾಗಿ ಜೀವಸಂಬಂಧದ್ದೇ ಎಂದು ತೋರುವ ವಸ್ತುವನ್ನಲ್ಲದೆ ಬೇರಾವುದನ್ನೂ ಜೀವ್ಯಾವಶೇಷ ಎಂದು ಅಂಗೀಕರಿಸುವುದು ಸಾಧುವಲ್ಲ. ಪೂರ್ವ ಕೇಂಬ್ರಿಯನ್ ಕಲ್ಪದಲ್ಲಿ ತೀರ ಸರಳ ಜೀವಿಗಳು ಮಾತ್ರವಿದ್ದವು. ಈ ಕಾರಣದಿಂದಲೂ ಇಯೋಜೋನ್ ಕೆನಡೆನ್ಸಿಸ್ ಜೀವ್ಯಾವಶೇಷವಲ್ಲ ಎಂದು ತರ್ಕಿಸಬಹುದು.

(ಡಿ.ಆರ್.)