ಉಳುಮೆ, ಉಳುಮೆಯ ಸಾಧನಗಳು
ನೆಲವನ್ನು ಬೀಜ ಬಿತ್ತನೆಗೆ ಮತ್ತು ಗಿಡದ ಬೆಳೆವಣಿಗೆಗೆ ಹದಮಾಡುವ ಕೆಲಸಕ್ಕೆ ಉಳುಮೆ ಎಂದು ಹೆಸರು. ಈ ಕೆಲಸಕ್ಕೆ ಸಾಧನಗಳಾಗಿ ಅನೇಕ ಮುಟ್ಟುಗಳನ್ನೂ, ಯಂತ್ರೋಪಕರಣಗಳನ್ನೂ ಬಳಸುತ್ತಾರೆ. ಆದಿಮಾನವನಿಗೆ ವ್ಯವಸಾಯವೇ ಗೊತ್ತಿಲ್ಲದ ಒಂದು ಕಾಲವಿತ್ತು. ಆಗವನು ತನ್ನ ಆಹಾರಕ್ಕಾಗಿ ಬೇಟೆಯಾಡುತ್ತಿದ್ದ. ಇಲ್ಲವೇ ಬೆಳೆದ ಗಿಡಮರಗಳ ಹಣ್ಣು ಹಂಪಲು, ಸೊಪ್ಪು ಸೊದೆ, ಗೆಡ್ಡೆಗೆಣಸುಗಳನ್ನು ಆಯ್ದು ತಿನ್ನುತ್ತಿದ್ದ. ನೀರಿನ ಆಶ್ರಯವಿರುವಲ್ಲಿ ನೆಲದ ಮೇಲೆ ಬೀಜವನ್ನು ಎರಚಿ ಗಿಡ ಬೆಳೆಸುವ ವಿಧಾನವನ್ನು ಕ್ರಮೇಣ ಆತ ಕಲಿತ. ಬೆಳೆಯುತ್ತಿದ್ದ ಗಿಡಗಳನ್ನು ಜೋಪಾನಿಸುವ ಕೆಲಸವನ್ನೂ ಪ್ರಾರಂಭಿಸಿದ. ಅನಂತರ ತನಗೆ ಆಗ ಲಭ್ಯವಿದ್ದ ಮರದ ಇಲ್ಲವೆ ಕಲ್ಲಿನ ಚೂಪಾದ ಆಯುಧದಿಂದ ನೆಲವನ್ನು ಅಲ್ಪ ಸ್ವಲ್ಪ ಅಗೆದು ಬೀಜ ಬಿತ್ತಲು ಪ್ರಾರಂಭಿಸಿದ. ಈಗಿನ ನೇಗಿಲಿನ ತುದಿಯಲ್ಲಿ ಲೋಹದ ಅಂಥ ಚೂಪಾದ ಕುಳ ಇರುವುದನ್ನು ನಾವು ಇಲ್ಲಿ ನೆನೆಯಬಹುದು. ಕೃಷಿಯ ಪ್ರಾಮುಖ್ಯ ಹೆಚ್ಚಿದಂತೆ ಉಳುಮೆಯ ಕ್ರಮವೂ ಸುಧಾರಿಸಿತು. ಎತ್ತು, ಕೋಣ, ಕುದುರೆ, ಒಂಟೆ ಮೊದಲಾದ ಪ್ರಾಣಿಗಳನ್ನು ಕೃಷಿ ಕೆಲಸಗಳಿಗೆ ಬಳಸುವ ಅಭ್ಯಾಸ ಹೆಚ್ಚಿತು. ಬಿತ್ತನೆ, ಕಳೆ ಕೀಳುವುದು, ನೀರು ಕೊಡುವುದು, ಕಟಾವು, ಕೇರುವುದು, ದಾಸ್ತಾನು, ಸರಬರಾಜು- ಹೀಗೆ ಒಂದೊಂದು ಕೆಲಸಕ್ಕೂ ಅಗತ್ಯವಾಗಬಲ್ಲ ಮುಟ್ಟುಗಳು, ಯಂತ್ರೋಪಕರಣಗಳು ಈಗ ಬಳಕೆಗೆ ಬಂದಿವೆ. ಈ ಲೇಖನದಲ್ಲಿ ಉಳುಮೆ ಮತ್ತು ಉಳುಮೆಯ ಸಾಧನಗಳ ವಿಷಯವನ್ನು ಪ್ರಸ್ತಾಪಿಸಿದೆ. (ನೋಡಿ- ಕೃಷಿ)
ತಲೆತಲಾಂತರದ ಅನುಭವದಿಂದ ಬಂದ ಸಾಗುವಳಿಯ ವಿಷಯe್ಞÁನ ಮತ್ತು ಸಾಧನಗಳೇ ಈಗ ಸುಮಾರು 50 ವರ್ಷಗಳವರೆವಿಗೂ ಬೇಸಾಯದ ಎಲ್ಲ ಕ್ರಮಗಳಿಗೂ ಸಾಮಾನ್ಯವಾಗಿ ತಳಹದಿಯಾಗಿತ್ತು. ಪಾಶ್ಚಾತ್ಯ ದೇಶಗಳಲ್ಲಿ ಕೈಗಾರಿಕೆ ಯುಗದ ಅವಿರ್ಭಾವ ಬೇಸಾಯದ ಕೆಲಸಕ್ಕೆ ಬೇಕಾದ ಜನ ಸಹಾಯದ ಅಭಾವಕ್ಕೆ ಕಾರಕವಾಯಿತು. ಕೂಲಿಯ ದರಗಳೂ ಹೆಚ್ಚಿದವು. ಉಳುಮೆ ಕೆಲಸಗಳಲ್ಲಿ ಮನುಷ್ಯನ ದುಡಿಮೆಯನ್ನು ಕಡಿಮೆ ಮಾಡಲು ಯಂತ್ರ ಸಾಧನಗಳನ್ನು ಉಪಯೋಗಿಸಿಕೊಳ್ಳಬಹುದೇ ಎಂಬ ವಿಷಯದತ್ತ ಜನರ ಗಮನ ಹರಿಯಿತು. ಈ ರೀತಿ ವ್ಯವಸಾಯೋತ್ಪನ್ನದ ವೆಚ್ಚ ಇಳಿಸಿಕೊಳ್ಳುವ ಸಾಧ್ಯಾಸಾಧ್ಯತೆಯನ್ನು ಕುರಿತ ಚಿಂತನೆ ಪ್ರಾರಂಭವಾಯಿತು.
ಉಳುಮೆಯ ಮುಖ್ಯ ಉದ್ದೇಶ ಬೀಜ ಮೊಳೆಯುವುದಕ್ಕೆ ಹದವಾದ, ಸಡಿಲವಾದ, ಮೆತ್ತನೆಯ ಮಣ್ಣನ್ನು ಒದಗಿಸುವುದೇ ಆಗಿದೆ. ಹಾಗೆ ಮಾಡಿದಾಗ ಮೊಳೆತ ಬೀಜ ಸಸಿಯಾಗಿ ಬೆಳೆದು ಫಲಕೊಡಲು ಅನುಕೂಲವಾದ ಸನ್ನಿವೇಶ ಏರ್ಪಡುತ್ತದೆ. ಪ್ರಾಸಂಗಿಕವಾಗಿ ನೆಲದಲ್ಲಿನ ಕಳೆ, ಕೂಳೆಗಳೂ ಹೊರಬಂದು ಸತ್ತು ಗೊಬ್ಬರವಾಗುತ್ತವೆ. ಬಿದ್ದ ನೀರು ಹಾದು ಹೋಗದೆ ಇಂಗಿ ಮಣ್ಣಿನ ತೇವವನ್ನು ಹೆಚ್ಚಿಸುತ್ತದೆ. ಹಾಕಿದ ಗೊಬ್ಬರ, ಸುಣ್ಣ, ಜಿಪ್ಸಂ ಮೊದಲಾದವು ಮಣ್ಣಿನಲ್ಲಿ ಚೆನ್ನಾಗಿ ಬೆರೆಯುತ್ತವೆ. ಮಿಗಿಲಾಗಿ ಉತ್ತ ಮಣ್ಣಿನಲ್ಲಿ ಗಾಳಿ ಚೆನ್ನಾಗಿ ಆಡುತ್ತದೆ. ಗಾಳಿಯಾಡುವುದರಿಂದ ಮೇಲ್ಮೈಯಲ್ಲಿನ ತೇವ ಆರಿ ಮಣ್ಣಿನ ಶಾಖ ಹೆಚ್ಚುತ್ತದೆ. ಹದವಾದ ಶಾಖ ಉಂಟಾದಲ್ಲಿ ಮಾತ್ರ ಬೀಜ ಮೊಳೆತು ಸಸ್ಯ ಬೆಳೆಯುವುದು ಸಾಧ್ಯ. ಬೇಸಾಯದ ನೆಲ ಸಡಿಲವಾಗಿ ಮಣ್ಣು ಹುಡಿ ಹುಡಿಯಾಗಿದ್ದು ಹರಳು ಹರಳಾಗಿದ್ದು, ಬೀಜ ಮೊಳೆಯುವುದಕ್ಕೆ, ಸಸ್ಯ ಬೆಳವಣಿಗೆಗೆ ಹದವಾಗಿದ್ದಾಗ ಅಂಥ ನೆಲ ಸೆಬ್ಬೆಯಲ್ಲಿದೆ ಎನ್ನುತ್ತಾರೆ. ಆ ಮಣ್ಣನ್ನು ಬೆರಳುಗಳ ಮಧ್ಯದಲ್ಲಿ ತೆಗೆದುಕೊಂಡು ಉಜ್ಜಿದಾಗ, ಅದು ಮೆದುವಾಗಿದ್ದು, ಪುಡಿಯಾಗುತ್ತದೆ. ಮಣ್ಣು ಸಡಿಲವಾಗಿರುವುದರಿಂದ ಕಣಗಳ ಮಧ್ಯದ ಅಂತರ ಹೆಚ್ಚುತ್ತದೆ. ಹದವಾದ ಕಣಜೋಡಣೆ ಇದ್ದು ಕಣಾಂತರ ಸಾಕಷ್ಟಿರುವುದರಿಂದ, ಗಾಳಿ ಆಡಲು ತೇವ ಉಳಿಯಲು ಸಹಾಯವಾಗುತ್ತದೆ. ಬಿದ್ದ ನೀರು ಮಣ್ಣಿನೊಳಗೆ ಇಳಿದು ಇಂಗುವುದರಿಂದ ಮಣ್ಣು ಕೊಚ್ಚಿ ಹೋಗುವುದು ತಪ್ಪುತ್ತದೆ. ಉತ್ತು ಸಡಿಲವಾದ ಮಣ್ಣಿನಲ್ಲಿ ಸಂಯುಕ್ತ ಕಣಗಳು ಮತ್ತು ಹುಡಿಮಣ್ಣು ಎರಡೂ ಇರುತ್ತವೆ. ಇಂಥ ಪರಿಸ್ಥಿತಿ ಸಸ್ಯದ ಬೆಳವಣಿಗೆಗೆ ಹಿತಕರ. ಬೇರು ಹರಡುವುದಕ್ಕೆ, ಗಾಳಿ ತೂರುವುದಕ್ಕೆ, ಸೂಕ್ಷ್ಮಜೀವಿಗಳ ಹಾಗೂ ರಾಸಾಯನಿಕ ಕ್ರಿಯೆಯಿಂದ ಬಿಡುಗಡೆಯಾಗಿ ಸಸ್ಯಕ್ಕೆ ಒದಗುವ ಪೋಷಕಾಂಶಗಳ ಹೀರುವಿಕೆಗೆ, ಕಣಾಂತರ ಹೆಚ್ಚಿದಷ್ಟೂ ಸಹಕಾರಿ. ಉಳುವುದರಿಂದ, ಕೀಟಕ್ರಿಮಿಗಳ ಮೊಟ್ಟೆಗಳು ನಾಶವಾಗುತ್ತವೆ.
ಮಣ್ಣಿನ ಸೆಬ್ಬೆ ಅಥವಾ ಹದ, ಮಣ್ಣಿನ ಗುಣ ಮತ್ತು ಪೈರಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ರಾಗಿ, ಈರುಳ್ಳಿ, ಮಸಾಲೆಸೊಪ್ಪು, ಮುಂತಾದ ಸಣ್ಣ ಬೀಜವುಳ್ಳ ಪೈರುಗಳಿಗೆ ಬಹಳ ಮೃದುವಾದ ಭೂಮಿ ಬೇಕು. ಈ ಬೀಜಗಳು ಒರಟುಭೂಮಿಯಲ್ಲಿ ಮೊಳೆಯುವುದಿಲ್ಲ. ಅದೇ ಜೋಳ, ಹತ್ತಿ, ಕಡಲೆಗಳ ಬೀಜ ಮೊಳೆಯಬೇಕಾದರೆ ಒರಟು ಭೂಮಿ ಅಗತ್ಯ.
ಕೆಂಪುಮಣ್ಣು ಗೋಡು ಅಥವಾ ಮರಳಿನಿಂದ ಕೂಡಿರುತ್ತದೆ. ಆದ್ದರಿಂದ ಸುಲಭವಾಗಿ ಹುಡಿಯಾಗುತ್ತದೆ. ಮೊದಲ ಮಳೆಯಲ್ಲೆ, ಈ ಮಣ್ಣಿನಲ್ಲಿ ಬಿತ್ತನೆ ಸಾಧ್ಯ. ಕಪ್ಪುಮಣ್ಣಿನಲ್ಲಿ ಜೇಡಿ ಹೆಚ್ಚು. ನೆಲ ಹೆಂಟೆ ಹೆಂಟೆಯಾಗಿದ್ದಾಗ ಬಿದ್ದ ಮಳೆ ಮೇಲ್ಮೈಯಲ್ಲಿ ನಿಂತು ಒಳಗೆ ಇಳಿಯುವುದು ಸಾಧ್ಯ. ಪದೇ ಪದೇ ಉತ್ತು ಮೇಲ್ಮೈ ತುಂಬಾ ಹದನಾಗಿದ್ದರೆ, ಮಳೆ ಆದಮೇಲೆ ಮಣ್ಣಿನ ಮೇಲ್ಮೈ ಗಟ್ಟಿಯಾಗುತ್ತದೆ. ಮುಂದೆ ಬಿದ್ದ ಮಳೆ ಮಣ್ಣಿನೊಳಗೆ ಇಳಿಯದೆ ಮೇಲೆ ಹರಿದು ಹಾಳಾಗುತ್ತದೆ.
ಭೂಮಿಯನ್ನು ಉಳಬೇಕಾದರೆ ಒಂದು ಹದವಾದ ತೇವದ ಮಟ್ಟ ಅಗತ್ಯ. ಹಾಗಿದ್ದರೆ ಮಾತ್ರ ಮಣ್ಣು ಹುಡಿಹುಡಿಯಾಗುತ್ತದೆ. ಉಳುಮೆಯ ಶ್ರಮವೂ ಹೆಚ್ಚಿರುವುದಿಲ್ಲ. ಈ ಹದ ಕಂಡುಕೊಳ್ಳುವುದಕ್ಕೆ ಕೈಯಿಂದ ಉಂಡೆ ಮಾಡಿ, ಎದೆ ಎತ್ತರದಿಂದ ಕೆಳಗೆ ಬಿಡಬೇಕು. ಅದು ಪುಡಿ ಪುಡಿಯಾದಲ್ಲಿ, ಉಳುಮೆಗೆ ಹದ ಸರಿಯಾಗಿರುತ್ತದೆ. ತೇವ ಹೆಚ್ಚಾಗಿದ್ದರೆ ಉಂಡೆ ಮಣ್ಣು ಚಪ್ಪಟೆಯಾಗುತ್ತದೆ. ತೇವ ತೀರ ಕಡಿಮೆಯಿದ್ದಾಗ ಉಂಡೆ ಕಟ್ಟುವುದು ಆಗುವುದಿಲ್ಲ. ರೈತರು ಅನುಭವದಿಂದ ಉಳುಮೆಗೆ ಹದವಾದ ತೇವ ಇದೆಯೆ ಇಲ್ಲವೆ ಎನ್ನುವುದನ್ನು ನಿರ್ಧರಿಸಬಲ್ಲರು.
ಮೊದಲ ಉಳುಮೆ : ಪೈರು ಕೊಯಿಲಾದ ಮೇಲೆ ಮುಂದಿನ ಬಿತ್ತನೆಯವರೆಗಿನ ಎಲ್ಲ ಉಳುಮೆ ಕೆಲಸಗಳಿಗೆ ಪೂರ್ವಭಾವಿ ಉಳುಮೆ ಎನ್ನುತ್ತಾರೆ. ಇದರ ಮುಖ್ಯ ಉದ್ದೇಶ, ಭೂಮಿ ಸಡಿಲವಾಗಿದ್ದು ಹುಡಿ ಹುಡಿಯಾಗಿದ್ದು, ಬೀಜ ಮೊಳೆತು, ಸಸ್ಯ ಬೆಳೆಯುವುದಕ್ಕೆ ಹಿತಕರ ವಾತಾವರಣ ಕಲ್ಪನೆ. ಈ ಕೆಲಸಕ್ಕೆ ಹೊರದೇಶಗಳಲ್ಲಿ ವಿವಿಧ ಸಲಕರಣೆಗಳನ್ನು ಬಳಸುತ್ತಾರೆ. ಭಾರವಾದ ನೇಗಿಲಿನಿಂದ ಭೂಮಿಯನ್ನು ಉತ್ತು ಮಣ್ಣನ್ನು ಹೆಂಟೆ ಹೆಂಟೆಯಾಗಿ ಮಾಡುತ್ತಾರೆ. ಅನಂತರ ಕುಂಟೆ ಹೊಡೆದು ಹೆಂಟೆಯನ್ನು ಒಡೆದು ಭೂಮಿ ಹಸನು ಮಾಡುತ್ತಾರೆ. ಕುಂಟೆ ಹಲ್ಲುಗಳು ಮಣ್ಣಿನ ಒಳಗಡೆ ಇಳಿದು ಹೆಂಟೆ ಸಣ್ಣ ಸಣ್ಣ ಚೂರುಗಳಾಗುತ್ತವೆ. ಅನಂತರ ಹಲುಬೆ ಹೊಡೆದು ಮಣ್ಣನ್ನು ಹದ ಮಾಡುತ್ತಾರೆ. ಕೆಲ ಸಂದರ್ಭಗಳಲ್ಲಿ ರೋಣಗಲ್ಲನ್ನು ಹಾಯಿಸಿ ಹೆಂಟೆ ಪುಡಿ ಮಾಡಿ ಬಿತ್ತನೆಗೆ ನೆಲ ಹದ ಮಾಡುತ್ತಾರೆ. ಈ ವಿಧದ ಮುಟ್ಟುಗಳ ಬಳಕೆಯ ಉದ್ದೇಶ ಹಂತ ಹಂತವಾಗಿ ಮಣ್ಣನ್ನು ಕೃಷಿ ಮಾಡಿ ಅದನ್ನು ಹದಕ್ಕೆ ತರುವುದೇ ಆಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಉಳುಮೆಗೆ ಮುಖ್ಯ ಸಾಧನ ನೇಗಿಲು. ಪದೇ ಪದೇ ನೇಗಿಲು ಹಾಯಿಸಿ ಮಣ್ಣನ್ನು ಬಿತ್ತನೆಗೆ ಅನುಕೂಲ ಮಾಡುತ್ತಾರೆ. ಪೂರ್ವಾಭಾವಿ ಕೃಷಿ ಸಹಜವಾಗಿ ಪೈರು, ಮಣ್ಣಿನ ಗುಣ, ಹವಾಗುಣ ಮತ್ತು ಆ ಪ್ರದೇಶದಲ್ಲಿ ಜಾರಿಯಲ್ಲಿರುವ ಕೃಷಿ ಪದ್ಧತಿಗಳನ್ನವಲಂಬಿಸಿರುತ್ತದೆ. ಸೂಕ್ಷ್ಮ ಬೆಳೆಗಳಾದ ಹೊಗೆಸೊಪ್ಪು ಮುಂತಾದವಕ್ಕೆ ಭೂಮಿ ಹೆಚ್ಚು ಹಸನಾಗಿರಬೇಕು. ಜೇಡಿಮಣ್ಣಿನ ಉಳುಮೆಗೆ ತೇವ ಒಂದು ಹದವಾದ ಮಟ್ಟದಲ್ಲಿರುವುದು ಅತ್ಯಗತ್ಯ. ಉಳುಮೆಯ ಆಳ ಸಹ ಮಳೆಯ ಪ್ರಮಾಣವನ್ನವಲಂಬಿಸಿರುತ್ತದೆ. ಮಳೆ ಕಡಿಮೆ ಇರುವ ಸನ್ನಿವೇಶಗಳಲ್ಲಿ ಆಳವಾಗಿ ಉತ್ತರೆ ಮಣ್ಣಿನ ತೇವ ಆರಿಹೋಗುತ್ತದೆ. ತೋಟಗಳಲ್ಲಿ ಪದೇ ಪದೇ ಕೃಷಿ ಮಾಡಿ ಭೂಮಿಯನ್ನು ಸೆಬ್ಬೆಯಲ್ಲಿಡುವುದು ಲಾಭದಾಯಕ. ಸಾಮಾನ್ಯವಾಗಿ ಬೇಸಗೆಯಲ್ಲಿ, ಮೊದಲ ಮಳೆ ಬಂದಾಗ ಉಳುಮೆ ಪ್ರಾರಂಭವಾಗುತ್ತದೆ. ಅದಾದಮೇಲೆ ಬಿತ್ತನೆಯ ಮಳೆ ಬರುವವರೆಗೂ ಅನುಕೂಲವಾದಷ್ಟು ಸಲ ಉಳುತ್ತಾರೆ. ಹೊಲಗಳನ್ನು ಎರಡು ಮೂರು ಬಾರಿಯಾದರೂ ಉಳುವುದು ಸಾಧಾರಣ. ತೀವ್ರ ಬೇಸಾಯ ಜಾರಿಯಲ್ಲಿರುವೆಡೆ ನಾಲ್ಕು, ಐದು ಸಲ ಉಳುವುದು ರೂಢಿ. ನೀರಾವರಿ ಬೇಸಾಯಕ್ಕೆ ತಯಾರಿಸುವ ಭೂಮಿಗಳಲ್ಲಿ ಬಿತ್ತನೆಗೆ ಮುಂಚೆ ನೀರು ಹಾಯಿಸುವುದಕ್ಕೆ ಬೇಕಾದಂತೆ ಕಾಲುವೆಗಳನ್ನು, ದಿಂಡುಗಳನ್ನು ಮತ್ತು ಬಿತ್ತನೆ ಸಾಲುಗಳನ್ನು ಇಲ್ಲವೆ ಪಾತಿಗಳನ್ನು ಮಾಡುತ್ತಾರೆ.
ಬತ್ತದ ಗದ್ದೆಗಳಲ್ಲಿ ಎರಡು ಮೂರು ಅಂಗುಲ ಆಳದ ನೀರು ಯಾವಾಗಲೂ ನಿಲ್ಲುವುದು ಅಗತ್ಯ. ಮೊದಲ ಬಾರಿ ನೀರು ಕಟ್ಟಿ ಉಳುಮೆ ಆದಮೇಲೆ, ಪುನಃ ನೀರು ನಿಲ್ಲಿಸಿ ತುಳಿದು ಕೆಸರು ಮಾಡುತ್ತಾರೆ. ಹೀಗೆ ಮಾಡುವುದರಿಂದ, ನೇಗಿಲ ಆಳಕ್ಕಿಂತ ಕೆಳಗಿರುವ ಮಣ್ಣು ಇನ್ನೂ ಹೂತು, ನೀರು ಬಸಿಯುವುದು ಕಡಿಮೆಯಾಗುತ್ತದೆ; ಗದ್ದೆಯಲ್ಲಿ ನೀರು ನಿಲ್ಲುವುದು ಸಾಧ್ಯವಾಗುತ್ತದೆ. ಮೊದಲ ಉಳುಮೆಯ ಸಮಯದಲ್ಲಿಯೇ ಹೊಂಗೆ ಮುಂತಾದ ಹಸಿರೆಲೆ ಗೊಬ್ಬರಗಳನ್ನು ಭೂಮಿಯಲ್ಲಿ ಸೇರಿಸುತ್ತಾರೆ. ಅದು 2-3 ವಾರಗಳಲ್ಲಿ ಕೊಳೆತು ಮಣ್ಣಿನೊಡನೆ ಸೇರುತ್ತದೆ. ಮತ್ತೆ ಒಂದೆರಡು ಬಾರಿ ಭೂಮಿಯನ್ನು ಉತ್ತು ಮಟ್ಟಸದ ಹಲಗೆಯ ಬಳಕೆಯಿಂದ ಸಮ ಮಾಡುತ್ತಾರೆ. ಹೀಗೆ ಮಾಡುವುದರಿಂದ ನೀರು ಎಲ್ಲ ಭಾಗಗಳಲ್ಲೂ ಒಂದೇ ಮಟ್ಟದಲ್ಲಿ ನಿಲ್ಲುವುದು ಸಾಧ್ಯವಾಗುತ್ತದೆ.
ಭೂ ಸಾಗುವಳಿ : ಸಾಗುವಳಿಗೆ ಬಳಸುವ ಉಪಕರಣಗಳನ್ನು ಕೆಲಸದ ಉದ್ದೇಶದ ಆಧಾರದ ಮೇಲೆ ಮುಖ್ಯವಾಗಿ ಮೂರು ಗುಂಪು ಮಾಡಬಹುದು : 1. ಗಡುಸಾದ ನೆಲವನ್ನು ಸಡಿಲ ಮಾಡಿ ಹೆಂಟೆಯನ್ನು ಬಿಡಿಸುವಂಥವು. 2. ಹೆಂಟೆಯನ್ನು ಒಡೆದು ಪುಡಿಮಾಡುವಂಥವು. 3. ಪುನಃ ಮೇಲ್ಮಣ್ಣನ್ನು ಪೈರಿಗೆ ಅಗತ್ಯವಾದಂತೆ ಸಮವಾಗಿ ಹರಡುವಂಥವು ಇಲ್ಲವೆ ಮಟ್ಟಸಮಾಡಿ ಒತ್ತುಗೂಡಿಸುವಂಥವು. ಮೊದಲ ಕೆಲಸಕ್ಕೆ ಹೆಚ್ಚು ಶ್ರಮ ಅಗತ್ಯ. ಇದಕ್ಕೆ ನೇಗಿಲನ್ನು ಬಳಸುತ್ತಾರೆ. ಅನಂತರ ಹರಗಿ ಇಲ್ಲವೆ ಕುಂಟೆ ಹೊಡೆದು ಹೆಂಟೆಯನ್ನು ಪುಡಿ ಮಾಡಬಹುದು.
ನೇಗಿಲು : ಇದು ದೇಶಾದ್ಯಂತ ಬಳಕೆಯಲ್ಲಿರುವ ಅತಿಮುಖ್ಯ ಸಾಗುವಳಿ ಸಾಧನ. ದೇಶೀ ನೇಗಿಲುಗಳು ಎಲ್ಲ ಭಾಗಗಳಲ್ಲೂ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತವೆ. ಭೂಲಕ್ಷಣ ಮತ್ತು ಆ ಭಾಗದಲ್ಲಿ ದೊರೆಯುವ ಎತ್ತುಗಳ ಸಾಮಥ್ರ್ಯಗಳಿಗೆ ತಕ್ಕಂತೆ ನೇಗಿಲುಗಳ ಗಾತ್ರ ವ್ಯತ್ಯಾಸವಾಗುತ್ತದೆ. ಎರೆ ಭೂಮಿ ಬಹಳ ಜಿಗುಟಾದ್ದರಿಂದ ಆ ಪ್ರದೇಶಗಳಲ್ಲಿ ನೇಗಿಲುಗಳು ದೊಡ್ಡವಾಗಿರುತ್ತವೆ.
ನೇಗಿಲನ್ನು ಮನುಷ್ಯ ಯಾವಾಗ ಕಂಡುಹಿಡಿದ ಎನ್ನುವ ವಿಷಯದಲ್ಲಿ ದಾಖಲೆ ಸಿಕ್ಕುವುದು ಕಷ್ಟ. ಪ್ರಪಂಚದ ಎಲ್ಲ ಭಾಗಗಳಲ್ಲೂ 18ನೆಯ ಶತಮಾನದ ಮಧ್ಯಭಾಗದವರೆಗೂ ಮರದ ನೇಗಿಲೇ ಬಳಕೆಯಲ್ಲಿತ್ತು. ಕಬ್ಬಿಣದ ಗುಳ ಸೇರಿಸಿದ ನೇಗಿಲುಗಳ ಉಪಯೋಗ ಯೂರೋಪಿನ ಕೆಲಭಾಗಗಳಲ್ಲಿ ಆಮೇಲೆ ಬಳಕೆಗೆ ಬಂತು. 18ನೆಯ ಶತಮಾನದ ಉತ್ತರಾರ್ಧದಲ್ಲಿ ಮೊದಲ ಬಾರಿಗೆ ಕಬ್ಬಿಣದ ನೇಗಿಲುಗಳು ಇಂಗ್ಲೆಂಡಿನಲ್ಲಿ ತಯಾರಾದವು. ಭಾರತದಲ್ಲಿ ಇವುಗಳ ಬಳಕೆ ಸುಮಾರು 1920ರ ಸಮಯದಲ್ಲಿ ಆಯಿತಾದರೂ ರೈತರಿಗೆ ಇವು ಅಷ್ಟು ಪ್ರಿಯವಾಗಿಲ್ಲ. ಕಾರಣ ಅದರ ಹೆಚ್ಚಿನ ಬೆಲೆ, ಹಳ್ಳಿಯಲ್ಲೇ ತಯಾರಾದ ನಾಡು ನೇಗಿಲೇ ಅವರಿಗೆ ಕೊಳ್ಳಲು ಸುಲಭ.
ಮರದ ನೇಗಿಲು : ನೇಗಿಲ ಬುಡ ಅಥವಾ ದಿಂಡು ಮಾಡುವುದಕ್ಕೆ ಬಾಗಿದ ಜಾಲಿಮರದ ತುಂಡನ್ನು ಉಪಯೋಗಿಸುವುದು ಸಾಮಾನ್ಯ. ತುಂಡಿನ ಎರಡು ಬಾಹುಗಳ ಮಧ್ಯ ಕೋನ 1350 ಇರುತ್ತದೆ. ಈ ಬುಡಕ್ಕೆ ಒಂದು ಮಟ್ಟಗೋಲು ಅಥವಾ ಮೇಳಿ ಸೇರಿಸುತ್ತಾರೆ. ಮುಂದಕ್ಕೆ ಸಾಗಲು ಅನುಕೂಲವಾಗುವಂತೆ ಚಾಲಕದಂಡ ಅಥವಾ ಈಸು (ಷ್ಯಾಫ್ಟ್ ಪೋಲ್) ಸೇರಿಸಲ್ಪಟ್ಟಿರುತ್ತದೆ. ಬುಡದ ಕೆಳಬಾಹುವನ್ನು ಬೆಣೆಯಾಕಾರಕ್ಕೆ ಕೆತ್ತಿ ಅದರ ಕೊನೆಗೆ ಚಪ್ಪಟೆಯಾದ ಕಬ್ಬಿಣದ ಪಟ್ಟಿ ಅಥವಾ ಗುಳವನ್ನು ಬಂಧಿಸಿರುತ್ತಾರೆ. ಇವೇ ನೆಲವನ್ನು ಚುಚ್ಚಿ ಸಡಿಲಪಡಿಸುವ ಸಾಧನ. ಕೆಸರುಗದ್ದೆಗಳಲ್ಲಿ ಹಗುರವಾದ ನೇಗಿಲನ್ನು ಬಳಸುತ್ತಾರೆ. ಹೊಲ ಮತ್ತು ತೋಟದ ಉಳುಮೆಗೆ ಸ್ವಲ್ಪ ಭಾರವಾದ ನೇಗಿಲು ಹೆಚ್ಚು ಪ್ರಯೋಜನಕಾರಿ.
ಭೂಮಿಯನ್ನು ನೇಗಿಲಿಂದ ಉತ್ತಾಗ, ಗುಳ ಮಣ್ಣಿನಲ್ಲಿ ಮುಂದೆ ಸಾಗಿದಂತೆ ನೇಗಿಲ ಸಾಲು ಏರ್ಪಡುತ್ತದೆ. ಭೂಮಿ ಸೀಳು ಬಿಟ್ಟು ಸೀಳಿನ ಎರಡು ಕಡೆಯೂ ಮಣ್ಣು ಒತ್ತಾಗುತ್ತದೆ. ಎರಡು ಸಾಲುಗಳ ಮಧ್ಯೆ ಇರುವ ನೆಲ ಉಳುಮೆಯಾಗದೆ ಹಾಗೆ ಉಳಿಯುತ್ತದೆ. ನಾಲ್ಕಾರು ಬಾರಿ ಉತ್ತಾಗಲೇ ಭೂಮಿ ಎಲ್ಲೆಡೆ ಸಡಿಲವಾಗುವುದು ಸಾಧ್ಯ. ಉಳುಮೆಯಿಂದ 4-5 ಅಂಗುಲ ಆಳದ ಮಣ್ಣು ಸಡಿಲವಾಗುತ್ತದೆ. ಸಾಲಿನ ಆಳ ಮತ್ತು ಅಗಲ ಸಾಮಾನ್ಯವಾಗಿ ಒಂದು ನೇಗಿಲಿಗೆ ಒಂದೇ ರೀತಿ ಇರುತ್ತದೆ. ನೇಗಿಲ ಬುಡವನ್ನು ಸ್ವಲ್ಪ ಹಿಂದಕ್ಕೆ ಸರಿಸಿ, ನೊಗ ಮತ್ತು ದಿಂಡುಗಳನ್ನು ಸೇರಿಸುವ ಈಸುಮರದ ಉದ್ದವನ್ನು ಹೆಚ್ಚಿಸಿದಾಗ ಸಾಲಿನ ಆಳ ಸ್ವಲ್ಪಮಟ್ಟಿಗೆ ಹೆಚ್ಚಾಗುತ್ತದೆ. ಈಸುಮರವನ್ನು ಕಿರಿದು ಮಾಡಿದಾಗ ಸಾಲಿನ ಆಳ ಕಡಿಮೆಯಾಗುತ್ತದೆ.
ಭಾರತದ ಬಹುಮಂದಿ ರೈತರ ಹತ್ತಿರ ಇರುವ ಏಕೈಕ ಸಾಧನ ನೇಗಿಲು. ಉಳುಮೆ ಉತ್ತ ಭೂಮಿಯನ್ನು ಹಸನು ಮಾಡುವುದು, ಎರಚಿದ ಗೊಬ್ಬರವನ್ನು ಭೂಮಿಯಲ್ಲಿ ಸೇರಿಸುವುದು, ಮಧ್ಯಂತರ ಸಾಗುವಳಿ, ಪೈರು ಒತ್ತಾಗಿದ್ದಾಗ ವಿರಳ ಮಾಡುವುದಕ್ಕೆ, ಕಳೆನಾಶಕ್ಕೆ ಮತ್ತಿತರ ಅನೇಕ ಕಾರ್ಯಗಳಿಗೆ ನೇಗಿಲನ್ನು ಬಳಸುವುದು ಸಾಮಾನ್ಯ. ನೇಗಿಲನ್ನು ವಿವಿಧ ರೀತಿಯ ಮಣ್ಣುಗಳ ಸಾಗುವಳಿಗೆ ಉಪಯೋಗಿಸಬಹುದು. ತೇವ ಸಾಕಾದಷ್ಟಿರಬೇಕು, ಅಷ್ಟೆ. ಮಳೆ ಬಂದು ಭೂಮಿಯಲ್ಲಿ ತೇವ ಆರುವುದಕ್ಕೆ ಮುಂಚೆ ಉಳುಮೆ ಮಾಡಿ ಮುಗಿಸುವುದು ಮಳೆ ಅನಿಶ್ಚಿತವಿರುವ ಪ್ರದೇಶಗಳಲ್ಲಿ ಅತಿಮುಖ್ಯ.
ದೇಶೀ ನೇಗಿಲನ್ನು ಹಳ್ಳಿಯಲ್ಲೇ ಒದಗುವ ಸಾಧನಗಳಿಂದ ತಯಾರು ಮಾಡಬಹುದು. ವೆಚ್ಚ ತೀರ ಕಡಿಮೆ. ಕೆಟ್ಟು ಕೂತರೆ ಹಳ್ಳಿಯ ಬಡಿಗ(ಕುಂಬಾರ) ತತ್‍ಕ್ಷಣ ಸರಿ ಮಾಡಬಲ್ಲ. ಅದನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಏನೂ ಕಷ್ಟದ ಕೆಲಸವಲ್ಲ. ಭಾರತದ ರೈತರಿಗಂತೂ ಇದು ಬಹಳ ಸುಲಭ ಸಾಧನ. ಸೀಮೆ ನೇಗಿಲು: ಪಾಶ್ಚಾತ್ಯ ದೇಶಗಳಲ್ಲಿ ಕಬ್ಬಿಣದ ನೇಗಿಲು ಬಳಕೆಗೆ ಬಂದಿದ್ದು ಸುಮಾರು 18ನೆಯ ಶತಮಾನದ ಮಧ್ಯ ಭಾಗದಲ್ಲಿ. ಇದು ಸಮಕೋನ ತ್ರಿಕೋನಾಕೃತಿಯ ನಿಲವನ್ನು ಹೊಂದಿದೆ. ತಳ ಮತ್ತು ಪಕ್ಕಗಳ ಮಧ್ಯ ಸಮ ಕೋನಾಂತರವಿರುತ್ತದೆ. ಅವು ಮಣ್ಣನ್ನು ತ್ರಿಕೋನಾಕಾರದಲ್ಲಿ ಛೇದಿಸುತ್ತವೆ. ಹೀಗೆ ಕತ್ತರಿಸಿದ ಮಣ್ಣು, ನೇಗಿಲ ಬೆಣೆಗೆ ಪಕ್ಕದಲ್ಲಿ ಸಜ್ಜಿಸಿರುವ, ಬಾಗಿ ತಿರುಚಿದ ಕಬ್ಬಿಣದ ಉಂಗುರದ ಕ್ರಿಯೆಯಿಂದ, ಅದಕ್ಕೆ ಎದುರಾಗಿ ಪಕ್ಕದಲ್ಲಿ ಬೀಳುತ್ತದೆ. ಮರದ ನೇಗಿಲಿಗೂ ಕಬ್ಬಿಣದ ನೇಗಿಲಿಗೂ ಇರುವ ವ್ಯತ್ಯಾಸ ಹೀಗಿದೆ. ಕಬ್ಬಿಣದ ನೇಗಿಲನ್ನು ಬಳಸಿದಾಗ ಸಡಿಲವಾದ ಮಣ್ಣು ಒಂದೇ ಪಕ್ಕಕ್ಕೆ ಬೀಳುತ್ತದೆ. ಬಿಡಿಸಿದ ಮಣ್ಣಿನ ಭಾಗ ಆಯಾತಾಕಾರದ್ದಾಗಿರುತ್ತದೆ. ಮರದ ನೇಗಿಲಿನಿಂದ ಬಿಡಿಸಿದ ಮಣ್ಣಿನ ಹೆಂಟೆ ತ್ರಿಕೋನಾಕಾರದ್ದು ಮತ್ತು ಅದು ಸಾಲಿನ ಎರಡು ಕಡೆಯೂ ಬೀಳುತ್ತದೆ. ಎರಡು ಸಾಲಿನ ಮಧ್ಯದ ಭಾಗ ಉಳುಮೆಯಾಗಿರುವುದಿಲ್ಲ. ಕಬ್ಬಿಣದ ನೇಗಿಲಿನಿಂದ ಆಯಾಕಾರದ ಮಣ್ಣಿನ ಹೆಂಟೆಗಳು ಬಿಡುಗಡೆಯಾಗಿ ಸಾಲಿನ ಮಧ್ಯೆ ಉಳುಮೆಯಾಗದ ಜಾಗ ಏನೂ ಉಳಿಯುವುದಿಲ್ಲ. ನೇಗಿಲಿನ ಮುಖ್ಯ ಭಾಗಗಳು, ಗುಳ ಮತ್ತು ಮಗುಚು ಹಲಗೆಗಳ ರಚನೆಗಳಲ್ಲಿ ಕೆಲಸಕ್ಕೆ ಅಗತ್ಯವಾದಂತೆ ವ್ಯತ್ಯಾಸ ಮಾಡಿಕೊಳ್ಳುವ ಸೌಲಭ್ಯವೂ ಉಂಟು. ಅಲಗು ಕುಂಟೆ: ನೇಗಿಲಿಗೆ ಬದಲು ಮೊದಲ ಉಳುಮೆಗೆ, ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಇದನ್ನು (ಬ್ಲೇಡ್ ಹ್ಯಾರೊ) ಉಪಯೋಗಿಸುತ್ತಾರೆ. 6 ಅಂಗುಲ ಗಾತ್ರದ ಮರದ ತುಂಡು ಇದರ ಮುಖ್ಯ ಅಂಗ. ಇದಕ್ಕೆ ಮಟ್ಟುಗೋಲು, ಈಸುಮರ ಮತ್ತು ಅಲಗುಗಳನ್ನು ಸಜ್ಜಿಸಿರುತ್ತಾರೆ. ಅಲಗು 3 ಅಡಿ ಉದ್ದ, 3 ಅಂಗುಲ ಅಗಲ, ಅರ್ಧ ಅಂಗುಲ ದಪ್ಪ ಇರುತ್ತದೆ. ಅಗತ್ಯಕ್ಕನುಕೂಲವಾಗುವಂತೆ ಈ ಕುಂಟೆಯ ಅಂಗಗಳನ್ನು ವ್ಯತ್ಯಾಸ ಮಾಡಬಹುದು. ನೇಗಿಲ ಗುಳ ಕತ್ತರಿಸಿದಂತೆ ಕುಂಟೆಯಿಂದ ಸಾಲು ಉಳುಮೆಯಾಗುವುದಿಲ್ಲ. ಅದಕ್ಕೆ ಬದಲು, ಅಲಗು 3-4 ಅಂಗುಲ ಆಳದಲ್ಲಿ ಭೂಮಿಯಲ್ಲಿ ಹರಿದು ಮಣ್ಣು ಇರುವೆಡೆಯೆ ಸಡಿಲವಾಗುತ್ತದೆ. ಮೇಲ್ಮೈಯಲ್ಲಿನ ಕಳೆಗಳು ನಾಶವಾಗುತ್ತವೆ. ಹಿಂದಿನ ಪೈರಿನ ಕೂಳೆಗಳಿದ್ದಲ್ಲಿ ಅವು ಹಾಗೆಯೇ ಮೇಲ್ಪದರದಲ್ಲೇ ಹೊದಿಕೆಯಂತೆ ಉಳಿಯುತ್ತವೆ.
ಜಂತು ಕುಂಟೆ: ಈ ಸಜ್ಜಿಗೆ ಅನೇಕ ಹಲ್ಲುಗಳಿರುತ್ತದೆ. ಇವು ಹೆಂಟೆಯೊಳಗೆ ಇಳಿದು ಅವನ್ನು ಪುಡಿ ಮಾಡುತ್ತವೆ. ಈ ಹಲ್ಲುಗಳನ್ನು 7 ರಿಂದ 9 ಅಂಗುಲ ಅಂತರದಲ್ಲಿ ಸಜ್ಜಿಸಿರುತ್ತಾರೆ. ಇವುಗಳ ಉದ್ದ 9 ರಿಂದ 12 ಅಂಗುಲ. ಕಬ್ಬಿಣದ ನೇಗಿಲಿನಿಂದ ಉತ್ತು ದೊಡ್ಡ ಹೆಂಟೆ ಇದ್ದಾಗ ಮಾತ್ರ ಕುಂಟೆಯನ್ನು ಬಳಸುತ್ತಾರೆ. ಹಲುಬೆ: ಇದಕ್ಕೂ ಅನೇಕ ಹಲ್ಲುಗಳಿರುತ್ತವೆ. ಕುಂಟೆ ಹೊಡೆದಾಗ ಮೇಲೆ ಉಳಿದಿರಬಹುದಾದ ಸಣ್ಣ ಹೆಂಟೆಗಳನ್ನು ಹುಡಿ ಮಾಡಿ, ಭೂಮಿಯನ್ನು ಬಿತ್ತನೆಗೆ ಹದ ಮಾಡಲು ಇದರಿಂದ ಅನುಕೂಲ, ಹಲ್ಲುಗಳ ಮಧ್ಯದ ಅಂತರ 2-3 ಅಂಗುಲವಿದ್ದು, ಉದ್ದ 4 ಅಂಗುಲಕ್ಕಿಂತ ಹೆಚ್ಚಿರುವುದಿಲ್ಲ. ಹಲುಬೆಯಲ್ಲಿ ಅನೇಕ ವಿಧ. ತುದಿಯಲ್ಲಿ ಹಲ್ಲುಗಳು, ಮೊಳೆ, ಬಾಚಿ, ಇಲ್ಲವೇ ಬಿಲ್ಲೆಗಳು ಇರಬಹುದು. ಸಾಲು ಬೆಳೆಗಳ ಮಧ್ಯದಲ್ಲಿ ಕೃಷಿ ಮಾಡಲು ಸೂಕ್ತರೀತಿಯಲ್ಲಿ ಸಜ್ಜಿಸಿರುವ ಹಲುಬೆಗಳು ಬಳಕೆಯಲ್ಲಿವೆ. ಈ ಎಲ್ಲ ಸಲಕರಣೆಗಳ ಕೆಲಸಕ್ಕೂ ಎತ್ತೇ ಆಧಾರ. ಅನೇಕ ಕಡೆ ಬರಡು ಹಸುಗಳನ್ನೂ ಕೋಣಗಳನ್ನೂ, ಕತ್ತೆಗಳನ್ನು ಬಳಸುತ್ತಾರೆ. ಪಶ್ಚಿಮ ರಾಷ್ಟ್ರಗಳಲ್ಲಿ ಕುದುರೆಗಳ ಬಳಕೆ ಹೆಚ್ಚು. ಅರೇಬಿಯದಂಥ ಮರಳುಭೂಮಿ ಪ್ರದೇಶದಲ್ಲಿ ಒಂಟೆಗಳ ಬಳಕೆ ಇದೆ. ಇತ್ತೀಚಿನ ದಿನಗಳಲ್ಲಿ ಬೇಸಾಯದ ಕೆಲಸಕ್ಕೆ ಯಂತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಎತ್ತುಗಳ ಬದಲು ಟ್ರ್ಯಾಕ್ಟರ್ ಬಳಕೆಗೆ ಬರುತ್ತಿದೆ. ಹಾಗೆಯೇ ಬತ್ತದ ಗದ್ದೆಗಳನ್ನು ಉಳುವುದಕ್ಕೆ ಯಾಂತ್ರಿಕ ನೇಗಿಲು ರೂಢಿಗೆ ಬಂದು ಜನಪ್ರಿಯವಾಗುತ್ತಿದೆ.
ಉಳುಮೆಯ ಕೆಲಸಗಳಿಗಾಗಿ ಬಳಸುವ ಯಂತ್ರಗಳಲ್ಲಿ ಟ್ರ್ಯಾಕ್ಟರಿನದು ಬಲು ಮುಖ್ಯ ಪಾತ್ರ. ಆಡು ಮುಟ್ಟದ ಗಿಡವಿಲ್ಲವೆನ್ನುವಂತೆ ಹೊಲದಲ್ಲಿ ಟ್ರ್ಯಾಕ್ಟರಿನಿಂದ ಮಾಡಲಾಗದ ಕೆಲಸವೇ ಇಲ್ಲವೆಂದು ಹೇಳಬಹುದು. ಬೀಜ ಬಿತ್ತಲು ನೆಲ ಹದಮಾಡುವುದರಿಂದ ಹಿಡಿದು ಬೆಳೆದ ಬೆಳೆಯ ಕೊಯ್ಲು ಮಾಡಿ ಧಾನ್ಯವನ್ನು ಶೇಖರಿಸಿ ಮನೆಗೆ ತರುವವರೆಗಿನ ಎಲ್ಲ ಕೆಲಸಗಳಿಗೂ ಇದನ್ನು ಬಳಸಬಹುದು.
ಟ್ರ್ಯಾಕ್ಟರ್ ಮೊದಲು ಕಾಣಿಸಿಕೊಂಡದ್ದು ಅಮೆರಿಕಾದಲ್ಲಿ, ಸುಮಾರು 1880ರ ಹೊತ್ತಿಗೆ. ಆದರೆ ಟ್ರ್ಯಾಕ್ಟರ್ ಎಂಬ ಪದ ಬಳಕೆಗೆ ಬಂದದ್ದು 1906ರಿಂದೀಚೆಗೆ. ಮೊದಮೊದಲು ಇದನ್ನು ಭಾರ ಸಾಗಿಸಲಷ್ಟೇ ಉಪಯೋಗಿಸುತ್ತಿದ್ದರು. ಕಾಲ ಕಳೆದಂತೆ ಕೃಷಿ ಕೆಲಸಗಳಿಗಾಗಿಯೇ ಇದರ ಉಪಯೋಗ ಹೆಚ್ಚಿತ್ತು. ಸಾಮಾನ್ಯವಾಗಿ ಕೃಷಿಕೆಲಸಗಳಲ್ಲಿ ಸಂದರ್ಭೋಚಿತವಾಗಿ ಉಳುವ, ಬಿತ್ತುವ, ಕೊಯ್ಯುವ, ಬೀಜಗಳನ್ನು ಬೇರ್ಪಡಿಸುವ- ಮೊದಲಾದ ಕೆಲಸಗಳಿಗೆ ಬೇಕಾಗುವ ಯಂತ್ರಭಾಗಗಳನ್ನು ಟ್ರ್ಯಾಕ್ಟರಿನ ಹಿಂದೆ ಜೋಡಿಸಿ ಬಳಸುತ್ತಾರೆ. ಹೊಲದಲ್ಲಿ ಉಳಿದ ದಂಟು ಮತ್ತು ಹುಲ್ಲನ್ನು ರಾಶಿಹಾಕಲೂ ಇದನ್ನು ಉಪಯೋಗಿಸಬಹುದು.
ಇದರ ಬಳಕೆಯಿಂದ ಕೃಷಿ ಕೆಲಸಗಳಿಗಾಗಿ ಖರ್ಚಾಗುವ ಅಪಾರ ಕೂಲಿಯನ್ನು ತಗ್ಗಿಸಬಹುದು. ಕೆಲಸದ ವೇಳೆಯನ್ನೂ ತಗ್ಗಿಸಬಹುದು. ಒಬ್ಬ ಮನುಷ್ಯ 20 ಅಶ್ವ ಸಾಮಥ್ರ್ಯದ ಒಂದು ಟ್ರ್ಯಾಕ್ಟರನ್ನು ಉಪಯೋಗಿಸಿ 200 ಜನರ ಕೆಲಸವನ್ನು ನಿಭಾಯಿಸಬಲ್ಲ.
ಭಾರತದಲ್ಲಿ ಇತ್ತೀಚೆಗೆ ಕೃಷಿಗೆ ಪ್ರಾಧಾನ್ಯ ಕೊಟ್ಟು, ರೈತರು ಆಧುನಿಕ ಯಂತ್ರಗಳನ್ನು ಬಳಸಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಭೂ ಅಭಿವೃದ್ಧಿ ಬ್ಯಾಂಕುಗಳ ಮೂಲಕ ಟ್ರ್ಯಾಕ್ಟರುಗಳನ್ನು ಹಂಚುವ ವ್ಯವಸ್ಥೆ ಮಾಡಿದೆ.
(ಬಿ.ವಿ.ವಿ.)
(ಪರಿಷ್ಕರಣೆ: ಡಾ|| ವಿ ಕುಮಾರಗೌಡ)