ಕಂತಿ : ಕನ್ನಡದ ಪ್ರಥಮ ಕವಯಿತ್ರಿ. ನಾಗಚಂದ್ರನ ಸಮಕಾಲೀನಳೆಂದೂ(1140) ದೋರರಾಯನ ಆಸ್ಥಾನದಲ್ಲಿದ್ದಳೆಂದೂ ಹೇಳಲಾಗಿದೆ. ಈಕೆಯ ಹೆಸರಿನಲ್ಲಿ ಕಂತಿ-ಹಂಪನ ಸಮಸ್ಯೆಗಳು ಎಂಬ ಪುಟ್ಟ ಕೃತಿಯೊಂದು ಸಿಕ್ಕಿದೆ. 16ನೆಯ ಶತಮಾನದ ಬಾಹುಬಲಿ ಎಂಬ ಕವಿ ಅಭಿನವವಾಗ್ದೇವಿಯಾದ ಕಂತಿಕೆಯನ್ನು ಹೊಗಳಿದ್ದಾನೆ, 19ನೆಯ ಶತಮಾನದ ದೇವಚಂದ್ರ ತನ್ನ ರಾಜಾವಳಿ ಕಥೆಯಲ್ಲಿ ಇವಳ ಬಗ್ಗೆ ಈ ಕಥೆ ಹೇಳಿದ್ದಾನೆ. ದೋರರಾಯನ ಮಂತ್ರಿಯಾದ ಧರ್ಮಚಂದ್ರನ ಮಗ ಉಪಾಧ್ಯಾಯನಾಗಿ ಪಾಠ ಹೇಳುತ್ತಿದ್ದು, ಮಕ್ಕಳ ಮತಿಪ್ರಕಾಶಕ್ಕಾಗಿ ಜ್ಯೋತಿಷ್ಮತೀತೈಲವನ್ನು ಮಾಡಿ ಕುಡಿಕೆಯಲ್ಲಿಟ್ಟುಕೊಂಡು ಮಂದಮತಿಗಳಿಗೆ ಅರೆಬಿಂದುವನ್ನು ಮಾತ್ರ ಸೇವಿಸಲು ಕೊಡುತ್ತಿದ್ದ ಕಂತಿ ಎಂಬ ಮನೆಗೆಲಸದವಳು ಅರಿಯದೆ ಆ ತೈಲವೆಲ್ಲವನ್ನೂ ಸೇವಿಸಲಾಗಿ ಉರಿ ಹತ್ತಿ ಬಾವಿಯಲ್ಲಿ ಬಿದ್ದಳು. ಅಲ್ಲಿ ಕಂಠಪ್ರಮಾಣದ ನೀರಿದ್ದುದರಿಂದ ಆಕೆ ಸಾಯದೆ ಉಳಿದಳಲ್ಲದೆ ವಿದ್ಯಾವಿಶಾರದೆಯಾಗಿ ಕಾವ್ಯಕಟ್ಟಿ ಹೇಳುತ್ತಿರಲಾಗಿ ದೋರರಾಯನ ಆಸ್ಥಾನದ ಪಂಪಕವಿ ಒಂದು ಸಾವಿರ ಪ್ರಶ್ನೆಗಳನ್ನು ಕೇಳಿದ. ಅವಕ್ಕೆಲ್ಲ ಅವಳು ಸಮಂಜಸವಾಗಿ ಉತ್ತರ ಕೊಡಲಾಗಿ, ಅವಳನ್ನು ರಾಜಸಭೆಗೆ ಕರೆಸಲಾಯಿತು. ಅಲ್ಲಿ ಅವಳು ವಿದ್ವತ್ಸಮೂಹದಲ್ಲಿ ಅಧಿಕ ಕವೀಶ್ವರಿಯಾದಳು.

ರಾಜಾಸ್ಥಾನದಲ್ಲಿ ಅಭಿನವಪಂಪನಿಗೂ ಕಂತಿಗೂ ಬಹಳ ಸಂವಾದಗಳೂ ಕವಿತ್ವ ಸ್ಪರ್ಧೆಗಳೂ ನಡೆಯುತ್ತಿದ್ದಂತೆ ತೋರುತ್ತದೆ. ಕಂತಿಯ ಬಾಯಲ್ಲಿ ಹೊಗಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ನಾಗಚಂದ್ರ ಒಮ್ಮೆ ಸತ್ತಂತೆ ನಟಿಸಿದನೆಂದೂ ಆಗ ಕಂತಿ ಬಂದು ಅವನನ್ನು ಕೊಂಡಾಡುತ್ತ ಪ್ರಲಾಪಿಸಿದಳೆಂದೂ ಅವನು ತನ್ನ ಪಂಥ ಗೆದ್ದಿತು ಎಂದು ಎದ್ದು ಕುಳಿತನೆಂದೂ ಕಥೆಯಿದೆ.

ಕಂತಿ ವಿಷಯವೆಲ್ಲ ದಂತಕಥೆಯೆಂದೂ ಆ ಹೆಸರಿನ ಕವಯಿತ್ರಿ ಇರಲೇ ಇಲ್ಲವೆಂದೂ ಒಂದು ವಾದವಿದೆ. ಇದನ್ನು ಸಮರ್ಥಿಸುವ ಅಂಶಗಳಿವು: ಕಂತಿಯೆಂದರೆ ಜೈನ ಸಂನ್ಯಾಸಿನಿಯೆಂದರ್ಥ. ಅದು ಒಬ್ಬಳ ಹೆಸರು ಎನ್ನುವುದು ಕಷ್ಟ. ನಾಗಚಂದ್ರನ ಕೃತಿಗಳಲ್ಲಾಗಲಿ ಬೇರೆ ಕಡೆಗಳಲ್ಲಾಗಲಿ ಕಂತಿಯ ಉಲ್ಲೇಖವಿಲ್ಲ. ಬಾಹುಬಲಿ, ದೇವಚಂದ್ರರು ಇತ್ತೀಚಿನವರಾದುದರಿಂದ ಅವರ ಹೇಳಿಕೆ ವಿಶ್ವಸನೀಯವಲ್ಲ. ದೋರರಾಯ ಎಂಬ ಹೆಸರಿನ ಯಾವ ರಾಜನೂ ಆಳಿದಂತೆ ಚರಿತ್ರೆಯಿಂದ ತಿಳಿದು ಬರುವುದಿಲ್ಲ. ಆದ್ದರಿಂದ ಕಂತಿಯದೆಲ್ಲ ಕಟ್ಟುಕಥೆ. ಕಂತಿ ಹಂಪನ ಸಮಸ್ಯೆಗಳನ್ನು ಈಚೆಗೆ ಯಾರೋ ಬರೆದು ಕಂತಿಗೆ ಆರೋಪಿಸಿದ್ದಾರೆ ಎನ್ನಬೇಕಾಗುತ್ತದೆ. ಅವುಗಳ ಶೈಲಿಯೂ ಸಂಶಯಾಸ್ಪದವಾಗಿದೆ. ಅವಳ ಅಸ್ತಿತ್ವವೇ ಕಲ್ಪಿತವಾದುದೆನ್ನುವುದು ಸಮರ್ಪಕವಾಗಲಿಕ್ಕಿಲ್ಲ ಎಂಬ ಅಭಿಪ್ರಾಯವೂ ಉಂಟು.

ಕಂತಿ-ಹಂಪನ ಸಮಸ್ಯೆಗಳಲ್ಲಿ ಪ್ರತಿಭೆಯಿಂದ ಮೂಡಿದ ಕವಿತ್ವವಿಲ್ಲ. ಬುದ್ಧಿಯ ಚಮತ್ಕಾರವಷ್ಟೆ ಎದ್ದು ಕಾಣುತ್ತದೆ. ಒಂದು ಉದಾಹರಣೆಯನ್ನು ನೋಡಬಹುದು. ದನಮಂ ಕಡಿ ಕಡಿದು ಬಸದಿಗೆಳೆಯುತ್ತಿರ್ದರ್ ಎಂಬ ಒಗಟನ್ನು ಪಂಪ ಮುಂದಿಟ್ಟನಂತೆ, ಅದನ್ನು ಕಂತಿ ಬಿಡಿಸಿದ ಬಗೆ ಹೀಗೆ :

ವನದೊಳಗೆ ಪುಟ್ಟಿ ಬೆಳೆಯುತೆ ತನಿಗಂಪಂ ಪತ್ತುದೆಸೆಗೆ ಬೀ¾Äತ್ತಿರ್ಪಾ ಘನತರ ಸುರುಚಿರ ಸಚ್ಚಂ ದನಮಂ ಕಡಿ ಕಡಿದು ಬಸದಿಗೆ¾õೆಯುತ್ತಿರ್ದರ್

ಕಂತಿ ಎಂಬ ಕಬ್ಬಿಗಿತಿ ನಾಗಚಂದ್ರನ ಕಾಲದಲ್ಲಿ ನಿಜವಾಗಿಯೂ ಇದ್ದಳು ಎಂದು ಒಪ್ಪವುದಾದರೆ, ಅವಳು ಜೈನಧರ್ಮೀಯಳೆಂದೂ ಅವಳ ಕಾಲ ಸು.ಪ್ರ.ಶ. 1140 ಎಂದೂ ಹೇಳಬೇಕಾಗುತ್ತದೆ. (ಸಿ.ಪಿ.ಕೆ.)