ಉದಯಾದಿತ್ಯ : 1125. ಪ್ರಾಚೀನ ಕನ್ನಡ ಅಲಂಕಾರಶಾಸ್ತ್ರ ಗ್ರಂಥಗಳಲ್ಲಿ ನೃಪತುಂಗನ ದೆಂದು ಪ್ರತೀತಿಯಿರುವ ಕವಿರಾಜಮಾರ್ಗವನ್ನೂ (ಸು. 850), 2ನೆಯ ನಾಗವರ್ಮನ ಕಾವ್ಯಾವಲೋಕನವನ್ನೂ (ಸು. 1150) ಬಿಟ್ಟರೆ, ಅಷ್ಟೇ ಪ್ರಾಚೀನವಾದ ಇನ್ನೊಂದು ಅಲಂಕಾರಗ್ರಂಥವಾದ ಉದಯಾದಿತ್ಯಾಲಂಕಾರದ ಕರ್ತೃ. ಇದು ಕೇವಲ 72 ಪದ್ಯಗಳ ಒಂದು ಸಣ್ಣ ಗ್ರಂಥ. ಇದರಲ್ಲಿ ವೃತ್ತಗಳು 7; ಉಳಿದವು ಕಂದಪದ್ಯಗಳು. (ದೊರೆತಿರುವ ಎರಡು ಹಸ್ತಪ್ರತಿಗಳ ಪೈಕಿ ಒಂದರಲ್ಲಿ ನಾಲ್ಕು ಹೆಚ್ಚಿನ ಲಕ್ಷ್ಯಗಳು-ಕಂದ ಪದ್ಯಗಳು-ಇವೆಯಾದರೂ ಇವು ಪ್ರಕ್ಷಿಪ್ತಗಳಿರಬಹುದು). ಗ್ರಂಥದಲ್ಲಿ ವಸುಧಾನಾಥನ ಸೋಮನಾಥನ ಸುತಂ ಚೋಳೋದಯಾದಿತ್ಯಂ, ಸೋಮನಾಥಮಹೀಭೃನ್ನಂದನಂ ಎಂದು ಹೇಳಿಕೊಂಡಿರು ವುದರಿಂದ ಈತ ಸೋಮನಾಥನೆಂಬ ಚೋಳರಾಜನ ಮಗನೆಂದು ತಿಳಿಯುತ್ತದೆ-ಎಂಬುದಾಗಿ ಕವಿಚರಿತ್ರಕಾರ ಆರ್. ನರಸಿಂಹಾಚಾರ್ಯರು ಊಹಿಸಿದ್ದಾರೆ. ಉದಯನೃಪ, ಉದಯನೃಪೇಶ್ವರಂ, ಉದೆಗಧಾತ್ರೀರಮಣಂ, ತನ್ನ ಸಿಂಹಾಸನಕ್ಕುದ ಯಾದ್ರೀಂದ್ರಕೆ ಬರ್ಪ ಪೆರ್ಮೆ ಮೆಱೆವನ್ನಂ, ಭೂಮಂಡಲಾಧೀಶನಪ್ಪುದಯಾದಿತ್ಯಂ-ಎಂಬೀ ಮಾತುಗಳಿಂದ ಉದಯಾದಿತ್ಯ ಸಿಂಹಾಸನಸ್ಥನಾದ ರಾಜನಾಗಿದ್ದನೆಂದು ವ್ಯಕ್ತಪಡುತ್ತದೆ. ಇವನಾಗಲಿ ಇವನ ತಂದೆಯಾದ ಸೋಮನಾಥನಾಗಲಿ ಯಾವ ದೇಶದ ರಾಜರು ಎಂಬುದಕ್ಕೆ ಚಾರಿತ್ರಿಕ ಆಧಾರ ಯಾವುದೂ ದೊರೆತಿಲ್ಲ. ಚೋಳ ಎಂಬ ಪದಪ್ರಯೋಗದಿಂದ, ಉದಯಾದಿತ್ಯ ಚೋಳರಾಜವಂಶಕ್ಕೆ ಸೇರಿದವನಿರಬಹುದೆಂಬ ಕವಿಚರಿತ್ರಕಾರರ ಊಹೆ ನಿಲ್ಲುವಂತೆ ಕಾಣದು. ಚೋಳರು ತಮಿಳುನಾಡಿನ ಅರಸರು. ಚೋಳವಂಶದವನೊಬ್ಬ ಕನ್ನಡ ಅಲಂಕಾರಗ್ರಂಥವನ್ನು ಬರೆದನೆಂಬುದನ್ನು ನಂಬುವುದು ಕಷ್ಟ. ಉದಯಾದಿತ್ಯನ ಒಂದು ಪದ್ಯ ಮಲ್ಲಿಕಾರ್ಜುನನ (ಸು. 1240) ಸೂಕ್ತಿಸುಧಾರ್ಣವದಲ್ಲಿ ಉದಾಹೃತವಾಗಿರುವುದರಿಂದ ಉದಯಾದಿತ್ಯ ಆ ಕಾಲಕ್ಕಿಂತ ಹಿಂದಿನವನೆಂಬುದು ಸ್ಪಷ್ಟ. ನಾಗವರ್ಮನಂತೆ ಉದಯಾದಿತ್ಯನೂ ಸಂಸ್ಕೃತ ಆಲಂಕಾರಿಕರಾದ ವಾಮನ, ರುದ್ರಟರನ್ನು ಅನುಸರಿಸಿ ವೈದರ್ಭ ಪಾಂಚಾಲ ಗೌಡ ಎಂಬ ರೀತಿತ್ರಯಗಳನ್ನು ಹೇಳಿರುವುದರಿಂದ ಈತ ಅವರಿಗಿಂತ, ಎಂದರೆ 9ನೆಯ ಶತಮಾನಕ್ಕೆ, ಈಚಿನವನೆಂದಾಗುತ್ತದೆ. ಉದಯಾದಿತ್ಯ ಯಾವ ಕನ್ನಡ ಕವಿಯನ್ನೂ ಸ್ಮರಿಸಿಲ್ಲದಿರುವುದು ಸೋಜಿಗದ ಸಂಗತಿ. ಸಂಸ್ಕೃತ ಕವಿಗಳಾದ ಮುಂಜ, ಭೋಜ, ಶ್ರೀಹರ್ಷರನ್ನು ಸ್ಮರಿಸಿದ್ದಾನೆ. ಇವರಲ್ಲಿ ಭೋಜ ಸುಮಾರು 997ರಿಂದ 1053ರವರೆಗೆ ಇದ್ದವ. ಆದ್ದರಿಂದ ಉದಯಾದಿತ್ಯ ಈ ಕಾಲಕ್ಕೂ ಈಚಿನವನಾಗುತ್ತಾನೆ. ಚೋಳರ ಪ್ರಾಬಲ್ಯ ಕನ್ನಡನಾಡಿನಲ್ಲಿ 12ನೆಯ ಶತಮಾನಕ್ಕೆ ಹಿಂದೆಯೇ ಕುಗ್ಗಿತ್ತು. ಆದ್ದರಿಂದ ಈತ ಸ್ವತಂತ್ರ್ಯ ರಾಜನಾಗಿರದೆ ಯಾವುದೋ ದೊರೆಯ ಸಾಮಂತನಾಗಿದ್ದಿರಬಹುದೆಂದೂ ಇವನ ಕಾಲ ಸು. 1150 ಇದ್ದಿರಬಹುದೆಂದೂ ಕವಿ ಚರಿತ್ರಕಾರರು ಊಹಿಸಿದ್ದಾರೆ. ದಕ್ಷಿಣ ಕರ್ನಾಟಕವನ್ನು ಆಕ್ರಮಿಸಿಕೊಂಡಿದ್ದ ಚೋಳರನ್ನು ಹೊಡೆದಟ್ಟುವುದರಲ್ಲಿ ಹೊಯ್ಸಳರಾಜ ವಿಷ್ಣುವರ್ಧನನಿಗೆ ಅವನ ತಮ್ಮ ಉದಯಾದಿತ್ಯ ಬಹಳ ನೆರವಾಗಿದ್ದನೆಂದು ಚರಿತ್ರೆಯಿಂದ ತಿಳಿಯುತ್ತದೆ. ವಿಷ್ಣುವರ್ಧನನ ಕಾಲ ಸು. 1110-50. ಆದ್ದರಿಂದ ಚೋಳರನ್ನು ಗೆದ್ದ ಉದಯಾದಿತ್ಯ ಅವರಿಂದ ಪಡೆದುಕೊಂಡ ರಾಜ್ಯಭಾಗಕ್ಕೆ ಅಧಿಪತಿಯೆನಿಸಿ, ಚೋಳೋದಯಾದಿತ್ಯ ಎಂಬ ಬಿರುದನ್ನು ಪಡೆದಿದ್ದರೆ ಆಶ್ಚರ್ಯವಿಲ್ಲ. ಹೀಗಿರುವುದರಿಂದ, ಈ ಚಾರಿತ್ರಿಕ ವ್ಯಕ್ತಿ ಉದಯಾದಿತ್ಯನೂ ಆಲಂಕಾರಿಕ ಉದಯಾದಿತ್ಯನೂ ಒಬ್ಬನೇ ಆಗಿರಬಹುದೇ ಎಂಬ ಊಹೆಗೆ ಅವಕಾಶವಿದೆ. ಕಾಕತೀಯ ರುದ್ರದೇವ (1150-95) ಮತ್ತು ಅವನ ತಂದೆ ಎರಡನೆಯ ಪ್ರೋಲ (1117-50)-ಇವರ ಕಾಲದಲ್ಲಿನ ಶಾಸನಗಳ ಆಧಾರದಿಂದ ತೆಲುಗು ಚೋಡ(ಳ) ವಂಶಕ್ಕೆ ಸೇರಿದ ಉದಯಾದಿತ್ಯನೆಂಬ ಒಬ್ಬ ಕಾಕತೀಯರ ಸಾಮಂತ ದೊರೆ ಇದ್ದುದಾಗಿ ತಿಳಿದುಬರುತ್ತದೆ. ಅಲಂಕಾರ ಗ್ರಂಥದ ಚೋಳೋದಯಾದಿತ್ಯ ಶಾಸನಗಳ ಈ ಚೋಡೋದಯನಾಗಿದ್ದಿರಬಹುದೆಂದು ಊಹಿಸುವುದು ಹೆಚ್ಚು ಸಂಭವನೀಯ ವಾಗಿ ಕಂಡುಬರುತ್ತದೆ. ಅಲ್ಲದೆ, ಗ್ರಂಥಸ್ಥ ಆಧಾರಗಳಿಂದ ಉದಯಾದಿತ್ಯಾಲಂಕಾರದ ಕರ್ತೃ ಉದಯಾದಿತ್ಯನಾಗಿರದೆ ಆಸ್ಥಾನ ಕವಿಯೊಬ್ಬ ಆತನ ಅಂಕಿತದಲ್ಲಿ ಗ್ರಂಥರಚನೆ ಮಾಡಿರಬಹುದೆಂಬ ಊಹೆಗೂ ಅವಕಾಶವಿದೆ. ಅಂತೂ ಉದಯಾದಿತ್ಯನ ಕಾಲ ಸು. 1125 ಎಂದೂ ಉದಯಾದಿತ್ಯಾಲಂಕಾರ ಕಾವ್ಯಾವಲೋಕನಕ್ಕಿಂತ ಸ್ವಲ್ಪ ಮುಂಚೆಯೇ ರಚಿತವಾಗಿದ್ದಿರಬಹುದೆಂದೂ ತಿಳಿಯಬಹುದು. ಗ್ರಂಥದಲ್ಲಿ ಉದಯಾದಿತ್ಯನಿಗೆ ಅನ್ವಿತವಾಗಿರುವ ಕವಿರತ್ನಶೇಖರ, ಸಾಹಿತ್ಯವಿದ್ಯಾಧರ, ರಾಜಸುಕವಿರತ್ನಾಭರಣ, ಕವಿರಾಜಶೇಖರ, ಸಾಹಿತ್ಯರತ್ನಾಕರ ಎಂಬ ಹೆಸರುಗಳು ಆತ್ಮಪ್ರಶಂಸೆಯ ವಿಶೇಷಣಗಳೋ ಬಿರುದುಗಳೋ ಹೇಳುವುದು ಕಷ್ಟ.
ಸಾಳ್ವ ತನ್ನ ರಸರತ್ನಾಕರದಲ್ಲಿ ವಿರುದ್ಧ ರಸಗಳನ್ನು ಹೇಳುವ ಸಂದರ್ಭದಲ್ಲಿ ಇದು ದಯಾದಿತ್ಯಮತಂ ಎಂದು ಉದಯಾದಿತ್ಯನ ಹೆಸರನ್ನು ಹೇಳಿದ್ದಾನೆ. ಆದರೆ, ಉದಯಾದಿತ್ಯಾಲಂಕಾರದಲ್ಲಿ ವಿರುದ್ಧರಸಗಳ ಪ್ರಸಕ್ತಿಯೇ ಇಲ್ಲ. ಇದರಿಂದಾಗಿ ಉದಯಾದಿತ್ಯ ರಸವಿಷಯಕವಾದ ಗ್ರಂಥವೊಂದನ್ನು ಬರೆದಿದ್ದಿರಬಹುದೇ ಎಂಬ ಊಹೆಗೆ ಅವಕಾಶವಿದೆ. ಆದರೆ ಸಾಳ್ವ ಅನುಸರಿಸಿರುವ ಪದ್ಯ ಕವಿಕಾಮನ ಶೃಂಗಾರರತ್ನಾಕರದಲ್ಲೂ ಇರುವುದರಿಂದ, ಈ ವಿಚಾರದಲ್ಲಿ ಇದಮಿತ್ಥಂ ಎಂದು ಹೇಳಲಾಗದು. ಕಾವ್ಯಭೇದಗಳು, ರೀತಿಭೇದಗಳು, ನವರಸಗಳು ಮತ್ತು ರೀತಿಗಳಿಗೆ ಉಚಿತವಾದ ರಸಗಳು, ಮಹಾಕಾವ್ಯ, ಅದರ ಹದಿನೆಂಟು ಅಂಗಗಳು, ಕಾವ್ಯಗುಣಗಳು, ಜಾತಿ ಉಪಮಾನ ರೂಪಕ ಮುಂತಾದ 35 ಅರ್ಥಾಲಂಕಾರ ಗಳು, ಯಮಕ, ಪ್ರಹೇಳಿಕೆ-ಇವು ಗ್ರಂಥದಲ್ಲಿ ಪ್ರತಿಪಾದ್ಯವಾದ ಕಾವ್ಯಶಾಸ್ತ್ರವಿಚಾರಗಳು. ಗ್ರಂಥ ಬಹುಮಟ್ಟಿಗೆ ದಂಡಿಯ ಕಾವ್ಯಾದರ್ಶವನ್ನು ಅನುಸರಿಸಿದೆ. ಕವಿರಾಜಮಾರ್ಗದಲ್ಲಿ ಹೇಳಿರುವ ಚತ್ತಾಣ ಮತ್ತು ಬೆದಂಡೆ (ವೈದಂಡಕ) ಎಂಬ ಕಾವ್ಯಭೇದಗಳನ್ನು ಉದಯಾದಿತ್ಯನೂ ಹೆಸರಿಸಿರುವುದು ಗಮನಾರ್ಹ. ಅಂತೆಯೇ ಮೊತ್ತಮೊದಲಿಗೆ ಇವನ ಗ್ರಂಥದಲ್ಲಿ ಚಂಪುಕಾವ್ಯ ಪ್ರಕಾರದ ನಾಮನಿರ್ದೇ ಶವಿರುವುದೂ ಗಮನಾರ್ಹ. ಕವಿರಾಜಮಾರ್ಗ ಕಾವ್ಯಾವಲೋಕನ ಗಳಲ್ಲಿ ಕಂಡುಬರುವ ವಿಸ್ತಾರವಾದ ವಿಷಯ ವಿವೇಚನೆಯಾಗಲಿಪ್ರಯೋಗ ಬಾಹುಳ್ಯವಾಗಲಿ ಈ ಗ್ರಂಥದಲ್ಲಿ ಇಲ್ಲ; ಹೊಸ ವಿಚಾರಗಳೂ ಇಲ್ಲ; ಆದ್ದರಿಂದ ಅವುಗಳಂತೆ ಇದು ಪ್ರಮಾಣ ಗ್ರಂಥವೆನಿಸದು. ಕಾವ್ಯಾವಲೋಕನಕ್ಕಿಂತ ಇದು ಹಿಂದಿನದು ಎಂದಾದರೆ ಕನ್ನಡ ಕಾವ್ಯ ಲಕ್ಷಣಗ್ರಂಥಗಳ ಸಾಲಿನಲ್ಲಿ ಇದಕ್ಕೊಂದು ಐತಿಹಾಸಿಕ ಪ್ರಾಮುಖ್ಯ ಸಲ್ಲುತ್ತದೆ. ಒಂದೊಂದೇ ಕಂದಪದ್ಯದಲ್ಲಿ ಅಡಕವಾದ ಅಂದವಾದ ಸರಳಶೈಲಿಯಲ್ಲಿ ಲಕ್ಷ್ಯಲಕ್ಷಣ ಸಮನ್ವಯಪೂರ್ವಕ ವಾಗಿ ಅಲಂಕಾರಗಳನ್ನು ನಿರೂಪಿಸಿರುವ ಬಗೆ ಮೆಚ್ಚತಕ್ಕದ್ದು. ಕೆಲವು ಲಕ್ಷ್ಯಪದ್ಯಗಳಲ್ಲಿ ಕವಿ ತನ್ನ ರೂಪ, ಪರಾಕ್ರಮ, ದಾನಪರತೆ ಮುಂತಾದ ಗುಣಗಳನ್ನೇ ಹೊಗಳಿಕೊಂಡಿದ್ದಾನೆ. (ಉದಾ: ರಸವದಲಂಕಾರಃ ಆವರಸವಾದೊಡಂ ನಿಜಭಾವದಿನೆಸೆವಂತು ಪೇಱೇರಸವತ್ವಂ; ನೋಡಾವಗಮುದೆಗನ ರೂಪಂ ಭಾವಿಸುವೊಡೆ, ಕೆಳದಿ, ತನ್ಮಯಂ ಜಗಮೆಲ್ಲಂ). ಅಲಂಕಾರಶಾಸ್ತ್ರವನ್ನು ಬಹು ಸಂಕ್ಷೇಪವಾಗಿ, ತಕ್ಕಮಟ್ಟಿಗೆ ಸುಲಭವಾಗಿ, ತಿಳಿಸಿಕೊಡುವ ಗ್ರಂಥವಿದಾದ್ದರಿಂದ, ಪ್ರಾರಂಭಿಕ ಅಲಂಕಾರ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗ ಬಹುದಾದ ಗ್ರಂಥ. (ಎಂ.ವಿ.ಎಸ್.)