ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಜೀವನ ಚರಿತ್ರೆಗಳು

ಕನ್ನಡದಲ್ಲಿ ಜೀವನಚರಿತ್ರೆಗಳು

ಸಂಪಾದಿಸಿ

ಕನ್ನಡದಲ್ಲಿ ಜೀವನ ಚರಿತ್ರೆಯ ಇತಿಹಾಸ ಅಷ್ಟೊಂದು ಪ್ರಾಚೀನವೇನಲ್ಲ ಆದರೂ ಕರ್ನಾಟಕದಾದ್ಯಂತ ವಿಪುಲವಾಗಿ ಹರಡಿರುವ ಮಾಸ್ತಿಕಲ್ಲು. ವೀರಗಲ್ಲುಗಳಲ್ಲಿ, ಇನ್ನಿತರ ಶಿಲಾಶಾಸನಗಳಲ್ಲಿ ವ್ಯಕ್ತಿಗಳ ಜೀವನಕಥೆ ಮಿಂಚಿ ಮರೆಯಾಗುತ್ತದೆ. ಕನ್ನಡ ಕಾವ್ಯಗಳಲ್ಲಿಯೂ ಕವಿಗಳು ಸ್ವವಿಷಯವಾಗಿಯೂ ಪರವಿಷಯವಾಗಿಯೂ ಹೇಳಿರುವ ಮಾತುಗಳಲ್ಲಿ ಅವರ ಜೀವನಕ್ಕೆ ಸಂಬಂದಿsಸಿದ ಹಲವಾರು ವಿಷಯಗಳು ವ್ಯಕ್ತವಾಗಿವೆ. ಹರಿಹರ, ರಾಘವಾಂಕಾದಿಗಳೂ ಮೈಸೂರು ಒಡೆಯರ ಆಸ್ಥಾನ ಕವಿಗಳೂ ತಮ್ಮ ತಮ್ಮ ಆದರ್ಶ ವ್ಯಕ್ತಿಗಳನ್ನು ಕುರಿತು, ಪೋಷಕರ ಶೀಲ ಚಾರಿತ್ರ್ಯಾದಿಗಳನ್ನು ಕುರಿತು ಬಣ್ಣಿಸಿದ್ದಾರೆ. ಜನಪದ ಗೀತೆಗಳಲ್ಲಿಯೂ ಐತಿಹಾಸಿಕ, ಧಾರ್ಮಿಕ ವೀರವರೇಣ್ಯರ ಜೀವನ ಚಿತ್ರಿತವಾಗಿದೆ. ಸ್ಮರಣ ಚಿತ್ರಗಳು, ಪತ್ರಗಳು, ದಿನಚರಿಗಳು ಕೂಡ ಜೀವನ ಚರಿತ್ರೆಗೆ ಸಾಧನ ಸಲಕರಣೆಗಳಾಗಿವೆ. ಆದರೆ ಜೀವನ ಚರಿತ್ರೆ ಕನ್ನಡದಲ್ಲಿ ಒಂದು ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದದ್ದು ಇತ್ತೀಚೆಗೆ ಅದೂ ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದ ಎನ್ನಬಹುದು.

ಸ್ವಾತಂತ್ರ್ಯಪುರ್ವದ ಸುಮಾರು ಐದು ದಶಕಗಳ ಅವದಿಯಲ್ಲಿ ಕನ್ನಡದಲ್ಲಿ ಐನೂರಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗಿವೆ. ಸ್ವಾತಂತ್ರ್ಯೋತ್ತರದಲ್ಲಿ ಇದೀಗ 1000ಕ್ಕೂ ಹೆಚ್ಚು ಜೀವನ ಚರಿತ್ರೆಗಳು ರಚಿತವಾಗಿವೆ. ಕನ್ನಡದಲ್ಲಿ ಮೊದಲು ರಚಿತವಾದ ಜೀವನ ಚರಿತ್ರೆಗಳು ಮಹಾಪುರುಷರ ಜೀವಿತದ ಸಾಧನೆ ಸಿದ್ಧಿಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಡುವ, ಆ ಮೂಲಕ ದೇಶಾಬಿಮಾನವನ್ನೂ ಉನ್ನತ ಧ್ಯೇಯ ಧೋರಣೆಗಳನ್ನೂ ಜನತೆಯ ಮನಸ್ಸಿನಲ್ಲಿ ಬಿತ್ತುವ ಉದ್ದೇಶದಿಂದ ಕೂಡಿವೆ. ಹಾಗಾಗಿ ಧಾರ್ಮಿಕ ಪುರುಷರ, ಮತಾಚಾರ್ಯರ, ಸಾಧುಸಂತರ, ಸಮಾಜ ಸುಧಾರಕರ, ಚರಿತ್ರೆಯ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳು ಪ್ರಕಟಗೊಂಡವು. ಇವುಗಳಲ್ಲಿ ಯೇಸುಕ್ರಿಸ್ತ (ಕಿಟ್ಟೆಲ್), ಬಸವ ಚರಿತ್ರೆ, ಭಗವಾನ್ ಬುದ್ಧನ ಚರಿತ್ರೆ, ಸ್ವಾಮಿ ರಾಮತೀರ್ಥ (ಹರ್ಡೇಕರ ಮಂಜಪ್ಪ), ಶಂಕರಾಚಾರ್ಯರ ಚರಿತ್ರೆ, (ದೊಡ್ಡ ಬೆಲೆ ನಾರಾಯಣ ಶಾಸ್ತ್ರಿ), ಮಧ್ವಾಚಾರ್ಯರ ಚರಿತ್ರೆ (ನಾ.ಶ್ರೀ.ರಾಜಪುರೋಹಿತ), ಅಲ್ಲಮಪ್ರಭು (ಸಿದ್ಧಯ್ಯ ಪುರಾಣಿಕ), ಮಹಮದ್ ಪೈಗಂಬರ್ (ಎಂ.ಪಿ.ಪುಜಾರ), ರಜಿಯಾ ಬೇಗಂ (ಹುರುಳಿ ಬಿsೕಮರಾಯ) ಅಬ್ರಹಾಂ ಲಿಂಕನ್ (ಬಿ.ಚಂದ್ರಶೇಖರಯ್ಯ, ಸಿ.ಕೆ.ವೆಂಕಟರಾಮಯ್ಯ, ಹೊನ್ನಾಪುರ ಮಠ), ಅಕ್ಬರ್, ಛತ್ರಪತಿ ಶಿವಾಜಿ, ಟಿಪ್ಪುಸುಲ್ತಾನ, ನಾನಾ ಫಡ್ನವೀಸ, ರಣಜಿತ್ ಸಿಂಹ (ರಾ.ಹ.ದೇಶಪಾಂಡೆ), ನೆಪೋಲಿಯನ್ ಬೋನಪಾರ್ಟೆ (ಆನವಟ್ಟಿ ರಾಮರಾಯ) ಮೊದಲಾದವು ಗಮನಾರ್ಹವಾಗಿವೆ.

ಅನಂತರದ ಬೆಳೆವಣಿಗೆಯ ಘಟ್ಟದಲ್ಲಿ ಜೀವನಚರಿತ್ರೆಗಳ ವಿಷಯವೈವಿಧ್ಯ ವಿಸ್ತಾರವಾಯಿತು. ರಾಜಕಾರಣಿಗಳು, ದೇಶಭಕ್ತರು, ನಟರು, ವಿಜ್ಞಾನಿಗಳು, ಕವಿಗಳು- ಇವರನ್ನು ಕುರಿತಂತೆ ಜೀವನ ಚರಿತ್ರೆಗಳು ರಚನೆಗೊಂಡವು. ಸಾಹಿತ್ಯದ ವಿವಿಧ ರಂಗಗಳಲ್ಲಿ ಕೆಲಸ ಮಾಡಿದ ಮಹನೀಯರುಗಳು ಈ ಪ್ರಕಾರದಲ್ಲಿ ಬರೆಯತೊಡಗಿದ್ದರಿಂದ ಜೀವನಚರಿತ್ರೆ ಲಕ್ಷಣಬದ್ಧವಾದ ಒಂದು ಸಾಹಿತ್ಯ ಪ್ರಕಾರವಾಗಿ ಪರಿಣಮಿಸಿತು. ಇದರಿಂದಾಗಿ, ಚ.ವಾಸುದೇವಯ್ಯ, ಎಂ.ಎಸ್.ಪುಟ್ಟಣ್ಣ, ಆಲೂರ ವೆಂಕಟರಾಯ, ಡಿ.ವಿ.ಜಿ., ಮಾಸ್ತಿ, ಸಿ.ಕೆ.ವೆಕಂಟರಾಮಯ್ಯ, ಜಿ.ಪಿ.ರಾಜರತ್ನಂ, ಎ.ಆರ್.ಕೃಷ್ಣಶಾಸ್ತ್ರೀ, ಸುಬೋಧ ರಾಮರಾಯ, ದ.ಕೃ.ಭಾರದ್ವಾಜ, ಟಿ.ಎಸ್.ವೆಂಕಣ್ಣಯ್ಯ, ಕುವೆಂಪು ಮೊದಲಾದ ಸಮರ್ಥ ಲೇಖಕರು ಹುಟ್ಟಿಕೊಂಡರು.

ಬೌದ್ಧ, ಜೈನ, ವೈದಿಕ, ವೀರಶೈವ ಮೊದಲಾದ ಧರ್ಮಗಳಿಗೆ ಸಂಬಂದಿsಸಿದ ಧಾರ್ಮಿಕ ಆಚಾರ್ಯರನ್ನು ಕುರಿತ ಕೃತಿಗಳು ರಚಿತವಾದವು. ಬುದ್ಧನನ್ನು ಕುರಿತಂತೆ ಜಿ.ಪಿ.ರಾಜರತ್ನಂ ಅವರ ಗೌತಮ ಬುದ್ಧ ಒಂದು ಉತ್ತಮ ಜೀವನಚರಿತ್ರೆ. ಮಹಾವೀರನ ಜೀವನ ಚರಿತ್ರೆಯನ್ನು ಮಿರ್ಜಿ ಅಣ್ಣಾರಾಯರು ಸಮರ್ಪಕವಾಗಿ ನೀಡಿದ್ದಾರೆ. ಶೈವಧರ್ಮಕ್ಕೆ ಸಂಬಂದಿಸಿದ 63 ಪುರಾತನರ ಜೀವನವನ್ನು ವಸ್ತುವಾಗುಳ್ಳ ಸಿದ್ಧಯ್ಯ ಪುರಾಣಿಕರ ಶರಣಚರಿತಾಮೃತ, ಆಳ್ವಾರರ ಬಗೆಗೆ ಯಾಮುನಾಚಾರ್ಯರು ಬರೆದಿರುವ ಆಳ್ವಾರರು- ಇವು ಉಲ್ಲೇಖನೀಯ. ಆದರೆ ಇವು ಶುದ್ಧ ಜೀವನಚರಿತ್ರೆಗಳಲ್ಲ. ಇದಕ್ಕೆ ಕಾರಣ ಇಂಥ ಜೀವನ ಚರಿತ್ರೆಗಳನ್ನು ಬರೆಯುವುದಕ್ಕೆ ದೊರಕುವ ಸಾಮಗ್ರಿಯ ಅಭಾವ, ರಾಮಾನುಜರನ್ನು ಕುರಿತು ಬರೆದ ಎಚ್ಚೆಸ್ಕೆ ಅವರ ಶ್ರೀ ರಾಮಾನುಜ ಧಾರ್ಮಿಕ ಪುರುಷರನ್ನು ಕುರಿತು ಬರೆದ ಜೀವನ ಚರಿತ್ರೆಗಳಲ್ಲಿ ಗಮನಾರ್ಹವಾದದ್ದು. ಬಸವಣ್ಣನವರ ಜೀವನಚರಿತ್ರೆಯನ್ನು ಕುರಿತಂತೆ ಸಾಕಷ್ಟು ಗ್ರಂಥಗಳು ರಚಿತವಾಗಿವೆ. ಮೈಸೂರು ಸರ್ಕಾರ ಬಸವೇಶ್ವರರ ಎಂಟನೆಯ ಶತಮಾನೋತ್ಸವ ಸಂದರ್ಭದಲ್ಲಿ ಹೊರತಂದ ಶ್ರೀ ಬಸವೇಶ್ವರರು- ಪ್ರಾಮಾಣಿಕ ಪ್ರಾತಿನಿದಿಕವಾದ ಗ್ರಂಥ. ಇದರಲ್ಲಿ ಕನ್ನಡದ ಹಲವಾರು ಶ್ರೇಷ್ಠ ವಿದ್ವಾಂಸರು ತಮ್ಮ ಲೇಖನಗಳಲ್ಲಿ ಬಸವಣ್ಣನವರ ಜೀವನ, ವ್ಯಕ್ತಿತ್ವ, ಸಾಧನೆ, ಸಿದ್ಧಿ- ಇವುಗಳ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ. ಬಸವಣ್ಣನವರ ಬದುಕಿನ ವಿವಿಧ ಮುಖಗಳ ಪರಿಚಯ ಈ ಗ್ರಂಥದಿಂದ ತಿಳಿದುಬರುತ್ತದೆ. ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿದ ಬಸವಣ್ಣನವರ ವ್ಯಕ್ತಿತ್ವ ಹಾಗೂ ಜೀವನ ಸಿದ್ಧಿ- ಆರು ಉಪನ್ಯಾಸಗಳನ್ನೊಳಗೊಂಡ ಒಂದು ಉತ್ತಮ ಗ್ರಂಥ. ಈ ರೀತಿಯ ಹಲವಾರು ಗ್ರಂಥಗಳು ಕನ್ನಡ ಕವಿಗಳನ್ನು ಕುರಿತಂತೆ ಪ್ರಕಟಗೊಂಡಿವೆ. ಎಂ.ಚಿದಾನಂದಮೂರ್ತಿಯವರ ‘ಬಸವಣ್ಣನವರು’ ವಸ್ತುನಿಷ್ಠ ಹಾಗೂ ಸಂಶೋಧನ ದೃಷ್ಟಿಯನ್ನೊಳಗೊಂಡ, ವಚನ, ಶಾಸನ ಹಾಗೂ ಕಾವ್ಯಾಧಾರಗಳ ಮೇಲೆ ಬರೆದ ಗ್ರಂಥ. ‘ರಾಮಕೃಷ್ಣಾಲೀಲಾ ಪ್ರಸಂಗ’, ಬಂಗಾಲಿಯಿಂದ ಸ್ವಾಮಿ ಪ್ರಣವೇಶಾನಂದರಿಂದ ಕನ್ನಡಕ್ಕೆ ಅನುವಾದಗೊಂಡ ರಾಮಕೃಷ್ಣಪರಮಹಂಸರನ್ನು ಕುರಿತ ಗ್ರಂಥ. ‘ರಾಮಕೃಷ್ಣ ಶಿಷ್ಯಕೋಟಿ’, ರಾಮಕೃಷ್ಣರ ಮೂವತ್ತು ಜನ ಶಿಷ್ಯರನ್ನೂ ಅವರ ಜೀವನ ಚರಿತ್ರೆಯನ್ನೂ ಸಂಕ್ಷೇಪವಾಗಿ ರೂಪಿಸುವ ಒಂದು ಗಮನಾರ್ಹ ಕೃತಿ. ಸ್ವಾಮಿ ಸೋಮನಾಥಾನಂದರು ಶ್ರೀ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಶಾರದಾದೇವಿ ಎಂಬ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಜಿ.ವೆಂಕಟಯ್ಯನವರ ‘ಬುದ್ಧದೇವ’ ತನ್ನ ಸರಳ ಶೈಲಿಯಿಂದ ಗಮನ ಸೆಳೆಯುತ್ತದೆ. ಬುದ್ಧನನ್ನು ಕುರಿತಂತೆ ಮರಾಠಿಯಲ್ಲಿ ರಚಿತವಾಗಿರುವ ಭಗವಾನ್ ಬುದ್ಧ ಶ್ರೀರಂಗರಿಂದ ಕನ್ನಡಕ್ಕೆ ಅನುವಾದಗೊಂಡಿದೆ. ಉ.ಕಾ. ಸುಬ್ಬರಾಯಚಾರ್ಯರ ಯೇಸುಕ್ರಿಸ್ತ ಎಂಬ ಜೀವನ ಚರಿತೆ ಹೆಸರಿಸಬೇಕಾದ ಮಹತ್ತ್ವ ಪಡೆದಿದೆ. ಕುವೆಂಪು ಅವರ ಶ್ರೀ ರಾಮಕೃಷ್ಣಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಎಂಬ ಜೀವನಚರಿತ್ರೆಗಳು ಕನ್ನಡ ಜೀವನ ಚರಿತ್ರೆಗಳ ಸಾಲಿನಲ್ಲಿ ವಿಶಿಷ್ಟವಾಗಿ ನಿಲ್ಲುವ ಮಹತ್ತ್ವ ಪಡೆದುಕೊಂಡಿವೆ. ವಿಷಯನಿರೂಪಣೆ, ಭಾಷೆ, ವರ್ಣನೆ ಈ ದೃಷ್ಟಿಗಳಿಂದ ಈ ಜೀವನ ಚರಿತ್ರೆಗಳು ಕಾದಂಬರಿಯ, ಕಾವ್ಯತ್ವದ ಓಜಸ್ಸನ್ನು ಪಡೆಯುತ್ತವೆ. ಕುವೆಂಪು ಅವರ ಶೈಲಿ ಈ ರಂಗದಲ್ಲೂ ಪ್ರತ್ಯೇಕವಾಗಿ ಗುರುತಿಸುವಷ್ಟರಮಟ್ಟಿಗೆ ಸ್ವಂತಿಕೆಯಿಂದ ಕೂಡಿದೆ. ಕೋ.ಚೆನ್ನಬಸಪ್ಪನವರ ಸ್ವಾತಂತ್ರ್ಯಯೋಧ ಶ್ರೀಅರವಿಂದ ಅರವಿಂದರ ಜೀವನವನ್ನು ಪರಿಚಯ ಮಾಡಿಕೊಡುತ್ತದೆ.

ಸಾಹಿತಿಗಳ, ಕಲಾವಿದರ ಜೀವನ ಚರಿತ್ರೆಗಳು ಕನ್ನಡದಲ್ಲಿ ವಿಪುಲ ಸಂಖ್ಯೆಯಲ್ಲಿವೆ. ಪ್ರಾಚೀನ ಕನ್ನಡ ಕವಿಗಳನ್ನು ಕುರಿತಂತೆ ಪಂಪ, ರನ್ನ, ಮುದ್ದಣ, ಕುಮಾರವ್ಯಾಸ ಮೊದಲಾದ ಪ್ರಶಸ್ತಿ ಗ್ರಂಥಗಳಲ್ಲಿ ಆಯಾ ಕವಿಗಳ ಜೀವನ ಪರಿಚಯ ಸಾಕಷ್ಟು ದೊರೆಯುತ್ತದೆ. ಪಂಪನನ್ನು ಕುರಿತಂತೆ ಪ್ರಕಟವಾಗಿರುವ ಮುಳಿಯ ತಿಮ್ಮಪ್ಪಯ್ಯನವರ ‘ನಾಡೋಜ ಪಂಪ’ ಸಂಶೋಧನೆ, ಚರಿತ್ರೆ, ಸಾಹಿತ್ಯ- ಈ ಮೂರು ಅಂಶಗಳನ್ನೊಳ ಗೊಂಡ ಜೀವನ ಚರಿತ್ರೆಯಾಗಿ ರೂಪುಗೊಂಡಿದೆ. ಇವರೇ ರಚಿಸಿದ ಪಾರ್ತಿಸುಬ್ಬ ಸಹ ಒಂದು ಗಮನಾರ್ಹ ಕೃತಿ. ದೇಜಗೌ ಅವರ ರಾಷ್ಟ್ರಕವಿ ಕುವೆಂಪು ಮತ್ತು ತೀನಂಶ್ರೀ, ಅನಕೃ ಅವರ ಕೈಲಾಸಂ, ತರಾಸು ಅವರ ಅನಕೃ, ವಿ.ಸೀ.ಅವರ ಶಿವರಾಮಕಾರಂತ, ಎನ್.ಅನಂತರಂಗಾಚಾರ್ಯರ ಪ್ರಾಕ್ತನ ವಿಮರ್ಶಾ ವಿಚಕ್ಷಣ, ರಾವ್ಬಹದ್ದೂರ ಆರ್.ನರಸಿಂಹಾಚಾರ್ಯ ಜೀವನ ಮತ್ತು ಕಾರ್ಯ, ಶಿವರಾಮಕಾರಂತರ ಕಲಾವಿದ ಕೃಷ್ಣಹೆಬ್ಬಾರರು, ತಿರುಮಲೆ ರಾಜಮ್ಮನವರ ವೀಣೆ ಶೇಷಣ್ಣ, ಕು.ಶಿ.ಹರಿದಾಸಭಟ್ಟ ಅವರ ಕೆ.ಕೆ.ಹೆಬ್ಬಾರರ ಕಲೆ ಮತ್ತು ಬದುಕು, ಎಚ್.ತಿಪ್ಪೇರುದ್ರಸ್ವಾಮಿಯವರ ಬಸವೇಶ್ವರ, ಗಾಂದೀಜಿ, ಚೆನ್ನವೀರ ಕಣವಿಯವರ ಮಧುರಚೆನ್ನ, ವಿಜಯನಾರಸಿಂಹ ಅವರ ಪುಟ್ಟಣ್ಣ ಕಣಗಾಲ್, ಎಲ್.ಎಸ್.ಶೇಷಗರಿರಾವ್ ಅವರ ಟಿ.ಪಿ.ಕೈಲಾಸಂ, ವಿ.ಎಂ.ಇನಾಂದಾರರ, ಬಿ.ಎಂ.ಶ್ರೀ., ಶಾ.ಮಂ.ಕೃಷ್ಣರಾಯರ ಪಾಪು, ಬಸವರಾಜ ಮನ್ಸೂರ, ಕವಿ ತಿಪ್ಪಯ್ಯ, ಮಾಸ್ತರ್, ಅ.ನ.ಕೃಷ್ಣರಾಯ, ಬಳ್ಳಾರಿ ಬೀಚಿ ಪ್ರತಿಭಾಶಿಖರಗಳು, ಕೀರ್ತಿಕಳಶಗಳು, ಹಾ.ಮಾ.ನಾಯಕರ ಸ್ತವನ, ಆರ್.ವಿ.ಎಸ್. ಸುಂದರಂರವರ ರಾಮಕೋಟೀಶ್ವರರಾವ್, ಪಟ್ಟಾಬಿ ಸೀತಾರಾಮಯ್ಯ, ಪಾಲ್ಕುರಿಕೆ ಸೋಮನಾಥ, ವೇಮನ, ಅಕ್ಕಮಹಾದೇವಿಯವರ ದಾಸವರೇಣ್ಯ, ಅನ್ನಮಾಚಾರ್ಯರು, ಬಿ.ಶಾಮಸುಂದರ ಅವರ ಫ.ಗು, ಹಳ್ಳಕಟ್ಟಿ, ಮಾಚಿದೇವ, ಡಾ.ಹಾನಿಮನ್ ಮೊದಲಾದ ಗ್ರಂಥಗಳು ಗಮನಾರ್ಹವಾಗಿವೆ. ರಾಜಕುಮಾರ್ ಹಾಗೂ ಕಾಡುಗಳ್ಳ ವೀರಪ್ಪನ್ ಕುರಿತ ಅನೇಕ ಜೀವನ ಚರಿತ್ರೆಗಳು ಪ್ರಕಟವಾಗಿವೆ. ಪ್ರಪಂಚ ವಿಜ್ಞಾನಿ ಜೀವನ ಚರಿತ್ರೆಯಲ್ಲಿ ಕೆಲವು ಕೃತಿಗಳು ಕನ್ನಡಕ್ಕೆ ಅನುವಾದವಾಗಿಯೂ ಬಂದಿವೆ. ಐಸಾಕ್ ನ್ಯೂಟನ್, ಥಾಮಸ್ ಆಲ್ವ ಎಡಿಸನ್, ಯಂತ್ರಯೋಗಿ ಕಿರ್ಲೋಸ್ಕರ್ ಲಕ್ಷಣರಾಯ, ಮಹಾವಿe್ಞÁನಿಗಳು, ಭಾರತೀಯ ವಿe್ಞÁನಿಗಳು, ಮೇರಿ ಕ್ಯೂರಿ, ಮೇಡಂ ಕ್ಯೂರಿ, ಚಾಲ್ರ್ಸ್‌ ಡಾರ್ವಿನ್, ಅಲೆಗ್ಸಾಂಡರ್ ಫ್ಲೆಮಿಂಗ್, ಲೂಯಿ ಪ್ಯಾಶ್ಚರ್, ಆಲ್ಬರ್ಟ್ ಐನ್ಸ್ಟಿನ್, ಹೆನ್ರಿ ಫೋರ್ಡ್, ದೇಶ ವಿದೇಶದ ಪ್ರಭೃತಿಗಳಾದ ಮ್ಯಾಕ್ಸಿಂ ಗಾರ್ಕಿ, ಸಾಕ್ರಟೀಸ್, ಸ್ಟ್ಯಾಲಿನ್, ಲೆನಿನ್, ನಿಕ್ಸನ್, ಕಾರ್ಲ್ ಮಾಕ್ರ್ಸ್‌, ಕೆಮಾಲ್ ಪಾಷಾ, ಜಾನ್ ಸ್ಟುವರ್ಟ್ ಮಿಲ್, ಫ್ರಾಂಕ್ಲಿನ್, ಮಾರ್ಟಿನ್ ಲೂಥರ್ ಕಿಂಗ್, ಸ್ಯಾಮ್ಯುಯಲ್ ಜಾನ್ಸನ್, ಅಬ್ರಹಾಂ ಲಿಂಕನ್, ಕೆನಡಿ ಮೊದಲಾದವರ ಜೀವನ ಚರಿತ್ರೆಗಳು ಸ್ವಂತ ಕೃತಿಗಳಾಗೋ ಅನುವಾದ ಕೃತಿಗಳಾಗೋ ಕನ್ನಡಿಗರಿಗೆ ದೊರಕಿವೆ. (ಎಸ್.ವಿ.ಪಿ.ಬಿ.) ನ್ಯಾಷನಲ್ ಬುಕ್ ಟ್ರಸ್ಟ್‌ ಆಫ್ ಇಂಡಿಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಹಲವು ರಾಷ್ಟ್ರೀಯ ನಾಯಕರ ಮತ್ತು ಭಾರತೀಯ ಲೇಖಕರನ್ನು ಕುರಿತಂತೆ ಜೀವನ ಚರಿತ್ರೆಗಳನ್ನು ಪ್ರಕಟಿಸಿವೆ. ಈ ಮಾಲೆಗಳಲ್ಲಿ ರಾಜಾರಾಮಮೋಹನರಾಯ್, ಕಬೀರ, ಚಂಡಿದಾಸ್, ಜಯದೇವ ಮೊದಲಾದ ಸಮಾಜ ಸುಧಾರಕರು, ಸಂತರು, ಕವಿಗಳನ್ನು ಕುರಿತಂತೆ ಜೀವನ ಚರಿತ್ರೆಗಳು ಪ್ರಕಟವಾಗಿವೆ. ಶ್ರೀನಿವಾಸರಾಘುವನ್ರ್ ನಮ್ಮಾಳ್ವಾರ್ (ಪುತಿನ) ಕಂಬನ್ (ಎಸ್.ಮಹಾಜನ್) ದೇವೆಂದ್ರನಾಥ್ ಠಾಕೂರ್ (ನಾ.ಚೌಧರಿ) ಅನುವಾದ ಗೊಂಡಿವೆ. ಸ್ನೇಹಲತಾ ರೆಡ್ಡಿಯವರ ಜೈಲಿನ ದಿನಚರಿ (ಯು.ಆರ್.ಅನಂತಮೂರ್ತಿ), ಅನುವಾದಗೊಂಡಿದೆ. ಬೆಂಗಳೂರಿನ ಶ್ರೀ ರಮಣ ಸೆಂಟರ್ ಫಾರ್ ಲರ್ನಿಂಗ್ ಸಂಸ್ಥೆಯು ಫಾಲ್ ಬ್ರೆಂಟನ್ರ ರಮಣ ಮಹರ್ಷಿ ಅವರ ಸಂದೇಶಗಳನ್ನು ಅನುವಾದಿಸಿ (ಎ.ಎಸ್.ವೇಣುಗೋಪಾಲರಾವ್) ಪ್ರಕಟಿಸಿದೆ. ಬಿ.ವಿ.ನರಸಿಂಹ ಸ್ವಾಮಿಯವರು ರಚಿಸಿದ ಸೆಲ್ಫ್‌ ರಿಯಲೈಸೇಷನ್ ಎಂಬುದು ರಮಣ ಮಹರ್ಷಿಗಳ ಜೀವನ ಚರಿತ್ರೆ. ಇದನ್ನು ಕೆ.ಎ.ನಾರಾಯಣ್ ಅನುವಾದಿಸಿದ್ದಾರೆ. ನಾ.ಕಸ್ತೂರಿಯವರ ಸತ್ಯಂ ಶಿವಂ ಸುಂದರಂ ಎಂಬುದು ಸತ್ಯಸಾಯಿಬಾಬಾರವರ ಜೀವನ ಚರಿತ್ರೆ. ಕೆ.ಎಸ್.ನಾರಾಯಣ ಸ್ವಾಮಿಯವರು ಅಬ್ರಹಾಂ ಲಿಂಕನ್, ಲೆನಿನ್ ಮತ್ತು ಗಾಂದೀಜಿಯವರ ಜೀವನ ಚರಿತ್ರೆ ರಚಿಸಿದ್ದಾರೆ. ಕ.ರಾ.ಸಾರಂಗರ ರಾಜೇಂದ್ರಪ್ರಸಾದ್, ಮತ್ತೂರು ಕೃಷ್ಣಮೂರ್ತಿಯವರ ಡಾ.ಜಾಕೀರ್ ಹುಸೇನ್, ಡಿ.ವಿ.ಜಿ.ಯವರ ಮೈಸೂರಿನ ದಿವಾನರುಗಳು ಜ್ಞಾಪಕ ಚಿತ್ರಶಾಲೆ ಸಂಪುಟಗಳು, ಬಿ.ಆರ್.ಪ್ರಾಣೇಶರಾಯರ, ಲಾಲ್ ಬಹದ್ದೂರ್ ಶಾಸ್ಟ್ರೀ, ರಾಜಾರಾಮ ಮೋಹನರಾಯ, ಕೆ.ಎಸ್.ಪಾಟೀಲರ ಸಮಾಜವಾದಿ ಇಂದಿರಾಗಾಂದೀ, ನೇತಾಜಿ ಸುಭಾಷ್ಚಂದ್ರ ಬೋಸ್, ಜಿ.ಎಸ್.ಭಟ್ಟರ ರಾಜಾರಾಮ್ ಮೋಹನ ರಾಯ್, ಸಾಹಿತ್ಯ ಕಲಾ ಸಂಪನ್ನರು, ಲೋಕಮಾನ್ಯ, ರಾಷ್ಟ್ರಶಿಲ್ಪಿ (ಸರ್ದಾರ ಪಟೇಲ್) ಲಾಲಾ ಲಜಪತರಾಯ್, ಟಿ.ಆರ್.ಅನಂತರಾಮು ಅವರ ಶಕ್ತಿ ಸಾರಥಿ ರಾಷ್ಟ್ರಪತಿ (ಅಬ್ದುಲ್ ಕಲಾಂ), ಎಂ.ಎಸ್.ಜಾಂದ್ ಕವಟಿರವರ ಸೇವೆ ತ್ಯಾಗ (ಡಿ.ವಿ.ನಂಜುಂಡಪ್ಪನವರ ಜೀವನ ಚರಿತ್ರೆ), ಹೊ.ಶ್ರೀನಿವಾಸಯ್ಯನವರ ಎನ್.ಎಸ್.ಹರ್ಡೀಕರ, ದೇಜಗೌ ಅವರ ಅಮೇರಿಕಾ ಗಾಂದಿ, ಲೋಕದ ಬೆಳಕು, ಲೋಕನಾಯಕ ವಿಚಾರವಾದಿ ಪೆರಿಯಾರ್, ನಿತ್ಯ ಸಚಿವ, ಕರ್ನಾಟಕದ ರೂವಾರಿ, ತೀ.ತಾ.ಶರ್ಮರ ಮೋಕ್ಷಗುಂಡಂ, ವಿ.ಎಂ.ಇನಾಂದಾರ್ರ ಡಾ.ಅಂಬೇಡ್ಕರ್ ವ್ಯಕ್ತಿ ಮತ್ತು ವಿಚಾರ, ರಂಜಾನ್ ದರ್ಗಾರ ನೆಲ್ಸನ್ ಮಂಡೇಲಾ, ಪಾಟೀಲ್ ಪುಟ್ಟಪ್ಪನವರ ಭಾರತದ ಬೆಳಕು, ನೆಲದ ನಕ್ಷತ್ರಗಳು, ಜೀವನ ಪ್ರಕಾಶ, ಡಿ.ಎಸ್.ಜಯಪ್ಪಗೌಡರ ಸರ್.ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಮೊದಲಾದವು ಕನ್ನಡ ನಾಡಿನ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿವೆತ್ತ ರಾಜಕಾರಣಿಗಳ ಜೀವನ ಚರಿತ್ರೆಯನ್ನು ನಿರೂಪಿಸುತ್ತವೆ. ಎಚ್ಚೆಸ್ಕೆಯವರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ವ್ಯಕ್ತಿ ಚಿತ್ರಗಳ ಮೂರು ಬೃಹತ್ ಸಂಪುಟಗಳಾದ ಬೆಳಕು ಚೆಲ್ಲಿದ ಬದುಕು, ಮಾನ್ಯರು ಸಾಮಾನ್ಯರು, ಗಗನಚುಕ್ಕಿ-ಭರಚುಕ್ಕಿ -ಇವು ಉಲ್ಲೇಖನೀಯ. ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯು ಕನ್ನಡ ಪ್ರತಿಭೆ ಎಂಬ ಕೃತಿಯನ್ನು ಪ್ರಕಟಿಸಿದೆ. ಇದರಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಆಡಳಿತ, ಶಿಕ್ಷಣ, ಸಮಾಜಸೇವೆ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳ ಬಗ್ಗೆ ಚಿತ್ರಣವಿದೆ. ಮೈಸೂರಿನ ಮುಲಕನಾಡು ಸಭಾದವರು ಮುಲಕನಾಡು ಮಹನೀಯರು ಎಂಬ ಮಾಲಿಕೆಯಲ್ಲಿ ವಿಶ್ವೇಶ್ವರಯ್ಯ, ಟಿ.ಎಸ್.ವೆಂಕಣ್ಣಯ್ಯ, ಎಚ್.ವಿ.ನಂಜುಂಡಯ್ಯ ಬಿ.ಕೃಷ್ಣಪ್ಪ, ದೇವುಡು ಮೊದಲಾದ ವ್ಯಕ್ತಿಗಳನ್ನು ಕುರಿತು 20 ಕೃತಿಗಳನ್ನು ಹೊರತಂದಿದ್ದಾರೆ.

ಒಬ್ಬ ವ್ಯಕ್ತಿಯ ಸಾಧನೆಯ ಗೌರವಾರ್ಥವಾಗಿ ಅರ್ಪಿಸುವ ಅಬಿನಂದನಾ ಗ್ರಂಥಗಳು, ಸಂಭಾವನಾ ಗ್ರಂಥಗಳು ಜೀವನ ಚರಿತ್ರೆಗೆ ದೊಡ್ಡ ಕೊಡುಗೆಗಳೇ ಆಗಿವೆ. ಇಲ್ಲಿ ಲೇಖಕರು ವಿವಿಧ ದೃಷ್ಟಿ ಕೋನಗಳಿಂದ ಅಬಿನಂದಾನಾರ್ಹ ವ್ಯಕ್ತಿಯ, ಜೀವನದ ವಿವಿಧ ಮುಖಗಳ ಪರಿಚಯ ವಿಮರ್ಶೆಗಳನ್ನು ಒದಗಿಸಿರುತ್ತಾರೆ. ವ್ಯಕ್ತಿಯ ಜೀವನ ಚರಿತ್ರೆ ಸಾಧ್ಯವಾದ ಮಟ್ಟಿಗೆ ಇವುಗಳಲ್ಲಿ ಸಮರ್ಪಕವಾಗಿ ಸಿಗುತ್ತದೆ. (ನೋಡಿ: ಕನ್ನಡದಲ್ಲಿ ಸಂಕಲನ ಗ್ರಂಥಗಳು).

ಕನ್ನಡದ ಅನೇಕ ಪ್ರಮುಖ ಸಾಹಿತಿಗಳು ಅಂಕಣ ಪ್ರಕಾರ ಸಾಹಿತ್ಯದಲ್ಲಿ ಕೆಲಸ ಮಾಡಿದ್ದಾರೆ. ಈ ಬರೆಹಗಳಲ್ಲಿ ಹಲವು ವ್ಯಕ್ತಿಗಳ ಜೀವನ, ಸಾಧನೆಗಳು ದೊರೆಯುತ್ತವೆ (ನೋಡಿ: ಕನ್ನಡದಲ್ಲಿ ಅಂಕಣ ಸಾಹಿತ್ಯ). ಕನ್ನಡದಲ್ಲಿ ಕವಿಕೃತಿಗಳನ್ನು ಕುರಿತಂತೆ ಹಲವರು ಪ್ರೌಢ ಪ್ರಬಂಧಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಆ ಲೇಖಕರ ಜೀವನ ಚರಿತ್ರೆಗಳು ಲಭ್ಯವಾಗಿವೆ. ಸಾಹಿತ್ಯ ಸಂಪದ ಎಂಬ ಮಾಲೆಯಲ್ಲಿ ನವಕರ್ನಾಟಕ ಪ್ರಕಾಶನ ಸಂಸ್ಥೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಲೇಖಕರ ಬಗೆಗೆ ಕೃತಿಗಳನ್ನು ಹೊರತರುವ ಯೋಜನೆಯನ್ನು (ಸಂ: ಹಾ.ಮಾ. ನಾಯಕ, ಪ್ರಧಾನ ಗುರುದತ್ತ) ಹಮ್ಮಿಕೊಂಡಿದ್ದು, ಇದುವರೆಗೆ 20 ಕೃತಿಗಳು ಹೊರಬಂದಿವೆ (2004).

ಕನ್ನಡದಲ್ಲಿ ಆತ್ಮಚರಿತ್ರೆಗಳು

ಸಂಪಾದಿಸಿ

ವ್ಯಕ್ತಿ ತನ್ನ ಜೀವನ ವಿಚಾರಗಳನ್ನು ತಾನೇ ಬರೆದಲ್ಲಿ ಆತ್ಮಕಥೆ ಎನಿಸಿಕೊಳ್ಳುತ್ತದೆ. ಅದನ್ನೇ ಇತರರು ಬರೆದಾಗ ಜೀವನ ಚರಿತ್ರೆಯಾಗುತ್ತದೆ. ಆತ್ಮಕಥೆ ಜೀವನ ಚರಿತ್ರೆಯೆಂಬ ಸಾಹಿತ್ಯ ಪ್ರಕಾರದ ಒಂದು ಭಾಗ. ಆತ್ಮಕಥೆ ವ್ಯಕ್ತಿಯೊಬ್ಬನ ಚರಿತ್ರೆಯಾಗಿರುವಂತೆ ಆತನ ಪರಿಸರದ ಚರಿತ್ರೆಯೂ ಆಗಿರುತ್ತದೆ. ಕಥಾನಾಯಕ ತನ್ನ ಮತ್ತು ತನ್ನ ಸುತ್ತುಮುತ್ತಿನ ಜೀವನವನ್ನು ತಾನು ಕಂಡಂತೆ ಇಲ್ಲಿ ವರ್ಣಿಸಿರುತ್ತಾನೆ. ಬರೆಯುವಷ್ಟು ಶಕ್ತಿ ಮತ್ತು ತಾಳ್ಮೆ ಇದ್ದಲ್ಲಿ ಪ್ರತಿಯೊಬ್ಬನೂ ತನ್ನ ಆತ್ಮಕಥೆಯನ್ನು ಬರೆಯಬಹುದು. ಒಂದೊಂದೊಂದಕ್ಕೂ ಪ್ರಾಮುಖ್ಯ ಇದ್ದೇ ಇದೆ. ಬರೆದಾತ ಸಮಾಜದಲ್ಲಿ ಗಣ್ಯವ್ಯಕ್ತಿಯಾದಾಗಲಂತೂ ಆತ ಬರೆದ ಆತ್ಮಕಥೆಗೆ ಹೆಚ್ಚಿನ ಪ್ರಾಧಾನ್ಯ ಒದಗುತ್ತದೆ. ಕನ್ನಡದಲ್ಲಿ ಆತ್ಮಕಥಾಸಾಹಿತ್ಯ ಹೆಚ್ಚು ಬೆಳೆದಿಲ್ಲವೆನ್ನಬೇಕು. ಈಗ ಬಂದಿರುವ ಜೀವನಚರಿತ್ರೆಗಳಲ್ಲಿ ಅರ್ಧದಷ್ಟೂ ಆತ್ಮಕಥೆಗಳಿಲ್ಲ. ಬಂದಿರುವಂಥವು ಅರ್ಧ ಸ್ವತಂತ್ರ ಆತ್ಮಕಥೆಗಳಾದರೆ ಉಳಿದವು ಅನುವಾದಗಳು. ಅವು ರಾಷ್ಟ್ರನಾಯಕರು, ಅನ್ಯರಾಷ್ಟ್ರನಾಯಕರು, ಸಾಹಿತಿಗಳು ಮತ್ತು ವಿe್ಞÁನಿಗಳನ್ನು ಕುರಿತವಾಗಿವೆ. ಸ್ವತಂತ್ರ ಆತ್ಮಕಥೆಯಲ್ಲಿ 50ಕ್ಕೂ ಹೆಚ್ಚು ಜನ ಸಾಹಿತಿಗಳ ಮತ್ತು ಕಲಾವಿದರ ಆತ್ಮವೃತ್ತಾಂತಗಳನ್ನು ಕಾಣಬಹುದು. 1350 ಪುಟಗಳಷ್ಟು ವ್ಯಾಪ್ತಿವುಳ್ಳ ಕೆಲವು ಸಂಪುಟಗಳಲ್ಲಿ ಪ್ರಕಟವಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಭಾವ (1968-69) ಕನ್ನಡದ ಆತ್ಮಚರಿತ್ರೆಗಳಲ್ಲಿ ಒಂದು ದೊಡ್ಡ ಹೆಜ್ಜೆ. ಗಾತ್ರದಲ್ಲಿಯೂ ಪಾತ್ರದಲ್ಲಿಯೂ ಹಿರಿದಾದ ಸ್ಥಾನವನ್ನು ಪಡೆದಿರುವ ಈ ಗ್ರಂಥ ಅವರ ಸಾರ್ಥಕ ಬಾಳಿನ ಅರ್ಧಶತಮಾನವನ್ನು ಬಿಂಬಿಸಿದೆ. ಮೊದಲ ಭಾಗದಲ್ಲಿ ತಮ್ಮ ಊರಿಗೆ ಮಾಸ್ತಿ ಎಂದು ಹೆಸರು ಬರಲು ಕಾರಣ, ತಮ್ಮ ಬಾಲ್ಯ, ವಿದ್ಯಾಭ್ಯಾಸ, ಆಗಿನ ಕಾಲದ ಸಂಪ್ರದಾಯ ಮೊದಲಾದವುಗಳನ್ನು ವಿವರವಾಗಿ ಚಿತ್ರಿಸಿದ್ದಾರೆ. ಎರಡನೆಯ ಭಾಗದಲ್ಲಿ ಅವರ ಅದಿಕಾರಾವದಿಯ ಏಕಮುಖ ಚಿತ್ರವಿದೆ. ಮೂರನೆಯ ಭಾಗದಲ್ಲಿ ವಿಶ್ರಾಂತಿ ಕಾಲದ ಬದುಕಿದೆ. ಮಾಸ್ತಿಯವರ ಸಮಕಾಲೀನರಾಗಿ ಕನ್ನಡಕ್ಕಾಗಿ ಬಹುವಿಧವಾಗಿ ದುಡಿದ ಕೆಲವು ಹಿರಿಯ ಚೇತನಗಳ ವಿಷಯಗಳೂ ಹಾಸುಹೊಕ್ಕಾಗಿ ಈ ಗ್ರಂಥದಲ್ಲಿ ಬಂದಿವೆ. ಒಂದು ದೃಷ್ಟಿಯಿಂದ ಇದು ಸುಮಾರು ಆರು ದಶಕಗಳ ಕನ್ನಡನಾಡಿನ ಚಿತ್ರವನ್ನೂ ಕನ್ನಡ ನಿಧಾನವಾಗಿಯಾದರೂ ಸುಪುಷ್ಟವಾಗಿ ತಲೆಯೆತ್ತಿದ ಬಗೆಯನ್ನೂ ಪ್ರತಿಬಿಂಬಿಸುತ್ತದೆ.

ಹುಚ್ಚು ಮನಸ್ಸಿನ ಹತ್ತು ಮುಖಗಳು (1948) ಕೆ.ಶಿವರಾಮ ಕಾರಂತರ ಕಾಲುಶತಮಾನದ ಬಾಳಿನ ಕಥೆ. ಈ ಕೃತಿ ಕಾರಂತರ ಸಮೃದ್ಧಾನುಭವಕ್ಕೂ ಬಹುಮುಖ ಪ್ರತಿಭೆಗೆ ಜ್ವಲಂತ ಸಾಕ್ಷಿಯಾಗಿದೆ. ಗುರುವಿಲ್ಲದೆ, ಗುರಿಯಿಲ್ಲದೆ ಹುಚ್ಚು ಮನಸ್ಸು ತೋರಿದ ದಿಕ್ಕಿನಲ್ಲಿ ನಡೆದು ಇವರ ಸಾಧನೆ ಅದ್ಭುತ. ವಿಷ್ಣುವಿಗೆ ಬರಿಯ ಹತ್ತು ಅವತಾರಗಳಾದರೆ, ತನ್ನ ಧ್ಯೇಯಗಳು ಹದಿನಾರು ಅವತಾರಗಳನ್ನು ತಳೆಯು ವಂತಾಯಿತೆಂದು ಲೇಖಕರೇ ಹೇಳಿಕೊಂಡಿದ್ದಾರೆ. ರಾಷ್ಟ್ರಭಕ್ತಿ, ಸ್ವದೇಶಿಚಳವಳಿ, ವ್ಯಾಪಾರ, ಪತ್ರಿಕೋದ್ಯಮ, ಅಧ್ಯಾತ್ಮಸಾಧನೆ, ಕಲೆಯ ಬಿsನ್ನ ಬಿsನ್ನ ಮುಖಗಳು, ಫೋ಼ಟೋಗ್ರಪಿ, ನಾಟಕ, ನೃತ್ಯ, ಚಿತ್ರ, ವಾಸ್ತು, ಸಂಗೀತ, ಚಲನಚಿತ್ರ, ಸಮಾಜಸುಧಾರಣೆ, ಗ್ರಾಮೋದ್ಧಾರ, ಶಿಕ್ಷಣ ವಲಯದಲ್ಲಿ ಪ್ರಯೋಗಗಳು, ಉದ್ಯೋಗ ಇವೆಲ್ಲ ಅವತಾರಗಳೂ ಅವಾಂತರಗಳೂ ಕಾರಂತರ ಜೀವನದಲ್ಲಿ ಆಗಿಹೋಗಿವೆ. ಸ್ವತಂತ್ರ ಜೀವನದಿಂದ ಸನ್ಯಾಸಿ ಜೀವನದ ಮೂಲಕ ಹಾದು ಸಂಸಾರಿಯಾಗಿಯೂ ಸಾಗಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪ್ರಚಲಿತ ವಿಷಯಗಳ ಬಗ್ಗೆ ಆಳವಾಗಿ ಅಲೋಚನೆ ಮಾಡಿ, ಅಸಾಧ್ಯ ಸಾಹಸಗಳಿಗೆ ಕೈಹಾಕಿ ಜಯಿಸಿದ ಕೀರ್ತಿ ಕಾರಂತರದು. ಇಷ್ಟೊಂದು ವ್ಯಾಪಕ ಹವ್ಯಾಸಗಳನ್ನುಳ್ಳ ಬೇರೊಬ್ಬ ಕನ್ನಡ ಸಾಹಿತಿಯನ್ನು ಹೆಸರಿಸುವುದು ಕಷ್ಟ. ಸ್ಮೃತಿಪಟಲದಿಂದ (1977-78 ಮೂರು ಭಾಗಗಳು) ಎಂಬ ಕೃತಿ ಕಾರಂತರ ಆತ್ಮಕಥೆಯ ಮುಂದುವರಿದ ಭಾಗ.

ಹೋರಾಟದ ಬದುಕು (1968) ದೇ.ಜ.ಗೌ. ಅವರ ಆತ್ಮಕಥೆ. ಇದು ಅಚ್ಚಕನ್ನಡದ ದೀಮಂತ ಯೋಧನ ಹೋರಾಟದ ಬದುಕನ್ನು ಒಳಗೊಂಡಿದೆ. ಬಡಕುಟುಂಬದಲ್ಲಿ ಗುಡಿಸಲಿನಲ್ಲಿ ಜನಿಸಿ, ಅಡಿಗಡಿಗೆ ನಾನಾ ಎಡರುತೊಡರುಗಳನ್ನು ಎದುರಿಸಿ, ಗೊತ್ತುಗುರಿಯಿಲ್ಲದೆ ಬೆಳೆದು, ಗುರು ಕುವೆಂಪು ಅವರ ಕೃಪಾಕಟಾಕ್ಷಕ್ಕೆ ಪಾತ್ರವಾಗಿ, ಅವರ ಆಶೀರ್ವಾದದ ಮಹಾರಕ್ಷೆಯಲ್ಲಿ ಕನ್ನಡದ ದೀಕ್ಷೆಯನ್ನು ಪಡೆದು, ಕನ್ನಡಕ್ಕಾಗಿ ದುಡಿದು, ಕನ್ನಡದಿಂದ ಕೀರ್ತಿ, ಯಶಸ್ಸುಗಳನ್ನು ಪಡೆದು, ಕನ್ನಡಕ್ಕಾಗಿಯೇ ತನು, ಮನ, ಧನಗಳನ್ನು ಸಮರ್ಪಿಸಿಕೊಂಡ ಮಹಾಚೇತನಮೊಂದರ ಆತ್ಮವೃತ್ತಾಂತವಿದು. ಗುಡಿಸಲಿನಿಂದ ಗಂಗೋತ್ರಿಯವರೆಗೆ ನಡೆದ ಜೀವನಾವದಿಯಲ್ಲಿ ನಾನಾ ಕಾರಣಗಳಿಂದ, ನಾನಾ ರೀತಿಯಲ್ಲಿ ಲೇಖಕರು ನಡೆಸಿದ ಹೋರಾಟಗಳ ವೃತ್ತಾಂತವನ್ನೊಳಗೊಂಡಿರುವ ಈ ಕೃತಿಗೆ ಹೋರಾಟದ ಬದುಕು ಎಂಬ ಹೆಸರು ಉಚಿತವಾಗಿದೆ. ಆರಂಭದಲ್ಲಿ ಬಡತನದೊಂದಿಗೆ, ಜಾತೀಯತೆಯೊಂದಿಗೆ ಹೋರಾಟ ನಡೆದಿರುವುದು ಕಂಡುಬಂದರೂ ಪ್ರಮುಖವಾದ ಹೋರಾಟ ಕನ್ನಡಕ್ಕೆ ಸಂಬಂದಿಸಿದುದಾಗಿದೆ. ಈ ಕೃತಿ ಆತ್ಮಕಥಾಸಾಹಿತ್ಯಕ್ಕೆ ಒಂದು ಮಹತ್ತರ ಕೊಡುಗೆಯಾಗಿದೆ. ಇಲ್ಲಿನ ಗದ್ಯದ ಗತ್ತು ಮತ್ತು ಗ್ರಾಮೀಣ ಭಾಷಾ ಬಳಕೆಯ ಸೊಗಡು ಹೆಚ್ಚು ಆಕರ್ಷಣೀಯವೂ ಮನೋಜ್ಞವೂ ಆಗಿದ್ದು ಶೈಲಿಯ ಹೊಸದೊಂದು ಮಾದರಿಗೆ ಬುನಾದಿಯಾಗಿದೆ. ಕನ್ನಡದ ಮುನ್ನಡೆಗೆ ಇರಬಹುದಾದ ತೊಡಕುಗಳು, ಅಡ್ಡಬಂದ ವ್ಯಕ್ತಿಗಳು, ಸಮಾವೇಶ, ಕನ್ನಡ ಪ್ರಗತಿಯ ಹಲವಾರು ಮಾರ್ಗಗಳು, ಕನ್ನಡ ನಾಡಿನಲ್ಲಿ ನಡೆದ ಹೋರಾಟದ ವಿವರ ಇಲ್ಲಿ ಚಿತ್ರಿತವಾಗಿರುವುದರಿಂದ ಕನ್ನಡ ನುಡಿ ಮತ್ತು ಸಾಹಿತ್ಯದ ಬಗೆಗಿನ ಮೂಲ ವಸ್ತುವನ್ನೊದಗಿಸುವುದರಲ್ಲಿ ಈ ಕೃತಿಗೆ ಸಾರ್ಥಕತೆ ಲಬಿಸಿದೆ.

ಹತ್ತು ವರುಷ (1939) ಜಿ.ಪಿ.ರಾಜರತ್ನಂ ಅವರ ಆತ್ಮಕಥೆ. 152 ಪುಟಗಳ ಈ ಕೃತಿಯಲ್ಲಿ ಲೇಖಕರ ಹತ್ತು ವರ್ಷಗಳ ಜೀವನ ಕಥೆಯಿದೆ. ಇದರಲ್ಲಿ ರಾಜರತ್ನಂ ಅಯ್ಯಂಗಾರ್ ರಾಜರತ್ನಂ ಆದುದು, ನಮ್ಮ ನಮ್ಮವರು ಕೃತಿ ಅಚ್ಚಾದುದು ಈ ಎರಡು ಭಾಗಗಳು ತುಂಬ ಸ್ವಾರಸ್ಯವಾಗಿವೆ. ರತ್ನನ ತಂದೆ ತೀರಿಕೊಂಡಾಗ ನಂಟರಾರೂ ಸಹಕರಿಸದೆ ಶವವನ್ನು ಜಟಕಾ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡಿದ್ದನ್ನು ಓದಿದಾಗ ಎಂಥವರ ಎದೆಯೂ ಕರಗುತ್ತದೆ. ಸತಿಯನ್ನು ಕ್ಷಯದ ಆಸ್ಪತ್ರೆಗೆ ಸೇರಿಸಿ ಹಿಂತಿರುಗಿ ಬರುವಾಗ ದಾರಿಯಲ್ಲಿ ಕಂಡ ಹೆಂಡದಂಗಡಿಯ ಅನುಭವವೇ ಅವರ ರತ್ನನ ಪದಗಳು ಸೃಷ್ಟಿಯಾಗಲು ಕಾರಣವಾಯಿತೆಂದು ಓದಿದಾಗ ಕುತೂಹಲವೂ ಆಶ್ಚರ್ಯವೂ ಉಂಟಾಗುತ್ತದೆ. ಮಿಂಚಿನ ಬಳ್ಳಿ ಕಾರ್ಯಾಲಯದಿಂದ ಪ್ರಕಟವಾದ ಸಾಹಿತ್ಯಜ್ಞರ ಆತ್ಮಕಥನ (1946) ಇನ್ನೊಂದು ವಿಶಿಷ್ಟ ಕೃತಿ. ಈ ಕೃತಿಯಲ್ಲಿ ಹನ್ನೊಂದು ಪ್ರಸಿದ್ಧ ಸಾಹಿತಿಗಳ ಬಿನ್ನಾನುಭವಗಳ ವೈವಿಧ್ಯಮಯವೂ ಸ್ವಾರಸ್ಯಪುರ್ಣವೂ ಆದ ಪರಿಚಯವನ್ನು ಅವರವರ ಮಾತಿನಲ್ಲಿಯೇ ಕಾಣಬಹುದು. ಗೋವಿಂದ ಪೈ, ಆರ್.ವಿ.ಜಾಗೀರದಾರ್, ದೇವುಡು ನರಸಿಂಹಶಾಸ್ತ್ರೀ, ರಂ.ಶ್ರೀ.ಮುಗಳಿ, ಸಿ.ಕೆ.ವೆಂಕಟರಾಮಯ್ಯ, ವಿ.ಕೃ.ಗೋಕಾಕ, ಶಂ.ಬಾ.ಜೋಶಿ, ಚನಪ್ಪ ಉತ್ತಂಗಿ, ಬೆಟಗೇರಿ ಕೃಷ್ಣಶರ್ಮ, ಎ.ಆರ್.ಕೃಷ್ಣಶಾಸ್ತ್ರೀ, ದ.ರಾ.ಬೇಂದ್ರೆ, ಇವರುಗಳೇ ಅಲ್ಲಿನ ಸಾಹಿತಿಗಳು. ನಾಟ್ಯನೆನಪುಗಳು ಎಂಬ ಕೃತಿಯಲ್ಲಿ ಶ್ರೀರಂಗರು ರಂಗಭೂಮಿಗೂ ತಮಗೂ ಇರುವ ನಂಟನ್ನು ಹೇಳಿಕೊಂಡಿದ್ದಾರೆ. ನಡೆದು ಬಂದ ದಾರಿಯ ಮೂರನೆಯ ಸಂಪುಟದಲ್ಲಿ (1961) ಬೇಂದ್ರೆ ಅವರು ಚತುರ್ಮುಖ ಎಂಬ ಶೀರ್ಷಿಕೆಯಲ್ಲಿ ತಮ್ಮ ಆತ್ಮವೃತ್ತಾಂತವನ್ನು ಬರೆದಿದ್ದಾರೆ. ಮನ್ವಂತರದ ಒಂದನೆಯ ಸಂಪುಟದಲ್ಲಿಯೂ ಅವರು ತಮ್ಮ ಕಾವ್ಯಜೀವನದ ಹಿನ್ನೆಲೆಯನ್ನು ವಿವರಿಸಿದ್ದಾರೆ. ಸಿಂ.ಪಿ.ಲಿಂಗಣ್ಣನವರು ಮೂವತ್ತೈದು ವರ್ಷಗಳು ಎಂಬ ಕೃತಿಯಲ್ಲಿ ತಾವು ಕಂಡುಂಡ ಸಿಹಿಕಹಿಗಳ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಆಲೂರು ವೆಂಕಟರಾಯರ ಜೀವನ ಸ್ಮರಣೆ ಎಂಬ ಗ್ರಂಥದಲ್ಲಿ ಕರ್ನಾಟಕದ ಹೊಸ ಪ್ರಜ್ಞೆ ಬೆಳೆವಣಿಗೆಯನ್ನು ಕಾಣಬಹುದು.

ನವರತ್ನ ರಾಮರಾಯರ ಕೆಲವು ನೆನಪುಗಳು, ವಾಸುದೇವಾಚಾರ್ಯರ ನೆನಪುಗಳು, ಡೂನು ಅವರ ಕಾಡಿನಲ್ಲಿ ಕಳೆದ ದಿನಗಳು, ದಿವಾಕರರ ಸೆರೆಮನೆ ಇವು ಅತ್ಯುತ್ತಮ ನೆನಪುಗಳಾಗಿವೆ. ಗುಬ್ಬಿ ವೀರಣ್ಣನವರ ಕಲೆಯೇ ಕಾಯಕ (1967) ಕಲಾವಿದನೊಬ್ಬನ ಹಲವು ಹನ್ನೆರಡು ಬವಣೆಗಳ, ನೂರಾರು ಸಮಸ್ಯೆಗಳ ಪ್ರಾತಿದಿಕ ಗ್ರಂಥದಂತಿದೆ. ಕನ್ನಡ ರಂಗಭೂಮಿಗೆ ಗುಬ್ಬಿ ವೀರಣ್ಣನವರು ಸಲ್ಲಿಸಿದ ಬಹುಮುಖ ಸೇವೆಯನ್ನೂ ಅವರ ಸಾಧನೆ ಸಿದ್ಧಿಗಳನ್ನೂ ಇಲ್ಲಿ ಕಾಣಬಹುದು.

ಸುಧಾ, ಕರ್ಮವೀರ ಮೊದಲಾದ ವಾರಪತ್ರಿಕೆಗಳಲ್ಲಿಯೂ ಪ್ರಜಾವಾಣಿ ದಿನಪ್ರತಿಕೆಯಲ್ಲಿಯೂ ಅನೇಕರ ಆತ್ಮಕಥೆಗಳು ಪ್ರಕಟವಾಗಿವೆ. ಕರ್ನಾಟಕದಲ್ಲಿ ಕರ್ಣನ ಪಾತ್ರಕ್ಕೆ ಅತ್ಯಂತ ಹೆಸರುವಾಸಿಯಾದ ಕೊಟ್ಟೂರಪ್ಪ ಮತ್ತು ಬೀಮನ ಪಾತ್ರದ ಮೂಲಕ ಹೆಸರು ಪಡೆದ ಸ್ತ್ರೀ ನಾಟಕ ಮಂಡಳಿಯ ನಾಗರತ್ನಮ್ಮ ಇವರ ಆತ್ಮಚರಿತ್ರೆಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿವೆ.

ಕನ್ನಡದ ಅತ್ಯಂತ ಜನಪ್ರಿಯ ನಾಯಕ ನಟ ರಾಜಕುಮಾರ್ ಅವರ"" ಹೃದ್ಯವಾದ ""ಆತ್ಮಕಥೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು (1970). ಮಣ್ಣಿನ ಮಗನೊಬ್ಬ ತನಗೆ ರಕ್ತಗತವಾಗಿ ಬಂದ ಕಲೆಯನ್ನು ಭಯ ಭಕ್ತಿ ಶ್ರದ್ಧೆ ಗೌರವಗಳಿಂದ ಆರಾದಿಸಿ, ಸಾದಿಸಿ, ಅತ್ಯುನ್ನತ ಮಟ್ಟಕ್ಕೇರಿದ ಚಿತ್ರವನ್ನಿಲ್ಲಿ ಕಾಣಬಹುದು. ಸಾಧನೆಯ ಸಮಯದಲ್ಲಿ ಆತ ಪಟ್ಟ ಪಾಡು, ತೊಟ್ಟ ನಿಷ್ಠೆ, ಕನ್ನಡ ಪ್ರೇಮ ಎಂಥವರಿಗೂ ಮೆಚ್ಚಿಗೆ ತರುವಂಥವು.

ಆತ್ಮಕತೆ ನಿವೇದಿಸಿದವರಲ್ಲಿ ಹೆಸರಾಂತ ಲೇಖಕರು, ಕಲಾವಿದರು, ಕ್ರೀಡಾಪಟುಗಳು, ಚಲನಚಿತ್ರ ಮತ್ತು ರಂಗಭೂಮಿಯ ನಟನಟಿಯರು ಸೇರಿದ್ದಾರೆ. ವ್ಯಕ್ತಿಗಳಿಗೆ ಸಮರ್ಪಿಸಿದ ಅಬಿನಂದನ ಗ್ರಂಥಗಳಲ್ಲಿ ಅವುಗಳ ಪ್ರಾರಂಭದ ಪುಟಗಳಲ್ಲಿ ಆಯಾ ವ್ಯಕ್ತಿಗಳು ತಮ್ಮ ಜೀವನ ವೃತ್ತಾಂತವನ್ನು ನಿರೂಪಿಸಿದ್ದಾರೆ. ಕನ್ನಡದಲ್ಲಿ ಅಬಿನಂದನ ಗ್ರಂಥಗಳ ಒಂದು ಪರಂಪರೆಯೇ ಇರುವುದನ್ನು ನಾವು ಮರೆಯುವಂತಿಲ್ಲ. ಕನ್ನಡದ ಕೆಲವು ಮುಖ್ಯ ಆತ್ಮಕಥೆಗಳನ್ನು ಈ ಮುಂದೆ ಹೆಸರಿಸಲಾಗಿದೆ. ರಾವ್ ಬಹುದ್ದೂರರ ಮರೆಯದ ನೆನಪುಗಳು (1959), ಡಿವಿಜಿಯವರ ಜ್ಞಾನಪಕ ಚಿತ್ರಶಾಲೆ (1967-74), ರಾಜಕುಮಾರ್ ಅವರ ನಟಸಾರ್ವಭೌಮ (1970), ವಿ.ಸೀತಾರಾಮಯ್ಯನವರ ಕಾಲೇಜು ದಿನಗಳು (1971) ಮತ್ತು ಮುಂಬಯಿ ವಾಸದ ನೆನಪುಗಳು (1976), ಅನಕೃ ಅವರ ಬರಹಗಾರನ ಬದುಕು (1972), ಅಲೂರು ವೆಂಕಟರಾಯರ ನನ್ನ ಜೀವನ ಸ್ಮೃತಿಗಳು (1973), ಕೋ.ಚೆನ್ನಬಸಪ್ಪನವರ ನನ್ನ ಮನಸ್ಸು ನನ್ನ ನಂಬುಗೆ (1973), ಎಚ್.ಕೆ.ವೀರಣ್ಣಗೌಡರ ಬದುಕು-ಮೆಲಕು (1974), ಆರ್.ನಾಗೇಂದ್ರರಾವ್ ಅವರ ಇದು ನನ್ನ ಕಥೆ (1974), ಮಳವಳ್ಳಿ ಸುಂದರಮ್ಮನವರ ಅಬಿನಯಶಾರದೆ (1975), ಬಸವರಾಜ ಕಟ್ಟೀಮನಿ ಅವರ ಕುಂದರನಾಡಿನ ಕಂದ (1976) ಮತ್ತು ಕಾದಂಬರಿಕಾರನ ಕಥೆ (1981), ಬೀಚಿಯವರ ನನ್ನ ಭಯಾಗ್ರಪಿ (1976), ಶಾರದ ವಿ.ಗೋಕಾಕ್ ಅವರ ಒಲವೆ ನನ್ನ ಬದುಕು (1977), ಶ್ರೀರಂಗರಾಜು ಅವರ ನಾನು ತುಳಿದ ಹಾದಿ (1978), ಇ.ಎ.ಎಸ್.ಪ್ರಸನ್ನರ ಪ್ರಸನ್ನ ಜೀವನ ಒಂದು ಆತ್ಮಕಥೆ (1978), ಕೆದಂಬಾಡಿ ಜತ್ತಪ್ಪ ರೈ ಅವರ ಬೇಟೆಯ ನೆನಪುಗಳು (1978-79), ಬಿ.ಜಿ.ಎಲ್.ಸ್ವಾಮಿ ಅವರ ಪ್ರಾಧ್ಯಾಪಕನ ಪೀಠದಲ್ಲಿ (1979), ಬಿ.ಜಯಮ್ಮನವರ ಅಬಿನೇತ್ರಿ (1979), ಡಿ.ಕೆಂಪರಾಜ ಅರಸ್ ಅವರ ಅರವತ್ತು ವರ್ಷಗಳು (1980), ಕುವೆಂಪು ಅವರ ನೆನಪಿನ ದೋಣಿಯಲ್ಲಿ (1980), ಶೇ.ಗೋ.ಕುಲಕರ್ಣಿ ಅವರ ನಾನು ಕಂಡ ಗೆಳೆಯರ ಗುಂಪು (1980), ರಂ.ಶ್ರೀ.ಮುಗಳಿಯವರ ಜೀವನ ರಸಿಕ (1982), ಮಲ್ಲಿಕಾರ್ಜುನ ಮನ್ಸೂರರ ನನ್ನ ರಸಯಾತ್ರೆ (1983), ಎನ್ಕೆ ಕುಲಕರ್ಣಿಯವರ ನಾನಿಯ ನೆನಪುಗಳು (1983), ಚಿ.ನ.ಮಂಗಳಾ ಅವರ ಅಧ್ಯಾಪಕಿಯಾಗಿ ಇಪ್ಪತ್ತೈದು ವರ್ಷ ಮತ್ತು ಸ್ನೇಹಸಿಂಧು (1985), ಅನುಪಮಾ ನಿರಂಜನರ ನೆನಪು ಸಿಹಿ ಕಹಿ (1985) ಮತ್ತು ಬರಹಗಾರ್ತಿಯ ಬದುಕು (1990), ಜಿ.ಎಸ್.ಶಿವರುದ್ರಪ್ಪ ಅವರ ಚದುರಂಗ (1986), ತ.ಸು.ಶಾಮರಾಯರ ಮೂರುತಲೆಮಾರು (1987), ಸ.ಸ.ಮಾಳವಾಡರ ದಾರಿ ಸಾಗಿದೆ (1989). ಅಂಬುಜಾ ತ.ರಾ.ಸು. ಅವರ ಹಿಂತಿರುಗಿ ನೋಡಿದಾಗ (1990), ಎ.ಎನ್.ಮೂರ್ತಿರಾವ್ ಅವರ ಸಂಜೆಗಣ್ಣಿನ ಹಿನ್ನೋಟ (1990), ಬಿ.ಡಿ.ಜತ್ತಿ ಅವರ ನನಗೆ ನಾನೇ ಮಾದರಿ (1990), ಸಮೇತನಹಳ್ಳಿ ರಾಮರಾಯರ ಕೋಟು ಕೊಟ್ಟಮನೆ (1991), ತ.ಸು.ಶಾಮರಾಯರ ನೆನಪಿನ ಅಲೆಗಳು (1991), ಉತ್ತಂಗಿ ಚನ್ನಪ್ಪನವರ ಆತ್ಮಚರಿತ್ರೆ (1991), ಕು.ಶಿ.ಹರಿದಾಸಭಟ್ಟರ ನಿವೇದನೆ (1992), ಎಸ್.ಆರ್.ಗುಂಜಾಳ ಅವರ ನಾನು (1992), ನಂಜುಂಡಸ್ವಾಮಿಯವರ ಅಜ್ಞಾತ ಅಧ್ಯಾಪಕನ ಆತ್ಮಚರಿತ್ರೆ (1994), ಪೆರ್ಲ ಕೃಷ್ಣಭಟ್ಟರ ಬದುಕಿ ಫಲವೇನು (1994), ಅರವಿಂದ ಮಾಲಗತ್ತಿಯವರ ಗೌರ್ಮೆಂಟ್ ಬ್ರಾಹ್ಮಣ (1994), ಪಿ.ಲಂಕೇಶರ ಹುಳಿಮಾವು (1997), ಆರ್.ಸಿ.ಹಿರೇಮಠ ಅವರ ಉರಿ ಬರಲಿ ಸಿರಿ ಬರಲಿ (1995), ಎಚ್.ನರಸಿಂಹಯ್ಯನವರ ಹೋರಾಟದ ಹಾದಿ (1995), ಜಿ.ಎಂ.ಪಾಟೀಲರ ನೆನಪಿನಂಗಳದಲ್ಲಿ (1995), ಕೆರೆಮನೆ ಶಿವರಾಮ ಹೆಗಡೆಯವರ ನೆನಪಿನ ರಂಗಸ್ಥಳ (1996), ಕಯ್ಯಾರಕಿಞ್ಞಣ್ಣರೈ ಅವರ ದುಡಿಮೆಯೇ ನನ್ನ ದೇವರು (1996), ಸೇಡಿಯಾಪು ಕೃಷ್ಣಭಟ್ಟರ ಈಶ್ವರ ಸಂಕಲ್ಪ ಅಥವಾ ದೈವಲೀಲೆ (1996), ಸಿದ್ಧಲಿಂಗಯ್ಯನವರ ಊರು ಕೇರಿ (1996), ಎಸ್.ಎಲ್.ಭೈರಪ್ಪನವರ ಬಿತ್ತಿ (1996), ಎಚ್.ಎಲ್. ನಾಗೇಗೌಡರ ನಾಗಸಿರಿ (1996 ನಾಲ್ಕು ಸಂಪುಟಗಳು) ಪಿ.ಲಂಕೇಶರ ಹುಳಿಮಾವಿನ ಮರ (1998), ಕೆ.ಗೋವಿಂದರಾಜು ಅವರ ಮನವಿಲ್ಲದವರ ಮಧ್ಯೆ (2001), ಸಿ.ಜಿ.ಕೃಷ್ಣಸ್ವಾಮಿ ಅವರ ಕತ್ತಾಲೆ ಬೆಳದಿಂಗಳೊಳಗೆ (2002), ಹಿರಿಯಡಕ ಗೋಪಾಲರಾಯರ, ಮದ್ದಳೆಯ ಮಾಯಾಲೋಕ, ಬಿ.ವಿ.ಕಾರಂತರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (2003), ಎಚ್.ಎಸ್.ಶಿವಪ್ರಕಾಶ್ ಅವರ ಬತ್ತೀಸರಾಗ (2003), ಸ.ಜ.ನಾಗಲೋಟಿಮಠ ಅವರ ಬಿಚ್ಚಿದ ಜೋಳಿಗೆ (2003), ಇಂಥ ಸ್ವತಂತ್ರ ಕೃತಿಗಳಲ್ಲದೆ ಕನ್ನಡಕ್ಕೆ ಅನೇಕ ಆತ್ಮಕಥೆಗಳು ಅನುವಾದಗೊಂಡಿವೆ. ಇವುಗಳಲ್ಲಿ ಹೆಚ್ಚಿನವು ಭಾರತೀಯ ಮತ್ತು ವಿದೇಶೀಯ ರಾಷ್ಟ್ರನಾಯಕರ, ವಿಜ್ಞಾನಿಗಳ ಮತ್ತು ಸಾಹಿತಿಗಳ ಆತ್ಮಕಥೆಗಳಾಗಿವೆ. ಸತ್ಯಶೋಧನ ಪ್ರಕಟಣ ಮಂದಿರದವರ ಸತ್ಯಶೋಧನೆ ಅಥವಾ ಗಾಂದೀಜಿ ಅವರ ಆತ್ಮಕಥೆ ಮತ್ತು ಸಿದ್ಧವನಹಳ್ಳಿ ಕೃಷ್ಣಶರ್ಮರ ಗಾಂದೀಜಿ ಆತ್ಮಕಥೆ (ಸಂಕ್ಷಿಪ್ತ) ಪ್ರಕಟವಾಗಿವೆ. ಜವಾಹರಲಾಲ್ ನೆಹರೂ ಅವರ ಆತ್ಮಕಥೆಯನ್ನು ಗುರುನಾಥ ಜೋಶಿ ಅವರು ನನ್ನ ಕಥೆ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ (1958). ಗಾಂದಿ ಮತ್ತು ನೆಹರೂ ಅವರ ಆತ್ಮಕಥೆಗಳು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿರುವುದು ಮಾತ್ರವಲ್ಲದೆ ಅನೇಕರು ತಮ್ಮ ಆತ್ಮಕಥೆಯನ್ನು ಬರೆಯಲು ಪ್ರೇರಣೆಯನ್ನುಂಟುಮಾಡಿವೆ. ಕೃಷ್ಣ ಹತೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್‌ ಎಂಬ ಆತ್ಮಕಥೆಯನ್ನು ದೇ.ಜ.ಗೌ, ಅವರು ನೆನಪು ಕಹಿಯಲ್ಲ ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದು ನೆಹರೂ ತಂಗಿಯ ಆತ್ಮಕಥೆಯಾದರೂ ಇಲ್ಲಿ ಸಮಸ್ತ ನೆಹರೂ ಮನೆತನದ ಅರ್ಧ ಶತಮಾನದ ತ್ಯಾಗಭೋಗಗಳ ಜೀವನದ ಕಥೆಯಿದೆ. ಸಿದ್ಧವನಹಳ್ಳಿ ಕೃಷ್ಣಶರ್ಮರು ಬಾಬು ರಾಜೇಂದ್ರ ಪ್ರಸಾದರ ಸ್ವವೃತ್ತಾಂತವನ್ನು ರಾಜೇಂದ್ರ ಪ್ರಸಾದ್ ಆತ್ಮಕಥೆ ಎಂಬ ನಾಮಾಂಕಿತದಲ್ಲಿ ಕನ್ನಡಕ್ಕೆ ತಂದಿದ್ದಾರೆ (1959). ಸ್ವಾತಂತ್ರ್ಯಯೋಧ ದೇಶಭಕ್ತನ ರೋಮಾಂಚಕಾರಿಯಾದ ಈ ಕಥೆ 866 ಪುಟಗಳಲ್ಲಿ ಹೊರಬಂದಿರುವ ಬೃಹತ್ ಗ್ರಂಥ. ಗೌರೀಶಂಕರದ ತುತ್ತತುದಿಗೇರಿ ಹೊಸ ದಾಖಲೆಯೊಂದನ್ನು ಸ್ಥಾಪಿಸಿದ ತೇನ್ಸಿಂಗನ ಆತ್ಮಕಥೆಯನ್ನು ಎವರೆಸ್ಟ್‌ ವೀರ ಎಂಬ ಹೆಸರಿನಲ್ಲಿ ಕೂಡಲಿ ಚಿದಂಬರಂ ಮತ್ತು ಜನಾರ್ದನ ಗುರ್ಕಾರ್ ಅವರು ಸುಂದರವಾಗಿ ಅನುವಾದಿಸಿದ್ದಾರೆ (1957). ಟಾಲ್ಸ್ಟಾಯ್ ಅವರ ಸುಪ್ರಸಿದ್ಧ ಆತ್ಮಚರಿತ್ರೆಯನ್ನು ಲಿಯೊ ಟಾಲ್ಸ್ಟಾಯ್ ಎಂಬ ಶೀರ್ಷಿಕೆಯಲ್ಲಿ ಆನಂದರು ಕನ್ನಡಕ್ಕೆ ತಂದಿದ್ದಾರೆ (1958). 388 ಪುಟಗಳ ಈ ಕೃತಿಯಲ್ಲಿ ಟಾಲ್ಸ್ಟಾಯ್ ಅವರ ಬಾಲ್ಯ ಮತ್ತು ಯೌವನಗಳ ಜೀವನಪರಿಚಯವಿದೆ.

ಲೋಕವಿಖ್ಯಾತ ವಿಜ್ಞಾನಿ ಚಾರಲ್ಸ್‌ ಡಾರ್ವಿನ್ನರ ಆತ್ಮಕಥೆಯನ್ನು ಶ್ರೀಮತಿ ಜೀವಬಾಯಿ ಲಕ್ಷ್ಮಣರಾವ್ ಅವರು ಚಾರಲ್ಸ್‌ ಡಾರ್ವಿನ್ನನ ಆತ್ಮಕಥೆ ಎಂಬ ಹೆಸರಿನಲ್ಲಿ ಅನುವಾದಿಸಿದ್ದರು (1969). ಸುಪ್ರಸಿದ್ಧ ರಾಜಕಾರಣಿ ಬೆಂಜಮಿನ್ ಫ್ರಾಂಕ್ಲಿನ್ ಆತ್ಮಕಥೆ ಅದೇ ಹೆಸರಿನಿಂದ ಜನಾರ್ದನ ಗುರ್ಕಾರ್ ಅವರಿಂದ ಕನ್ನಡಕ್ಕೆ ಬಂದಿದೆ (1958). ಪ್ರಖ್ಯಾತ ಮಹಿಳೆ ಹೆಲನ್ ಕೆಲ್ಲರಳ ಆತ್ಮಕಥೆಯನ್ನು ಚಿ.ನ. ಮಂಗಳ ಅನುವಾದಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್‌ ಅವರ ಪತ್ನಿ ಎಲೀನರ್ ರೂಸ್ವೆಲ್ಟ್‌ ಅವರ ಆತ್ಮಕಥೆ ಸವಿನೆನಪು ಎಂಬ ಹೆಸರಿನಲ್ಲಿ ಕನ್ನಡಕ್ಕೆ ಬಂದಿದೆ. ವೆರಿಯರ್ ಎಲ್ವಿನ್ನರ ಗಿರಿಜನ ಪ್ರಪಂಚ ಎಚ್.ಎಲ್. ನಾಗೇಗೌಡರಿಂದ ಅನುವಾದಿತವಾಗಿರುವ ಇನ್ನೊಂದು ಆತ್ಮಕಥಾಗ್ರಂಥ ಮರಾಠಿಯಿಂದ ಅನೇಕ ದಲಿತ ಆತ್ಮಕಥೆಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡ ದಲಿತ ಸಂವೇದನೆಗಳನ್ನು ಈ ನೆಲೆಯಲ್ಲಿ ಉನ್ಮೀಲನಗೊಳಿಸಿ ಹೊಸ ಬಗೆಯ ಬರೆವಣಿಗೆಗೆ ಹಾದಿ ಮಾಡಿಕೊಟ್ಟಿವೆ. ಅಕ್ರಮಸಂತಾನ, ಉಚಲ್ಯಾ (ಅನು: ದು.ನಿಂ. ಬೆಳಗಲಿ), ಇವು ದಲಿತ ಬದುಕಿನ ಬೀಕರವಾದ ಹಾಗೂ ಬೆರಗಿನ ಲೋಕವನ್ನು ತೆರೆದಿಟ್ಟಿವೆ. ಪಂಜಾಬಿ ಲೇಖಕಿ ಅಜಿತ್ ಕೌರ್ ಅವರ ಆತ್ಮಚರಿತ್ರೆ ಲವ್ಲೀನ್ ಜಾಲಿ (2003). ಅಲೆಮಾರಿ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. (ಅನು: ವಿಜಯಲಕ್ಷ್ಮೀಅರಸ್) ಕನ್ನಡ ಆತ್ಮಕಥಾ ಸಾಹಿತ್ಯ ಅನುವಾದಗಳೂ ಸೇರಿದಂತೆ ಶ್ರೀಮಂತವಾಗುತ್ತಿದೆ. *