ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಶಾಸನಗಳು

ಕನ್ನಡ ಶಾಸನಗಳು : ಕನ್ನಡ ಭಾಷೆ ಕನ್ನಡನಾಡಿನಲ್ಲಿ ಯಾವ ಕಾಲದಲ್ಲಿ ಜನಗಳಾಡುವ ಭಾಷೆಯಾಗಿತ್ತು. ಹೇಗೆ ಬೆಳೆಯಿತು ಎಂದು ತಿಳಿಯಲು ನಮಗೆ ದೊರೆಯುವ ಆಧಾರಗಳಲ್ಲಿ ಶಾಸನಾಧಾರವೇ ಬಹುಮುಖ್ಯವಾದದ್ದು. ಕರ್ಣಾಟ ಶಬ್ದ ಪ್ರಯೋಗ ಮಹಾಭಾರತದಲ್ಲಿ

ಕಂಡುಬಂದರೂ ಅದರ ಸ್ವರೂಪವೇನು ಎಂಬುವುದು ತಿಳಿಯುವುದಿಲ್ಲ. ದಕ್ಷಿಣ ಇಂಡಿಯದ ಪಶ್ಚಿಮತೀರದಲ್ಲಿ ನಡೆದಂತೆ ಊಹಿಸಿರುವ ಆಕ್ಸಿರಿಂಕಸ್ ಪಪೈರಸ್ ಎಂಬ ಗ್ರೀಕ್ ಪ್ರಹಸನದಲ್ಲಿ ಬರುವ ಸಂವಾದಗಳೆಲ್ಲ ಕನ್ನಡ ಭಾಷೆಯೆಂದು.

ಆರ್.ಶಾಮಶಾಸ್ತ್ರಿಗಳು ಪ್ರತಿಪಾದಿಸಿರುವರು. ಈ ಗ್ರೀಕ್ ಪ್ರಹಸನದ ಕಾಲ 2ನೆಯ ಶತಮಾನ. 5ನೆಯ ಶತಮಾನಕ್ಕೆ ಮೊದಲು ಬರೆದ ಕೆಲವು ಸಂಸ್ಕೃತ ಪ್ರಾಕ್ತನ ಶಾಸನಗಳಲ್ಲಿ ಕೆಲವು ಕನ್ನಡ ಶಬ್ದಗಳು ಬರುವುವು. ಆದರೆ ಕನ್ನಡ ಭಾಷೆಯಲ್ಲಿಯೇ ಬರೆದ ಬರೆವಣಿಗೆ 5ನೆಯ

ಶತಮಾನಕ್ಕೆ ಮೊದಲು ಇದುವರೆವಿಗೂ ಎಲ್ಲಿಯೂ ದೊರೆತಿಲ್ಲ. ಮೊಟ್ಟ ಮೊದಲು ಕನ್ನಡ ಭಾಷೆಯಲ್ಲೇ ಬರೆದ ಬರೆವಣಿಗೆ ಎಂದರೆ ಹಲ್ಮಿಡಿಯ ಶಿಲಾ ಲೇಖನವೇ. ಈ ಶಿಲಾಶಾಸನದ ಮಂಗಳಶ್ಲೋಕ ಸಂಸ್ಕೃತ ಭಾಷೆಯಾಗಿದ್ದು ಉಳಿದದ್ದು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದೆ

ಇಲ್ಲಿಂದ ಮುಂದೆ ಕನ್ನಡ ಭಾಷೆಯಲ್ಲಿ ರಚಿತವಾದ ಕವಿರಾಜಮಾರ್ಗ ಗ್ರಂಥದ ಕಾಲದವರೆಗೆ ಸಿರಿಗುಂದದ ದುರ್ವಿನೀತನ ಶಾಸನ, ಬಾದಾಮಿಯ ಮಂಗಳೇಶನ ಶಾಸನವೇ ಮೊದಲಾದ ಶಾಸನಗಳು, ವೀರಗಲ್ಲುಗಳು, ಶ್ರವಣಬೆಳಗೊಳದ ನಿಸಿದಿಕಲ್ಲುಗಳು ಕನ್ನಡ

ಭಾಷೆಯಲ್ಲಿವೆ. ಶಾಸನ ಸಂಗ್ರಹ : ಭಾರತದ ಎಲ್ಲ ಪ್ರಾಂತ್ಯಗಳಿಗಿಂತಲೂ ಅಂದಿನ ಮೈಸೂರು ಸರ್ಕಾರ ಪ್ರಾಚೀನಕಾಲದ ಶಿಲಾಲೇಖನ ತಾಮ್ರಶಾಸನಗಳನ್ನು ಒಂದು ಕ್ರಮವರಿತು ಸಂಗ್ರಹಿಸಿ ಪ್ರಕಟಿಸಿತು. ಚಿಕ್ಕದೇವರಾಜ ಒಡೆಯರ ಕಾಲದಲ್ಲಿಯೇ ಅನೇಕ ಶಾಸನಗಳ ಪ್ರತಿಮಾಡಿಸಿ

ಅರಮನೆಯಲ್ಲಿ ಇಟ್ಟಿದ್ದುದಾಗಿಯೂ ಮುಂದೆ ಬಂದ ಟಿಪ್ಪುಸುಲ್ತಾನನ ಕಾಲದಲ್ಲಿ ಅವುಗಳೆಲ್ಲವೂ ನಾಶವಾದುವೆಂದು ತಿಳಿದುಬರುವುದು. ಪ್ರಾಚೀನಕಾಲದ ಬರೆವಣಿಗೆಯ ಈ ವಿಧವಾದ ಶಿಲಾಲೇಖನಗಳ ಪ್ರತಿಗಳನ್ನು ಸಂಗ್ರಹಿಸಿ ಅವುಗಳಲ್ಲಿ ಹೇಳಿರುವ ದಾನ, ಧರ್ಮ, ತ್ಯಾಗ,

ಚರಿತ್ರಾಂಶಗಳನ್ನು ಬೆಳಕಿಗೆ ತಂದ ಕೀರ್ತಿ ಪಾಶ್ಚಾತ್ಯ ವಿದ್ವಾಂಸರಿಗೆ ಸೇರಿದುದು. 1879ರಲ್ಲಿ ಮೈಸೂರು ದೇಶದ ವಿದ್ಯಾಭ್ಯಾಸದ ಇಲಾಖೆಯ ಮುಖ್ಯಾಧಿಕಾರಿಯಾಗಿದ್ದ ಬಿ.ಎಲ್. ರೈಸ್ರ ನೇತೃತ್ವದಲ್ಲಿ ಶಾಸನಗಳ ಸಂಗ್ರಹಕಾರ್ಯ ಪ್ರಾರಂಭವಾಯಿತು. ಈ ಪುರಾತನ

ಬರೆವಣಿಗೆ ಇರುವ ಲೇಖನಗಳು ಹೆಚ್ಚು ಹೆಚ್ಚಾಗಿ ಕಣ್ಣಿಗೆ ಬೀಳಲು ಸರ್ಕಾರದವರು ಪ್ರತ್ಯೇಕವಾಗಿ ಒಂದು ಇಲಾಖೆಯನ್ನೇ ತೆರೆದರು. ಅದರ ಮುಖ್ಯಾಧಿಕಾರಿಯನ್ನಾಗಿ ಬಿ.ಎಲ್. ರೈಸ್ ಅವರನ್ನೇ ನೇಮಿಸಲಾಯಿತು. ಇವರು ಅಧಿಕಾರಕ್ಕೆ ಬಂದಕೂಡಲೇ ಹಳೆಯ ಮೈಸೂರಿನ

ಪ್ರತಿಯೊಂದು ಡಿಸ್ಟ್ರಿಕ್ಟ್‌ ಡೆಪ್ಯುಟಿ ಕಮಿಷನರವರಿಗೆ ಒಂದು ಸರ್ಕಾರಿ ಆಜ್ಞೆ ಹೊರಡಿಸಿ ಆಯಾಯ ಡಿಸ್ಟ್ರಿಕ್ಟಿನ ಪ್ರತಿಯೊಂದು ತಾಲ್ಲೂಕು ಅಮಲ್ದಾರರು ಶಾನುಭೋಗ ಪಟೇಲರ ಸಹಾಯದಿಂದ ತಮ್ಮ ಗ್ರಾಮಗಳಲ್ಲಿರುವ ಪ್ರಾಚೀನ ಬರೆವಣಿಗೆಗಳಿರುವ ಕಲ್ಲುಗಳ ಪಟ್ಟಿಗಳನ್ನು

ಶಾಸನದ ಇಲಾಖೆಗೆ ತಿಳಿಸುವಂತೆ ಅಪ್ಪಣೆ ಮಾಡಿದರು. ಈ ರೀತಿಯಿಂದ ಬಂದ ಪಟ್ಟಿಗಳಲ್ಲಿ ಕೆಲವು ಬಾಂದು ಕಲ್ಲು, ಮೈಲಿಕಲ್ಲುಗಳ ವಿಳಾಸಗಳೂ ಇದ್ದವೆಂದು ತಿಳಿದುಬಂದಿದೆ. ಈ ಪಟ್ಟಿಯ ಸಹಾಯದಿಂದ ಬಿ.ಎಲ್. ರೈಸ್ ಅವರು ಅನೇಕ ಕನ್ನಡ ಸಂಸ್ಕೃತ ಪಂಡಿತರ

ತಂಡದೊಡನೆ ಪ್ರತಿಯೊಂದು ತಾಲ್ಲೂಕಿನಲ್ಲೂ ಸಂಚರಿಸಿ ಸಂಗ್ರಹಿಸಿ ಪ್ರಕಟಿಸಿದ ಶಾಸನಗಳ ಪುಸ್ತಕವೇ ಎಪಿಗ್ರಾಫಿಯ ಕರ್ಣಾಟಿಕ ಸಂಪುಟಗಳು (ನೋಡಿ- ಎಫಿಗ್ರಾಫಿಯ-ಕರ್ಣಾಟಕ). ಅಲ್ಲಿಂದ ಮುಂದೆ ನಿರ್ದೇಶಕರಾಗಿ ಆರ್. ನರಸಿಂಹಾಚಾರ್, ಆರ್.

ಶಾಮಾಶಾಸ್ತ್ರಿಗಳು, ಎಂ.ಎಚ್. ಕೃಷ್ಣ ಇವರುಗಳ ಕಾಲದಲ್ಲಿ ಸಂಗ್ರಹವಾದ ಶಾಸನಗಳ ಪಟ್ಟಿಯನ್ನು ಕೆಳಗೆ ಕೊಡಬಹುದು. ಮೈಸೂರು ಸಂಸ್ಥಾನದಲ್ಲಿ ಸಂಗ್ರಹಿಸಿದ ಶಾಸನಗಳ ಸಂಖ್ಯೆ 1879 - 1906 ರ ವರೆಗೆ ಸು. 9,000 1906 - 1922 ರ ವರೆಗೆ 5,000 1922 - 1944 ರ ವರೆಗೆ 1,817 ಮದರಾಸ್ ಕರ್ನಾಟಕದಲ್ಲಿ 1892 - 1944 ರ ವರೆಗೆ 1,418 ಮುಂಬಯಿ ಕರ್ನಾಟಕದಲ್ಲಿ 1926 - 1944ರ ವರೆಗೆ 2,164 ಇವುಗಳಲ್ಲದೆ ಹೈದರಾಬಾದ್ ಕನ್ನಡ ಪ್ರಾಂತ್ಯಗಳಲ್ಲಿ ಅನೇಕ ಕನ್ನಡ ಶಾಸನಗಳನ್ನು ಸಂಗ್ರಹಿಸಿ ಕೊಪ್ಪಳದ ಕನ್ನಡ ಶಾಸನಗಳು ಎಂಬ ಅಂಕಿತದಿಂದ ಪ್ರಕಟಿಸಿದ್ದಾರೆ. 1944ರಿಂದ ಈಚೆಗೂ ಶಾಸನ ಸಂಗ್ರಹಗಳಾಗುತ್ತಿವೆ. ಈಚೆಗೆ ಭಾರತದಲ್ಲಿ ವಿಲೀನವಾದ ಗೋವೆ

ಯಲ್ಲಿಯೂ ಹೈದರಾಬಾದ್ ಕರ್ನಾಟಕದಲ್ಲಿಯೂ ಇನ್ನೂ ಹೊರಬೀಳದ ಶಿಲಾ ಲೇಖನಗಳಿವೆ ಎಂದು ಅನೇಕರು ಅಭಿಪ್ರಾಯಪಡುವರು. ಪ್ರಕಟಣೆ : 1879-1906ರ ವರೆಗೆ ಬಿ.ಎಲ್. ರೈಸ್ ಅವರು ಸಂಗ್ರಹಿಸಿದ ಶಾಸನಗಳೆಲ್ಲ ಎಫಿಗ್ರಾಫಿಯ ಕರ್ಣಾಟಿಕ ಎಂಬ ಅಂಕಿತದ 12 ಸಂಪುಟಗಳಲ್ಲಿ ಪ್ರಕಟವಾಗಿವೆ. ಅವರ ಅನಂತರ ಬಂದ ರಾವ್ಬಹದ್ದೂರ್ ಆರ್. ನರಸಿಂಹಾಚಾರ್ಯರು ತಮ್ಮ ಕಾಲದಲ್ಲಿ

ಸಂಗ್ರಹಿಸಿದ ಶಾಸನಗಳನ್ನೆಲ್ಲ ಮೈಸೂರು ಶಾಸನ ಇಲಾಖಾ ವರದಿಗಳಲ್ಲಿ ಮುದ್ರಿಸಿರುವುದಲ್ಲದೆ ಹಿಂದಿನ ರೈಸ್ ಪ್ರಕಟಿಸಿದ ಕೆಲವು ಶಾಸನಗಳ ತಿದ್ದುಪಡಿ ಮಾಡಿರುವರು. ಅವರ ಅನಂತರ ಶಾಮಾಶಾಸ್ತ್ರಿ ಮತ್ತು ಎಂ.ಎಚ್. ಕೃಷ್ಣರವರು ಸಂಗ್ರಹಿಸಿದ ಶಾಸನಗಳು

1954ರವರೆಗೆ ಮೈಸೂರು ಶಾಸನದ ಇಲಾಖಾ ವರದಿಗಳಲ್ಲಿ ಮುದ್ರಿತವಾಗಿವೆ. ಮದರಾಸ್ ಪ್ರಾಂತದ ಕನ್ನಡ ಶಾಸನಗಳು ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್‌ ಎಂಬ ಗ್ರಂಥದಲ್ಲಿಯೂ ಮುಂಬಯಿ ಕನ್ನಡ ಪ್ರಾಂತ್ಯದ ಶಾಸನಗಳು ಧಾರವಾಡದ ಪ್ರಾಚ್ಯವಸ್ತು ಸಂಶೋಧನಾ

ಲಯಗಳ ವರದಿಗಳಲ್ಲೂ ಪ್ರಕಟವಾಗಿವೆ. ಅಲ್ಲದೆ ಐತಿಹಾಸಿಕ ದೃಷ್ಟಿಯಿಂದ ಮುಖ್ಯವಾದ ಅನೇಕ ಶಾಸನಗಳು ಏಷಿಯಾಟಿಕ್ ಸೊಸೈಟಿ ಜರ್ನಲ್, ಎಫಿಗ್ರಾಫಿಯ ಇಂಡಿಕ, ಇಂಡಿಯನ್ ಆಂಟಿಕ್ವೆರಿ ಮುಂತಾದ ವಿದ್ವತ್ಪೂರ್ಣ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎಫಿಗ್ರಾಫಿಯ ಕರ್ಣಾಟಿಕದ ಎಲ್ಲ ಸಂಪುಟಗಳನ್ನೂ ಮತ್ತೆ ಪರಿಶೀಲಿಸಿ, ಶುದ್ಧೀಕರಿಸಿ, ಹೊಸತಾಗಿ ದೊರೆತಿರುವ ಶಾಸನಗಳನ್ನು ಸೇರಿಸಿ ಪುನರ್ ಮುದ್ರಿಸುವ ಕೆಲಸವನ್ನು ಕರ್ನಾಟಕ ಸರ್ಕಾರ 1971ರಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ವಹಿಸಿದೆ. ಕನ್ನಡ ಶಾಸನಗಳ ವ್ಯಾಪ್ತಿ : ಮೇಲೆ ಕೊಟ್ಟಿರುವ ಶಾಸನ ಸಂಗ್ರಹಗಳ ಪಟ್ಟಿಯಂತೆ ಇದುವರೆಗೂ ಕನ್ನಡನಾಡಿನಲ್ಲಿ 20 ಸಾವಿರ ಶಾಸನಗಳು ಸಿಕ್ಕಿವೆ. ಇವುಗಳಲ್ಲಿ ಶೇ. 80 ಭಾಗ ಕನ್ನಡ ಲಿಪಿ ಮತ್ತು ಭಾಷೆಯಲ್ಲಿವೆ. ಕನ್ನಡಭಾಷೆಯ ಶಾಸನಗಳು ಕೆಲವು ಈಗ

ವಿಂಗಡವಾಗಿರುವ ಭಾಷಾವಾರು ರಾಜ್ಯಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ ದೊರೆಯುತ್ತವೆ. ಕನ್ನಡ ಪ್ರಾಂತ್ಯಗಳೆಂದೇ ಹೇಳಬಹುದಾದ ಕೆಲವು ಸ್ಥಳಗಳು ಹಳೆಯ ಕನ್ನಡ ಶಾಸನಗಳಿರುವ ಪ್ರದೇಶಗಳು ಕನ್ನಡ ನಾಡಿಗೆ ಈಗ

ಎಂದರೆ 1956ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯಾದ ಮೇಲೆ-ಸೇರಿಲ್ಲ. ಕನ್ನಡ ಹೆಸರಿನ ಊರುಗಳು ಮತ್ತು ವೀರಗಲ್ಲುಗಳಿರುವ, ಈಗಲೂ ಕನ್ನಡ ಭಾಷೆ ಬಳಕೆಯಲ್ಲಿರುವ ಸೇಲಂ ಜಿಲ್ಲೆಯ ಧರ್ಮಪುರಿ, ಕೊಯಮತ್ತೂರು ಜಿಲ್ಲೆಯ ಕೆಲವು ಭಾಗಗಳು, ನೀಲಗಿರಿ-ಈ

ಭಾಗಗಳಲ್ಲಿ ಬಹಳ ಪ್ರಾಚೀನಕಾಲದ ಕನ್ನಡ ಭಾಷೆಯ ಶಿಲಾಲೇಖಗಳಿವೆ. ಮಧ್ಯಪ್ರಾಂತ್ಯದಲ್ಲೂ ಒಂದು ಕನ್ನಡ ಶಿಲಾಲೇಖನವಿದೆ. ಈಗ ನಿರ್ಮಾಣವಾಗಿರುವ ವಿಶಾಲಕರ್ಣಾಟಕವಲ್ಲದೆ ಸೀಮಾಂತರದಲ್ಲಿರುವ ಅನೇಕ ಗ್ರಾಮಗಳಲ್ಲಿ ಕನ್ನಡ ಶಾಸನಗಳು ದೊರೆಯುತ್ತವೆ.

ನೃಪತುಂಗ ಹೇಳುವಂತೆ ಕಾವೇರಿಯಿಂದ ಗೋದಾವರಿ ನದಿಯ ವರೆಗಿನ ನಾಡೇ ಹಿಂದೆ ಕನ್ನಡನಾಡಾಗಿತ್ತು. ತಾಮ್ರಶಾಸನಗಳು : ಕೆಲವು ಕನ್ನಡ ಶಿಲಾಶಾಸನಗಳ ಪ್ರತಿಗಳು ಭಾರತ ಮತ್ತು ಪಾಶ್ಚಾತ್ಯದೇಶಗಳ ವಸ್ತುಪ್ರದರ್ಶನಾಲಯಗಳಲ್ಲಿವೆ. ಸರ್ ವಾಲ್ಟರ್ ಎಲಿಯಟ್ ಕರ್ನಾಟಕ ಪ್ರಾಂತ್ಯ ನಿಜಾಮ ರಾಜ್ಯದ ಪಶ್ಚಿಮಭಾಗ ಮತ್ತು ಮೈಸೂರು ಪ್ರಾಂತ್ಯದ ಉತ್ತರಭಾಗದಲ್ಲಿ

ಸಂಗ್ರಹಿಸಿದ 1300 ಶಿಲಾ ಮತ್ತು ತಾಮ್ರಶಾಸನಗಳಲ್ಲಿ 595 ಲೇಖನಗಳು ಕರ್ನಾಟಕದ ಲೇಖನಗಳು ಎಂಬ ಹೆಸರಿನಿಂದ ಎಡಿನ್ಬರೋ ವಿಶ್ವವಿದ್ಯಾಲಯದಲ್ಲಿ ಎರಡು ಸಂಪುಟಗಳಾಗಿ ದೊರಕುತ್ತವೆ. ಕೋಲ್ಕತ್ತದ ನಹರ್ ವಸ್ತುಪ್ರದರ್ಶನಾಲಯದಲ್ಲಿ ಕನ್ನಡ

ಬರೆವಣಿಗೆಯಿರುವ ಕೆಲವು ಮೂರ್ತಿಗಳಿವೆ. ಮುಂಬಯಿಯ ಪ್ರಿನ್ಸ್‌ ಆಫ್ ವೇಲ್ಸ್‌ ವಸ್ತುಪ್ರದರ್ಶನಾಲಯದಲ್ಲಿ ಕೆಲವು ಕನ್ನಡದ ಶಿಲಾಲೇಖನಗಳು ಪ್ರದರ್ಶಿತವಾಗಿವೆ. ಕನ್ನಡ ರಾಜಮನೆತನಗಳು ಕಾಲ : ಕನ್ನಡ ಮಾತನಾಡುತ್ತಿದ್ದ ಮೊತ್ತಮೊದಲನೆಯ ರಾಜಮನೆತನದವರು ಕದಂಬರು, ಅವರ ಅನಂತರ ಗಂಗ, ಬಾದಾಮಿ ಚಳುಕ್ಯ, ರಾಷ್ಟ್ರಕೂಟ, ವೈದುಂಭ, ಬಾಣ, ಸೇನಾವರ, ನೊಳಂಬ, ಪಶ್ಚಿಮ ಚಳುಕ್ಯ, ಹೊಯ್ಸಳ,

ದೇವಗಿರಿಯಾದವ, ಕಳಚುರ್ಯ, ಉಚ್ಚಂಗಿ ಪಾಂಡ್ಯ-ಮೊದಲಾದ ಪ್ರಸಿದ್ಧ ರಾಜಮನೆತನದ ಅರಸರು ಕನ್ನಡಿಗರು. ದಕ್ಷಿಣಾಪಥೇಶ್ವರನಾದ ಬಾದಾಮಿಯ ಇಮ್ಮಡಿ ಪುಲಿಕೇಶಿ, ರಾಷ್ಟ್ರಕೂಟರ ಮೂರನೆಯ ಗೋವಿಂದ, ಕಲ್ಯಾಣಿ ಚಾಳುಕ್ಯವಂಶಜನಾದ ವಿಕ್ರಮಾದಿತ್ಯ-ಇವರ

ಹೆಸರು ಕರ್ನಾಟಕಕ್ಕೆ ಹೆಮ್ಮೆ ತರತಕ್ಕವುಗಳಾಗಿವೆ. 14ನೆಯ ಶತಮಾನದಲ್ಲಿ ಹುಟ್ಟಿದ ವಿಜಯನಗರ ಸಾಮ್ರಾಜ್ಯದ ರಾಜಭಾಷೆ ಕನ್ನಡ, ವಿಜಯನಗರ ಸಾಮ್ರಾಜ್ಯ ಕ್ಷೀಣದೆಶೆಗೆ ಬಂದಮೇಲೆ ಆ ಸರ್ಕಾರದ ಅಧೀನದಲ್ಲಿದ್ದ ಪ್ರಾಂತ್ಯಾಧಿಕಾರಿಗಳಾದ ಅನೇಕ ಜನ

ಪಾಳೆಯಗಾರರು ತಾವೇ ಸ್ವತಂತ್ರರೆಂದು ಆಳಲು ಆರಂಭಿಸಿದರು. ಮೈಸೂರು, ಚಿತ್ರದುರ್ಗ, ಕೆಳದಿ, ಇಕ್ಕೇರಿ, ಮಾಗಡಿ, ಉಮ್ಮತ್ತೂರು, ಕಿತ್ತೂರು ಮುಂತಾದ ಸಣ್ಣಸಣ್ಣ ಪಾಳೆಪಟ್ಟುಗಳು ಹುಟ್ಟಿಕೊಂಡವು. ಈ ರಾಜಮನೆತನಗಳ ಭಾಷೆ ಕನ್ನಡ. ಹೀಗೆ 3ನೆಯ

ಶತಮಾನದಿಂದ ಆಧುನಿಕ ಕಾಲದವರೆಗೆ ಅನೇಕ ರಾಜಮನೆತನಗಳನ್ನು ರಾಜಭಾಷೆಯಾಗಿ ಹೊರಡಿಸಿರುವ ಸಾವಿರಾರು ಶಾಸನಗಳು ದೊರೆಯುತ್ತವೆ. ಲಿಪಿ : ಕನ್ನಡನಾಡಿನಲ್ಲಿ ದೊರೆಯುವ ತಾಮ್ರಶಾಸನ, ಶಿಲಾಶಾಸನಗಳಲ್ಲಿ ತಾಮ್ರ ಶಾಸನಗಳ ಭಾಷೆ (ಪಾಳೆಗಾರರ ಕಾಲದ ಹಿಂದಿನವು) ಸಂಸ್ಕೃತ, ಲಿಪಿ ಕನ್ನಡ, ದೇವನಾಗರಿ, ನಂದಿನಾಗರಿ, ಸಾಮಾನ್ಯವಾಗಿ ಶಿಲಾಶಾಸನಗಳು ಕನ್ನಡ ಲಿಪಿಯಲ್ಲಿಯೇ ಇವೆ. ಇವುಗಳಲ್ಲಿ

ರಾಜಪ್ರಶಂಸೆ ಇರುವ ಕೆಲವು ಕನ್ನಡ ಶಾಸನಗಳಲ್ಲಿ ಸಂಸ್ಕೃತ ಶ್ಲೋಕಗಳಿವೆ. ತಾಮ್ರಶಾಸನಗಳ ಕೊನೆಯಲ್ಲಿ ದಾನಕೊಟ್ಟ ಗ್ರಾಮ, ಭೂಮಿಗಳ ಎಲೆಗಳನ್ನು ತಿಳಿಸುವ ಶಬ್ದಗಳು ಕನ್ನಡ ಭಾಷೆಯವು. ಶುದ್ಧ ಸಂಸ್ಕೃತ ಭಾಷೆಯಲ್ಲಿಯೇ ಬರೆಯಲ್ಪಟ್ಟ ಐಹೊಳೆಯ ಶಾಸನದಲ್ಲಿ

ಶುದ್ಧ ಕನ್ನಡ ಲಿಪಿಗಳಾದ, ಳ್ ಪ್ರಯೋಗಗಳಿವೆ. ಸಾಮಾನ್ಯವಾಗಿ ವೀರಗಲ್ಲು, ಮಾಸ್ತಿಕಲ್ಲು, ಶುರುಗಲ್ಲು, ರಕ್ತಕೊಡಿಗೆ ಕಲ್ಲು ಮೊದಲಾದುವುಗಳ ಭಾಷೆ ಮತ್ತು ಲಿಪಿ ಕನ್ನಡ, ಕನ್ನಡನಾಡಿನಲ್ಲಿ ಚೋಳರ ಆಳ್ವಿಕೆಗೆ ಒಳಪಟ್ಟ ಭಾಗಗಳಲ್ಲಿ ತಮಿಳು ಗ್ರಂಥಾಕ್ಷರದ ತಮಿಳು

ಶಾಸನಗಳೂ ಕನ್ನಡ ಲಿಪಿಯಲ್ಲಿ ಬರೆದ ತಮಿಳು ಶಾಸನಗಳೂ ದೊರೆಯುತ್ತವೆ. ವಿಜಯನಗರ ಸಾಮ್ರಾಜ್ಯಕಾಲದ ಸಂಗಮ ರಾಜಮನೆತನದ ಕನ್ನಡ ಶಾಸನಗಳು ದೇವನಾಗರಿ ಲಿಪಿಗಳಲ್ಲಿವೆ. ಕನ್ನಡ ಲಿಪಿ ಚರಿತ್ರೆಯನ್ನು ತಿಳಿಯಲು ಅಂದಂದಿನ ಕೈಬರೆಹದ ಗ್ರಂಥಗಳಂತೆ

ಶಾಸನಗಳ ಬರೆಹಗಳೂ ಸಾಧನವಾಗಿವೆ. ಅಶೋಕನ ಕಾಲದ (ಪ್ರ.ಶ.ಪು. 3ನೆಯ ಶತಮಾನ) ಬ್ರಾಹ್ಮೀ ಲಿಪಿ ಶಾತವಾಹನರ ಕಾಲದಲ್ಲೂ (2ನೆಯ ಶತಮಾನ) ಸರಿಸುಮಾರಾಗಿ ಅದೇ ಮಾದರಿಯಲ್ಲಿಯೇ ಮುಂದುವರಿಯುತ್ತದೆ. ಅನಂತರ ಕದಂಬ (5ನೆಯ ಶತಮಾನ)

ಮತ್ತು ಗಂಗರ (6ನೆಯ ಶತಮಾನ) ಕಾಲಗಳಲ್ಲಿ ಅಕ್ಷರ ರಚನೆಯೂ ಚುಕ್ಕೆಯಾಗಿದ್ದುದು ಗೆರೆಯಾಗಿಯೂ ಗೆರೆ ಬಳುಕು, ಕೊಂಡಿಯಾಗಿ ಮಾರ್ಪಡುವುದನ್ನು ಕಾಣಬಹುದು. ಬಾದಾಮಿ ಚಳುಕ್ಯ (6ನೆಯ ಶತಮಾನ) ಮತ್ತು ಕಲ್ಯಾಣಿ ಚಾಳುಕ್ಯರ (11ನೆಯ ಶತಮಾನ)

ಕಾಲದಲ್ಲಿ ಬಿಡಿಬಿಡಿಯಾದ ಅಕ್ಷರ ಭಾಗಗಳನ್ನು ಸೇರಿಸುವ ಪ್ರಯತ್ನ ನಡೆದಂತೆ ತೋರುತ್ತದೆ. ಬರೆವಣಿಗೆಯ ವೇಗ ಹೆಚ್ಚಿದಂತೆಲ್ಲ ಚೌಕಾಕಾರಗಳು ಗುಂಡಾಗುವುದೂ ಬಿಡಿ ಬಿಡಿಯಾದುವು ಒಂದಾಗುವುದೂ ಅನಿವಾರ್ಯ. ಕಳಚೂರಿ, ಹೊಯ್ಸಳ, ಸೇವುಣರ (13ನೆಯ

ಶತಮಾನ) ಮತ್ತು ವಿಜಯನಗರದ (15ನೆಯ ಶತಮಾನ) ಕಾಲಗಳಲ್ಲಿ ಬಿಡಿ ಭಾಗಗಳೆಲ್ಲ ಸಂಪುರ್ಣ ಒಂದಾಗಿ ಲಿಪಿಗೆ ಈಗಿನ ರೂಪ ಬಂದುದನ್ನು ಗಮನಿಸಬಹುದು. ಹೊಸಗನ್ನಡದ ಅನೇಕ ಅಕ್ಷರ ರೂಪಗಳು ವಿಜಯನಗರ ಕಾಲಕ್ಕಾಗಲೇ ಕಾಣಸಿಗುತ್ತದೆ. ಈ ಕೆಲಸ

ಪುರ್ಣವಾದದ್ದು ಮೈಸೂರು ಅರಸರ (18ನೆಯ ಶತಮಾನ) ಕಾಲದಲ್ಲಿ. ಹೆಚ್ಚಿನ ವಿವರಗಳಿಗೆ, ಚಿತ್ರಗಳಿಗೆ ಅ. ಆ, ಇ, ಈ - ಮೊದಲಾದ ಶೀರ್ಷಿಕೆಗಳನ್ನೂ ಕನ್ನಡ ಲಿಪಿ ಎಂಬ ಲೇಖನವನ್ನು ನೋಡಿ. ಭಾಷೆ : ಶಾಸನಗಳ ಭಾಷೆ ವ್ಯಾಸಂಗಾರ್ಹವಾದ ವಿಷಯವೇ ಆಗಿದೆ. ಇಲ್ಲಿನದು ಆಡುಮಾತಿಗೆ ತೀರ ಹತ್ತಿರವಾದುದೆಂದು ಹೇಳುತ್ತಾರಾದರೂ ಆಯಾಕಾಲದ ಪ್ರಸಿದ್ಧ ಕವಿಗಳ, ಕಾವ್ಯಗಳ ಪ್ರಭಾವ ಶಾಸನ ಭಾಷೆಯ ಮೇಲೂ ಆಗಿರುವುದನ್ನು ಕಡೆಗಣಿಸುವಂತಿಲ್ಲ.

ಮೊದಮೊದಲಿಗೆ ಸಂಸ್ಕೃತ ಶ್ಲೋಕಗಳ, ಸಂಸ್ಕೃತ ಸಮಾಸಗಳ ಬಳಕೆ ಹೆಚ್ಚಾಗಿರುವುದು ಕಂಡುಬರುತ್ತದೆ. ಕೆಲವು ಶಾಸನಗಳಲ್ಲಿ ಪ್ರಸಿದ್ಧ ಕವಿಗಳ ರಚನೆಗಳನ್ನು ಅನಾಮತ್ತಾಗಿ ಎತ್ತಿ ಬಳಸಿರುವುದುಂಟು, ಕನ್ನಡಕ್ಕೆ ಪ್ರಾಧಾನ್ಯ ಬಂದಾಗಲೂ ಖ್ಯಾತ ಕರ್ಣಾಟಕಗಳ ಒಲವೇ

ಹೆಚ್ಚಾಗಿರುವುದನ್ನು ಕಡೆಗಣಿಸಲಾಗದು. ಗದ್ಯ ಶುದ್ಧವಾಗಿರುವಂತೆ ಗ್ರಾಮ್ಯವಾಗಿರುವುದಕ್ಕೆ ನೂರಾರು ನಿದರ್ಶನಗಳನ್ನು ಕೊಡಬಹುದು. ಗೌಡ, ಅಯ್ದು, ಅದು, ಇದು, ಯಾವನು-ಮೊದಲಾದ ಪದಗಳ ರೂಪವ್ಯತ್ಯಾಸಗಳಂತೂ ಹೇರಳವಾಗಿ ಸಿಗುತ್ತವೆ. ಸು. 597-750ರ

ವರೆಗಿನ ಕೆಲವು ಶಾಸನಗಳಲ್ಲಿ ಕಂಡು ಬರುವ ಕೆಲವು ವಿಚಿತ್ರ ರೂಪಗಳಿಂದಾಗಿ ಹಳಗನ್ನಡಕ್ಕೂ ಹಿಂದೆ ಒಂದು ರೀತಿಯ ಕನ್ನಡವಿದ್ದಿರಬೇಕೆಂದೂ ಅದನ್ನು ಪುರ್ವದ ಹಳಗನ್ನಡವೆನ್ನಬಹುದೆಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಸ್ವರ್ಗಾಗ್ರಮಾವೇದಾರ್ (700),

ಏಳ್ ಯ ನರಕದಾ ಪುಳ್ ಅಕ್ಕುಂ (597), ವೈಶಾಖಮಾಸದುಳ್ (725)-ಮುಂತಾದುವು ಅವರು ಕೊಡುವ ಉದಾಹರಣೆಗಳು. ಲಿಪಿಯಲ್ಲಿ ಆಗಿರುವ ಮಾರ್ಪಾಡು, ಪದರಚನೆ, ವಾಕ್ಯರಚನೆ, ಳ್ ಕಾರಗಳ ಪ್ರಯೋಗ-ಇತ್ಯಾದಿ ಹಲವು ದೃಷ್ಟಿಯಿಂದ ಶಾಸನಗಳ ಭಾಷೆ ವ್ಯಾಸಂಗಯೋಗ್ಯವಾಗುತ್ತದೆ. ಕನ್ನಡ ಶಾಸನಗಳ ವೈವಿಧ್ಯ : ಕನ್ನಡ ನಾಡಿನ ಶಾಸನಗಳನ್ನು ಕನ್ನಡ ಭಾಷೆಯ ಶಾಸನಗಳು, ಇತರ ಭಾಷೆಯ ಶಾಸನಗಳೆಂದು ಎರಡು ಗುಂಪು ಮಾಡಬಹುದು. ರಾಜಾಸ್ಥಾನದ ಪಂಡಿತರಿಂದ ರಚಿತವಾದ ದಾನಪತ್ರಗಳೆಲ್ಲವೂ ಸಂಸ್ಕೃತ ಭಾಷೆಯವು; ಸಾರ್ವಜನಿಕ

ಗಮನಕ್ಕೆ ತರಲು ಹಾಕಿರುವ ವೀರಗಲ್ಲು ಮುಂತಾದ ಶಾಸನಗಳು ಕನ್ನಡ ಭಾಷೆಯವು. ಕೋಲಾರ ಪ್ರಾಂತ್ಯದ ಕೆಲವು ಕಡೆ ತೆಲುಗು ಭಾಷೆಯ ಶಾಸನಗಳು ದೊರೆತಿವೆ. ಬಿಜಾಪುರ ಸುಲ್ತಾನರ, ಔರಂಗಜೇ಼ೕಬನ ಕಾಲದ ಕೆಲವು ಬರೆವಣಿಗೆಗಳು, ಉರ್ದುಭಾಷೆ ಮತ್ತು

ಲಿಪಿಯಲ್ಲಿವೆ. ಪೇಷ್ವೆಗಳ ಕಾಲದಲ್ಲಿ ಕನ್ನಡನಾಡಿನಲ್ಲ್ಲಿ ಮರಾಠಿ, ಉರ್ದು, ಕನ್ನಡ ಮೂರು ಭಾಷೆಗಳಲ್ಲೂ ರಾಜಾಜ್ಞೆಗಳನ್ನು ಬರೆದು ಪ್ರಕಟಿಸುತ್ತಿದ್ದರು. ಮೊದಮೊದಲು ಬರೆವಣಿಗೆ ಸಾಧನವಾದುದು ಭೂರ್ಜಪತ್ರ, ತಾಳೆಗರಿ, ಮರದ ತೊಗಟೆ. ಅನಂತರ ತಾವು ಕೊಟ್ಟ ದಾನ ಶಾಶ್ವತವಾಗಿ ಉಳಿಯಬೇಕೆಂದು ಕಲ್ಲುಗಳ ಮೇಲೂ ಲೋಹಗಳ ಕಂಬ, ತಗಡುಗಳ ಮೇಲೂ ಬರೆಸಿ ಅವನ್ನು ಎಲ್ಲ ಜನರಿಗೂ ತಿಳಿಯುವ ಸ್ಥಳಗಳಲ್ಲಿ

ನಡೆಸಿದರು. ಕೊನೆ ಕೊನೆಗೆ ಬರೆವಣಿಗೆಗೆ ಅವಕಾಶ ಸಿಕ್ಕಿದ ಕಡೆಗಳಲ್ಲಿ ತಮ್ಮ ಕೀರ್ತಿ ಬೆಳೆಗಬೇಕೆಂದು ಬರೆಸಿದವರುಂಟು. ದೇವಸ್ಥಾನ, ಮಠಗಳ ಚಿನ್ನ, ಬೆಳ್ಳಿ, ಮುಂತಾದ ಲೋಹಗಳ ಪಾತ್ರೆಗಳು, ಮಡಕೆಗಳು ಲೋಹದ ತಗಡುಗಳು ಕಬ್ಬಿಣದ ಕಂಬ, ದೇವರ ಪೀಠಗಳು,

ಮೂರ್ತಿಗಳ ಬೆನ್ನು ಭಾಗ ದೇವಸ್ಥಾನಗಳ ತಳಪಾಯದಕಲ್ಲು, ಕಂಬ ಗೋಡೆ ಬಲಿಪೀಠ ಗೋಪುರದ ಕಲಶ ಇವೇ ಮುಂತಾದ ಕಡೆಗಳಲ್ಲಿ ಬರೆವಣಿಗೆಗಳಿವೆ. ಇವುಗಳಲ್ಲದೆ ಹಳೆಯ ಊರುಗಳ ಮುಂಭಾಗದಲ್ಲಿ, ಕಾಡುಗಳಲ್ಲಿ ನೆಟ್ಟ ಬೋರುಕಲ್ಲು, ಯಂತ್ರಕಲ್ಲು, ವೀರಗಲ್ಲು,

ತುರುಗಲ್ಲು, ಲಿಂಗಮುದ್ರೆಕಲ್ಲು, ವಾಮನ ಮುದ್ರೆಕಲ್ಲು ಮಾಸ್ತಿಕಲ್ಲುಗಳೆಂದು ಕರೆಯಲ್ಪಡುವ ಅನ್ವರ್ಥವಾದ ಶಿಲಾಲೇಖನಗಳಿವೆ. ಪುಣ್ಯಕ್ಷೇತ್ರ ಮತ್ತು ಬೆಟ್ಟಗಳ ಬಂಡೆಗಳಲ್ಲಿ, ನದೀತೀರಗಳಲ್ಲಿ, ಕೊಳಗಳ ಪಕ್ಕದಲ್ಲಿ ಅಲ್ಲಿಗೆ ಬಂದ ಯಾತ್ರಾರ್ಥಿಗಳು, ರಾಜರ, ಕವಿಗಳ ಸ್ಮಾರಕ

ಬರೆವಣಿಗೆಗಳಿವೆ. ಕೆರೆ ಕಟ್ಟಿಸಿ ತೂಬಿನ ಮೇಲೆ ಬರೆಸಿರುವ ಶಾಸನಗಳೂ ಸಿಕ್ಕಿವೆ. ಅನಶನ ವ್ರತದಿಂದ ಪ್ರಾಣಾರ್ಪಣೆ ಮಾಡಿದವರ ಜ್ಞಾಪಕಾರ್ಥವಾದ ನಿಸಿಧಿಕಲ್ಲು ತಮ್ಮ ಸ್ವಾಮಿಗೆ ಭಕ್ತಿ ಸಲ್ಲಿಸಲು ಶರೀರ ತ್ಯಾಗಮಾಡಿದ ಭೃತ್ಯರ ತ್ಯಾಗಿಗಳ ಗರುಡಕಲ್ಲುಗಳು ಇವೆ. ಈ ಎಲ್ಲ ಬಗೆಗಳ ಶಾಸನಗಳನ್ನೂ ಅವುಗಳಲ್ಲಿ ಬರೆದಿರುವ ಬರೆವಣಿಗೆಗನುಸಾರವಾಗಿ ಮೂರು ಗುಂಪು ಮಾಡಬಹುದು. 1. ದಾನಪತ್ರಗಳು 2. ಪತಿಯ ಮೇಲಿನ ಪ್ರೇಮಕ್ಕಾಗಿ, ಸ್ವಾಮಿಭಕ್ತಿಗಾಗಿ, ಸಂಸಾರತ್ಯಾಗಕ್ಕಾಗಿ, ಪ್ರಾಣಾರ್ಪಣ ಮಾಡಿದ ವಿಷಯ ತಿಳಿಸುವ ಮಾಸ್ತಿಕಲ್ಲು, ಗರುಡಗಲ್ಲು, ನಿಸಿದಿಕಲ್ಲು, ಹೀಗೆಯೇ ದೇಶರಕ್ಷಣೆ ರಾಜ್ಯರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರಗಲ್ಲುಗಳು, 3. ಇತರ

ಸ್ಮಾರಕಗಳು. 1. ದಾನಪತ್ರಗಳು : ಸಾಮಾನ್ಯವಾಗಿ ಶ್ರೋತ್ರಿಯರಿಂದ ಬ್ರಾಹ್ಮಣರ ಜೀವಿಕೆಗಾಗಿ ರಾಜರುಗಳು ಮತ್ತು ಧನಿಕರು ಭೂ, ಗೃಹ, ಮುಂತಾದುವನ್ನು ದಾನ ಮಾಡಿದ ವಿವರ ತಿಳಿಸುವ ತಾಮ್ರಶಾಸನ ಮತ್ತು ಶಿಲಾಶಾಸನಗಳಿವೆ. ವೈಯಕ್ತಿಕವಾಗಿ ದಾನಮಾಡಿದ ವಿಷಯ

ತಿಳಿಸುವ ಶಾಸನಗಳು ಸಾಮಾನ್ಯವಾಗಿ ತಾಮ್ರದ ಹಲಗೆಗಳ ಮೇಲೆ ಬರೆಯಲ್ಪಟ್ಟಿವೆ. ಮಠ ದೇವಸ್ಥಾನಗಳನ್ನು ಕಟ್ಟಿಸಿ ದಿನವಹಿ ನಡೆಯುವ ಅವುಗಳ ಪುಜಾದಿಗಳಿಗೆ ಬಿಟ್ಟಿರುವ ದತ್ತಿಗಳು ವಿಶೇಷವಾಗಿ ಶಿಲಾಶಾಸನಗಳು, ಕೆಲವು ಪುಸ್ತಕರೂಪದಲ್ಲಿರುವ ತಾಮ್ರ

ಶಾಸನಗಳು ಇವೆ. ಇವು ಚಂಪು ಕಾವ್ಯದಷ್ಟು ಪ್ರೌಢವಾಗಿವೆ. ಇವುಗಳ ಸೂಕ್ತ ಪರಿಚಯವನ್ನು ಕೆಳಗೆ ಕೊಟ್ಟಿದೆ. ತಾಮ್ರಶಾಸನಗಳು : ಕದಂಬ, ಗಂಗ, ರಾಷ್ಟ್ರಕೂಟ, ಚಾಳುಕ್ಯ ಮೊದಲಾದ ರಾಜಮನೆತನಗಳ ಶಾಸನಗಳು ತಾಮ್ರದ ಹಲಗೆಗೆಳ ಮೇಲಿವೆ. ಗಂಗರಾಜರ ತಾಮ್ರ ಶಾಸನಗಳು ಅತ್ಯಧಿಕವಾಗಿ ಕನ್ನಡನಾಡಿನಲ್ಲೇ ದೊರಕಿವೆ. ಇವುಗಳ ಸಂಖ್ಯೆ 70. ಮೊದಮೊದಲು ಬರೆಸಿದ

ತಾಮ್ರಶಾಸನಗಳು ತಾಳೆಗರಿಯ ಹಾಗೆಯೇ ಉದ್ದ ಅಗಲಗಳಿದ್ದು ತಾಳೆಗರಿಗಿಂತ ದಪ್ಪನಾಗಿ ನಾಲ್ಕು ಕಡೆಯೂ ಉಬ್ಬಾಗಿ ಒಳಮೈ ಒಂದೇ ಮಟ್ಟದ ಹಲಗೆಗಳ ಎರಡು ಪಕ್ಕಗಳಲ್ಲೂ 4-5 ಪಕ್ಕೆಗಳಿದ್ದು ಕನ್ನಡ ಲಿಪಿಗಳಲ್ಲಿ ಬರೆಯಲ್ಪಟ್ಟಿವೆ. ಒಂದು ಕಟ್ಟಿನಲ್ಲಿ 3, 5, 7

ಹಲಗೆಗಳಿರುವುದುಂಟು. ಮೊದಲನೆಯ ಹಲಗೆಯ ಮತ್ತು ಕೊನೆ ಹಲಗೆಯ ಹೊರಮೈಗಳಲ್ಲಿ ಬರೆವಣಿಗೆ ಇರುವುದಿಲ್ಲ. ಒಂದೇ ಪ್ರಮಾಣದ ಈ ಹಲಗೆಗಳನ್ನೆಲ್ಲ ಎಡಗಡೆ ಅಂಚಿನಲ್ಲಿ ಅರ್ಧ ಅಂಗುಲವರ್ತುಲಗಳ ರಂಧ್ರಮಾಡಿ ತಾಮ್ರದ ಬಳೆಗಳನ್ನು ಪೋಣಿಸಿ ಬಳೆಯ ಎರಡು

ತುದಿಗಳನ್ನೂ ಬೆಸೆದು, ಬೆಸೆದಿರುವ ಭಾಗದಲ್ಲಿ ಆಯಾರಾಜ ರಾಜಚಿಹ್ನೆಗಳುಳ್ಳ ಮುದ್ರಿಕೆಗಳನ್ನು ಹಾಕಿರುವುದಲ್ಲದೆ ಒಳಗಡೆ ರಾಜನ ಹೆಸರನ್ನೂ ಬರೆಸಿರುವುದು ಕಂಡುಬರುತ್ತದೆ. ಗಂಗರ ಆನೆ, ಚಾಳುಕ್ಯರ ವರಾಹ, ಹೊಯ್ಸಳರ ವ್ಯಾಘ್ರ ಮುಂತಾದ ಪ್ರಾಣಿಗಳ ಸುಂದರ

ಚಿತ್ರಗಳನ್ನುಳ್ಳ ಈ ಮುದ್ರಿಕೆ ಗಳು ಸುಮಾರು ಈಗಿನ ರೂಪಾಯಿಯಷ್ಟು ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡದಾಗಿರುವುದುಂಟು. 10-11ನೆಯ ಶತಮಾನಗಳ ಅನಂತರ ಬರೆಸಿರುವ ತಾಮ್ರಶಾಸನಗಳ ಆಕಾರ, ಹಲಗೆಗಳ ಸಂಖ್ಯೆ ಬದಲಾವಣೆ ಹೊಂದಿ ಕ್ರಮೇಣ ಉದ್ದ ಅಗಲ ದಪ್ಪ ಹೆಚ್ಚಿರುವುದು ಕಂಡುಬರುತ್ತದೆ. ಉಂಗುರ, ಮುದ್ರೆಗಳಿಲ್ಲದ ಶಾಸನಗಳು ನಂಬಲರ್ಹವಾದುವುಗಳಲ್ಲ. ಗಂಗರ ಎಲ್ಲ ತಾಮ್ರಶಾಸನಗಳಲ್ಲಿಯೂ ಸ್ವಸ್ತಿ ಜಿತಂ ಭಗವತಾ ಎಂದು ಪ್ರಾರಂಭವಾಗುವ ವಾಕ್ಯವೂ ಇತರ ರಾಜಮನೆತನಗಳ ಶಾಸನಗಳಲ್ಲಿ ದೇವತಾ ಸ್ತುತಿಯೂ ಇರುತ್ತದೆ. ಮುಂದೆ ರಾಜರ ಪೀಳಿಗೆ ಆಯಾ ರಾಜರು ಮಾಡಿದ ಮಹತ್ಕಾರ್ಯ-ಇವನ್ನು ತಿಳಿಸಿ ಕೊನೆಗೆ

ದಾನ ತೆಗೆದುಕೊಳ್ಳುವವನ ಯೋಗ್ಯತೆ, ಅವನ ಪಾಂಡಿತ್ಯ, ಗೋತ್ರ, ಪ್ರವರ, ದಾನಕೊಟ್ಟ. ಗ್ರಾಮಭೂಮಿಗಳನ್ನೂ ಅದರ ಎಲ್ಲೆಕಟ್ಟುಗಳನ್ನೂ ನಮೂದಿಸಿರುತ್ತದೆ. ಸಾಮಾನ್ಯವಾಗಿ ತಾಮ್ರಶಾಸನಗಳು ಸಂಸ್ಕೃತಭಾಷೆಯಲ್ಲಿವೆ. ನಾಯಕರ ಕಾಲದ ಶಾಸನಗಳಾದರೋ

ದೇಶಭಾಷೆಯಲ್ಲಿವೆ. ಎಲ್ಲೆಗಳನ್ನು ತಿಳಿಸುವಾಗ ಮಾತ್ರ ಸಂಸ್ಕೃತ ಶಾಸನಗಳ ಕೊನೆಯಲ್ಲಿ ದೇಶ ಭಾಷೆ ಬರುತ್ತದೆ. ಪ್ರಾಚೀನ ತಾಮ್ರಶಿಲಾಶಾಸನಗಳು ಗದ್ಯದಲ್ಲಿವೆ. ತಾಮ್ರಶಾಸನದ ಕೊನೆಯಲ್ಲಿ ಫಲಶ್ರುತಿ ದಾನಕೊಟ್ಟವನ ಹಸ್ತಾ ಕ್ಷರಗಳಿರುತ್ತವೆ. ಗಂಗರ

ಮಾರಸಿಂಘನ ಶಾಸನ ಒಂದು ಸಣ್ಣ ಪುಸ್ತಕದಷ್ಟು ದೊಡ್ಡದಾಗಿದೆ. ಮೈಸೂರು ಅರಸರು ಕೊಟ್ಟ ಹದಿನೈದು ಹಲಗೆಯ ತಾಮ್ರಶಾಸನವೇ ಇದುವರೆಗೂ ಸಿಕ್ಕಿರುವುವುಗಳಲ್ಲಿ ದೊಡ್ಡದು ಎಂದು ಹೇಳಬಹುದು. ಶಿಲಾಶಾಸನಗಳು : ಶಿಲಾಶಾಸನಗಳು ವಿಪುಲವಾಗಿವೆ. ಬಂಡೆಗಳು, ಗೋಡೆಗಳು, ತಳಪಾಯಕಲ್ಲು, ಬೋದಿಗೆಕಲ್ಲು, ಕಲ್ಲಿನ ತೊಲೆಗಳು ಕಂಬಗಳು ಇವುಗಳ ಮೇಲೆಲ್ಲ ಬರೆವಣಿಗೆಗಳಿವೆ. ಸಾಮಾನ್ಯವಾಗಿ 8´ x 10´ ಚದುರವಿರುವ ದೊಡ್ಡ ಕಲ್ಲಿನ ಒಳಭಾಗವನ್ನೆಲ್ಲ

ಒಂದೇ ಮಟ್ಟಕ್ಕೆ ತಂದು ಅಂಚುಕಟ್ಟಿ ಮೇಲ್ಗಡೆ ಭಾಗವನ್ನು ಅರ್ಧ ಚಂದ್ರಾಕೃತಿಯಿರುವಂತೆ ಮಾಡಿಕೊಂಡು ಅಂದವಾಗಿ, ಕಲ್ಲಿನ ಒಳಭಾಗದಲ್ಲಿ ಬರೆಸಿರುವ ಶಾಸನಗಳೇ ಹೆಚ್ಚು. ಶಾಸನಗಳ ಮೇಲ್ಗಡೆ ಅರ್ಧಚಂದ್ರಾಕೃತಿಯ ಭಾಗದಲ್ಲಿ ಶೈವದೇವಸ್ಥಾನದ

ದಾನಪತ್ರವಾದರೆ, ಲಿಂಗ ಬಸವ ಪುಜಾರಿ ಹಸುಕರುಗಳು ಎಡಬಲ ಭಾಗಗಳಲ್ಲಿ ಸೂರ್ಯಚಂದ್ರರ ಚಿತ್ರಗಳಿರುತ್ತವೆ. ವೈಷ್ಣವ ದೇವಸ್ಥಾನಗಳದ್ದಾದರೆ ವಾಮನನ ಚಿತ್ರ, ಗೋಪಾಲಕೃಷ್ಣ ಅಥವಾ ಆ ದೇವಸ್ಥಾನದಲ್ಲಿ ಪ್ರತಿಷ್ಠಿತವಾದ ಮೂರ್ತಿಯ ಚಿತ್ರ ಕೆತ್ತಲ್ಪಟ್ಟಿರುತ್ತದೆ. ಜೈನ

ಶಾಸನವಾದರೆ ಜಿನ ಬಿಂಬವಿರುತ್ತದೆ. ಈ ಎಲ್ಲ ಶಾಸನಗಳ ಪ್ರಾರಂಭದಲ್ಲಿ ಶೈವರಾದರೆ ನಮಸ್ತುಂಗ ಶಿರಶ್ಚುಂಬಿ ಎಂಬ ಶ್ಲೋಕವನ್ನೂ ವೈಷ್ಣವರಾದರೆ ಹರೇರ್ಲೀಲಾವರಾಹಸ್ಯ ಎಂಬ ಶ್ಲೋಕವನ್ನೂ ಜೈನರಾದರೆ ಶ್ರೀಮತ್ಪರಮಗಂಭೀರ ಎಂಬ ಶ್ಲೋಕವನ್ನೂ ಬರೆದು

ಮುಂದೆ ವಿಷಯವನ್ನು ಪ್ರಾರಂಭಿಸುವರು. ಮುಂದೆ, ದಾನಕೊಟ್ಟವನು ರಾಜನಾದರೆ ಅವನ ಪೀಳಿಗೆ ಅವನ ಶೌರ್ಯಪರಾಕ್ರಮಾದಿಗಳು ಅವನ ದಿಗ್ವಿಜಯಗಳನ್ನು ತಿಳಿಸಿ ಕಾಲವನ್ನು ಸೂಚಿಸಿ ತಾನು ಮಾಡಿದ ಪ್ರಕೃತ ಧರ್ಮವನ್ನೂ ತಿಳಿಸಲಾಗುವುದು. ಕೊನೆಗೆ

ದಾನಕೊಟ್ಟ ಗ್ರಾಮಭೂಮಿಗಳ ಎಲ್ಲೆಕಟ್ಟು ಸಾಕ್ಷಿಗಳು ಫಲಶ್ರುತಿ ಮುಂತಾದುವುಗಳು ಇರುವುವು. ಕೊನೆಯಲ್ಲಿ ರಾಜನ ಅಥವಾ ಅಧಿಕಾರಿಯ ಹಸ್ತಾ ಕ್ಷರವಿರುವುದು. ಸಾಮಾನ್ಯವಾಗಿ ಸ್ವದತ್ತಾಂ ಪರದತ್ತೇಂ ವಾಯೋ ಹರೇತ ವಸುಂಧರಾ | ಷಷ್ಠಿರ್ವರ್ಷಸಹಸ್ರಾಣಿ

ವಿಷ್ಟಾಯಾಂ ಜಾಯತೇ ಕ್ರಿಮಿಃ -ಎಂಬ ಶ್ಲೋಕ ಮತ್ತು ಇತರ ಫಲಶ್ರುತಿ ಇರುತ್ತವೆ. ಕೆಲವು ಶಾಸನಗಳ ಕೊನೆಯಲ್ಲಿ ಶಾಸನದ ಸಾಹಿತ್ಯ ರಚನೆ ಮಾಡಿದ ಕವಿಯ ಹೆಸರೂ ಕಲ್ಲುಕೊರೆದ ಬಡಗಿಯ ಹೆಸರೂ ಸೂಚಿಸಲ್ಪಟ್ಟಿರುತ್ತವೆ. ಈ ರೀತಿಯಾಗಿ ಬರೆಸಿರುವ

ಶಿಲಾಶಾಸನಗಳಲ್ಲಿ ಹೊಯ್ಸಳರ ಕಾಲದ ಲೇಖನಗಳ ಅಂದವಾಗಿದ್ದು ಓದಲು ನೋಡಲು ರಮ್ಯವಾಗಿವೆ. ವಿಜಯನಗರದ ಕಾಲದ ಶಾಸನಗಳು ಒರಟುಕಲ್ಲಿನ ಮೇಲೆ ಇರುವುದೂ ಉಂಟು. ಹೊಯ್ಸಳರ ಶಾಸನಗಳೆಲ್ಲ ಸಾಮಾನ್ಯವಾಗಿ ಬಳಪದಕಲ್ಲಿನ ಮೇಲೆಯೇ ಇವೆ. 2. ಆತ್ಮಾರ್ಪಣೆಮಾಡಿದ ತ್ಯಾಗಿಗಳ ಶಾಸನಗಳು : ಇವನ್ನು ವೀರಗಲ್ಲುಗಳೆಂದು ಕರೆಯುವರು. ಅನೇಕ ಪುರಾತನ ಪಟ್ಟಣಗಳ, ರಾಜಧಾನಿಗಳ, ಹಳೆ ಊರುಗಳ ಮುಂಭಾಗದಲ್ಲಿ ಸಾಲಾಗಿ ನೆಡಿಸಿರುವ ಚಿತ್ರಗಳುಳ್ಳ ಕಲ್ಲುಗಳವು. ಈ ಕಲ್ಲುಗಳ ಆಯ 8´ ಘಿ 10´

ಅಡಿಗಳಿರುವುದುಂಟು. ಕೆಲವು 3´ ಘಿ 6´ ಪ್ರಮಾಣದ ಕಲ್ಲುಗಳೂ ಇವೆ. ಚಪ್ಪಡಿಗಳ ಹೊರಮೈಯನ್ನು ನುಣಪಾಗಿ ಮಾಡಿಕೊಂಡು ಸುತ್ತಲೂ ಉಬ್ಬಿರುವಂತೆ ಮಾಡಿ ಮೇಲ್ಭಾಗ ಕಮಾನಿನ ಆಕಾರಮಾಡಿಕೊಂಡು ಒಳಮೈಯಲ್ಲಿ ಮೂರು ಅಥವಾ ಐದು ಅಪರೂಪವಾಗಿ

ಏಳು ಚಚ್ಚೌಕನಾದ ಭಾಗಗಳನ್ನು ವಿಂಗಡಿಸಿಕೊಂಡು ಅದರಲ್ಲಿ ಕಾಳಗದಲ್ಲಿ ಪ್ರಾಣಾರ್ಪಣ ಮಾಡಿದವನ ವಿಷಯ, ಅವನಿಗೆ ಉಂಟಾಗುವ ಫಲ-ಎಲ್ಲವನ್ನೂ ಚಿತ್ರಗಳ ಮೂಲಕ ತೋರಿಸಿರುತ್ತಾರೆ. ಕೆಲವು ಕಲ್ಲುಗಳಲ್ಲಿ ಅಡ್ಡಪಟ್ಟಿ ತಳಭಾಗದಲ್ಲಿ ಜಾಗವಿದ್ದರೆ ಅಲ್ಲಿ ಆ ಕದನದ

ವಿಷಯ, ಕಕ್ಷಿ ಪ್ರತಿಕಕ್ಷಿಯ ಅದರಲ್ಲಿ ಪ್ರಾಣಾರ್ಪಣ ಮಾಡಿದವನ ತ್ಯಾಗ, ಅವನ ಕುಟುಂಬಕ್ಕೆ ಕೊಟ್ಟ ದಾನದ ವಿಷಯ-ಇವುಗಳ ಉಲ್ಲೇಖವಿರುವುದು. ಕೆಳಗಡೆ ಪಟ್ಟಿಯಲ್ಲಿ ಎರಡೂ ಪಕ್ಷದವರು ಆಯಾ ಕಾ¯ದಲ್ಲಿ ಬಳಕೆಯಲ್ಲಿದ್ದ ಆಯುಧ ಹಿಡಿದು ಜಗಳವಾಡುವುದು, ಅದರ ಮೇಲುಗಡೆ ಪಟ್ಟಿಯಲ್ಲಿ ಅಪ್ಸರ ಸ್ತ್ರೀಯರು ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವುದು, ಕೊನೆಗೆ ಮೇಲ್ಗಡೆ ಕಮಾನಾಗಿ ವಿಂಗಡಿಸಿರುವ

ಭಾಗದಲ್ಲಿ ಲಿಂಗ, ಬಸವ, ಪುಜಾರಿ, ವೀರ, ಕೆಲವು ಕಡೆ ವೀರನ ಹೆಂಡತಿಯ ಚಿತ್ರಗಳೂ ಇರುತ್ತವೆ. ವೀರಗಲ್ಲುಗಳಲ್ಲಿ ಶೈವ, ವೈಷ್ಣವ, ಜೈನಧರ್ಮದ ವೀರಗಲ್ಲುಗಳೆಂದು ಕಲ್ಲುಗಳನ್ನು ನೋಡಿದ ತತ್ಕ್ಷಣವೇ ತಿಳಿಯಲು ಅದರ ಮೇಲ್ಭಾಗದಲ್ಲಿರುವ ಲಿಂಗ ಬಸವನ ಚಿತ್ರ,

ಗೋಪಾಲಕೃಷ್ಣ, ಹಸುಕರು ಮುಂತಾದ ಚಿತ್ರಗಳಿಂದಲೇ ತಿಳಿಯಬಹುದು. ಈ ವೀರಗಲ್ಲುಗಳ ಮೊದಲಲ್ಲಿ ಜಿತೇನ ಲಭ್ಯತೇ ಲಕ್ಷ್ಮೀಃ ಮೃತೇನಾಪಿ ಸುರಾಂಗನಾ |ಕ್ಷಣವಿಧ್ವಂಸಿನೀ ಕಾಯೇ ಕಾ ಚಿಂತಾ ಮರಣೇ ರಣೇ || ಎಂಬ ಶ್ಲೋಕವಿರುವುದು. ಮುಂದೆ ಕಕ್ಷಿ ಪ್ರತಿಕಕ್ಷಿಗಳು, ಕಾಳಗಕ್ಕೆ ಕಾರಣ, ಕಾಲ, ಸತ್ತವನ ಹೆಸರು, ದಾನಕೊಟ್ಟ ಭೂಮಿ

ಮೊದಲಾದ ವಿಷಯಗಳ ವಿವರಣೆ ಇರುತ್ತವೆ. ಈ ವಿಧವಾದ ವೀರಗಲ್ಲುಗಳು ಗಂಗರ ಕಾಲದಲ್ಲಿ ಹೆಚ್ಚಾಗಿ ಸಿಕ್ಕುವುವು. ಶಿವಮೊಗ್ಗ ಜಿಲ್ಲೆಯಲ್ಲಿ ಹಾಕಿಸಿರುವ ಕೆಲವು ವೀರಗಲ್ಲುಗಳು ಕಲಾದೃಷ್ಟಿಯಿಂದ ಬಹಳ ಭವ್ಯವಾಗಿವೆ. ಹಿರೆಗುಂಡುಗಲ್ಲು ಎಂಬ ಪ್ರದೇಶದಲ್ಲಿ ಗಂಗರ ಕಾಲದ

ಸು. ಹದಿನೇಳು ವೀರಗಲ್ಲುಗಳು ಒಂದೇ ಜಾಗದಲ್ಲಿವೆ. ಬಹಳ ಪ್ರಾಚೀನವಾದ ಕನ್ನಡ ಶಿಲಾಶಾಸನಗಳೆಲ್ಲ ವೀರಗಲ್ಲುಗಳು ಹಲ್ಮಿಡಿ, ತಮಟಕಲ್ಲು, ಅಣಜಿ, ಗದ್ದೆಮನೆ, ಹಿರೆಗುಂಡುಗಲ್ಲು, ಚಿಕ್ಕಮಧುರೆ, ಆಸಂದಿ ಮೊದಲಾದ ಕಡೆ ಇರುವ ವೀರಗಲ್ಲುಗಳು 8ನೆಯ ಶತಮಾನಕ್ಕೆ

ಮುಂಚೆ ಹುಟ್ಟಿದವೆಂದು ತೋರುತ್ತದೆ. ಈ ವೀರಗಲ್ಲುಗಳಲ್ಲಿ ಊರಿನ ಗೋವುಗಳನ್ನು ಕಾಪಾಡಲು ಪ್ರಾಣ ಬಿಟ್ಟವನ ಜ್ಞಾಪಕಾರ್ಥವಾಗಿ ಹಾಕಿರುವ ಕಲ್ಲಿಗೆ ತುರುಕಲ್ಲೆಂದು ಹೆಸರು. ಹೆಂಗಸರು ತಮ್ಮ ಗಂಡ ಸತ್ತಾಗ ಪ್ರಾಣ ಬಿಟ್ಟಿದ್ದಕ್ಕೆ ಹಾಕಿರುವ ಕಲ್ಲುಗಳೇ ಮಾಸ್ತಿಕಲ್ಲುಗಳು. ಮಹಾಸತಿ ಎಂಬುದು ಮಾಸ್ತಿ

ಆದಂತೆ ತೋರುತ್ತದೆ. ಹುಲಿಯೊಡನೆ ಕಾಳಗ, ನಾಯಿ ಕಾಳಗ ಮುಂತಾದುವುಗಳನ್ನು ಸೂಚಿಸುವ ಚಿತ್ರವಿರುವ ವೀರಗಲ್ಲುಗಳೂ ಇವೆ. ಮಂಡ್ಯದ ತಾಲ್ಲೂಕು ಆತಕೂರಿನಲ್ಲಿರುವ ವೀರಗಲ್ಲು ಗಮನಾರ್ಹವಾದುದು. ಕಾಡುಹಂದಿ ಮತ್ತು ತನ್ನ ಸಾಕುಪ್ರಾಣಿಯಾದ ನಾಯಿಗಳ

ಜಗಳದಲ್ಲಿ ನಾಯಿ ಸತ್ತು ಹೋದುದಕ್ಕಾಗಿ ಗಂಗರಾಜ ದೇವಾಲಯವನ್ನು ಕಟ್ಟಿಸಿ ದೇವರ ಮುಂದೆ ಆ ನಾಯಿಯ ಶ್ರೇಯಸ್ಸಿಗಾಗಿ ನಂದಾದೀವಿಗೆ ಇಡಲು ದಾನಕೊಟ್ಟಿದ್ದಾನೆ. ಗಂಗ, ಹೊಯ್ಸಳ ರಾಜರ ಕಾಲಗಳಲ್ಲಿ ರಾಜ ಸತ್ತಾಗ ಅವನೊಡನೆ ಆತ್ಮಾರ್ಪಣ ಮಾಡಿರುವ

ವೀರರ ಸ್ಮಾರಕಗಳನ್ನು ಗರುಡಗಲ್ಲುಗಳೆಂದು ಕರೆಯುವರು. ಜೈನರಲ್ಲಿ ಅವಸಾನಕಾಲ ಪ್ರಾಪ್ತವಾದಾಗ ಅಥವಾ ಜೀವನದಲ್ಲಿ ಜುಗುಪ್ಸೆತೋರಿ ವೈರಾಗ್ಯ ಬಂದಾಗ ಅನಶನವ್ರತ ಮಾಡಿ ಪ್ರಾಣಾರ್ಪಣ ಮಾಡಿರುವುದಕ್ಕಾಗಿ ಹಾಕಿಸಿರುವ ಕಲ್ಲುಗಳಿಗೆ ನಿಸಿದಿಕಲ್ಲುಗಳೆಂದು

ಹೆಸರು. ನಿಸಿದಿಕಲ್ಲುಗಳ ಮೇಲ್ಗಡೆ ಜೈನಯತಿ, ವ್ಯಾಸಪೀಠ, ತಮಟೆಕೋಲು-ಇವುಗಳ ಚಿತ್ರಗಳೂ ಶಿಷ್ಯನ ಚಿತ್ರವೂ ಇರುತ್ತವೆ. ಕೆಳಗಡೆ ವ್ಯಕ್ತಿ ಮತ್ತು ಕಾಲಗಳ ಮಾಹಿತಿಯೇ ಮುಂತಾದ ವಿವರಣೆಗಳನ್ನೂ ಪ್ರ್ರಾಣಾರ್ಪಣೆಯ ವಿಷಯವನ್ನೂ ತಿಳಿಸಿರುತ್ತದೆ. ಶ್ರವಣಬೆಳಗೊಳ

ಒಂದರಲ್ಲಿಯೇ ಇಂಥ 60 ನಿಸಿದಿಕಲ್ಲುಗಳಿವೆ. 3. ಇತರ ಸ್ಮಾರಕಗಳು : ರಾಜರು ಕವಿಗಳು ಪುಣ್ಯಕ್ಷೇತ್ರ ತೀರ್ಥಕ್ಷೇತ್ರಗಳಿಗೆ ಹೋದಾಗ ಶ್ರೀಮಂತರು ಕೆರೆ ಕಟ್ಟಿಸಿದುದಕ್ಕೂ ತೂಬನ್ನು ಇಡಿಸಿದುದಕ್ಕೂ ಬರೆಸಿರುವ ಶಾಸನಗಳು, ರಾಜ್ಯದ ಎರಡು ಮತದವರ ವೈಮನಸ್ಯವನ್ನು ಹೋಗಲಾಡಿಸಿ ಒಪ್ಪಂದ

ಮಾಡಿಸಿರುವಂಥವು (ಬುಕ್ಕರಾಯನ ಶಾಸನ) ಮೊದಲಾದ ಅನೇಕ ಶಾಸನಗಳಿವೆ. ರಾಜ್ಯದಲ್ಲಿ ಶ್ರವಣರಿಗೂ ಬ್ರಾಹ್ಮಣರಿಗೂ ಆದ ಜಗಳವನ್ನು ಹರಿಹರ ಪರಿಹಾರ ಮಾಡಿದ ವಿಷಯ ಪ್ರಸ್ತಾಪಿತವಾಗಿರುವ ಈ ಶಾಸನದ ಪ್ರತಿಯನ್ನು ಶ್ರವಣಬೆಳಗೊಳದಲ್ಲಿಡಲಾಗಿದೆ (ಶ್ರ, ಬೆ.

344). ಹಳೇಬೂದನೂರು ಶಾಸನದಲ್ಲಿ ಸಾವರಾಶಿ ಭಟ್ಟಾರಕ ಒಂದು ಕೆರೆಯನ್ನು ನಿರ್ಮಿಸಿದ ವಿಷಯವನ್ನು ಹೇಳಲಾಗಿದೆ. ಕೆರೆಯಲ್ಲಿದ್ದ ಮಣ್ಣನ್ನು ತೆಗೆದು ಹೆಚ್ಚು ನೀರು ಅಲ್ಲಿ ಸಂಗ್ರಹವಾಗುವಂತೆ ಮಾಡಿದುದಕ್ಕಾಗಿ ಚಟ್ಟಲದಾಸ ಬೋಯಿಗೆ ಮುಮ್ಮಡಿ ಕೆಂಪೇಗೌಡ ಒಂದು

ಕೆರೆಯ ಭಂಡಿಯನ್ನು ಬಿಟ್ಟಂತೆ ಮಾಗಡಿಯ ಶಾಸನವೊಂದು ತಿಳಿಸುತ್ತದೆ. ಇದಲ್ಲದೆ ಕನ್ನಡದ ಅರಸರು ಯಾತ್ರಾರ್ಥಿಗಳಾಗಿ ಹೊರದೇಶಗಳಿಗೆ ಹೋಗಿದ್ದಾಗ ಅದರ ಸ್ಮಾರಕಾರ್ಥವಾಗಿ ಕೆತ್ತಿಸಿದ್ದ ಹಲವಾರು ಶಾಸನಗಳು ಕನ್ನಡನಾಡಿನ ಹೊರಭಾಗಗಳಲ್ಲಿ ಕಂಡುಬಂದಿವೆ.

ಹೊಯ್ಸಳ ಅರಸರು ಗಯ ಕ್ಷೇತ್ರಕ್ಕೆ ಹೋಗಿದ್ದ ಘಟನೆಯನ್ನು ಅಲ್ಲಿ ಕಂಡುಬಂದಿರುವ ಕನ್ನಡ ಶಾಸನವೊಂದು ತಿಳಿಸಿದರೆ, ಅದೇ ವಂಶದ ಬಲ್ಲಾಳ ಕೊಲ್ಲಾಪುರದ ಶಾಸನವೊಂದರಿಂದ ತಿಳಿದುಬರುತ್ತದೆ. ಕನ್ನಡದ ಅನೇಕ ಶಾಸನಗಳು ತಮಿಳುನಾಡು, ಆಂಧ್ರ ಮತ್ತು

ಮಹಾರಾಷ್ಟ್ರಗಳಲ್ಲೂ ಪಾಶ್ಚಾತ್ಯ ದೇಶಗಳಲ್ಲಿರುವ ವಸ್ತು ಪ್ರದರ್ಶನಾಲಯ ಗಳಲ್ಲಿರುವ ಕಲ್ಲಿನ ವಿಗ್ರಹಗಳ ಮೇಲೂ ಕಂಡುಬಂದಿವೆ. ಭಾರತೀಯರ ಪ್ರಾಚೀನ ಚರಿತ್ರೆ ಬರೆಯಲು ಶಿಲಾ ಲೇಖನಗಳು ಅತ್ಯಂತ ನಂಬಿಕೆಗೆ ಅರ್ಹವಾದ ಮುಖ್ಯವಾದ ಸಾಧನಗಳು. ಈ ಎಲ್ಲ

ಶಾಸನಗಳಿಂದ ಅಂದಂದಿನ ರಾಜಕೀಯ, ಸಾಮಾಜಿಕ, ಚಾರಿತ್ರಿಕ, ಸಾಂಸ್ಕೃತಿಕ ವಿಷಯಗಳು ತಿಳಿಯುವುದು. ಅಲ್ಲದೆ, ಭಾಷೆ, ಲಿಪಿ, ಬರೆವಣಿಗೆಯ ರೀತಿ-ಮೊದಲಾದ ಅಂಶಗಳನ್ನು ತಿಳಿಯಲು ಇವು ಸಾಧನಗಳಾಗಿವೆ. (ಆರ್.ಸಿ.) ಕನ್ನಡ ಶೀಘ್ರಲಿಪಿ : ಕನ್ನಡ ಶೀಘ್ರಲಿಪಿ ಇಂಗ್ಲಿಷ್ ಶೀಘ್ರಲಿಪಿ ಯಂತೆಯೇ ಕನ್ನಡ ಬೆರಳಚ್ಚಿನ ಯಂತ್ರಗಳು ಬಳಕೆಗೆ ಬರುವುದಕ್ಕಿಂತ ಬಹಳ ಹಿಂದಿನಿಂದಲೇ ರೂಡಿಯಲ್ಲಿತ್ತು. ಇದರ ಇತಿಹಾಸ ಸು.1906ರಿಂದ ಪ್ರಾರಂಭವಾಗುತ್ತದೆ. ಆ ವರ್ಷದಲ್ಲಿ ರೆವರೆಂಡ್ ಬಿ.ಲೂಥಿ ಎಂಬುವರು ‘ಕನ್ನಡ ಹಿಡಿನುಡಿ’ ಎಂಬ ಸಂಕ್ಷಿಪ್ತ ಲಿಪಿಕ್ರಮವನ್ನು ರೂಡಿಸಿ, ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಮತ್ತು ಟ್ರಾಕ್ಟ್‌ ಡಿಪಾಸಿಟರಿ ಸಂಸ್ಥೆಯ ವತಿಯಿಂದ

ಪ್ರಕಟಿಸಿದ್ದರೆಂದೂ ಆದರೆ ಪ್ರಯೋಗದಲ್ಲಿ ಅದರಿಂದ ಕನ್ನಡ ಭಾಷಣಗಳನ್ನು ಮಾತನಾಡುವ ವೇಗಕ್ಕನುಸಾರವಾಗಿ ಬರೆದುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲವಾಗಿ ಅದು ಜನಪ್ರಿಯವಾಗಲಿಲ್ಲವೆಂದೂ ತಿಳಿದುಬರುತ್ತದೆ. ಸು. 1924ರಲ್ಲಿ ಚತುರ್ಭಾಷಾ ಶೀಘ್ರಲಿಪಿ

ವಿಶಾರದರಾದ ವೆಲ್ಲೂರಿನ ರಾವ್ ಸಾಹೇಬ್ ಶ್ರೀನಿವಾಸರಾಯರು ಕ್ಯಾನರೀಸ್ ಶಾರ್ಟ್ಹ್ಯಾಂಡ್ ಮ್ಯಾನ್ಯುಯಲ್ ಎಂಬ ಪ್ರಥಮ ಪುಸ್ತಕವನ್ನು ಪ್ರಕಟಿಸಿದರು. ಸ್ವಾತಂತ್ರ್ಯ ಸಂಗ್ರಾಮ ಪ್ರಖರವಾಗುತ್ತಿದ್ದ ಆ ಕಾಲದಲ್ಲಿ ಹಲವು ದೇಶಭಕ್ತರು ದೇಶಪ್ರೇಮದ ವಿಷಯದಲ್ಲಿ ಕೆಲವು ವೇಳೆ ಬ್ರಿಟಿಷರ ವಿರುದ್ಧ ಮಾಡುತ್ತಿದ್ದ ಭಾಷಣಗಳನ್ನು ವರದಿ ಮಾಡಬೇಕಾಗಿದ್ದುದರಿಂದ ಆಗಿನ ಮೈಸೂರು, ಹೈದರಾಬಾದು ಮತ್ತು ಬೊಂಬಾಯಿ

ಸರ್ಕಾರದವರು, ಪೊಲೀಸ್ ಅದಿಕಾರಿಗಳನ್ನು ವೆಲ್ಲೂರಿನ ಪೊಲೀಸ್ ತರಬೇತಿ ಶಾಲೆಗೆ ಕಳುಹಿಸುತ್ತಿದ್ದರು. ಅಲ್ಲಿ ಶ್ರೀನಿವಾಸರಾವ್ ಅವರಿಂದ ರಚಿತವಾದ ಕನ್ನಡ ಶೀಘ್ರಲಿಪಿಯನ್ನು ಬೋದಿsಸಲಾಗುತ್ತಿತ್ತು. ಅವರ ಶೀಘ್ರಲಿಪಿ ಕ್ರಮ ಇಂಗ್ಲಿಷ್ ಭಾಷೆಗೆ ಸೂಕ್ತವಾದ ಪಿಟ್ಮನ್ರ

ಕ್ರಮದಂತೆಯೇ ಇತ್ತು. ಅಲ್ಲದೆ ಕನ್ನಡಕ್ಕೆ ಹೊಂದಿಸಲು ವಿಪುಲಸೂತ್ರಗಳನ್ನು ರೂಪಿಸಿ ಕೊಂಡಿದ್ದರೂ ಕೆಲವು ಪದಗಳ ಶೀಘ್ರಲಿಪಿಯ ವಿನ್ಯಾಸ ತೊಡಕಾಗಿದ್ದರಿಂದ ಕನ್ನಡ ಭಾಷಣಗಳನ್ನು ಪುರ್ಣವಾಗಿ ಅಕ್ಷರಶಃ ಬರೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವೇಗ ಸಾಲುತ್ತಿರಲಿಲ್ಲ.

ಈ ಕಾರಣದಿಂದ 1933ರಲ್ಲಿ ಮೈಸೂರು ನ್ಯಾಯವಿಧಾಯಕ ಸಭೆಯ ಮುಖ್ಯ ವರದಿಗಾರರಾಗಿದ್ದ ಎನ್. ದೇವರಾವ್ ಅವರು ಪಿಟ್ಮನ್ ಪದ್ಧತಿಯಿಂದ ಬಿನ್ನವಾದ ತಮ್ಮದೆ ಆದ ಶೀಘ್ರಲಿಪಿಯನ್ನು ರಚಿಸಿ, ಕೆಲವರಿಗೆ ಬೋದಿಸಿ, ತರಪೇತು ಕೊಟ್ಟರು. ಮೈಸೂರು ಮತ್ತು

ಬೊಂಬಾಯಿ ಸರ್ಕಾರಗಳು ಇದಕ್ಕೆ ಮನ್ನಣೆ ಇತ್ತುವು. ದೇವರಾಯರು ರಚಿಸಿದ ‘ಎ ಮ್ಯಾನ್ಯುಯಲ್ ಆಫ್ ಕನ್ನಡ ಶಾರ್ಟ್ಹ್ಯಾಂಡ್’ ಪುಸ್ತಕವನ್ನು ಮೈಸೂರು ಸರ್ಕಾರ ಪ್ರಕಟಿಸಿತು. ಈ ಶೀಘ್ರಲಿಪಿ ಮೈಸೂರು ಪ್ರಜಾಪ್ರತಿನಿದಿ ಸಭೆ ಮತ್ತು ನ್ಯಾಯವಿಧಾಯಕ ಸಭೆ

ಮೊದಲಾದೆಡೆಗಳಲ್ಲಿ ಬಳಕೆಯಾಗುತ್ತಿತ್ತು. ದೇವರಾಯರ ಶೀಘ್ರಲಿಪಿಯನ್ನು ಕಲಿತವರು ಇಂಗ್ಲಿಷ್ ಶೀಘ್ರಲಿಪಿಯನ್ನು ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಕಾರಣವೇನೆಂದರೆ ಪಿಟ್ಮನ್ನರ ಇಂಗ್ಲಿಷ್ ಶೀಘ್ರಲಿಪಿಯ ಅಕ್ಷರಗಳಿಗೂ ದೇವರಾಯರ ಕನ್ನಡ ಶೀಘ್ರಲಿಪಿಯ ಅಕ್ಷರಗಳಿಗೂ ಬಹಳ ವ್ಯತ್ಯಾಸವಿತ್ತು. ಇಂಗ್ಲಿಷ್ ಶೀಘ್ರಲಿಪಿಯ

ಪ ಅಕ್ಷರ ದೇವರಾಯರ ಶೀಘ್ರಲಿಪಿಯ ಪ್ರಕಾರ ಷ ಕಾರವನ್ನು ಸೂಚಿಸುವುದು. ಹೀಗೆ ಅಕ್ಷರಗಳಲ್ಲಿಯೇ ಅನೇಕ ವ್ಯತ್ಯಾಸಗಳಿದ್ದವು. ಈ ನ್ಯೂನತೆಯನ್ನು ಮನಗಂಡು, ಬ್ರೈಟ್ ವಾಣಿಜ್ಯ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಕೆ.ಸೀತಾರಾಮರಾವ್ ಮತ್ತು ಅವರ

ಸಹೋದರರಾದ ಎಸ್.ಸುಬ್ಬರಾವ್ ಅವರು ಇಂಗ್ಲಿಷ್ ಶೀಘ್ರಲಿಪಿಯಷ್ಟೇ ವೇಗವನ್ನು ಗಳಿಸಬಹುದಾದ ಒಂದು ಪದ್ಧತಿಯನ್ನು ರಚಿಸಲು ಉದ್ದೇಶಿಸಿದರು. ಸು.1944ರ ವೇಳೆಗೆ ಸೀತಾರಾಮರಾವ್ ಅವರು ಸುಪ್ರಸಿದ್ಧ ಪಿಟ್ಮನ್ ಪದ್ಧತಿಯನ್ನು ಮೂಲಾಧಾರವಾಗಿಟ್ಟುಕೊಂಡು

ಇಂಗ್ಲಿಷ್ ಒಕ್ಕಣೆಯನ್ನೊಳಗೊಂಡ ಕನ್ನಡ ಶೀಘ್ರಲಿಪಿ ಪುಸ್ತಕವೊಂದನ್ನು ಪ್ರಕಟಿಸಿದರು. ಈ ಪದ್ಧತಿ ಆ ಕಾಲಕ್ಕೆ ಕೊರತೆಯಿಂದ ಮುಕ್ತವಾಗಿದ್ದರೂ ಹಲವರು ಅಭ್ಯಾಸಮಾಡಿ ಆಚರಣೆಗೆ ತಂದಿದ್ದರೂ ಪ್ರೋತ್ಸಾಹದ ಅಭಾವದಿಂದಾಗಿ ವ್ಯಾಪಕವಾಗಿರಲಿಲ್ಲ. ನಲವತ್ತರ ದಶಕದ

ಅಂತ್ಯದ ಹೊತ್ತಿಗೆ ಅಂದಿನ ಮೈಸೂರು ಸರ್ಕಾರದ ಪ್ರಜಾಪ್ರತಿನಿದಿ ಸಭೆ ಸೀತಾರಾಮರಾಯರ ಪದ್ಧತಿಯನ್ನು ಅನುಸರಿಸುವ ಕನ್ನಡ ಶೀಘ್ರಲಿಪಿಕಾರರನ್ನೂ ನೇಮಿಸಿಕೊಳ್ಳಬಹುದೆಂದು ಒಂದು ನಿರ್ಣಯವನ್ನು ಕೈಕೊಂಡಿತ್ತು. ಅಂದಿನಿಂದ ಸೀತಾರಾಮರಾಯರ ಕನ್ನಡ

ಶೀಘ್ರಲಿಪಿ ದಿನೇ ದಿನೇ ಪ್ರಾಮುಖ್ಯಕ್ಕೆ ಬರಲು ಪ್ರಾರಂಭವಾಯಿತು. ತತ್ಪರಿಣಾಮವಾಗಿ ಕನ್ನಡ ಶೀಘ್ರಲಿಪಿಗೆ ಸಂಬಂದಿಸಿದ ಪುಸ್ತಕಗಳು ಅಲ್ಲೊಂದು ಇಲ್ಲೊಂದರಂತೆ ಇಣುಕತೊಡಗಿದ್ದವು. 1969 ಮತ್ತು 1972ರ ವೇಳೆಗೆ ಬೆಂಗಳೂರಿನ ಸಿದ್ಧರಾಜು ಮತ್ತು ಹೆಬ್ಬಾರ್ ಅವರು

ತಮ್ಮ ಪುಸ್ತಕಗಳನ್ನು ಈ ದಿಶೆಯಲ್ಲಿ ಕ್ರಮವಾಗಿ ಹೊರತಂದರು. 1974ರಲ್ಲಿ ಸೀತಾರಾಮರಾಯರು ತಮ್ಮ ಕನ್ನಡ ಶೀಘ್ರಲಿಪಿಯ ಪುಸ್ತಕದ ಸರ್ವ ಹಕ್ಕನ್ನೂ ಕರ್ನಾಟಕ ವಾಣಿಜ್ಯ ವಿದ್ಯಾಶಾಲೆಗಳ ಸಂಘಕ್ಕೆ ಮಾರಿಬಿಟ್ಟರು. ಈ ಸಂಘ ಹೆಬ್ಬಾರ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ಏರ್ಪಡಿಸಿ, ಕನ್ನಡ ಶೀಘ್ರಲಿಪಿಯ ಪಠ್ಯಪುಸ್ತಕವನ್ನು

ರಚಿಸಿ ಪ್ರಕಟಿಸಿತು. ರಾಜ್ಯದ ಹಲವು ವಾಣಿಜ್ಯ ಶಿಕ್ಷಣ ಸಂಸ್ಥೆಗಳು ಈ ಪದ್ಧತಿಯನ್ನು ಅನುಸರಿಸಿದವು. ವಿದ್ಯಾಇಲಾಖೆ ಪ್ರತಿವರ್ಷವೂ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸುತ್ತಿದೆ. (ಎಸ್.ಆರ್.,ಬಿ.ಎಸ್.ಬಿ.)