ಕನ್ನಡದಲ್ಲಿ ನಾಟಕಸಾಹಿತ್ಯ : ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳು ಶ್ರೀಮಂತವಾಗಿರುವಂತೆ, ನಾಟಕ ಪ್ರಕಾರವೂ ಶ್ರೀಮಂತವಾಗಿದೆ. ಆದರೆ ಇದರ ಹುಟ್ಟನ್ನು ಬೆಳೆವಣಿಗೆಯನ್ನು ಗುರುತಿಸಲು ಹೊರಟರೆ 1680ರ ಸುಮಾರಿನಲ್ಲಿ ಚಿಕ್ಕದೇವರಾಜ ಒಡೆಯರ ಆಸ್ಥಾನಕವಿ ಸಿಂಗರಾರ್ಯನಿಂದ ರಚಿತವಾದ "ಮಿತ್ರವಿಂದಾ ಗೋವಿಂದ "ಕನ್ನಡದ ಮೊಟ್ಟಮೊದಲ ನಾಟಕವೆಂದು ಕಂಡುಬರುತ್ತದೆ. ಇದು ಶ್ರೀಹರ್ಷನಿಂದ ಸಂಸ್ಕೃತದಲ್ಲಿ ರಚಿತವಾದ ರತ್ನಾವಳಿ ನಾಟಕದ ಕನ್ನಡ ಅನುವಾದ. ಅನುವಾದವಾದರೂ ಒಂದು ರೀತಿಯಲ್ಲಿ ಸ್ವತಂತ್ರ ಕೃತಿ ಎನ್ನುವಂತೆ ನಾಟಕಕಾರ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾನೆ. ಆದ್ದರಿಂದ ಇದನ್ನು ರೂಪಾಂತರವೆನ್ನಲೂಬಹುದು. ಮೂಲದ ಕಥೆ ಉದಯನನ್ನು ಕುರಿತದ್ದಾಗಿದ್ದು, ಈ ನಾಟಕದ ಕಥೆ ಶ್ರೀ ಕೃಷ್ಣನ ಕಥೆಯನ್ನು ಹೇಳುತ್ತದೆ. ಜೊತೆಗೆ ಇಲ್ಲಿನ ಪಾತ್ರಗಳ ಹೆಸರುಗಳಲ್ಲೂ ಘಟನೆಗಳಲ್ಲೂ ಒಂದೆರಡು ಸಣ್ಣಪುಟ್ಟ ಬದಲಾವಣೆಗಳಾಗಿವೆ. ಭಾಗವತದಲ್ಲಿರುವ ಕೃಷ್ಣನ ಕಥೆ ಮಿತ್ರವಿಂದಾ ಗೋವಿಂದ ನಾಟಕಕ್ಕೆ ಮೂಲ. ನಾಟಕದ ಭಾಷೆ ಹಳಗನ್ನಡ. ಹಲವರ ಅಬಿಪ್ರಾಯದಂತೆ ಈ ನಾಟಕ ಮೂಲ ರತ್ನಾವಳಿಯಷ್ಟು ತೃಪ್ತಿ ಕೊಡುವುದಿಲ್ಲವಾದರೂ ದೊರೆತ ಕನ್ನಡ ನಾಟಕಗಳಲ್ಲಿ ಮೊದಲನೆಯದೆಂಬ ದೃಷ್ಟಿಯಿಂದ ಇದಕ್ಕೆ ಐತಿಹಾಸಿಕ ಮಹತ್ತ್ವವಿದೆ.
ದುರ್ಗಸಿಂಹನು ನೆನೆದ" ಕನ್ನಮಯ್ಯ" ಬರೆದ ಮಾಲತೀಮಾಧವ, ಕೇಶಿರಾಜನ ಶಬ್ದಮಣಿದರ್ಪಣದಲ್ಲಿ ಸೂಚಿತವಾದ ಸುಭದ್ರಾಹರಣ ಮತ್ತು ಪ್ರಬೋಧಚಂದ್ರ ಇವು ಕನ್ನಡ ನಾಟಕಗಳಿರಬೇಕೆಂಬುದು ವಿದ್ವಾಂಸರ ಅಬಿಪ್ರಾಯ. ಎರಡನೆಯ ನಾಗವರ್ಮನ
ಕಾವ್ಯಾವಲೋಕನದಲ್ಲಿ ಕಾಳಿದಾಸನ ವಿಕ್ರಮೋರ್ವಶೀಯ ನಾಟಕದ ಒಂದು ಪದ್ಯವೂ ಶ್ರೀಹರ್ಷನ ನಾಗಾನಂದ ಹಾಗೂ ಭವಭೂತಿಯ ಮಾಲತೀಮಾಧವ ಈ ನಾಟಕಗಳ ಕೆಲವು ಪದ್ಯಗಳೂ ಕನ್ನಡಕ್ಕೆ ಬಂದಿವೆ. ಇದರಿಂದ ಅಂದಿನ ಕಾಲಕ್ಕಾಗಲೇ ಸಂಸ್ಕೃತ ನಾಟಕಗಳು ಕನ್ನಡಕ್ಕೆ ಅನುವಾದಗೊಂಡಿರಬಹುದೆಂದು ಸಂಶೋಧಕರು ಊಹಿಸುತ್ತಾರೆ.
ಕನ್ನಡ ನಾಟಕ ಸಾಹಿತ್ಯ ಪರಂಪರೆಯನ್ನು ವಿವೇಚಿಸುವಾಗ "ಮಿತ್ರವಿಂದಾ ಗೋವಿಂದ "ನಾಟಕಕ್ಕೆ ಮೊದಲು ಕನ್ನಡದಲ್ಲಿ ನಾಟಕಗಳಿರಲ್ಲಿಲ್ಲವೇ ಎಂಬ ಪ್ರಶ್ನೆ ವಿದ್ವಾಂಸರನ್ನು ಬಹಳಷ್ಟು ಕಾಡಿದೆ. ಇದಕ್ಕೆ ಉತ್ತರವಾಗಿ ನಾಟಕಗಳಿದ್ದರೂ ಈ ರೂಪದಲ್ಲಿ ಇದ್ದಿರುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಅಬಿಪ್ರಾಯಪಟ್ಟಿದ್ದಾರೆ. ಆದರೆ ಹಿಂದಿನ ಕನ್ನಡ ಕಾವ್ಯಗಳಲ್ಲಿ ನಾಟಕಶಾಲೆ, ನಾಟಕ ಇವೇ ಮೊದಲಾದ ಪದ ಪ್ರಯೋಗಗಳು ಕಂಡುಬರುವುದರಿಂದ, ಅಬಿನಯಕ್ಕೆ ಸಂಬಂಧಿಸಿದಂತೆ ರಾಜಾಸ್ಥಾನಗಳಲ್ಲಿ ದೃಶ್ಯರೂಪಕಗಳು ಇದ್ದಿರಬೇಕು. ಅಬಿನಯ ನೃತ್ಯಗಳು ಇದ್ದಿರಲೂಬಹುದು. ಇದರಿಂದ ಅಂದಿನ ಅರಮನೆಗಳಲ್ಲಿ ನಾಟಕಶಾಲೆಗಳು ಇದ್ದಿರಬೇಕು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಮೈಸೂರಿನ ಕಂಠೀರವ ನರಸರಾಜರ ಅರಮನೆಯಲ್ಲಿ ನಾಟಕಶಾಲೆ ಇದ್ದಿತೆಂದು ಕಂಠೀರವ ನರಸರಾಜವಿಜಯದಿಂದ ತಿಳಿದುಬರುತ್ತದೆ. ಕೆಳದಿಯ ವೆಂಕಟಪ್ಪ ನಾಯಕ (1582-1629) ತನ್ನ ‘ಇಕ್ಕೇರಿಯರಮನೆಯೊಳ್ವಿಚಿತ್ರತರ ರಚನಾ ಕೌಶಲದಿಂ ನಾಟಕಶಾಲೆಯಂ ನಿರ್ಮಾಣಗೈಯ್ಸಿದನ್’ ಎಂದು - ಕೆಳದಿನೃಪ ವಿಜಯದಲ್ಲಿ ಹೇಳಿದೆ. ರತ್ನಾಕರವರ್ಣಿ ತನ್ನ ಭರತೇಶವೈಭವದಲ್ಲಿ ನಾಟಕ ಎಂಬ ಪದವನ್ನು ಬಳಸಿದ್ದಾನೆ. ನಾಟಕಶಾಲೆಯ ವರ್ಣನೆಗಳನ್ನು ಮಾಡಿದ್ದಾನೆ. ಅಲ್ಲದೆ ಅವನ ಕಾವ್ಯದಲ್ಲಿ ಪುರ್ವನಾಟಕ, ಉತ್ತರನಾಟಕ ಎಂಬ ಎರಡು ಸಂಧಿಗಳಿವೆ. ಕೃಷ್ಣದೇವರಾಯನ ರಾಜಧಾನಿಯಲ್ಲಿ ಪಟ್ಟದ ನಾಟಕಶಾಲೆಯೂ ಇಕ್ಕೇರಿ, ಮೊದಲಾದೆಡೆಗಳಲ್ಲಿ ರತ್ನಖಚಿತವಾದ ಅಲಂಕಾರಗಳನ್ನು ಹೊಂದಿದ್ದ ನಾಟಕಶಾಲೆ ಗಳೂ ನಿರ್ಮಾಣವಾಗಿದ್ದಿತೆಂದು ಕಂಡುಬರುತ್ತದೆ. ಧಾರವಾಡದ ಸಮೀಪದ ಮಗದ ಗ್ರಾಮದಲ್ಲಿರುವ 11ನೆಯ ಶತಮಾನದ ಶಿಲಾಫಲಕದಲ್ಲಿ ಶ್ರೀಮನ್ಮಹಾಸಾಮನ್ತಂ ಮಾರ್ತಾನ್ಡಯಂ ತಮ್ಮ ಮುತ್ತಯ್ಯಂ ಮಾಡಿಸಿದ ಬಸದಿಯಂ ಪಡಿಸಲಿಸಿ ನಾಟಕಶಾಲೆಯಂ ಮಾಡಿಸಿ, ತನ್ನ ಕೀರ್ತಿ ಶಿಲಾಸ್ತಂಭಮಂ ಆಚಂದ್ರಾರ್ಕತಾರಾಂಬರಂ ನಿಲಿಸಿದಂ ಎಂದಿದೆ. ಬಸವಪುರಾಣ, ಶೃಂಗಾರರತ್ನಾಕರ, ವಿವೇಕಚೂಡಾಮಣಿ, ಕಂಠೀರವವಿಜಯ, ಕರ್ಣಾಟ ಭಾರತ ಕಥಾಮಂಜರಿ ಮೊದಲಾದ ಕಾವ್ಯಗಳಲ್ಲಿ ನಾಟಕ ಎನ್ನುವ ಮಾತು ಬಂದಿದೆ. ದುರ್ಗಸಿಂಹನ ಪಂಚತಂತ್ರದಲ್ಲಿ ನಾಟಕ ಎಂಬ ಮಾತಿನ ಬಳಕೆಯಾಗಿದೆ. ಹೊಯ್ಸಳ ದೊರೆ ವೀರಬಲ್ಲಾಳ ಒಬ್ಬ ಶ್ರೇಷ್ಠ ನಟನಾಗಿದ್ದನೆಂದು ಸೊರಬದ ಶಿಲಾಶಾಸನದಲ್ಲಿ ವರ್ಣಿತವಾಗಿದೆ. ಪಂಪ, ಪೊನ್ನ, ರನ್ನ ಇವರುಗಳೂ ನಾಟಕ ಹಾಗೂ ನಾಟಕಕ್ಕೆ ಸಂಬಂಧಿಸಿದ ಹಲವು ಮಾತುಗಳನ್ನು ತಮ್ಮ ಕಾವ್ಯಗಳಲ್ಲಿ ಆಡಿದ್ದಾರೆ. ಪಂಪ '‘ಕೃತಾನುಕರಣಮೆ ನಾಟಕಂ’' ಎಂದಿದ್ದಾನೆ. ಹಿಂದಿನ ಕವಿಗಳು ಕಾವ್ಯಗಳನ್ನೆ ರಚಿಸಿದರೂ ಅವರ ದೃಷ್ಟಿ ನಾಟಕದ ಕಡೆಗೆ ಇದ್ದಿತು ಎನ್ನುವುದಕ್ಕೆ ರನ್ನನ ಗದಾಯುದ್ಧ ಹಾಗೂ ರಾಘವಾಂಕನ ಹರಿಶ್ಚಂದ್ರಕಾವ್ಯಗಳಲ್ಲಿ ಬರುವ ನಾಟಕೀಯ ಸನ್ನಿವೇಶಗಳ ಸಂಭಾಷಣೆಯ ಚತುರತೆ ಸಾಕ್ಷಿಯಾಗಿದೆ. 17ನೆಯ ಶತಮಾನದಲ್ಲಿ ಕನ್ನಡದ ಮೊದಲ ನಾಟಕ ನಮಗೆ ದೊರೆತರೂ 10ನೆಯ ಶತಮಾನದಿಂದಲೆ ನಾಟಕ ಎಂಬ ಹೆಸರಿನ ಸಾಹಿತ್ಯ ಪ್ರಕಾರ ಇದ್ದಿತು ಎಂಬ ವಿಷಯ ಮೇಲಿನ ವಿವರಣೆಗಳಿಂದ ಸ್ಪಷ್ಟಪಡುತ್ತದೆ. ಹಾಗಾದರೆ ಕನ್ನಡದಲ್ಲಿ ನಾಟಕಗಳೇಕೆ ಆ ಕಾಲದಲ್ಲಿ ರಚಿತವಾಗಲಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರವಾಗಿ ಅಂದು ಸಂಸ್ಕೃತ ಭಾಷೆಯ ಪ್ರಾಬಲ್ಯ ಬಹಳವಾಗಿದ್ದುದರಿಂದ, ಕನ್ನಡ ಭಾಷೆಯಲ್ಲಿ ಸ್ವತಂತ್ರ ನಾಟಕಗಳು ರಚಿತವಾಗಲಿಲ್ಲ ಎಂದು ಊಹಿಸಲು ಸಾಧ್ಯವಿದೆ.
ಕನ್ನಡದಲ್ಲಿ ನಾಟಕ ಸಾಹಿತ್ಯದ ನಿರಂತರಧಾರೆ 19ನೆಯ ಶತಮಾನದ ಅಂತ್ಯದಿಂದ ಹೊಸತಾಗಿ ಪ್ರಾರಂಭವಾಯಿತೆಂದು ಹೇಳಬಹುದು. ಮೈಸೂರಿನ ಚಾಮರಾಜ ಒಡೆಯರ ಆಳಿಕೆಯ ಕಾಲದಲ್ಲಿ (1881-94) ಪಾರಸೀ ಕಂಪನಿಯೊಂದು ಕನ್ನಡ ನಾಡಿಗೆ ಬಂದು ಕೆಲವು ನಾಟಕಗಳನ್ನು ಪ್ರಯೋಗಿಸಿತು. ಈ ನಾಟಕಗಳಲ್ಲಿನ ಅಬಿsನಯ, ರಂಗಸಾಧ್ಯತೆ, ರಂಗಪರಿಕರಗಳು ಕನ್ನಡಿಗರನ್ನು ಆಕರ್ಷಿಸಿದವು. ಕಲೆಗೆ ಆಶ್ರಯಸ್ಥಾನವಾಗಿದ್ದ ಅರಮನೆ 1882ರಲ್ಲಿ ತನ್ನದೇ ಆದ "ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ" ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿತು. ಒಡೆಯರ ಆಸ್ಥಾನಕವಿಯಾಗಿದ್ದ ಬಸವಪ್ಪಶಾಸ್ತ್ರಿಗಳು ಈ ಸಭೆಗಾಗಿ ನಾಟಕಗಳನ್ನು ಬರೆಯಲು, ಸಿದ್ಧರಾದರು. ಇದರಿಂದಾಗಿ ಶಾಕುಂತಲಾ, ವಿಕ್ರಮೋರ್ವಶೀಯ, ರತ್ನಾವಳಿ, ಉತ್ತರರಾಮಚರಿತೆ, ಮಾಲತೀಮಾಧವ, ಚಂಡಕೌಶಿಕ ಮೊದಲಾದ ನಾಟಕಗಳು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗೊಂಡವು. ಇವರು ಇಂಗ್ಲಿಷ್ ನಾಟಕಗಳ ಕಡೆಗೂ ಗಮನ ಹರಿಸಿ ಷೇಕ್ಸ್‌ಪಿಯರನ ಒಥೆಲೊ ಶೂರಸೇನ ಚರಿತ್ರೆಯಾಗಿ ಕನ್ನಡಕ್ಕೆ ಬಂತು. ಇವರ ಷೇಕ್ಸ್‌ಪಿಯರ್ ನಾಟಕದ ಅನುವಾದ ಅಷ್ಟಾಗಿ ಉತ್ತಮವಾಗಿಲ್ಲ ಎಂಬ ಅಬಿಪ್ರಾಯ ವಿದ್ವಾಂಸರಲ್ಲಿರುವುದಾದರೂ ಸಂಸ್ಕೃತ ಅನುವಾದಗಳು ಹೆಚ್ಚಿನ ಪ್ರಶಂಸೆಗೆ ಪಾತ್ರವಾದವು. ಅದರಲ್ಲೂ ಶಾಕುಂತಲಾ ಒಂದು ಉತ್ಕೃಷ್ಟ ಅನುವಾದ ಎಂಬ ಖ್ಯಾತಿಪಡೆಯಿತು. ಮೂಲ ನಾಟಕದ ತಿರುಳು, ಸೌಂದರ್ಯ, ಆಳ, ಔನ್ನತ್ಯಗಳು ಅನುವಾದದಲ್ಲೂ ಮೂಡಿಬಂದಿವೆ. ಈ ಅನುವಾದ ಕನ್ನಡದ್ದೇ ಎಂಬಷ್ಟರ ಮಟ್ಟಿಗೆ ಸಮರ್ಪಕವಾಗಿದೆ. ಭಾಷಾಂತರ ಕಲೆಗೆ ಈ ನಾಟಕ ಒಂದು ಉತ್ತಮ ನಿದರ್ಶನವಾಯಿತು. ಭಾಷಾಂತರದ ಕೆಲಸದಲ್ಲಿ ಎದ್ದುಕಾಣುವ ಮತ್ತೊಂದು ಹೆಸರು ಅಳಸಿಂಗರಾಚಾರ್ಯರದು. ಇವರು ಹೆಚ್ಚಾಗಿ ಅನುವಾದ ಮಾಡಿಲ್ಲವಾದರೂ ಇವರ ಭಾಸನ ಸ್ವಪ್ನವಾಸವದತ್ತ ಹಾಗೂ ಪಂಚರಾತ್ರ - ಈ ಎರಡು ನಾಟಕಗಳು ಹೆಸರುಗಳಿಸಿವೆ. ಭಾಸನ ನಾಟಕಗಳಲ್ಲೆಲ್ಲ ಉತ್ತಮ ನಾಟಕ ಎಂದು ಪ್ರಶಂಸೆ ಹೊಂದಿದ ಸ್ವಪ್ನವಾವವದತ್ತವನ್ನು ಮೂಲಕ್ಕೆ ಲೋಪವಾಗದಂತೆ ಇವರು ಕನ್ನಡಕ್ಕೆ ತಂದರು. ಹಾಗೆಯೇ ಪಂಚರಾತ್ರ ರೂಪಕವೂ ಮನೋಜ್ಞವಾಗಿ ಅನುವಾದಗೊಂಡಿತು.
ಶ್ರೀಹರ್ಷನ ನಾಗಾನಂದ ನಾಟಕ ಕನ್ನಡಕ್ಕೆ ಅನುವಾದಗೊಂಡಿರುವ ಶ್ರೇಷ್ಠ ಸಂಸ್ಕೃತ ನಾಟಕಗಳಲ್ಲಿ ಒಂದು. ಇದನ್ನು ಮೈಸೂರಿನ ಅನಂತನಾರಾಯಣಶಾಸ್ತ್ರಿ ಮೊದಲಿಗೆ ಅನುವಾದ ಮಾಡಿದರು.ಇವರ ಅನುವಾದದ ಭಾಷೆ, ಶೈಲಿ ಚೆನ್ನಾಗಿದ್ದು ಮೂಲವನ್ನು ಚಾಚೂತಪ್ಪದೆ ಅನುಸರಿಸಿದೆ. ಶೂದ್ರಕನಿಂದ ರಚಿತವಾದ ಮೃಚ್ಫಕಟಿಕ ಕನ್ನಡಕ್ಕೆ ಬಂದಿರುವ ಮುಖ್ಯ ನಾಟಕಗಳಲ್ಲೊಂದು. ಇದನ್ನು ಹಲಕೆಲವು ಬದಲಾವಣೆಗಳೊಂದಿಗೆ ನಂಜನಗೂಡು ಸುಬ್ಬಾಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿದರು. ಇವರು ಮೂಲದ ಕೆಲವು ಶ್ಲೋಕಗಳನ್ನು ಗದ್ಯದಲ್ಲಿ ಬರೆದಿದ್ದಾರೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದರೂ ಇದು ರಂಗಭೂಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಒಳ್ಳೆಯ ಅನುವಾದ ಎನ್ನಬಹುದು.
ಮೇಲೆ ಹೇಳಿದ ಅನುವಾದಗಳೆಲ್ಲವೂ ಬಹಳ ಹಿಂದೆಯೇ ಸಂಸ್ಕೃತದಿಂದ ಕನ್ನಡಕ್ಕೆ ಬಂದವು. ಈ ಕೆಲಸ ಇಂದಿಗೂ ಸಾಗುತ್ತಿದೆ. ಮೂಲ ಕೃತಿಗಳು ಶ್ರೇಷ್ಠ ಕೃತಿಗಳಾಗಿದ್ದಲ್ಲಿ ಅನುವಾದಕರಿಗೆ ಯಾವುದೋ ಒಂದು ಕೃತಿಯಲ್ಲಿ ಮಹತ್ತು ಕಂಡಲ್ಲಿ ಅಂಥದನ್ನು ಅನುವಾದಕ್ಕೆ ಎತ್ತಿಕೊಂಡರು. ಹೀಗಾಗಿ ಕಾಳಿದಾಸ, ಭಾಸ, ಭಟ್ಟನಾರಾಯಣ, ಶೂದ್ರಕ, ಶ್ರೀಹರ್ಷ ಮೊದಲಾದವರ ಸಂಸ್ಕೃತ ನಾಟಕಗಳನ್ನು ಎಲ್.ಗುಂಡಪ್ಪ, ಕೆ.ಕೃಷ್ಣಮೂರ್ತಿ, ಎಸ್.ವಿ.ಪರಮೇಶ್ವರಭಟ್ಟ, ಸಿ.ಪಿ.ಕೆ., ಎಂ.ವಾಸುದೇವ ಭಟ್ಟ, ಗಣಪತಿ ಮೊಳಿಯಾರ್, ಪಂಡಿತ ಕವಲಿ ಮೊದಲಾದವರು ಕನ್ನಡಕ್ಕೆ ತಂದಿದ್ದಾರೆ. ಹಾಗೆ ಮಾಡುವಲ್ಲಿ ಕೆಲವರು ಹೊಸ ಹೊಸ ಛಂದಸ್ಸಿನಲ್ಲಿ ಮೂಲ ಶ್ಲೋಕಗಳನ್ನು ಅನುವಾದ ಮಾಡಿದರು. ಆಳವಾದ ಅಭ್ಯಾಸ, ಭಾಷಾಪ್ರೌಡಿಮೆ, ಸದಬಿರುಚಿ ಹಾಗೂ ಗ್ರಂಥದ ಮೂಲ ಉದ್ದೇಶಕ್ಕೆ ಭಂಗ ತಾರದ ನಿರೂಪಣೆ ಈ ಅನುವಾದಕರಲ್ಲಿ ಕಾಣಬಹುದಾದ ಶ್ರೇಷ್ಠ ಗುಣಗಳು.
ಸಂಸ್ಕೃತದಿಂದ ನಾಟಕಗಳು ಅನುವಾದಗೊಂಡಂತೆ ಇಂಗ್ಲಿಷ್ನಿಂದಲೂ ನಾಟಕಗಳು ಕನ್ನಡಕ್ಕೆ ಅನುವಾದಗೊಂಡವು. ಇಲ್ಲಿ ಕೆಲವರು ಮೂಲದಲ್ಲಿದ್ದಂತೆ ಅನುವಾದ ಮಾಡಿದರೆ ಕೆಲವರು ರಂಗಭೂಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನುವಾದ ಮಾಡಿದರು, ರೂಪಾಂತರ ಮಾಡಿದರು. 1890ರ ಸುಮಾರಿನಲ್ಲೇ ಎಂ.ಎಲ್.ಶ್ರೀಕಂಠೇಶಗೌಡರು ಷೇಕ್ಸ್‌ಪಿಯರನ ಮ್ಯಾಕ್ಬೆತ್ ಹಾಗು ಎ ಮಿಡ್ಸಮ್ಮರ್ ನೈಟ್ಸ್ ಡ್ರೀಮ್ ನಾಟಕಗಳನ್ನು ಪ್ರತಾಪರುದ್ರದೇವ ಹಾಗೂ ಪ್ರಮೀಳಾರ್ಜುನೀಯ ಎಂಬ ಹೆಸರುಗಳಿಂದ ಕನ್ನಡಕ್ಕೆ ತಂದರು. ಪ್ರತಾಪರುದ್ರದೇವ ನಾಟಕದಲ್ಲಿ ಅನುವಾದ ಮಾಡುವಾಗ, ಅಲ್ಲಿನ ಪಾತ್ರಗಳ ಹೆಸರುಗಳನ್ನೆಲ್ಲ ಬದಲಾಯಿಸಿದ್ದಾರೆ. ಆದರೆ ಮೂಲದ ಭಾವಗಳನ್ನು ಬದಲಾಯಿಸಿರುವುದಿಲ್ಲ. ಹೀಗಾಗಿ ಅಲ್ಲಿನ ಘಟನೆಗಳು ಅಸ್ವಾಭಾವಿಕ ಅನಿಸುತ್ತದೆ. ಪ್ರಮೀಳಾರ್ಜುನೀಯದಲ್ಲಿಯೂ ಮೂಲವನ್ನೂ ಹಾಗೆಯೇ ಇಟ್ಟುಕೊಂಡು, ಹೆಸರುಗಳಲ್ಲಿ ಹಾಗೂ ಸಂಭಾಷಣೆಗಳಲ್ಲಿ ತಮ್ಮತನವನ್ನು ತೋರಿದ್ದಾರೆ. ಈ ಎರಡೂ ನಾಟಕಗಳನ್ನು ನೋಡಿದಾಗ ಗೌಡರು, ರಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿರುವಂತೆ ಕಾಣುತ್ತದೆ. ಮ್ಯಾಕ್ಬೆತ್ ನಾಟಕ ಡಿ.ವಿ.ಜಿ. ಅವರಿಂದ ಮೂಲದಲ್ಲಿದ್ದಂತೆಯೇ ಕಾವ್ಯವಿದ್ದಲ್ಲಿ ಕಾವ್ಯ, ಗದ್ಯವಿದ್ದಲ್ಲಿ ಗದ್ಯ ಹೀಗೆ ಅನುವಾದಗೊಂಡಿದೆ. ಇದೊಂದು ಒಳ್ಳೆಯ ಅನುವಾದ.
ಈ ಸಾಲಿನಲ್ಲಿ ಬಿ.ಎಂ.ಶ್ರೀ. ಅವರ ಪಾರಸಿಕರು, ಎಸ್.ಜಿ.ಶಾಸ್ತ್ರಿ ಅವರ ಸಾಕ್ರಟೀಸನ ಕೊನೆಯ ದಿನಗಳು, ಆರ್ಯಕ ಮತ್ತು ಸೂತ್ರದ ಬೊಂಬೆ -ಇವುಗಳನ್ನು ಒಳ್ಳೆಯ ಅನುವಾದಗಳೆಂದು ಹೆಸರಿಸಬಹುದು. ಸಾಕ್ರಟೀಸನ ಕೊನೆಯ ದಿನಗಳು ನಾಟಕದಲ್ಲಿ ಅವನ ಮನಸ್ಸಾಮಥರ್ಯ್ ಅದ್ಭುತವಾಗಿ ಪ್ರದರ್ಶಿತಗೊಂಡಿದೆ. ಆರ್ಯಕ ನಾಟಕದಲ್ಲಿ ನಾರ್ವೆ ದೇಶದ ಪ್ರಾಚೀನ ಜನರಲ್ಲಿ ನೆಲಸಿದ್ದ ಸಮುದ್ರಯಾನ ಜೀವನ, ಆ ಜನದ ಕ್ರೌರ್ಯಶೌರ್ಯಗಳೂ, ಮಾನಾಬಿsಮಾನಗಳೂ ವರ್ಣಿತವಾಗಿವೆ. ನೋರಾ, ಹೆಲ್ಮರ್ ಮತ್ತು ಇವರ ಮೂರು ಮಕ್ಕಳ ಒಂದು ಸಂಸಾರ ಹೆಲ್ಮರನಿಗೆ ಸಿಕ್ಕಿರುವ ಒಂದು ಕೆಲಸ. ಬರಲಿರುವ ಕ್ರಿಸ್ಮಸ್ ಹಬ್ಬ ಈ ಮನೋಹರವಾದ ವಾತಾವಣದಲ್ಲಿ ಆರಂಭವಾದ ಈ ನಾಟಕ ನೋರಾಳ ಗೃಹತ್ಯಾಗದೊಡನೆ ಮುಗಿಯುತ್ತದೆ.
ಗುಂಡೋ ಕೃಷ್ಣ ಚುರುಮುರಿಯವರಿಂದ ಅನುವಾದಿತವಾದ ಷೇಕ್ಸ್‌ಪಿಯರನ ಒಥೆಲೊ ನಾಟಕ, ಸಿ.ಆನಂದರಾಯರು ಅನುವಾದ ಮಾಡಿರುವ ರಾಮವರ್ಮ ಲೀಲಾವತಿ (ರೋಮಿಯೋ ಜ್ಯೂಲಿಯಟ್). ಇವುಗಳಲ್ಲಿ ಕಥೆ ಭಾಷಾಂತರಗೊಂಡು, ಅಲ್ಲಿನ ಪಾತ್ರಗಳ ಹೆಸರು ರೂಪಾಂತರಗೊಂಡಿದೆ. ರಾಮವರ್ಮ ಲೀಲಾವತಿ ನಾಟಕ ಮಾತ್ರ ರಂಗಭೂಮಿಯ ಮೇಲೆ ಬಹಳ ಜನಪ್ರಿಯವಾಗಿತ್ತೆಂದು ತಿಳಿದುಬರುತ್ತದೆ. ಒಥೆಲೊ ಮಾಸ್ತಿಯವರಿಂದ ಶೂರಸೇನೆ ಎಂಬ ಹೆಸರಿನಲ್ಲೂ ಬರ್ನಾರ್ಡ್ಷಾನ ಪಿಗ್ಮೇಲಿಯೆನ್ ಅದೇ ಹೆಸರಿನಲ್ಲಿ ವಿ.ಸೀತಾರಾಮಯ್ಯನವರಿಂದಲೂ ಅನುವಾದಗೊಂಡಿವೆ.
ಷೇಕ್ಸ್‌ಪಿಯರನ ಟೆಂಪೆಸ್ಟ್ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಬಿರುಗಾಳಿ ಎಂದು ಹೆಸರು ಹೊತ್ತು ಕುವೆಂಪು ಅವರಿಂದ ಒಂದು ಒಳ್ಳೆಯ ಅನುವಾದವಾಗಿದೆ. ಹ್ಯಾಮ್ಲೆಟ್ ನಾಟಕ ಆಧರಿಸಿ ಬರೆದ ರಕ್ತಾಕ್ಷಿ ಕನ್ನಡದ ಅತ್ಯುತ್ತಮ ಐತಿಹಾಸಿಕ ನಾಟಕಗಳಲ್ಲಿ ಒಂದಾಯಿತು. ಪಿ.ಲಂಕೇಶ್ ಅವರ ಈಡಿಪಸ್ ಹಾಗೂ ಅಂತಿಗೊನೆ, ಕನ್ನಡ ನಾಟಕಗಳ ಅನುವಾದಗಳಲ್ಲಿ ಮುಖ್ಯವಾದದ್ದು. ಇಲ್ಲಿನ ಭಾಷೆ ಆಡುಮಾತಿಗೆ ಹತ್ತಿರವಾಗಿ, ಸಂವೇದನೆಯ ದೃಷ್ಟಿಯಿಂದ ಇದು ಮೂಲಕ್ಕೆ ಹತ್ತಿರವಾಗಿದೆ ಅನಿಸುತ್ತದೆ. ಈ ಹಿಂದೆ ಕೆ.ವಿ.ರಾಘವಾಚಾರ್ಯರಿಂದ ಆದ ಅಂತಿಗೊನೆ ಅನುವಾದ ಹಳಗನ್ನಡದ್ದು. ಎಚ್.ಕೆ.ರಾಮಚಂದ್ರಮೂರ್ತಿ ಅವರಿಂದ ಟೆನಿಸಿ ವಿಲಿಯಮ್ನ ಗ್ಲಾಸ್ಮೆನಾಜಂ ಕನ್ನಡಕ್ಕೆ ಗಾಜಿನ ಗೊಂಬೆ ಎಂದು ಹೆಸರು ಪಡೆದು ಬಂದಿದೆ. ರೂಪಾಂತರದಂತೆ ಕಂಡರೂ ಇದು ಅನುವಾದವೇ. ಭಾಷೆ ಮೂಲಕ್ಕೆ ಹತ್ತಿರವಾಗಿದ್ದು ಮೂಲಕ್ಕೂ ಅನ್ವಯವಾಗದೆ ಕನ್ನಡದ ಸ್ವತಂತ್ರ ಕೃತಿಯಂತೆ ರೂಪುಗೊಂಡಿದೆ. ಎ ಮಿಡ್ಸಮ್ಮರ್ ನೈಟ್ಸ್ ಡ್ರೀಮ್ನ ಅನುವಾದ ಅದೇ ಹೆಸರಿನಲ್ಲಿ ಕೆ.ಎಸ್.ನಿಸಾರ್ ಅಹಮದ್ ಅವರಿಂದ ಆಗಿದೆ.
ಅನುವಾದಗಳಂತೆಯೇ ಪ್ರಪಂಚದ ಬೇರೆಬೇರೆ ಸಾಹಿತ್ಯದಿಂದ ರೂಪಾಂತರಗೊಂಡು ಹಲವು ಸಾಹಿತ್ಯಕೃತಿಗಳು ಕನ್ನಡಕ್ಕೆ ಬಂದಿವೆ. ರೂಪಾಂತರಗೊಳ್ಳುವಲ್ಲಿ ಮೂಲದ ಚೌಕಟ್ಟು ಹಾಗೆಯೇ ಇದ್ದು, ವಸ್ತು ಮತ್ತು ಪಾತ್ರಗಳು ನಮ್ಮದಾಗಿವೆ. ಹೀಗೆ ರೂಪಾಂತರಗೊಂಡಾಗ ಇವುಗಳ ಮೂಲ ಚೌಕಟ್ಟೂ ಇತರರದ್ದಲ್ಲ ಎನಿಸುವಷ್ಟು ಕನ್ನಡದ್ದಾಗಿದೆ. ಹೀಗೆ ಈ ಹಿಂದೆ ರೂಪಾಂತರಗೊಂಡ ಸಾಮಾಜಿಕ ನಾಟಕಗಳಲ್ಲಿ ಎ.ಎನ್. ಮೂರ್ತಿರಾಯರ ಆಷಾಢಭೂತಿ, ಪರ್ವತವಾಣಿ ಅವರ ಬಹದ್ದೂರ್ ಗಂಡ, ವಾರ್ಷಿಕೋತ್ಸವ, ಉಂಡಾಡಿ ಗುಂಡ ಮೊದಲಾದವು ಮುಖ್ಯವಾಗಿ ಹೆಸರಿಸಬೇಕಾದಂಥ ನಾಟಕಗಳು.
ಕನ್ನಡದಲ್ಲಿ ಮೊದಲಿಗೆ ಕಂಡುಬಂದ ನಾಟಕಗಳು ಏನಿದ್ದರೂ ಪೌರಾಣಿಕ ವಸ್ತುಗಳನ್ನುಳ್ಳ ಸಂಸ್ಕೃತದಿಂದ ಅನುವಾದಗೊಂಡು ಬಂದ ನಾಟಕಗಳು. ಸ್ವತಂತ್ರ ನಾಟಕಗಳನ್ನು ರಚಿಸುವಾಗಲೂ ಲೇಖಕರಿಗೆ ಈ ಅನುವಾದಗಳ ಮಾದರಿಯೇ ಆದರ್ಶವಾಯಿತು. ಹೊಸದಾಗಿ ನಾಟಕ ರಚಿಸ ಹೊರಟವರು ಸಾಮಾಜಿಕ ವಸ್ತುಗಳನ್ನು ಕೈಗೆತ್ತಿಕೊಳ್ಳದೆ ಹೆಚ್ಚಾಗಿ ಪೌರಾಣಿಕ ವಸ್ತುಗಳನ್ನೇ ಆಯ್ಕೆಮಾಡಿಕೊಂಡರು. ಇದಕ್ಕೆ ಕಾರಣ ಇಂದಿನ ಸಮಸ್ಯೆಗಳೇ ರೂಪಾಂತರಹೊಂದಿ ಸಾರ್ವಕಾಲಿಕ ಸಮಸ್ಯೆಗಳಾಗಿ ಪರಿಣಮಿಸುತ್ತವೆ ಎಂಬ ದೃಷ್ಟಿಯಿದ್ದುದರಿಂದ ಎಂದು ತೋರುತ್ತದೆ. ಕೆಲವರು ಸ್ವತಂತ್ರವಾಗಿ ಪೌರಾಣಿಕ ನಾಟಕಗಳನ್ನು ರಚಿಸಿದರು. ಈ ರಚನೆಗಳಿಗೆ ಕಾರಣ ಕನ್ನಡ ಅಬಿsಮಾನ ಹಾಗೂ ಕನ್ನಡ ರಂಗಭೂಮಿಯನ್ನು ಜೀವಂತಗೊಳಿಸಬೇಕೆಂಬ, ಪ್ರಚಾರಗೊಳಿಸಬೇಕೆಂಬ ಹಂಬಲ. ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಮರಾಠಿ ನಾಟಕಗಳು ಪ್ರದರ್ಶಿತವಾಗುತ್ತಿದ್ದಾಗ, ಕನ್ನಡ ಜನ ಅವುಗಳಿಗೆ ಮಾರುಹೋಗುತ್ತಿದ್ದಾಗ, ಕನ್ನಡ ರಂಗಭೂಮಿ ನಶಿಸಿಹೋಗಬಾರದು ಎಂಬ ಅಬಿsಮಾನದಿಂದ ಮೊದಲಿಗೆ ಸ್ವತಂತ್ರ ಕನ್ನಡನಾಟಕ ರಚಿತವಾಯಿತು ಎಂದು ಹೇಳಬಹುದು. ಹೀಗೆ ಮೊದಲು ರಚಿಸಿದವರು ಶಾಂತಕವಿಗಳು. ಇವರ ನಾಟಕಗಳು ಬಯಲಾಟಗಳಿಗೂ ನಾಟಕಗಳಿಗೂ ನಡುವೆ ಬರುತ್ತವೆ. ಇವರ ಎಲ್ಲ ನಾಟಕಗಳಲ್ಲಿ ಬಯಲಾಟದ ಮಾದರಿ ಕಂಡುಬರುತ್ತದೆ. ಗಿರಿಜಾಕಲ್ಯಾಣ, ಉಷಾಹರಣ, ವತ್ಸಲಾಹರಣ - ಈ ಮಾದರಿಯಲ್ಲಿ ರಚಿತವಾದ ಇವರ ಮುಖ್ಯ ನಾಟಕಗಳು. ಇವರು ಪುರಾಣ ವಸ್ತುಗಳನ್ನು ನಾಟಕಕ್ಕೆ ಬಳಸಿಕೊಳ್ಳುವಾಗ ಯಾವುದೇ ಹೊಸ ದೃಷ್ಟಿಕೋನವಾಗಲಿ, ಸಂವಿಧಾನ ಕೌಶಲವಾಗಲಿ ಕಂಡುಬರುವುದಿಲ್ಲ. ಆದರೂ ಕನ್ನಡದಲ್ಲಿ ಮೊದಲು ಬಂದ ಸ್ವತಂತ್ರ ರಂಗಕೃತಿಗಳೆಂಬ ದೃಷ್ಟಿಯಿಂದ ಇವು ಗಮನಾರ್ಹವಾಗುತ್ತವೆ.
ರಂಗಭೂಮಿಗಾಗಿಯೇ ನಾಟಕ ಬರೆಯಲು ಹೊರಟವರಲ್ಲಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಮುಖ್ಯರು. ಸಾಹಿತ್ಯಕವಾಗಿಯಾಗಲಿ, ಸಂವಿಧಾನ ಕೌಶಲದೃಷ್ಟಿಯಿಂದಾಗಲಿ ಇವರ ರಚನೆಗಳಲ್ಲಿ ಹೊಸತನ ಕಂಡುಬರುವುದಿಲ್ಲವಾದರೂ ಇವರ ನಾಟಕಗಳು ರಂಗಭೂಮಿಯ ಮೇಲೆ ಯಶಸ್ವೀ ಪ್ರಯೋಗಗಳಾದವು. ಕೃಷ್ಣಲೀಲಾ, ಶ್ರೀಕೃಷ್ಣಪಾರಿಜಾತ, ರುಕ್ಮಿಣೀಸ್ವಯಂವರ, ಮಾರ್ಕಂಡೇಯ, ತುಕಾರಾಂ - ಇವು ಇವರ ಮುಖ್ಯ ರಂಗನಾಟಕಗಳು.
ಇದೇ ಹಾದಿಯಲ್ಲಿ ಮಂದೆ ನಡೆದ ನಂಜನಗೂಡು ಶ್ರೀಕಂಠಶಾಸ್ತ್ರಿಗಳು ಶಕ್ತಿವಂತರು. ಇವರಿಗಿದ್ದ ಪಾಂಡಿತ್ಯ ಹೆಚ್ಚಿನದು ಅನ್ನುವುದು ಇವರ ರಚನೆಗಳಲ್ಲಿ ಕಂಡುಬರುತ್ತದೆ. ಸೀತಾಪರಿಣಯ, ಸೀತಾ ಸ್ವರ್ಣಮೃಗ, ಅಬಿಜ್ಞಾನ ಪ್ರಧಾನ, ರಾಜಸೂಯಯಾಗ ಮೊದಲಾದವು ಇವರು ರಚಿಸಿರುವ ಹಲವಾರು ನಾಟಕಗಳಲ್ಲಿ ಮುಖ್ಯ ನಾಟಕಗಳು.
ಈ ಮೂವರಿಗಿಂತಲೂ ಸ್ವಲ್ಪ ಬಿನ್ನವಾದವರು ಬಿ.ಪುಟ್ಟಸ್ವಾಮಯ್ಯ. ಇವರೂ ರಂಗಭೂಮಿಗಾಗಿಯೇ ಕೆಲವು ನಾಟಕಗಳನ್ನು ರಚಿಸಿದವರು. ಅವುಗಳಲ್ಲಿ ಮುಖ್ಯವಾದವು ಸತಿತುಳಸಿ, ಅಕ್ಕಮಹಾದೇವಿ, ಕುರುಕ್ಷೇತ್ರ, ದಶಾವತಾರ, ಗೌತಮಬುದ್ಧ, ಷಹಜಹಾನ್. ಈ ನಾಟಕಗಳ ವಸ್ತು ಪೌರಾಣಿಕ ಹಾಗೂ ಐತಿಹಾಸಿಕವಾದರೂ ಇವರ ರಚನೆಗಳಲ್ಲಿ ಹೊಸ ದೃಷ್ಟಿಯನ್ನು ಕಾಣಬಹುದು. ಮೊದಲಿನಂತೆ ನಾಟಕಗಳಲ್ಲಿ ಪುರಾಣ ಪುಣ್ಯಕಥೆಗಳನ್ನು ಕೇಳಿಹೋಗಲು ಪ್ರೇಕ್ಷಕರನ್ನು ಬಿಡದೆ ಅವರ ದೃಷ್ಟಿಯನ್ನು ಬದಲಾಯಿಸಲು ನಾಟಕಗಳ ಮುಖಾಂತರ ಪ್ರಯತ್ನಿಸಿದ್ದಾರೆ. ಉಳಿದಂತೆ ಸಾಂಪ್ರದಾಯಿಕ ನಾಟಕಗಳ ಸಂವಿಧಾನ ಕೌಶಲವನ್ನೇ ಉಳಿಸಿಕೊಂಡಿದ್ದಾರೆ. ಭಾಷಾಂತರ ಕಲೆಯಲ್ಲಿ ಮುಂದುವರಿದ ಕನ್ನಡ ನಾಟಕ ರಚನೆ ಕಾಲಾನಂತರದಲ್ಲಿ ಬದಲಾವಣೆ ಹೊಂದಿತು. ಇಂಗ್ಲಿಷ್, ಗ್ರೀಕ್ ಮೊದಲಾದ ಸಾಹಿತ್ಯಗಳ ಅಭ್ಯಾಸ ಮಾಡಿದವರು ಆ ಸಾಹಿತ್ಯಗಳ ಪ್ರಭಾವಕ್ಕೆ ಒಳಗಾದರು. ಇದರ ಪರಿಣಾಮವಾಗಿ ಕನ್ನಡದಲ್ಲಿ ಓದಲೂ ಆಡಲೂ ಸಾಧ್ಯವಾಗುವಂಥ ಕೆಲವು ನಾಟಕಗಳು ಬಂದವು. ಇವುಗಳಲ್ಲಿ ರೂಪಾಂತರ ಗಳೂ ಅನುವಾದಗಳೂ ಸ್ವತಂತ್ರ ಕೃತಿಗಳೂ ಇವೆ. ಈ ಹಿಂದೆ ನೋಡಿದ ರಚನೆಗಳೊಡನೆ ಹೋಲಿಸಿದಾಗ ಇದು ಕನ್ನಡ ನಾಟಕ ಪರಂಪರೆಯಲ್ಲಿ ಮಹತ್ವದ ಹೆಜ್ಜೆ ಎಂಬುದು ಸ್ವಷ್ಟವಾಗುತ್ತದೆ. ಈ ಸಾಲಿನಲ್ಲಿ ಬಿ.ಎಂ.ಶ್ರೀ., ಕುವೆಂಪು, ಮಾಸ್ತಿ, ಡಿ.ವಿ.ಜಿ., ವಿ.ಸೀ., ಎಲ್.ಗುಂಡಪ್ಪ, ಜಿ.ಪಿ.ರಾಜರತ್ನಂ, ಕಡೆಂಗೋಡ್ಲು ಶಂಕರಭಟ್ಟ ಮೊದಲಾದ ವರನ್ನು ಗಮನಿಸಬಹುದು. ಬಿ.ಎಂ.ಶ್ರೀ. ಅವರ ಇಂಗ್ಲಿಷ್, ಗ್ರೀಕ್ ಹಾಗೂ ಕನ್ನಡ ಸಾಹಿತ್ಯದ ಆಳವಾದ ಅಭ್ಯಾಸದ ಫಲ ಗದಾಯುದ್ಧ, ಅಶ್ವತ್ಥಾಮನ್ ಮತ್ತು ಪಾರಸಿಕರು. ಗದಾಯುದ್ಧ ನಾಟಕದಲ್ಲಿ ನೇರವಾಗಿ ಗ್ರೀಕ್ ನಾಟಕದ ಪ್ರಭಾವ ವಿರದಿದ್ದರೂ ಆ ಸಾಹಿತ್ಯದ ಅಭ್ಯಾಸದ ಲಕ್ಷಣಗಳನ್ನು ಗುರುತಿಸಬಹುದು. ರನ್ನನ ಕಾವ್ಯದ ಗಾಢ ಪ್ರಭಾವ, ಪಾಶ್ಚಾತ್ಯ ಸಾಹಿತ್ಯ ಪ್ರಭಾವದಿಂದಾದ ಪ್ರೇರಣೆ ಇವುಗಳಿಂದ ಕನ್ನಡಕ್ಕೆ ಒಂದು ಆಧುನಿಕ ನಾಟಕ ದೊರೆಯಿತು. ಅಶ್ವತ್ಥಾಮನ್ ನಾಟಕ ಸಾಫೊಕ್ಲಿಸನ ಅಯಾಸ್ ನಾಟಕದ ರೂಪಾಂತರ. ಈ ರೂಪಾಂತರ ಸಾಧ್ಯವಾದದ್ದು ಗ್ರೀಕ್ ಪುರಾಣ ಕಥೆಗಳಿಗೂ ನಮ್ಮ ಪುರಾಣ ಕಥೆಗಳಿಗೂ ಸಾಮ್ಯವಿರುವುದರಿಂದ. ಇದು ರೂಪಾಂತರ ವಾದರೂ ಕನ್ನಡ ನೆಲಕ್ಕೆ ಸೇರಿದ್ದು ಎನ್ನುವಷ್ಟು ಸ್ವತಂತ್ರ ಕೃತಿಯಾಗಿದೆ. ಅಶ್ವತ್ಥಾಮನನ್ನು ಚಿರಂಜೀವಿ ಎಂದು ತೋರಿಸಿದ ಈ ನಾಟಕ ಒಂದು ಕಾಲಕ್ಕೆ ಕ್ರಾಂತಿಯ ರಚನೆಯಾಯಿತು. ಪಾರಸಿಕರು ಮೂಲ ಗ್ರೀಕ್ ನಾಟಕ ಇದ್ದಂತೆಯೇ ಅನುವಾದಗೊಂಡಿದೆ. ಗ್ರೀಕ್ ಸಾಹಿತ್ಯದ ವಾಸನೆ ಇಲ್ಲಿ ಸಂಪುರ್ಣವಾಗಿ ಇದೆ. ಈ ನಾಟಕದಿಂದ ಈಸ್ಕಲಸ್ನ ಪರಿಚಯ ಕನ್ನಡಿಗರಿಗೆ ಸ್ವಲ್ಪಮಟ್ಟಿಗೆ ಆಯಿತು.
ಜಗತ್ತಿನ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ರೂಪಾಂತರಗೊಂಡು ರಂಗಭೂಮಿಯ ಮೇಲೆ ಬರುತ್ತಿದ್ದಂತೆಯೇ ಕನ್ನಡ ರಂಗಭೂಮಿಯ ಮೇಲೆ ಸ್ವತಂತ್ರ ಕೃತಿಗಳೂ ಕಾಣಿಸಿಕೊಂಡವು. ಉತ್ತರ ಕನ್ನಡ ಜಿಲ್ಲೆಯಲ್ಲಿ, ಹವ್ಯಕರು ಮಾತನಾಡುವ ಕನ್ನಡದಲ್ಲಿ ರಚಿತವಾದ ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ಮೊದಲ ಸಾಮಾಜಿಕ ನಾಟಕ ಎನ್ನುವ ಐತಿಹಾಸಿಕ ಮಹತ್ತ್ವ ಪಡೆದಿದೆ. ಈ ದಿಶೆಯಲ್ಲಿ ಕೆಲಸ ಮಾಡಿದ ಮೊದಲಿಗರೆಂದರೆ ಟಿ.ಪಿ.ಕೈಲಾಸಂ ಹಾಗೂ ಶ್ರೀರಂಗ. ಕೈಲಾಸಂ ಅವರು ಬರ್ನಾರ್ಡ್ ಷಾ, ಇಬ್ಸನ್ ಮೊದಲಾದವರ ಮಾದರಿಯಲ್ಲಿ ನಾಟಕಗಳನ್ನು ರಚಿಸತೊಡಗಿದರು. ಇವರ ನಾಟಕಗಳಲ್ಲಿ ಹೆಚ್ಚಾಗಿ ಮಧ್ಯಮವರ್ಗದ ಜನರ ಜೀವನ ಚಿತ್ರಿತವಾಯಿತು. ಸಮಸ್ಯೆಗಳೂ ಅವರವೇ. ಗೇಲಿ, ಅನುಕಂಪ, ವ್ಯಂಗ್ಯ, ಟೀಕೆಗಳ ಮೂಲಕ ಸಮಾಜವನ್ನು ತಿದ್ದಲು ತೊಡಗಿದರು. ಮಧ್ಯಮವರ್ಗದ ಮನೆಮಾತು ರಂಗಭಾಷೆಯಾಯಿತು. ಅಹೋಬ್ಲು, ಗಂಗಣ್ಣ, ಸಾವಿತ್ರಮ್ಮ, ಸುಬ್ಬಣ್ಣ, ಪಾರ್ವತಮ್ಮ ಇವರುಗಳಿಗೆ ರಂಗದ ಮೇಲೆ ಸ್ಥಾನ ದೊರಕಿತು. ಈ ಎಲ್ಲ ದೃಷ್ಟಿಯಿಂದ ರಂಗಭೂಮಿಯಲ್ಲಿ ಕ್ರಾಂತಿಯಾಯಿತೆಂದು ಹೇಳಬಹುದು. ಕೈಲಾಸಂ ನಾಟಕಗಳು ಒಂದೇ ಸಮನೆ ಪ್ರಯೋಗವಾದುವು. ಇಂಥ ನಾಟಕಗಳ ಪ್ರಯೋಗ ಮಾಡುವುದು ಸಣ್ಣ ಸಣ್ಣ ಗುಂಪುಗಳಿಗೆ ಕಷ್ಟವಾಗುತ್ತಿರಲಿಲ್ಲ. ರಂಗಸಜ್ಜಿಕೆ, ಬೆಳಕು, ಉಡುಗೆ ತೊಡುಗೆ ಹಾಗೂ ರಂಗಪರಿಕರಗಳ ಬಗ್ಗೆ ನಾಟಕವಾಡುವವರು ಅಷ್ಟಾಗಿ ತಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ. ಹೀಗೆ ರಚನೆಗೊಂಡ ನಾಟಕಗಳಲ್ಲಿ ಮುಖ್ಯವಾದವು ಟೊಳ್ಳುಗಟ್ಟಿ, ಬಂಡ್ವಾಳ್ವಿಲ್ಲದ್ಬಡಾಯಿ, ಹುತ್ತದಲ್ಲಿ ಹುತ್ತ, ಪಾತೂ ತೌರ್ಮನೆ, ಸಾತೂ ತೌರ್ಮನೆ, ಬಹಿಷ್ಕಾರ ಮೊದಲಾದವು. ಇವರ ಕೀಚಕ, ಮಹಾಭಾರತದಲ್ಲಿ ಒಂದು ಪಾತ್ರವನ್ನು ಆಧರಿಸಿ ಬರೆದ ಹೊಸ ರೀತಿಯ ನಾಟಕ. ಕೈಲಾಸಂ ಅವರಂತೆಯೇ ಶ್ರೀರಂಗರೂ ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡರೂ ಇವರ ವಿಮರ್ಶೆ ಹರಿತವಾಗಿದೆ. ಸಮಾಜ ಪುನರ್ನಿರ್ಮಾಣವಾಗಬೇಕೆಂಬ ದೃಷ್ಟಿಯಿಂದ ಇವರು ನಾಟಕ ರಚನೆಗೆ ಕೈಹಾಕಿದರು. ಹಳತು-ಹೊಸತು, ಮುಪ್ಪು-ಯೌವನ, ಪ್ರಾಮಾಣಿಕತೆ-ಕುತಂತ್ರ, ನ್ಯಾಯ-ಅನ್ಯಾಯ - ಇವುಗಳನ್ನೆಲ್ಲ ಚಿತ್ರಿಸಿದರು. ಈ ದೃಷ್ಟಿಯಿಂದ ಹರಿಜನ್ವಾರ ನಾಟಕ ಒಂದು ಗಮನಾರ್ಹ ಕೃತಿಯಾಗಿದೆ. ಅಂತೆಯೇ ಇವರ ಸಂಸಾರಿಗ ಕಂಸ, ನರಕದಲ್ಲಿ ನರಸಿಂಹ, ಪ್ರಪಂಚ ಪಾಣಿಪತ್ತು ಮೊದಲಾದ ನಾಟಕಗಳೂ ಮುಖ್ಯವಾಗುತ್ತವೆ. ಇತ್ತೀಚೆಗೆ ಶ್ರೀರಂಗರ ಬರೆವಣಿಗೆಯ ಧೋರಣೆ ಬದಲಾಗಿದೆ. ಹೆಚ್ಚಿಗೆ ಅವು ಬುದ್ಧಿನಾಟಕಗಳಾಗಿವೆ. ಮಾತಿನ ಜಾಣತನ, ರಂಗಸಜ್ಜಿಕೆ, ಬೆಳಕು, ಉಡುಗೆ ತೊಡುಗೆ ಇವುಗಳಲ್ಲಿ ರಂಗಸಾಧ್ಯತೆಗಳನ್ನು ತರಲು ಹೋಗಿದ್ದಾರೆ. ಅಲ್ಲದೆ ಪ್ರೇಕ್ಷಕ ಹಾಗೂ ನಾಟಕಕಾರನಿಗೆ ಒಂದು ಮಹತ್ತರ ಸ್ಥಾನವನ್ನು ನಾಟಕಗಳಲ್ಲಿ ತಂದುಕೊಟ್ಟಿದ್ದಾರೆ. ಇವರ ಕತ್ತಲೆ-ಬೆಳಕು, ಏನ ಬೇಡಲಿ ನಿನ್ನ ಬಳಿಗೆ ಬಂದು, ಯಾರಿಗೆ ಮಾಡ್ತೀ ಮ್ಯಾಂ ಮೊದಲಾದವು ಈ ಮಾದರಿಯ ಕೃತಿಗಳು. ಇವರ ನಾಟಕಗಳಲ್ಲಿ ಎದ್ದುಕಾಣುವ ನ್ಯೂನತೆ ಎಂದರೆ ಒಂದು ವಿಚಾರ ಹಲವು ನಾಟಕಗಳಲ್ಲಿ ಬೇರೆಬೇರೆ ರೀತಿಯಲ್ಲಿ ಬಂದಿರುವುದು. ಇಷ್ಟಾದರೂ ಶ್ರೀರಂಗರು ರಂಗಭೂಮಿಯ ಬೆಳೆವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಬಹುದು.
ಕೈಲಾಸಂ, ಶ್ರೀರಂಗರು ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು ಬರೆಯಲು ಪ್ರಾರಂಬಿಸಿದ ಮೇಲೆ ಹಲವಾರು ನಾಟಕಕಾರರು ಬಂದರು. ಇವರಲ್ಲಿ ಮುಖ್ಯರಾದವರೆಂದರೆ ಪರ್ವತವಾಣಿ. ಇವರಿಂದ ರಚಿತವಾದ ಹಲವು ನಾಟಕಗಳು ರೂಪಾಂತರವಾದರೂ ಹವ್ಯಾಸಿ ರಂಗಭೂಮಿಯನ್ನು ಜೀವಂತವಾಗಿಡುವ ದೃಷ್ಟಿಯಿಂದ ಇವುಗಳಿಗೆ ಒಂದು ಮುಖ್ಯ ಸ್ಥಾನವಿದೆ. ಇವರ ಮುಖ್ಯ ನಾಟಕಗಳೆಂದರೆ ಬಹದ್ದೂರ್ ಗಂಡ, ಉಂಡಾಡಿ ಗುಂಡ, ವಾರ್ಷಿಕೋತ್ಸವ, ಹಣಹದ್ದು ಮೊದಲಾದವು. ಇನ್ನೂ ಕೆಲವರು ನಾಟಕಕಾರರು ಪ್ರಹಸನಗಳನ್ನು ರಚಿಸಿದರು. ಹೀಗೆ ಬರೆದಾಗ ಹಲವರು ಹವ್ಯಾಸಿ ರಂಗಭೂಮಿಯನ್ನೇ ದೃಷ್ಟಿಯಿಟ್ಟುಕೊಂಡು ಬರೆದರು ಎನ್ನುವುದೂ ಕಂಡುಬರುತ್ತದೆ. ಈ ದಿಕ್ಕಿನಲ್ಲಿ ದಾಶರಥಿ ದೀಕ್ಷಿತ್, ಎ.ಎಸ್.ಮೂರ್ತಿ, ಎನ್ಕೆ.ನಾ.ಕಸ್ತೂರಿ, ಕೆ.ಎನ್.ಸುಬ್ಬನರಸಿಂಹ, ಗುಂಡಣ್ಣ ಮೊದಲಾದವರು ಶ್ರಮಿಸಿದರು. ಎ.ಎಸ್.ಮೂರ್ತಿ ಅವರ ಬರೆವಣಿಗೆಯಲ್ಲಿ ಬದಲಾವಣೆಯನ್ನು ಗುರುತಿಸಬಹುದು. ಅಯ್ಯಾ ನಾನು ಯಾರು, ಸುಳಿಯಲ್ಲಿ ಸಿಕ್ಕಾಗ ಮೊದಲಾದವುಗಳಲ್ಲಿ ಪ್ರವೃತ್ತಿಯ ಬದಲಾವಣೆ ಕಂಡುಬರುತ್ತದೆ. ಈ ಕಾಲದಲ್ಲೇ ಇಂಗ್ಲಿಷ್ನ ಅಪೇರಾ ಮಾದರಿಯ ನಾಟಕಗಳು ಗೀತರೂಪಕಗಳು ಎಂಬ ಹೆಸರಿನಿಂದ ಕನ್ನಡಕ್ಕೆ ಬಂದವು. ಈ ಕ್ಷೇತ್ರದಲ್ಲಿ ದುಡಿದವರೆಂದರೆ ಶಿವರಾಮ ಕಾರಂತ ಹಾಗೂ ಪು.ತಿ.ನ. ಇವರುಗಳ ಗೀತನಾಟಕಗಳು ರಚನೆಯಲ್ಲಿ ಬಿನ್ನವಾಗಿವೆ. ಕಾರಂತರು ತಮ್ಮ ಗೀತನಾಟಕಗಳಲ್ಲಿ ಜನಪದ ದೇಸಿಯನ್ನು ಉಪಯೋಗಿಸಿದರೆ ಪು.ತಿ.ನ. ತಮ್ಮ ನಾಟಕಗಳಿಗೆ ಪುರಾಣಗಳಿಂದ ವಸ್ತುಗಳನ್ನು ಆಯ್ದು ಸ್ವತಂತ್ರ ಕೃತಿಗಳನ್ನು ರಚಿಸಿದರು. ಇಂಥ ನಾಟಕಗಳಲ್ಲಿ ಕಾರಂತರ ಗೀತನಾಟಕಗಳು, ಪು.ತಿ.ನ. ಅವರ ಅಹಲ್ಯೆ, ಗೋಕುಲ ನಿರ್ಗಮನ, ಹಂಸದಮಯಂತಿ ಮತ್ತು ಇತರ ರೂಪಕಗಳು ಮುಖ್ಯವಾದವು. ಕೀರ್ತಿನಾಥ ಕುರ್ತು ಕೋಟಿಯವರು ಈ ರಂಗದಲ್ಲಿ ಕೆಲಸ ಮಾಡಿ ಸ್ವಪ್ನದರ್ಶಿ ಮತ್ತು ಇತರ ಗೀತನಾಟಕಗಳು ಎಂಬ ಕೃತಿಯನ್ನು ನೀಡಿದ್ದಾರೆ.
ರೇಡಿಯೋಕ್ಕಾಗಿಯೇ ಬರೆದ ನಾಟಕಗಳು, ರಂಗಭೂಮಿಗಾಗಿ ಬರೆದ ನಾಟಕ ಗಳಿಗಿಂತ ಬೇರೆಯಾಗಿವೆ. ಈ ದೃಷ್ಟಿಯಿಂದ ರಚನೆಯಾದ ನಾಟಕಗಳಲ್ಲಿ ಹೆಸರಿಸಬಹುದಾದುವೆಂದರೆ ಬೀಚಿ ಅವರ ರೇಡಿಯೋ ನಾಟಕಗಳು. ಎಚ್.ಕೆ.ರಂಗನಾಥ ಅವರ ದುರಂತ ಮತ್ತು ಇತರ ಪ್ರಸಾರ ನಾಟಕಗಳು, ಎಸ್.ಎನ್.ಶಿವಸ್ವಾಮಿ ಅವರ ಹೃದಯಾಂತರಾಳ, ವಸಂತಕವಲಿ ಅವರ ಪುರಂದರದರ್ಶನ ಮೊದಲಾದುವುಗಳು.ಪ್ರಬುದ್ಧರಿಗಾಗಿ ನಾಟಕಗಳು ರಚನೆಯಾದಂತೆ ಮಕ್ಕಳಿಗಾಗಿಯೂ ರಚನೆಗೊಂಡಿವೆ. ಆದರೂ ಈ ದಿಶೆಯಲ್ಲಿನ ಸಾಹಿತ್ಯ ರಚನೆ ಕಡಿಮೆ ಎಂದೇ ಹೇಳಬೇಕು. ಕೆಲವು ಅನುವಾದಗಳೂ ಕಥೆಗಳನ್ನು ಆಧರಿಸಿ ರಚಿಸಿದ ಕೃತಿಗಳೂ ಬಂದಿವೆ. ಮಕ್ಕಳಿಗಾಗಿ, ಮಕ್ಕಳಿಂದ ಮಕ್ಕಳಿಗಾಗಿ ದೊಡ್ಡವರಿಂದ ನಾಟಕಗಳು ರಂಗಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಯೋಗಗಳು ಗಮನಾರ್ಹವಾಗಿವೆ. ಈ ರಂಗದಲ್ಲಿ ಉತ್ಸಾಹದಿಂದ ದುಡಿದವರೆಂದರೆ ಹೊಯಿಸಳರು. ಇವರ ಅಗಿಲಿನ ಮಗಳು. ಪ್ರಸಾದ, ವಾತಾಪಿ ಮೊದಲಾದ ನಾಟಕಗಳು ಮಕ್ಕಳ ಮನಸ್ಸನ್ನು ಸೆರೆಹಿಡಿಯುತ್ತವೆ. ಈ ನಿಟ್ಟಿನಲ್ಲಿ ಕುವೆಂಪು ಅವರ ಪ್ರಯತ್ನವೂ ಸ್ತುತ್ಯರ್ಹವಾದದ್ದು. ಇವರ ಮೋಡಣ್ಣನ ತಮ್ಮ, ನನ್ನ ಗೋಪಾಲ ಎಂಬ ನಾಟಕಗಳು ಭಾಷಾದೃಷ್ಟಿಯಿಂದ, ರಚನೆ ಹಾಗೂ ಪ್ರಯೋಗ ದೃಷ್ಟಿಗಳಿಂದ ಗಮರ್ನಾಹವಾಗಿವೆ.
ಇತ್ತೀಚೆಗೆ ಈ ಪ್ರಕಾರ ಚೆನ್ನಾಗಿ ಬೆಳೆಯುತ್ತಿದೆ. ಹೊಸ ರೀತಿಯ ರಂಜನೆಯನ್ನುಂಟುಮಾಡುವ ನಾಟಕಗಳಲ್ಲಿ ಕೆ.ವಿ.ಸುಬ್ಬಣ್ಣನವರ ಕಾಡಿನಲ್ಲಿ ಕಥೆ, ಬಿ.ವಿ.ಕಾರಂತರ ಪಂಜರಶಾಲೆ ಮೊದಲಾದವುಗಳನ್ನು ಇಲ್ಲಿ ಹೆಸರಿಸಬಹುದು.
ಸಾಹಿತ್ಯದೃಷ್ಟಿಯಿಂದ ಹಾಗೂ ರಂಗಭೂಮಿಯ ದೃಷ್ಟಿಯಿಂದ ಕೆಲವು ನಾಟಕಗಳು ಬಹಳ ಮುಖ್ಯವಾಗಿವೆ. ಮಾಸ್ತಿ ಅವರ ಕಾಕನಕೋಟೆ ಒಂದು ಗಮನಾರ್ಹ ಕೃತಿ. ರಂಗದ ಮೇಲೂ ಯಶಸ್ವಿ ಪ್ರಯೋಗವನ್ನು ಕಂಡಿದೆ. ಕುವೆಂಪು ಅವರ ಬೆರಳ್ಗೆ ಕೊರಳ್ನ ಸರಳ ರಚನೆ ಪಾತ್ರನಿರ್ವಹಣೆಯಲ್ಲಿ ಹೆಚ್ಚು ಸಹಾಯವಾಗಿದೆ. ದೃಶ್ಯವಿನ್ಯಾಸವೂ ಅಷ್ಟೇ ಚೆನ್ನಾಗಿದೆ. ಸ್ಮಶಾನ ಕುರುಕ್ಷೇತ್ರ ಭಾರತದ ಕಥೆಗೆ ಹೊಸ ದೃಷ್ಟಿಕೋನ ನೀಡಿದೆ. ಕನ್ನಡದ ಇನ್ನೊಬ್ಬ ಪ್ರಮುಖ ನಾಟಕಕಾರರೆಂದರೆ ಜಡಭರತರು (ಜಿ.ಬಿ.ಜೋಶಿ). ಇವರ ಕದಡಿದ ನೀರು, ಆ ಊರು ಈ ಊರು ನಾಟಕಗಳು ಭಾಷಾದೃಷ್ಟಿಯಿಂದ, ಸಾಹಿತ್ಯದೃಷ್ಟಿಯಿಂದ ಮುಖ್ಯವಾಗಿವೆ. ಇವರ ಸತ್ತವರ ನೆರಳು, ಸಮಾಜದ ಒಂದು ಪಂಗಡದಲ್ಲಿ, ಆಚಾರದ ನೆವದಲ್ಲಿ ಆಗುವ ಶೋಷಣೆ ಹಾಗೂ ಮೌಢ್ಯವನ್ನು ಚಿತ್ರಿಸುವ ಗಮನಾರ್ಹ ಕೃತಿಯಾಗಿದೆ. ಸಂಸ ಅವರ ನಾಟಕಗಳು ತಮ್ಮಷ್ಟಕ್ಕೆ ತಾವೇ ಪ್ರತ್ಯೇಕವಾಗಿವೆ. ಇವರ ಎಲ್ಲ ಐತಿಹಾಸಿಕ ನಾಟಕಗಳೂ ಹೆಚ್ಚಾಗಿ ಮೈಸೂರು ಇತಿಹಾಸಕ್ಕೆ ಸಂಬಂಧಪಟ್ಟವು. ಭಾಷಾ ಬಳಕೆ ಹಾಗೂ ಪ್ರಯೋಗ ದೃಷ್ಟಿಯಿಂದ ಗಮನಾರ್ಹವಾಗಿವೆ. ವಿಗಡ ವಿಕ್ರಮರಾಯ, ಬಿರುದೆಂತೆಂಬರ ಗಂಡ -ಇವುಗಳನ್ನು ಇಲ್ಲಿ ಹೆಸರಿಸಬಹುದು. ಬೇಂದ್ರೆ, ಗೋಕಾಕ, ಕುರ್ತುಕೋಟಿ, ವಿ.ಸೀ., ಶಿವರಾಮ ಕಾರಂತ ಮೊದಲಾದವರ ಕೃತಿಗಳು ಸಾಹಿತ್ಯ ಇಲ್ಲವೇ ರಂಗಭೂಮಿಯ ದೃಷ್ಟಿಯಿಂದ ಮುಖ್ಯ ಕೃತಿಗಳಾಗುತ್ತವೆ. ಕೀರ್ತಿನಾಥರ ಆ ಮನಿ, ಕಾರಂತರ ಗರ್ಭಗುಡಿ ಒಳ್ಳೆಯ ನಾಟಕಗಳು. ಆ ಮನಿಯಲ್ಲಿ ಸಾಂಕೇತಿಕತೆ ದಟ್ಟವಾಗಿದೆ. ಗರ್ಭಗುಡಿ ಸಾಮಾಜಿಕ ಸಮಸ್ಯೆಯೊಂದನ್ನು ಪ್ರಭಾವಪುರ್ಣವಾಗಿ ಚಿತ್ರಿಸುತ್ತದೆ. ಎಂ.ಆರ್.ಶ್ರೀ., ಅವರ ಧರ್ಮದುರಂತ ಐತಿಹಾಸಿಕ ನಾಟಕಗಳಲ್ಲಿ ಹೆಸರಿಸಬೇಕಾದ ಮಹತ್ತ್ವ ಪಡೆದಿದೆ.
ವಸ್ತು, ಪಾತ್ರ, ರಚನೆ, ರಂಜನೆ -ಇವುಗಳನ್ನೇ ಗಮನದಲ್ಲಿಟ್ಟು ಕೊಂಡು ಬಂದ ಸಾಂಪ್ರದಾಯಿಕ ನಾಟಕಗಳು ರಚನೆಯಾಗುತ್ತಿದ್ದಂತೆಯೇ ಕನ್ನಡ ರಂಗಭೂಮಿಯ ಮೇಲೆ ಹೊಸ ಗಾಳಿ ಬೀಸತೊಡಗಿತು. ಪಾಶ್ಚಾತ್ಯ ಸಾಹಿತ್ಯ ಹಾಗೂ ರಂಗಭೂಮಿಯ ಪರಿಚಯ ಪ್ರಭಾವ ನಮ್ಮ ಬುದ್ಧಿಜೀವಿಗಳ ಮೇಲೆ ದಟ್ಟವಾದ ಪ್ರಭಾವ ಬೀರಿದವು. ಜೀವನದ ಮೌಲ್ಯಗಳಲ್ಲಾದ ಏರುಪೇರು, ಪಟ್ಟಭದ್ರರ ಮೇಲುಗೈ, ರಾಜಕೀಯ ದೊಂಬರಾಟ ಹಾಗೂ ಅವರುಗಳ ಮೇಲುಗೈ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾದ ಧಕ್ಕೆ, ಜೀವನದ ಅಸಾಂಗತ್ಯ - ಇವುಗಳು ಬುದ್ಧಿಜೀವಿ ಗಳನ್ನು ಕೆಣಕಿ ಕಾಡಿದವು. ಸಾಂಪ್ರದಾಯಿಕ ಜಾಡಿನಲ್ಲಿ ರಚನೆ ಯಾದ ನಾಟಕಗಳು ಅವರಿಗೆ ಬೇಡಾದವು. ಇವರು ಅವನ್ನು ವಿರೋಧಿಸುವುದರ ಜೊತೆಗೆ ಕ್ರಿಯಾತ್ಮಕವಾಗಿ ಹೊಸ ದಾರಿ ತುಳಿದರು. ಇದರ ಪರಿಣಾಮವಾಗಿ ಹೊಸ ಸಂವೇದನೆಯ ನಾಟಕಗಳು ರಚಿತವಾದವು. ಈ ಜಾಡಿನ ನಾಟಕಗಳೇ ಅಸಂಗತ ನಾಟಕಗಳು. ಕನ್ನಡಕ್ಕೆ ಇದೊಂದು ವಿಶಿಷ್ಟ ಕೊಡುಗೆ. ಈ ದಿಕ್ಕಿನಲ್ಲಿ ಮೊಟ್ಟಮೊದಲು ಅಯನ ಸ್ಕೋವಿನ ಬಾಲ್ಡ್‌ಸೊಪ್ರಾನೋ ಸುಮತೀಂದ್ರ ನಾಡಿಗರಿಂದ ಬೊಕ್ಕ ತಲೆಯ ನರ್ತಕಿಯಾಗಿ ಕನ್ನಡಕ್ಕೆ ಬಂದಿತು. ಇದಕ್ಕೆ ಐತಿಹಾಸಿಕ ಮಹತ್ವ ವಿದೆ. ಇವರು ಮುಂದೆ ಈ ಮಾದರಿಯ ನಾಟಕಗಳನ್ನು ರಚಿಸಲಿಲ್ಲ. ಅನಂತರ ಪಿ.ಲಂಕೇಶ್, ನ.ರತ್ನ, ಪುರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಪಾಟೀಲ, ಚಂದ್ರಶೇಖರ ಕಂಬಾರ, ಚಂದ್ರಕಾಂತ ಕುಸನೂರ, ರಾಮಚಂದ್ರ ಶರ್ಮ, ಚದುರಂಗ ಮೊದಲಾದವರು ಈ ಪ್ರಕಾರದಲ್ಲಿ ಹೆಚ್ಚು ಕೆಲಸ ಮಾಡಿದರು. ವ್ಯಕ್ತಿಗಳ ವ್ಯಕ್ತಿತ್ವದ ಅಂತರಂಗ ಹಾಗೂ ಬಹಿರಂಗಗಳ ಸ್ವರೂಪ ಹಾಗೂ ಸಂಬಂಧಗಳನ್ನು ವಿಶ್ಲೇಷಿಸುವುದೆ ಲಂಕೇಶರ ತೆರೆಗಳು ನಾಟಕದ ಉದ್ದೇಶವಾಗಿದೆ. ನ.ರತ್ನರ ಎಲ್ಲಿಗೆ ನಾಟಕದಲ್ಲಿ ಜೀವನದ ಅಸಾಂಗತ್ಯ ಧ್ವನಿಪುರ್ಣವಾಗಿ ಚಿತ್ರಿತವಾಗಿರವುದನ್ನು ನೋಡಬಹುದು. ವ್ಯಕ್ತಿಯ ಅನ್ವೇಷಣೆ ಯಲ್ಲಿನ ಅಸಾಧ್ಯತೆಯನ್ನು ವ್ಯಂಗ್ಯವಾಗಿ ನೋಡುವ ನಾಟಕ ಇದು. ಪುರ್ಣಚಂದ್ರ ತೇಜಸ್ವಿ ಅವರ ಯಮಳಪ್ರಶ್ನೆಯಲ್ಲಿ ಯಂತ್ರಕ್ಕೆ ಸಿಗುವ ಪ್ರಾಮುಖ್ಯತೆ ಮಾನವನಿಗೆ ಸಿಗುವುದಿಲ್ಲ ಎನ್ನುವ ಜೀವನದ ವ್ಯಂಗ್ಯ ನಾಟಕದ ವಸ್ತುವಾಗಿದೆ. ಚಂದ್ರಶೇಖರ ಪಾಟೀಲರ ಅಪ್ಪ ನಾಟಕದಲ್ಲಿ ಬರುವ ಬಸವ ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲು ಪಡುವ ಪ್ರಯತ್ನ ಅವನದೇ ಆಗಿರದೆ ಸಮಾಜದ ಯಾವ ಒಬ್ಬ ವ್ಯಕ್ತಿಯದೂ ಆಗುತ್ತದೆ.
ಚಂದ್ರಶೇಖರ ಕಂಬಾರರ ಚಾಳೇಶದಲ್ಲಿ ವ್ಯಕ್ತಿತ್ವಗಳ ನಡುವೆ, ಸುಳ್ಳು ಮತ್ತು ಸತ್ಯಗಳ ನಡುವೆ, ಕನಸು ಮತ್ತು ಎಚ್ಚರಗಳ ನಡುವೆ ಇರುವ ದ್ವಂದ್ವವನ್ನು (ವ್ಯಕ್ತಿಯ ಸಂಕಟ) ನೋಡಬಹುದು. ಇಲಿ ಬೋನು, ಹಳ್ಳಾಕೊಳ್ಳಾ ನೀರು, ಕೊಡೆಗಳು ಮೊದಲಾದ ನಾಟಕಗಳಲ್ಲಿ ಜೀವನದ ಅಸಂಗತತೆಯ ಚಿತ್ರಣ ಸಾಂದ್ರತರವಾಗಿ ಅಬಿವ್ಯಕ್ತವಾಗಿದೆ. ಋಷ್ಯಶೃಂಗ, ಸಂಕ್ರಾಂತಿ ನಾಟಕಗಳಲ್ಲಿನ ಇತಿಹಾಸಕ್ಕೆ ಹೊಸ ಅರ್ಥ ಬರುತ್ತದೆ. ಎಚ್.ಎಂ.ಚನ್ನಯ್ಯನವರ ಎಲ್ಲರಂಥವನಲ್ಲ ನನ ಗಂಡ, ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ, ಚಂದ್ರಶೇಖರ ಪಾಟೀಲರ ಗೋಕರ್ಣದ ಗೌಡಶಾನಿ- ಈ ನಾಟಕಗಳು ರಚನೆಯ ದೃಷ್ಟಿಯಿಂದ ಪ್ರತ್ಯೇಕವಾಗಿವೆ - ಇವು ಎಪಿಕ್ ನಾಟಕದ ಮಾದರಿಯ ನಾಟಕಗಳು. ಎಲ್ಲರಂಥವನಲ್ಲ ನನ ಗಂಡ ಹಾಗೂ ಜೋಕುಮಾರಸ್ವಾಮಿ ಪ್ರಯೋಗದ ದೃಷ್ಟಿಯಿಂದ ಗಮನಾರ್ಹ ಕೃತಿಗಳಾಗಿವೆ.
ಗಿರೀಶ್ ಕಾರ್ನಾಡರು ಐತಿಹಾಸಿಕ, ಪೌರಾಣಿಕ ವಸ್ತುಗಳನ್ನು ಎತ್ತಿಕೊಂಡು ಅವಕ್ಕೆ ಹೊಸ ವ್ಯಾಖ್ಯಾನ ಮಾಡಿ ನಾಟಕಗಳನ್ನು ರಚಿಸುತ್ತ ಬಂದಿದ್ದಾರೆ. ಯಯಾತಿ, ತುಘಲಕ್, ಹಯವದನ, ಅಗ್ನಿ ಮತ್ತು ಮಳೆ ಇವರ ಮುಖ್ಯ ಕೃತಿಗಳು. ಯಯಾತಿಯಲ್ಲಿ ಹೊಸ ಪಾತ್ರಗಳೂ ಸೇರಿದಂತೆ ಹೊಸ ವ್ಯಾಖ್ಯಾನವಿದ್ದರೆ, ತುಘಲಕ್ ನಾಟಕದಲ್ಲಿ ತುಘಲಕನ ಪಾತ್ರದಲ್ಲಿ ಅಸಾಂಗತ್ಯವಿದೆ. ಈ ನಾಟಕ ಕಾಮುವಿನ ಕ್ಯಾಲಿಗುಲಕ್ಕೆ ಬಹಳಷ್ಟು ಋಣಿಯಾಗಿದೆ. ಹಯವದನ ಬಹಳ ತಂತ್ರಗಳುಳ್ಳ ನಾಟಕ. ಪಾತ್ರಗಳ ವಿಶ್ಲೇಷಣೆಯ ದೃಷ್ಟಿಯಿಂದ, ತಂತ್ರದ ದೃಷ್ಟಿಯಿಂದ ಹೊಸತು-ಹಳತುಗಳ ಬೆಸುಗೆಯಿಂದ ಇವರ ನಾಟಕಗಳು ಮುಖ್ಯವಾಗುತ್ತವೆ.
ಇಂಥ ಸ್ವತಂತ್ರ ಕೃತಿಗಳ ರಚನೆಯ ಜೊತೆಗೆ ಪ್ರಪಂಚದ ಹಾಗೂ ಭಾರತದ ಇತರ ಭಾಷೆಯ ಹೊಸ ಸಂವೇದನೆಯ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳುತ್ತಿವೆ. ಬಂಗಾಲಿ, ಮರಾಠಿ, ಹಿಂದಿ ಮೊದಲಾದ ಭಾಷೆಗಳಿಂದ ಕೆಲವು ಗಮನಾರ್ಹ ಕೃತಿಗಳು ಅನುವಾದಗೊಂಡಿವೆ. ಮರಾಠಿಯಿಂದ ವಿಜಯ ತೆಂಡೂಲ್ಕರ್ ಅವರ ಶಾಂತತಾ ಕೋರ್ಟ್ ಚಾಲು ಹೈ ಕನ್ನಡದಲ್ಲಿ ಸದ್ದು ವಿಚಾರಣೇ ನಡೀತಾ ಇದೆ ಎಂದೂ ಬಾದಲ್ ಸರ್ಕಾರ್ ಅವರ ಪಗಲಾ ಘೂೕಡಾ ಹಾಗೂ ಬಾಕಿ ಇತಿಹಾಸ್ ಎನ್.ಎಸ್.ವೆಂಕಟರಾಂ ಅವರಿಂದ ಹುಚ್ಚು ಕುದುರೆ ಹಾಗೂ ಬಾಕಿ ಇತಿಹಾಸ ಎಂದೂ ಬಿ.ವಿ.ಕಾರಂತರಿಂದ ಏವಂ ಇಂದ್ರಜಿತ್ ಅದೇ ಹೆಸರಿನಲ್ಲೂ ಮೋಹನ್ ರಾಕೇಶ್ ಅವರ ಆಷಾಢ್ ಕೆ ಏಕ್ ದಿನ್ ಸಿದ್ಧಲಿಂಗಪಟ್ಟಣ ಶೆಟ್ಟಿ ಅವರಿಂದ ಆಷಾಢದಲ್ಲಿ ಒಂದು ದಿನ ಎಂದೂ ಅನುವಾದಗೊಂಡಿವೆ. ಬರ್ನಾರ್ಡ್ ಷಾ ಅವರ ‘ಆರಮ್ಸ್ ಅಂಡ್ ದಿ ಮ್ಯಾನ್’ ನಾಟಕವನ್ನು ‘ಚಾಕೊಲೆಟ್ ಸಿಪಾಯಿ’ ಎಂದು ಎಚ್.ಎ.ರಾಮಕೃಷ್ಣ ಅನುವಾದ ಮಾಡಿದ್ದಾರೆ. ಈ ಮೇಲಿನ ವಿವರಣೆಗಳು ಸಾಹಿತ್ಯಕೃತಿಗಳ ದೃಷ್ಟಿಯಿಂದ, ರಂಗಭೂಮಿಯ ದೃಷ್ಟಿಯಿಂದ ಕನ್ನಡ ನಾಟಕ ಸಂಪತ್ತು ಚೆನ್ನಾಗಿಯೇ ಬೆಳೆಯುತ್ತ ಬಂದಿದೆ ಎಂಬುದನ್ನು ವಿಶದಪಡಿಸುತ್ತದೆ.
ಅನುವಾದ, ರೂಪಾಂತರ, ಸ್ವತಂತ್ರ ರಚನೆ - ಹೀಗೆ ವೈವಿಧ್ಯಮಯವಾಗಿ ಬೆಳೆದುಕೊಂಡು ಬಂದ ಕನ್ನಡ ನಾಟಕ-ರಂಗಭೂಮಿಯ ಮೇಲೆ ಆಗಾಗ್ಗೆ ಪಾಶ್ಚಾತ್ಯ ಗಾಳಿ ಬೀಸಿದೆ. ನಾಟಕಗಳು ರಚನೆ ದೃಷ್ಟಿ ಹಾಗೂ ಮೌಲ್ಯಗಳ ದೃಷ್ಟಿಯಿಂದ ಒಂದು ಹಂತವನ್ನು ಮುಟ್ಟಿವೆ. ಕನ್ನಡ ವೃತ್ತಿ ರಂಗಭೂಮಿ ನಾಟಕ ಸಾಹಿತ್ಯರಚನೆಗೆ ಸ್ಫೂರ್ತಿ ನೀಡಿದೆ. ಹವ್ಯಾಸಿ ರಂಗಭೂಮಿ ಸಾಹಿತ್ಯರಚನೆಯ ದೃಷ್ಟಿಯಿಂದ ಹಾಗೂ ಪ್ರಯೋಗದ ದೃಷ್ಟಿಯಿಂದ ಮುಖ್ಯವಾಗಿದೆ. ಎಪ್ಪತ್ತರ ದಶಕದಲ್ಲಿ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಿಗೆ ಸಿಕ್ಕಿದ್ದಷ್ಟೇ ಪ್ರಾಮುಖ್ಯತೆ ನಾಟಕ ರಚನೆ ಮತ್ತು ರಂಗಭೂಮಿ ಪ್ರದರ್ಶನಗಳಿಗೂ ಸಿಕ್ಕಿತು. ಕನ್ನಡದಲ್ಲಿ ನಾಟಕಗಳಿಲ್ಲ ಎಂಬ ಗೊಣಗಾಟದ ನಡುವೆಯೇ ಗಣನೀಯವಾದ ಸಂಖ್ಯೆಯಲ್ಲಿ ನಾಟಕಗಳು ರಚಿತವಾದವು. ಹಾಗೆಯೇ ಗಣನೀಯವಾದ ಸಂಖ್ಯೆಯಲ್ಲಿ ಬೇರೆಬೇರೆ ಭಾಷೆಗಳಿಂದ ನಾಟಕಗಳು ಕನ್ನಡಕ್ಕೆ ಅನುವಾದಗೊಂಡವು. ಅತಿ ಹೆಚ್ಚಿನ ನಾಟಕಗಳು ರಚನೆಯಾಗುವುದಕ್ಕೆ ಕಾರಣ ರಂಗಭೂಮಿಯ ಸ್ವರೂಪದಲ್ಲಿ ಆದ ಬದಲಾವಣೆಗಳು. ಎಪ್ಪತ್ತರ ದಶಕದಲ್ಲಿ ರಂಗಭೂಮಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡತೊಡಗಿತು. ಅದರಿಂದಾಗಿ ನಾಟಕ ಎಂಬ ಪ್ರಕಾರವನ್ನು ನೋಡುವ ದೃಷ್ಟಿಯೇ ಬದಲಾಗತೊಡಗಿತು. ನಾಟಕವನ್ನು ಏಕಕಾಲದಲ್ಲಿ ‘ಲಿಖಿತ ಕೃತಿ’ಯನ್ನಾಗಿಯೂ ‘ರಂಗಕೃತಿ’ಯನ್ನಾಗಿಯೂ ಪರಿಭಾವಿಸುವ ದೃಷ್ಟಿ ಹುಟ್ಟಿಕೊಂಡಿತು. (ಎಸ್.ಎ.)
ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡ ಕೆಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಗಳು ನಾಟಕ ರಚನೆಯ ಮೇಲೆ ಅಗಾಧವಾದ ಪರಿಣಾಮ ಬೀರಿದವು. ದಲಿತ ಸಂಘರ್ಷ ಸಮಿತಿ, ರೈತ ಸಂಘಟನೆ, ಎಡಪಂಥೀಯ ಸಂಘಟನೆ ಮತ್ತು ಬಂಡಾಯ ಸಾಹಿತ್ಯ ಸಂಘಟನೆ ತಮ್ಮ ಪ್ರಖರವಾದ ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತನೆಗಳ ಹಿನ್ನೆಲೆಯಲ್ಲಿ ಇಡೀ ಸಮಾಜದ ಚಾರಿತ್ರಿಕ ದ್ವಂದ್ವಮಾನ ಮತ್ತು ಗತಿತಾರ್ಕಿಕತೆಯನ್ನು ವಿಶ್ಲೇಷಿಸತೊಡಗಿದ್ದವು. ಈ ಎಲ್ಲಾ ಪ್ರಭಾವಗಳೂ ನಾಟಕ ಬರೆವಣಿಗೆಯ ಮೇಲೆ ನೇರ ಪ್ರಭಾವ ಬೀರತೊಡಗಿದವು. ಇದರಿಂದ ರಾಜಕೀಯ ನೆಲೆಯ ಅನೇಕ ಆಯಾಮಗಳನ್ನು ವಿಶ್ಲೇಷಿಸುವ ನಾಟಕಗಳು ಬರತೊಡಗಿದವು. ಅಲ್ಲಿಯವರೆಗೆ ನಾಟಕ ಬರೆಯುತ್ತಿದ್ದ ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಜಿ.ಬಿ.ಜೋಷಿ ಮೊದಲಾದ ನಾಟಕಕಾರರ ಮೇಲೂ ಇದರ ಪ್ರಭಾವ ಕಂಡುಬರತೊಡಗಿತು. ಎಪ್ಪತ್ತೈದರ ಹಿಂದೆ ವಾಸ್ತವವಾದದ ನೆಲೆಯಲ್ಲಿ, ಅಸಂಗತವಾದದ ನೆಲೆಯಲ್ಲಿ ಹಾಗೂ ಅಬಿವ್ಯಕ್ತಿವಾದದ ನೆಲೆಯಲ್ಲಿ ನಾಟಕ ಬರೆಯುತ್ತಿದ್ದ ಕೈಲಾಸಂ, ಶ್ರೀರಂಗ, ಲಂಕೇಶ್, ಜಡಭರತ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮೊದಲಾದವರು ಎಪ್ಪತ್ತಾರರ ಅನಂತರ ನಾಟಕ ಬರೆಯಲು ಪ್ರಾರಂಬಿಸಿದ ನಾಟಕಕಾರರಿಗೂ ವಸ್ತು ಮತ್ತು ತಂತ್ರದ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸಗಳಿವೆ. ಎಪ್ಪತ್ತಾರರ ಹೊತ್ತಿಗಾಗಲೇ ಜರ್ಮನಿಯ ನಾಟಕಕಾಕರ ಬರ್ಟೊಲ್ಟ್ ಬ್ರೆಕ್ಟ್‌ನ “ಎಪಿಕ್ ತಂತ್ರ” ರಂಗಭೂಮಿಯನ್ನು ಪ್ರವೇಶಿಸಿಯಾಗಿತ್ತು. ನಾಟಕದ ವಸ್ತು ಸೈದ್ಧಾಂತಿಕ ನೆಲೆಯಲ್ಲಿ ರೂಪುಗೊಳ್ಳುತ್ತಿತ್ತು. ಜಾತಿ ಸಂಘರ್ಷ, ವರ್ಗ ಸಂಘರ್ಷ, ರಾಜಕೀಯ ಶಿಥಿಲತ್ವ, ಸಾಮಾಜಿಕ ಅಸಮಾನತೆ - ಹೀಗೆ ಸಮಕಾಲೀನ ವೈರುಧ್ಯಗಳು ನಾಟಕದ ವಸ್ತುಗಳಾಗಿ ಕಾಣಿಸಿಕೊಳ್ಳತೊಡಗಿದವು.
ಈ ಅವಧಿಯಲ್ಲಿ ಹಿರಿಯ ತಲೆಮಾರಿನ ಅನೇಕ ನಾಟಕಕಾರರು ತಮ್ಮ ನಾಟಕದ ಬರೆವಣಿಗೆಯನ್ನು ಮುಂದುವರೆಸಿದರು. ಅವರ ಜೊತೆ ಜೊತೆಗೇ ಅನೇಕ ಹೊಸಪೀಳಿಗೆಯ ನಾಟಕಕಾರರೂ ಹುಟ್ಟಿಕೊಂಡರು. ಹಿರಿಯ ನಾಟಕಕಾರರ ನಾಟಕಗಳು ವಸ್ತು ಮತ್ತು ತಂತ್ರದ ದೃಷ್ಟಿಯಿಂದ ಸಾಕಷ್ಟು ಬದಲಾವಣೆಗೂ ಒಳಪಟ್ಟವು. ಗಿರೀಶ್ ಕಾರ್ನಾಡ್ ಅವರು ತಲೆದಂಡ, ನಾಗಮಂಡಲ, ಅಗ್ನಿ ಮತ್ತು ಮಳೆ ಎಂಬ ನಾಟಕಗಳನ್ನು ರಚಿಸಿದರು. ತಲೆದಂಡ 12ನೆಯ ಶತಮಾನದ ಶರಣ ಚಳವಳಿಯ ಹಿನ್ನೆಲೆಯ ನಾಟಕ. ಧರ್ಮ ಮತ್ತು ರಾಜಕೀಯದ ಮಧ್ಯದ ಸಂಘರ್ಷದ ಕಥೆ. ‘ನಾಗಮಂಡಲ’ ಜನಪದ ಕಥೆಯನ್ನಾಧರಿಸಿದ ನಾಟಕ. ಗಿರೀಶರನ್ನು ಅಪಾರವಾಗಿ ಕಾಡಿದ ಸೀಳು ವ್ಯಕ್ತಿತ್ವದ ಕತೆ ಇಲ್ಲಿದೆ. ‘ಅಗ್ನಿ ಮತ್ತು ಮಳೆ’ ಮಹಾಭಾರತದ ಉಪಾಖ್ಯಾನಮೊಂದನ್ನು ಆಧರಿಸಿದ ನಾಟಕ. ವೈದಿಕಾಚರಣೆಗಳ ಶುಷ್ಕತೆ ಹಾಗೂ ದೇಸೀ ಮೂಲಗಳ ಫಲವತ್ತತೆಯನ್ನು ಅತ್ಯಂತ ಸಂಕೀರ್ಣವಾಗಿ ಹಿಡಿದಿಡುವ ನಾಟಕ. ಶತಮಾನದ ಕಡೆಯಲ್ಲಿ ಗಿರೀಶರು ಟಿಪ್ಪು ಕಂಡ ಕನಸು ಎಂಬ ಇನ್ನೊಂದು ನಾಟಕ ಬರೆದರು. ಇದು ಮುಖ್ಯವಾಗಿ ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನನ ಆಶೋತ್ತರಗಳನ್ನು ಪ್ರತಿಫಲಿಸುತ್ತದೆ. ಆದರೆ ಇದು ಗಿರೀಶರ ಮಿಕ್ಕ ನಾಟಕಗಳಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ಈ ಅವಧಿಯಲ್ಲಿಯೂ ಗಿರೀಶ್ ಕಾರ್ನಾಡ್ ಕನ್ನಡದ ಮಹತ್ವದ ನಾಟಕಕಾರರಾಗಿಯೇ ಉಳಿದಿದ್ದಾರೆ ಎಂಬುದು ಗಮನಾರ್ಹ. ಪಿ.ಲಂಕೇಶ್ ಈ ಅವಧಿಯಲ್ಲಿ ಗುಣಮುಖ ನಾಟಕ ಬರೆದರು. ಇದು ಭಾರತದ ಮೇಲೆ ಆಕ್ರಮಣ ಮಾಡಿದ ಪರ್ಷಿಯನ್ ದೊರೆ ನಾದಿರ್ಶಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥನಾದುದರ ಹಿನ್ನೆಲೆ ಹೊಂದಿದೆ. ನಾಟಿವೈದ್ಯನೊಬ್ಬನ ಮಾನವೀಯ ಚಿಕಿತ್ಸೆಯಿಂದ ಅವನು ಸ್ವಸ್ಥನಾಗುತ್ತಾ ಹೋಗುತ್ತಾನೆ. ನಾಟಕವನ್ನು ಪ್ರಧಾನ ಸೃಜನಶೀಲ ಅಬಿವ್ಯಕ್ತಿಯಾಗಿ ಮುಂದುವರೆಸಿದ ಇನ್ನೊಬ್ಬ ಪ್ರಮುಖ ನಾಟಕಕಾರರೆಂದರೆ ಚಂದ್ರಶೇಖರ ಕಂಬಾರ. ಇವರು ಹುಲಿಯ ನೆರಳು, ಸಾಂಬಶಿವ ಪ್ರಹಸನ, ಹರಕೆಯ ಕುರಿ, ಜೈಸಿದನಾಯ್ಕ, ಸಿರಿಸಂಪಿಗೆ, ತುಕ್ರನ ಕನಸು, ನಾಯಿಕತೆ, ಮಹಾಮಾಯಿ ಮುಂತಾದ ನಾಟಕಗಳನ್ನು ರಚಿಸಿದರು. ಹರಕೆಯ ಕುರಿ ಮತ್ತು ಜೈಸಿದನಾಯ್ಕ ಮುಖ್ಯವಾಗಿ ಸಮಕಾಲೀನ ರಾಜಕೀಯ ನಾಟಕಗಳು. ‘ತುಕ್ರನ ಕನಸು’ ಚೀನಿ ಕತೆಯೊಂದರಿಂದ ಪ್ರೇರಿತವಾದ ಸಮಕಾಲೀನ ವಸ್ತುವನ್ನು ಉಳ್ಳದ್ದು. ಕಂಬಾರರ ನಿಜವಾದ ನಾಟ್ಯ ಪ್ರತಿಭೆ ಉಜ್ವಲವಾಗಿ ಬೆಳೆಗಿರುವುದು ಅವರ ಜಾನಪದೀಯ ಹಿನ್ನೆಲೆಯ ನಾಟಕಗಳಲ್ಲಿ. ಅದ್ಭುತವಾದ ಹಾಸ್ಯಪ್ರಜ್ಞೆ, ಜಾನಪದೀಯ ಮತ್ತು ಪೌರಾಣಿಕ ರೂಪಗಳನ್ನು ಸಮಕಾಲೀನವಾಗಿ ವ್ಯಾಖ್ಯಾನಗೊಳಿಸುವ ಇವರ ಪ್ರತಿಭೆ ಬೆರುಗುಗೊಳಿಸುವಂಥದ್ದು. ಇವರು ಕನ್ನಡ ನಾಟಕ ಸ್ವರೂಪಕ್ಕೆ ಬೆರಗಿನ ಬೆಡಗನ್ನು ನೀಡಿದವರು. ಇವರು ಮಕ್ಕಳ ನಾಟಕಗಳನ್ನೂ ಅಷ್ಟೇ ಯಶಸ್ವಿಯಾಗಿ ರಚಿಸಿದ್ದಾರೆ. ಇವರ ಕಿಟ್ಟಿಕಥೆ, ಪುಷ್ಪರಾಣಿ, ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು, ಮಕ್ಕಳ ನಾಟಕದ ಪರಿಕಲ್ಪನೆಯನ್ನು ವಿಸ್ತರಿಸುವಲ್ಲಿ ದೊಡ್ಡಪಾತ್ರ ವಹಿಸಿವೆ. ಕನ್ನಡ ನಾಟಕ ಸಾಹಿತ್ಯವನ್ನು ಸಮೃದ್ಧಿಗೊಳಿಸಿದ ಶ್ರೀರಂಗರು ಈ ಅವಧಿಯಲ್ಲಿ ನೀವೇ ಹೇಳಿರಿ ಮತ್ತು ಅಗ್ನಿಸಾಕ್ಷಿ ಎಂಬ ಎರಡು ನಾಟಕಗಳನ್ನು ಪ್ರಕಟಿಸಿದ್ದಾರೆ. ಜಿ.ಬಿ.ಜೋಷಿಯವರು ನಾನೇ ಬಿಜ್ಜಳ, ಪರಿಮಳದವರು ಎಂಬ ನಾಟಕಗಳನ್ನು ಪ್ರಕಟಸಿದ್ದಾರೆ.
ಎಂಬತ್ತರ ದಶಕದಲ್ಲಿ ಕನ್ನಡ ನಾಟಕ ಸಾಹಿತ್ಯದಲ್ಲಿ ಹೊಸದೊಂದು ರೀತಿಯ ಬೆಳೆವಣಿಗೆ ಕಾಣತೊಡಗಿತು. ಅನೇಕ ಜನ ಯುವ ನಾಟಕಕಾರರು ನಾಟಕ ಬರೆಯಲು ಆರಂಬಿsಸಿದರು. ಈ ರೀತಿ ಯುವ ನಾಟಕಕಾರರು ದೊಡ್ಡ ಸಂಖ್ಯೆಯಲ್ಲಿ ನಾಟಕಕಾರರಾಗಿ ಹೊರಹೊಮ್ಮುವುದಕ್ಕೆ ಮುಖ್ಯ ಕಾರಣ ರಂಗಭೂಮಿಯಲ್ಲಾದ ಬದಲಾವಣೆ, ಎಡಪಂಥೀಯ ಚಳವಳಿ, ರೈತ ಸಂಘಟನೆ, ದಲಿತ-ಬಂಡಾಯ ಸಂಘಟನೆಗಳು ತಮ್ಮ ಪ್ರಖರ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಗಳನ್ನು ಬರೆವಣಿಗೆಯ ಮೂಲಕ ಅಬಿವ್ಯಕ್ತಿಸಲು ತೊಡಗಿದವು. ಅಂಥವರಿಗೆ ರಂಗಭೂಮಿ ಬಹಳ ಮುಖ್ಯವಾದ ಮಾಧ್ಯಮವಾಗಿ ಕಂಡುಬಂದಿತು. ಇದರ ಫಲವಾಗಿ ರಾಜಕೀಯ ವಸ್ತುವಿನ, ಸಾಮಾಜಿಕ ಬದ್ಧತೆಯ ಹಿನ್ನೆಲೆಯ ನಾಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದವು. ನಾಟಕ ಮತ್ತು ರಂಗಭೂಮಿಯ ಮೂಲಕ ಸಾಮಾಜಿಕ ಜಾಗೃತಿಯನ್ನುಂಟುಮಾಡುವ ಉದ್ದೇಶ ಇದರ ಹಿನ್ನೆಲೆಗಿತ್ತು. ಬದ್ಧತೆಯೊಂದಿಗೆ ನಾಟಕ ಬರೆಯುವುದರ ಜೊತೆಗೆ, ಬದ್ಧತೆಯ ವಸ್ತುವನ್ನುಳ್ಳ ಕಥೆ, ಕಾದಂಬರಿಗಳನ್ನು ನಾಟಕಗಳನ್ನಾಗಿ ಪರಿವರ್ತಿಸ ತೊಡಗಿದರು. ಹಾಗೆಯೇ ಬೇರೆ ಬೇರೆ ಭಾಷೆಗಳಿಂದ ನಾಟಕಗಳನ್ನು ಭಾಷಾಂತರಿಸತೊಡಗಿದರು. ಇಲ್ಲಿಯವರೆಗೆ ಅಷ್ಟಾಗಿ ಕನ್ನಡದಲ್ಲಿ ಪರಿಚಯವಿರದ ಅನೇಕ ಭಾಷಾನೆಲೆಯ ನಾಟಕಕಾರರು ಕನ್ನಡಕ್ಕೆ ಪ್ರವೇಶಿಸಿದರು. ಮಕ್ಕಳ ನಾಟಕಗಳೂ ಈ ಅವಧಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡವು.
ರಾಷ್ಟ್ರೀಯ ನಾಟಕ ಶಾಲೆ (ಎನ್.ಎಸ್.ಡಿ.), ಹೆಗ್ಗೋಡಿನ ನೀನಾಸಂ ನಾಟಕ ಶಾಲೆ, ಹಾಗೂ ಅನೇಕ ರಂಗತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆದುಕೊಂಡ ರಂಗ ನಿರ್ದೇಶಕರು ಈ ರೀತಿಯ ನಾಟಕಗಳ ಹುಟ್ಟಿಗೆ ಕಾರಣರಾದರೆಂಬುದು ಮುಖ್ಯ ವಿಷಯ. ಪ್ರಧಾನಧಾರೆಯ ನಾಟಕಗಳ ಜೊತೆಗೆ ಬೀದಿನಾಟಕಗಳ ಹುಟ್ಟು ಕೂಡಾ ಇದೇ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಆಯಿತು.
ಈ ಅವಧಿಯಲ್ಲಿ ಬಂದ ಪ್ರಮುಖ ನಾಟಕಕಾರರೆಂದರೆ ಬಿ.ವಿ.ವೈಕುಂಠರಾಜು, ಎಚ್.ಎಸ್.ಶಿವಪ್ರಕಾಶ್, ಪ್ರಸನ್ನ, ಲಿಂಗದೇವರು ಹಳೆಮನೆ, ಸಿದ್ಧಲಿಂಗಯ್ಯ, ಹೂಲಿಶೇಖರ್, ಟಿ.ಎನ್.ಸೀತಾರಾಮ್, ಕೆ.ವಿ.ಸುಬ್ಬಣ್ಣ, ಕೆ.ವಿ.ಅಕ್ಷರ, ಎಚ್.ಎಸ್.ವೆಂಕಟೇಶಮೂರ್ತಿ, ಗೋಪಾಲ ವಾಜಪೇಯಿ, ನಿಸರ್ಗಪ್ರಿಯ, ಕಿ.ರಂ.ನಾಗರಾಜ ಮೊದಲಾದವರು.
ಬಿ.ವಿ.ವೈಕುಂಠರಾಜು ಅವರು ಸಂದರ್ಭ, ಸನ್ನಿವೇಶ ಮತ್ತು ಕಾನನ್ದೇವಿ ಎಂಬ ನಾಟಕಗಳನ್ನು ಬರೆದಿದ್ದಾರೆ. ಇವರ ನಾಟಕಗಳು ಸಮಕಾಲೀನ ರಾಜಕೀಯ ವಸ್ತುಗಳನ್ನಾಧರಿಸಿವೆ. ಕೆ.ವಿ.ನಾರಾಯಣ ಅವರು ಸಂಸರ ‘ವಿಗಡ ವಿಕ್ರಮರಾಯ’ ನಾಟಕವನ್ನು ಆಧರಿಸಿ ಹುತ್ತವ ಬಡಿದರೆ ಎಂಬ ನಾಟಕವನ್ನು ರಚಿಸಿದ್ದಾರೆ. ಬರ್ಟೋಲ್ಟ್ ಬ್ರೆಕ್ಟ್‌ನ ಎಪಿಕ್ತಂತ್ರವನ್ನು ಅತ್ಯಂತ ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಈ ನಾಟಕ ಇತಿಹಾಸವನ್ನು ಸಮಕಾಲೀನವಾಗಿ ಅರ್ಥೈಸುವ ಹೊಸದೊಂದು ಕ್ರಮವನ್ನು ಪರಿಚಯಿಸಿತ್ತು. ಟಿ.ಎನ್.ಸೀತಾರಾಮ್ ಅವರ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ಎಂಬ ನಾಟಕಗಳು ಕನ್ನಡದಲ್ಲಿ ಬಂದ ಅತ್ಯಂತ ಸಶಕ್ತ ರಾಜಕೀಯ ನಾಟಕಗಳು. ಇವು ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಸಂಬಂಧಗಳನ್ನು ಅವುಗಳ ಸಂಕೀರ್ಣ ಸ್ತರದಲ್ಲಿ ಹಿಡಿದಿಡಬಲ್ಲ ಅಪರೂಪದ ನಾಟಕಗಳು. ದಲಿತಕವಿ ಸಿದ್ಧಲಿಂಗಯ್ಯನವರು ಪಂಚಮ, ನೆಲಸಮ ಮತ್ತು ಏಕಲವ್ಯ ಎಂಬ ನಾಟಕಗಳನ್ನು ಬರೆದಿದ್ದಾರೆ. ದಲಿತರ ಸ್ಥಿತಿ, ನೋವು, ಅವಮಾನ ಮತ್ತು ಜಾಗೃತಿಗಳನ್ನು ಕೆಂದ್ರವಾಗಿಟ್ಟುಕೊಂಡು ಬರೆದ ನಾಟಕಗಳಿವು. ದಲಿತ ಸಾಹಿತ್ಯಕ್ಕೆ ಸಂದ ಮಹತ್ವದ ಕೊಡುಗೆಗಳು. ಬಹುಮುಖ್ಯವಾಗಿ ‘ಏಕಲವ್ಯ’ ನಾಟಕದಲ್ಲಿ ಅವರು ಏಕಲವ್ಯ ಬಲಗೈ ಹೆಬ್ಬೆರಳನ್ನು ಕಳೆದುಕೊಂಡರೂ ಎಡಗೈ ಹೆಬ್ಬೆರಳಿನ ಮೂಲಕ ಧನುರ್ವಿದ್ಯೆಯನ್ನು ಮುಂದುವರೆಸುವ ರೀತಿಯ ಬದಲಾವಣೆಯ ಮೂಲಕ ದಲಿತರ ಕಲಿಯುವ ಹಂಬಲವನ್ನು ಅತ್ಯಂತ ಪ್ರಖರವಾಗಿ ಚಿತ್ರಿಸಿದ್ದಾರೆ.
ಈ ತಲೆಮಾರಿನ ನಾಟಕಕಾರರಲ್ಲಿ ಅತಿ ಹೆಚ್ವಿನ ಮತ್ತು ಅತಿಮಹತ್ವದ ನಾಟಕಗಳನ್ನು ಬರೆದಿರುವರು ಎಚ್.ಎಸ್.ಶಿವಪ್ರಕಾಶ್, ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಾದಾರಿ ಮಾದಯ್ಯ, ಮಂಟೇಸ್ವಾಮಿ ಕಥಾಪ್ರಸಂಗ, ಷೇಕ್ಸ್‌ಪಿಯರನ ಸ್ವಪ್ನನೌಕೆ, ಮಧುರೆಕಾಂಡ, ಮಾಧವಿ ಮಾತೃಕಾ ಇವು ಇವರು ಬರೆದ ನಾಟಕಗಳು. ‘ಮಹಾಚೈತ್ರ’ 12ನೆಯ ಶತಮಾನದ ವಚನ ಚಳವಳಿಯನ್ನು ದುಡಿಯುವ ವರ್ಗದ ನೆಲೆಯಲ್ಲಿ ಕಂಡಿರುವ ನಾಟಕ. ‘ಸುಲ್ತಾನ್ ಟಿಪ್ಪು’ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪುವಿನ ಹಿನ್ನೆಲೆ ಒಳಗೊಂಡಿದೆ.
‘ಮಾದಾರಿಮಾದಯ್ಯ ಮತ್ತು ಮಂಟೇಸ್ವಾಮಿ ಕಥಾ ಪ್ರಸಂಗ’ ನಮ್ಮ ಪ್ರಸಿದ್ಧ ಜನಪದ ಮಹಾಕಾವ್ಯಗಳನ್ನು ಆಧರಿಸಿದ ನಾಟಕಗಳು. ತಮಿಳು ಮಹಾಕಾವ್ಯ ‘ಶಿಲಪ್ಪದಿಗಾರಂ’ ಆಧರಿಸಿದ ತ್ರಿವಳಿ ನಾಟಕಗಳು - ಮಧುರೆಕಾಂಡ, ಮಾಧವಿ ಮತ್ತು ಮಾತೃಕಾ ಚರಿತ್ರೆ. ಪುರಾಣಗಳ ದ್ವಂದ್ವಮಾನ ವೈರುಧ್ಯಗಳನ್ನು ಸಮಕಾಲೀನವಾಗಿ ಚಿತ್ರಿಸುವಲ್ಲಿ ಶಿವಪ್ರಕಾಶರು ಹೆಚ್ಚು ಆಸಕ್ತಿ ತೋರುತ್ತಾರೆ. ಮೂಲತಃ ಕವಿಯಾದ ಇವರು ತಮ್ಮ ನಾಟಕ ರಚನಾ ಶೈಲಿಯಲ್ಲಿ ವಸ್ತುವನ್ನು ವಿಶ್ಲೇಷಿಸುವ ಕ್ರಮದಲ್ಲಿ ಬೇರೆ ಎಲ್ಲಾ ನಾಟಕಕಾರರಿಗಿಂತ ಅನನ್ಯವಾಗಿ ಎದ್ದುಕಾಣುತ್ತಾರೆ. ಷೇಕ್ಸ್‌ಪಿಯರನ ‘ಮ್ಯಾಕ್ಬೆತ್’ ನಾಟಕವನ್ನು ಆಧರಿಸಿ ‘ಮಾರನಾಯಕ’ ಎಂಬ ನಾಟಕವನ್ನು ಕನ್ನಡದ್ದೇ ಸ್ವಂತ ಕೃತಿ ಎಂಬಂತೆ ರಚಿಸಿದ್ದಾರೆ. ಪ್ರಸನ್ನ ಈ ಅವಧಿಯ ಇನ್ನೊಬ್ಬ ಮಹತ್ವದ ನಾಟಕಕಾರರು. ರಂಗನಿರ್ದೇಶಕರೂ ಆದ ಇವರು ತಮ್ಮ ನಾಟಕಗಳನ್ನು ರಂಗ ನಿರ್ಮಿತಿಯ ದೃಷ್ಟಿಕೋನವಿಟ್ಟುಕೊಂಡು ರಚಿಸಿದ್ದಾರೆ. ಇವರ ಒಂದು ಲೋಕ ಕಥೆ, ದಂಗೆಯ ಮುಂಚಿನ ದಿನಗಳು, ತದ್ರೂಪಿ, ಮಹಿಮಾಪುರ, ಹದ್ದುಮೀರಿದ ಹಾದಿ ಮತ್ತು ಜಂಗಮದ ಬದುಕು ಇವು ಇವರ ಪ್ರಮುಖ ನಾಟಕಗಳು.
ಸಮಾಜದ ಶಿಥಿಲತ್ವವನ್ನೂ ಅವನತಿಯನ್ನೂ ಚಿತ್ರಿಸುವುದರಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ. ವ್ಯಕ್ತಿ ಮತ್ತು ಸಮಾಜದ ಮಧ್ಯದ ಸಂಬಂಧಗಳು ಕಲುಷಿತಗೊಳ್ಳುವ ನೆಲೆಗಳನ್ನು ಅನ್ವೇಷಿಸುವ ಪ್ರಯತ್ನವನ್ನು ಇವರು ತಮ್ಮ ಬಹುತೇಕ ನಾಟಕಗಳಲ್ಲಿ ಮಾಡಿದ್ದಾರೆ. ಲಿಂಗದೇವರು ಹಳೆಮನೆಯವರ ಚಿಕ್ಕದೇವಭೂಪ, ಹೈದರ್, ಅಂತೆಂಬರಗಂಡ - ಇವು ಮೈಸೂರಿನ ಇತಿಹಾಸದ ನೆಲೆಯಲ್ಲಿ ಎಡಪಂಥೀಯ ದೃಷ್ಟಿಕೋನದಿಂದ ಬರೆದ ನಾಟಕಗಳು. ಇತಿಹಾಸ ಇರುವುದು ಪುನರ್ ಸೃಷ್ಟಿಸುವುದಕ್ಕಲ್ಲ ಪುನರ್ಪ್ರತಿಪಾದಿಸುವುದಕ್ಕೆ ಎಂಬ ಧೋರಣೆಯನ್ನು ಇವು ಎತ್ತಿ ಹಿಡಿಯುತ್ತವೆ. ಕಿ.ರಂ.ನಾಗರಾಜ ಅವರು ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ ಎಂಬ ಎರಡು ಮಹತ್ವದ ನಾಟಕಗಳನ್ನು ಬರೆದಿದ್ದಾರೆ. ನೀಗಿಕೊಂಡ ಸಂಸ ಕನ್ನಡದ ಖ್ಯಾತ ನಾಟಕಕಾರರಾದ ಸಂಸ ಅವರ ಬದುಕನ್ನು ಕುರಿತದ್ದು. ಕಾಲಜ್ಞಾನಿ ಕನಕ ಕನಕದಾಸರನ್ನು ಕುರಿತದ್ದು. ಈ ಇಬ್ಬರು ವ್ಯಕ್ತಿಗಳ ಸಂಕೀರ್ಣ ವ್ಯಕ್ತಿತ್ವವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ನಾಟಕವಾಗಿಸಲಾಗಿದೆ. ಟಿ.ಎನ್.ನರಸಿಂಹನ್ ಅವರು ಕೈಲಾಸಂ ಜೀವನವನ್ನಾಧರಿಸಿ ಟಿಪಿಕಲ್ ಟಿ.ಪಿ.ಕೈಲಾಸಂ ಎಂಬ ಏಕವ್ಯಕ್ತಿ ಪ್ರಸ್ತುತಿಯ ನಾಟಕವನ್ನು ರಚಿಸಿದ್ದರು. ಅದಕ್ಕಿಂತ ಬಿನ್ನವಾಗಿ ನಿಲ್ಲುವ ಸಂಸರ ನಾಟಕವನ್ನು ಕಿ.ರಂ.ನಾಗರಾಜ ರಚಿಸಿರುವುದು ವಿಶೇಷವಾಗಿ ಉಲ್ಲೇಖಾರ್ಹ. ನಿಸರ್ಗಪ್ರಿಯ ಅವರು ಪುರಾಣ ಮತ್ತು ಜನಪದ ಕಥೆಗಳನ್ನು ಆಯ್ಕೆಮಾಡಿಕೊಂಡು ನಾಟಕಗಳನ್ನು ಬರೆದಿದ್ದಾರೆ. ಚೋರಪುರಾಣ, ತಿರುಕರಾಜ, ವ್ಯವಸ್ಥೆ, ಶುನಶ್ಯೇಪ, ಯಶೋಧರ ಚಕ್ರವರ್ತಿ, ಜುಂಜಪ್ಪ ಇವು ಇವರು ರಚಿಸಿದ ನಾಟಕಗಳು. ಸರಸಮಯವಾದ ಕಥಾ ನಿರೂಪಣೆ, ಲವಲವಿಕೆಯ ಸಂಭಾಷಣೆ, ಸರಳವಾದ ಪಾತ್ರರಚನೆ ನಿಸರ್ಗಪ್ರಿಯರ ನಾಟಕಗಳ ಲಕ್ಷಣ.
ಉತ್ತರ ಕರ್ನಾಟಕದಿಂದ ಬಂದ ಯುವಪೀಳಿಗೆಯ ನಾಟಕಕಾರರಲ್ಲಿ ಹೂಲಿಶೇಖರ ಮುಖ್ಯರು. ಇವರು ಕಲ್ಯಾಣದಲ್ಲಿ ಕ್ರಾಂತಿ, ಹಾವು ಹರಿದಾಡತಾವ, ಅರಗಿನ ಬೆಟ್ಟ ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಸಮಕಾಲೀನ ಸಾಮಾಜಿಕ ಸಮಸ್ಯೆಯನ್ನು ಜಾನಪದ ಚೌಕಟ್ಟಿನಲ್ಲಿ ಅತ್ಯಂತ ಆಕರ್ಷಣೀಯವಾಗಿ ಹೇಳುವ ನಾಟಕೀಯತೆ ಹೂಲಿ ಶೇಖರ್ರವರಿಗೆ ಸಿದ್ಧಿಸಿದೆ. ಆದರೆ ಸಮಸ್ಯೆಯನ್ನು ಇವರು ನೋಡುವ ಸರಳ ದೃಷ್ಟಿ ಯಿಂದಾಗಿ ಇವರ ನಾಟಕಗಳು ಗಾಢವಾಗಿ ತಟ್ಟುವುದಿಲ್ಲ. ಎಚ್.ಎಸ್.ವೆಂಕಟೇಶಮೂರ್ತಿ ಯವರು ಅಗ್ನಿವರ್ಣ, ಚಿತ್ರಪಟ ಮತ್ತು ಉರಿಯ ಉಯ್ಯಾಲೆ ಎಂಬ ಮೂರು ನಾಟಕಗಳನ್ನು ಪುರಾಣದ ವಸ್ತುಗಳನ್ನಾಧರಿಸಿ ಮರು ಸೃಷ್ಟಿಸಿದ್ದಾರೆ. ಆಕರ್ಷಕ ಮಾತುಗಾರಿಕೆ ಈ ನಾಟಕಗಳ ಪ್ರಮುಖ ಆಕರ್ಷಣೆ. ಉರಿಯ ಉಯ್ಯಾಲೆ ಸ್ತ್ರೀವಾದಿ ನೆಲೆಯಲ್ಲಿ ದ್ರೌಪದಿಯನ್ನು ಚಿತ್ರಿಸಿರುವ ನಾಟಕ.
ಒಂದೋ ಎರಡೋ ನಾಟಕಗಳನ್ನು ಬರೆದು ಕನ್ನಡ ನಾಟಕ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆ ನೀಡಿರುವ ಅನೇಕ ಯುವ ನಾಟಕಕಾರರಿದ್ದಾರೆ. ಅವರಲ್ಲಿ ಕೆಲವರನ್ನು ಇಲ್ಲಿ ಹೆಸರಿಸಬೇಕು. ಗೋಪಾಲ ವಾಜಪೇಯಿಯವರ ‘ದೊಡ್ಡಪ್ಪ’ ದೇವದಾಸಿ ಪದ್ಧತಿಯ ಹಿಂದಿರುವ ಶೋಷಣೆಯನ್ನಾಧರಿಸಿದ ನಾಟಕ. ಚಿ.ಶ್ರೀನಿವಾಸರಾಜು ಅವರ ಮೂರು ಏಕಾಂಕಗಳು, ಅಸಂಗತ ನಾಟಕಗಳನ್ನು ನೆನಪಿಸುವ ಮನುಷ್ಯನ ಉದ್ದೇಶ ರಹಿತ ಕ್ರೌರ್ಯವನ್ನು ತೋರುವ ನಾಟಕಗಳು. ಕೆ.ವಿ.ಅಕ್ಷರ ಅವರು ಪರಿಸರ ನಾಶದ ಸಮಸ್ಯೆಯನ್ನು ಎತ್ತಿಕೊಂಡು ಸಹ್ಯಾದ್ರಿಕಾಂಡ ಎಂಬ ನಾಟಕವನ್ನೂ ಕೋಮು ಸಮಸ್ಯೆಯನ್ನು ಎತ್ತಿಕೊಂಡು ಚೂರಿ ಕಟ್ಟೆ ಅರ್ಥಾತ್ ಕಲ್ಯಾಣಪುರ ಎಂಬ ಎರಡು ಮಹತ್ವದ ನಾಟಕಗಳನ್ನು ರಚಿಸಿದ್ದಾರೆ.
ಕನ್ನಡಕ್ಕೆ ಬೇರೆ ಬೇರೆ ಭಾಷೆಯಿಂದ ಸಮೃದ್ಧವಾಗಿ ನಾಟಕಗಳು ಅನುವಾದಗೊಂಡು ಬಂದಿವೆ. ಸಂಸ್ಕೃತ ರಂಗಭೂಮಿಯ ಪ್ರಸಿದ್ಧ ನಾಟಕಗಳನ್ನು ಕೆ.ವಿ.ಸುಬ್ಬಣ್ಣ ಅವರು ಕನ್ನಡದ ಪರಿಸರದಲ್ಲಿ ಪುನರ್ರಚಿಸುವ ಕೆಲಸವನ್ನು ಮಾಡಿದ್ದಾರೆ. ಭಗವದುಜ್ಜುಕೀಯ, ಅಭಿಜ್ಞಾನಶಾಕುಂತಲ, ಮುದ್ರಾರಾಕ್ಷಸ ಮತ್ತು ಮಾಲವಿಕಾಗ್ನಿಮಿತ್ರ ಈ ನಾಟಕಗಳನ್ನು ಸೂಳೆ ಮತ್ತು ಸನ್ಯಾಸಿ, ಲೋಕಶಾಕುಂತಲ, ಚಾಣಕ್ಯ ಪ್ರಪಂಚ ಮತ್ತು ವಿದಿಶೆಯ ವಿದೂಷಕ ಎಂದು ಪರಿವರ್ತಿಸಿದ್ದಾರೆ. ಇವುಗಳನ್ನು ಇವರು ಕನ್ನಡದ ಪರಿಸರಕ್ಕೆ ಹೊಂದಿಸಿರುವ ರೀತಿ ಅನನ್ಯವಾದುದು. ಬರ್ಟೋಲ್ಟ್ ಬ್ರೆಕ್ಟ್‌ನ ಅನೇಕ ನಾಟಕಗಳು ಈ ಅವಧಿಯಲ್ಲಿ ಕನ್ನಡಕ್ಕೆ ಬಂದಿವೆ. ಸಿ.ವೀರಣ್ಣ ಮದರ್ ನಾಟಕವನ್ನೂ ಕೆ.ವಿ.ಸುಬ್ಬಣ್ಣ, ಲಿಂಗದೇವರು ಹಳೆಮನೆ, ರಂಶಾ ಅವರು ಪ್ರತ್ಯೇಕವಾಗಿ ಗುಡ್ವುಮೆನ್ ಆಫ್ ಸೆಜುವಾನ್ ನಾಟಕವನ್ನೂ ಜೆ.ಆರ್.ಲಕ್ಷ್ಮಣರಾವ್ ಮತ್ತು ರಾಮಚಂದ್ರಮೂರ್ತಿ ಅವರು ಗೆಲಿಲಿಯೋ ನಾಟಕವನ್ನೂ, ಗೋಪಾಲ ವಾಜಪೇಯಿ, ಜೆ.ಆರ್.ಲಕ್ಷ್ಮಣ್ರಾವ್ ಅವರು ಕಕೇಷಿಯನ್ ಚಾಕ್ ಸರ್ಕಲ್ ನಾಟಕವನ್ನೂ ಲಿಂಗದೇವರು ಹಳೆಮನೆ ಅವರು ಮದರ್ಕರೇಜ್ ನಾಟಕವನ್ನೂ ಅನುವಾದಿಸಿದ್ದಾರೆ. ಷೇಕ್ಸ್‌ಪಿಯರನ ಅನೇಕ ನಾಟಕಗಳು ಈ ಅವಧಿಯಲ್ಲಿ ಮತ್ತೆ ಕನ್ನಡಕ್ಕೆ ಭಾಷಾಂತರಗೊಂಡಿವೆ. ಎಚ್.ಎಸ್.ಶಿವಪ್ರಕಾಶ್, ಕೆ.ಎಸ್.ಭಗವಾನ್, ನಿಸಾರ್ ಅಹಮದ್, ರಾಮಚಂದ್ರದೇವ ಪ್ರಮುಖವಾಗಿ ಈ ಭಾಷಾಂತರಗಳನ್ನು ಮಾಡಿದ್ದಾರೆ.
ಸ್ಟ್ರಿಂಡ್ಬರ್ಗ್, ಗೊಗಲ್, ಚೆಕಾಫ್, ಲೋರ್ಕ, ಇಬ್ಸೆನ್ ಮೊದಲಾದವರ ಪ್ರಸಿದ್ಧ ನಾಟಕಗಳೂ ಕನ್ನಡಕ್ಕೆ ಬಂದಿವೆ. ಹಾಗೆಯೇ ಹಿಂದಿ, ಮರಾಠಿ ಮತ್ತು ಬೇರೆ ಭಾರತೀಯ ಭಾಷೆಗಳಿಂದಲೂ ಅನೇಕ ನಾಟಕಗಳು ಅನುವಾದಗೊಂಡಿವೆ.
ಮಕ್ಕಳ ನಾಟಕಗಳ ರಚನೆ ಹೊಸ ರೂಪವನ್ನು ಈ ಅವಧಿಯಲ್ಲಿ ಪಡೆದುಕೊಂಡಿತು. ಬೇಸಗೆ ಶಿಬಿರ ಮತ್ತು ಮಕ್ಕಳ ಶಿಬಿರಗಳಿಂದಾಗಿ ಮಕ್ಕಳ ನಾಟಕ ರಚನೆಗೆ ವಿಶೇಷ ಪ್ರೋತ್ಸಾಹ ದೊರಕಿತು. ಇದರಿಂದಾಗಿ ಅನೇಕ ಹಿರಿಯಕಿರಿಯ ನಾಟಕಕಾರರು ಮಕ್ಕಳಿಗಾಗಿಯೇ ಬರೆಯತೊಡಗಿದರು. ಬಿ.ವಿ.ಕಾರಂತ, ಕೆ.ವಿ.ಸುಬ್ಬಣ್ಣ, ಚಂದ್ರಶೇಖರ ಕಂಬಾರ, ಅಬ್ದುಲ್ ರೆಹಮಾನ್ ಪಾಷ, ಪ್ರೇಮಕಾರಂತ, ವೈದೇಹಿ ಮೊದಲಾದವರು ಮಕ್ಕಳಿಗಾಗಿ ಉತ್ತಮ ನಾಟಕಗಳನ್ನು ಬರೆದಿದ್ದಾರೆ. ಬಿ.ವಿ.ಕಾರಂತರ ಪಂಜರಶಾಲೆ, ನೀಲಿಕುದುರೆ, ಹೆಡ್ಡಾಯಣ -
ಇವು ಕನ್ನಡ ಮಕ್ಕಳ ನಾಟಕ ಸಾಹಿತ್ಯಕ್ಕೆ ಸ್ಫೂರ್ತಿತಂದ ನಾಟಕಗಳು. ಕೆ.ವಿ. ಸುಬ್ಬಣ್ಣನವರ ಜಯಂಟ್ಮಾಮ, ಬೆಟ್ಟಕ್ಕೆ ಚಳಿಯಾದರೆ, ಅಬ್ದುಲ್ ರೆಹಮಾನ್ ಪಾಷ ಅವರ ಬೆಳೆದವರು, ನಕ್ಕಳಾ ರಾಜಕುಮಾರಿ, ನೀ ನನಗಿದ್ದರೆ ನಾ ನಿನಗೆ, ವೈದೇಹಿ ಯವರ ಧಾಂ ಧೂಂ ಸುಂಟರಗಾಳಿ, ಸೂರ್ಯಬಂದ, ಮೂಕನ ಮಕ್ಕಳು ಮುಂತಾದವು ಮಕ್ಕಳ ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿವೆ. ಎಂ.ಎಸ್.ಮೂರ್ತಿ, ಎಚ್.ಎಸ್.ವೆಂಕಟೇಶಮೂರ್ತಿ, ಕೃಷ್ಣಮೂರ್ತಿ ಬಿಳಿಗೆರೆ ಮೊದಲಾದವರು ಈಗಲೂ ವಸ್ತು ವೈವಿಧ್ಯದ ಮಕ್ಕಳ ನಾಟಕಗಳನ್ನು ರಚಿಸುತ್ತಿದ್ದಾರೆ.
ಕನ್ನಡದ ಪ್ರಮುಖ ಕಥೆಗಳು ಮತ್ತು ಕಾದಂಬರಿಗಳು ನಾಟಕದ ರೂಪವನ್ನು ತಳೆಯಲಾರಂಬಿsಸಿದ್ದು ಈ ಅವಧಿಯ ಇನ್ನೊಂದು ಪ್ರಮುಖ ಅಂಶವೆನ್ನಬಹುದು. ದೇವನೂರು ಮಹಾದೇವ ಅವರ ಕಥೆಗಳು ಮತ್ತು ಕಾದಂಬರಿಗಳು, ಪುರ್ಣಚಂದ್ರ ತೇಜಸ್ವಿಯವರ ಕಥೆಗಳು ಮತ್ತು ಶಿವರಾಮ ಕಾರಂತರ ಕಾದಂಬರಿಗಳು ನಾಟಕದ ಸ್ವರೂಪವನ್ನು ತಳೆದವು. ಹಾಗೆಯೇ ಕನ್ನಡ ಪ್ರಮುಖ ಕಾವ್ಯಗಳೂ ರಂಗ ಪ್ರದರ್ಶನಕ್ಕೆ ಅಣಿಯಾದವು. ಬಹುಮುಖ್ಯವಾಗಿ ದೇವನೂರು ಮಹಾದೇವ ಅವರ ದ್ಯಾವನೂರು, ಒಡಲಾಳ ಮತ್ತು ಕುಸುಮಬಾಲೆ ಇವು ರಂಗಕೃತಿಯಾಗಿ ಹೊಸದೊಂದು ಟ್ರೆಂಡ್ಅನ್ನೇ ಸೃಷ್ಟಿಸಿದವು. ಶಿವರಾಮ ಕಾರಂತರ ‘ಚೋಮ’, ತೇಜಸ್ವಿಯವರ ಕುಬಿ ಮತ್ತು ಇಯಾಲ, ‘ಕಿರಗೂರಿನ ಗಯ್ಯಾಳಿಗಳು’ ಕುಂ.ವೀರಭದ್ರಪ್ಪನವರ ‘ಬೇಲಿ ಮತ್ತು ಹೊಲ’ ಈ ನಿಟ್ಟಿನಲ್ಲಿ ಮೂಡಿ ಬಂದ ನಾಟಕಗಳು.
ಬೀದಿ ನಾಟಕ ಒಂದು ಪ್ರಮುಖ ರಂಗಮಾಧ್ಯಮವಾಗಿ ಹೊರಹೊಮ್ಮಿದ್ದೂ ಈ ಅವಧಿಯಲ್ಲಿಯೇ. ಎ.ಎಸ್.ಮೂರ್ತಿಯವರ ಬಂದ್ರಪ್ಪೋ ಬಂದ್ರು, ಚಂದ್ರಶೇಖರ ಪಾಟೀಲ ಅವರ ಜಗದಂಬೆಯ ಬೀದಿ ನಾಟಕ, ಸಿ.ಜಿ.ಕೃಷ್ಣಸ್ವಾಮಿಯವರ ಬೆಲ್ಚಿ ಮುಂತಾದವು ಬೀದಿನಾಟಕದ ಸ್ವರೂಪಕ್ಕೊಂದು ಸ್ಪಷ್ಟ ಸ್ವರೂಪ ನೀಡಿರುವ ನಾಟಕಗಳು. ಈಗಲೂ ಬೀದಿ ನಾಟಕಗಳು ತತ್ಕ್ಷಣದ ಪ್ರತಿಕ್ರಿಯೆಯಾಗಿ ಹುಟ್ಟಿಕೊಳ್ಳುತ್ತಲೇ ಇವೆ.
ಹೀಗೆ ಕನ್ನಡ ನಾಟಕ ಸಾಹಿತ್ಯ ಬಹುಮುಖವಾದ ಬೆಳೆವಣಿಗೆಯನ್ನು ತೋರಿದ ಅವಧಿ ಇದು. ಕನ್ನಡದಲ್ಲಿಯೇ ಸ್ವಂತ ನಾಟಕಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾದದ್ದರ ಜೊತೆಜೊತೆಗೇ ಬಹುಸಂಖ್ಯೆಯ ಹೊರಗಿನ ನಾಟಕಗಳೂ ಕನ್ನಡಕ್ಕೆ ಬಂದವು. ಹಾಗೆಯೇ ಕನ್ನಡದ ಬಹಳಷ್ಟು ನಾಟಕಗಳು ಬೇರೆ ಬೇರೆ ಭಾಷೆಗಳಿಗೂ ಅನುವಾದಗೊಂಡವು. ಈ ದೃಷ್ಟಿಯಿಂದ ಇಪ್ಪತ್ತನೆಯ ಶತಮಾನದ ಕೊನೆಯ ಎರಡೂವರೆ ದಶಕಗಳು ಕನ್ನಡ ನಾಟಕ ಸಾಹಿತ್ಯದ ಅತ್ಯಂತ ಫಲಪ್ರದ ದಶಕಗಳೆನ್ನಬಹುದು. (ಎಲ್.ಎಚ್.)