ಕನ್ನಡ ವರ್ಣಮಾಲೆಯ ಏಳನೆಯ ಅಕ್ಷರ. ಇದರ ಬ್ರಾಹ್ಮೀಲಿಪಿಯ ಸ್ವರೂಪ ದೊರಕಿಲ್ಲ. ಸಾಮಾನ್ಯವಾಗಿ ಕನ್ನಡದಲ್ಲಿ ಈ ಅಕ್ಷರದ ಬಳಕೆ ಬಹು ಕಡಿಮೆ. ಋಷಿ, ಋಣ ಮುಂತಾದ ಸಂಸ್ಕøತದ ಶಬ್ದಗಳು ಬಂದಾಗ ಮಾತ್ರ ಇದರ ಉಪಯೋಗ. ಅಲ್ಲೂ ತದ್ಭವ ರೂಪಗಳಾದ ರಿಸಿ, ರಿಣ ಮುಂತಾದುವು ಬಂದು ಬಿಡುತ್ತವೆ. ವ್ಯಂಜನದೊಂದಿಗೆ ಸೇರಿ ಬಂದಾಗ ಮಾತೃಕೆ, ಗೃಹ ಮೊದಲಾದ ಶಬ್ದಗಳಲ್ಲಿ ಇದರ ನಿಷ್ಕøಷ್ಟ ಉಪಯೋಗ ಉಂಟು. ವರ್ಣಮಾಲೆಯ ಎಂಟನೆಯ ಅಕ್ಷರವಾದ Iೂಕಾರದ ಬಳಕೆಯಂತೂ ಕನ್ನಡದಲ್ಲಿ ಇಲ್ಲವೇ ಇಲ್ಲ. ಸಂಸ್ಕøತದಲ್ಲಿ ಈ ಅಕ್ಷರದಿಂದ ಮೊದಲಾಗುವ ಪದಗಳು ತೀರ ವಿರಳ. ಕ್ರಿ.ಶ. ಆರನೆಯ ಶತಮಾನದ ಕದಂಬರಾಜ ಇಮ್ಮಡಿ ಕೃಷ್ಣವರ್ಮನ ಶಾಸನದಲ್ಲಿ ದೊರಕಿರುವ, ಋ ಕಾರದ ರೂಪವೇ ಬಹಶಃ ಅತಿ ಪ್ರಾಚೀನವಾದುದೆಂದು ಹೇಳಬಹುದು. ಕದಂಬ ಕಾಲದ ಈ ಅಕ್ಷರದ ಸ್ವರೂಪ, ಅದೇ ಕಾಲದ ಮ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುತ್ತದೆ. ಕ್ರಿ.ಶ. ಹನ್ನೆರಡನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಶಾಸನಗಳಲ್ಲಿ, ಈ ಅಕ್ಷರ ಭು ಎಂಬುದನ್ನು ಬಹುವಾಗಿ ಹೋಲುತ್ತದೆ. ಇದೇ ರೂಪ ಮುಂದುವರಿದು ಕ್ರಿ.ಶ. ಹದಿನೆಂಟನೆಯ ಶತಮಾನದಲ್ಲಿ ಈಗಿರುವ ರೂಪಕ್ಕೆ ಬಹು ಸಮೀಪವಾಗಿ ಕಂಡರೂ ಒಂದು ಕೊಂಡಿ ಹೆಚ್ಚಾಗಿರುವುದನ್ನು ಗಮನಿಸಬೇಕು. ಕನ್ನಡ ವರ್ಣಮಾಲೆಯ ಏಳು ಎಂಟನೆಯ ಅಕ್ಷರಗಳಾದ ಹ್ರಸ್ವ ದೀರ್ಘ ಋ, Iೂ, ವ್ಯಂಜನ ಹಾಗೂ ಅರ್ಧ ಸ್ವರ ಲಕ್ಷಣಗಳನ್ನೊಳಗೊಂಡ ಮೃದು ಧ್ವನಿಗಳನ್ನು ಸೂಚಿಸುತ್ತವೆ.

  (ಎ.ವಿ.ಎನ್.)