ಮೂಲದೊಡನೆ ಪರಿಶೀಲಿಸಿ
ಕಬ್ಬಿಣ ಯುಗ : ಗ್ರೀಕ್ ಪುರಾಣಗಳ ಪ್ರಕಾರ ಮಾನವ ಯುಗಗಳ ಪೈಕಿ ಕೊನೆಯದು. ಪುರಾತತ್ತ್ವದೃಷ್ಟಿಯಿಂದ ಕೂಡ ಇದು ಕಲ್ಲಿನ ಮತ್ತು ಕಂಚಿನ ಯುಗಗಳ ಅನಂತರದ, ಕೊನೆಯ ಆದರೂ ಪ್ರಮುಖವಾದ, ಯುಗ, ಪ್ರಾಚ್ಯವಸ್ತು ಸಂಶೋಧಕರು ಪ್ರಾಚೀನ ಸಾಂಸ್ಕೃತಿಕ ನಿವೇಶನಗಳನ್ನು ಶೋಧಮಾಡಿ ಅವುಗಳ ಶಾಸ್ತ್ರೀಯ ಅಗೆತಗಳಿಂದ ದೊರೆತ ಅವಶೇಷಗಳ ಪರೀಕ್ಷೆಯಿಂದ ಮಾನವನ ಈ ನಾನಾ ಸಂಸ್ಕೃತಿಗಳ ಯುಗಗಳನ್ನು ಗುರುತಿಸಿದ್ದಾರೆ. ಆಯಾ ಸಂಸ್ಕೃತಿಗಳ ವಿಶಿಷ್ಟ ಲಕ್ಷಣಗಳಿಂದ ಜಾಗತಿಕ ಸಂಸ್ಕೃತಿ ವನ್ಯಸ್ಥಿತಿಯಿಂದ ಕ್ರಮೇಣ ಕಬ್ಬಿಣಯುಗಕ್ಕೆ ಮುಟ್ಟುವ ವೇಳೆಗೆ ಅತ್ಯುನ್ನತ ಮಟ್ಟವನ್ನು ಮುಟ್ಟಿತೆಂದು ಉತ್ಕ್ರಾಂತಿವಾದದ ತತ್ತ್ವದ ಆಧಾರದ ಮೇಲೆ ಪುರಾತಜ್ಞರು ಹೇಳುತ್ತಾರೆ. ಮೊದಲು ಮಾನವರು ಕಾಡುಗಲ್ಲುಗಳಿಂದ ಆಯುಧಗಳನ್ನು ಮಾಡಿ ಅವುಗಳಿಂದ ಬೇಟೆಯಾಡುತ್ತ, ಅಡವಿಯಲ್ಲಿ ಕಾಡುಮೃಗಗಳ ಜೊತೆಯಲ್ಲಿ ಇದ್ದು ತಮ್ಮ ಉಪಜೀವನ ಸಾಗಿಸುತ್ತಿದ್ದರು. ಮುಂದೆ ಅವರು ಕಲೆಗಳಲ್ಲಿ ನುರಿತು, ನುಣುಪಾದ ಕಲ್ಲಿನ ಸಾಮಗ್ರಿಗಳನ್ನು ಬಳಕೆಗೆ ತಂದುಕೊಂಡು ಜೀವನದ ಮಟ್ಟವನ್ನು ಹೆಚ್ಚಿಸಿಕೊಂಡರು. ಕಾಲಕ್ರಮದಲ್ಲಿ ಕಲ್ಲುಗಳಿಂದಲೂ ಖನಿಜಗಳಿಂದಲೂ ಧಾತುಗಳನ್ನು ಶೋಧಿಸಿ ಅವುಗಳಿಂದ ಬಗೆಬಗೆಯ ಉಪಕರಣಗಳನ್ನು ಮಾಡಿ ಉಪಯೋಗಿಸುವ ಕಾಲ ಪ್ರಾಪ್ತವಾಯಿತು. ಪಶ್ಚಿಮ ಏಷ್ಯ ಮತ್ತು ಆಗ್ನೇಯ ಏಷ್ಯಗಳಲ್ಲಿ ಕಬ್ಬಿಣ ಯುಗ ಸಂಪುರ್ಣವಾಗಿ ಬಳಕೆಗೆ ಬಂದದ್ದು-ಕಂಚಿನ ಉಪಕರಣಗಳ ಮತ್ತು ಆಯುಧಗಳ ಬದಲು ಕಬ್ಬಿಣವೇ ಬಂದದ್ದು-ಪ್ರ್ರ.ಶ.ಪು. ಸು. 1200ರಲ್ಲಿ. ಆದರೆ ಅದಕ್ಕೂ ಮುಂಚೆಯೂ ಕಬ್ಬಿಣದ ಬಳಕೆಯಿತ್ತು ಎಂದು ಹೇಳಲಾಗಿದೆ. ಆಗ ಬಳಕೆಯಲ್ಲಿದ್ದುದು ಬಹುತೇಕ ಉಲ್ಕಾಪಾತದ ಕಬ್ಬಿಣ, ಕಂದುಕಂಚಿನಿಂದ ಭಿನ್ನವಾದ ಕಬ್ಬಿಣದ ಗುಣಗಳ ಸ್ಪಷ್ಟ ಅರಿವು ಆಗಿನ ಜನಕ್ಕೆ ಇನ್ನೂ ಆಗಿರಲಿಲ್ಲ. ಪ್ರಯೋಗಗಳಿಂದಲೂ ಆಕಸ್ಮಾತ್ತಾಗಿಯೂ ಅವರು ಇವನ್ನು ಕ್ರಮೇಣ ಅರಿತುಕೊಂಡರು.
ಕಬ್ಬಿಣ ಯುಗೀನ ಸಂಸ್ಕೃತಿಯನ್ನು ಪೌರ್ವಾತ್ಯ ವಲಯದ ಪ್ರಾಕೃತಿಕ ಸಂಪತ್ತಿನಿಂದ ಮಾನವ ಸಾಧಿಸಿದ ಪುರೋಗಾಮಿತ್ವದ ಹೆಗ್ಗುರುತೆನ್ನಬಹುದು. ತಾಮ್ರದ ಅದಿರಿಗಿಂತ ಕಬ್ಬಿಣದ ಅದಿರು ಪ್ರಕೃತಿಯಲ್ಲಿ ಹೇರಳವಾಗಿ ಮತ್ತು ಹೆಚ್ಚು ಪ್ರದೇಶಗಳಲ್ಲಿ ದೊರಕುತ್ತಿದ್ದರೂ ತಾಮ್ರ-ಕಂಚುಗಳು ಬಳಕೆಗೆ ಬಂದ ಬಹುಕಾಲಾನಂತರವೇ ಮೊತ್ತ ಮೊದಲಿಗೆ ಪಶ್ಚಿಮ ಏಷ್ಯದ ಕೆಲವು ಪ್ರದೇಶಗಳಲ್ಲಿ, ಮುಖ್ಯವಾಗಿ ಕಪ್ಪುಸಮುದ್ರದ ದಕ್ಷಿಣ ತೀರದಲ್ಲಿ, ಕಬ್ಬಿಣದ ಉಪಯೋಗವನ್ನು ಕಂಡು ಹಿಡಿದುದಾಗಿ ತಿಳಿದು ಬರುತ್ತದೆ. ಆಕಾಶದಿಂದ ಉಲ್ಕಾಪಾತಗಳ ರೂಪದಲ್ಲಿ ಬೀಳುತ್ತಿದ್ದ ಕಬ್ಬಿಣವನ್ನು ಆಭರಣ ವಸ್ತುಗಳನ್ನಾಗಿ ಮೆಸೊಪೊಟೇಮಿಯ, ಈಜಿಪ್ಟ್ ಮುಂತಾದ ಪ್ರಾಚೀನ ನಾಗರಿಕತೆಗಳಲ್ಲಿ ಉಪಯೋಗಿಸುತ್ತಿದ್ದ ಮಾಹಿತಿಗಳು ದೊರಕಿವೆ. ಉಲ್ಕಾಪಾತ ಮೂಲದ ಕಬ್ಬಿಣವನ್ನು ಸುಮೇರಿಯನ್ನರು ಸ್ವರ್ಗದ ಲೋಹವೆಂದೂ ಈಜಿಪ್ಷಿಯನ್ನರು ಆಕಾಶದಿಂದ ಬಂದ ಕಪ್ಪು ತಾಮ್ರವೆಂದೂ ತಮ್ಮ ಬರೆವಣಿಗೆಗಳಲ್ಲಿ ಕರೆದಿರುವುದು ಗಮನಾರ್ಹ. ಮೆಸೊಪೊಟೇಮಿಯದ ಟೆಲ್ಅಸ್ಮಾರ್ ಮತ್ತು ಮಾರಿ, ಸಿರಿಯದ ಛಗರ್ ಬಜಾರ್ ನೆಲೆಗಳಲ್ಲಿ ಪ್ರ.ಶ.ಪು. 2500ರ ಸುಮಾರಿಗೆ ನಿರ್ದೇಶಿಸಬಹುದಾದ ಪದರಗಳಿಂದ ಇದ್ದಲಿನ ಕುಲುಮೆಗಳಲ್ಲಿ ಕರಗಿಸಿದ ಕೀಳ್ದರ್ಜೆಯ ಕಬ್ಬಿಣದಿಂದ ಮಾಡಲಾದ ವಸ್ತುಗಳು ದೊರಕಿವೆ. ಚಿನ್ನದ ಪಟ್ಟಿಯುಳ್ಳ ಸುಂದರವಾದ ಕಬ್ಬಿಣದ ಚಾಕುವೊಂದು ಆನಟೋಲಿಯದ (ಈಗಿನ ತುರ್ಕಿ) ಅಲಾಕಾ ಹುಯುಕ್ ನೆಲೆಯಲ್ಲಿ ದೊರಕಿದೆ.
ಪ್ರ.ಶ.ಪು. 2ನೆಯ ಸಹಸ್ರಮಾನದ ಪ್ರಾರಂಭದಲ್ಲಿ ಹಿಟ್ಟೈಟ್ ಸಾಮ್ರಾಜ್ಯ ಪ್ರಬಲಿಸಿದಾಗ ನೆರೆಯ ಪ್ರದೇಶವಾದ ಆರ್ಮೇನಿಯ ಪ್ರಾಂತ್ಯದಲ್ಲಿ ವಿಶೇಷವಾಗಿದ್ದ ಕಬ್ಬಿಣದ ಅದಿರನ್ನು ಉಪಯೋಗಿಸಿಕೊಂಡು ಕಬ್ಬಿಣದ ಲೋಹವಿದ್ಯೆ ಬೆಳೆಯಲಾರಂಭಿಸಿತು. ಪ್ರ.ಶ. ಸು. 1900ರಲ್ಲಿ ಮೆದು ಕಬ್ಬಿಣವನ್ನು (ರಾಟ್ ಐರನ್) ತಯಾರಿಸಲಾಗುತ್ತಿತ್ತು. ಪ್ರ.ಶ.ಪು. 2ನೆಯ ಸಹಸ್ರಮಾನದ ಉತ್ತರಾರ್ಧದಲ್ಲಿ ನಿಜವಾದ ಕಬ್ಬಿಣಯುಗದ ತಂತ್ರಗಳೆಲ್ಲವೂ ಬಳಕೆಯಲ್ಲಿದ್ದವು.
ಮೊದಮೊದಲು ಕಬ್ಬಿಣ ಲೋಹವಿದ್ಯೆ ಹಿಟ್ಟೈಟ್ ಜನಾಂಗದವರಲ್ಲಿ ಗುಪ್ತವಾಗಿ ಉಳಿದಿತ್ತು. ಈ ಲೋಹದ ಆಯುಧಗಳು ಯುದ್ಧದಲ್ಲಿ ಬಹಳ ಪರಿಣಾಮಕಾರಿಗಳಾಗಿದ್ದುದ ರಿಂದ ಅವರು ಈ ಗುಟ್ಟನ್ನು ಇತರರಿಗೆ ಬಿಟ್ಟುಕೊಡಲಿಲ್ಲ. ತಮ್ಮ ಮಿತ್ರವರ್ಗಕ್ಕೆ ಸೇರಿದ ಈಜಿಪ್ಟಿನ ಮತ್ತಿತರ ರಾಜಮನೆತನಗಳಿಗೆ ಕಬ್ಬಿಣದ ಬಾಕು ಮತ್ತು ಆಭರಣಗಳನ್ನು ಅಮೂಲ್ಯವಾದ ಉಡುಗೊರೆಗಳಾಗಿ ಅಕರ್Àಸುತ್ತಿದ್ದುದಕ್ಕೆ ಅನೇಕ ದಾಖಲೆಗಳು ದೊರಕಿವೆ. ಟುಟಾನ್ಖಮುನ್ನನ ಸಮಾಧಿಯಲ್ಲಿ ದೊರಕಿರುವ, ಕಂಚಿನ ಹಿಡಿಯುಳ್ಳ, ಚಿನ್ನ ಮತ್ತು ಹರಳುಗಳಿಂದ ಅಲಂಕೃತವಾದ ಬಾಕು ಹಿಟ್ಟೈಟ್ ಪಂಗಡಕ್ಕೆ ಸೇರಿದ್ದ, ನೆರೆಯ ಪ್ರದೇಶವಾದ ಸಿರಿಯದಲ್ಲಿ ಆಳುತ್ತಿದ್ದ ಮಿಟಾನಿ ರಾಜರ ಬಳುವಳಿಯಾಗಿದ್ದಿರಬೇಕೆಂದು ಟೆಲ್ ಅಮಾರ್ನಾದ ಲೇಖನಗಳು ತಿಳಿಸುತ್ತವೆ. ಮೂರನೆಯ ಹಟ್ಟೂ ಸಿಲಿಸ್ ದೊರೆ (ಪ್ರ.ಶ.ಪು. 1281-1260) 2ನೆಯ ರ್ಯಾಮ್ಸೆಸ್ ದೊರೆಗೆ ಬರೆದ ಪತ್ರವೊಂದರಲ್ಲಿ ಕಬ್ಬಿಣದ ಬಾಕುವೊಂದರ ಉಲ್ಲೇಖವಿರುವುದಲ್ಲದೆ, ಉರರ್ಟುಸರೋವರದ ಬಳಿ ಆರ್ಮೇನಿಯ ಪ್ರಾಂತ್ಯದ ಹೊರಗೆ ಕಬ್ಬಿಣದ ತಯಾರಿಕೆಯನ್ನು ನಿಷೇಧಿಸಿರುವ ಸಂಗತಿಯ ಪ್ರಸ್ತಾಪವಿದೆ. ಇದೇ ಸುಮಾರಿನಲ್ಲಿ ಹಿಟ್ಟೈಟರ ಮಿತ್ರವರ್ಗಕ್ಕೆ ಸೇರಿದ ಫಿಲಿಸ್ಟೀನರು ಸಿರಿಯ ಪ್ರದೇಶದಲ್ಲಿ ಕಬ್ಬಿಣದ ನಿಕ್ಷೇಪಗಳನ್ನು ರೂಢಿಸಲು ಬೇಕಾದ ತಾಂತ್ರಿಕ ಜ್ಞಾನವನ್ನು ಹಿಟ್ಟೈಟರಿಂದ ದೊರಕಿಸಿಕೊಂಡುದಕ್ಕೆ ಆಧಾರಗಳಿವೆ. ಪ್ರ.ಶ.ಪು. 1300ರ ಸುಮಾರಿನಲ್ಲಿ ಸಿರಿಯದ ರಾಸ್ ಷಮ್ರಾ ನೆಲೆಯಲ್ಲಿ ಚಿನ್ನದಿಂದಲಂಕೃತವಾದ ಹೆಚ್ಚು ನಿಕಲ್ ಬೆರಕೆಯುಳ್ಳ ಕಬ್ಬಿಣದ ಬಾಕುವೊಂದು ಸಿಕ್ಕಿದೆ. ಇದು ಟುಟಾನ್ ಖಮುನ್ ಸಮಾಧಿಯ ಬಾಕುವನ್ನು ಹೋಲುತ್ತದೆ.
ಪ್ರ.ಶ.ಪು. 12ನೆಯ ಶತಮಾನದಲ್ಲಿ ಸಮುದ್ರ ಜನರ ದಾಳಿಗಳಿಂದ ಹಿಟ್ಟೈಟ್ ಸಾಮ್ರಾಜ್ಯದ ಪತನವಾದ ಅನಂತರ ಕಬ್ಬಿಣದ ಲೋಹಗಾರಿಕೆ ಪಶ್ಚಿಮ ಏಷ್ಯದ ಅನೇಕ ಭಾಗಗಳಲ್ಲಿ ಹರಡಿತು. ಇದರ ಫಲವಾಗಿ ಕಬ್ಬಿಣದ ಉಪಕರಣಗಳನ್ನು ವ್ಯವಸಾಯ, ಕೈಗಾರಿಕೆ ಮತ್ತಿತರ ನಿತ್ಯಜೀವನ ರಂಗಗಳಲ್ಲಿ ಬಳಸುವಂತಾಯಿತು. ಪ್ರ.ಶ.ಪು. 1180ರಲ್ಲಿ ಪ್ಯಾಲೆಸ್ಟೀನಿನ ಗೆರಾರಿನಲ್ಲಿ ದೊಡ್ಡದೊಂದು ಕಬ್ಬಿಣದ ಕಾರ್ಖಾನೆ ಸ್ಥಾಪಿತವಾಗಿತ್ತು. ಅನಂತರ ಅಸ್ಸೀರಿಯನ್ನರು ದೊಡ್ಡ ಪ್ರಮಾಣದಲ್ಲಿ ಕಬ್ಬಿಣದ ಉತ್ಪಾದನೆ ಮಾಡಲಾರಂಭಿಸಿದರು. ಪ್ರ.ಶ.ಪು. 8ನೆಯ ಶತಮಾನಕ್ಕೆ ಸೇರುವ 2ನೆಯ ಸಾರ್ಗಾನ್ ದೊರೆಯ ಅರಮನೆಯಲ್ಲಿ 3,00,000 ಪೌಂಡು ತೂಕದ ಕಬ್ಬಿಣದ ಗಟ್ಟಿಗಳನ್ನು ಶೇಖರಿಸಲಾಗಿತ್ತು. ಬಹುಶಃ ಈ ಸುಮಾರಿನಲ್ಲಿ ಈಜಿಪ್ಟಿನಲ್ಲೂ ಕಬ್ಬಿಣ ಲೋಹವಿದ್ಯೆ ಬಳಕೆಗೆ ಬಂದಿತು. ನೈಋತ್ಯ ಇರಾನಿನಲ್ಲಿ ಸಿಯಾಲ್ಕ್ ಎ ಮತ್ತು ಬಿ ಸಂಸ್ಕೃತಿಗಳ ಕಾಲದಲ್ಲಿ ಪ್ರಾರಂಭವಾಗಿ ಪ್ರ.ಶ.ಪು. ಮೊದಲ ಸಹಸ್ರಮಾನದ ಆರಂಭದಲ್ಲಿ ಕಬ್ಬಿಣದ ಉಪಯೋಗ ಪ್ರಬಲವಾಯಿತು. ಈ ಮಾರ್ಗವಾಗಿ ಕಬ್ಬಿಣದ ಉಪಯೋಗ ಭಾರತದ ಗಡಿಗೆ ಪ್ರ.ಶ.ಪು. 12ನೆಯ ಶತಮಾನದ ವೇಳೆಗೆ ಬಂದಿರಬಹುದು. ಉತ್ತರ ಪ್ರದೇಶದ ಅತ್ರಂಜಿಖೇರ, ರಾಜಸ್ಥಾನದ ನ್ಹೋ, ಧಾರವಾಡ ಜಿಲ್ಲೆಯ ಹಳ್ಳೂರು ಮುಂತಾದ ನೆಲೆಗಳಲ್ಲಿ, ಇಂಗಾಲ-14 ಪರಿಕ್ಷಾವಿಧಾನದಿಂದ ತಿಳಿದುಬಂದಿರುವಂತೆ ಪ್ರ.ಶ.ಪು. 11ನೆಯ ಶತಮಾನದಲ್ಲಿ ಕಬ್ಬಿಣ ಬಳಕೆಗೆ ಬಂತು. ಅನತಿಕಾಲದಲ್ಲೇ ಗಂಗಾನದೀ ಬಂiÀÄಲಿನಲ್ಲಿ ವರ್ಣರಂಜಿತ ಬೂದು ಮಡಕೆಗಳ ಮತ್ತು ಮಧ್ಯಭಾರತದಲ್ಲಿ ಕಪ್ಪು ಮತ್ತು ಕೆಂಪು ಮಡಕೆಗಳ ಸಂಸ್ಕೃತಿಗಳೊಂದಿಗೂ ದಕ್ಷಿಣ ಭಾರತದಲ್ಲಿ ಬೃಹತ್ಶಿಲಾ ಸಮಾಧಿ ಸಂಸ್ಕೃತಿಯೊಂದಿಗೂ ಕಬ್ಬಿಣದ ಬಳಕೆ ಪ್ರಬಲವಾಗಿ, ಜನರ ನಿತ್ಯಜೀವನ ಕ್ರಮದಲ್ಲಿ ಬೆರೆತು ಕ್ರಾಂತಿಕಾರಿ ಬದಲಾವಣೆಗಳನ್ನು ರೂಪಿಸಿದುದಲ್ಲದೆ ಚಾರಿತ್ರಿಕ ನಾಗರಿಕತೆಗಳಿಗೆ ನಾಂದಿಯಾಗಿ ಪರಿಣಮಿಸಿತು.
ಕ್ರೀಟ್ ದ್ವೀಪದಲ್ಲಿ ಪ್ರ.ಶ.ಪು. 2ನೆಯ ಸಹಸ್ರಮಾನದ ಕೊನೆಯ ಕಾಲದಲ್ಲಿ ಕಬ್ಬಿಣದ ಬಳಕೆ ಪ್ರಾರಂಭವಾಯಿತು. ಫೆಯಿಸ್ಟಾಸ್, ವಾಫಿಯೋ ಮತ್ತಿತರ ನೆಲೆಗಳಲ್ಲಿ ಪ್ರ.ಶ.ಪು. 1500-1200ರ ಕಾಲದ ಕಬ್ಬಿಣದ ಅವಶೇಷಗಳು ದೊರಕಿವೆ. ಕ್ರೀಟಿನಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪಗಳು ಹೆಚ್ಚಾಗಿಲ್ಲ. ಲೋಹಗಾರಿಕೆಗೆ ಆಮದಾದ ಕಬ್ಬಿಣವನ್ನೇ ಅವಲಂಬಿಸಬೇಕಾಗಿತ್ತು. ಡೆಂಡ್ರಾದ ಸಮಾಧಿಗಳಲ್ಲಿ ದೊರಕಿರುವವೇ ಗ್ರೀಸಿನ ಅತ್ಯಂತ ಪುರಾತನ ಕಬ್ಬಿಣದ ವಸ್ತುಗಳು. ಇವು ಪ್ರ.ಶ.ಪು. 13ನೆಯ ಶತಮಾನಕ್ಕೆ ಸೇರುತ್ತವೆ. ಪ್ರ.ಶ.ಪು. 12ನೆಯ ಶತಮಾನದಿಂದ ಕಬ್ಬಿಣ ಜನರಲ್ಲಿ ಹೆಚ್ಚಾಗಿ ಬಳಕೆಗೆ ಬಂತು. ದಕ್ಷಿಣ ರಷ್ಯದ ಕೋಬಾನ್ ಸಂಸ್ಕೃತಿ ಈ ಸುಮಾರಿನಲ್ಲೆ ಕಬ್ಬಿಣ ಬಳಸುತ್ತಿತ್ತು. ಈ ಎರಡು ಪ್ರದೇಶಗಳನ್ನು ಬಿಟ್ಟರೆ ಯುರೋಪಿನಲ್ಲಿ ಕಬ್ಬಿಣ ಯುಗ ಪ್ರ.ಶ.ಪು. 800ರ ಸುಮಾರಿನಲ್ಲಿ ಇಟಲಿ ಮತ್ತು ಮಧ್ಯಯುರೋಪು ಪ್ರದೇಶಗಳಲ್ಲಿ ಪ್ರಾರಂಭವಾಯಿತೆಂದು ಹೇಳಬಹುದು. ವಿವಿಧಪ್ರದೇಶಗಳಲ್ಲಿ ಕಬ್ಬಿಣ ಬೇರೆ ಬೇರೆ ಸಮಯಗಳಲ್ಲಿ ಬಳಕೆಗೆ ಬಂದುದರಿಂದ ಈ ಕಾಲಗಣನೆ ಯುರೋಪಿನ ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದಿಲ್ಲ. ಯುರೋಪಿನ ಕಬ್ಬಿಣ ಯುಗವನ್ನು ಪುರ್ವಕಾಲೀನ (ಪ್ರ.ಶ.ಪು. 800-400) ಮತ್ತು ಉತ್ತರ ಕಾಲೀನ (ಪ್ರ.ಶ.ಪು. 400-15) ಕಬ್ಬಿಣ ಯುಗಗಳೆಂದು ವಿಂಗಡಿಸಬಹುದಾಗಿದೆ. ಪ್ರ.ಶ.ಪು. 16-15ರಲ್ಲಿ ರೋಮನ್ ಆಕ್ರಮಣದೊಂದಿಗೆ ಆಲ್ಟ್‌್ಸ ಪ್ರದೇಶ, ಇಟಲಿ, ಫ್ರಾನ್ಸ್ ಮತ್ತು ಆಗ್ನೇಯ ಸ್ಪೇನ್ ಪ್ರದೇಶಗಳಲ್ಲಿ ಐತಿಹಾಸಿಕ ಯುಗ ಪ್ರಾರಂಭವಾಯಿತು. ಪುರ್ವಕಾಲೀನ ಕಬ್ಬಿಣ ಯುಗದಲ್ಲಿ ಇಟಲಿ ಮತ್ತು ಮಧ್ಯ ಯುರೋಪುಗಳಲ್ಲಿ ಕಬ್ಬಿಣದ ಬಳಕೆ ಹೆಚ್ಚಾಯಿತು. ಇಟಲಿಯ ಇಟ್ರುಸ್ಕನ್ ಸಂಸ್ಕೃತಿ ಸ್ಥಳೀಯ ಮತ್ತು ಹೊರಗಿನಿಂದ ವಲಸೆ ಬಂದ ಸಂಸ್ಕೃತಿಗಳ ಮಿಲನದಿಂದ ಹುಟ್ಟಿ ಫಿನೀಷಿಯದ ಮತ್ತು ಈಜಿಪ್ಟಿನ ಹಲವು ಲಕ್ಷಣಗಳಿಂದ ಕೂಡಿದೆ. ಈ ಸಂಸ್ಕೃತಿಯ ಹೆಗ್ಗುರುತುಗಳನ್ನು ಟಾಕಿರ್ವ್‌ನಿಯ, ವೇಯ್, ಪೆಟುಲೋಯಾ ಮುಂತಾದೆಡೆಗಳಲ್ಲಿಯ ಸಮಾಧಿಗಳಿಂದ ಗುರುತಿಸಬಹುದು. ಇಲ್ಲೂ ಇತರ ಸ್ಥಳಗಳಲ್ಲೂ ಇರುವ ಸಮಾಧಿಗಳಲ್ಲಿ ದೊರಕಿರುವ ಶವಸಂಸ್ಕಾರ ಸಂಬಂಧ ವಸ್ತುಗಳಿಂದ ಪೌರಸ್ತ್ಯ ದೇಶಗಳ ಪ್ರಭಾವಗಳನ್ನೂ ಸಂಸ್ಕೃತಿಯ ರೂಪುರೇಷೆಗಳನ್ನೂ ತಿಳಿಯಬಹುದು.
ಇಟಲಿಯ ಉತ್ತರ ಭಾಗದಲ್ಲಿ ಈ ಕಾಲದಲ್ಲಿ ವಿಲ್ಲನೋವನ್ ಸಂಸ್ಕೃತಿ ರೂಢಿಗೆ ಬಂತು. ಸರೋವರವಾಸಿಗಳ ಸಂಸ್ಕೃತಿ ಮತ್ತು ಶವಜಾಡಿ ಕ್ಷೇತ್ರ ಸಂಸ್ಕೃತಿಗಳ ಮಿಲನದಿಂದ ಪ್ರ.ಶ.ಪು. ಮೊದಲ ಸಹಸ್ರಮಾನದ ಪ್ರಾರಂಭದಲ್ಲಿ ಹುಟ್ಟಿದ ಈ ಕಂಚಿನ ಯುಗದ ಸಂಸ್ಕೃತಿಯಲ್ಲಿ ಕ್ರಮೇಣ ಕಬ್ಬಿಣದ ಬಳಕೆ ಆರಂಭವಾಯಿತು. ಕಾಲಕ್ರಮದಲ್ಲಿ ಇಟ್ರುಸ್ಕನ್ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿ ಅದರೊಂದಿಗೆ ಲೀನವಾಯಿತು. ಪ್ರ.ಶ.ಪು. 400ರಲ್ಲಿ ಕೆಲ್ಟ್‌ರ ದಾಳಿಗಳ ಫಲವಾಗಿ ಈ ಸಂಸ್ಕೃತಿಯ ಅಂತ್ಯವಾಯಿತು.
ಪುರ್ವ ಫ್ರಾನ್ಸಿನಿಂದ ಆಸ್ಟ್ರಿಯದ ವರೆಗೂ ಹರಡಿದ್ದ ಹಾಲ್ಸ್ಪಾಟ್ ಸಂಸ್ಕೃತಿ ಮಧ್ಯಯುರೋಪಿನ ಕಬ್ಬಿಣ ಯುಗದ ಸಂಸ್ಕೃತಿಗಳಲ್ಲಿ ಮುಖ್ಯವಾದುದು. ಪ್ರ.ಶ.ಪು. 5-2ನೆಯ ಶತಮಾನಗಳಲ್ಲಿ ಪ್ರಬಲವಾಗಿದ್ದ ಈ ಸಂಸ್ಕೃತಿ ಆಲ್ಟ್‌್ಸ ಪ್ರದೇಶಗಳಲ್ಲಿ ಪ್ರ.ಶ.ಪು. 400ರಲ್ಲಿ ಕೆಲ್ಟ್‌ರ ದಾಳಿಗಳಿಂದ ನಾಶವಾದರೂ ಕೆಲಭಾಗಗಳಲ್ಲಿ ಕ್ರಿಸ್ತಶಕದ ಆರಂಭದ ವರೆಗೂ ಉಳಿದಿತ್ತು. ಜರ್ಮನಿ, ಸೈಲೀಷಿಯ, ಬಾಲ್ಕನ್ ಪ್ರದೇಶ, ಹಂಗರಿ ಮತ್ತು ರೂಮೇನಿಯಗಳಲ್ಲೂ ಹಾಲ್ಸ್ಟಾಟ್ ರೀತಿಯ ಸಂಸ್ಕೃತಿಗಳು ಪ್ರ.ಶ.ಪು. 7-4ನೆಯ ಶತಮಾನಗಳವರೆಗೂ ರೂಢಿಯಲ್ಲಿದ್ದವು. ಪಶ್ಚಿಮ ಯುರೋಪಿನ ಇನ್ನು ಕೆಲವು ಪ್ರದೇಶಗಳಲ್ಲಿ ಕಂಚಿನ ಯುಗದ ಮತ್ತು ಹಾಲ್ಸ್ಟಾಟ್ ಸಂಸ್ಕೃತಿಗಳ ಸಂಪರ್ಕದಿಂದ ಕಬ್ಬಿಣ ಯುಗೀನ ಸಂಸ್ಕೃತಿಯೊಂದು ವಿಕಾಸಗೊಂಡಿತು. ಪ್ರ.ಶ.ಪು. 4ನೆಯ ಶತಮಾನದಲ್ಲಿ ಈ ಪ್ರದೇಶಗಳಲ್ಲಿ ಲಾಟೆನೆ ಸಂಸ್ಕೃತಿಯ ಅಂಶಗಳು ಕಾಣಿಸಿಕೊಂಡವು. ಉತ್ತರ ಫ್ರಾನ್ಸ್ ಮತ್ತು ಬ್ರಿಟಿಷ್ ದ್ವೀಪಗಳಲ್ಲಿ ಕಂಚಿನ ಯುಗದ ಸಂಸ್ಕೃತಿಗಳು ಮುಂದುವರಿಯುತ್ತಿದ್ದು, ಪ್ರ.ಶ.ಪು. 5ನೆಯ ಶತಮಾನದ ಅಂತ್ಯದಲ್ಲಿ ಕೆಲ್ಟರ ಆಕ್ರಮಣದಿಂದ ಅಲ್ಲಿಗೂ ಕಬ್ಬಿಣದ ಪ್ರವೇಶವಾಯಿತು.
ಪ್ರ.ಶ.ಪು. 5ನೆಯ ಶತಮಾನದ ಅಂತ್ಯಕಾಲದಲ್ಲಿ ಯುರೋಪಿನ ಅನೇಕ ಭಾಗಗಳಲ್ಲಿ ಕೆಲ್ಟ್‌ರ ಪ್ರಭಾವದಿಂದ ಉತ್ತರಕಾಲೀನ ಕಬ್ಬಿಣ ಯುಗ ಲಾ ಟೆನೆ ಸಂಸ್ಕೃತಿಯೊಂದಿಗೆ ಆರಂಭವಾಗುತ್ತದೆ. ಬ್ರಿಟನ್ನಿನಲ್ಲಿ ಈ ಕಾಲದ ಯುಗದ ಸಂಸ್ಕೃತಿಗಳನ್ನು ಎ, ಬಿ ಮತ್ತು ಸಿ ಎಂಬ ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಈ ಕಾಲದ ಐರೋಪ್ಯ ಸಂಸ್ಕೃತಿಗಳಲ್ಲಿ ಗ್ರೀಕ್ ಸಂಸ್ಕೃತಿ ಅಂಶಗಳನ್ನು ಹೋಲುವ ಮತ್ತು ಹಾಲ್ಸ್ಟಾಟ್ ಸಂಸ್ಕೃತಿಯ ರೀತಿಯಲ್ಲಿ ನಿರ್ಮಿತವಾದ ಕಲಾವಸ್ತುಗಳು ಕಾಣಬರುತ್ತವೆ. ಪ್ರಾಣಿಚಿತ್ರಣದಲ್ಲಿ ಸ್ಕಿಥಿಯನರ ಪ್ರಭಾವ ಎದ್ದು ಕಾಣುತ್ತದೆ. ಪಶ್ಚಿಮ ಸ್ವಿಟ್ಜಲೆರ್ಲ್‌ಂಡಿನಲ್ಲಿ ತಲೆದೋರಿದ ಈ ಸಂಸ್ಕೃತಿ ಕ್ರಮೇಣ ಡ್ಯಾನ್ಯೂಬ್ ಕಣಿವೆಯಲ್ಲೂ ಫ್ರಾನ್ಸ್ ಮತ್ತು ಬ್ರಿಟಿಷ್ ದ್ವೀಪಗಳಲ್ಲೂ ಹರಡಿ ರೋಮನರ ದಾಳಿಯ ಕಾಲದ (ಕ್ರಿಸ್ತಶಕೆಯ ಆರಂಭಕಾಲ)ವರೆಗೂ ಪ್ರಬಲವಾಗಿತ್ತು.ರೋಮನರ ದಾಳಿಗಳೊಂದಿಗೆ ಯುರೋಪಿನ ಹಲವಾರು ಪ್ರದೇಶಗಳಲ್ಲಿ ಇತಿಹಾಸ ಯುಗದ ಪ್ರಾರಂಭವಾಯಿತು. (ಬಿ.ಕೆ.ಜಿ.ಆರ್.ಎಸ್.ಪಿ.)
ಕಬ್ಬಿಣಲೋಹ ತಂತ್ರಗಾರಿಕೆ : ಲೋಹ ಪ್ರಾಚೀನತೆಯು ಪ್ರಪಂಚದ ಎಲ್ಲ ಪ್ರದೇಶÀಗಳಲ್ಲಿಯ ತಾಮ್ರ-ಶಿಲಾ (ಚಾಲ್ಕೋಲಿಥಿಕ್) ಸಂಸ್ಕೃತಿಗಳಷ್ಟು ಹಿಂದಿನದಾಗಿದೆ. ಭಾರತದಲ್ಲಿ ವಿಶೇಷವಾಗಿ ದಖನ್ದಲ್ಲಿಯೂ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿಯ ಅನೇಕ ಸ್ಥಳಗಳಲ್ಲಿಯೂ ಇಂತಹ ತಂತ್ರಗಾರಿಕೆಯ ಅವಶೇಷಗಳು ಕಂಡುಬರುತ್ತವೆ. ಪ್ರ.ಶ.ಪು.ಸು. 2ನೆಯ ಸಹಸ್ರಮಾನದಿಂದ ಹಿಡಿದು ಕಬ್ಬಿಣಯುಗದ ಪ್ರಾರಂಭದ ಕಾಲಾವಧಿ ಯವರೆಗೂ ಸಂಬಂಧಿಸಿದಂತೆ ಈ ಅವಶೇಷಗಳು ಇದ್ದಿರಬಹುದು ಎಂದು ತರ್ಕಿಸಲಾಗಿದೆ. ಗಣಿಗಾರಿಕೆ, ಅದಿರು ಸಂಗ್ರಹಿಸುವುದು, ಅದಿರಿನಿಂದ ಲೋಹವನ್ನು ಬೇರ್ಪಡಿಸುವುದು ಹಾಗೂ ಇನ್ನಿತರ ಕ್ಲಿಷ್ಟತರವಾದ ಕೆಲ ಹಂತಗಳಲ್ಲಿಯ ಕ್ರಮಗಳು ಲೋಹತಂತ್ರಗಾರಿಕೆಯಲ್ಲಿ ಅಡಕವಾಗಿವೆ. ಲೋಹ ಉಪಕರಣಗಳು ಬಳಕೆಯಲ್ಲಿ ಬಂದ ಅನಂತರ ಮಾತ್ರವೇ ಕೃಷಿ ಮತ್ತು ಪಶುಸಂಗೋಪನೆಗಳ ತನ್ನ ಕಾಂiÀರ್iವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ತನ್ನ ಸಂರಕ್ಷಣೆಯನ್ನು, ಆರ್ಥಿಕ ಸೌಖ್ಯವನ್ನು ಕೂಡ ಭದ್ರಪಡಿಸಿಕೊಳ್ಳಲು ಅವನಿಗೆ ಸಾಧ್ಯವಾಯಿತು. ಲೋಹತಂತ್ರಗಾರಿಕೆಯಲ್ಲಿ ಹಂತಗಳ ಕ್ರಮವನ್ನು ತಿಳಿದುಕೊಳ್ಳಬೇಕಾದರೆ ಈ ಕೆಳಕಂಡ ಕೆಲ ಅಂಶಗಳತ್ತ ಗಮನ ಹರಿಸಬೇಕಾಗುವುದು: (ಅ) ಅದಿರು ಲಭ್ಯ ಪ್ರದೇಶಗಳಲ್ಲಿ ಗಣಿಗಳು: (ಬ) ಲೋಹವನ್ನು ಬೇರ್ಪಡಿಸುವ ಇಲ್ಲವೆ ಅದಿರನ್ನು ಕರಗಿಸುವ ವಿಧಾನದ ಪುರ್ವಸಿದ್ಧತೆ: (ಕ) ವಿಶಿಷ್ಟ ರೀತಿಯ ಪ್ರಯೋಜನಗಳಿಗಾಗಿ ಬಳಸಲು ಬೇಕಾದ ಉಪಕರಣ ಉತ್ಪಾದನೆಗೆ: ಕಂಬಾರಿಕೆಯ ವಿಧಾನಗಳನ್ನು ರೂಪಿಸುವುದು. ಈ ಅಂಶಗಳು ತಾಮ್ರ ಮತ್ತು ಕಬ್ಬಿಣ ಈ ಎರಡೂ ಲೋಹಗಳ ತಯಾರಿಕೆಗೆ ಸಂಬಂಧಪಟ್ಟಿರುತ್ತವೆ. ತಾಮ್ರದ ತಯಾರಿಕೆ ಕರ್ನಾಟಕದಲ್ಲಿ ನವಶಿಲಾಯುಗದ ಒಂದು ಹಂತದಲ್ಲಿ ಪ್ರಾರಂಭ ವಾಯಿತು. ಕರ್ನಾಟಕದಲ್ಲಿ ಕಬ್ಬಿಣದ ನಿಕ್ಷೇಪ ವಿಪುಲವಾಗಿದೆ. ತಾಮ್ರದ ನಿಕ್ಷೇಪ ಅಷ್ಟಿಲ್ಲ. ಚಿತ್ರದುರ್ಗದ ಹತ್ತಿರದ ಇಂಗಳದಾಳು, ಕಲ್ಯಾಡಿ (ಹಾಸನ ಜಿಲ್ಲೆ), ದೇವಗೊಂಡನಹಳ್ಳಿ (ಚಿಕ್ಕಮಗಳೂರು), ತಿಂಥಿಣಿ (ಗುಲ್ಬರ್ಗ), ಸೋಮನಹಳ್ಳಿ (ಮೈಸೂರು), ಮಾಚನೂರು (ರಾಯಚೂರು), ಜಂಬಾನಿ (ಶಿವಮೊಗ್ಗ) ಹಾಗೂ ಬಳ್ಳಾರಿ ಜಿಲ್ಲೆಯ ನೈಋತ್ಯ ಭಾಗ ಈ ಸ್ಥಳಗಳಲ್ಲಿ ತಾಮ್ರದ ಅದಿರಿನ ನಿಕ್ಷೇಪಗಳಿವೆ. ತಾಮ್ರ ಅದಿರಿನ ಗಣಿಗಾರಿಕೆ ಇತ್ಯಾದಿ ಕೆಲಸಗಳು ನಡೆದ ಕುರುಹುಗಳಾದ ಅದಿರಿನ ಕಿಟ್ಟ ಅಥವಾ ಗಸಿ, ಶಾಖಕ್ಕೆ ಒಗ್ಗದ ಬಿರುಸು ಅದಿರು ಹಾಗೂ ಕಚ್ಚಾ ಅದಿರು ಇವು ಕಲ್ಯಾಡಿ ಗಣಿ ಪ್ರದೇಶದಲ್ಲಿ ಇಂದಿಗೂ ಕಂಡುಬರುತ್ತವೆ. ಚಿತ್ರದುರ್ಗ ಜಿಲ್ಲೆಯ ಇಂಗಳದಾಳದಲ್ಲಿ ಬೃಹತ್ಶಿಲಾಯುಗಕ್ಕೆ ಶವಸಂಸ್ಕಾರ ನೆಲೆಯೊಂದರಲ್ಲಿ ಅನುಕ್ರಮವಾಗಿ ನವಶಿಲಾಯುಗ, ತಾಮ್ರ-ಶಿಲಾಯುಗ ಹಾಗೂ ಕಬ್ಬಿಣ ಯುಗ ಸಂಸ್ಕೃತಿಗಳಿಗೆ ಸಂಬಂಧಪಟ್ಟ ಸ್ತರಗಳು ಕಂಡುಬರುತ್ತದೆ. ಇಲ್ಲಿಯ ಕಬ್ಬಿಣ ಸರಕುಗಳು ತೀರ ಜಂಗುಗಟ್ಟಿವೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿಯ ಕೊಮಾರನಹಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಗಳಲ್ಲಿಯೂ ರಾಯಚೂರು ಜಿಲ್ಲೆಯ ಪಿಕ್ಲಿಹಾಳ ಮತ್ತು ಮಸ್ಕಿಗಳಲ್ಲಿಯೂ ಧಾರವಾಡ ಜಿಲ್ಲೆಯ ಹಳ್ಳೂರು ಎಂಬಲ್ಲಿಯೂ ಹಾಗೂ ಇನ್ನಿತರ ಕೆಲವೆಡೆಗಳಲ್ಲಿಯೂ ಸೂಚಿಸುವ ಸ್ತರಗಳು ಕಂಡುಬರುತ್ತವೆ. ಹಾಗೆಯೇ ಬಿಜಾಪುರ ಜಿಲ್ಲೆಯ ಹಿಂಗಣಿ, ಇಂಗಳಗಿ ಹಾಗೂ ಬೆಳಗಾಂವಿ ಜಿಲ್ಲೆಯ ಕುಡಚಿ ಎಂಬಲ್ಲಿಯೂ ತಾಮ್ರ-ಶಿಲಾಯುಗ, ಬೃಹತ್ ಶಿಲಾಯುಗದ ನೆಲೆಗಳು ಕಂಡುಬಂದಿವೆ. ಆದ್ದರಿಂದ ತಾಂತ್ರಿಕ ಪ್ರಗತಿಗೆ ಸಂಬಂಧಿಸಿದ ಯಾವುದೇ ಅಧ್ಯಯನ ನಡೆದರೂ ತಾಮ್ರ-ಶಿಲಾಯುಗ ಮತ್ತು ಬೃಹತ್ ಶಿಲಾಯುಗಗಳನ್ನು ಒಟ್ಟಾಗಿ ಗಮನಿಸಬೇಕಾದುದು ಅವಶ್ಯ.
ಗಣಿಗಾರಿಕೆ: ಖನಿಜಗಳ ಪ್ರಯೋಜನ ಪಡೆಯಲು ಮಾನವ ನಡೆಸಿದ ಪ್ರಯತ್ನಗಳಿಗೆ ದೀರ್ಘ ಇತಿಹಾಸವಿದೆ. ದಕ್ಷಿಣ ಆಫ್ರಿಕದಲ್ಲಿ ಮಧ್ಯಶಿಲಾಯುಗದಲ್ಲಿ ವರ್ಣದ್ರವ್ಯ ಪಡೆಯಲ್ಲಿ ಕಬ್ಬಿಣದ ಅದಿರನ್ನು ತೋಡಿ ತೆಗೆಯುವ ಗಣಿ ಕೆಲಸ ನಡೆಯುತ್ತಿತ್ತು ಎಂದು ತೋರುತ್ತದೆ. ಆದ್ದರಿಂದ ಹಲವಾರು ಪ್ರಾಗೈತಿಹಾಸಿಕ ಜನ ಸಮುದಾಯಗಳಿಗೆ ಕಬ್ಬಿಣದ ಗಣಿಗಾರಿಕೆಯ ತಂತ್ರ ಪರಿಚಿತವಾಗಿತ್ತು ಎಂಬುದು ವಿಸ್ಮಯಕಾರಕವಾದ ಸಂಗತಿಯಾಗಿದ್ದರೂ ಈ ಗಣಿಗಾರಿಕೆಯಿಂದ ಕಬ್ಬಿಣದ ಲೋಹವನ್ನು ತಯಾರಿಸುವ ಉದ್ದೇಶವಿರಲಿಲ್ಲ. ತಾಮ್ರದ ಲೋಹವನ್ನೇ ಪಡೆಯಬೇಕೆಂಬ ಉದ್ದೇಶದಿಂದ ತಾಮ್ರದ ಅದಿರನ್ನು ಕರಗಿಸಿ ಲೋಹವನ್ನು ಪಡೆಯುವ ತಂತ್ರವು ಕಬ್ಬಿಣದ ಅದಿರನ್ನು ಕರಗಿಸಿ ಕಬ್ಬಿಣವನ್ನು ತಯಾರಿಸುವ ತಂತ್ರಕ್ಕಿಂತ ಹೆಚ್ಚು ಪ್ರಾಚೀನವಾದುದು. ಕಾರಣ ತಾಮ್ರವನ್ನು 12000ಗಳಿಗಿಂತಲೂ ಕಡಿಮೆ ಶಾಖದಲ್ಲಿ ಕರಗಿಸಬಹುದು. ಆದರೆ ಕಬ್ಬಿಣ 15400ಗಳಿಗಿಂತ ಹೆಚ್ಚಿನ ಶಾಖದಲ್ಲಿ ಮಾತ್ರ ಕರಗಬಲ್ಲದು. ಇಷ್ಟೊಂದು ಶಾಖವನ್ನು ಉತ್ಪನ್ನಗೊಳಿಸಬಲ್ಲಂತಹ ತಿದಿಗಳನ್ನು ತಯಾರಿಸುವುದು ಆ ಹಿಂದಿನ ಜನರಿಗೆ ಸಾಧ್ಯವಾಗಿರಲಿಲ್ಲವೆಂದು ತೋರುತ್ತದೆ.
ತಾಮ್ರ-ಶಿಲಾಯುಗದ ಜನರು ಗಣಿಗಾರಿಕೆಯ ಕೆಲಸದಲ್ಲಿ ಎರಡು ಬಗೆಯ ವಿಧಾನಗಳನ್ನು ಬಳಸುತ್ತಿದ್ದರು: ಹೆಚ್ಚು ಆಳವಿರದ ತಗ್ಗುಗಳ ಗಣಿ ಅಗೆಯುವುದು. ಅದಿರು ಇದ್ದ ದಿಕ್ಕಿನತ್ತ ಆಳವಾದ ತೋಡುದಾರಿಗಳನ್ನು ನಿರ್ಮಿಸುವುದು. ಅರಾವಳಿ ಬೆಟ್ಟಗಳ ಮಧ್ಯ ಮತ್ತು ನೈರುತ್ಯ ವಲಯಗಳಲ್ಲಿಯ ತಾಮ್ರದ ಅದಿರಿನ ಪಟ್ಟಿಯಲ್ಲಿ ಆಳವಿರದ ತಗ್ಗುಗಳ ಗಣಿಗಳಿವೆ. ರಾಜಸ್ತಾನದ ಖೇತ್ರಿ, ಅಂಬಾಜಿ ಹಾಗೂ ಇನ್ನಿತರೆಡೆಗಳಲ್ಲಿ ಆಳವಾದ ತೋಡುದಾರಿಗಳಿವೆ. ಆಳವಿರದ ತಗ್ಗುಗಣಿಗಳು ಆಳವಾದ ತೋಡುದಾರಿಯ ಗಣಿಗಳಿಗಿಂತ ಹೆಚ್ಚು ಪ್ರಾಚೀನವಾದವು. ಕರ್ನಾಟಕದಲ್ಲಿ ಕಲ್ಯಾಡಿ ಮತ್ತು ಚಿತ್ರದುರ್ಗಗಳ ತಾಮ್ರ ಅದಿರಿನ ವಲಯಗಳಲ್ಲಿ ಕೆಲವು ಪ್ರಾಚೀನ ಕಾರ್ಯಾಗಾರಗಳ ಕುರುಹುಗಳಿವೆ. ಇವುಗಳಲ್ಲಿಯ ಒಂದು ಗಣಿಯಲ್ಲಿ ಮರದ ಸನ್ನೆ ದೊರೆತಿದ್ದು, ಇದರ ಕಾಲಮಾನ ಪ್ರ.ಶ.ಪು.ಸು. 3ನೆಯ ಶತಮಾನವೆಂದು ಇಂಗಾಲ-14ರ ವಿಧಾನದಿಂದ ತಿಳಿದಿದೆ. ಬಿಸ್ನಾಳದಲ್ಲಿ ಬೃಹದಾಕಾರದ ಕಬ್ಬಿಣದ ಗಣಿಗಳ ತಗ್ಗುಗಳಿವೆ. ಇದರ ಬಳಿಯಲ್ಲಿಯೆ ಕಬ್ಬಿಣವನ್ನು ಕರಗಿಸಿದ ಒಂದು ಸ್ಥಳವೂ ಇದೆ. ಈ ಸ್ಥಳಗಳು ತೇರದಾಳ, ಹಳಿಂಗಳಿ ಬೃಹತ್ಶಿಲಾ ಗೋರಿಗಳ ನೆಲೆಯಿಂದ ಸು. 40 ಕಿಮೀ ದೂರದಲ್ಲಿದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ಆಳವಿರದ ತಗ್ಗು-ಗಣಿ ಪದ್ಧತಿ ಈ ಎರಡೂ ವಿಧಾನಗಳನ್ನು ಬಳಸಲಾಗುತ್ತಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷ್ಯಗಳು.
ಅದಿರು ಶುದ್ಧೀಕರಣ: ಲೋಹವನ್ನು ಬೇರ್ಪಡಿಸುವ ಮೊದಲು ಅದಿರನ್ನು ಪುಡಿಗೊಳಿಸಿ ಸುಡುವ ಕ್ರಿಯೆ ನಡೆಯಬೇಕಾಗುತ್ತದೆ. ಈ ಕ್ರಿಯೆಯಿಂದ ಬೇಗನೆ ಭಾಷ್ಪೀಭವ ಗೊಳ್ಳಬಲ್ಲಂತಹ ಗಂಧಕ ಮತ್ತು ಆರ್ಸೆನಿಕ್ (ಪಾಷಾಣ)ಗಳು ತಾಮ್ರದ ಅದಿರಿನಿಂದ ಬೇರ್ಪಡುತ್ತವೆ. ಅದಿರು ಶುದ್ಧೀಕರಣಕ್ಕಾಗಿ ಬಳಸುವ ಒಂದು ವಿಶಿಷ್ಟ ವಿಧಾನವೆಂದರೆ ಸಾಂದ್ರತೆ ಪ್ರತ್ಯೇಕೀಕರಣ ಪದ್ಧತಿ. ಈ ಕಾರ್ಯ ಅದಿರನ್ನು ಕರಗಿಸುವ ಸ್ಥಳದ ಹತ್ತಿರವೇ ನಡೆಯುತ್ತಿತ್ತು. ಬಹುತೇಕ ಇವು ಬೆಟ್ಟಗಳಲ್ಲಿ ಹರಿಯುವ ಹಳ್ಳಗಳ ಸಮೀಪದಲ್ಲಿಯೆ ಇರುತ್ತಿದ್ದವು. ರಾಜಸ್ತಾನದಲ್ಲಿಯ ಅಂಬುಜಾದ ಹತ್ತಿರ ಇಂತಹ ಸಾಂದ್ರತೆ ಪ್ರತ್ಯೇಕೀಕರಣದ ನೆಲೆಗಳು ಇವೆ. ಸೂಕ್ಷ್ಮವಾಗಿ ಶುದ್ಧೀಕರಿಸಲ್ಪಟ್ಟ ಅದಿರಿನ ಹುಡಿಯನ್ನು ಇಳಿಜಾರಿನಲ್ಲಿ ನೀರಿನೊಂದಿಗೆ ಹರಿಬಿಡುತ್ತಿದ್ದರು. ಈ ವಿಧಾನದಿಂದ ತಾಮ್ರದ ಆಮ್ಲಜನಕ ಧಾತು ಸಂಯುಕ್ತ ಈ ತಗ್ಗುಗಳಲ್ಲಿ ಸಂಗ್ರಹಗೊಳ್ಳುತ್ತಿತ್ತು. ಈ ವಿಧಾನ ಗಮನೀಯವಾದುದು. ವಿಶೇಷವಾಗಿ ಮಸ್ಕಿ, ಹೊಸಪೇಟೆ, ಕೊಪ್ಪಳ ಮುಂತಾದ ನೆಲೆಗಳನ್ನೊಳಗೊಂಡಂತೆ ಇಡೀ ಉತ್ತರ ಕರ್ನಾಟಕದಲ್ಲಿ ಕಲ್ಲಿನ ಬೆಟ್ಟದ ಭಾಗಗಳಲ್ಲಿ ಇಂತಹ ವಿಧಾನವನ್ನು, ಅಂದರೆ ಇಳಿಜಾರುಗಳ ವಿಧಾನವನ್ನು ಅನುಸರಿಸಿದ್ದ ಇನ್ನೂ ಹಲವಾರು ಸ್ಥಳಗಳು ಕಂಡುಬರಬಹುದು. ಈ ದೃಷ್ಟಿಯಿಂದ ಕಪ್ಪತಗುಡ್ಡದ ಶ್ರೇಣಿಗೂ ಔಚಿತ್ಯವಿದೆ. ಕೋಲಾರ ಜಿಲ್ಲೆಯ ಬನಹಳ್ಳಿಯಲ್ಲಿ ಬೃಹತ್ಶಿಲಾಯುಗ ಕಾಲದ ಜನರು ಕಬ್ಬಿಣ ಅದಿರನ್ನು ಚಿಕ್ಕಪುಟ್ಟ ತುಂಡುಗಳನ್ನಾಗಿ ಒಡೆಯುತ್ತಿದ್ದರು. ಇಂಥ ಸ್ಥಳದಲ್ಲಿಯ ಪ್ರಾಚೀನ ಕಾಲದ ಕುಲುಮೆಯ ಒಂದು ಕಲ್ಲಿನ ತುಂಡು ಮತ್ತು ರಸ್ತೆ ಜಲ್ಲಿಕಲ್ಲಿನ ಗಾತ್ರದ ಅದಿರು ಈ ಸಂಗತಿಗೆ ಪುರಾವೆಗಳಾಗಿವೆ. ಆದರೆ ಅದಿರನ್ನು ಶುದ್ಧೀಕರಣ ಉದ್ದೇಶದಿಂದ ಸುಟ್ಟಿದ್ದರ ಸಾಕ್ಷ್ಯಗಳು ಕರ್ನಾಟಕದಲ್ಲಿ ಇದುವರೆಗೂ ದೊರೆತಿರುವುದಿಲ್ಲ.
ಸ್ರಾವಕ ಕ್ರಿಯೆ (ದ್ರವಕಾರಿ): ಕರಗಿಸುವ ಕ್ರಿಯೆಯಲ್ಲಿ ಹೆಚ್ಚು ಪ್ರವಾಹಾತ್ಮಕ ಗುಣವನ್ನುಂಟು ಮಾಡುವುದಕ್ಕಾಗಿ ಸ್ರಾವಕ ವಸ್ತು ಅಥವಾ ದ್ರವ್ಯವನ್ನು ಸೇರಿಸುವುದೂ ಒಂದು ಮಹತ್ತ್ವದ ಹಂತ. ರಾಜಸ್ತಾನದ ಅಹಾರ್ ಎಂಬಲ್ಲಿ ಸಿಲಿಕ ಇವನ್ನು ತಾಮ್ರದ ಅದಿರಿನೊಂದಿಗೆ ಉದ್ದೇಶಪುರ್ವಕವಾಗಿ ಸೇರಿಸುತ್ತಿದ್ದುದು ಕಂಡುಬಂದಿದೆ. ಆದ್ದರಿಂದ ತಾಮ್ರ-ಶಿಲಾಯುಗದ ಹಂತದಲ್ಲಿ ತಾಮ್ರಲೋಹ ತಂತ್ರಗಾರಿಕೆ ಸಾಕಷ್ಟು ಮುಂದುವರೆದಿತ್ತು ಎಂದು ಹೇಳಬಹುದು.
ಸ್ರಾವಕ ಕ್ರಿಯೆಯನ್ನು ಬಳಸುತ್ತಿದ್ದುದರ ಕುರುಹುಗಳು ಕರ್ನಾಟಕದಲ್ಲಿ ಕಂಡುಬಂದಿಲ್ಲ. ಆದರೆ ಸ್ರಾವಕ ಕ್ರಿಯೆ ತಂತ್ರವು ಇವರಿಗೆ ಅಪರಿಚಿತವಾಗಿರಲಿಲ್ಲ. ಕಲ್ಯಾಡಿ ಗಣಿಗಳಲ್ಲಿಯ ಕಿಟ್ಟ ಇಲ್ಲವೆ ಗಸಿಯನ್ನು ವಿಶ್ಲೇಷಿಸಿದರೆ ತಾಮ್ರವನ್ನು ಶುದ್ಧಗೊಳಿಸಲು ಕಬ್ಬಿಣದ ಅದಿರನ್ನು ಸ್ರಾವಕ ವಸ್ತುವಾಗಿ ಬಳಸುತ್ತಿದ್ದುದು ಕಂಡುಬಂದಿದೆ. ಬನಹಳ್ಳಿಯಲ್ಲಿದ್ದ ಬೃಹತ್ಶಿಲಾಯುಗದ ಜನರು ಕಬ್ಬಿಣದ ಅದಿರನ್ನು ಶುದ್ಧಗೊಳಿಸಲು ಸುಣ್ಣವನ್ನು ಸ್ರಾವಕವಾಗಿ ಬಳಸುತ್ತಿದ್ದರು. ಬೃಹತ್ಶಿಲಾಯುಗದ ಹಂತದಲ್ಲಿ ತಾಂತ್ರಿಕತೆ ಪ್ರಬುದ್ಧಮಟ್ಟಕ್ಕೇರಿ ಬೆಳೆದಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಮಹಾರಾಷ್ಟ್ರದ ನಾಯ್ಕುಂಡ್ ಮತ್ತು ಗುಜರಾತಿನ ಧತ್ವಾ ಎಂಬ ಸ್ಥಳಗಳಲ್ಲಿ ಪ್ರಾಚೀನ ಕಾಲದ ಕುಲುಮೆಗಳಿವೆ. ನಾಯ್ಕುಂಡ್ನಲ್ಲಿ ಬೃಹತ್ಶಿಲಾಯುಗದ ಕುರುಹುಗಳೂ ಇವೆ. ಗುಜರಾತದ ಧತ್ವಾ ಸ್ಥಳವು ಇತಿಹಾಸದ ಆದಿಕಾಲಕ್ಕೆ ಸೇರಿದ್ದು. ಇವೆರಡೂ ಸ್ಥಳಗಳಲ್ಲಿ ದೊರೆತ ಕುಲುಮೆಗಳಿಗೆ ಒಂದು ವಿಶೇಷತೆ. ಏಕೆಂದರೆ ಇವುಗಳಲ್ಲಿ ಸ್ರಾವಕ ವಸ್ತುವನ್ನು ಬಳಸುತ್ತಿದ್ದ ಚಿಹ್ನೆಗಳಿಲ್ಲ. ಆದರೆ ನಾಯ್ಕುಂಡ್ನ ಕುಲುಮೆಯನ್ನು ಒಂದು ವಿಶಿಷ್ಟ ಬಗೆಯಲ್ಲಿ ಕಟ್ಟಿದ್ದರಿಂದ ಇದು ಹೆಚ್ಚು ಕಾರ್ಯಕ್ಷಮತೆಯುಳ್ಳದ್ದಾಗಿತ್ತು.
ಲೋಹವನ್ನು ಬೇರ್ಪಡಿಸುವುದು ಇವೆಲ್ಲವುಗಳ ಮುಂದಿನ ಹಂತ. ಕುಲುಮೆಗಳಲ್ಲಿ ಮಾತ್ರ ಲೋಹವನ್ನು ಬೇರ್ಪಡಿಸುವುದು ಸಾಧ್ಯ. ಆದ್ದರಿಂದ ತಾಮ್ರ-ಶಿಲಾಯುಗದಲ್ಲಿಯೂ ಹಾಗೂ ಬೃಹತ್ಶಿಲಾಯುಗದಲ್ಲಿಯೂ ಬಳಕೆಯಲ್ಲಿದ್ದ ಕೆಲವೊಂದು ಕುಲುಮೆಗಳನ್ನು ಪರಿಶೀಲಿಸಬೇಕಾದುದು ಅವಶ್ಯ. ಮದರಾಸು-ಮೈಸೂರು ಭಾಗದಲ್ಲಿಯ ಮಾಗಡಿ ಎಂಬಲ್ಲಿ ಕಿಟ್ಟ ರಹಿತ ಇಲ್ಲವೆ ಗಸಿಸಹಿತವಾದ ರಂಧ್ರವೊಂದನ್ನುಳ್ಳ ದೊಡ್ಡದಾದ ಕುಲುಮೆಯನ್ನು ಬಳಸುತ್ತಿದ್ದರು ಎಂದು ಬುಕಾನನ್ ವಿವರಿಸಿದ್ದಾನೆ. ಅಂಬಾಜಿ ಸ್ಥಳದಲ್ಲಿ ತಾಮ್ರ-ಶಿಲಾಯುಗದಲ್ಲಿ ಇದ್ದ ಕುಲುಮೆಯ ಒಡೆದ ಭಾಗಗಳ ಅಂದರೆ ಅದರ ಗಾಳಿಯ ಕೊಳವೆಯ ಮೂತಿ, ಕಿಟ್ಟ ಮೊದಲಾದ ಭಾಗಗಳ ಅವಶೇಷಗಳನ್ನು ಜೋಡಿಸಿ ಹೊಂದಿಸಿ ಆ ಕುಲುಮೆಯನ್ನು ಪುನರ್ನಿಮಿಸಿದ ಸಂಗತಿ ಇತ್ತೀಚಿನ ವರ್ಷಗಳಲ್ಲಿಯ ಒಂದು ಮಹತ್ತ್ವದ ಶೋಧ. ಸ್ಥಳೀಯ ಹಳ್ಳಗಳ ದಂಡೆಯ ಮೇಲಿನ ಮಣ್ಣನ್ನೇ ಉಪಯೋಗಿಸಿ ಈ ಹಳ್ಳಗಳ ದಂಡೆಗಳ ಕುಲುಮೆಗಳನ್ನು ರಚಿಸಲಾಗಿತ್ತು. ಇದರ ರಚನೆಯಲ್ಲಿ ಮೂರು ಭಾಗಗಳಿದ್ದವು. ಒಂದು ಗಾಳಿಯ ಕೊಳವೆಯ ಮೂತಿ, ಎರಡನೆಯದು ಗಸಿಯನ್ನು ಹೊರಚೆಲ್ಲಲು ರಚಿಸಿದ ರಂಧ್ರ. ಮೂರನೆಯದು ಕುಲುಮೆಯ ಇತರ ಭಾಗ. ಒಂದು ಬಿದಿರಿನ ಕೊಳವೆಗೆ ಮಣ್ಣು ಮೆತ್ತಿ ಕುಲುವೆಯ ಗಾಳಿ - ಕೊಳವೆಯನ್ನು ರಚಿಸಲಾಗುತ್ತಿತ್ತು. ಒಡೆದ ಭಾಗಗಳ ಅವಶೇಷಗಳನ್ನು ಪರಿಶೀಲಿಸಿದರೆ ಇವೆಲ್ಲವುಗಳ ತಿರುವುಗಳಲ್ಲಿಯೂ ಬಾಗುಗಳ ದಪ್ಪದಲ್ಲಿಯೂ ಏಕರೂಪತೆ ಇದ್ದುದು ಕಂಡುಬರುತ್ತದೆ. ಬಹುಶಃ ಈ ಭಾಗಗಳನ್ನು ತಯಾರಿಸಲು ಆಗಿನವರು ಅಚ್ಚು ಪಟ್ಟಿಗಳನ್ನು ಬಳಸುತ್ತಿರಬಹುದು. ಈಗ ಸದ್ಯ ಉಪಲಬ್ಧವಿದ್ದ ಭಾಗಗಳನ್ನು ನೋಡಿದರೆ ಈ ಎಲ್ಲ ಕುಲುಮೆಗಳ ತಳಗಳು ಒಡೆದದ್ದು ಕಾಣುತ್ತದೆ. ಎರಕ ಹೊಯ್ದ ನಂತರ ಬರುವ ಲೋಹದ ಗಟ್ಟಿಗಳನ್ನು ಹೊರ ತೆಗೆಯಲು ಬಹುಶಃ ಈ ಕುಲುಮೆಗಳ ತಳಗಳನ್ನು ಒಡೆಯುತ್ತಿದ್ದಿರಬಹುದು. ಅಂದರೆ, ಈ ಕುಲುಮೆ ಒಂದೆ ಸಲ ಮಾತ್ರ ಎರಕ ಹಾಕಲು ಬಳಸಲಾಗುತ್ತಿತ್ತು. ಪ್ರಾಚೀನ ಕಾಲದಲ್ಲಿ ತಾಮ್ರವನ್ನು ಕರಗಿಸಲು ಬಳಸುತ್ತಿದ್ದ ಕುಲುಮೆಗಳು ಆಕಾರದಲ್ಲಿ ಚಿಕ್ಕವಾಗಿದ್ದರೂ ಈ ವಿಧಾನ ಮಾತ್ರ ಸಾಕಷ್ಟು ಕಾರ್ಯಕ್ಷಮತೆಯುಳ್ಳದ್ದಾಗಿತ್ತು. ಈ ವಿಧಾನದನ್ವಯ ಕುಲುಮೆಯಲ್ಲಿ ಗಾಳಿಯನ್ನು ಬಲವಂತವಾಗಿ ನುಗ್ಗಿಸುವುದಕ್ಕೆ ಮಹತ್ತ್ವ ಇದ್ದಿತು. ಪುಡಿ ಮಾಡದ ಸುಟ್ಟ ಅದಿರನ್ನು ಚಿಕ್ಕ ಚಿಕ್ಕ ಮುದ್ದೆಗಳನ್ನಾಗಿ ಮಾಡಿ ಅವುಗಳನ್ನು ಈ ಕುಲುಮೆಗಳಲ್ಲಿ ಹಾಕುತ್ತಿದ್ದರು.
ಮಹಾರಾಷ್ಟ್ರದಲ್ಲಿಯ ನಾಯ್ಕುಂಡ್ನ ಬೃಹತ್ಶಿಲಾಯುಗ ನೆಲೆಯಲ್ಲಿ ಕಬ್ಬಿಣ ಕರಗಿಸುವ ಕಟ್ಟಿದ ಕುಲುಮೆಯ ಅವಶೇಷಗಳು ದೊರೆತಿವೆ. ಈ ಸಂಸ್ಕೃತಿಯ ಕಾಲಮಾನ ಪ್ರ.ಶ.ಪು.ಸು. 6-4ನೆಯ ಶತಮಾನ.
ಬನಹಳ್ಳಿಯಲ್ಲಿ ಬೃಹತ್ಶಿಲಾಯುಗದ ಸಾಂಸ್ಕೃತಿಕ ಸ್ತರಗಳಲ್ಲಿ ಈ ಹಂತದ ಕಬ್ಬಿಣದ ಹಲವಾರು ಉಪಕರಣಗಳು ಹಾಗೂ ಕಬ್ಬಿಣ ಕರಗಿಸುವ ಕುಲುಮೆಯೂ ದೊರೆತಿದೆ. ಈ ಬೃಹತ್ ಶಿಲಾಯುಗದ ಸಂಸ್ಕೃತಿಯು ಪ್ರ.ಶ.ಪು.400-300ರ ಅವಧಿಯಲ್ಲಿ ಇದ್ದಿರಬಹುದೆಂದು ತರ್ಕಿಸಲಾಗಿದೆ. ಈ ಕುಲುಮೆಯು ಬಟ್ಟಲಿನ ಆಕಾರದಲ್ಲಿಯ ನೆಲದಲ್ಲಿರುವ ಒಂದು ಕುಣಿ. ಇದಕ್ಕೂ ಇಂಗ್ಲೆಂಡ್ನ ಇತಿಹಾಸಪುರ್ವ ಕಾಲದ ಕುಲುಮೆಗಳಿಗೂ ಸಾಮ್ಯವಿದೆ. ನೆಲದ ಒಂದು ಕುಣಿಯನ್ನು ತೋಡಿ ಇದಕ್ಕೆ ಸುತ್ತ ಶಾಖಕ್ಕೆ ಜಗ್ಗದಂತಹ ವiಣ್ಣನ್ನು ಮೆತ್ತಲಾಗಿದೆ. ಇದರಲ್ಲಿ ಗಾಳಿಹಾಕುವ ಕೊಳವೆಯ ಮೂತಿಯ ಹಾಗೂ ಕಿಟ್ಟ ಇಲ್ಲವೆ ಗಸಿಯನ್ನು ಹೊರತೆಗೆಯುವ ವ್ಯವಸ್ಥೆಗಳೂ ಇವೆ. ಗಣಿಗಳ ತಗ್ಗುಗಳಲ್ಲಿ ಕಿಟ್ಟ ಇಲ್ಲವೆ ಗಸಿ, ಬೂದಿ, ಕಲ್ಲಿದ್ದಲು ಮತ್ತು ಇತರ ಅವಶೇಷಗಳಿವೆ. ಮೂಲ ಅದಿರಿನ ಅವಶೇಷಗಳಿಲ್ಲ. ಮೇಲುಸ್ತರದಲ್ಲಿ ಗಸಿಯ ದಪ್ಪ ಪದರು ಹಬ್ಬಿದೆ. ಆದ್ದರಿಂದ ಗಸಿಯು ಕುಲುಮೆಯಿಂದ ಹೊರಗೆ ಹೋಗುವಂತೆ ಬಿಡಲಾಗುತ್ತಿತ್ತೆಂದು ತೋರುತ್ತದೆ. ಕುಲುಮೆಯ ಕೆಳಭಾಗದಲ್ಲಿ ಕಬ್ಬಿಣದ ವಡೆ ದೊರೆತಿದೆ. ಸಾಕಷ್ಟು ಪ್ರಮಾಣದಲ್ಲಿ ಉಳಿದ ಗಸಿಯು ಶೇಖರವಾಗಿದೆ. ಈ ತರಹದ ಎರಡುಮೂರು ಕುಲುಮೆಗಳನ್ನು ಜೋಡಿಸಿ ಇವೆಲ್ಲವೂ ಏಕಕಾಲಕ್ಕೆ ಕೆಲಸ ನಡೆಸಬಲ್ಲಂಥ ವ್ಯವಸ್ಥೆ ಇದ್ದಿರಬಹುದಾದ ಸಾಧ್ಯತೆಯೂ ಉಂಟು. ಇದು ನಿಜವಿದ್ದರೆ, ಈ ಬಗೆಯ ವ್ಯವಸ್ಥೆಯು 19ನೆಯ ಶತಮಾನದ ವರೆಗೂ ಮುಂದುವರೆಯಿತು ಎಂದು ಹೇಳಬಹುದು. ಈ ವಿಷಯದಲ್ಲಿ ಬುಕಾನನ್ನ ಅಭಿಪ್ರಾಯ ಗಮನೀಯ. ಇವೆಲ್ಲ ಒಂದೇ ಚಪ್ಪರದ ಕೆಳಗೆ 2.10-2.40 ಮೀ ಇರುತ್ತಿದ್ದವು. ಎರಡು ಕುಲುಮೆಗಳ ಗಾಳಿ ಕೊಳವೆ ಮೂತಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇವು ಶಾಖಕ್ಕೆ ಒಳಪಡದಂಥ ಮಣ್ಣಿನಿಂದ ಕೂಡಿದ್ದು, ಇವುಗಳಲ್ಲಿ ಶೇ. 66ರಷ್ಟು ಸಿಲಿಕ ಮತ್ತು ಶೇ. 14ರಷ್ಟು ಅಲ್ಯುಮಿನಾ ಅಂಶ ಕಂಡುಬಂದಿದೆ. ಅಂದರೆ ಅಂಬಾಜಿ, ನಾಯ್ಕುಂಡ್ ಮತ್ತು ಬನಹಳ್ಳಿ ಕುಲುಮೆಗಳಲ್ಲಿ ಗಾಳಿಯನ್ನು ಹಾಕುವುದಕ್ಕಾಗಿ ಗಾಳಿ ಕೊಳವೆ ಮೂತಿಗಳೂ ಇರುತ್ತಿದ್ದವು. ಗಸಿಯನ್ನು ಹಿಡಿಯಲು ರಂಧ್ರಗಳೂ ಇರುತ್ತಿದ್ದವು. ಈ ಮೂರು ಸ್ಥಳಗಳಲ್ಲಿಯ ಕುಲುಮೆಗಳಲ್ಲಿ ಮೂಲ ಯಾಂತ್ರಿಕ ವ್ಯವಸ್ಥೆ ಒಂದೇ ಬಗೆಯದ್ದಾಗಿರುತ್ತಿತ್ತು. ತಾಮ್ರ ಮತ್ತು ಕಬ್ಬಿಣದಂತಹ ಅದಿರುಗಳನ್ನು ಕರಗಿಸುವ ಮೂಲ ತತ್ತ್ವಗಳಲ್ಲಿ ತಾಮ್ರ-ಶಿಲಾಯುಗದಿಂದ ಮೊದಲುಗೊಂಡು ಕಬ್ಬಿಣದ ಯುಗದ ವರೆಗೂ ವಿಶೇಷ ಬದಲಾವಣೆಗಳು ಆಗಿರಲಿಲ್ಲ. ಕುಲುಮೆಗಳನ್ನು ಬೇರೆ ಬೇರೆ ಪ್ರಕಾರಗಳಲ್ಲಿ ರಚಿಸುವುದಕ್ಕೆ ಸ್ಥಳೀಯ ಸ್ಥಿತಿಗತಿಗಳೇ ಕಾರಣವಾಗಿರಬಹುದು ಮತ್ತು ಅದಿರನ್ನು ಕರಗಿಸುವ ವಿಧಾನದಲ್ಲಿ ಪರಿಣತರಾದ ಆ ಜನ ತಮಗೆ ಬೇಕಾದ ಕುಲುಮೆಗಳನ್ನು ರಚಿಸಿಕೊಳ್ಳುವುದ ರಲ್ಲಿಯೂ ಸಮರ್ಥರಾಗಿದ್ದರು. ಆದ್ದರಿಂದ ಭಾರತದಲ್ಲಿ ಕಬ್ಬಿಣ ಯುಗದ ಪ್ರಾರಂಭದ ಕಾಲದಿಂದ ನಾನಾ ಬಗೆಯ ಕುಲುಮೆಗಳು ಇದ್ದವು. ಕರ್ನಾಟಕದ ವಿಷಯದಲ್ಲಿಯೂ ಈ ಮಾತು ಅಷ್ಟೇ ನಿಜವಾಗಿದೆ.
ಕರ್ನಾಟಕದಲ್ಲಿ ತಾಮ್ರವನ್ನು ಹೇಗೆ ಬೇರ್ಪಡಿಸುತ್ತಿದ್ದರು ಎಂಬ ಬಗೆಗಿನ ವಿವರಗಳು ಇನ್ನೂ ಬೆಳಕಿಗೆ ಬಂದಿಲ್ಲ. ಅರಾವಳಿ ಬೆಟ್ಟದಲ್ಲಿರುವ ನಿಕ್ಷೇಪಗಳಲ್ಲಿಯ ತಾಮ್ರದ ಅದಿರಿನಲ್ಲಿ ತಾಮ್ರದ ಅಂಶ ಕಡಿಮೆ ಪ್ರಮಾಣದಲ್ಲಿದೆ. ಗಣಿಯಿಂದ ಹೊರತೆಗೆದ ಮೇಲೆ ಇದನ್ನು ಮುಂದಿನ ಕೆಲಸಕ್ಕೆ ಅಣಿ ಮಾಡಲಾಗುತ್ತಿತ್ತು. ತಾಮ್ರದ ಅದಿರಿಗೆ ಬಂಗಾರದಂತಹ ಹಳದಿ ಬಣ್ಣ ಇರುತ್ತದೆ. ಆದ್ದರಿಂದ ಇಂತಹ ಅದಿರನ್ನು ಕೈಯಿಂದಲೇ ಹೆಕ್ಕಿ ಕೂಡಿ ಹಾಕಿ ಕೆಲಸಕ್ಕೆ ಅಣಿ ಮಾಡಲು ಸುಲಭವಾಗುತ್ತದೆ. ಇಲ್ಲಿಯ ಲೋಹವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಇದರಲ್ಲಿ ಆಂಟಿಮನಿ, ಆರ್ಸೆನಿಕ್ ಮತ್ತು ಸಲ್ಫರ್ಗಳು ಮಾತ್ರ ಇದ್ದದ್ದು ಕಂಡುಬಂದಿದೆ. ಏಕೆಂದರೆ ಅರಾವಳಿ ಬೆಟ್ಟಗಳಲ್ಲಿ ತಾಮ್ರದ ಅದಿರಿನಲ್ಲಿ ಈ ಮೂಲವಸ್ತುಗಳು ವಿಪುಲ ಪ್ರಮಾಣದಲ್ಲಿ ದೊರೆಯುತ್ತವೆ. ಬೇರ್ಪಡಿಸಲ್ಪಟ್ಟ ಲೋಹದಲ್ಲಿ ಈ ಘಟಕಗಳು ಶೇ. 2ಕ್ಕಿಂತಲೂ ಹೆಚ್ಚಾದರೆ ಈ ಲೋಹವು ಸಡಿಲವಾಗುತ್ತದೆ. ಅಂದರೆ ಒಡೆಯುವ ಇಲ್ಲವೆ ಸೀಳುವ ಸ್ವಭಾವವನ್ನು ಹೊಂದುತ್ತದೆ. ಕತ್ತರಿಸುವ, ಕೊಯ್ಯುವ ಮುಂತಾದ ಕೆಲಸಕ್ಕಾಗಿ ಬೇಕಾಗುವ ಉಪಕರಣಗಳನ್ನು ತಯಾರಿಸಲು ಇಂತಹ ಸಡಿಲ ಲೋಹ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ಅದಿರನ್ನು ಸುಟ್ಟರೆ ಈ ಅಪ್ರಯೋಜನಕಾರಿ ಮೂಲವಸ್ತುಗಳನ್ನು ಅದಿರಿನಿಂದ ಬೇರ್ಪಡಿಸಬಹುದು. ಏಕೆಂದರೆ 5000 ಸೆ ಗಳಿಂದ 6000 ಸೆ ಗಳವರೆಗಿನ ಶಾಖಕ್ಕೆ ಒಳಗಾದರೆ ಈ ಮೂಲವಸ್ತುಗಳು ಆಮ್ಲಜನಕಗಳಾಗಿ ಬಾಷ್ಪಿಭವನಗೊಳ್ಳುತ್ತವೆ. ಈ ರೀತಿಯಾಗಿ ತಾಮ್ರದ ಅದಿರನ್ನು ಸಂಯುಕ್ತದಲ್ಲಿ ಏಕಪ್ರಮಾಣ ತಾಮ್ರ ದ್ವಿಯೋಗ ಶಕ್ತಿವಂತ ರೂಪವನ್ನುಳ್ಳ ಕಬ್ಬಿಣ ಸಲ್ಫೈಡುಗಳ ಮಿಶ್ರಣವನ್ನಾಗಿ ಪರಿವರ್ತಿಸ ಬಹುದು. ಇದೇ ಬಗೆಯಾಗಿ ಕಲ್ಯಾಡಿಯಲ್ಲಿ ಹಳೆಯ ಕಾರ್ಯಾಗಾರಗಳ ಅಧ್ಯಯನಗಳಿಂದ ಈ ಕುತೂಹಲಕಾರಿ ಸಂಗತಿಗಳೆ ಬೆಳಕಿಗೆ ಬಂದಿವೆ. ಹಾಗೂ ಈ ಕಾಲದ ತಾಮ್ರವನ್ನು ಕರಗಿಸುವವರ ಕಾರ್ಯಕ್ಷಮತೆಯನ್ನು ಇವು ಸೂಚಿಸುತ್ತವೆ. ಇದೇ ಪ್ರದೇಶದಲ್ಲಿ ಬೃಹತ್ಶಿಲಾಯುಗ ಗೋರಿಗಳ ನೆಲೆಯು ಇರುವುದು ಗಮನಾರ್ಹ.
ಕಬ್ಬಿಣ ವಸ್ತುಗಳ ಒಳ ರಚನೆ ಇಲ್ಲವೆ ಲೋಹದಿಂದ ವಸ್ತುಗಳನ್ನು ತಯಾರಿಸುವ ತಂತ್ರ ಇವುಗಳನ್ನು ಅರಿತುಕೊಳ್ಳುವ ಮೊದಲು ಕಬ್ಬಿಣವನ್ನು ಕರಗಿಸುವ ವಿಧಾನದ ಬಗ್ಗೆ ಒಂದೆರಡು ಮಾತುಗಳನ್ನು ಅರಿತುಕೊಳ್ಳುವುದು ಅವಶ್ಯ. ಇದರಲ್ಲಿ ಎರಡು ವಿಧಾನಗಳು ಔಚಿತ್ಯಪುರ್ಣವಾಗಿ ತೋರುತ್ತವೆ. (1) ಪ್ರತ್ಯಕ್ಷ ಇಲ್ಲವೆ ಕಮ್ಮಾರ ಸಾಲೆಯ ವಿಧಾನ (2) ಅಪ್ರತ್ಯಕ್ಷ ವಿಧಾನ. ಪ್ರತ್ಯಕ್ಷ ವಿಧಾನದಲ್ಲಿ ಅದಿರಿನಿಂದ ಕಬ್ಬಿಣವನ್ನು ಇದ್ದಲಿನ 12000 ಸೆ ಕಾವಿನಲ್ಲಿ ಕರಗಿಸುತ್ತಾರೆ. ಆದರೆ ಇದರ ದ್ರವೀಕರಣಕ್ಕೆ ಬೇಕಾಗುವ ಕಾವು 15000 ಸೆಲ್ಷಿಯಸ್ ಇರುತ್ತದೆ. ಈ ಹಂತದಲ್ಲಿ ಸಿದ್ಧವಾಗುವ ವಸ್ತು ಪಾಚಿಯ ರಚನೆಯಂತಿರುತ್ತದೆ. ಕಬ್ಬಿಣ ಮುದ್ದೆಯ ರೂಪದಲ್ಲಿ ಇರುವುದಿಲ್ಲ ಅಥವಾ ದ್ರವರೂಪದಲ್ಲಿಯೂ ಇರುವುದಿಲ್ಲ. ಆಗ ಹೊರಡುವ ಕಬ್ಬಿಣದ ಕಿಟ್ಟ ಅಥವಾ ಗಸಿಯು ಅರ್ಧಾವ್ಯಸ್ಥೆಯಲ್ಲಿದ್ದು ಜಿಗುಟಾಗಿರುತ್ತದೆ. 11700 ಸೆಲ್ಷಿಯಸ್ನ ಕಾವಿನಲ್ಲಿ ಈ ಗಸಿ (ಕಬ್ಬಿಣ ಸಿಲಿಕೇಟ್)ಯನ್ನು ಸುತ್ತಿಗೆಯ ಪೆಟ್ಟುಗಳನ್ನು ಕೊಟ್ಟು ಬೇರ್ಪಡಿಸಲಾಗುವುದು. ಲೋಹದಲ್ಲಿ ಗಸಿಯು ಸೂಕ್ಷ್ಮ ಪ್ರಮಾಣದಲ್ಲಿ ಕಂಡುಬರುತ್ತಿದ್ದರೆ, ಕಬ್ಬಿಣವನ್ನು ಪ್ರತ್ಯಕ್ಷ ವಿಧಾನದಿಂದ ಬೇರ್ಪಡಿಸಲಾಗಿದೆ ಎಂದು ಅರ್ಥವಾಗುತ್ತದೆ. ಈ ರೀತಿಯಾಗಿ ಪಡೆದ ಕಬ್ಬಿಣವನ್ನು ಮೆದು ಕಬ್ಬಿಣ ಎಂದೆನ್ನುತ್ತಾರೆ. ಇದು ಕೊಂಚ ಮಿದುವಾಗಿರುತ್ತದೆ. ಬಿಳುಪುಮಿಶ್ರಿತ ಬೂದಿ ಬಣ್ಣದಲ್ಲಿರುತ್ತದೆ ಮತ್ತು ಇದರಲ್ಲಿ ಅಲ್ಪ ಮೊತ್ತದಲ್ಲಿ ಇಂಗಾಲವು ಇರುತ್ತದೆ.
ಅಪ್ರತ್ಯಕ್ಷ ವಿಧಾನದಲ್ಲಿ ಕಬ್ಬಿಣವನ್ನು ಕರಗಿಸುವ ಇನ್ನೊಂದು ಪದ್ಧತಿ ಇದೆ. ಈ ಬಗೆ ಕರಗಿಸುವುದರಲ್ಲಿ ಶುದ್ಧ ಕಬ್ಬಿಣ 11400 ಸೆ ಕಾವಿನಲ್ಲಿ ಕರಗುತ್ತದೆ. ಗಾಳಿಯಿಂದ ಪ್ರಜ್ವಲಿತವಾದ ಇದ್ದಿಲಿನ ಬೆಂಕಿಯಲ್ಲಿ ಇಷ್ಟು ಕಾವನ್ನು ಉಂಟುಮಾಡಬಹುದು. ಈ ರೀತಿಯಾಗಿ ಪಡೆದ ಕಬ್ಬಿಣವನ್ನು ಉಕ್ಕನ್ನಾಗಿ ಪರಿವರ್ತಿಸಬಹುದು. ಇದರಲ್ಲಿಯ ಇಂಗಾಲವನ್ನೆಲ್ಲ ಹೊರಗೆಡಹುವಂತೆ ಮಾಡಬಹುದು. ಇದರಲ್ಲಿಯ ಕಶ್ಮಲವನ್ನು ಹೊರತೆಗೆಯಬಹುದು. ಈ ಪದ್ಧತಿಯಲ್ಲಿ ಕಬ್ಬಿಣವನ್ನು ಹೊರತೆಗೆಯಬಹುದು. ಈ ಪದ್ಧತಿಯಲ್ಲಿ ಕಬ್ಬಿಣವನ್ನು ಕರಗುವ ಹಂತ ಮುಟ್ಟಿದಾಗಲೆ ಪಡೆಯಬಹುದು. ಆದರೆ ಸ್ಪಂಜ್ ಇಲ್ಲವೆ ಕಬ್ಬಿಣದ ಮುದ್ದೆಯನ್ನು ಹೀಗೆ ಪಡೆಯುವುದು ಸಾಧ್ಯವಿಲ್ಲ. ಇದರಲ್ಲಿ ಗಸಿ ಸೂಕ್ಷ್ಮ ಪ್ರಮಾಣದಲ್ಲಿ ಉಳಿದುಕೊಳ್ಳುತ್ತದೆ. ಸ್ಪಂಜ್ ಮುದ್ದೆ ಅಥವಾ ಮೆದು ಕಬ್ಬಿಣದಿಂದ ಬೇಕಾದ ವಸ್ತುಗಳನ್ನು ಸಿದ್ಧಪಡಿಸಲಾಗುವುದಿಲ್ಲ. ಏಕೆಂದರೆ ಇದರಲ್ಲಿ ಕಾಠಿಣ್ಯ ಇರುವುದಿಲ್ಲ. ಆದ್ದರಿಂದ ಇದರಲ್ಲಿ ಕಾಠಿಣ್ಯವನ್ನು ತರಬೇಕಾದರೆ ಇದರ ಕನಿಷ್ಠ ಅಂಶವನ್ನಾದರೂ ಉಕ್ಕಿನಲ್ಲಿ ಪರಿವರ್ತಿಸ ಬೇಕಾಗುವುದು. ನಿಯಂತ್ರಿತವಾದ ಶೈತ್ಯೀಕರಣ ಮತ್ತು ಶಾಖವನ್ನು ಒದಗಿಸುವ ಕ್ರಿಯೆಗಳಿಂದ ಇಂಗಾಲದ ಅಣುಗಳನ್ನು ಕಬ್ಬಿಣದೊಂದಿಗೆ ಬೆರೆಸುವುದರಿಂದ ಉಕ್ಕು ಆಗುವುದು. ಇದರಿಂದಾಗಿ ಉಕ್ಕಿನ ಭೌತಿಕ ಗುಣಗಳು ಬದಲುಗೊಳ್ಳುತ್ತವೆ. ಮತ್ತು ಇದೊಂದು ಬಿರುಸಾದ ಬಲಯುತವಾದ ಕಠಿಣ ಲೋಹವಾಗುತ್ತದೆ. ಉಕ್ಕಿಗೆ ತೀಕ್ಷ್ಣವಾದ ಧಾರೆಯನ್ನು ಒದಗಿಸುವುದು ಸಾಧ್ಯ. ಆದರೆ ಉಕ್ಕಿನ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಮತ್ತು ಉಕ್ಕು ಬೇಗನೆ ಜಂಗುಗಟ್ಟುವ ಗುಣವನ್ನೂ ಹೊಂದಿರುತ್ತದೆ. ಕಬ್ಬಿಣ ವಿಷಯ ಬೇರೆ, ಕಬ್ಬಿಣಕ್ಕೆ ತೀಕ್ಷ್ಣತೆಯನ್ನು ಒದಗಿಸುವುದು ಕಠಿಣ. ಆದರೆ ಇದಕ್ಕೆ ಕಪ್ಪು ಮಿಶ್ರಿತ ಕಂದುಬಣ್ಣದ ಒಂದು ಕವಚ ಇರುವುದರಿಂದ ಅದು ಬೇಗನೆ ಜಂಗುಗಟ್ಟುವುದಿಲ್ಲ.
ಉಕ್ಕನ್ನು ಉತ್ಪಾದಿಸಲು ಪ್ರಾಚೀನ ಕಾಲದಲ್ಲಿ ಮೂರು ವಿಧಾನಗಳನ್ನು ಅನುಸರಿಸುತ್ತಿದ್ದರು. ಮೊದಲನೆಯ ವಿಧಾನದಂತೆ ಉಕ್ಕನ್ನು ನೇರವಾಗಿ ಕುಲುಮೆಯಲ್ಲಿಯೇ ಉತ್ಪಾದಿಸಲಾಗುತ್ತಿತ್ತು. ಮ್ಯಾಂಗನೀಸ್ನ ಅಂಶವನ್ನುಳ್ಳ ಅದಿರನ್ನು ಕುಲುಮೆಯ ಬಾಯಿಗೆ ಕೊಟ್ಟರೆ - ಈ ಬಗೆಯಾಗಿ ಉಕ್ಕನ್ನು ಪಡೆಯುವುದು ಸಾಧ್ಯ. ಈ ಬಗೆಯಾಗಿ ಸಿದ್ಧಗೊಂಡ ಲೋಹ ಉಕ್ಕು ಆಗುತ್ತದೆ. ಆದರೆ ಈ ಅದಿರುಗಳಲ್ಲಿ ಗಂಧಕ, ಸಲ್ಫರ್ ಮತ್ತು ಆರ್ಸೆನಿಕ್ಗಳು ಇರಬಾರದು. ಅಂದರೆ ಸುಲಭ ಸಾಧ್ಯವಾದ ಉಕ್ಕನ್ನು ತಯಾರಿಸಬಹುದು. ಆದರೆ ಈ ರೀತಿಯ ಉಕ್ಕನ್ನು ಪಡೆದ ಸಂಗತಿ ಒಂದು ಆಕಸ್ಮಿಕವಾಗಿತ್ತೆ ಹೊರತು ಉದ್ದೇಶಪುರ್ವಕವಾದ ವಿಧಾನದಿಂದಲೂ ಉತ್ಪಾದನೆಯಾಗಿರಲಿಲ್ಲ.
ಎರಡನೆಯದು ಬೆಸುಗೆಯ ಅಥವಾ ಮೂಸೆಯ ವಿಧಾನ. ಈ ರೀತಿಯಾಗಿ ಪಡೆದ ಲೋಹಕ್ಕೆ ವೂಟ್ಝ್ ಎಂದು ಹೆಸರು. ವೂಟ್ಝ್ ಶಬ್ದವು ಕನ್ನಡ-ತೆಲುಗುಗಳ ವುಕ್ಕೆ ಅಥವಾ ಉಕ್ಕು ಶಬ್ದದ ಅಪಭ್ರಂಶವಾಗಿದೆ ಎಂಬ ಮಾತು ಕುತೂಹಲಕಾರಿ. ಕಾಂತಾಕರ್ಷಣದ ಕಪ್ಪುಬಣ್ಣದ ಅದಿರು, ಬಿದಿರು ಕಟ್ಟಿಗೆಯಿಂದಾದ ಇದ್ದಿಲು ಹಾಗೂ ಇಂಗಾಲಾತ್ಮಕವಾದ ಕೆಲವೊಂದು ಜಾತಿಯ ಸಸ್ಯಗಳು ಇವನ್ನೆಲ್ಲ ಒಂದು ಮೂಸೆಯಲ್ಲಿ ಮುಚ್ಚಿಹಾಕಿ ಇದಕ್ಕೆ ಅತಿ ಉಷ್ಣತೆಯನ್ನು ಕೊಟ್ಟು ಈ ಬಗೆಯ ಉಕ್ಕನ್ನು ಉತ್ಪಾದಿಸಲಾಗುತ್ತಿತ್ತು. ಪ್ರಾಚೀನ ಭಾರತೀಯರು ಕಂಡುಹಿಡಿದ ಅತ್ಯಂತ ಮಹತ್ತ್ವದ ಸಂಗತಿಗಳಲ್ಲಿ ಈ ವಿಧಾನವೂ ಒಂದು.
ವೂಟ್ಝ್ ದಲ್ಲಿ ಒಂದು ವಿಶಿಷ್ಟವಾದ ಯಾಂತ್ರಿಕ ಗುಣವಿದೆ. ಅತ್ಯಂತ ಬಿರುಸುತನವು ಇದರಲ್ಲಿ ಮೃದುತ್ವದೊಂದಿಗೆ ಕೂಡಿಕೊಂಡಿರುತ್ತದೆ. ಇದಕ್ಕೆ ಬೇಕಾದ ರೂಪವನ್ನು ಕೊಡುವುದೂ ಸಾಧ್ಯ. ಇದರಲ್ಲಿ ಶೇ. 1.3-1.7ರವರೆಗೆ ಇಂಗಾಲಾಂಶ ಇರುತ್ತದೆ. ಉಕ್ಕಿನಲ್ಲಿ ಇವೆಲ್ಲ ಕಂಡುಬರುವುದಿಲ್ಲ. ಶಾಖವನ್ನು ಒದಗಿಸುವ ಕ್ರಿಯೆಯ ಹೊಸ ವಿಧಾನದಿಂದ ಉಕ್ಕಿಗೆ ಈ ವಿಶೇಷ ಗುಣವನ್ನು ಸೇರಿಸುವುದು ಸಾಧ್ಯ. ತಮಗೆ ಬೇಕಾದ ಉಕ್ಕನ್ನೆಲ್ಲ ರೋಮನ್ನರು ಭಾರತದಿಂದ ಆಯಾತ ಮಾಡಿಕೊಳ್ಳುತ್ತಿದ್ದರು ಎಂಬ ಸಂಗತಿ ಗಮನಾರ್ಹ. ಭಾರತದಿಂದ ತರಿಸಿದ್ದ ವೂಟ್ಝ್ ಉಕ್ಕಿನಿಂದಲೆ ದಮಾಸ್ಕನ ಪ್ರಪಂಚ ವಿಖ್ಯಾತ ಖಡ್ಗಗಳು ತಯಾರಾಗುತ್ತಿದ್ದವು.
ವೂಟ್ಝ್ ಉಕ್ಕನ್ನು ಉತ್ಪಾದನೆ ಮಾಡುವ ವಿಧಾನದಲ್ಲಿ ಮೂಸೆ ಮುಖ್ಯವಾದುದು. ಮಣ್ಣಿನ ಮೂಸೆಯಲ್ಲಿ ಕಬ್ಬಿಣದ ಒಂದು ಬೆಣೆಯನ್ನು ಇರಿಸುತ್ತಾರೆ. ಭಾರತದ ಸಸ್ಯದ ಎಲೆಗಳನ್ನು ಮತ್ತು ಅಗಲವಾದ ಮೆತ್ತಗಿನ ಎಲೆಯನ್ನು ಇದರಲ್ಲಿ ಇಡಲಾಗುತ್ತದೆ. ಅನಂತರ ಮೂಸೆಯ ಬಾಯನ್ನು ಮಣ್ಣಿನಿಂದ ಮುಚ್ಚಲಾಗುತ್ತದೆ. ಇಂತಹ ಅನೇಕ ಮೂಸೆಗಳನ್ನು ಕುಲುಮೆಯೊಂದರಲ್ಲಿ ಕಮಾನಿನಾಕಾರದಲ್ಲಿ ಜೋಡಿಸಿ ಇಡಲಾಗುತ್ತದೆ. ಕುಲುಮೆಯಲ್ಲಿಯ ಅಗ್ನಿಸ್ಥಾನದಲ್ಲಿಯೂ ಮತ್ತು ಮೂಸೆಗಳ ಸುತ್ತಲೂ ಕಾಡುಮರಗಳ ಇದ್ದಿಲನ್ನು ತುಂಬುತ್ತಾರೆ. ಆದರೆ ಫಿಕಸ್ ಬೆಂಗಾಲೆನೆಸಿಸ್ ಎಂಬ ಜಾತಿಯ ಮರದ ಇದ್ದಿಲನ್ನು ಮಾತ್ರ ಬಳಸುವುದಿಲ್ಲ. ಈ ರೀತಿಯಾಗಿ ಉತ್ಪಾದಿತವಾದ ಉಕ್ಕಿನ ಮೇಲೆ ಗುರುತುಗಳು ಇರುತ್ತವೆ ಮತ್ತು ಆ ಉಕ್ಕನ್ನು ಮೂಸೆಯ ಕೆಳೆಬದಿಯಿಂದ ಸಂಗ್ರಹಿಸಲಾಗುತ್ತದೆ. ಕರ್ನಾಟಕದಲ್ಲಿ ದೊರೆತ ಉಕ್ಕಿನ ಗಟ್ಟಿಗಳ ಮೇಲಸ್ತರಗಳು ಇಂಗಾಲೀಕರಣ ಗೊಂಡಿರುತ್ತವೆ. ಗಟ್ಟಿಯ ಅಂಚಿನಲ್ಲಿ ಇಂಗಾಲದ ಪ್ರಮಾಣ ಹೆಚ್ಚು ಇರುತ್ತದೆ. ಗಟ್ಟಿಭಾಗದಿಂದ ಕೇಂದ್ರದತ್ತ ಬಂದಂತೆ ಅದರ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಪ್ರಾಚೀನ ಕಾಲದಲ್ಲಿ ಉಕ್ಕು ತಯಾರಿಕೆಗೆ ಮತ್ತೊಂದು ವಿಧಾನವನ್ನೇ ಹೆಚ್ಚು ವ್ಯಾಪಕವಾಗಿ ಅನುಸರಿಸುತ್ತಿದ್ದರು. ಈ ವಿಧಾನಕ್ಕೆ ಸಿಮೆಂಟೇಷನ್ ಅಥವಾ ಬಂಧನಕ್ರಿಯಾ ವಿಧಾನವೆಂದೂ ಇಲ್ಲವೆ ಮೆದು ಕಬ್ಬಿಣದ ಇಂಗಾಲೀಕರಣ ವಿಧಾನವೆಂದೂ ಹೆಸರು. ಪ್ರಾಚೀನ ಕಾಲದ ಮೆದು ಕಬ್ಬಿಣ ಶುದ್ಧ ಇರುವುದೇ ಇಲ್ಲ. ಎಷ್ಟೋ ಸಂದರ್ಭದಲ್ಲಿ ಅದರಲ್ಲಿ ಗಸಿಯ ಅಥವಾ ಕಿಟ್ಟದ ಅಲ್ಪಾಂಶ ಇರುತ್ತದೆ. ಇಂಗಾಲದ ಅಂಶಗಳೂ ಇರುತ್ತವೆ. ಈ ಅಂಶಗಳು ಒಂದೇ ವಸ್ತುವಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಇರುತ್ತಿದ್ದವು. ಅಂದರೆ ಶುದ್ಧಗೊಳಿಸದ ಮೆದು ಕಬ್ಬಿಣದ ಮುದ್ದೆಯ ಅಂಕಿತ ಸಾಮಾನ್ಯವಾಗಿ ಉಕ್ಕು ಎನಿಸುವಂತಹ ವಸ್ತುವಾಗಿರುತ್ತಿತ್ತು. ಭಾರತದಲ್ಲಿ ಉಕ್ಕು ಉತ್ಪಾದನೆಯ ಇತಿಹಾಸವನ್ನು ಪ್ರ.ಶ.ಪು.ಸು.10ನೆಯ ಶತಮಾನಕ್ಕೂ ಹಿಂದೆ ಒಯ್ಯಬಹುದು. ಆಗ ಅದು ಬಂಧನಕ್ರಿಯಾ ವಿಧಾನದಿಂದಲೇ ಉತ್ಪನ್ನವಾಗುತ್ತಿತ್ತು. ಮಧ್ಯಭಾರತದ ಉರಿಕಾಗಾಂವ ಎಂಬಲ್ಲಿ ವೂಟ್ಝ್ - ಉಕ್ಕಿನ ಆಯುಧಗಳು ದೊರೆಯುತ್ತವೆ. ಆದರೆ ವೂಟ್ಝ್ ಮೂಸೆವಿಧಾನದಿಂದ ಋಗ್ವೇದದ ಕಾಲದಲ್ಲಿಯ ಭಾರತದಲ್ಲಿ ಉಕ್ಕನ್ನು ಉತ್ಪಾದಿಸುತ್ತಿದ್ದರೆಂದು ಬ್ಯಾನರ್ಜಿಯವರು ವಾದಿಸಿದ್ದಾರೆ. ತಯಾರಿಕೆ ತಂತ್ರ: ಮಧ್ಯಪ್ರದೇಶದ ನವ್ದತೋಲಿ, ಮಹಾರಾಷ್ಟ್ರದ ಚಂದೋಲಿ, ಗುಜರಾತ್ನ ಸೋಮನಾಥದ ಪ್ರಾಚೀನ ನೆಲೆಗಳಲ್ಲಿ ತಾಮ್ರದ ವಿವಿಧ ಆಕಾರದ ಕೊಡಲಿಗಳು ದೊರೆತಿವೆ. ಇವುಗಳ ಅಧ್ಯಯನದಿಂದಲೇ ಲೋಹ ತಯಾರಕರು ಅಚ್ಚು ಹಾಕುವುದರಲ್ಲಿಯೂ ಶಾಖೋತ್ಪನ್ನದ ಹಾಗೂ ಶೈತ್ಯೀಕರಣ ವಿಧಾನಗಳಲ್ಲಿ ಹಾಗೂ ಹದಗೊಳಿಸುವಂತಹ ಇನ್ನಿತರ ಕ್ರಿಯೆಗಳಲ್ಲಿಯೂ ಪರಿಣತರಾಗಿದ್ದರು. ಮೆದು ಕಬ್ಬಿಣವನ್ನು ತಯಾರಿಸಿದ ಅನಂತರ ಅದನ್ನು ತೆಳುವಾದ ಪಟ್ಟಿಗಳನ್ನಾಗಿ ಪರಿವರ್ತಿಸಿ, ಅನಂತರ ಈ ಪಟ್ಟಿಗಳನ್ನು ಒಂದಕ್ಕೊಂದು ಬೆಸೆದು ಸಿದ್ಧಮಾಡಬೇಕಾಗಿದ್ದ ವಸ್ತುವಿಗನುಗುಣವಾಗಿ ಬೆಸೆಯುವ ಮೊದಲು ಅಥವಾ ಅನಂತರ ಅವುಗಳು ಇಂಗಾಲೀಕರಣಗೊಳ್ಳುತ್ತಿದ್ದವು. ಸು. 10000 ಸೆ ನಲ್ಲಿ ಮೆದು ಕಬ್ಬಿಣವು ಬೆಸೆದುಕೊಳ್ಳುತ್ತದೆ. ಬೆಸುಗೆ ಎಂದೇ ಪರಿಚಿತವಾದ ಈ ನೇರ ವಿಧಾನದ ಕಬ್ಬಿಣ ಉತ್ಪಾದನೆಯ ಪದ್ಧತಿಗೂ ಕಬ್ಬಿಣದ ವಸ್ತುಗಳನ್ನು ಮಾಡುವುದಕ್ಕೂ ಪರಸ್ಪರ ಸಂಬಂಧಗಳಿವೆ. ಮೆದು ಕಬ್ಬಿಣದಲ್ಲಿ ಸೇರಿಕೊಂಡ ಗಸಿ ಭಾಗಗಳು ವಿಧಾನದಲ್ಲಿ ಸ್ರಾವಕ ವಸ್ತುಗಳಂತೆ ಕಾರ್ಯ ಮಾಡುತ್ತವೆ. ಕಬ್ಬಿಣದ ವಿವಿಧ ವಸ್ತುಗಳನ್ನು, ಉಪಕರಣಗಳನ್ನು ತಯಾರಿಸುವಾಗ ಅಗಾರಿಯಾ ಜನರು ಈ ಪದ್ಧತಿಯನ್ನು ಅನುಸರಿಸುತ್ತಿದ್ದರು. ಶಾಖಕ್ರಿಯೆಗೆ ಒಳಪಟ್ಟಾಗ ಉಕ್ಕು ಬದಲಿಸುವ ಬಣ್ಣಗಳನ್ನು ನೋಡಿ ಅದರ ಗುಣಧರ್ಮಗಳು ಮತ್ತು ಯಾವ ಬದಲಾವಣೆಗಳು ನಡೆದಿವೆ ಎಂಬುದನ್ನು ಒಬ್ಬ ಸಾಮಾನ್ಯ ಕಮ್ಮಾರನೂ ಹೇಳಬಲ್ಲನೆಂಬ ಸಂಗತಿಯು ವಿಸ್ಮಯಕಾರಕ. ಇದಕ್ಕೆ ಟಿಂಟ್ ಪದ್ಧತಿ ಇಲ್ಲವೆ ಛಾಯಾ ಪದ್ಧತಿ ಎಂದು ಹೆಸರು. ಇದು ಹಿಂದಿನ ಕಾಲದ ಕಮ್ಮಾರರಿಗೆ ಬಹಳ ಉಪಯುಕ್ತವಾಗಿತ್ತು. ಬಣ್ಣದಲ್ಲಿಯ ಬದಲಾವಣೆ ಆ ಲೋಹ ವಸ್ತುವಿನ ಕಾಠಿಣ್ಯ ಮತ್ತು ಹದವನ್ನು ಸೂಚಿಸಬಲ್ಲದು. ಬೈರಿಗೆ (ಸ್ಕ್ರೂಡ್ರೈವರ್)ಗಳನ್ನು ಒಣಹುಲ್ಲಿನ ಬಣ್ಣಕ್ಕೂ ಹದಗೊಳಿಸುತ್ತಾರೆ. ಚೌಶ ಅಂದರೆ ಉಳಿ ಮತ್ತು ಬೈರಿಗೆ ಯಂತ್ರ ಅಂದರೆ ಡ್ರಿಲ್ಗಳನ್ನು ಕಡುಕೆಂಪು ಬಣ್ಣಕ್ಕೂ ಹದಗೊಳಿಸಲಾಗುತ್ತದೆ. ಇದಕ್ಕೆ ಉದಾಹರಣೆಯಾಗಿ ಹಳಿಂಗಳಿ, ಹಳ್ಳೂರು, ತಡಕನಹಳ್ಳಿ ನೆಲೆಗಳಲ್ಲಿಯ ಬೃಹತ್ಶಿಲಾ ಸಂಸ್ಕೃತಿಯ ವಸ್ತುಗಳನ್ನು ನೋಡಬಹುದು. ಹಳಿಂಗಳಿಯ ಉತ್ಖನನ ಮಾಡಿದ ಬೃಹತ್ಶಿಲಾಯುಗದ ಮೂರನೆಯ ಶಿಲುಬೆಯಾ ಕಾರದ ಕಲ್ಗೋರಿಯಲ್ಲಿ ಕಬ್ಬಿಣದ ಸಣ್ಣ ಸಣ್ಣ ಉಪಕರಣಗಳಿದ್ದವು. ಇವುಗಳಲ್ಲಿ ದೀಪದ ಹಣತೆಗಳು, ಪಟ್ಟಿಗಳು, ಕೊಂಡಿಗಳು, ಕೊಕ್ಕೆಗಳು, ಅರ್ಧವರ್ತುಲದ ಅಲಗುಗಳು, ಹಿಡಿಕೆಗಳು, ಸರಳುಗಳು, ನಿರ್ದಿಷ್ಟ ಆಕಾರವಿಲ್ಲದ ವಸ್ತುಗಳಿವೆ. ಚೌಕಾಕಾರದ ಒಂದು ತಾಮ್ರದ ತಗಡು ಕೂಡಾ ಇದ್ದಿತು. ಇದ್ದಿಲಿನ ತುಣುಕುಗಳ ಇಂಗಾಲ 14 ಕಾಲಮಾಪನ ಪ್ರ.ಶ.ಪು.80ನ್ನು ಸೂಚಿಸುತ್ತದೆ. ತುಕ್ಕು ಹಿಡಿದ ಈ ಕಬ್ಬಿಣ ಉಪಕರಣಗಳಲ್ಲಿ ಎರಡು ಕಬ್ಬಿಣ ಸರಳುಗಳನ್ನು ಲೋಹರಚನಾಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಿದಾಗ ಕೆಳಕಂಡ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಎರಡು ಸರಳು (ನಂ.1 ಮತ್ತು 2)ಗಳಿಗೆ ಕ್ಯಾಲ್ಷಿಯಮ್ ಕಾರ್ಬೋನೆಟ್ ಮತ್ತು ಫೆರಿಕ್ ಆಕ್ಸೈಡ್ಗಳಿಂದ ಮಾಡಿದ ಬಿಳಿ ಮಿಶ್ರಿತ ಕಂದುಬಣ್ಣವನ್ನು ಹಚ್ಚಲಾಯಿತು. ಅವುಗಳ ಉದ್ದಗಲಗಳನ್ನೆಲ್ಲ ತಿಕ್ಕಿ ನುಣುಪುಗೊಳಿಸಲಾಯಿತು. ಎರಡೂ ಸರಳುಗಳ ಅಂತರ ಭಾಗಗಳ ಲೋಹವು ಕೂಡ ಇನ್ನೂ ಹೊಳೆಯುತ್ತಿರುವ ಸ್ಥಿತಿಯಲ್ಲಿಯೆ ಕಂಡುಬಂತು. ಒಂದನೆಯ ಸರಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಶೇಕಡವಾರು 0.13ರಷ್ಟು ಗಂಧಕ, 0.15ರಷ್ಟು ಫಾಸ್ಫರಸ್, 0.9ರಷ್ಟು ಸಿಲಿಕಾನ್ ಹಾಗೂ 0.14ರಷ್ಟು ಟಿಟ್ಯಾನಿಯಮ್ ಅದರಲ್ಲಿದ್ದುದು ಕಂಡುಬಂತು. ಕಬ್ಬಿಣವೆ ಶೇ.98.8ರಷ್ಟು, ಕಾರ್ಬನ್ ಶೇ.0.18ರಷ್ಟಿತ್ತು. ಎರಡನೆಯ ಸರಕಿನಲ್ಲಿ ಶೇಕಡವಾರು 0.11ರಷ್ಟು ಸಲ್ಫರ್, 0.12ರಷ್ಟು ಫಾಸ್ಫರಸ್, 0.9ರಷ್ಟು ಸಿಲಿಕಾನ್, 0.8ರಷ್ಟು ಮೆಗ್ನೀಶಿಯಮ್, 0.1ರಷ್ಟು ಕ್ಯಾಲ್ಷಿಯಮ್ ಮತ್ತು 0.13ರಷ್ಟು ಟಿಟ್ಯಾನಿಯಮ್ಗಳನ್ನು ಹೊಂದಿದೆ. ಕಬ್ಬಿಣದ ಶುದ್ಧತೆಯ ಶೇ.0.13ರಷ್ಟಿದೆ. ಎರಡೂ ಸರಳುಗಳ ಕೆಲ ಭಾಗಗಳ ಸೂಕ್ಷ್ಮರಚನೆಗಳು ಬಹಳ ಸಾಮ್ಯವನ್ನು ಹೊಂದಿವೆ. ಎಲ್ಲ ಭಾಗಗಳಲ್ಲಿ ಗಸಿಯ ಪ್ರಮಾಣ ಅಲ್ಪಸ್ವಲ್ಪವಾಗಿ ಇದ್ದದ್ದು ಕಂಡುಬಂದಿತು. ಕೆಲವು ಆಕ್ಸೈಡ್ ಗುಣಗಳೂ ಕಂಡುಬಂದಿವೆ. ಶೇ.98ರಷ್ಟಿನ ಇಥಿಲ್ ಇಲ್ಲವೆ ಮೀಥೈಲ್ ಆಲ್ಕೊಹಾಲಿನಲ್ಲಿ ಶೇ.2ರಷ್ಟಿದ್ದ ನಿತಾಲದಿಂದ ಕೆತ್ತಿದಾಗ ಬಿರುಸಾದ ಭಾಗವೂ ಸರಕುಗಳಲ್ಲಿ ಕಂಡುಬಂದಿದೆ. ವಸ್ತುವಿನ ವಿವಿಧ ಹಂತಗಳನ್ನು ಆಯ್ಕೆ ಮಾಡಬೇಕಾದರೆ ಈ ಬಗೆಯ ಕೆತ್ತುವಿಕೆ ಅವಶ್ಯವಾಯಿತು. ಹಾಗೆ ಮಾಡುವುದರಿಂದ ಈ ವಸ್ತು ಅಥವಾ ಲೋಹ ಯಾವ ಬಗೆಯ ಉಷ್ಣಕ್ರಿಯೆಗೆ ಒಳಗಾಗಿದೆ ಎಂಬುದನ್ನು ತಿಳಿಯಬಹುದು. ಬಿರುಸಾದ ಕಪ್ಪು ಪುಡಿಯ ಬಣ್ಣವನ್ನು ಆಳವಾಗಿ ಹೊಂದಿತ್ತು. ಈ ಎರಡು ವಸ್ತುಗಳನ್ನು ಮೆದು ಕಬ್ಬಿಣದಿಂದಲೇ ಮಾಡಲಾಗಿತ್ತು. ಒಂದನೆಯದು ಸರಳಿನ ತುದಿಯು ಇಂಗಾಲೀಕರಣದ ಕವಚವನ್ನು ಹೊಂದಿತ್ತು. ಇದಕ್ಕೂ ಮೊದಲು ಇದಕ್ಕೆ ಕುಲುಮೆಯಲ್ಲಿ ಕಾಯಿಸಿ ಬೇಕಾದ ಆಕಾರವನ್ನು ತರಲಾಯಿತು. ಇದರ ತುದಿಯ ಒಂದು ಭಾಗದ ಅಂಚಿನಲ್ಲಿ ಇಂಗಾಲದ ಅಂಶ ಹೆಚ್ಚು. ಇದಕ್ಕೆ ಮಾರ್ಟೆನ್ಸೈಟ್ ಮತ್ತು ಬೈನೈಟದ ಮಿಶ್ರಣದಿಂದೊಡಗೂಡಿದ ಲೋಹರಚನೆಯಿದ್ದರೆ ಹೀಗಾಗುತ್ತದೆ. ಇವೆರಡಕ್ಕೂ ಕಾರಣವೆಂದರೆ ಈ ವಸ್ತುವನ್ನು ಇದರ ಕಾಯ್ದ ಸ್ಥಿತಿಯಿಂದ ತಣ್ಣಗಾಗಿಸುವ ವೇಗವೂ ಹೆಚ್ಚಿರುತ್ತದೆ. ಈ ವಸ್ತುವಿನ ಫೆರೈಟ್ ಭಾಗ ಸಾಧಾರಣವಾಗಿ ಒತ್ತೊತ್ತಾಗಿರುತ್ತದೆ. ಅಂದರೆ ಮೆದು ಕಬ್ಬಿಣದ ಚಿಕ್ಕದಾದ ಒಂದು ಮುದ್ದೆಗೆ ಒರಟು ಆಕಾರವನ್ನು ಕೊಟ್ಟು ಆ ಮೇಲೆ ಅದನ್ನು ಇಂಗಾಲೀಕರಣ ಗೊಳಿಸಿದಂತೆ ತೋರುತ್ತದೆ. ಈ ಕಬ್ಬಿಣವೂ ಇಂಗಾಲೀಕರಣಗೊಂಡ ಭಾಗದತ್ತ ಹೆಚ್ಚು ಹೆಚ್ಚು ಬಿರುಸಾಗುತ್ತ ಬರುತ್ತದೆ. ಎರಡನೆಯ ಸರಳಿನ ಒಂದು ತುದಿಗೆ ಪದರುಳ್ಳ ರಚನೆಯಿತ್ತು. ಇಂಗಾಲೀಕರಣಗೊಂಡ ಪಟ್ಟಿಗಳನ್ನು ಜೋಡಿಸಿ ಈ ಭಾಗವನ್ನು ಮಾಡಿರಬಹುದು. ಫೆರೈಟ್ ಅಚ್ಚಿನಲ್ಲಿ ಸಿಮೆಂಟೈಟ್ ಅನ್ನು (ಫೆರಿಕ್ ಕಾರ್ಬೈಡ್-ಎಫ್ ಇ 3 ಸಿ) ಗೋಲಾಕಾರಕ್ಕೆ ಇಳಿಸಿದಂತೆ ತೋರುತ್ತದೆ. ಈ ಸರಳನ್ನು ಅಡ್ಡ ಕತ್ತರಿಸಿ ನೋಡಿದಾಗ ಅಲ್ಲಿ ಒಂದು ಭಾಗದಲ್ಲಿ ಒರಟು ಕಣಗಳು ಕಾಣುತ್ತಿತ್ತು. ಈ ವಸ್ತು ಸು.10000 ಸೆ ನಲ್ಲಿ ಕಾಯಿಸಿದಾಗ ಇದನ್ನು ತಂಪುಗೊಳಿಸಿದಂತೆ ತೋರುತ್ತದೆ. ಮೇಲೆ ಅದನ್ನು ಶೀಘ್ರವಾಗಿ ಕಡಿಮೆ ಆಗುತ್ತಿದ್ದ ಶಾಖದಲ್ಲಿ ರೂಪಗೊಳಿಸಿರ ಬಹುದು. ಇದರಲ್ಲಿಯ ನ್ಯೂಮನ್ ಸಮೂಹಗಳು ಮತ್ತು ಅಸಮಾನ ಕಣಗಳು ಇದನ್ನು ಸೂಚಿಸುತ್ತಿದ್ದುವು. ಉಕ್ಕಿನಲ್ಲಿ ಸಲ್ಫರ್ ಮತ್ತು ಫಾಸ್ಫರಸ್ಗಳು ಅಲ್ಪ ಪ್ರಮಾಣದಲ್ಲಿ ಇವೆಯಾದ್ದರಿಂದ ಈ ಉಕ್ಕನ್ನು ತಯಾರಿಸಲು ಬಳಸಿದ ಅದಿರು ಬಹಳ ಉತ್ತಮ ಗುಣಮಟ್ಟದ್ದಾಗಿರಬೇಕು. ಆದರೆ ಈ ವಸ್ತುವನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದಾಗ ಈ ಮೊದಲೇ ಹೇಳಿದಂತೆ ಸಲ್ಫರ್ ಮತ್ತು ಫಾಸ್ಫರಸ್ಗಳು ಕೊಂಚ ಹೆಚ್ಚಿನ ಮಟ್ಟದಲ್ಲಿಯೇ ಇದ್ದದ್ದು ಕಾಣುತ್ತಿತ್ತು. ಆದ್ದರಿಂದ ಈ ವಸ್ತುವನ್ನು ಕೆಳ ಗುಣಮಟ್ಟದ ಅದಿರಿನಿಂದ ತಯಾರಿಸಬಹುದೆಂದು ಹೇಳಬಹುದು. ಈ ಎರಡೂ ವಸ್ತುಗಳಲ್ಲಿ ಕಶ್ಮಲಗಳ ರಚನೆ ಇನ್ನೂ ಕುತೂಹಲಕಾರಿಯಾಗಿದೆ. ಈ ಎರಡೂ ವಸ್ತುಗಳನ್ನು ಒಂದೇ ಮೆದು ಕಬ್ಬಿಣದಿಂದ ಮಾಡಿದ್ದನ್ನು ಅದು ಸೂಚಿಸುತ್ತದೆ. ಆ ಮೆದು ಕಬ್ಬಿಣವಾದರೂ ಟಿಟೈನಿಫೆರಸ್ ಅದಿರಿನಿಂದ ಉತ್ಪಾದಿಸಬಹುದಾಗಿದೆ. ಈ ವಸ್ತುವನ್ನು ಲೋಹರಚನಾ ಶಾಸ್ತ್ರೀಯವಾಗಿ ಪರೀಕ್ಷಿಸಿದಾಗ ವಿಶೇಷತಃ ಇಂಗಾಲೀಕರಣಗೊಂಡ ಅದರ ತುದಿಭಾಗವನ್ನು ಇಂಥ ಪರೀಕ್ಷೆಗೆ ಒಳಪಡಿಸಿದಾಗ ಇದು ಒಂದು ಚಿಕ್ಕ ಮೊನೆ ಇಲ್ಲವೆ ಬಾಣದ ತುದಿಯಾಗಿರಬಹುದೆಂದು ತೋರುತ್ತದೆ. ಬೃಹತ್ಶಿಲಾಯುಗದ ಒಂದೇ ಸ್ಮಾರಕದಲ್ಲಿ 13ರಷ್ಟು ಸಂಖ್ಯೆಯಲ್ಲಿ ಸರಳುಗಳು ಒಂದೇ ಎಡೆಯಲ್ಲಿ ಇದ್ದುದ್ದನ್ನು ನೋಡಿದರೆ ಈ ಸರಳುಗಳು ಅಪುರ್ಣಾವಸ್ಥೆಯಲ್ಲಿ ಇದ್ದ ಉತ್ಪಾದನೆಗಳಾಗಿರಬಹುದು ಎಂದೆನಿಸುತ್ತದೆ. ಬಾಣದ ಮೊನೆಯನ್ನು ಶಾಸ್ತ್ರೀಯವಾಗಿ ಪರೀಕ್ಷಿಸಲಾಯಿತು. ಅದೊಂದು ಅತಿಯಾಗಿ ಜಂಗುಗಟ್ಟಿದ ವಸ್ತು. ಅದರಲ್ಲಿ ಲೋಹಗಭರ್Àವನ್ನೆ ಕಾಣುವುದು ಸಾಧ್ಯವಿಲ್ಲ. ಆದ್ದರಿಂದ ಕಾರ್ಬೈಡ್ ಕಣಗಳ ಅವಶೇಷಗಳ ಆಧಾರದಿಂದ ಅದರ ತಯಾರಿಕೆಯ ತಂತ್ರವನ್ನು ತಿಳಿಯಲು ಯತ್ನಿಸಲಾಯಿತು.
ಉಕ್ಕಿನಲ್ಲಿ ಪರ್ಲೈಟ್ ಎಂಬ ಒಂದು ಸಾಮಾನ್ಯ ಘಟಕವಿರುತ್ತದೆ. ಕಬ್ಬಿಣದಲ್ಲಿ ಮಾತ್ರ ಪರ್ಲೈಟ್ನಿಂದ ವ್ಯಾಪ್ತವಾಗುವ ಕ್ಷೇತ್ರದ ಪ್ರಮಾಣವೂ ಶೂನ್ಯದಷ್ಟು ಕೂಡ ಇರಬಲ್ಲದು. ಆದರೆ ಇಂಗಾಲವು ಶೇ.0.8ರಷ್ಟಿದ್ದರೆ, ಆ ವಸ್ತುವಿನ ಭಾಗವು ಪರ್ಲೈಟ್ ಕ್ಷೇತ್ರವನ್ನು ಮಾತ್ರ ತೋರಿಸುತ್ತದೆ. ಈ ಪರ್ಲೈಟ್ ತನ್ನ ಸೂಕ್ಷ್ಮರಚನೆಯ ಪ್ರತಿರೂಪಗಳನ್ನು ಕಬ್ಬಿಣದ ಆಕ್ಸೈಡ್ನಲ್ಲಿ ಬಿಡಬಹುದು. ಇದೊಂದು ಬಹಳ ಜಂಗುಗಟ್ಟಿದ ವಸ್ತುವಾಗಿರುತ್ತದೆ. ಇಂಗಾಲದ ಅಂಶ ಹೆಚ್ಚಾಗಿದ್ದರೆ ಸೂಕ್ಷ್ಮ ರಚನೆಯಲ್ಲಿ ಮುಕ್ತ ಸಿಮೆಂಟೈಟಿನ (ಫೆರಿಕ್ ಕಾರ್ಬೈಡ್) ಸಣ್ಣ ಸಣ್ಣ ಗೋಲಿಗಳು ಕಾಣುತ್ತವೆ. ಇದಲ್ಲದೆ ಪರ್ಲೈಟಿನಲ್ಲಿ ಅಡಕಗೊಂಡ ಸಿಮೆಂಟೈಟ್ ಅಂತೂ ಇದ್ದೇ ಇರುತ್ತದೆ.
ಸಂಪುರ್ಣವಾಗಿ ಆಕ್ಸೈಡೀಕರಣಗೊಂಡ ಮತ್ತು ಉಕ್ಕಿನದೆಂದು ತರ್ಕಿಸಲಾದ ಉಪಕರಣಗಳನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಇಂತಹ ಸಿಮೆಂಟೈಟ್ ರಚನೆಗಳ ಅಥವಾ ಪರ್ಲೈಟ್ಗಳ ಸುಳಿಯನ್ನು ಹುಡುಕಿ ತೆಗೆಯಬೇಕಾದುದು ಅವಶ್ಯ. ಗೋಲಿಗಳು ಕಾರ್ಬೈಡುಗಳ ಪ್ರತಿರೂಪಗಳ ಅವಶೇಷಗಳಾಗಿರಬಹುದು. ಜಂಗುಗಟ್ಟುವಿಕೆಯಿಂದಾಗಿ ಇವು ಇಂಗಾಲಾಂಶ ವಸ್ತುಗಳಿಂದ ಕಪ್ಪಾಗಿರಲು ಸಾಧ್ಯ. ಇಂತಹ ವಸ್ತುಗಳು ರೂಪವಿಹೀನ ಇಂಗಾಲ ಮತ್ತು ಆಕ್ಸೈಡ್ಗಳ ದಟ್ಟ ಮಿಶ್ರಣಗಳೂ ಆಗಿರಬಹುದು. ಇಂತಹ ವಸ್ತುಗಳಲ್ಲಿಯ ಆಕ್ಸೈಡ್ ಅವಶೇಷಗಳಲ್ಲಿ ಕಾರ್ಬೈಡುಗಳ ಪ್ರತಿರೂಪಗಳ ಅಸ್ತಿತ್ವ ಇದ್ದರೆ ಈ ವಸ್ತುವನ್ನು ಉಕ್ಕಿನ ಮೇಲೆ ಮಾಡಲಾಗಿದೆ ಎಂದು ಅರ್ಥ.
ಮೇಲೆ ಹೇಳಿದ ವಿಷಯಗಳಿಂದ ಕೆಲವೊಂದು ಸಂಗತಿಗಳನ್ನು ಅರಿತುಕೊಳ್ಳಬಹುದು. ಹಳ್ಳೂರಿನ ಬಾಣದ ಮೊನಚನ್ನು ಪದರು ಬೆಸುಗೆಯ ತಂತ್ರದಿಂದ (ಲ್ಯಾಮಿನೇಶನ್ ತಂತ್ರ) ಮಾಡಿರಬಹುದು. ಅಂದರೆ ಇಂಗಾಲೀಕರಣಗೊಂಡ ಇಲ್ಲವೆ ಉಕ್ಕಿನಲ್ಲಿ ಪರಿವರ್ತಿ ತವಾದ ಮೆದು ಕಬ್ಬಿಣದ ಪಟ್ಟಿಗಳನ್ನು ಒಂದರಲ್ಲೊಂದು ಬೆಸೆದು ನಿರ್ದಿಷ್ಟ ಆಕಾರವನ್ನಿತ್ತಿರ ಬಹುದು. ಇದರಲ್ಲಿ ಲೋಹದ ಹರಳುಗಳಿಲ್ಲ. ಆದರೆ ಕಾರ್ಬೈಡ್ ಕಣಗಳು ಅವಶೇಷಗಳ ಜಾಲದಲ್ಲಿ ವ್ಯವಸ್ಥಿತವಾಗಿರುವ ಸಂಗತಿಯನ್ನು ಗಮನಿಸಿದರೆ ಈ ವಸ್ತುವು ಉಕ್ಕಿನಿಂದ ಆಗಿರಬಹುದೆಂದು ತರ್ಕಿಸಬಹುದು. ತಡಕನಹಳ್ಳಿಯಲ್ಲಿಯ ಕೆಲ ಕಬ್ಬಿಣದ ವಸ್ತುಗಳನ್ನು ಪರೀಕ್ಷಿಸಿದಾಗ ಇವುಗಳನ್ನು ಕೂಡ ಉಕ್ಕಿನ ಮೇಲೆಯೆ ಮಾಡಿದ್ದಾಗಿ ಕಂಡುಬಂದಿದೆ. ಅವಶೇಷ ರೂಪದಲ್ಲಿ ಪರ್ಲೈಟ್ ಕಣಗಳನ್ನು ಕಂಡು ಈ ತರ್ಕವನ್ನು ಮಾಡಲಾಗಿದೆ.
ಒಟ್ಟಿನಲ್ಲಿ ತಾಮ್ರ ಮತ್ತು ಕಬ್ಬಿಣದ ಲೋಹಗಳನ್ನು ಉತ್ಪಾದಿಸುವುದರಲ್ಲಿ ಪ್ರಾಗೈತಿಹಾಸಿಕ ಕರ್ನಾಟಕದಲ್ಲಿಯ ಲೋಹಗಾರರು ಸಾಕಷ್ಟು ಪರಿಣತರಾಗಿದ್ದರು ಎಂಬ ಮಾತನ್ನು ಈ ಮೇಲೆ ವಿವರಿಸಲಾದ ಸಂಗತಿಗಳಿಂದ ನಿರ್ಣಯಿಸಬಹುದು. ಕಬ್ಬಿಣದ ವಸ್ತುಗಳ ಬಗ್ಗೆ ಹೇಳಬೇಕೆಂದರೆ ಈ ಕೆಲಸದಲ್ಲಿ ತೊಡಗಿದ ಕಮ್ಮಾರರು ತಮ್ಮ ಸರಕುಗಳ ಬಗ್ಗೆಯೂ ಇವುಗಳ ಗುಣಧರ್ಮಗಳ ಬಗ್ಗೆಯೂ ಸಂಪುರ್ಣವಾದ ಅರಿವು ಮತ್ತು ತಿಳುವಳಿಕೆಯನ್ನು ಉಳ್ಳವರಾಗಿದ್ದರು. ಕಬ್ಬಿಣಕ್ಕೆ ಕಾವು ಕೊಡುವ ಕೆಲಸವನ್ನು ಕರಾರುವಾಕ್ಕಾಗಿ ಮಾಡುತ್ತಿದ್ದರು. ವಸ್ತುಗಳ ಅಂಚನ್ನು ರೂಪಿಸುವದರಲ್ಲಿಯೂ ತುದಿ ಅಥವಾ ಮೊನಚುಗಳನ್ನು ರೂಪಿಸುವದರಲ್ಲಿಯೂ ಆಶ್ಚರ್ಯಕರ ಪರಿಣತಿಯನ್ನು ಸಂಪಾದಿಸಿದ್ದರು. ಮೆದುಕಬ್ಬಿಣದ ಪಟ್ಟಿಗಳ ಮೇಲ್ಪದರುಗಳನ್ನು ಇವರು ಇಂಗಾಲೀಕರಣಗೊಳಿಸಿದ್ದನ್ನು ನೋಡಿದರೆ, ವ್ಯವಸ್ಥಿತವಾಗಿ ಉಕ್ಕನ್ನು ತಯಾರಿಸುವುದನ್ನು ಇವರು ಬಲ್ಲವರಾಗಿದ್ದರು ಎಂಬುದನ್ನು ತೋರಿಸಿ ಕೊಡುತ್ತದಲ್ಲದೆ ಈ ಕಮ್ಮಾರರ ಕರ್ಮಪ್ರಾವೀಣ್ಯತೆಯನ್ನು ಸೂಚಿಸುತ್ತದೆ. ಕರ್ನಾಟಕದಲ್ಲಿಯ ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ವಸ್ತುಗಳನ್ನು ಮತ್ತು ನಮೂನೆ ಗಳನ್ನೂ ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಇವುಗಳಲ್ಲಿಯ ಕಶ್ಮಲಗಳಲ್ಲಿ ಟಿಟ್ಯಾನಿಯಮ್ ಇದ್ದದ್ದು ಕಂಡುಬರುತ್ತದೆ. ಆದರೆ ಅದೇ ಕಾಲಕ್ಕೆ ಸಂಬಂಧಿಸಿದ ಆಂಧ್ರದಲ್ಲಿ ನಮೂನೆಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಟಿಟ್ಯಾನಿಯಮ್ ಲಭ್ಯವಾಗುವುದಿಲ್ಲ. ಇದರಿಂದ ಕಮ್ಮಾರರು ತಮ್ಮ ಸುತ್ತಮುತ್ತಲು ಇದ್ದ, ಇಲ್ಲವೆ ಬೇರೆ ಬೇರೆ ವಿಶಿಷ್ಟವಾದ ಅದಿರುಗಳನ್ನು ಬಳಸುತ್ತಿದ್ದರು ಎಂಬುದು ಸಿದ್ಧವಾಗುತ್ತದೆ. ಆಂಧ್ರಪ್ರದೇಶದ ನಮೂನೆಗಳಲ್ಲಿ ಅಲ್ಯುಮಿನಾ ಕೂಡ ಹೆಚ್ಚಿನ ಅಂಶದಲ್ಲಿತ್ತು ಎಂಬುದನ್ನು ದೃಢಪಡಿಸುತ್ತದೆ ಮತ್ತು ಅನುಮಾನಕ್ಕೆ ಎಡೆ ಕೊಡುತ್ತದೆ. ಆದ್ದರಿಂದ ಕರ್ನಾಟಕದಲ್ಲಿಯ ಲೋಹಶಾಸ್ತ್ರ ತಂತ್ರ ಪ್ರತ್ಯೇಕವಾಗಿಯೂ ಸ್ವತಂತ್ರವಾಗಿಯೂ ಬೆಳೆಯಿತು ಎಂದು ಹೇಳಬಹುದಾಗಿದೆ. ಪ್ರ.ಶ.ಪು.ಸು.1200 ವರ್ಷಗಳ ಪುರ್ವದಲ್ಲಿಯೆ ಕರ್ನಾಟಕದಲ್ಲಿಯ ಬೃಹತ್ಶಿಲಾಯುಗದ ಜನರಿಗೆ ಉಕ್ಕು ತಯಾರಿಸುವ ತಂತ್ರ ಚೆನ್ನಾಗಿ ತಿಳಿದಿತ್ತು. (ಜೆ.ಎಬಿ.)
ಈ ಕೆಳಗಿನ ಭಾಗವು ಬೇರೊಂದು ಲೇಖನದ ಭಾಗವಾಗಿದೆ.
ಇಂಗ್ಲೆಂಡಿನಲ್ಲಿ ಮೂರು ಸಂಸ್ಕೃತಿಯ ಅವಶೇಷಗಳನ್ನು ಕಬ್ಬಿಣ ಯುಗದಲ್ಲಿ ಗುರುತಿಸಿದ್ದರೂ ಅವು ಪರಸ್ಪರ ಸಮಕಾಲೀನವೆಂಬುದು ತಿಳಿದುಬರುತ್ತದೆ. ಫ್ರಾನ್ಸಿನ ಗಾಲ್ ಮತ್ತು ಆಗ್ನೇಯ ದಿಕ್ಕುಗಳಿಂದ ಅವು ಪ್ರವೇಶಿಸಿದವು. ಪ್ರ.ಶ.ಪು. 450ರ ವೇಳೆಗೆ ಹಾಲ್ಸ್ಪಾಟ್ ಕಬ್ಬಿಣಯುಗ ಸಂಸ್ಕೃತಿಯ ಅವಶೇಷಗಳು ವೆಸಕ್ಸ್, ಸಾಲಿಸ್ಬರಿ, ನಾರ್ಥಾಂಪ್ಟನ್ ಷೈರ್ ಮತ್ತು ಥೇಮ್ಸ್ ಬಯಲಿನಲ್ಲಿ ಕಂಡುಬರುತ್ತವೆ. ಚಚ್ಚೌಕ ಹೊಲಪದ್ಧತಿ, ವ್ಯವಸಾಯ ರಂಗದಲ್ಲಿ ಈ ಜನರ ಮುಖ್ಯ ಕಾಣಿಕೆ. ಗೋದಿ ಬಾರ್ಲಿಗಳನ್ನು ಬೆಳೆಯುತ್ತಿದ್ದರು. ನೇಯ್ಗೆ ಕಲೆ ಪ್ರಾರಂಭವಾಯಿತು. ಕೋಟೆಗಳು ಬಳಕೆಗೆ ಬಂದವು. ಮಧ್ಯಕಾಲೀನ ಸಂಸ್ಕೃತಿಯಾದ ಲ್ಯಾಟಿನ್ಸಂಸ್ಕೃತಿ ಪುರ್ವಪ್ರದೇಶಗಳಲ್ಲಿ ಪ್ರ.ಶ.ಪು.300ರ ವೇಳೆಗೆ ಬೆಳಕಿಗೆ ಬಂತು. ಯಾರ್ಕ್ಷೈರ್, ಕೆಂಟ್, ವೆರ್ಸೆಕ್ಸ್ ಮುಂತಾದಡೆಗಳಲ್ಲಿ ಪ್ರಬಲವಾಗಿದ್ದ ಈ ಸಂಸ್ಕೃತಿಯಲ್ಲಿ ಕತ್ತಿ, ಗುರಾಣಿ, ಕುದುರೆ ಜೀನು, ಯುದ್ಧರಥಗಳ ಬಳಕೆ ಹೆಚ್ಚಾಯಿತು. ಈ ಜನ ಯುದ್ಧಪ್ರಿಯರಾಗಿದ್ದರು. ಪ್ರ.ಶ.ಪು.50ರ ಸುಮಾರಿಗೆ ಅಂತ್ಯಕಾಲೀನ ಕಬ್ಬಿಣಯುಗದ ಬೆಲೆ ಸಂಸ್ಕೃತಿಯ ಪ್ರವೇಶವಾಯಿತು. ಈ ಕಾಲದಲ್ಲಿ ಕೆಲ್ಟಿಕ್ ಟ್ಯುಟಾನಿಕ್ ಪಂಗಡಗಳ ಮಿಶ್ರಜನಾಂಗ ಹುಟ್ಟಿಕೊಂಡಿತು. ಇವರು ಕೆಂಟ್, ವೆರ್ಸೆಕ್ಸ್ ಪ್ರಾಂತ್ಯಗಳಲ್ಲಿ ಪ್ರಬಲರಾಗಿದ್ದರು. ಕೆಂಟ್, ವೆರ್ಸೆಕ್ಸ್ ಹರ್ಟ್ಫರ್ಡ್ಷೈರ್, ಮಿಡ್ಸೆಕ್ಸ್ ಮುಂತಾದ ಪ್ರದೇಶಗಳಲ್ಲಿ ಕ್ರಮೇಣ ಹಬ್ಬಿ, ಸುವ್ಯವಸ್ಥಿತ ರಾಜ್ಯಗಳನ್ನು ಸ್ಥಾಪಿಸಿ ಇತಿಹಾಸಯುಗವನ್ನು ಪ್ರಾರಂಭಿಸಿದರು. ಪ್ರ.ಶ.43ರಲ್ಲಿ ರೋಮನ್ನರು ಇಂಗ್ಲೆಂಡಿನ ಮೇಲೆ ದಾಳಿ ಮಾಡುವವರೆಗೂ ಇವರು ಪ್ರಬಲವಾಗಿದ್ದು ಹಂತಹಂತವಾಗಿ ರೋಮನ್ ಮತ್ತು ಬೆಲ್ಜಿಕ್ ಮಿಶ್ರಸಂಸ್ಕೃತಿಗಳನ್ನು ಇಲ್ಲಿ ಹರಡಿದರು.