ಎಲ್ವಿನ್, ವೆರಿಯರ್: 1902-64. ಭಾರತಕ್ಕೆ ಒಬ್ಬ ಕ್ರೈಸ್ತ ಪಾದ್ರಿಯಾಗಿ ಬಂದು, ಚರ್ಚನ್ನು ತ್ಯಜಿಸಿ ಗುಡ್ಡಗಾಡುಗಳಲ್ಲಿ ನೆಲೆಸಿ ಗಿರಿಜನರ ಜೀವನವನ್ನು ಅರಿತು ಅವರನ್ನು ಕುರಿತಂತೆ ಅನೇಕ ಗ್ರಂಥಗಳನ್ನು ಬರೆದು ಅವರ ಮೇಲ್ಮೆಗೆ ಅವಿಶ್ರಾಂತವಾಗಿ ದುಡಿದ ಮಹನೀಯ. ಮಹಾತ್ಮ ಗಾಂಧಿಯ ಪ್ರೀತಿ ಮತ್ತು ಮನ್ನಣೆಗೆ ಪಾತ್ರರಾಗಿದ್ದುದಲ್ಲದೆ ಪಂಡಿತ್ ಜವಹಾರಲಾಲ್ ನೆಹರೂ ಅವರಿಂದ ತಮ್ಮ ಕಾರ್ಯನೀತಿಗೆ ಸಂಪುರ್ಣವಾಗಿ ಬೆಂಬಲ ಪಡೆದವರು. ಎಲ್ವಿನ್ ಮಾನವಶಾಸ್ತ್ರದಲ್ಲಿ ಶಾಸ್ತ್ರೀಯ ತರಬೇತನ್ನು ಹೊಂದಿರಲಿಲ್ಲವಾದರೂ ಅವರ ಆಳವಾದ ಸಂಶೋಧನೆಗಳು ವಿಶ್ವಮಾನವಶಾಸ್ತ್ರಜ್ಞರ ಪಂಕ್ತಿಯಲ್ಲಿ ಅವರಿಗೆ ಒಂದು ವಿಶಿಷ್ಟಸ್ಥಾನವನ್ನು ದೊರಕಿಸಿಕೊಟ್ಟಿವೆ. ಅವರ ಪಾಂಡಿತ್ಯ ಕೇವಲ ಪುಸ್ತಕ ರಚನೆಗೆ ಸೀಮಿತವಾಗದೆ ಜೀವನದಲ್ಲಿ ಪ್ರತಿಫಲಿಸಿತ್ತು.
ವೆರಿಯರ್ ಎಲ್ವಿನ್ ಇಂಗ್ಲೆಡಿನ ಕೆಂಟ್ ಪ್ರಾಂತ್ಯದ ಡೋವರ್ ಎಂಬ ಊರಿನಲ್ಲಿ 1902ನೆಯ ಇಸವಿ ಆಗಸ್ಟ್ 29ರಂದು ಜನಿಸಿದರು. ತಂದೆ ಎಡ್ಮಂಡ್ ಹೆನ್ರಿ ಎಲ್ವಿನ್. ಸುಧಾರಿತ ಕ್ರೈಸ್ತ ಧರ್ಮದ ಬಿಷಪ್ ಆಗಿದ್ದ ಆತನಿಗೆ ಮಾನವ ಶಾಸ್ತ್ರದಲ್ಲಿ ಆಸಕ್ತಿಯಿತ್ತು. ಪಶ್ಚಿಮ ಆಫ್ರಿಕಕ್ಕೆ ಪಾದ್ರಿಯಾಗಿ ಹೋಗಿ ಅಲ್ಲಿ ಗಿರಿ ಜನರಲ್ಲಿ ನಿಕಟ ಸಂಬಂಧವನ್ನಿಟ್ಟುಕೊಂಡಿದ್ದು ಆಫ್ರಿಕದಲ್ಲಿಯೇ ತನ್ನ ಮೂವತ್ತೆಂಟನೆಯ ವಯಸ್ಸಿನಲ್ಲಿ ಹಳದಿಜ್ವರದಿಂದ ಮೃತನಾದ. ಆಗ ವೆರಿಯರ್ ಎಲ್ವಿನ್ ಏಳು ವರ್ಷದ ಬಾಲಕ. ತಂದೆಯಿಲ್ಲದ ಮನೆಯಲ್ಲಿ ಬಡತನದ ಮಧ್ಯೆ ಆತ ಬೆಳೆದ. ಸುಶಿಕ್ಷಿತಳೂ ಧರ್ಮಿಷ್ಠಳೂ ಆದ ತಾಯಿಯ ಪ್ರಭಾವ ಎಲ್ವಿನ್ನರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿತು. ಚೆಲ್ಟೆನ್ಹ್ಯಾಂನಲ್ಲಿದ್ದ ಡೀನ್ಕ್ಲೋಸ್ ಎಂಬ ಶಾಲೆಯಲ್ಲಿ ಇವರ ವಿದ್ಯಾಭ್ಯಾಸ ಆಯಿತು. ಅದು ಹೆಚ್ಚಾಗಿ ಧಾರ್ಮಿಕ ವಿಷಯಗಳನ್ನು ಬೋಧಿಸುವ ಶಾಲೆ. ಮೊದಲಿನಿಂದಲೂ ಎಲ್ವಿನ್ನರಿಗೆ ಸಾಹಿತ್ಯದಲ್ಲಿ ವಿಶೇಷವಾದ ಆಸಕ್ತಿ. ಸಮನ್ವಯ ಮಾಡಲಾರದ ಎರಡು ಪ್ರಪಂಚಗಳಲ್ಲಿ ನಾನಿದ್ದೆ. ಸಾಂಪ್ರದಾಯಿಕ ಕ್ರೈಸ್ತ ಧರ್ಮ ಬೋಧೆ, ಹಾಗೂ ವಡ್ರ್ಸ್‌ವರ್ತ್ ಕವಿಯ ರಹಸ್ಯಯುತ ಸರ್ವದೇವತಾರಾಧನೆ ಎರಡೂ ಒಂದರ ಪಕ್ಕದಲ್ಲೊಂದು ನಿಂತಿದ್ದುವು’-ಎಂದು ಅವರು ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ.
ಎಲ್ವಿನ್ 19ನೆಯ ವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಆಕ್ಸ್ ಫರ್ಡಿಗೆ ಹೋಗಿ ಐದು ವರ್ಷ ಅಲ್ಲೇ ವಿದ್ಯಾರ್ಥಿಯಾಗಿದ್ದರು. ಮರ್ಟ್‌ನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಷೇಕ್ಸ್‌ಪಿಯರನನ್ನು ಅಭ್ಯಾಸ ಮಾಡಿದವರಿಗೆಂದಿದ್ದ ಮೂರು ಸಾವಿರ ರೂಪಾಯಿಗಳ ಬಹುಮಾನವನ್ನು ಪಡೆದರು. ಮೂರು ವರ್ಷ ಇಂಗ್ಲೀಷ್ ಸಾಹಿತ್ಯವನ್ನೂ ಎರಡು ವರ್ಷ ಮತಧರ್ಮಶಾಸ್ತ್ರವನ್ನೂ ಅಭ್ಯಾಸಮಾಡಿ ಪದವೀಧರರಾದ ಮೇಲೆ ಕ್ರಾಂತಿಯ ಕಾವ್ಯ (ಪೊಯಟ್ರಿ ಆಫ್ ರೆವಲ್ಯೂಷನ್) ಎಂಬ ಪ್ರಬಂಧಕ್ಕೆ ಮ್ಯಾಥ್ಯೂ ಆರ್ನಲ್ಡ್ ಬಹುಮಾನ ಬಂತು. ಅನಂತರ ವೈಕ್ಲಿಫ್ ಹಾಲ್ ಎಂಬ ಕಾಲೇಜಿನಲ್ಲಿ ಉಪ-ಪ್ರಿನ್ಸಿಪಾಲರ ಹುದ್ದೆ ದೊರೆಕಿತು. ಒಂದು ವರ್ಷದ ಅನಂತರ ಅಭಿಪ್ರಾಯ ಭೇದದಿಂದಾಗಿ ಕೆಲಸಕ್ಕೆ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂತು. ಆಮೇಲೆ ಧಾರ್ಮಿಕ ಶ್ರದ್ಧೆ ಮತ್ತು ಅನುಕಂಪಗಳು ಅವರ ಗಮನವನ್ನು ಭಾರತದ ಕಡೆ ಸೆಳೆದುವು. ನನ್ನ ಮನೆತನದವರಿಗೂ ಇಂಡಿಯಕ್ಕೂ ಹಳೆಯ ಸಂಬಂಧವಿತ್ತು. ಇದಕ್ಕಿಂತ ಹೆಚ್ಚಾಗಿ ನನ್ನಲ್ಲಿದ್ದ ಏನೋ ಒಂದು ಶಕ್ತಿ ನನ್ನನ್ನು ಆ ಕಡೆ ನೂಕುತ್ತಿತ್ತು. ನನ್ನ ಪುರ್ವಿಕರು ಇಂಡಿಯದಲ್ಲಿ ಹಣವನ್ನು ಸಂಪಾದಿಸಿದ್ದರು. ನನ್ನ ದೇಶದವರು ಇಂಡಿಯಕ್ಕೆ ಹೋಗಿ ಅದನ್ನು ಶೋಷಿಸಿ, ಅದರ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದರು. ಈ ಕಾರಣ ಅದರ ಪ್ರಾಯಶ್ಚಿತ್ತಕ್ಕಾಗಿ ನಾನು ಇಂಡಿಯಕ್ಕೂ ಹೋಗಬೇಕೆನ್ನಿಸಿತು. ನನ್ನ ಮನೆತನದವರಲ್ಲಿ ಒಬ್ಬರಾದರೂ ಇಂಡಿಯದಿಂದ ತರುವುದನ್ನು ಬಿಟ್ಟುಕೊಡುವುದಕ್ಕಾಗಿ ಅಲ್ಲಿ ಹೋಗಬೇಕೆನ್ನಿಸಿತು. ಹೋಗಿ ಬಡವರನ್ನು ಆಳುವ ಬದಲು ಅವರ ಸೇವೆ ಮಾಡಬೇಕು ಮತ್ತು ಆ ದೇಶದಲ್ಲಿ ಐಕ್ಯವಾಗಬೇಕು ಎಂದು ಅನ್ನಿಸಿತು.-ಎಂದು ತಮ್ಮ ಆತ್ಮಕಥೆಯಲ್ಲಿ ಎಲ್ವಿನ್ ತಿಳಿಸಿದ್ದಾರೆ. ಈ ಮಾತಿನ ಸಂಪುರ್ಣ ಸತ್ಯತೆಗೆ ಅವರ ಜೀವನವೇ ಸಾಕ್ಷಿ. ಆಕ್ಸ್‌ಫರ್ಡಿನಲ್ಲಿದ್ದ ಸದಾವಕಾಶವನ್ನು ಬಿಟ್ಟು ಭಾರತಕ್ಕೆ ಹೋಗುವಂತೆ ಪ್ರೇರಿಸಿದ್ದು ಈ ಅರ್ಪಣ ಮನೋಧರ್ಮವೇ.
ಎಲ್ವಿನ್ ಕ್ರೈಸ್ತಪಾದ್ರಿಯಾಗಿ ಪುನದಲ್ಲಿದ್ದ ಕ್ರೈಸ್ತ ಸೇವಾಸಂಘವೆಂಬ ಆಶ್ರಮಕ್ಕೆ ಬಂದು ಸೇರಿದರು (1926). ಸ್ವಲ್ಪ ಕಾಲದಲ್ಲೆ ಆ ಆಶ್ರಮದ ಮುಖ್ಯಸ್ಥ ಜಾಕ್ವಿನ್ ಸ್ಲೋ ಅಧಿಕಾರವನ್ನು ಎಲ್ವಿನ್ನರಿಗೆ ವಹಿಸಿ ಇಂಗ್ಲೆಂಡಿಗೆ ತೆರಳಿದ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ವಿನ್ನರಿಗೆ ಸಂಪುರ್ಣ ಸಹಾನುಭೂತಿಯಿತ್ತು. ಆದ್ದರಿಂದ ತಮ್ಮ ಕ್ರೈಸ್ತ ಸೇವಾಸಂಘದ ಆಶ್ರಮದ ಮೇಲೆ ಕ್ರಾಂತಿಕಾರಕವಾದ ತ್ರಿವರ್ಣ ಧ್ವಜವನ್ನು ಅವರು ಹಾರಿಸಿದರು. ಸುಭಾಷಚಂದ್ರ ಬೋಸ ಮತ್ತು ಸರ್ದಾರ್ ಪಟೇಲರ ಸಂಗಡ ನಿಕಟ ಸಂಬಂಧವನ್ನು ಬೆಳೆಸಿದರು. 1928ರಿಂದ 1930ರವರೆಗೆ ಗಾಂಧೀಜಿ ಸಂಗಡ ಹತ್ತಿರದ ಸಂಪರ್ಕವನ್ನಿಟ್ಟುಕೊಂಡು ಅವರ ಆಶ್ರಮಕ್ಕೆ ಆಗಾಗ ಹೋಗಿಬರುತ್ತಿದ್ದರು. ಗಾಂಧೀಜಿಯ ವಾತ್ಸಲ್ಯ ಮತ್ತು ಅಭಿಮಾನವನ್ನು ಎಲ್ವಿನ್ ಸಂಪುರ್ಣವಾಗಿ ಪಡೆದಿದ್ದರು. ಮೀರಾಬೆನ್ ತಮ್ಮ ಮಗಳಾಗಿರುವಂತೆ ಎಲ್ವಿನ್ ತಮ್ಮ ಮಗ-ಎಂದು ಗಾಂಧೀಜಿ ಹೇಳಿದ್ದುಂಟು.
ಇದೇ ಕಾಲದಲ್ಲಿ ಸುಸಂಸ್ಕೃತರೂ ವಿದ್ಯಾವಂತರೂ ಆದ ಶ್ಯಾಮರಾವ್ ಹಿವಾಲೆ ಎಂಬವರು ಪುನಕ್ಕೆ ಬಂದರು. ಅವರು ಎಲ್ವಿನ್ನರ ನೆಚ್ಚಿನ ಸ್ನೇಹಿತರಾಗಿ ಬಹು ದಿನಗಳವರೆಗೆ ಅವರ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿದ್ದರು. ಗಾಂಧೀಜಿಯವರ ಪ್ರಭಾವಕ್ಕೊಳಗಾದ ಮೇಲೆ ಎಲ್ವಿನ್ನರಿಗೆ ಒಂದು ಹಳ್ಳಿಯಲ್ಲಿ ಜೀವಿಸಿ ಜನಸಾಮಾನ್ಯರಂತೆ ಬಾಳುವ ಇಚ್ಚೆಯುಂಟಾಯಿತು. ಅದರಲ್ಲೂ ಹರಿಜನರೊಂದಿಗೆ ಇರುವ ಅಭಿಲಾಷೆಯಾಯಿತು. 1930ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಆಹ್ವಾನದಂತೆ ಗುಜರಾತಿನ ಕರನಿರಾಕರಣೆಯ ಚಳವಳಿಯ ವಿಷಯವಾಗಿ ಪೋಲೀಸರ ದೌರ್ಜನ್ಯದ ಬಗ್ಗೆ ವಿಚಾರಣೆ ನಡೆಸಿ ಒಂದು ವರದಿಯನ್ನು ಸಿದ್ಧಪಡಿಸಿದರು. ಅದು ಗುಜರಾತಿನ ಹಾಳೂರು ಎಂಬ ಹೆಸರಿನಲ್ಲಿ ಒಂದು ಸಣ್ಣ ಪುಸ್ತಕದ ರೂಪದಲ್ಲಿ ಪ್ರಕಟವಾಯಿತು. ಸರ್ದಾರ್ ಪಟೇಲರು ಎಲ್ವಿನ್ನರನ್ನು ಗಿರಿಜನರ ಕಡೆಗೆ ಆಸಕ್ತಿ ವಹಿಸುವಂತೆ ಪ್ರೇರೇಪಿಸಿದರು. 1931ರಿಂದ ಅವರ ಕಡೆಯ ದಿನಗಳವರೆಗೆ ಎಲ್ವಿನ್ನರು ಅವಿಶ್ರಾಂತವಾಗಿ ಗಿರಿಜನರ ಉನ್ನತಿಗೆ ದುಡಿದರು. 1932ರಲ್ಲಿ ಶ್ಯಾಮರಾಯರ ಸಂಗಡ ಮಧ್ಯಪ್ರಾಂತ್ಯದಲ್ಲಿ ಗೋಂಡ ಜನರ ಸಣ್ಣ ಹಳ್ಳಿಯಾದ ಕರಂಜಿಯ ಎಂಬ ಗ್ರಾಮದಲ್ಲಿ ನೆಲೆಸಿದರು. 1936ರಲ್ಲಿ ಅವರು ಸಂಪುರ್ಣವಾಗಿ ಚರ್ಚಿನ ಸಂಬಂಧವನ್ನು ಕಡಿದುಹಾಕಿ ಸಮಾಜ ಕಾರ್ಯಕರ್ತರಾದರು. ಅವರು ಸ್ಥಾಪಿಸಿದ ಆಶ್ರಮದಲ್ಲಿ ಆಸ್ಪತ್ರೆ, ಶಾಲೆ, ಅತಿಥಿಗೃಹ ಮತ್ತು ಕುಷ್ಠರೋಗಿಗಳಿಗೆ ಮೀಸಲಾದ ಗುಡಿಸಲು - ಮೊದಲಾದವುಗಳಿದ್ದುವು. ಕರಂಜಿಯದ ಅನುಭವಗಳನ್ನು ಲೀವ್ಸ್ ಆಫ್ ದಿ ಜಂಗಲ್ (ಕಾಡಿನ ಎಲೆಗಳು) ಎಂಬ ಗ್ರಂಥದಲ್ಲಿ ವಿವರಿಸಿರುವರು. ಈ ಪುಸ್ತಕಕ್ಕೆ ಫ್ರಾನ್ಸಿನ ಸುಪ್ರಸಿದ್ಧ ಸಾಹಿತಿಯಾದ ರೋಮೇನ್ ರೋಲಾನ್ ಮುನ್ನುಡಿ ಬರೆದಿದ್ದಾರೆ. ಹೀಗೆ ಎಲ್ವಿನ್ನರು ತಮ್ಮ ಜೀವನವೆಲ್ಲವನ್ನೂ ಗಿರಿಜನರ ಅಧ್ಯಯನದಲ್ಲಿ ಕಳೆದರು. ಅವರು ಪಠಾನ್ಘರಿನ ಗೋಂಡ ಜನಾಂಗದ ಹುಡುಗಿಯೊಬ್ಬಳನ್ನು ಮದುವೆಯಾದರು. ಆಕೆಯ ಹೆಸರು ಲೀಲಾ. ಗಂಡನಿಗೆ ಆಕೆ ಪ್ರತಿಯೊಂದು ವಿಧದಲ್ಲಿಯೂ ಸಹಾಯಕಳಾಗಿದ್ದಳು. ಎಲ್ವಿನ್ನರಿಗೆ ಮೂರು ಗಂಡುಮಕ್ಕಳು. ಅವರ ಸಾಂಸಾರಿಕ ಜೀವನ ಬಹುವಾಗಿ ಆನಂದಮಯ ವಾಗಿತ್ತೆಂದು ಅವರೇ ಹೇಳಿದ್ದಾರೆ.
ಎಲ್ವಿನ್ನರು ಭಾರತಕ್ಕೆ ಬಂದಾಗ ಅವರಿಗೆ ವಿದ್ವತ್ತಿನ ಜೀವನ ದೂರವಾದಂತೆ ತೋರಿತಾದರೂ ಅವರ ಮೊದಲ ಹದಿನಾಲ್ಕು ವರ್ಷಗಳ ಸಂಶೋಧನೆಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅವರಿಗೆ ಡಿ.ಎಸ್ಸಿ. ಪ್ರಶಸ್ತಿ ಕೊಟ್ಟು ಗೌರವಿಸಿತು. ವಿದ್ವಜ್ಜೀವನದಲ್ಲಿ ತಮಗಿರುವ ಉತ್ಸುಕತೆಯನ್ನು ಅವರು ಹಲವು ಬಾರಿ ತಮ್ಮ ಆತ್ಮಕಥೆಯಲ್ಲಿ ತಿಳಿಸಿರುವರು. ನಾನು ಮುಖ್ಯವಾಗಿ ಪಂಡಿತ, ಸಂಶೋಧನೆ ಮಾಡುವ ಮನುಷ್ಯ ಎಂದು ಹೇಳಿಕೊಂಡಿರುವರು.
ಎಲ್ವಿನ್ನರು ಜನರಲ್ಲಿ ಬೆರೆತು ಅವರನ್ನು ಅರ್ಥಮಾಡಿಕೊಂಡು ಹಲವಾರು ಗ್ರಂಥಗಳನ್ನು ರಚಿಸಿದರು. ದಿ ಬೈಗಾ ಎಂಬ ಗ್ರಂಥವನ್ನು ಬರೆಯಬೇಕಾದರೆ ಅವರು ಆ ಜನರ ಕೂಡ ಏಳು ವರ್ಷಗಳಿದ್ದರು. ಹಾಗೆ ಅಗೇರಿಯ ಜನಾಂಗದವರ ವಿಚಾರ ಬರೆಯಲು ಅವರ ಕೂಡ ಹತ್ತು ವರ್ಷಗಳ ನಿಕಟವಾದ ಸಂಬಂಧವನ್ನು ಹೊಂದಿದ್ದರು. ಮಹಾಕೋಸಲದ ಜನಪದ ಕಥೆಗಳ ಛತ್ತೀಸ್ಘರ್ನ ಜನಪದ ಗೀತೆಗಳು ಎಂಬ ಪುಸ್ತಕಗಳು ಹತ್ತು ವರ್ಷಗಳ ಅಧ್ಯಯನದ ಫಲ. ಜನಗಳನ್ನು ಅರ್ಥ ಮಾಡಿಕೊಂಡಂತೆ ಎಲ್ವಿನ್ ಅವರಲ್ಲಿ ತಲ್ಲೀನರಾಗುತ್ತಿದ್ದರು. ನನಗೆ ಮಾನವಶಾಸ್ತ್ರವೆಂದರೆ ಹೊರಗಡೆಯ ಕೆಲಸ ಅಷ್ಟೇ ಅಲ್ಲ; ನನ್ನ ಬಾಳೇ ಅದಾಗಿತ್ತು. ಜನರ ಮಧ್ಯೆ ನೆಲೆಸಿ, ಅವರೊಡನೆ ಬಾಳಿ, ಹೊರಗಿನವನೊಬ್ಬ ಎಷ್ಟರಮಟ್ಟಿಗೆ ಅವರೊಡನೆ ಬೆರೆಯಬಹುದೋ ಅಷ್ಟರಮಟ್ಟಿಗೆ ಬೆರೆತು ಹಲವಾರು ಗ್ರಂಥಗಳನ್ನು ಬರೆಯುವುದು ನನ್ನ ಕ್ರಮವಾಗಿತ್ತು ಎಂಬುದಾಗಿ ಅವರೊಂದು ಕಡೆ ಬರೆದಿದ್ದಾರೆ. ಜನರ ಅಥವಾ ಸಮಾಜದ ಪುರೋಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಶೋಧನೆ ಮಾಡಿದರೆ, ಸಂಶೋಧನೆಯ ಮಟ್ಟ ತಗ್ಗುತ್ತದೆಂದು ಅವರು ಭಾವಿಸಿರಲಿಲ್ಲ. ಆದ್ದರಿಂದಲೇ ಅವರು ತಮ್ಮ ಸಂಶೋಧನೆಯ ಆಧಾರದ ಮೇಲೆ ಗಿರಿಜನರ ಅಭಿವೃದ್ಧಿಯ ನೀತಿಗಳನ್ನು ಸೂಚಿಸುತ್ತಿದ್ದರು.
ಎಲ್ವಿನ್ನರನ್ನು ಒರಿಸ್ಸ ಸರ್ಕಾರ 1944ನೆಯ ಇಸವಿಯಲ್ಲಿ ಗೌರವ ಮಾನವಶಾಸ್ತ್ರಜ್ಞರಾಗಿ ನೇಮಕ ಮಾಡಿತು. ಆಮೇಲೆ ಅವರು ಎರಡು ವರ್ಷ ಕೊಲ್ಕತ್ದಲ್ಲಿ ಭಾರತ ಸರ್ಕಾರದ ಮಾನವಶಾಸ್ತ್ರ ಇಲಾಖೆಯ ನಿರ್ದೇಶಕ ಬಿ.ಸಿ. ಗುಹಾರವರ ಸಂಗಡ ಇದ್ದು ಅನಂತರ ಅಲ್ಲಿಂದ ಹಿಂತಿರುಗಿದರು. ಎರಡು ವರ್ಷಗಳಾದ ಅನಂತರ ಭಾರತ ಸರ್ಕಾರ ಅವರನ್ನು ನಿರ್ದೇಶಕರ ಕೆಲಸಕ್ಕೆ ಆಹ್ವಾನಿಸಿತಾದರೂ ಅವರು ಅದನ್ನು ಒಪ್ಪಲಿಲ್ಲ.
ಎಲ್ವಿನ್ನರು 1952ರಲ್ಲಿ ಭಾರತ ಸರ್ಕಾರದ ಕೋರಿಕೆಯಂತೆ ಇಂಡಿಯನ್ ಫ್ರಾಂಟಿಯರ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ಸಿನ ಆಯ್ಕೆಯ ಸಮಿತಿಯ ಸದಸ್ಯರಾಗಿದ್ದರು. ಅನಂತರ ಪಂಡಿತ ನೆಹರೂರವರ ಅಭಿಲಾಷೆಯಂತೆ ನೀಫ (ಭಾರತದ ಈಶಾನ್ಯ ಗಡಿ ಪ್ರದೇಶ) ಆಡಳಿತದಲ್ಲಿ ಭಾಗವಹಿಸಿ ಆದಿವಾಸಿಗಳ ಬಗ್ಗೆ ಸಲಹೆಗಾರರಾದರು. ಮೊದಲು ಅವರನ್ನು ಮಾನವಶಾಸ್ತ್ರ ಸಲಹೆಗಾರರೆಂದು (ಆಂಥ್ರೊಪೊಲಾಜಿಕಲ್ ಕನ್ಸಲ್ಟೆಂಟ್) ಕರೆಯಲಾಯಿತು. ಒಂದು ವರ್ಷದ ಅನಂತರ ಗಿರಿಜನರಿಗೆ ಸಂಬಂಧಪಟ್ಟ ಸಲಹೆಗಾರರೆಂದು (ಅಡ್ವೈಸರ್ ಫಾರ್ ಟ್ರೈಬಲ್ ಆಫೇರ್ಸ್) ಕರೆಯಲಾಯಿತು. 1954ರಲ್ಲಿ ಅಸ್ಸಾಂ ಸರ್ಕಾರ ಎಲ್ವಿನ್ನರನ್ನು ಭಾರತದ ಪ್ರಜೆ ಎಂದು ಅಂಗೀಕರಿಸಿತು. ಅಲ್ಲಿಗೆ ಅವರ ಬಹುದಿನಗಳ ಅಭಿಲಾಷೆ ನೆರವೇರಿತು. ಅವರು ನೀಫ ವಿಚಾರವಾಗಿ ಕೆಲವು ಪುಸ್ತಕಗಳನ್ನು ಪ್ರಕಟಿಸಿದರು. ಗಿರಿಜನರ ಉಪಯೋಗಕ್ಕೆಂದು ಅವರಿಗೆ ತಿಳಿಯಬಹುದಾದ ರೀತಿಯಲ್ಲಿ ಗಾಂಧೀಜಿಯವರನ್ನು ಕುರಿತು ಬರೆದ ಗ್ರಂಥ ಬಹುಸೊಗಸಾಗಿದೆ. ಆಮೇಲೆ ನಾನೂರು ಸಣ್ಣ ಕಥೆಗಳೊಳಗೊಂಡ ನೀಫಾದ ಕಟ್ಟುಕಥೆಗಳು ಎಂಬ ಪುಸ್ತಕವನ್ನು ಪ್ರಕಟಿಸಿದರು. ಇಂಡಿಯನ್ ನಾರ್ತ್ ಈಸ್ಟರ್ನ್ ಫ್ರಾಂಟಿಯರ್ ಇನ್ ದಿ ನೈನ್ಟೀಂತ್ ಸೆಂಚ್ಯುರಿ ಎಂಬ ಪುಸ್ತಕವನ್ನು ರಚಿಸಿದರು. ಇದರಲ್ಲಿ ಪ್ರವಾಸಿಗಳು, ಪಾದ್ರಿಗಳು ಮತ್ತು ಆಡಳಿತಗಾರರು ಆ ನಾಡಿನ ಬಗ್ಗೆ ತಿಳಿಸಿದ ಸ್ವಾರಸ್ಯವಾದ ವಿಷಯಗಳನ್ನು ಸಂಗ್ರಹಿಸಲಾಗಿದೆ. ಗಿರಿಜನರ ಕಲೆಯ ಬಗ್ಗೆ ನೀಫಾದ ಕಲೆ ಎಂಬ ಪುಸ್ತಕವನ್ನು ಬರೆದರು. ಬಹಳ ಜನ ಓದಿ ಮೆಚ್ಚಿದ ಪುಸ್ತಕವೆಂದರೆ ಎ ಫಿಲಾಸಫಿ ಫಾರ್ ನೀಫ (ನೀಫಾಕ್ಕೊಂದು ತತ್ತ್ವ). ಅನಂತರ ಎಲ್ವಿನ್ನರು ನಾಗಾಲ್ಯಾಂಡಿನ ಇತಿಹಾಸವನ್ನು ಕುರಿತು ಬರೆದ ಪುಸ್ತಕಕ್ಕೆ ರಾಷ್ಟ್ರಾಧ್ಯಕ್ಷರ ಬಹುಮಾನ ಬಂತು. ಎಲ್ವಿನ್ನರ ಕಾರ್ಯಕ್ಷೇತ್ರ ವಿಶಾಲವಾಯಿತು. ಅವರನ್ನು ಮಣಿಪುರ ಮತ್ತು ತ್ರಿಪುರಗಳಿಗೆ ಆದಿವಾಸಿಗಳ ಗೌರವ ಸಲಹೆಗಾರನನ್ನಾಗಿ ನೇಮಿಸಲಾಯಿತು.
1959ರಲ್ಲಿ ಗೃಹಮಂತ್ರಿಗಳಾದ ಗೋವಿಂದ ವಲ್ಲಭ ಪಂತರು ಎಲ್ವಿನ್ನರನ್ನು ಪಂಚವಾರ್ಷಿಕ ಯೋಜನೆಯಲ್ಲಿ ಗಿರಿಜನರಿರುವ ಸಾಮೂಹಿಕ ಅಭಿವೃದ್ಧಿ ಕ್ಷೇತ್ರಗಳ ವಿಚಾರವಾಗಿ ನಿಯೋಜಿತವಾದ ಒಂದು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರು. 1960ರ ಮಾರ್ಚ್ ತಿಂಗಳಲ್ಲಿ 550 ಪುಟಗಳನ್ನೊಳಗೊಂಡ ವರದಿಯನ್ನು ಎಲ್ವಿನ್ ಪಂತರಿಗೆ ಒಪ್ಪಿಸಿದರು. ಇದರಲ್ಲಿ ಗಿರಿಜನರ ವಿಚಾರವಾಗಿ ಅವರ ಅಭಿವೃದ್ದಿಯ ನಾನಾಮುಖಗಳನ್ನು ಚರ್ಚಿಸಿ ಸಲಹೆಗಳನ್ನು ಕೊಡಲಾಗಿತ್ತು. ಗಿರಿಜನರನ್ನು ಒಲಿಸಿಕೊಳ್ಳಲು ಬೇಕಾದ ಮೂಲ ತತ್ತ್ವಗಳು ಎಂಬ ಪೀಠಿಕೆಯ ಭಾಗದಲ್ಲಿ ಗಿರಿಜನರಿಗೆ ಹೇಗೆ ಹಣವನ್ನು ವೆಚ್ಚಮಾಡಬೇಕು ಎನ್ನುವುದನ್ನು ಪ್ರಮುಖವಾಗಿ ಚರ್ಚಿಸಲಾಗಿತ್ತು. ಗಿರಿಜನರ ವಿಚಾರವಾಗಿ ಅನುಸರಿಸಬೇಕಾದ ನೀತಿಗೆ ಹೆಚ್ಚು ಗಮನ ಕೊಟ್ಟು ಅಮೂಲ್ಯವಾದ ಸಲಹೆಗಳನ್ನು ಮಾಡಲಾಗಿತ್ತು. ಈ ವರದಿಯ ಸಲಹೆಗಳ ಬಹು ಭಾಗವನ್ನು ಭಾರತದ ಸರ್ಕಾರ ಒಪ್ಪಿತು. 1960ರಲ್ಲಿ ಎಲ್ವಿನ್ನರನ್ನು ಅನುಸೂಚಿತ ಜಾತಿ ಮತ್ತು ಅನುಸೂಚಿತ ಆದಿಮಜನರ ಕಮಿಷನ್ನಿನ ಸದಸ್ಯರಾಗಿ ನೇಮಿಸಲಾಯಿತು. ಎಲ್ವಿನ್ 1961ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಸ್ಮಾರಕ ಭಾಷಣಗಳನ್ನು ಮಾಡಿದರು. ಪ್ರೇಮದ ತತ್ತ್ವ (ಎ ಫಿಲಾಸಫಿ ಆಫ್ ಲವ್) ಎಂಬುದೇ ಅವರ ಭಾಷಣಗಳ ವಿಷಯ.
1961ನೆಯ ವರ್ಷದ ಜನವರಿ ಇಪ್ಪತ್ತಾರನೆಯ ತಾರೀಖಿನಂದು ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನಿತ್ತು ಎಲ್ವಿನ್ನರನ್ನು ಸನ್ಮಾನಿಸಿತು.
1960ನೆಯ ವರ್ಷದಿಂದಲೇ ಎಲ್ವಿನ್ನರ ಆರೋಗ್ಯ ಕೆಟ್ಟಿತ್ತು. ಆದರೂ ಅದನ್ನು ಲೆಕ್ಕಿಸದೆ ಅವರು ಆದಿವಾಸಿಗಳ ಅಭಿವೃದ್ಧಿಗೆ ದುಡಿಯುತ್ತಿದ್ದರು. 1964ರ ಫೆಬ್ರವರಿ 21ನೆಯ ತಾರೀಖಿನ ಸಂಜೆ ಇಂದಿರಾ ಗಾಂಧಿಯವರನ್ನು ನೋಡಿ ಅವರ ಸಂಗಡ ತಮ್ಮ ಮುಂದಿನ ಕಾರ್ಯಕ್ರಮಗಳನ್ನು ಚರ್ಚಿಸಿದರು. ಮಾರನೆಯ ದಿನ ದೆಹಲಿಯಲ್ಲಿ ಅವರು ನಿಧನರಾದರು. ಅವರ ನಿಧನದಿಂದ ಮಾನವಶಾಸ್ತ್ರಕ್ಕೆ ಬಹಳ ದೊಡ್ಡ ನಷ್ಟವಾಯಿತು. ಅದರಲ್ಲೂ ಭಾರತಕ್ಕೆ, ಗಿರಿಜನರಿಗೆ ಆದ ನಷ್ಟ ಅಪಾರ.
ಆದಿವಾಸಿಗಳೆಂದರೆ ತೊಂದರೆ ಕೊಡುವ ಕ್ರೂರ ಜನರೆಂಬ ಅಭಿಪ್ರಾಯವಿತ್ತು. ನರಬಲಿ ಕೊಡುವ, ಮನುಷ್ಯರನ್ನು ಬೇಟೆಯಾಡುವ ಭಯಂಕರ ಮಾನವರೆಂದು ಜನ ಅವರನ್ನು ದೂರ ಇರಿಸಿದ್ದರು. ಅವರು ಭಿನ್ನರೀತಿಯ ಮನುಷ್ಯರು. ಸ್ವಲ್ಪ ಕರುಣೆಗೆ ಅರ್ಹರೇ ಹೊರತು ಸಮಾಜದಲ್ಲಿ ಗೌರವಕ್ಕೆ ಪಾತ್ರರಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿತ್ತು. ಅವರ ಬಗ್ಗೆ ಸರಿಯಾದ ರೀತಿಯಲ್ಲಿ ವರ್ತಿಸಿ ಅವರನ್ನು ಗೌರವ ವಿಶ್ವಾಸಗಳಿಂದ ಕಾಣಬೇಕಾದ ಅಗತ್ಯವನ್ನು ಎಲ್ವಿನ್ನರು ಎಲ್ಲರಿಗೂ ಅರಿವು ಮಾಡಿದರು.
ಗಿರಿಜನರಲ್ಲಿರುವ ವೈವಿಧ್ಯವನ್ನು ಕಾಪಾಡುವುದು ಅಗತ್ಯ. ಅವರ ಸಂಸ್ಕೃತಿ, ಅವರ ಕಲೆ ಬಹಳ ಅಮೂಲ್ಯವಾದುವು. ಅವನ್ನು ಗೌರವಿಸಬೇಕು. ಅವರು ಈ ದೇಶದ ಪ್ರಜೆಗಳೆಂಬ ಭಾವನೆಯನ್ನು ಬೆಳಸಬೇಕು. ಗಿರಿಜನರು ತಮ್ಮ ವೈಶಿಷ್ಟ್ಯ, ಜೀವನದ ಆನಂದಗಳನ್ನು ಉಳಿಸಿಕೊಳ್ಳಲು ಸಹಾಯಮಾಡುವುದು ಅಗತ್ಯ. ಅವರಿಗೆ ಅನ್ನ ಆರೋಗ್ಯ, ಸಂಚಾರ ಸೌಲಭ್ಯ, ತಿಳಿವಳಿಕೆ ನಾಗರಿಕತೆಗಳ ಅಗತ್ಯವಿದೆ. ಅವನ್ನೊದಗಿಸಿ ಅವರ ಸಂಸ್ಕೃತಿಯನ್ನು ರಕ್ಷಿಸಿ ಪೋಷಿಸುವ ಅಗತ್ಯವೂ ಇದೆ-ಇದು ಎಲ್ವಿನ್ನರ ಸಂದೇಶ.
ವೆರಿಯರ್ ಎಲ್ವಿನ್ನರು ಅನೇಕ ಗ್ರಂಥಗಳನ್ನು, ಸಂಶೋಧನ ಲೇಖನಗಳನ್ನು ಬರೆದಿರುವರು. ಅವರ ಪುಸ್ತಕಗಳಲ್ಲಿ ಕೆಲವು ಏಕವಿಷಯಕ ನಿಬಂಧಗಳಿವೆ (ಮಾನೊಗ್ರ್ಯಾಫ್ಸ್). ಇವು ಗಿರಿಜನರನ್ನು ಕುರಿತು ಬರೆದವು. ಇವುಗಳಲ್ಲದೆ ಎರಡು ಕಾದಂಬರಿಗಳನ್ನು ಬರೆದಿರುವರು. ಅವರ ಪುಸ್ತಕಗಳಲ್ಲಿ ಮುಖ್ಯವಾದವು ಈ ಕೆಲವು: ದಿ ಬೈಗ (1939); ದಿ ಅಗಾರಿಯ (1942); ಮರಿಯ ಮರ್ಡರ್ ಅಂಡ್ ಸೂಯಿಸೈಡ್ (1943); ಫೋಕ್ ಸಾಂಗ್ಸ್ ಆಫ್ ಛತ್ತೀಸ್ಘರ್ (1946); ದಿ ಮರಿಯ ಅಂಡ್ ದೇರ್ ಗೌಟಲ್ (1947); ದಿ ಟ್ರೈಬಲ್ ಆರ್ಟ್ ಆಫ್ ಮಿಡ್ಲ್ ಇಂಡಿಯ (1951); ದಿ ರಿಲಿಜನ್ ಆಫ್ ಆನ್ ಇಂಡಿಯನ್ ಟ್ರೈಬ್ (1955); ಮಿಕ್ಸ್ ಆಫ್ ದಿ ನಾರ್ತ್ ಈಸ್ಟರ್ನ್ ಫ್ರಾಂಟಿಯರ್ ಆಫ್ ಇಂಡಿಯ (1959); ದಿ ಲೀವ್ಸ್ ಫ್ರಾಂ ದಿ ಜಂಗಲ್ (1958); ದಿ ಆಟ್ರ್ ಆಫ್ ದಿ ನಾರ್ತ್ ಈಸ್ಟರ್ನ್ ಫ್ರಾಂಟಿಯರ್ ಆಫ್ ಇಂಡಿಯ (1959); ಎ ಫಿಲಾಸಪಿ ಫಾರ್ ನೀಫ್(1961);ü ಎ ಫಿಲಾಸಪಿ üಆಫ್ ಲವ್ (1962).
1964ರಲ್ಲಿ ಪ್ರಕಟವಾದ ದಿ ಟ್ರೈಬಲ್ ವಲ್ರ್ಡ್ ಆಫ್ ವೆರಿಯರ್ ಎಲ್ವಿನ್ ಎಂಬುದು ಎಲ್ವಿನ್ನರ ಆತ್ಮಕಥೆ. ಪುಲ್ಮಟ್ ಆಫ್ ದಿ ಹಿಲ್ಸ್ (1937), ಎ ಕ್ಲೌಡ್ ದಟ್ ಈಸ್ ಡ್ರ್ಯಾಗೂನಿಷ್ (1938)-ಎಂಬುವು ವನ್ಯ ಜೀವನವನ್ನು ವಸ್ತುವನ್ನಾಗುಳ್ಳ ಎರಡು ಕಾದಂಬರಿಗಳು. ದಿ ಕಿಂಗ್ಡಂ ಆಫ್ ದಿ ಯಂಗ್ ಎಂಬುದು ದಿ ಮರಿಯ ಅಂಡ್ ದೇರ್ ಗೌಟಲ್ ಎಂಬುದರ ಸಂಗ್ರಹ. ಶ್ಯಾಮರಾವ್ ಹಿವಾಲೆಯವರೊಂದಿಗೆ ಎಲ್ವಿನ್ ಎರಡು ಗ್ರಂಥಗಳನ್ನು ರಚಿಸಿದ್ದಾರೆ; ಸಾಂಗ್ಸ್ ಆಫ್ ದಿ ಫಾರೆಸ್ಟ್ (1935), ದಿ ಫೋಕ್ ಸಾಂಗ್ಸ್ ಆಫ್ ಮೈಕಲ್ ಹಿಲ್ಸ್ (1944). ತಮ್ಮ ಸಂಶೋಧನೆಗಳಿಂದಾಗಿ ಎಲ್ವಿನ್ನರು ದಿ ವೆಲ್ಕಮ್ ಮೆಡಲ್ (1943), ಎಸ್.ಸಿ.ರಾಯ್ ಮೆಡಲ್ (1945), ರಿವರ್ಸ್ ಮೆಮೋರಿಯಲ್ ಮೆಡಲ್ (1948), ಆನನ್ ಡೇಲ್ ಮೆಡಲ್ (1952), ದಾದಾಭಾಯ್ ನವ್ರೋಜಿ ಪ್ರೈಸ್ (1961) ಮೊದಲಾದ ಪದಕ, ಪಾರಿತೋಷಕಗಳನ್ನು ಪಡೆದಿದ್ದಾರೆ.
ಎಲ್ವಿನ್ನರು ತಮ್ಮ ಪುಸ್ತಕಗಳಲ್ಲಿ ಏನನ್ನು ಬರೆದರೋ ಆ ತತ್ತ್ವಗಳನ್ನು ಕಾರ್ಯರೂಪಕ್ಕೆ ತರಲು ಕೊನೆಯವರೆಗೂ ಶ್ರಮಿಸಿದರು. ತಮ್ಮ ಮೂವತ್ತು ವರ್ಷಗಳಿಗೂ ಮೇಲ್ಪಟ್ಟ ಸೇವಾಜೀವನದಲ್ಲಿ ಭಾರತದ ಗಿರಿಜನರ ಅಭಿವೃದ್ಧಿಗೆ ಶ್ರಮಿಸಿದರು. ಭಾರತದ ಗೃಹಮಂತ್ರಿಗಳಾಗಿದ್ದ ಗೋವಿಂದ ವಲ್ಲಭ ಪಂತರು ಎಲ್ವಿನ್ನರ ಕಾರ್ಯಗಳ ಬಗ್ಗೆ ಹೇಳಿದ ಮಾತುಗಳು ಅವರು ಸಲ್ಲಿಸಿದ ಮಹತ್ಕಾರ್ಯಗಳನ್ನು ತಿಳಿಸುತ್ತವೆ: ಗಿರಿಜನರ ವಿಚಾರವಾಗಿ ಸಾರ್ವತ್ರಿಕವಾದ ಒಳ್ಳೆಯ ಅಭಿಪ್ರಾಯ ಬರುವಂತೆ ಇಡೀ ದೇಶದಲ್ಲಿ ದೊಡ್ಡ ಕೆಲಸ ಮಾಡಿದವರು ಎಲ್ವಿನ್ ಅವರು. ಆದಿವಾಸಿಗಳು ಕೇವಲ ಹಿಂದುಳಿದವರಲ್ಲ, ಅವರಲ್ಲಿ ಕಲೆ, ಸಂಸ್ಕೃತಿ ಇವೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅವರು ಹೀಗೆ ಮಾಡಿದ್ದರಿಂದ ದೇಶದ ಧೋರಣೆಯನ್ನು ರೂಢಿಸಿದಂತಾಯಿತು. (ಎಚ್.ಎಂ.ಎಸ್.)