ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಓತಿ (ಕ್ಯಾಲೋಟಿಸ್)

ಓತಿ (ಕ್ಯಾಲೋಟಿಸ್): ಸರೀಸೃಪ ವರ್ಗದ ಸ್ಕ್ವಮೇಟ ಗಣದ ಲ್ಯಾಸರ್ತಿಲಿಯ ಉಪಗಣಕ್ಕೆ ಸೇರಿದ ಪ್ರಾಣಿ. ತೋಟದ ಹಲ್ಲಿ (ಗಾರ್ಡನ್ ಲಿಸóರ್ಡ್) ಎಂದೂ ಕರೆಯುತ್ತಾರೆ. ಮನೆಯ ಹಿತ್ತಲು, ತೋಟ ಗದ್ದೆಗಳ ಬೇಲಿಗಳಲ್ಲಿ ಲಂಟಾನದ ಮೆಳೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಇರುವ ಓತಿ ಕೆಲೊಟಿಸ್ ವರ್ಸಿಕಲ್ಸಾರ್ ಎಂಬ ಪ್ರಭೇದಕ್ಕೆ ಸೇರುತ್ತದೆ. ಇದು ಕೀಟಾಹಾರಿ, ಇದರ ದೇಹವನ್ನು ಶಿರ, ಎದೆ ಮತ್ತು ಬಾಲ ಎಂದು ವಿಂಗಡಿಸಬಹುದು. ತಲೆ ಮತ್ತು ಎದೆಯ ನಡುವೆ ನಿರ್ದಿಷ್ಟವಾದ ಕುತ್ತಿಗೆಯಿದೆ. ದೇಹದಮೇಲೆ ಹುರುಪೆಗಳ ಹೊದಿಕೆಯುಂಟು. ಹುರಪೆಗಳು ಒಂದರ ತುದಿ ಇನ್ನೊಂದರ ಬುಡವನ್ನು ಮುಚ್ಚುವಂತೆ (ಮನೆಯ ಹಂಚುಗಳಂತೆ) ಜೋಡಿಸಲ್ಪಟ್ಟಿವೆ. ಕುತ್ತಿಗೆ ಮತ್ತು ಮುಂಡದ ನಡು ಬೆನ್ನಿನ ಭಾಗದಲ್ಲಿರುವ ಹುರುಪೆಗಳ ಉದ್ದವಾದ ಮುಳ್ಳು ಶಿಖೆಗಳ ಸಾಲಿನಂತೆ ಬೆಳೆದಿವೆ. ಋತುಮಾಸದಲ್ಲಿ ಕತ್ತಿನ ತಳಭಾಗ ಗಂಡುಗಳಲ್ಲಿ ರಾಗರಂಜಿತವಾಗುತ್ತದೆ. ಈ ಬಣ್ಣದಿಂದಾಗಿ ಅವು ರಕ್ತಪಿಪಾಸುಗಳು ಎಂಬ ತಪ್ಪು ಭಾವನೆ ಬೆಳೆದುಬಂದಿದೆ.

ತಲೆಯ ಅಗ್ರಭಾಗದಲ್ಲಿ ಬಾಯಿ ಅಡ್ಡ ಸೀಳಿಕೆಯಂತಿದೆ. ಬಾಯಿಯ ಮೇಲ್ಗಡೆ ಒಂದು ಜೊತೆ ಹೊರನಾಸಿಕ ರಂಧ್ರಗಳೂ ತಲೆಯ ಪಕ್ಕಗಳಲ್ಲಿ ಒಂದು ಜೊತೆ ಕಣ್ಣುಗಳೂ ಇವೆ. ಒಂದೊಂದು ಕಣ್ಣಿಗೂ ದಪ್ಪವಾದ ಮೇಲು ರೆಪ್ಪೆ, ತೆಳುವಾದ ಕೆಳರೆಪ್ಪೆ ಮತ್ತು ಪಾರದರ್ಶಕವಾದ ಮೂರನೇ ಪಟಲಗಳಿವೆ. ಕಣ್ಣುಗಳ ಹಿಂಭಾಗದಲ್ಲಿ ಕಿವಿಯ ತಮಟೆಯುಂಟು. ಇದು ಕಪ್ಪೆಯಂತೆ ದೇಹದ ಚರ್ಮದ ಮಟ್ಟದಲ್ಲಿಯೇ ಇಲ್ಲದೆ ಸ್ವಲ್ಪ ತಗ್ಗಾದ ಕುಳಿಯಲ್ಲಿದೆ. ಈ ಕುಳಿಗೆ ಕರ್ಣರಂಧ್ರ ಎಂದು ಹೆಸರು.

ಮುಂಡದ ತಳಭಾಗಕ್ಕೆ ಅಂಟಿದಂತೆ ಎರಡು ಜೊತೆ ಕಾಲುಗಳಿವೆ. ಮುಂಗಾಲುಗಳಲ್ಲಿ ತೋಳು, ಮುಂಗೈ, ಹಸ್ತ ಮತ್ತು ನಖಗಳುಳ್ಳ ಐದೈದು ಕೈಬೆರಳುಗಳಿವೆ. ಹಿಂಗಾಲುಗಳಲ್ಲಿ ತೊಡೆ, ಮುಂಗಾಲು, ಪಾದ ಮತ್ತು ಉಗುರಿರುವ ಐದು ಬೆರಳುಗಳಿವೆ. ಬುಡದ ಬಳಿ ಬಾಲ ದಪ್ಪನಾಗಿದ್ದು ಕ್ರಮೇಣ ಚೂಪಾಗುತ್ತ ಹೋಗುವುದು. ರುಂಡ ಮುಂಡಗಳ ಒಟ್ಟು ಉದ್ದದಷ್ಟೇ ಸುಮಾರಾಗಿ ಬಾಲದ ಉದ್ದವೂ ಇದೆ. ಬಾಲದ ಬುಡದ ಬಳಿ ಕ್ಲೋಯಕ ರಂಧ್ರವುಂಟು. ಇದು ಅಡ್ಡನಾಗಿ ಹರಡಿದ ಸೀಳಿಕೆಯಂತೆ ಕಾಣಬರುತ್ತದೆ. ಇದರ ಮೂಲಕ ಮಲಾಶಯ ಮತ್ತು ಮೂತ್ರ ಜನನೇಂದ್ರೀಯಗಳು ಹೊರಕ್ಕೆ ತೆರೆಯುತ್ತವೆ.

ಓತಿಗಳು ಭಿನ್ನಲಿಂಗಿಗಳು, ಗಂಡುಗಳಲ್ಲಿ ಕ್ಲೋಯಕದಿಂದ ಹಿಂದಕ್ಕೆ ಹರಡಿದಂತೆ, ಬಾಲದ ಅಧೋ ಭಾಗದಲ್ಲೆ, ಚರ್ಮದ ಒಳಗೆ ಒಂದು ಜೊತೆ ಆಲಿಂಗನಾಂಗಗಳಿವೆ, ಓತಿ ಅಂಡಜ, ಹೆಚ್ಚು ಭಂಡಾರವಿರುವ, ಬಿಳಿಯ ಸುಣ್ಣ ಚಿಪ್ಪಿನಿಂದಾವೃತವಾದ ಹತ್ತಾರು ಮೊಟ್ಟೆಗಳನ್ನಿಡುತ್ತದೆ. (ಎಚ್.ಬಿ.ಡಿ.)