ಉಪವಾಸ: ಊಟ ಮಾಡದಿರುವುದು. ಇದಕ್ಕೆ ಆಹಾರದ ಅಭಾವ ಒಂದು ಕಾರಣವಿರಬಹುದು. ಆಹಾರ ಸಿಕ್ಕದಿದ್ದಾಗ ಉಪವಾಸ ಕಡ್ಡಾಯ. ಅಭಾವ ಪರಿಸ್ಥಿತಿ ಎಲ್ಲ ಕಾಲಗಳಲ್ಲೂ ಉಂಟು, ಇಂಥ ಪರಿಸ್ಥಿತಿಯಲ್ಲಿ ಜನ ಒಂದೆರಡು ದಿವಸಗಳ ಪರ್ಯಂತ ಅಥವಾ ಒಪ್ಪತ್ತು ಉಪವಾಸ ಮಾಡಬೇಕಾಗುತ್ತದೆ. ಅಭಾವ ಪರಿಸ್ಥಿತಿಯಲ್ಲಿ ಅಲ್ಲದೆ ಆಹಾರ ಯಥೇಚ್ಚವಾಗಿ ಲಭಿಸಿದ ಕಾಲದಲ್ಲೂ ಅತಿಯಾಗಿ ಉಂಡವ ಲಂಘನವನ್ನು ಔಷಧವಾಗಿ ಉಪಯೋಗಿಸಬೇಕಾಗುತ್ತದೆ. ಆರೋಗ್ಯಶಾಸ್ತ್ರ ರೀತ್ಯ ಉಪವಾಸ ಉತ್ತಮವಾದ ಶುದ್ಧೀಕರಣವಿಧಿ, ಅನೇಕ ರೋಗಗಳಲ್ಲಿ ಉತ್ತಮ ಚಿಕಿತ್ಸಾ ವಿಧಾನ, ವಾರಕ್ಕೊಮ್ಮೆ ಪೂರ್ಣ ಉಪವಾಸವನ್ನು ಆಚರಿಸುವುದರಿಂದ ಅಥವಾ ಫಲಾಹಾರವಿಧಿಯನ್ನು ಪಾಲಿಸುವುದರಿಂದ ಶರೀರ ಬಾಧೆಗಳು ದೂರವಾಗುತ್ತವೆ. ಜೀರ್ಣಶಕ್ತಿ ಕುದುರುತ್ತದೆ. ಇದರಂತೆ ನೆಗಡಿ ಕೆಮ್ಮಲಿನಂಥ ರೋಗಗಳು ನಿವಾರಣೆಯಾಗುತ್ತವೆ. ಆ ಹೊತ್ತಿನಲ್ಲಿ ಮೈಯಲ್ಲಿನ ಸ್ನಾಯುಗಳು, ಈಲಿಯಲ್ಲಿರುವ ಆಹಾರ ವಸ್ತು, ಊತಕಗಳಲ್ಲಿ ಹೆಚ್ಚಾಗಿ ಸೇರಿಕೊಂಡಿರುವ ಕೊಬ್ಬು ಬಳಕೆಯಾಗಿ ಕರಗುವುದು. ಸ್ನಾಯುಗಳು, ಈಲಿಯಲ್ಲಿರುವ ಮಿಗದಿಟ್ಟಿನ (ಗೈಕೊಜನ್) ತೆರನ ಸಕ್ಕರೆಜನಿಕ ಪದಾರ್ಥಗಳೇ ಮೊದಲು ಕರಗುತ್ತವೆ, ಆಮೇಲೆ ಕೊಬ್ಬು. ಉಪವಾಸ ಅಲ್ಲಿಗೂ ನಿಲ್ಲದೆ ಮುಂದುವರಿದರೆ, ಮೈಯ ಸ್ನಾಯುತೆರನ ಪ್ರೋಟೀನುಗಳೂ ಬಳಕೆ ಆಗುತ್ತವೆ. ಸಿಹಿಮೂತ್ರ ರೋಗಿಸೊರಗುವುದು ಇದೇ ಕಾರಣದಿಂದ, ಹೀಗಾಗಲು ಬಿಟ್ಟರೆ, ವ್ಯಾಪಾರಕ್ಕಿಳಿದವ ಅಸಲನ್ನೇ ನುಂಗುತ್ತ ಹೋದ ಹಾಗಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳ ಬೇಕು, ಬೆಳೆಯುತ್ತಿರುವ ಮಕ್ಕಳು, ಸಿಹಿಮೂತ್ರವೇ ಮೊದಲಾದ ರೋಗವಿರುವವರು, ಬಸುರಿಯರು, ಹಾಲೂಣಿಸುತ್ತಿರುವ ತಾಯಂದಿರಿಗೆ ಉಪವಾಸ ತರವಲ್ಲ.

ಅಜೀರ್ಣತೆ, ಕರುಳಿನ ಬೇರೂರಿದ ವಿಷವೇರಿಕೆ, ವಿಶೇಷ ಸಮಾರಂಭಗಳಲ್ಲಿ ತಿಂದು ಕಟ್ಟರೆ ಆಗಿರುವಿಕೆ, ಬೊಜ್ಜು, ಮತ್ತಿತರ ಜೀವವಸ್ತುಕರಣದ ತಾರುಮಾರುಗಳಲ್ಲಿ ಈ ಚಿಕಿತ್ಸಾವಿಧಾನ ಬಲುಒಳ್ಳೆಯದು. ಉಪವಾಸ ಮಾಡುತ್ತಿರುವಾಗ ಎಳನೀರು, ಬರೀ ನೀರು, ಹಣ್ಣಿನ ರಸಗಳನ್ನು ಚೆನ್ನಾಗಿ ಕುಡಿಯುತ್ತಿರಬಹುದು. ತಕ್ಕಾಳಿ (ಟೊಮ್ಯಾಟೊ) ರಸ, ತಿಳಿ ಚಹ, ತೀರ ತಿಳಿಯಾದ ಕಟ್ಟು, ತಿಳಿಸಾರು ಸಲ್ಲುತ್ತವೆ. ಕಾರ, ಸಿಹಿ ಪಾನಕಗಳು ಇರಬಾರದು ಅಷ್ಟೆ. ವೈದ್ಯನ ಉಸ್ತುವಾರಿ ಇಲ್ಲದೆ ನಾಲ್ಕೈದುದಿನಗಳು ಮೀರಿ, ಯಾರಾದರೂ ಸರಿಯೇ, ಉಪವಾಸವನ್ನು ಮುಂದುವರಿಸಬಾರದು, ಅದರಿಂದ ಎರಡನೆಯ ದಿನವೇ ಮೊದಲಾಗುವ ಹಾನಿಕರ ರಕ್ತಾಮ್ಲತೆ ಮತ್ತಷ್ಟು ಏರುತ್ತದೆ. ದಿನವೂ ಮಲ ಮೂತ್ರಗಳು ಚೆನ್ನಾಗಿ ಆಗುವಂತೆ ನೋಡಿಕೊಳ್ಳಬೇಕು. ಅಂಗಸಾಧೆಯನ್ನು ಕೊಂಚ ಕೊಂಚ, ಕೈಲಾಗುವಷ್ಟು ಮಾಡುತ್ತಿರಬಹುದು. ಮೊದಲ ದಿನ ಮಾತ್ರ ಹಸಿವು ಕಾಣಿಸುವುದು ಆಮೇಲಿರದು.

ನೀರು ಬೆರೆಸಿದ ಹಾಲಿಂದಲೋ ಇಡ್ಲಿ, ನಾನ್ ರೊಟ್ಟಿ ಮತ್ತು ಬೆಣ್ಣೆಯಿಂದಲೋ ಉಪವಾಸವನ್ನು ಮುರಿಯಬಹುದು. ಬರಬರುತ್ತ್ತ ಪ್ರಮಾಣವನ್ನೂ ಬಗೆಗಳನ್ನÆ ಕೆಲವು ದಿನಗಳಲ್ಲಿ ಹೆಚ್ಚಿಸುತ್ತ ಹೋಗಬೇಕು. ಉಪವಾಸ ಮುಗಿಯಲು ಕಾದಿದ್ದು ಕೂಡಲೇ ಎಂದಿನಂತೆ ಹೊಟ್ಟೆ ತುಂಬ ತುಂಬಿಸಿಕೊಳ್ಳುವುದು ಹಾನಿಕರ. ಸಾಮಾನ್ಯವಾಗಿ ಹೊಟ್ಟೆ ಬೆಳೆಯುತ್ತ ಬೊಜ್ಜಿನ ಸೂಚನೆ ಕಂಡಾಗಲೂ ದಿನವೂ ಅಡ್ಡಾಡಲು ಪುರಸೊತ್ತು ಇಲ್ಲದಾಗಲೂ ಆಗಾಗ್ಗೆ ಏಕಾದಶಿಯಾದರೆ ಮನಸ್ಸಿಗೂ ಸಮಾಧಾನ. ದಿನವೆಲ್ಲ ಉಪವಾಸ ಮಾಡುವುದು ಆರೋಗ್ಯಕರ, ಉಲ್ಲಾಸಕರ, ಮೈ ಹಗುರವಾಗಿ ಲವಲವಿಕೆಯಾಗಿರುತ್ತದೆ. ಪುರ್ತಿಉಪವಾಸ ಮಾಡಿದರೆ ದಿನಕ್ಕೆ ಸರಾಸರಿ ಒಂದು ಕಿಲೋಗ್ರಾಂ ಮೈತೂಕವಾದರೂ ಕಳೆವುದು. (ಡಿ.ಎಸ್.ಎಸ್.) ಇಲ್ಲಿ ಪ್ರಸಕ್ತವಾದದ್ದು ಆಚಾರವಾಗಿ ಅನುಸರಿಸುವ ಉಪವಾಸ.

ಉಪವಾಸ ತುಂಬ ಪ್ರಾಚೀನವಾದ ಆಚಾರ. ಇದು ಕಾಡು ಜನರಲ್ಲೂ ಉಂಟು, ಊರು ಜನರಲ್ಲೂ ಉಂಟು. ಬ್ಯಾಬಿಲೋನಿಯ, ಈಜಿಪ್ಟ್‌, ಪರ್ಷಿಯ, ಭಾರತ, ಚೀನ ಮುಂತಾದ ಎಲ್ಲ ನಾಗರಿಕ ಜನಾಂಗದವರೂ ಒಂದಲ್ಲ ಒಂದು ರೀತಿಯಲ್ಲಿ ಉಪವಾಸವನ್ನು ತಮ್ಮ ಮತಾಚಾರವಾಗಿ ಅನುಸರಿಸುತ್ತಾರೆ. ಹಿಂದೂ, ಬೌದ್ಧ, ಜೈನ, ಯಹೂದಿ, ಕ್ರೈಸ್ತ ಮತ್ತು ಇಸ್ಲಾಂ ಧರ್ಮದವರು ಉಪವಾಸವನ್ನು ಆಚರಿಸುತ್ತಾರೆ.

ಉಪವಾಸ ದೀರ್ಘ ಕಾಲದ್ದಾಗಿರಬಹುದು ಅಥವಾ ಅಲ್ಪ ಕಾಲದ್ದಾಗಿರಬಹುದು. ಉಪವಾಸದ ಅವಧಿ ನಲವತ್ತು ದಿವಸಗಳಷ್ಟು ದೀರ್ಘವಾಗಿರಬಹುದು ಅಥವಾ ಕೇವಲ ಒಂದು ಹೊತ್ತಿನಷ್ಟು ಹ್ರಸ್ವವಾಗಿರಬಹುದು. ಯೇಸುಕ್ರಿಸ್ತ ತನ್ನ ಪ್ರಚಾರ ಕಾರ್ಯವನ್ನು ಆರಂಭಿಸುವುದಕ್ಕೆ ಮುಂಚೆ ನಲವತ್ತು ದಿವಸಗಳಷ್ಟು ದೀರ್ಘಕಾಲ ಉಪವಾಸವನ್ನು ಆಚರಿಸಿದ. ಉಪವಾಸ ಸಂಪೂರ್ಣ ಉಪವಾಸವಾಗಿರಬಹುದು. ಇಂಥ ಕಠಿಣ ಉಪವಾಸ ಕಾಲದಲ್ಲಿ ಒಂದು ಗುಟುಕು ನೀರನ್ನು ಕೂಡ ಕುಡಿಯಕೂಡದು, ಇದನ್ನು ನಿರ್ಜಲ ಉಪವಾಸವೆಂದು ಕರೆಯುವುದುಂಟು. ಜೀವನದಿಂದ ಮುಕ್ತರಾಗಲು ಜೈನರು ಆಮರಣಾಂತ ಉಪವಾಸ ಮಾಡುವ ವ್ರತವನ್ನು ಇಟ್ಟುಕೊಂಡಿದ್ದಾರೆ. ಉಪವಾಸ ಅರೆ ಉಪವಾಸವಾಗಿರ ಬಹುದು. ನಿತ್ಯಗಟ್ಟಲೆ ಉಪಯೋಗಿಸುವ ಬೇಯಿಸಿದ ಆಹಾರವನ್ನು ಬಿಟ್ಟÄ, ಹಾಲು ಹಣ್ಣುಗಳನ್ನು ಸೇವಿಸುವುದು ಅಂದರೆ ಫಲಾಹಾರ ಅರೆ ಹೊಟ್ಟೆಯ ಉಪವಾಸ.

ಉಪವಾಸವನ್ನು ಆಚರಿಸುವ ಸಂದರ್ಭಗಳು ಅನೇಕವಾಗಿವೆ. 1. ಕಾಡುಜನರಲ್ಲಿ ಗರ್ಭಿಣಿ ಕೆಲವು ಬಗೆಯ ಆಹಾರಗಳನ್ನು ತಿನ್ನಕೂಡದು. 2. ಹಾಗೆಯೇ ಪ್ರಸವ ಕಾಲದಲ್ಲೂ ಪ್ರಸವಿಸಿದ ತಾರುಣ್ಯದಲ್ಲೂ ಮಗುವಿನ ತಂದೆತಾಯಿಯರು ಕೆಲವು ಬಗೆಯ ಆಹಾರಗಳನ್ನು ತಿನ್ನಕೂಡದು. ಈ ನಿಷೇಧಗಳು ಮಲನೇಸಿಯ, ನ್ಯೂಗಿನಿ ಮತ್ತು ಅಸ್ಸಾಮಿನ ಕಾಡುಜನರಲ್ಲಿ ಬಳಕೆಯಲ್ಲಿವೆ. ಕ್ಯಾರಿಬ್ ಜನರಲ್ಲಿ ತಂದೆ ಶಿಶುವಿನ ಜನನ ಕಾಲದಿಂದ ನಲವತ್ತು ದಿವಸಗಳ ಪರ್ಯಂತ ಕೆಲವು ಬಗೆಯ ಆಹಾರಗಳನ್ನು ತಿನ್ನಕೂಡದು. 3. ಬ್ರಿಟಿಷ್ ಕೊಲಂಬಿಯದ ಕಾಡುಜನರಲ್ಲಿ ಋತುಮತಿಯಾದವಳು ನಾಲ್ಕು ದಿವಸಗಳ ಕಾಲ ಮಾಂಸವನ್ನು ತಿನ್ನಕೂಡದು. 4. ಮದುವೆಗೆ ಮುಂಚೆ ಕನ್ಯೆ ಉಪವಾಸವನ್ನು ಆಚರಿಸಬೇಕೆಂಬ ಕಟ್ಟಲೆಯನ್ನು ಪ್ರಾಚೀನ ಚೀನೀಯರು ಆಚರಿಸುತ್ತಿದ್ದರು. 5. ಶವಸಂಸ್ಕಾರದ ಕಾಲದಲ್ಲಿ ಉಪವಾಸ ಮಾಡುವುದು ಬಹುಶಃ ಎಲ್ಲ ಬಗೆಯ ಜನರಲ್ಲೂ ಬಳಕೆಯಲ್ಲಿದೆ. ಅಂಡಮಾನ್ ದ್ವೀಪದ ಆದಿವಾಸಿಗಳು ಶೋಕದ ಹೆಗ್ಗುರುತಾಗಿ ಉಪವಾಸವನ್ನು ಅವಲಂಬಿಸುತ್ತಾರೆ. ಈ ಉಪವಾಸದ ಅವಧಿ ಹತ್ತು ದಿವಸಗಳಿಂದ ಇಪ್ಪತ್ತು ದಿವಸಗಳಷ್ಟು ದೀರ್ಘವಾಗಿರಬಹುದು. ಹಿಂದುಗಳು ಶವಸಂಸ್ಕಾರ ಕಾಲದಲ್ಲಿ 11ನೆಯ ದಿವಸ ಒಪ್ಪತ್ತು ಉಪವಾಸ ಮಾಡುತ್ತಾರೆ. ಪ್ರಾಚೀನ ಚೀನೀಯರಲ್ಲಿ ಮಗನಾದವ ತಂದೆ, ತಾಯಿ ಅಥವಾ ಗುರುವಿನ ಸಮಾಧಿಯ ಬಳಿ ವಾಸಿಸುತ್ತ ಮೂರು ವರ್ಷಗಳ ಕಾಲ ಅರೆ ಉಪವಾಸವನ್ನು ಆಚರಿಸುತ್ತಿದ್ದ. ಕೂಂಗ್ ಫಷೆಯ ಸಮಾಧಿಯ ಬಳಿ ಅವನ ಶಿಷ್ಯನೊಬ್ಬ ಗುರಿವಿನ ಆತ್ಮಕ್ಕೆ ತೃಪ್ತಿಯಾಗಲೆಂದು ಮೂರು ವರ್ಷಗಳ ಕಾಲ ಅರೆ ಉಪವಾಸವನ್ನು ಆಚರಿಸಿದನಂತೆ. 6. ಮಾಟಮಂತ್ರಗಳಲ್ಲಿ ತೊಡಗಿದವರು ಮಂತ್ರಶಕ್ತಿಯನ್ನು ಸಿದ್ಧಿಸಿಕೊಳ್ಳಲು ಉಪವಾಸವನ್ನು ಆಚರಿಸುತ್ತಾರೆ. ಬ್ಯಾಂಕ್ ದ್ವೀಪದ ಮಾಟಗಾರರು, ಮಾವೊರಿ ಮಾಟಗಾರರು ಯಾವುದಾದರೂ ಒಂದು ಮಾಟವನ್ನು ಕೈಕೊಳ್ಳುವ ಮುಂಚೆ ಹಲವು ದಿನಗಳ ಉಪವಾಸವನ್ನು ಕೈಗೊಳ್ಳುತ್ತಾ. 7. ಕಾಡು ಜನ ತಮ್ಮ ಮಕ್ಕಳಿಗೆ ದೀಕ್ಷೆ ಕೊಡುವ ಕಾಲದಲ್ಲಿ ಉಪವಾಸವನ್ನು ನಿಯಮಿಸುತ್ತಾರೆ. ನ್ಯೂ ಹೆಬ್ರಿಡೀಸಿನ ಮತ್ತು ನ್ಯೂಗಿನಿಯ ಕಾಡುಜನ ದೀಕ್ಷೆ ಕೊಡುವುದಕ್ಕೆ ಮೂವತ್ತು ದಿವಸಗಳ ಮುಂಚಿನಿಂದ ಉಪವಾಸ ಮಾಡುತ್ತಾರೆ. ಹೀಗೆ ಕೆಲವು ಕಾಲ ಉಪವಾಸವನ್ನು ಆಚರಿಸಿದಾಗ ದೀಕ್ಷೆ ಪಡೆಯುವವನಿಗೆ ಕನಸಿನಲ್ಲಿ ಅವನ ಇಷ್ಟದೈವ ಪ್ರತ್ಯಕ್ಷವಾಗುತ್ತದೆ. ಈ ನಂಬಿಕೆ ಹೀಬ್ರೂ ಜನರಲ್ಲೂ ಇತ್ತು. ಮೋಸೆಸ್ ಪರ್ವತದ ಶಿಖರದ ಮೇಲೆ ಯಾಹವೇಯಿಂದ ಸಂದೇಶವನ್ನು ಪಡೆಯಲು ನಲವತ್ತು ದಿವಸಗಳ ಉಪವಾಸವನ್ನು ಆಚರಿಸಿದ. ಈ ಯೆಹೂದಿ ಆಚಾರ ಕ್ರೈಸ್ತರಲ್ಲೂ ಮುಂದುವರಿದಿದೆ. 8. ಪಾಪವಿಮೋಚನೆಗಾಗಿ, ಪ್ರಾಯಶ್ಚಿತ್ತ ನಿಮಿತ್ತವಾಗಿ ಉಪವಾಸವನ್ನು ಆಚರಿಸುವುದು. ಇದು ವಿಶೇಷವಾಗಿ ಮೇಲ್ಮಟ್ಟದ ಮತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಮತಗಳಲ್ಲಿ ಪ್ರಾರ್ಥನೆ ಉಪವಾಸದ ಒಂದು ಮುಖ್ಯ ಅಂಗವಾಗಿರುತ್ತದೆ. 9. ಸಂನ್ಯಾಸವನ್ನು ಅವಲಂಬಿಸುವ ಮತಗಳಲ್ಲಿ ಉಪವಾಸ ಒಂದು ಮುಖ್ಯ ಅಂಗ, ಈ ಎರಡು ಬಗೆಯ ಉಪವಾಸಗಳು ಬೌದ್ಧ, ಹಿಂದೂ, ಕ್ರೈಸ್ತ ಮತ್ತು ಇಸ್ಲಾಂ ಮತದವರಲ್ಲಿ ವಿಶೇಷವಾಗಿ ಬಳಕೆಯಲ್ಲಿವೆ.

ಹಿಂದುಗಳಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಉಪವಾಸವನ್ನು ಕೈಗೊಳ್ಳುತ್ತಾರೆ. ಇದು ಮನುವಿನ ಕಾಲದಷ್ಟು ಆರ್ಷೇಯ ಪದ್ಧತಿ. ಪ್ರಾಯಶ್ಚಿತ್ತ ನಿಮಿತ್ತವಾಗಿ ಅಲ್ಲದೆ ದೇವರ ಪ್ರೀತಿಗಾಗಿ ಉಪವಾಸವನ್ನು ಆಚರಿಸುವುದುಂಟು. ಏಕಾದಶಿ ಉಪವಾಸ ಸರ್ವರಲ್ಲೂ ಸಾಧಾರಣ. ಮಾಧ್ವರು ಏಕಾದಶಿಯ ವ್ರತವನ್ನು ತುಂಬ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ದೊಡ್ಡ ಏಕಾದಶಿಯ ದಿನ ಶೂದ್ರರೂ ಉಪವಾಸ ಮಾಡುತ್ತಾರೆ. ಪಿತೃಗಳ ಪ್ರೀತ್ಯರ್ಥವಾಗಿ ಹಿಂದುಗಳು ಅಮವಾಸ್ಯೆ ಮತ್ತು ಪುರ್ಣಿಮೆ ದಿನಗಳಂದು ಒಂದು ಹೊತ್ತು ಮಾತ್ರ ಊಟ ಮಾಡುತ್ತಾರೆ. ಶಿವರಾತ್ರಿ ಶೈವರಿಗೆ ಉಪವಾಸದ ದಿನ. ಋಷಿಪಂಚಮಿಯನ್ನು ಆಚರಿಸುವವರು ಮೂರು ದಿನಗಳ ಕಾಲ ಉಪವಾಸ ಮಾಡುತ್ತಾರೆ. ಈ ದೊಡ್ಡ ಉಪವಾಸದ ದಿನಗಳಲ್ಲಿ ಅಲ್ಲದೆ ಕೆಲವರು ಶನಿವಾರ ರಾತ್ರಿ, ಗುರುವಾರ, ಕಾರ್ತಿಕ ಸೋಮವಾರ ಇತ್ಯಾದಿ ದಿನಗಳಲ್ಲೂ ಉಪವಾಸ ಮಾಡುವುದೂ ಉಂಟು. ಸನ್ಯಾಸಿಗಳು ಸಾಮಾನ್ಯವಾಗಿ ನಿತ್ಯವೂ ಒಂದು ಹೊತ್ತು ಮಾತ್ರ ಊಟ ಮಾಡುತ್ತಾರೆ. ಕೆಲವು ನಿರ್ದಿಷ್ಟಕಾಲಗಳಲ್ಲಿ, ಮುಖ್ಯವಾಗಿ ತಪಸ್ಸು ಮಾಡುವ ಕಾಲದಲ್ಲಿ, ದೀರ್ಘಕಾಲ ಉಪವಾಸ ಮಾಡುತ್ತಾರೆ. ದೇಹದಂಡನೆ, ಇಂದ್ರಿಯ ನಿಗ್ರಹ ಈ ಉಪವಾಸಗಳ ಉದ್ದೇಶ, ಮಹಾತ್ಮ ಗಾಂಧಿ ಕೈಗೊಂಡ ಉಪವಾಸಗಳು ಪ್ರಾಯಶ್ಚಿತ್ತ ರೂಪವಾದವು. ಅವುಗಳ ಉದ್ದೇಶ, ಆತ್ಮಶೋಧನೆ, ಆತ್ಮಶುದ್ಧಿ, ಅವು ರಾಜಕೀಯ ಸಂದರ್ಭಗಳಲ್ಲಿ ಕೈಗೊಂಡುವಾದರೂ ಅವುಗಳ ಉದ್ದೇಶ ಲೌಕಿಕವಾದದ್ದಲ್ಲ, ಆಧ್ಯಾತ್ಮಿಕವಾದದ್ದು.

ಜೈನಧರ್ಮೀಯರು ಕಠಿಣ ಉಪವಾಸವನ್ನು ಆಚರಿಸುತ್ತಾರೆ. ಮಹಾವೀರ ಸಿದ್ಧಿಯನ್ನು ಪಡೆಯುವುದಕ್ಕೆ ಮುಂಚೆ ಅನೇಕ ಘಟ್ಟಗಳಲ್ಲಿ ಮೂರು ದಿನಗಳ ಕಾಲ ಉಪವಾಸವನ್ನು ಆಚರಿಸಿದ. ಬುದ್ಧ ಕಠಿಣ ಉಪವಾಸವನ್ನು ನಿಷೇಧಿಸಿದರೂ ಭಿಕ್ಷುಗಳು ಹಿಂದುಗಳಂತೆ ಪಕ್ಷಾಂತ್ಯದಲ್ಲಿ ಉಪವಾಸವನ್ನು ಕೈಗೊಳ್ಳುತ್ತಾರೆ. ಲಾಮಾಗಳು ತಿಂಗಳ 13, 15, 29ಮತ್ತು 30ನೆಯ ದಿನಗಳಂದು ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು, ಬೌದ್ಧ ನಿಯಮಗಳನ್ನು ಪಠಿಸಿ ಉಪವಾಸವನ್ನು ಆಚರಿಸುತ್ತಾರೆ. ಈ ಉಪವಾಸ ದಿನಗಳಿಗೆ ಉಪೋಸ್ಥ ದಿನಗಳೆಂದು ಹೆಸರು. ಬುದ್ಧ ನಿರ್ವಾಣ ಪಡೆದ ದಿನಕ್ಕೆ ಐದು ದಿನಗಳ ಮುಂಚೆ ಅವರು ಉಪವಾಸವನ್ನು ಪ್ರಾರಂಭಿಸುತ್ತಾರೆ. ಮುಸ್ಲಿಮರು ಪ್ರಾಯಶ್ಚಿತ್ತ ರೂಪವಾಗಿ ಉಪವಾಸ ಮಾಡಬೇಕೆಂದು ಕುರಾನು ವಿಧಿಸಿರುತ್ತದೆ. ಒಬ್ಬ ಮುಸ್ಲಿಮ ಇನ್ನೊಬ್ಬ ಮುಸ್ಲಿಮನನ್ನು ಕೊಂದಾಗ, ದಂಡ ತೆರಲಾಗದಿದ್ದರೆ ಎರಡು ತಿಂಗಳ ಕಾಲ ಉಪವಾಸವನ್ನು ಆಚರಿಸಬೇಕು, ಮಾತಿಗೆ ತಪ್ಪಿದವ ಹತ್ತು ಜನ ಬಡ ಮುಸ್ಲಿಮರಿಗೆ ಅನ್ನ ಹಾಕಬೇಕು. ಹಾಗೆ ಮಾಡಲಾಗದವ ಮೂರು ದಿನಗಳವರೆಗೆ ಉಪವಾಸವಿರಬೇಕು. ಮುಸ್ಲಿಮರು ಉಪವಾಸವನ್ನು ಪ್ರಾಯಶ್ಚಿತ್ತವಾಗಿ ಅಲ್ಲದೆ ಅದನ್ನು ಒಂದು ವ್ರತವಾಗಿ ಆಚರಿಸಬೇಕೆಂದು ಕುರಾನು ವಿಧಾಯಕ ಮಾಡಿರುತ್ತದೆ. ಅದು ಉಪವಾಸವನ್ನು ಒಂದು ಸತ್ಕಾರ್ಯವಾಗಿ ಗಣಿಸಿದೆ. ಹeóï ಯಾತ್ರೆಗೆ ಹೋಗುವುದಕ್ಕೆ ಮೂರು ದಿನಗಳ ಮುಂದೆ ಮುಸ್ಲಿಮನಾದವ ಉಪವಾಸ ಕೈಗೊಳ್ಳಬೇಕು. ಯಾತ್ರೆಯಿಂದ ಹಿಂತಿರುಗಿದ ಮೇಲೆ ಏಳು ದಿವಸ ಉಪವಾಸ ಮಾಡಬೇಕು. ರಂಜಾನ್ ಕಾಲದಲ್ಲಿ ಮೂವತ್ತು ದಿನಗಳ ಪರ್ಯಂತ ಮುಂಜಾನೆಯಿಂದ ಸಂಜೆಯ ವರೆಗೆ ಮುಸ್ಲಿಮ ನೀರನ್ನು ಕೂಡ ಕುಡಿಯಕೂಡದು. ಮೊಹರಂ ಹತ್ತನೆಯ ದಿವಸ ಮುಸ್ಲಿಮರು ಉಪವಾಸ ವನ್ನು ಆಚರಿಸಬೇಕು. ಈ ಸಂದರ್ಭಗಳಲ್ಲಿ ಅಲ್ಲದೆ ಮುಸ್ಲಿಮರಲ್ಲಿ ಕೆಲವರು ಸೋಮವಾರ ಮತ್ತು ಗುರುವಾರಗಳಲ್ಲಿ ಉಪವಾಸವಿರುತ್ತಾರೆ. ಕುರಾನಿನ ಪ್ರಕಾರ ಉಪವಾಸ ಮಾಡಿದ ಮುಸ್ಲಿಮನ ಬಾಯ ವಾಸನೆ ದೇವರಿಗೆ ಪುನಗಿಗಿಂತ ಪ್ರಿಯವಾದದ್ದು. ಪೈಗಂಬರ್ ಮಹಮದ್ ಸನ್ಯಾಸವನ್ನು ಒಪ್ಪಲಿಲ್ಲ. ಮಹಮದನ ಅನಂತರ ಹುಟ್ಟಿದ ಸೂಫಿ ಪಂಥದ ಸನ್ಯಾಸಿಗಳಲ್ಲಿ ಉಪವಾಸ ಸನ್ಯಾಸದ ಒಂದು ಮುಖ್ಯ ಅಂಗವಾಯಿತು.

ಯೇಸುಕ್ರಿಸ್ತ ಉಪವಾಸದ ಬಗ್ಗೆ ಕಟ್ಟುನಿಟ್ಟಾದ ಸೂತ್ರಗಳನ್ನೇನೂ ರಚಿಸಲಿಲ್ಲ. ಆಗಿನ ಕಾಲದ ಯೆಹೂದ್ಯರಲ್ಲಿ ವಾಡಿಕೆಯಿದ್ದಂತೆ ಆತ ಪ್ರಾಯಶ್ಚಿತ್ತ ದಿನದಂದು ಉಪವಾಸ ಮಾಡುತ್ತಿದ್ದ; ತನ್ನ ಪೌರೋಹಿತ್ಯವನ್ನಾರಂಭಿಸುವ ಮುನ್ನ ನಲವತ್ತು ದಿನಗಳಕಾಲ ಉಪವಾಸ ಮಾಡಿದ. ಆದರೆ ಅವನ ಶಿಷ್ಯರು ಯಾರೂ ಆ ಕಾಲದಲ್ಲಿ ಉಪವಾಸ ಮಾಡುತ್ತಿರಲಿಲ್ಲ. ಮದುವಣಿಗ ಜತೆಯಲ್ಲಿದ್ದನಾದ್ದರಿಂದ ಇದು ಅಗತ್ಯವಿಲ್ಲವೆಂದು ಆಗಿದ್ದ ನಂಬಿಕೆ. ಮುಂದೆ ಮದುವಣಿಗನನ್ನು ಕೊಂಡೊಯ್ಯುವ ದಿನ ಬಂದಾವು; ಆಗ ಅಂಥ ದಿನದಲ್ಲಿ ಉಪವಾಸ ಮಾಡಬೇಕು-ಎಂದಷ್ಟೇ ಯೇಸು ಹೇಳಿದ್ದ. ಉಪವಾಸದಲ್ಲಿ ಆಡಂಬರ ಇರದಿರಲಿ ಎಂದೂ ಆತನ ನಿರೂಪ. ಉಪವಾಸ ವಿಚಾರದಲ್ಲಿ ಯೇಸು ಈ ರೀತಿ ತಾತ್ತ್ವಿಕವಾಗಿಯಷ್ಟೇ ವಿಚಾರ ನಡೆಸಿದ್ದ ರಿಂದ ಆತನ ಅನಂತರ ಚರ್ಚ್ ಬಲು ತಡವಾಗಿ ಈ ಬಗ್ಗೆ ವಿಧಿಗಳನ್ನು ರಚಿಸಿತು. ಕ್ರಿಸ್ತ ಹೇಳಿದ ಮದುವಣಿಗನೆಂಬ ಮಾತನ್ನು ಕ್ರೈಸ್ತರು ಅಕ್ಷರಶಃ ಅನ್ವಯ ಮಾಡಿಕೊಂಡರು; ಈಸ್ಟರ್ ಹಬ್ಬದ ಕಾಲದಲ್ಲಿ ಉಪವಾಸದ ಅವಧಿಯನ್ನು ಬೆಳೆಸಿದರು.

ಪ್ರಾಯಶ್ಚಿತ್ತ ದಿನದಂದು ಉಪವಾಸ ಮಾಡುತ್ತಿದ್ದ ಯೆಹೂದ್ಯರು ಮುಂದೆ ಇನ್ನೂ ಅನೇಕ ದಿನಗಳಲ್ಲಿ ಸ್ವಯಂ ಇಚ್ಛೆಯಿಂದ ಉಪವಾಸ ಮಾಡಲಾರಂಭಿಸಿದರು. ಆದರೆ ಕ್ರೈಸ್ತರ ಉಪವಾಸ ದಿನಗಳು ಹೆಚ್ಚಲು ಪ್ರಬಲಕಾರಣಗಳಿದ್ದವು. ಧರ್ಮೋಪದೇಶದ ಬೆಟ್ಟಕ್ಕೆ (ಹಿರ್) ಮೋಸೆಸ್ ಹೋಗಿದ್ದು ಗುರುವಾರದಂದು, ಆತ ಅಲ್ಲಿಂದ ಹಿಂದಿರುಗಿದ್ದು ಸೋಮವಾರ, ಈ ಕಾರಣದಿಂದ ಸೋಮವಾರ ಗುರುವಾರಗಳು ಕ್ರೈಸ್ತರಿಗೆ ಪವಿತ್ರ. ಇವೂ ಉಪವಾಸದದಿನಗಳು.

ಲೆಂಟಿನ ನಲವತ್ತು ದಿವಸಗಳು, ಎಂಬರ್ ದಿನಗಳು, ರೊಗೇಷನ್ ದಿನಗಳು, ಶುಕ್ರವಾರಗಳೂ-ಉಪವಾಸ ದಿನಗಳೆಂದು ಇಂಗ್ಲೆಂಡಿನ ಮತ್ತು ರೋಮಿನ ಚರ್ಚ್ಗಳು ವಿಧಾಯಕ ಮಾಡಿವೆ. ಈ ದಿನಗಳಲ್ಲಿ ಅಲ್ಲದೆ ದೀಕ್ಷೆ ಪಡೆಯುವವರು ದೀಕ್ಷೆ ಪಡೆಯುವ ಉಪವಾಸವನ್ನೂ ಆಚರಿಸಬೇಕು (ನೋಡಿ-ಏಕಾದಶಿ; ಪಾರಣೆ). (ಜಿ.ಎಚ್.)