ಎರಿಯೊಕಾರ್ಪಸ್: ಕ್ಯಾಕ್ಟೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಅಲಂಕಾರಿಕ ಸಸ್ಯಜಾತಿ ಕಳ್ಳಿಯ ಮಾದರಿಯದಾಗಿದ್ದು ಆಕರ್ಷಕವಾಗಿದ್ದು ಮುಖ್ಯವೆನಿಸಿದೆ. ಇದು ಮೆಕ್ಸಿಕೋ ಮತ್ತು ಟೆಕ್ಸಾಸುಗಳ ಮೂಲವಾಸಿ. ಬೇರು ಬೀಟ್ಗೆಡ್ಡೆಯನ್ನು ಹೋಲುತ್ತದೆ. ಬೇರಿನ ಮೇಲು ಭಾಗದಲ್ಲಿ ವಿವಿಧ ಆಕಾರದ ಗಂಟುಗಳಿವೆ. ಗಂಟುಗಳ ಮೇಲೆ ದಪ್ಪವಾದ ತೊಗಟೆಯಿದೆ. ಬಲಿತ ಗಂಟುಗಳು ಸತ್ತುಹೋಗುತ್ತವೆ. ಆದರೆ ಇವುಗಳ ಮೇಲುಭಾಗ ಸುರಳಿಯಾಕಾರದಲ್ಲಿ ಉಳಿದು, ಸತ್ತತೊಗಟೆ ಬಿದ್ದುಹೋಗುತ್ತದೆ. ಬಲಿತ ರಂಧ್ರಗಳಿಂದ (ಏರಿಯೋಲ್ಸ್) ಹೂ ಹೊರಬರುತ್ತದೆ. ಎರಿಯೊಕಾರ್ಪಸ್ ಫಿಸ್ಸುರೇಟಸ್ ಪ್ರಭೇದದ ಕಾಂಡ ಸುಮಾರು 14 ಸೆಂಮೀ. ಅಂಗುಲ ಅಗಲವಾಗಿದ್ದು ಗುಂಡಾಗಿರುವ ಬೂದುಬಣ್ಣದ 25-30 ಗಂಟುಗಳಿಂದ ಕೂಡಿದೆ. ಗಂಟಿನ ತಳ ದೋಣಿಯ ಬೆನ್ನಿನಂತಿದೆ. ಕಾಂಡದ ಮೇಲುಭಾಗದಲ್ಲಿ ದಾರದಿಂದ ಕೂಡಿರುವ ತಗ್ಗುಭಾಗವಿದೆ. ಇದರ ಮಧ್ಯದಲ್ಲಿ ಹೂಬಿಡುವ ರಂಧ್ರವಿದೆ.
ಎರಿಯೊಕಾರ್ಪಸ್ ಟ್ರೈಗೋನಸ್ ಪ್ರಭೇದಕ್ಕೆ 5 ಸೆಂಮೀ. ಉದ್ದದ ತ್ರಿಕೋನಾಕಾರದ ಗಂಟುಗಳಿದ್ದು, ಇವುಗಳ ತುದಿಯಲ್ಲಿ ಮುಳ್ಳಿನ ರಂಧ್ರಗಳಿವೆ. ಸಸ್ಯದ ಮೇಲುಭಾಗದ ತುದಿಯ ಗಂಟುಗಳ ಕಂಕುಳಲ್ಲಿ ಹೂಬಿಡುತ್ತದೆ. ಹೂವಿನ ಜೊತೆಯಲ್ಲಿ ನಿಬಿಡವಾದ ದಾರಗಳು ಹೊರಬಂದಿರುತ್ತವೆ.
ಎರಿಯೊಕಾರ್ಪಸ್ ಸ್ಕ್ಯಾಫರೊಸ್ಟ್ರಸ್ ಪ್ರಭೇದದಲ್ಲಿ ಬೂದುಮಿಶ್ರಿತ ಹಸಿರು ಬಣ್ಣದ, ತ್ರಿಕೋನಾಕಾರದ ಗಂಟುಗಳಿವೆ. ಈ ಸಸ್ಯ ಮೆಕ್ಸಿಕೋದಲ್ಲಿ ಔಷಧೀಯ ಪ್ರಾಮುಖ್ಯ ಪಡೆದಿದೆ. ಎರಿಯೊಕಾರ್ಪಸ್ ಜಾತಿಯ ಬೆಳೆವಣಿಗೆಗೆ ಹೆಚ್ಚು ಉಷ್ಣತೆ ಮತ್ತು ಧಾರಾಳವಾದ ಬೆಳಕು ಬೇಕಾಗಿರುವುದರಿಂದ ಇದನ್ನು ಮನೆ ತೋಟಗಳಲ್ಲಿ ಬೆಳೆಸುವುದು ಕಷ್ಟಸಾಧ್ಯ. (ಡಿ.ಎಂ.)