ಕರ್ನಾಟಕದ ಧರ್ಮಗಳು : ಕರ್ನಾಟಕದ ಧರ್ಮಗಳು ಬಹುಮಟ್ಟಿಗೆ ಭಾರತದ ಎಲ್ಲ ಧರ್ಮಗಳನ್ನೂ ಒಳಗೊಂಡಿವೆ. ಭಾರತದ ಧರ್ಮ ಒಂದು ಧಾರ್ಮಿಕ ಮಹಾಸಾಗರ. ಈ ಸಾಗರಕ್ಕೆ ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳಿಂದ ಬೇರೆ ಬೇರೆ ಕಾಲಗಳಲ್ಲಿ ಧಾರ್ಮಿಕ ವಿವೇಚನೆಯ ಪ್ರವಾಹಗಳು ಹರಿದು ಬಂದು ಸೇರಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳಲ್ಲದೆ, ಭಾರತದ ಆಚಿನಿಂದ ಬಂದ ಧರ್ಮಗಳೂ ಅದರ ಧಾರ್ಮಿಕ ವಿವೇಚನೆಯನ್ನು ಚೇತನಗೊಳಿಸಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳು ವೈದಿಕ, ಶೈವ, ವೈಷ್ಣವ, ತಾಂತ್ರಿಕ, ಶಾಕ್ತೇಯ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳು. ಹೊರಗಿನಿಂದ ಬಂದವು - ಕ್ರೈಸ್ತ, ಇಸ್ಲಾಂ ಮತ್ತು ಜರತುಷ್ಟ್ರ ಧರ್ಮಗಳು. ಭಾರತ ಅನಾದಿಕಾಲದಿಂದ ಪೋಷಿಸಿದ ಸರ್ವಮತಸಹಿಷ್ಣುತೆಯ ನೀತಿಯನ್ನು ಕರ್ನಾಟಕವೂ ಅನುಸರಿಸಿ ಪುಷ್ಟಿಗೊಳಿಸಿದೆ.
ಭಾರತದ ಧರ್ಮ ಕನಿಷ್ಠಪಕ್ಷ ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ಅದು ಬೆಳೆಯುತ್ತಿರುವ ಧರ್ಮ, ಅದರ ಬೆಳೆವಣಿಗೆ ಏಕಮುಖವಾದುದಲ್ಲ; ಬಹುಮುಖವಾದುದು. ಅದು ವೈಶಿಷ್ಟ್ಯದಿಂದ ಕೂಡಿದ ಏಕತೆಯನ್ನು ಏರ್ಪಡಿಸಿಕೊಂಡ ಧರ್ಮ; ಹಳೆಯದನ್ನು ಬಿಡದೆ ಹೊಸದನ್ನು ತನ್ನಲ್ಲಿ ಲೀನಗೊಳಿಸಿಕೊಳ್ಳುವುದು ಅದರ ಹುಟ್ಟುಗುಣ. ವೈದಿಕ ಧರ್ಮ : ಭಾರತದ ಧರ್ಮಕ್ಕೆ ಮೂಲ ವೇದಗಳು. ಅವುಗಳ ಹರವು ಸುಮಾರು ಮೂರು ಸಾವಿರ ವರ್ಷಗಳಷ್ಟು ದೀರ್ಘಕಾಲದ್ದು. ಹರವು ದೀರ್ಘವಾಗಿರುವಂತೆಯೆ ಅವುಗಳ ಬೆಳೆಯೂ ಅಪಾರವಾದದ್ದು ಮತ್ತು ಅಸಾಧಾರಣ ವೈವಿಧ್ಯದಿಂದ ಕೂಡಿದ್ದು. ವೇದ ಸಾಹಿತ್ಯದಷ್ಟು ವಿಶಾಲ ಮತ್ತು ವೈವಿಧ್ಯಮಯ ಸಾಹಿತ್ಯ ವಿಶ್ವದ ಬೇರೆಲ್ಲೂ ಕಂಡುಬರುವುದಿಲ್ಲ.
ವೇದಗಳು ನಾಲ್ಕು: ಋಗ್, ಯಜುರ್, ಸಾಮ ಮತ್ತು ಅಥರ್ವಣ. ಈ ಒಂದೊಂದು ವೇದದಲ್ಲೂ ಕ್ರಮವಾಗಿ ಸಂಹಿತೆ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳು ಎಂಬ ನಾಲ್ಕು ಭಾಗಗಳಿವೆ. ಸಂಹಿತೆಗಳು ದೇವತೆಗಳ ಸ್ತೋತ್ರಗಳು. ಯಜ್ಞಯಾಗಾದಿಗಳನ್ನು ತಿಳಿಸುವವು ಬ್ರಾಹ್ಮಣಗಳು. ಅವುಗಳ ಗೂಢಾರ್ಥವನ್ನು ವಿವೇಚಿಸುವವು ಆರಣ್ಯಕಗಳು. ಅಧ್ಯಾತ್ಮವನ್ನು ಬೋಧಿಸುವವು ಉಪನಿಷತ್ತುಗಳು. ಈ ವಿಭಾಗಗಳಲ್ಲಿ ಕೊನೆಯದಾದ ಉಪನಿಷತ್ತುಗಳು ವೈದಿಕಧರ್ಮಗಳ ಸಾರ ಸಂಗ್ರಹ. ಋಗ್ವೇದಸಂಹಿತೆಯಲ್ಲಿ ೧೦೨೮ ಋಕ್ ಅಥವಾ ಸ್ತೋತ್ರಗಳು ೧೦ ಮಂಡಲಗಳಲ್ಲಿ ಅಡಕವಾಗಿವೆ. ವಿವಿಧ ಮಹರ್ಷಿಗಳಿಂದ, ದ್ರಷ್ಟಾರರಿಂದ ರೂಪುಗೊಂಡ ಇವು ಮಾನವನಿರ್ಮಿತವಲ್ಲ. ಇವು ಅಪೌರುಷೇಯವೆಂದು ಹಿಂದೂಗಳ ನಂಬಿಕೆ. ಇಲ್ಲಿ ಸ್ತುತರಾಗಿರುವ ದೇವತೆಗಳನ್ನು ಭೂಮಿಯ, ಅಂತರಿಕ್ಷದ ಮತ್ತು ದ್ಯೌ ಅಥವಾ ಸ್ವರ್ಗದ ದೇವತೆಗಳೆಂದು ವಿಂಗಡಿಸಲಾಗಿದೆ. ಮೊದಲು ವರುಣ, ಅನಂತರ ಇಂದ್ರ ಇವರಲ್ಲಿ ಅಧಿದೇವತೆಗಳಾಗಿದ್ದರು. ಋಗ್ವೇದದ ಕೊನೆಯ ಕಾಲದಲ್ಲೇ ಏಕೇಶ್ವರ ವಾದದ ಬೀಜಾಂಕುರವಾಗಿತ್ತೆಂದು ಹೇಳಬಹುದು.
ವೇದೋಕ್ತವಾದ ಯಜ್ಞಯಾಗಾದಿ ಕರ್ಮಗಳನ್ನು ವಿವರಿಸುವ, ಅವುಗಳ ಆಚರಣೆಯ ಕ್ರಮವನ್ನು ತಿಳಿಸುವ ಸಾಹಿತ್ಯಕೃತಿಗಳಿಗೆ ಬ್ರಾಹ್ಮಣಗಳೆಂದು ಹೆಸರು. ಇವುಗಳಲ್ಲಿ ಅತ್ಯಂತ ಪುರಾತನವಾದುದು ಋಗ್ವೇದಕ್ಕೆ ಸೇರಿದ ಐತರೇಯ ಬ್ರಾಹ್ಮಣ. ಯಜುರ್ವೇದಕ್ಕೆ ಸೇರಿದ ತೈತ್ತಿರೀಯ ಪ್ರಮುಖ ಬ್ರಾಹ್ಮಣಗ್ರಂಥ. ಇತರ ವೇದಗಳಿಗೆ ಸೇರಿದ ಬ್ರಾಹ್ಮಣಗಳೂ ಉಂಟು.
ಯಜ್ಞಯಾಗಾದಿಗಳ ಗೂಡಾರ್ಥವನ್ನು ತಿಳಿಸುವ, ಸಾಮಾನ್ಯವಾಗಿ ಅರಣ್ಯಗಳಲ್ಲಿ ಗೋಪ್ಯವಾಗಿ ಬೋಧಿಸುತ್ತಿದ್ದ ಸಾಹಿತ್ಯಕ್ಕೆ ಆರಣ್ಯಕಗಳೆಂದು ಹೆಸರು.
ವೈದಿಕ ಸಾಹಿತ್ಯದ ಅಂತ್ಯಭಾಗದಲ್ಲಿ ಬರುವ ಉಪನಿಷತ್ತುಗಳಲ್ಲಿ ವೈದಿಕ ಆರ್ಯರ ತತ್ತ್ವವಿವೇಚನೆ ಶಿಖರವನ್ನು ಮುಟ್ಟಿದೆ. ಅವುಗಳಲ್ಲಿ ಕಂಡುಬರುವ ಸ್ವತಂತ್ರ ಆಲೋಚನೆ ಮತ್ತು ವಿಶಾಲಭಾವನೆ ಅಸದೃಶವಾದದ್ದು. ಯಜ್ಞಕರ್ಮಗಳು ಜೀವನದ ಆಚೆಯ ದಡವನ್ನು ಮುಟ್ಟಲು ಯೋಗ್ಯವಾದ ದೋಣಿಗಳಲ್ಲ, ಆಧ್ಯಾತ್ಯಿಕ ತತ್ತ್ವಜ್ಞಾನವೊಂದೇ ಮಾನವನ ಮುಕ್ತಿಗೆ ದಾರಿ ಎಂಬುದು ಇವುಗಳ ಉಪದೇಶ. ಜ್ಞಾನಸಿದ್ಧಿಗೆ ಬೇಕಾದ ಚಿತ್ತಶುದ್ಧಿಗೆ ಕರ್ಮ ಅಗತ್ಯವೆಂದು ಇವು ತಿಳಿಸುತ್ತವೆ. ಉಪನಿಷತ್ತುಗಳಲ್ಲಿ ಜೀವನ್ಮುಕ್ತಿಯಲ್ಲದೆ ಕ್ರಮಮುಕ್ತಿಯೂ ವರ್ಣಿತವಾಗಿದೆ.
ಇಲ್ಲಿನ ಮೋಕ್ಷಸಾಧನೆಗೆ ಅಗತ್ಯವಾದ ಉಪಾಸನೆ ಬಹ್ಮದ ಉಪಾಸನೆ. ಇಲ್ಲಿರುವುದೆಲ್ಲ ಬ್ರಹ್ಮವೇ (ಸರ್ವಂ ಖಲ್ವಿದಂ ಬ್ರಹ್ಮ). ಆತ್ಮವೂ ಬ್ರಹ್ಮವೂ ಒಂದೇ (ಅಯಮಾತ್ಮಾ ಬ್ರಹ್ಮ), ಬ್ರಹ್ಮವೇ ಅದು (ತತ್ತ್ವಮಸಿ) ಎಂಬ ಹೊಸ ಭಾವನೆಗಳು ಇಲ್ಲಿ ಪ್ರಕಾಶಕ್ಕೆ ಬಂದಿವೆ. ಋಗ್ವೇದದ ಕೊನೆಯ ಕಾಲದಲ್ಲಿ ಸತ್ ಒಂದೇ ಎಂಬ ಏಕತ್ವತತ್ತ್ವ ಕಂಡುಬರುತ್ತದೆ. ಆದರೆ ಉಪನಿಷತ್ತುಗಳಲ್ಲಿ ಆ ಏಕತ್ತತತ್ತ್ವ ಆತ್ಮರೂಪವಾದದ್ದು ಎಂಬ ಹೊಸ ಭಾವನೆ ಹೊರಹೊಮ್ಮುತ್ತದೆ. ವಿಶ್ವವನ್ನು ಆವರಿಸಿರುವ ತತ್ತ್ವವೂ ಮಾನವನಲ್ಲಿರುವ ಆತ್ಮವೂ ಒಂದೇ ಎಂಬ ಭಾವನೆ ಉಪನಿಷತ್ತುಗಳಿಗೇ ವಿಶಿಷ್ಟವಾದದ್ದು.
ಉಪನಿಷತ್ತುಗಳಲ್ಲಿ ಬೋಧಿಸಿರುವ ಬ್ರಹ್ಮನ್ ಏಕರೀತಿಯ ಬ್ರಹ್ಮವಲ್ಲ. ಬ್ರಹ್ಮನ್ ಮತ್ತು ಆತ್ಮಕ್ಕೂ ಬ್ರಹ್ಮನ್ ಮತ್ತು ವಿಶ್ವಕ್ಕೂ ಇರುವ ಸಂಬಂಧ ಏಕರೀತಿಯದಲ್ಲ. ಉಪನಿಷತ್ತುಗಳ ಕೆಲವು ಭಾಗಗಳಲ್ಲಿ ಬ್ರಹ್ಮವೊಂದೇ ಸತ್ಯ. ಜಗತ್ತು ಬರಿಯ ತೋರಿಕೆ ಎಂಬ ಭಾವನೆ ಇದೆ. ಇನ್ನು ಕೆಲವು ಭಾಗಗಳಲ್ಲಿ ಜಗತ್ತು ತೋರಿಕೆಯಲ್ಲ. ಅದೂ ಸತ್ಯ. ಆದರೆ ಅದು ಬ್ರಹ್ಮದಿಂದ ಬೇರೆಯಾಗಿ ಸ್ವತಂತ್ರವಿಲ್ಲ- ಎಂಬ ಭಾವನೆ ಇದೆ. ಆದುದರಿಂದಲೇ ಈ ಹೇಳಿಕೆಗಳ ಆಧಾರದ ಮೇಲೆ ಶಂಕರ, ರಾಮಾನುಜ, ಮಧ್ವ ಮುಂತಾದ ಭಾಷ್ಯಕಾರರು ಭಿನ್ನ ಭಿನ್ನ ಸಿದ್ಧಾಂತಗಳನ್ನು ಮಂಡಿಸಿದ್ದಾರೆ.
ಉಪನಿಷತ್ತುಗಳ ಕೆಲವು ಭಾಗಗಳಲ್ಲಿ ಬ್ರಹ್ಮನ್ ಪರಿಪೂರ್ಣ ಗುಣಗಳುಳ್ಳ ಸಗುಣ ಬ್ರಹ್ಮವೆಂದೂ ಮತ್ತೆ ಕೆಲವು ಭಾಗಗಳಲ್ಲಿ ಬ್ರಹ್ಮನ್ ಗುಣಾತೀತ ನಿರ್ಗುಣ ಬ್ರಹ್ಮವೆಂದೂ ಹೇಳಿದೆ. ಇನ್ನು ಕೆಲವು ಭಾಗಗಳಲ್ಲಿ ಸಗುಣ ವಿವರಣೆ, ನಿರ್ಗುಣ ವಿವರಣೆ ಎರಡೂ ಒಂದಾದ ಮೇಲೆ ಒಂದು ಬರುತ್ತವೆ. ಈ ಭಿನ್ನ ವಿವರಣೆಗಳ ಆಧಾರದ ಮೇಲೆ ಭಾಷ್ಯಕಾರರು ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ದ್ವೈತಾದ್ವೈತ ಇತ್ಯಾದಿ ಸಿದ್ಧಾಂತಗಳನ್ನು ಸ್ಥಾಪಿಸಲು ಯತ್ನಿಸಿದ್ದಾರೆ.
ಉಪನಿಷತ್ತುಗಳು ಬ್ರಹ್ಮವಿದ್ಯೆಯ ಸಾಧನಾವಿಧಾನವನ್ನು ಸ್ಪಷ್ಟವಾಗಿ ವಿವರಿಸಿರುತ್ತವೆ. ಆ ಸಾಧನಗಳು ಮೂರು- ಶ್ರವಣ, ಮನನ, ಧ್ಯಾನ. ಗುರುಮುಖೇನ ಅಧ್ಯಯನ ಮಾಡುವುದು ಶ್ರವಣ. ಹಲವು ತಲೆಮಾರಿನವರಿಂದ ಪರಂಪರಾನುಗತವಾಗಿ ಬೆಳೆದ ಸತ್ಯವನ್ನು ನಾಲ್ಕಾರು ವರ್ಷಗಳಲ್ಲಿ ತಿಳಿದುಕೊಳ್ಳಲು ಅತ್ಯಂತ ಅಗತ್ಯವಾದ ಸಾಧನ ಗುರು. ಎಷ್ಟೇ ಚತುರನಾದ ಗುರುವಿನ ಮೂಲಕ ವಿದ್ಯೆಯನ್ನು ಕೇಳಿ ತಿಳಿದುಕೊಂಡರೂ ಅದು ನಿಶ್ಚಿತ ಸತ್ಯವಾಗಿ ನಿಲ್ಲುವುದಿಲ್ಲ. ಆದ್ದರಿಂದ ಉಪನಿಷತ್ತುಗಳು ಸತ್ಯವನ್ನು ನಿಶ್ಚಿತಗೊಳಿಸಿಕೊಳ್ಳಲು ಮನನವನ್ನು ಎರಡನೆಯ ಸಾಧನವಾಗಿ ನಿಯೋಜಿಸುತ್ತವೆ. ಬೌದ್ಧಿಕವಾಗಿ ತಿಳಿದ ಸತ್ಯ ಪ್ರತ್ಯಕ್ಷಾನುಭವವಾದಾಗಲೇ ಪರಿಪಕ್ವವಾಗುವುದು. ಇದಕ್ಕೆ ಅಗತ್ಯವಾದ ಸಾಧನ ಧ್ಯಾನ. ಧ್ಯಾನದ ಮೂಲಕ ಸತ್ಯ ಸಾಕ್ಷಾತ್ಕಾರವಾಗುತ್ತದೆ. ಬ್ರಹ್ಮಸಾಕ್ಷಾತ್ಕಾರವೇ ಉಪನಿಷತ್ತುಗಳ ಅಂತಿಮಗುರಿ. ಚೇತನದ ಸಾಧನೆಗೆ ಚಿತ್ತಶುದ್ಧಿ ಅತ್ಯಗತ್ಯ. ಸ್ವಾರ್ಥ ತೊಲಗಿ ಸಕಲಪ್ರಾಣಿಗಳಲ್ಲೂ ಔದಾರ್ಯ ಮತ್ತು ಅನುಕಂಪ ಹೊಮ್ಮದ ಹೊರತು ಸರ್ವಂ ಖಲ್ವಿದಂ, ಬ್ರಹ್ಮ ಎಂಬ ಅನುಭೂತಿ ಸಿದ್ಧಿಸುವುದಿಲ್ಲ. ನಿಸ್ವಾರ್ಥಕ್ಕಾಗಿ ಮತ್ತು ಸಾರ್ವತ್ರಿಕ ಪ್ರೀತಿಯೇ ಸಂನ್ಯಾಸ. ಅದು ಇಲ್ಲೇ ಈ ಜನ್ಮದಲ್ಲೇ ಇಹಲೋಕದಲ್ಲೇ ಜೀವನ್ಮುಕ್ತಿಪಡೆಯಲು ಅಗತ್ಯವಾದ ಮಾರ್ಗ.
ಹಿಂದೂ ಧರ್ಮಕ್ಕೆ ವೇದಗಳು ಎಷ್ಟು ಮುಖ್ಯವೋ ಅವುಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಿರುವ ವರ್ಣಾಶ್ರಮ ಧರ್ಮವನ್ನು ವೈದಿಕ ಸಂಸ್ಕಾರಗಳನ್ನು ಸುವ್ಯವಸ್ಥೆಗೊಳಿಸಿದ ಕಲ್ಪಸೂತ್ರಗಳೂ ವೇದದಲ್ಲಿ ಅಷ್ಟು ಪ್ರಸಿದ್ಧರಲ್ಲದ ವಿಷ್ಣುಶಿವರನ್ನು ದೇವಾಧಿದೇವ ಪಟ್ಟಕ್ಕೆ ಏರಿಸಿದ ಪುರಾಣೇತಿಹಾಸಗ್ರಂಥಗಳೂ ಶೈವ, ವೈಷ್ಣವ, ತಾಂತ್ರಿಕ ಮತ್ತು ಶಾಕ್ತೇಯ ಮತಗಳಿಗೆ ಆಧಾರವಾದ ಉಪನಿಷತ್ತುಗಳೂ ಪಾಶುಪತ ಮತ್ತು ಪಂಚರಾತ್ರಾಗಮಗಳೂ ಅಷ್ಟೇ ಮುಖ್ಯ. ಈ ಎಲ್ಲವುಗಳ ಮೂಲಕ ವಿಸ್ತರಿಸಿದ ಧರ್ಮವೇ ಹಿಂದೂ ಧರ್ಮ.
ಉಪನಿಷತ್ತುಗಳ ಅನಂತರಕಾಲದಲ್ಲಿ ಸೂತ್ರಸಾಹಿತ್ಯ ಬಂತು. ಧರ್ಮ, ಗೃಹ್ಯ, ಶೌತ್ರ ಮುಂತಾದ ಈ ಸೂತ್ರಸಾಹಿತ್ಯ ತತ್ತ್ವಶಾಸ್ತ್ರವಿವೇಚನೆಯನ್ನು ಕೈಬಿಟ್ಟು ಜನ ದಿನದಿನದ ಜೀವನದಲ್ಲಿ ಅನುಸರಿಸಬೇಕಾದ ವಿವಿಧ ಆಚಾರವಿಚಾರಗಳ ವಿಷಯದಲ್ಲಿ ಮಾರ್ಗದರ್ಶನ ನೀಡುತ್ತದೆ. ಸಮಾಜವನ್ನು ವರ್ಣಾಶ್ರಮಧರ್ಮಕ್ಕನುಸಾರವಾಗಿ ವಿಭಜಿಸಿ ಆಯಾ ವರ್ಗದವರ ಕರ್ತವ್ಯಕರ್ಮಗಳನ್ನು ನಿರ್ದೇಶಿಸುತ್ತದೆ. ಆ ಕಾಲದಲ್ಲಿ ಸಮಾಜದ ಸುವ್ಯವಸ್ಥೆಗೆ ಆಧಾರವಾಗಿದ್ದ ಈ ವರ್ಣಾಶ್ರಮವ್ಯವಸ್ಥೆ ಕಾಲಕ್ರಮದಲ್ಲಿ ಹೇಗೆ ಸಂಕುಚಿತ ಮನೋಭಾವಗಳಿಗೀಡಾಗಿ ಸಮಾಜದ ಮೇಲೆ ದುಷ್ಪರಿಣಾಮಗಳನ್ನುಂಟುಮಾಡಿತೆಂಬುದು ಎಲ್ಲರಿಗೂ ಸುವಿದಿತವಾಗಿದೆ. ಬುದ್ಧನಿಂದ ಗಾಂಧಿಯವರೆಗೂ ಈ ದುಷ್ಪರಿಣಾಮಗಳನ್ನು ತೊಡೆಯುವ ಪ್ರಯತ್ನ ನಡೆದು ಬಂದಿದೆ. ವೇದಗಳ ಅನಂತರ ನಾಲ್ಕೈದು ಶತಮಾನಗಳಲ್ಲಿ ವೈದಿಕ ಸಂಸ್ಕೃತಿ ವ್ಯವಸ್ಥೆಗೊಂಡಿತಲ್ಲದೆ ಅದರಲ್ಲಿ ಆಮುಖ್ಯವೆಂದು ಪರಿಗಣಿಸಿದ್ದ ಶಿವ ಮತ್ತು ವಿಷ್ಣು ಪ್ರಧಾನರಾದರು.
ವೇದದ ಕೊನೆಯ ಕಾಲದಲ್ಲಿ ಶ್ವೇತಾಶ್ವತರ ಉಪನಿಷತ್ತು ಹುಟ್ಟಿದಾಗ ಶಿವನಿಗೆ ದೇವಾಧಿದೇವ ಪಟ್ಟ ದೊರೆಯುತ್ತದೆ. ಶಿವ ವೇದಾನಂತರದ ಕಾಲದಲ್ಲಿ ಇನ್ನೂ ಹೆಚ್ಚು ಪ್ರಾಶಸ್ತ್ಯ ಪಡೆದುದಕ್ಕೆ ವೇದಗಳಿಂದ ಭಿನ್ನವಾದ ಶೈವಾಗಮಗಳು ಕಾರಣ. ಶೈವಾಗಮಗಳಲ್ಲಿ ಭಕ್ತಿ ಮತ್ತು ಪ್ರಸಾದಗಳಿಗೆ ಮಾನ್ಯಸ್ಥಾನ ದೊರೆಯುತ್ತದೆ. ಮಹಾಭಾರತದ ಕಾಲದಿಂದ ಇಂದಿನವರೆಗೂ ಶೈವಮತ ಕಾಶ್ಮೀರಶೈವ, ಪಾಶುಪತ, ಲಕುಲೀಶ, ದ್ರಾವಿಡ ಶೈವ ಮತ್ತು ಕರ್ಣಾಟಕ ವೀರಶೈವ ಮುಂತಾದವುಗಳ ಮೂಲಕ ಬಹುಮುಖವಾಗಿ ಬೆಳೆದಿದೆ. ಇವುಗಳ ವಿವರವನ್ನು ಮುಂದೆ ಕೊಡಲಾಗುವುದು.
ಇದೇ ಕಾಲದಲ್ಲೇ ವಿಷ್ಣುವಿನ ಆರಾಧನೆಯೂ ಹೆಚ್ಚಾಗಿ ಬಳಕೆಗೆ ಬಂತು. ಸಂಹಿತೆಗಳಲ್ಲಿ ವಿಷ್ಣುವನ್ನು ತ್ರಿವಿಕ್ರಮನೆಂದು ವರ್ಣಿಸಿದೆ. ಬ್ರಾಹ್ಮಣಗಳು ಮತ್ತು ಉಪನಿಷತ್ತುಗಳ ಪ್ರಕಾರ ವಿಷ್ಣುವಿನ ಪರಮಪದವನ್ನು ಮುಟ್ಟುವುದೇ (ತದ್ವಿಷ್ಣೋಹಃ ಪರಮಂ ಪದಂ) ಜೀವನದ ಅಂತಿಮ ಗುರಿ. ವೇದಕ್ಕಿಂತ ಸ್ವಲ್ಪ ಈಚಿನ ಕಾಲದಲ್ಲಿ ರಚಿತವಾದ ಮಹಾನಾರಾಯಣ ಉಪನಿಷತ್ತಿನಲ್ಲಿ ನಾರಾಯಣ ಉಚ್ಚಪದವಿಯನ್ನು ಪಡೆದಿದ್ದಾನೆ. ಮಹಾಭಾರತದಲ್ಲಿ ಅವನನ್ನು ಧರ್ಮದ ಪುತ್ರನೆಂದು ವರ್ಣಿಸಿದೆ. ಈ ವರ್ಣನೆಯಿಂದ ವಿಷ್ಣು ಕೇವಲ ವಿಶ್ವವ್ಯಾಪಿಯಲ್ಲ, ಅವನು ಧರ್ಮಾಧ್ಯಕ್ಷನೆಂಬುದೂ ಸ್ಪಷ್ಟವಾಗುತ್ತದೆ. ವೈಷ್ಣವಧರ್ಮಕ್ಕೆ ವೇದದಿಂದ ಪ್ರತ್ಯೇಕವಾದ ಬೇರೊಂದು ಕಡೆಯಿಂದ ಪುಷ್ಟಿ ದೊರೆತಿದೆ. ಮಹಾಭಾರತದ ಮತ್ತು ಭಗವದ್ಗೀತೆಯ ಕೃಷ್ಣಭಗವಾನನ ಭಾವನೆ ವೇದದ ವಿಷ್ಣುನಾರಾಯಣ ಭಾವನೆಯೊಂದಿಗೆ ಮಿಳಿತವಾಗಿ ಕೃಷ್ಣ ವಿಷ್ಣುವಿನ ಒಂದು ಅವತಾರವೆಂಬ ಭಾವನೆ ಹುಟ್ಟಿತು. ಈ ಅವತಾರಗಳ ಕಲ್ಪನೆಯೇ ಹಿಂದೂಗಳಲ್ಲಿರುವ ಅಪರಿಮಿತ ದೇವತೆಗಳನ್ನು ಅಧಿದೇವತೆಯ ರೂಪ ಭೇದ ಅಥವಾ ಅವತಾರಗಳೆಂದು ಭಾವಿಸಲು ಮತ್ತು ವೈಧಿಕಧರ್ಮವಿರೋಧಿಯಾದ ಗೌತಮಬುದ್ಧನನ್ನೂ ವಿಷ್ಣುವಿನ ಅವತಾರಪ್ರಭೇದಗಳಲ್ಲಿ ಸೇರಿಸಲು ಸಾಧ್ಯವಾಗಿಸಿತು. ಶಿವ ವಿಷ್ಣುರೂಪಿ, ವಿಷ್ಣು ಶಿವರೂಪಿ (ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ) ಎಂಬ ಭಾವನೆ ಹುಟ್ಟಿದ್ದಕ್ಕೂ ಇದೇ ಮೂಲ. ವೈಷ್ಣವಧರ್ಮ ಶೈವಧರ್ಮಗಳಂತೆಯೇ ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದೆ. ಅದು ಯಜ್ಞಯಾಗಾದಿಗಳಲ್ಲಿ ಪಶುವಧೆಯನ್ನು ನಿಷೇಧಿಸುತ್ತದೆ. ವೈಷ್ಣವಭಕ್ತರು ಕುದುರೆಯನ್ನು ಕೊಲ್ಲದೆ ಅಶ್ವಮೇಧಯಾಗವನ್ನು ನಡೆಸಿದರೆಂದು ಮಹಾಭಾರತದಲ್ಲಿ ವರ್ಣಿಸಿದೆ. ಈ ಸಂಪ್ರದಾಯವನ್ನು ಅನುಸರಿಸಿ ಮಾಧ್ವರು ಯಜ್ಞಗಳಲ್ಲಿ ಹಿಟ್ಟಿನಿಂದ ಮಾಡಿದ ಪ್ರಾಣಿಯನ್ನು ಅರ್ಪಿಸುತ್ತಾರೆ. ಕರ್ತವ್ಯಭಾಷೆಯಲ್ಲೂ ಭಗವದ್ಗೀತೆಯ ಮೂಲಕ ಬದಲಾವಣೆಯುಂಟಾಯಿತು. ಫಲಾಪೇಕ್ಷೆ ಇಲ್ಲದೆ ಮಾಡಿದ ನಿಷ್ಕಾಮಕರ್ಮವೇ ಶ್ರೇಷ್ಠವೆಂಬುದು ಆ ಹೊಸ ಭಾವನೆ.
ಈ ಕಾಲದಲ್ಲಿ ಶೈವವೈಷ್ಣವ ಧರ್ಮಗಳು ಮುಂದಕ್ಕೆ ಬಂದುವಲ್ಲದೆ, ನಿರೀಶ್ವರ ಮತಗಳೂ ತಲೆ ಎತ್ತಿದುವು. ಇವು ಮೂರು ಬಗೆಯಾಗಿವೆ-
- ೧. ಸ್ವಭಾವವಾದ
- ೨. ಜೈನತತ್ತ್ವ
- ೩. ಬೌದ್ಧತತ್ತ್ವ.
ಸ್ವಭಾವವಾದದ ಇತರ ಹೆಸರುಗಳು ಲೋಕಾಯತ ಮತ್ತು ಚಾರ್ವಾಕ. ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣುವ ಮಣ್ಣು, ನೀರು, ಬೆಂಕಿ, ಗಾಳಿ ಎಂಬ ನಾಲ್ಕು ಭೂತಗಳೇ ಎಲ್ಲಕ್ಕೂ ಕಾರಣ. ಈ ಲೋಕವಲ್ಲದೆ ಬೇರೆ ಲೋಕವಾಗಲಿ ಸೃಷ್ಟಿಕರ್ತನೆಂಬ ದೇವರಾಗಲಿ, ನಾಲ್ಕು ಭೂತಗಳಿಂದ ಕೂಡಿದ ಶರೀರವನ್ನು ಬಿಟ್ಟು ಅದಕ್ಕಿಂತ ಬೇರೆಯಾದ ಆತ್ಮವಾಗಲಿ ಇಲ್ಲವೆಂಬುದು ಲೋಕಾಯತಮತ. ಇದು ವೈದಿಕ ಕರ್ಮಗಳನ್ನು ನಿರಾಕರಿಸುತ್ತದೆ. ದುಃಖಕರವಾದುದನ್ನು ಬದಿಗೊತ್ತಿ ಸುಖಕರವಾದುದನ್ನು ಆಯ್ದುಕೊಂಡು ಬಾಳುವುದೇ ವಿವೇಕ; ಅರ್ಥ ಮತ್ತು ಕಾಮಗಳೇ ಪರಮಪುರುಷಾರ್ಥಗಳು ಎಂಬುದು ಇದರ ನೀತಿ.
ವೈದಿಕಧರ್ಮಕ್ಕೆ ವಿರುದ್ಧವಾಗಿ ಹುಟ್ಟಿದ ಮತಗಳಲ್ಲಿ ಭಾರತದ ಈಶಾನ್ಯಭಾಗದಲ್ಲಿ ಹುಟ್ಟಿಕೊಂಡ ಜೈನಧರ್ಮ ಮತ್ತು ಬೌದ್ಧಧರ್ಮಗಳು ತುಂಬ ಪ್ರಬಲವಾದುವು. ಇವು ವೈದಿಕ ಕರ್ಮಗಳನ್ನು ಬಹಿಷ್ಕರಿಸುತ್ತವೆ; ಸೃಷ್ಟಿಕರ್ತನಾದ ಈಶ್ವರನನ್ನೂ ಜಾತಿಭೇದಗಳನ್ನೂ ನಿರಾಕರಿಸುತ್ತವೆ. ಆದರೆ ಇವೆರಡೂ ಜನತೆಗೆ ಅರ್ಥವಾಗುವ ಪ್ರಾಕೃತಭಾಷೆಗಳ ಮೂಲಕ ಸ್ವಾರ್ಥತ್ಯಾಗ ಮತ್ತು ಅಹಿಂಸೆಗಳನ್ನು ಪರಮಧರ್ಮಗಳೆಂದು ಸಾರಿದುವು. ಇವುಗಳ ತತ್ತ್ವವನ್ನು ಮುಂದೆ ವಿವರಿಸಲಾಗುತ್ತದೆ.
ಅನಂತರಕಾಲದಲ್ಲಿ ಭಾರತೀಯ ಷಡ್ದರ್ಶನಗಳೆಂದು ಹೆಸರಾಗಿರುವ ವೇದಾಂತ, ಪೂರ್ವಮೀಮಾಂಸಾ, ಸಾಂಖ್ಯ, ಯೋಗ, ನ್ಯಾಯ ಮತ್ತು ವೈಶೇಷಿಕ ಶಾಸನಗಳು ರೂಪಗೊಂಡುವು. ಬಹುಶಃ ಇದೇ ಕಾಲದಲ್ಲೇ ತಾಂತ್ರಿಕ ಮತ್ತು ಶಾಕ್ತ ಆಗಮಗಳು ಹುಟ್ಟಿರಬೇಕು. ಇವು ಕಾಲಾಂತರದಲ್ಲಿ ಶೈವ ಮತ್ತು ಬೌದ್ಧಧರ್ಮಗಳನ್ನು ಆವರಿಸಿದುವು.
ಪ್ರ.ಶ.ಪೂ. ೩ನೆಯ ಶತಮಾನದಿಂದ ಪ್ರ.ಶ. ೮ನೆಯ ಶತಮಾನದವರೆಗೆ ವೈಷ್ಣವ, ಶೈವ, ಶಾಕ್ತಮತಗಳನ್ನೊಳಗೊಂಡ ವೈದಿಕಧರ್ಮಗಳೂ ಬೌದ್ಧ ಜೈನಧರ್ಮಗಳೂ ವಾಯುವ್ಯ ಈಶಾನ್ಯಗಳ ಕಡೆಯಿಂದ ದಕ್ಷಿಣ ಪ್ರದೇಶಗಳಿಗೆ ಹಬ್ಬಿದುವು. ೨ನೆಯ ಶತಮಾನದಲ್ಲಿ ಕ್ರೈಸ್ತ ಧರ್ಮ ದಕ್ಷಿಣದ ಕೊಚಿನ್ ಪ್ರದೇಶದಲ್ಲಿ ಕಾಲಿಟ್ಟಿತು. ಆಂಗ್ಲೇಯರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ ಮೇಲೆ ಅದು ಉತ್ಕರ್ಷ ಹೊಂದಿತು. ಇಸ್ಲಾಂ ಧರ್ಮ ೭೧೨ರಲ್ಲಿ ಸಿಂಧ್ ಪ್ರದೇಶವನ್ನು ಹೊಕ್ಕು ದಕ್ಷಿಣಕ್ಕೆ ೧೩ನೆಯ ಶತಮಾನದಲ್ಲಿ ಕಾಲಿಟ್ಟಿತು; ತರುವಾಯ ೧೯ನೆಯ ಶತಮಾನದವರೆಗೂ ಭಾರತಾದ್ಯಂತ ವಿಶೇಷವಾಗಿ ಬೆಳೆಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಪ್ರಮುಖ ಧರ್ಮಗಳನ್ನೂ ಪರಿಶೀಲಿಸಬಹುದು.
ಬೌದ್ಧಧರ್ಮ
ಸಂಪಾದಿಸಿಬೌದ್ಧಧರ್ಮ ಕರ್ನಾಟಕಕ್ಕೆ ಬಂದದ್ದು ಚಕ್ರವರ್ತಿ ಅಶೋಕನ ಕಾಲದಲ್ಲಿ. ಅವನ ಶಾಸನಗಳು ಕರ್ನಾಟಕದ ಹಲವೆಡೆಗಳಲ್ಲಿವೆ. ಸಾತವಾಹನರ ಕಾಲದಲ್ಲಿ ಬನವಾಸಿಯಲ್ಲಿ ಬೌದ್ಧವಿಹಾರಗಳು ಸ್ಥಾಪಿತವಾದುವು. ಶೈವಕ್ಷೇತ್ರವಾಗುವುದಕ್ಕೆ ಮುಂಚೆ ಶ್ರೀಶೈಲ ಬೌದ್ಧಧರ್ಮದ ಕೇಂದ್ರವಾಗಿತ್ತು. ಕಾಲಕ್ರಮದಲ್ಲಿ ಜೈನ ಮತ್ತು ಹಿಂದೂ ಧರ್ಮಗಳು ಪ್ರಬಲಗೊಂಡು ಕರ್ನಾಟಕದಲ್ಲಿ ಬೌದ್ಧಧರ್ಮ ಕ್ಷೀಣವಾಯಿತು. ಆದರೂ ಅದು ೧೨ನೆಯ ಶತಮಾನದವರೆಗೂ ಕರ್ನಾಟಕದಲ್ಲಿ ಕೆಲವು ಕಡೆ ಉಳಿದುಕೊಂಡಿತ್ತು. ಧಾರವಾಡ ಜಿಲ್ಲೆಯ ಡಂಬಳ ಎಂಬಲ್ಲಿನ ೧೦೯೫ರ ಒಂದು ಶಾಸನದಲ್ಲಿ ಹದಿನಾರು ಶ್ರೇಷ್ಠಿಗಳು ಅಲ್ಲಿ ಒಂದು ಬೌದ್ಧವಿಹಾರವನ್ನೂ ಬೌದ್ಧದೇವತೆಯಾದ ತಾರಾದೇವಿಯ ದೇವಾಲಯವನ್ನೂ ಕಟ್ಟಿಸಿದರೆಂದು ಉಕ್ತವಾಗಿದೆ.
ಬೌದ್ಧಧರ್ಮ ವೈದಿಕ ಯಜ್ಞಯುಗಾದಿಗಳನ್ನೂ ಪಶುಬಲಿಯನ್ನೂ ನಿಷೇಧಿಸಿತು ; ಜಾತಿಭೇದಗಳನ್ನು ಎಣಿಸದೆ ಎಲ್ಲರಿಗೂ ಜೀವನದಿಂದ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ಬೋಧಿಸಿತು; ತೀವ್ರದೇಹಶೋಷಣೆಯ ಮಾರ್ಗವನ್ನೂ ಭೋಗಲಾಲಸೆಯ ಲೋಕಾಯತ ನೀತಿಯನ್ನೂ ಬಿಟ್ಟು ಮಾಧ್ಯಮಿಕ ಸಂಯಮದಿಂದ ಗುರಿ ಸಾಧಿಸುವ ಮಾರ್ಗವನ್ನು ತೋರಿಸಿತು. ಆಸೆಯೇ ದುಃಖಕ್ಕೆ ಮೂಲ. ಅದರ ನಿರ್ಮೂಲನವೇ ಮುಕ್ತಿಸಾಧನೆಗೆ ಮಾರ್ಗ. ಸಮ್ಯಕ್ ಜ್ಞಾನ ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ ಮತ್ತು ಸತ್ಚಾರಿತ್ರ- ಈ ನಾಲ್ಕು ಎಲ್ಲರೂ ಅನುಸರಿಸಬೇಕಾದವು. ಅಷ್ಟಾಂಗಯೋಗಗಳ ಮಾರ್ಗ ಬೌದ್ಧಸಂನ್ಯಾಸಿಗಳಿಗೆ. ಬುದ್ಧದೇವ ದೇವತಾಪೂಜೆಯನ್ನು ನಿಷೇಧಿಸಿದ್ದರೂ ಕಾಲಾಂತರದಲ್ಲಿ ಬೌದ್ಧರಲ್ಲಿ ಮೂರ್ತಿಪೂಜೆ ಆಚರಣೆಗೆ ಬಂತು. ಹಿಂದೂ ಧರ್ಮ ಪುನರುದ್ಧಾರ ಕಾಲದಲ್ಲಿ ಬುದ್ಧ ವಿಷ್ಣುವಿನ ಒಂದು ಅವತಾರವಾಗಿ ಬೌದ್ಧಧರ್ಮ ಹಿಂದೂ ಧರ್ಮದಲ್ಲಿ ಲೀನವಾಯಿತು. ಗೌಡಪಾದ ಮತ್ತು ಶಂಕರರು ಮಾಧ್ಯಮಿಕರ ತರ್ಕವನ್ನೇ ಉಪಯೋಗಿಸಿಕೊಂಡು ಜಗತ್ತು ಅನಿತ್ಯ ಬ್ರಹ್ಮವೊಂದೇ ನಿತ್ಯಸತ್ಯವೆಂಬ ಉಪನಿಷತ್ತಿನ ಧರ್ಮವನ್ನು ಪುನರುಜ್ಜೀವನಗೊಳಿಸಿದರು. ಈ ಕಾರಣಗಳಿಂದ ಕರ್ನಾಟಕದಲ್ಲಿ ಬೌದ್ಧಧರ್ಮ ಕ್ಷಯಿಸಿ ಅದರ ಅವಶೇಷಗಳು ಮಾತ್ರ ಉಳಿದಿವೆ. ಬೌದ್ಧಧರ್ಮ ಕರ್ನಾಟಕದಲ್ಲಿ ಕ್ಷೀಣವಾದರೂ ಬುದ್ಧ ಬೋಧಿಸಿದ ಪರಮತ ಸಹಿಷ್ಣುತೆಯ ಸಂದೇಶ ಮಾತ್ರ ಕರ್ನಾಟಕದಲ್ಲಿ ಇಂದಿಗೂ ಬೇರೂರಿದೆ. ಕರ್ನಾಟಕದಲ್ಲಿ ಪ್ರಸಕ್ತಶಕದ ಪ್ರಾರಂಭಕಾಲದಿಂದ ಬೌದ್ಧಸಂನ್ಯಾಸಿಗಳು ತಮ್ಮ ಧಾರ್ಮಿಕ ಗ್ರಂಥಗಳ ರಚನೆಯ ಮೂಲಕ ಕನ್ನಡ ಸಾಹಿತ್ಯದ ಉಗಮ ಮತ್ತು ಬೆಳೆವಣಿಗೆಗೆ ಕಾರಣರಾಗಿದ್ದಿರಬಹುದೆಂದೂ ಆ ಧರ್ಮದ ಅವನತಿಯೊಂದಿಗೆ ಆ ಸಾಹಿತ್ಯವೂ ಕಣ್ಮರೆಯಾಗಿರಬಹುದೆಂದೂ ಟಿ.ಎಸ್.ವೆಂಕಣ್ಣಯ್ಯನವರು ಅಭಿಪ್ರಾಯಪಟ್ಟಿದ್ದಾರೆ.
ಜೈನಧರ್ಮ
ಸಂಪಾದಿಸಿಜೈನಧರ್ಮಪ್ರತಿಷ್ಠಾಪಕನಾದ ಮಹಾವೀರ ಬುದ್ಧನಿಗಿಂತ ಸ್ವಲ್ಪ ಮುಂಚಿನವನು. ಅದು ಕರ್ನಾಟಕಕ್ಕೆ ಪ್ರ.ಶ.ಪೂ. ೪ನೆಯ ಶತಮಾನದ ಅಂತ್ಯದಲ್ಲಿ ಪ್ರವೇಶಿಸಿತು. ಚಂದ್ರಗುಪ್ತ ಮೌರ್ಯ ತನ್ನ ಗುರು ಭದ್ರಬಾಹುವಿನೊಂದಿಗೆ ಇಲ್ಲಿಗೆ ಬಂದು ಶ್ರವಣಬೆಳಗೊಳದಲ್ಲಿ ನೆಲೆಸಿದನೆಂದು ಐಹಿತ್ಯವಿದೆ. ೮ನೆಯ ಶತಮಾನದ ಕೆಲವು ಶಾಸನಗಳೂ ಈ ವಿಷಯವನ್ನು ತಿಳಿಸುತ್ತವೆ. ಬೌದ್ಧಧರ್ಮ ಕರ್ನಾಟಕದಲ್ಲಿ ಲುಪ್ತವಾದರೂ ಜೈನಧರ್ಮ ಇಲ್ಲಿಯವರೆಗೆ ಸಾರೋದ್ಧಾರವಾಗಿ ಬೆಳೆದು ಬಂದಿದೆ. ಗಂಗರಾಜರು ೩೨೫ ರಿಂದ ೧೦೦೦ದ ವರೆಗೆ ಜೈನರಿಗೆ ಆಶ್ರಯ ಕೊಟ್ಟು ಅವರ ಅಭ್ಯುದಯಕ್ಕೆ ಕಾರಣರಾದರು. ರಾಷ್ಟ್ರಕೂಟರಲ್ಲಿ ಅನೇಕರು ಜೈನಧರ್ಮಾವಲಂಬಿಗಳಾಗಿದ್ದರು. ಕರ್ನಾಟಕದ ಸಂಸ್ಕೃತಿಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರವಾದುದು.
ಹರಿಭದ್ರ ಜೈನದರ್ಶನವನ್ನು ಸಂಗ್ರಹವಾಗಿ ಹೀಗೆ ವರ್ಣಿಸಿರುತ್ತಾನೆ; ಜೈನಧರ್ಮದ ತತ್ತ್ವಗಳು ಒಂಬತ್ತು-ಜೀವ, ಅಜೀವ, ಪುಣ್ಯ, ಪಾಪ, ಆಸ್ರವ ಸಂವರ, ಬಂಧ, ನಿರ್ಜರ ಮತ್ತು ಮೋಕ್ಷ. ಚೇತನಾತ್ಮಕವಾದ ಜೀವ ಪಾಪಪುಣ್ಯಗಳ ಕರ್ತ ಮತ್ತು ಅವುಗಳ ಫಲದ ಭೋಕ್ತ. ತದ್ವಿರುದ್ಧ ಲಕ್ಷಣವುಳ್ಳದ್ದು ಅಜೀವ. ಜೀವವಾಗಲಿ ಅಜೀವವಾಗಲಿ ಸೃಷ್ಟಿಯಾದುವಲ್ಲ. ಜೀವ ರೂಪರಸಗಂಧಸ್ಪರ್ಶನಗಳಿಗೆ ಕಾರಣವಾದ ಪುದ್ಗಲದ ಸಂಪರ್ಕದಿಂದ. ಪುಣ್ಯಪಾಪಕರ್ಮಗಳಿಂದ ತುಂಬಿಕೊಳ್ಳುತ್ತದೆ. ಸತ್ಕರ್ಮ ಪುದ್ಗಲವೇ ಪುಣ್ಯ ; ದುಷ್ಕರ್ಮ ಪುದ್ಗಲವೇ ಪಾಪ. ಅಜ್ಞಾನ, ರಾಗ, ರತಿ, ಮೋಹ ಮುಂತಾದುವುಗಳಿಂದ ಹುಟ್ಟಿದ ಪಾಪಕರ್ಮ ಜೀವರುಗಳಲ್ಲಿ ತುಂಬಿಕೊಳ್ಳುವುದಕ್ಕೆ ಆಸ್ರವ ಎಂದು ಹೆಸರು. ಆಸ್ರವ ಆತ್ಮದ ಬಂಧನಕ್ಕೆ ಕಾರಣ. ಪುಣ್ಯ ಪಾಪಗಳು ಜೀವರುಗಳನ್ನು ಜನ್ಮಾಂತರಗಳವರೆಗೆ ಹಿಂಬಾಲಿಸುತ್ತವೆ. ಪಾಪ ಬಂದು ಸೇರದಂತೆ ತಡೆಯಲು ಸಾಧ್ಯ. ಅಹಿಂಸೆ, ಸತ್ಯವಚನ, ಅಪರಿಗ್ರಹ, ಬ್ರಹ್ಮಚರ್ಯ, ಸ್ವಾರ್ಥತ್ಯಾಗ ಮುಂತಾದ ವ್ರತ ಅನುಷ್ಠಾನಗಳಿಂದ ಪಾಪವನ್ನು ತಡೆಯಬಹುದು. ಇದಕ್ಕೆ ಸಂವರ ಎಂದು ಹೆಸರು. ಈಗಾಗಲೇ ಬಂದು ತುಂಬಿಕೊಂಡಿರುವ ಪಾಪಕರ್ಮವನ್ನು ಶರೀರ ಆತ್ಮದಿಂದ ಬೇರೆಯಾದದ್ದು ಎಂಬ ನಿಶ್ಚಿತಜ್ಞಾನದಿಂದ ಸುಟ್ಟುಹಾಕಬಹುದು. ಹಿಂದಿನದನ್ನು ತೊಡೆದುಹಾಕುವುದಕ್ಕೆ ನಿರ್ಜರ ಎಂದು ಹೆಸರು. ಎಲ್ಲ ಬಗೆಯ ಆವರಣಗಳೂ ತೇಲಿ ಹೋಗಿ ಆತ್ಮಜ್ಞಾನ ಫಲಿಸಿದಾಗ ಜೀವರುಗಳಿಗೆ ಮೋಕ್ಷ ದೊರೆಯುತ್ತದೆ. ಮೋಕ್ಷ ದೊರೆತಾಗ ಆತ್ಮ ತನಗೆ ಸಹಜವಾದ ಅನಂತಜ್ಞಾನ, ಅನಂತವೀರ್ಯ, ಅನಂತಸುಖಗಳನ್ನು ಪಡೆಯುತ್ತದೆ. ಸಮ್ಯಕ್ದರ್ಶನ, ಸಮ್ಯಕ್ಚಾರಿತ್ರ, ಸಮ್ಯಕ್ಜ್ಞಾನವೆಂಬ ತ್ರಿರತ್ನಗಳು ಮೋಕ್ಷಸಾಧನಗಳು. ಜೈನಧರ್ಮವನ್ನು ಸ್ವತಂತ್ರವಾಗಿ ಗ್ರಹಿಸಿ ನಿರ್ವಾಣವನ್ನು ಪಡೆದವರು ತೀರ್ಥಂಕರರು. ಇಂಥ ಇಪ್ಪತ್ತನಾಲ್ಕು ತೀರ್ಥಂಕರರನ್ನು ಜೈನರು ದೇವರುಗಳೆಂದು ಪುಜಿಸುತ್ತಾರೆ. ಇಪ್ಪತ್ತನಾಲ್ಕನೆಯ ತೀರ್ಥಂಕರನೇ ವರ್ಧಮಾನ ಮಹಾವೀರ. ಮಹಾವೀರನ ತರುವಾಯ ಬೋಧೆಯಿಂದ ಮುಕ್ತಿಪಡೆದವರು ಕೇವಲಿಗಳು. ಇವರು ಗೌರವಾರ್ಹರಾದರೂ ಪೂಜಾರ್ಹರಲ್ಲ.
ಶೈವಧರ್ಮ
ಸಂಪಾದಿಸಿಇದರ ಪ್ರಾಚೀನತೆಯನ್ನು ಕುರಿತು ಹಿಂದೆ ಪ್ರಸ್ತಾಪಮಾಡಲಾಗಿದೆ. ಕರ್ನಾಟಕದಲ್ಲಿ ಕಡೆಯ ಪಕ್ಷ ಸಾತವಾಹನರ ಕಾಲದಿಂದ ಈ ಧರ್ಮ ರೂಢಿಯಲ್ಲಿದ್ದಂತೆ ತಿಳಿದುಬರುತ್ತದೆ. ಸಾತವಾಹನ ಮತ್ತು ಚುಟುಕುಲದ ರಾಜರು ತಾಳಗುಂದದ ಪ್ರಣವೇಶ್ವರನ ಅರ್ಚಕರಾಗಿದ್ದರೆಂದು ಶಾಸನ ತಿಳಿಸುತ್ತದೆ. ಅನಂತರದ ಕದಂಬರು ತಮ್ಮ ವಂಶ ಈಶ್ವರನಿಂದ ಉತ್ಪತ್ತಿಯಾದ ಮುಕ್ಕಣ್ಣ ಅಥವಾ ತ್ರಿನೇತ್ರ ಕದಂಬನಿಂದ ಪ್ರಾರಂಭವಾಯಿತೆಂದು ಹೇಳಿಕೊಂಡಿದ್ದಾರೆ. ಕದಂಬ, ಚಾಳುಕ್ಯ ರಾಜರನೇಕರು ಶೈವಧರ್ಮಾನುಯಾಯಿಗಳಾಗಿದ್ದರು. ಆ ಕಾಲದಲ್ಲಿ ಶೈವರಲ್ಲಿ ಮತಪ್ರಭೇದಗಳು ಹುಟ್ಟಿಕೊಂಡುವು. ಪಾಶುಪತ, ಕಾಳಾಮುಖ, ಲಾಕುಳ, ಮಹೇಶ್ವರಪಂಥಗಳು ಹೆಚ್ಚು ಕಡಿಮೆ ಒಂದೇ ಆಗಿರುವಂತೆ ತೋರುತ್ತದೆ. ಶಂಕರಾಚಾರ್ಯರು ಪಾಶುಪತರನ್ನೂ ಮಾಧವರು ಲಕುಲೀಶ ಪಾಶುಪತರನ್ನೂ ಮಾಹೇಶ್ವರರೆಂದು ಕರೆದಿರುತ್ತಾರೆ. ಸಿರಾ ಮತ್ತು ಸಕಲೇಶಪುರದ ಶಾಸನಗಳು ಕಾಳಾಮುಖರೂ ಲಕುಲೀಶರೂ ಒಂದೇ ಪಂಥದವರೆಂದು ತಿಳಿಸುತ್ತವೆ. ಪಾಶುಪತ ಶೈವಧರ್ಮ ಸ್ವಚ್ಫವಾದ ಸಾತ್ವಿಕಧರ್ಮ. ಕರ್ನಾಟಕದಲ್ಲಿ, ಮುಖ್ಯವಾಗಿ ಶ್ರೀಶೈಲದಲ್ಲಿ ಶಂಕರಾಚಾರ್ಯರ ಕಾಲದಲ್ಲಿ ಪ್ರಚಾರದಲ್ಲಿದ್ದದ್ದು ಉಗ್ರಭೈರವ ಉಪಾಸಕರ ಕಾಪಾಲಿಕ ಮತ. ಇವರು ಶಿವನನ್ನು ಒಲಿಸಿಕೊಳ್ಳಲು ನರಬಲಿ ಕೊಡುತ್ತಿದ್ದರು; ಮದ್ಯವನ್ನು ಸೇವಿಸಿ ಭೀಕರವಾಗಿ ನರ್ತಿಸುತ್ತಿದ್ದರು. ಮೂಕಾಂಬಿಕೆಯ ಕ್ಷೇತ್ರ ಶಕ್ತಿ ಉಪಾಸಕರ ಕ್ಷೇತ್ರವಾಗಿತ್ತು.
ಶೈವಧರ್ಮಕ್ಕೆ ಹತ್ತಿರದ ಸಂಬಂಧದ ಮತ ಗಾಣಾಪತ್ಯ ಮತ. ಈ ಮತದವರಲ್ಲಿ ಆರು ಬಗೆಗಳುಂಟು. ೧. ಪ್ರಳಯಕಾಲದಲ್ಲೂ ನಾಶಹೊಂದದೆ ಉಳಿಯುವ ಮಹಾಗಣಪತಿ ಪುಜಕರು. ೨. ಋಗ್ವೇದದಲ್ಲಿ ಉಕ್ತವಾಗಿರುವ ಬೃಹಸ್ಪತಿರೂಪನಾದ ಹರಿದ್ರಾ ಗಣಪತಿ ಪುಜಕರು. ೩. ಶಾಕ್ತರಂತೆ ವಾಮಾಚಾರ ನಡೆಸುವ, ಉತಿಷ್ಠ ಗಣಪತಿ ಉಪಾಸಕರು. ೪. ನವೀನ ಗಣಪತಿ ಪುಜಕರು. ೫. ಸ್ವರ್ಣಗಣಪತಿ ಪುಜಕರು. ೬. ಸಂತಾನ ಗಣಪತಿ ಪುಜಕರು.
ಶೈವಮತಕ್ಕೆ ಹತ್ತಿರದ ಸಂಬಂಧಿಯಾದ ಇನ್ನೊಂದು ಮತ ಸ್ಕಾಂದಮತ. ಈ ಮತದ ಮುಖ್ಯ ದೇವತೆ ಕಾರ್ತಿಕೇಯ. ಕುಮಾರನೆಂದೂ ಷಣ್ಮುಖನೆಂದೂ ಈ ದೇವತೆಯನ್ನು ಸಂಬೋಧಿಸುವುದುಂಟು. ಕರ್ನಾಟಕದಲ್ಲಿ ಸೊಂಡೂರು ಬೆಟ್ಟದಲ್ಲಿ ಕುಮಾರಸ್ವಾಮಿಯ ಪ್ರಾಚೀನ ದೇವಾಲಯವಿದೆ. ಕದಂಬ ಮತ್ತು ಪೂರ್ವ ಚಾಳುಕ್ಯ ಶಾಸನಗಳಲ್ಲಿ ಕಾರ್ತಿಕೇಯನ ಪ್ರಶಸ್ತಿ ಇದೆ.
ಶಂಕರಾಚಾರ್ಯರು ಕರ್ನಾಟಕದಲ್ಲಿ ಪ್ರಚಾರಮಾಡಿದ ಕಾಲದಲ್ಲಿ ಕಾಪಾಲಿಕರ ಘೋರಕೃತ್ಯಗಳನ್ನು ಖಂಡಿಸಿ, ಶಾಕ್ತರೂ ಗಾಣಾಪತ್ಯರೂ ಆಚರಿಸುತ್ತಿದ್ದ ಪಂಚಮಕಾರಗಳನ್ನು ನಿರ್ಮೂಲಗೊಳಿಸಿ ಪರಿಶುದ್ಧವಾದ ಶೈವ, ಶಾಕ್ತ, ಗಾಣಾಪತ್ಯ ಮತಗಳನ್ನು ಸ್ಥಾಪಿಸಿದರು. ಕರ್ನಾಟಕದ ಶೃಂಗೇರಿಯಲ್ಲಿ ಇವರು ಸ್ಥಾಪಿಸಿದ ಮಠ ದಕ್ಷಿಣದಲ್ಲೆಲ್ಲ ಅತ್ಯಂತ ಪ್ರಸಿದ್ಧವಾದುದು. ಇದು ವಿಷ್ಣುಸರ್ವೋತ್ತಮ ಶಿವಸರ್ವೋತ್ತಮವೆಂಬ ಭೇದವೆಣಿಸದೆ ಎಲ್ಲ ಬಗೆಯ ಸೇಶ್ವರ ಭಾವನೆಗಳಿಗೂ ಸಮಾನ ಗೌರವ ಸಲ್ಲಿಸುವ ಸ್ಮಾರ್ತ ಸಂಪ್ರದಾಯದ ಮುಖ್ಯ ಕೇಂದ್ರ. ವಿಜಯನಗರದ ಅಭ್ಯುದಯದಕಾಲದಲ್ಲಿ ಇದಕ್ಕೆ ವಿಶೇಷ ರಾಜಾಶ್ರಯ ದೊರೆಯಿತು. (ನೋಡಿ- ಅದ್ವೈತ)
ಶಂಕರಾಚಾರ್ಯರ ತರುವಾಯ ಕರ್ನಾಟಕದಲ್ಲಿ ಶೈವಮತ-ಅದರಲ್ಲೂ ವೀರಶೈವಧರ್ಮ-ವಿಶೇಷವಾಗಿ ಬೆಳೆಯಿತು. ಇದು ಅನೇಕ ಕಡೆಗಳಿಂದ ಸ್ಫೂರ್ತಿಪಡೆದು ಬೆಳೆದ ಮತ. ೬ನೆಯ ಶತಮಾನದಿಂದ ೯ನೆಯ ಶತಮಾನಗಳವರೆಗಿದ್ದ ತಮಿಳುದೇಶದ ೬೩ ಪುರಾತನರ ಚರಿತ್ರೆಯನ್ನು ಒಳಗೊಂಡ ಪೆರಿಯಪುರಾಣದಿಂದ ಇದು ಸ್ಫೂರ್ತಿ ಪಡೆಯಿತು. ತಮಿಳು ವೀರಶೈವರು ಸ್ಥವಿರ ಲಿಂಗಪುಜಕರು. ಕರ್ನಾಟಕ ವೀರಶೈವರಾದರೋ ಇಷ್ಟಲಿಂಗಧಾರಿಗಳು. ಕನ್ನಡ ವೀರಶೈವರು, ಪಶು, ಪತಿ, ಪಾಶ ಎಂಬ ಮೂರು ಮುಖ್ಯತತ್ತ್ವಗಳನ್ನೊಳಗೊಂಡ ಪಾಶುಪತವನ್ನು ಅನುಸರಿಸಿದರು. ವೀರಶೈವ ಧರ್ಮದ ಉಗಮ ರೇವಣಸಿದ್ಧ, ಮರುಳುಸಿದ್ಧ, ಪಂಡಿತಾರಾಧ್ಯ ಏಕೋರಾಮ, ವಿಶ್ವಾರಾಧ್ಯ ಎಂಬ ಪಂಚಾಚಾರ್ಯರಿಂದಾಯಿತೆಂದು ಕೆಲವು ವೀರಶೈವಗ್ರಂಥಗಳಲ್ಲಿ ಉಕ್ತವಾಗಿದೆ. ಶ್ರೀಪತಿಪಂಡಿತನೂ ಶ್ರೀಕಂಠನೂ ಬ್ರಹ್ಮಸೂತ್ರಗಳ ಮೇಲೆ ಶಿವಪರವಾಗಿ ಬರೆದಿರುವ ಭಾಷ್ಯಗಳಿಂದಲೂ ವೀರಶೈವರು ಸ್ಫೂರ್ತಿಪಡೆದಿರುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇದು ಶರಣರ ಸಾಹಿತ್ಯದಿಂದ, ಶರಣರ ಪ್ರಚಾರಕಾರ್ಯದಿಂದ ಬಲಗೊಂಡ ಮತ. ನಮಗೆ ತಿಳಿದಮಟ್ಟಿಗೆ ಜೇಡರ ದಾಸಿಮಯ್ಯ, ಏಕಾಂತದ ರಾಮಯ್ಯ- ಇವರು ಬಸವಣ್ಣನವರ ಕಾಲಕ್ಕಿಂತ ಬಹುಶಃ ಒಂದು ಶತಮಾನಕ್ಕಿಂತ ಮುಂಚೆ ವೀರಶೈವಧರ್ಮವನ್ನು ಪ್ರಚಾರಮಾಡಲು ತುಂಬ ಶ್ರಮಿಸಿದವರು. ಬಸವಣ್ಣನವರ ಕಾಲಕ್ಕೆ ಶಿವಶರಣರ ಗುಂಪು ತುಂಬ ಬೆಳೆದಿತ್ತು. ಸ್ವಾನುಭವ, ಸಚ್ಚಾರಿತ್ರ್ಯ, ಪರಿಶುದ್ಧ ಶಕ್ತಿಗಳಿಂದ ತುಂಬಿದ ಈ ಶರಣರ ಮತದಿಂದ ಬಸವಣ್ಣನವರು ಆಕರ್ಷಿತರಾಗಿ ಇವರನ್ನು ಅತಿಶಯವಾಗಿ ಸತ್ಕರಿಸಿ ಈ ಮತದ ಉದ್ಧಾರಕರಾದರು. ಇವರು ಚೆನ್ನಬಸವಣ್ಣ, ಅಲ್ಲಮಪ್ರಭು ಮತ್ತು ಸಿದ್ಧರಾಮ ಮುಂತಾದವರ ಸಹಕಾರದಿಂದ ಅನುಭವಮಂಟಪವನ್ನು ಕಟ್ಟಿದರು. ಈ ಅನುಭವಮಂಟಪಕ್ಕೆ ಅಕ್ಕಮಹಾದೇವಿಗೂ ಪ್ರವೇಶ ದೊರೆಯಿತು. ಈ ಮಂಟಪದಲ್ಲಿ ಆತ್ಮ-ಆತ್ಮ ಮಥಿಸಿ ಅನುಭಾವ ಹುಟ್ಟಿತು; ವಚನಗಳ ಮೂಲಕ ಅಭಿವ್ಯಕ್ತವಾಯಿತು. ಈ ನಾಲ್ವರಿಂದಲ್ಲದೆ ಅನೇಕ ಶರಣರಿಂದ ಹೊರಬಿದ್ದ ವಚನಕೃತಿಗಳೂ ಸೇರಿ ಒಂದು ವಚನವಾರಿಧಿ ಏರ್ಪಟ್ಟಿತು. ವಚನಕಾರರು ಶೈವಾಗಮಗಳಿಗಿಂತ ಪಾಶುಪತ, ಕಾಳಾಮುಖ ಮುಂತಾದ ಶುಷ್ಕತತ್ತ್ವ ಸಿದ್ಧಾಂತಗಳಿಗಿಂತ ಸ್ವಾನುಭವದಿಂದ ಷಟ್ಸ್ಥಲವಿಧಾನದ ಮೂಲಕ ಕ್ರಮವಾಗಿ ತಳದ ಮೆಟ್ಟಿಲಿಂದ ಮೇಲಿನ ಮೆಟ್ಟಿಲಿಗೆ ಹತ್ತಿ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟಿರುತ್ತಾರೆ. ವಚನಸಾಹಿತ್ಯದಲ್ಲಿ ತತ್ತ್ವಗಳ ವಿವರಣೆ ಇಲ್ಲದಿಲ್ಲ. ಮಹಾಭಾರತದಲ್ಲಿ ಒಂದು ಕಡೆ ಉಕ್ತವಾಗಿರುವ ವಿಶ್ವೋತ್ಪತ್ತಿ ಕ್ರಮವನ್ನು ಚೆನ್ನಬಸವಣ್ಣನವರು ಕರಣ ಹಸುಗೆಯಲ್ಲಿ ವರ್ಣಿಸಿರುತ್ತಾರೆ. ವೀರಶೈವ ಪಂಥ ಶಕ್ತಿವಿಶಿಷ್ಟಾದ್ವೈತಪರವಾದುದೆಂದು ಕ್ರಿಯಾಸಾರಕರ್ತೃವಾದ ನೀಲಕಂಠನೂ ಅದ್ವೈತಪರವಾದುದೆಂದು ಮಗ್ಗೇಯ ಮಾಯಿದೇವನೂ ಹೇಳಿರುತ್ತಾನೆ.
ಅದು ಹೇಗಾದರೂ ಇರಲಿ. ವೀರಶೈವಕ್ಕೆ ಜೀವಪ್ರಾಯವಾದ ಷಟ್ಸ್ಥಲಕ್ರಮ ದ್ವೈತದಿಂದ ವಿಶಿಷ್ಟಾದ್ವೈತ, ವಿಶಿಷ್ಟಾದ್ವೈತದಿಂದ ಅದ್ವೈತಸಿದ್ಧಿಯನ್ನು ಮುಟ್ಟುವ ಸೋಪಾನ. ವೀರಶೈವ ಧರ್ಮ ಹುಟ್ಟಿದ್ದು ಕೆಲವರಿಗಲ್ಲ ಸಕಲರಿಗೆ; ಕೇವಲ ಒಂದು ಮಾನಸಿಕ ಮಟ್ಟದವರಿಗಲ್ಲ ಎಲ್ಲ ಮಟ್ಟದವರಿಗೂ. ವೀರಶೈವರ ಷಟ್ಸ್ಥಲಗಳು ಒಬ್ಬೊಬ್ಬನೂ ತನ್ನ ಆಧ್ಯಾತ್ಮಿಕ ಶಕ್ತಿಸಾಮರ್ಥ್ಯಗಳಿಗನುಗುಣವಾಗಿ ಎಷ್ಟೆಷ್ಟು ಮೇಲಕ್ಕೆ ಏರಬಹುದೋ ಅಷ್ಟಕ್ಕೂ ಅವಕಾಶ ಕೊಡುತ್ತವೆ. ಈ ವಿಚಾರವನ್ನು ಎಸ್. ಸಿ. ನಂದೀಮಠ ಅವರು ಈ ರೀತಿ ಉಪಸಂಹಾರಮಾಡಿರುತ್ತಾರೆ. ಭಕ್ತಿಜ್ಞಾನ, ವೈರಾಗ್ಯ, ದ್ವೈತ, ವಿಶಿಷ್ಟಾದ್ವೈತ, ಅದ್ವೈತ- ಇವುಗಳೆಲ್ಲವನ್ನೂ ಷಟ್ಸ್ಥಲ ಒಳಗೊಂಡಿರುವಂತೆ ತೋರುವುದು. ಷಟ್ಸ್ಥಲಗಳಲ್ಲಿ ಮೊದಲಿನ ಎರಡಾದ ಭಕ್ತಿ ಮತ್ತು ಮಾಹೇಶ್ವರಸ್ಥಲಗಳು ಭಕ್ತಿಯನ್ನೂ ದ್ವೈತವನ್ನೂ ಮೂರನೆಯ ಮತ್ತು ನಾಲ್ಕನೆಯವಾದ ಪ್ರಸಾದಿ ಮತ್ತು ಪ್ರಾಣಲಿಂಗಿಸ್ಥಲಗಳು ಜ್ಞಾನವನ್ನೂ ವಿಶಿಷ್ಟಾದ್ವೈತವನ್ನೂ ಸೂಚಿಸುತ್ತವೆ ಎಂದು ತಿಳಿಯಬಹುದು. ಭಕ್ತ ಮಹೇಶ ಸ್ಥಲಗಳಲ್ಲಿ ಸ್ವಾಮಿ-ಭೃತ್ಯ ಸಂಬಂಧವಿದೆ. ಸ್ವಾಮಿ ಶಿವ; ಭೃತ್ಯ ಜೀವ. ಆದ್ದರಿಂದ ಇಲ್ಲಿ ದ್ವೈತಭಾವವಿದೆಯೆಂದು ಕಲ್ಪಿಸಲಾಗಿದೆ. ಆತ್ಮ ಹೆಚ್ಚು ಹೆಚ್ಚು ಶುದ್ಧನಾದಂತೆ ಈ ದ್ವೈತಭಾವ ಕಡಿಮೆಯಾಗುತ್ತ ಹೋಗುವುದು. ಪ್ರಸಾದಿ ಮತ್ತು ಪ್ರಾಣಲಿಂಗಿಸ್ಥಲಗಳಲ್ಲಿ ಸತಿ-ಪತಿ ಭಾವವಿದೆ. ಇವರಿಬ್ಬರೂ ಶರೀರದಿಂದ ಬೇರೆಯಾದರೂ ಒಂದೇ ಮನಸ್ಸುಳ್ಳವರೂ ಒಂದೇ ಭಾವವುಳ್ಳವರೂ ಆಗಿರುವರು; ಆದ್ದರಿಂದ ಇಲ್ಲಿ ವಿಶಿಷ್ಟಾದ್ವೈತವಿದೆಯೆಂದು ಗ್ರಹಿಸಲಾಗಿದೆ. ಶರಣ ಐಕ್ಯಸ್ಥಲಗಳಲ್ಲಿ ಶಿವ ಜೀವರ ಸಂಪೂರ್ಣ ಐಕ್ಯವೂ ಸಂಸಾರದಿಂದ ಅಲಿಪ್ತತೆಯೂ ಇರುವುದರಿಂದ ಇಲ್ಲಿ ಅದ್ವೈತವಿದೆಯೆಂದು ಗ್ರಹಿಸಲಾಗಿದೆ. ಈ ಸ್ಥಲಗಳು ಆತ್ಮನ ಆಧ್ಯಾತ್ಮಿಕಕೋನ್ನತಿಯ ಮೆಟ್ಟಿಲುಗಳಾಗಿರುವುವು.
ಇಲ್ಲಿಯ ದ್ವೈತ, ವಿಶಿಷ್ಟಾದ್ವೈತ ಮತ್ತು ಅದ್ವೈತಗಳು ಮಧ್ವ, ರಾಮಾನುಜ ಮತ್ತು ಶಂಕರರ ಮತಗಳಿಗಿಂತ ಭಿನ್ನವಾದುದು. ವೀರಶೈವ ಧರ್ಮ ಸಾಹಿತ್ಯ ವಿಶೇಷವಾಗಿ ಕನ್ನಡಭಾಷೆಯಲ್ಲಿರುವುದು ಅದರ ಒಂದು ವೈಶಿಷ್ಟ್ಯ. ಇದು ಕಾಯಕಕ್ಕೆ ಮನ್ನಣೆ ಕೊಟ್ಟಿದೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷ, ಪಂಚಾಕ್ಷರೀ ಮಂತ್ರ- ಇವು ಮೊದಲಾದ ಅಷ್ಟಾವರಣಗಳು ವೀರಶೈವರ ರಕ್ಷಾಕವಚಗಳೆನಿಸಿವೆ.
ಬಸವಣ್ಣನವರ ತರುವಾಯ ವೀರಶೈವಧರ್ಮ ತುಂಬ ಬೆಳೆಯಿತು. ಇದಕ್ಕೆ ರಾಜಾಶ್ರಯವೂ ಜನರ ವಿಶ್ವಾಸವೂ ದೊರೆಯಿತು. ವಿಶೇಷ ಪ್ರೋತ್ಸಾಹ ಕೊಟ್ಟವರು ಕೆಳದಿಯ ನಾಯಕರು. ವೀರಶೈವ ಧರ್ಮವನ್ನು ಕುರಿತ ಸಂಸ್ಕೃತ ಗ್ರಂಥಗಳು ಇವರ ಪ್ರೋತ್ಸಾಹದಿಂದ ಹುಟ್ಟಿದುವು.
ಶ್ರೀವೈಷ್ಣವಧರ್ಮ
ಸಂಪಾದಿಸಿಶ್ರೀವೈಷ್ಣವಧರ್ಮಕ್ಕೆ ಉಪನಿಷತ್ತುಗಳೂ ಪಂಚರಾತ್ರಾಗಮವೂ ಮಹಾಭಾರತದ ಭಗವದ್ಗೀತೆಯೂ ಆಧಾರಗಳೆಂದು ಈಗಾಗಲೇ ತಿಳಿಸಿದೆ. ಶಂಕರಾಚಾರ್ಯರಿಗಿಂತ ಮುಂಚೆ ದಕ್ಷಿಣ ದೇಶಗಳಲ್ಲಿ ವೈಷ್ಣವಮತ ಅನೇಕ ರೂಪಗಳಲ್ಲಿ ಪ್ರಚಾರದಲ್ಲಿತ್ತು. ಅನಂತಶಯನಕ್ಕೆ ಶಂಕರಾಚಾರ್ಯರು ಬಂದ ಕಾಲದಲ್ಲಿ ಅಲ್ಲಿ ಭಕ್ತ, ಭಾಗವತ, ವೈಷ್ಣವ, ಪಂಚರಾತ್ರ, ವೈಖಾನಸ ಮತ್ತು ಕರ್ಮಹೀನ ಎಂಬ ಆರು ಬಗೆಯ ವೈಷ್ಣವ ಸಂಪ್ರದಾಯಗಳಿದ್ದುವು. ಈ ವೈಷ್ಣವರನ್ನು ಅದ್ವೈತಕ್ಕೆ ಒಳಪಟ್ಟ ಭಾಗವತರನ್ನಾಗಿ ಶಂಕರಾಚಾರ್ಯರು ಪರಿವರ್ತಿಸಿದರು. ಶಂಕರಾಚಾರ್ಯರು ತಮ್ಮ ಜನ್ಮಸ್ಥಳವಾದ ಕಾಲಟಿಯಲ್ಲಿ ವಿಷ್ಣುದೇವಾಲಯವನ್ನು ಸ್ಥಾಪಿಸಿದರು. ಹರಿದ್ವಾರ, ಬದರಿನಾಥ್ ಎಂಬ ಉತ್ತರದ ಪುಣ್ಯಸ್ಥಳಗಳಲ್ಲಿ, ಬೌದ್ಧರ ಪ್ರಾಬಲ್ಯದಿಂದ ನಿಂತುಹೋಗಿದ್ದ ವಿಷ್ಣುಪೂಜೆಯನ್ನು ಪುನರುಜ್ಜೀವನಗೊಳಿಸಿದರು.
ಮೇಲೆ ಹೇಳಿದ ವೈಷ್ಣವಸಂಪ್ರದಾಯಗಳಲ್ಲದೆ ತಮಿಳುನಾಡಿನಲ್ಲಿ ೫ನೆಯ ಶತಮಾನದಿಂದ ಆಳ್ವಾರುಗಳೆಂಬ ವೈಷ್ಣವಭಕ್ತರ ಧರ್ಮವೊಂದು ಬೆಳೆದು ಬಂದಿತ್ತು. ಇವರು ಭಕ್ತಿಗೆ ಹೆಚ್ಚು ಬೆಲೆ ಕೊಟ್ಟು ಪ್ರಬಂಧಗಳೆಂಬ ಹಾಡುಗಳ ಮೂಲಕ ತಮ್ಮ ಧರ್ಮವನ್ನು ಅಭಿವ್ಯಕ್ತಿಗೊಳಿಸಿದರು. ಈ ಪಂಥದ ಏಳಿಗೆಗೆ ಕಾರಣರಾದವರು- ೯ ಮತ್ತು ೧೦ನೆಯ ಶತಮಾನದಲ್ಲಿದ್ದ ನಾಥಮುನಿಗಳು ಮತ್ತು ಅವರ ಮೊಮ್ಮಕ್ಕಳಾದ ಯಾಮುನಾಚಾರ್ಯರು. ವೇದಾಭ್ಯಾಸಪಾರಂಗತರಾದ ಯಾಮುನಾಚಾರ್ಯರು ಬೋಧಿಸಿದ ಶ್ರೀವೈಷ್ಣವಸಂಪ್ರದಾಯವನ್ನು ಕರಗತಮಾಡಿಕೊಂಡು ಅದರ ಪ್ರಚಾರಕ್ಕೆ ತೊಡಗಿದ್ದಾಗ ಅವರ ಅಂತ್ಯವಾಯಿತು. ಅವರ ಆಶಯವನ್ನು ಈಡೇರಿಸುವ ಕಾರ್ಯವನ್ನು ರಾಮಾನುಜರು ಕೈಗೊಂಡರು. ಆಚಾರ, ಸಂಪ್ರದಾಯಗಳ ತೊಡಕಿನಿಂದ ಮುಕ್ತರಾಗಲು ರಾಮಾನುಜರು ಸಂನ್ಯಾಸವಹಿಸಿ ಜ್ಞಾನಪ್ರಸಾರಣ ಕಾರ್ಯದಲ್ಲಿ ಉದ್ಯುಕ್ತರಾದರು.
ರಾಮಾನುಜರು ಗದ್ಯತ್ರಯ, ನಿತ್ಯಗ್ರಂಥ ಮತ್ತು ಗೀತಾಭಾಷ್ಯ, ಬ್ರಹ್ಮಸೂತ್ರದ ಮೇಲೆ ವಿಶಿಷ್ಟಾದ್ವೈತಪರವಾದ ಶ್ರೀಭಾಷ್ಯ- ಇವರನ್ನು ಬರೆದರು. ಬ್ರಹ್ಮನ ಶಕ್ತಿರೂಪಳಾದ ಲಕ್ಷ್ಮಿಗೆ ಉಚ್ಚಸ್ಥಾನವನ್ನು ಕೊಟ್ಟುದೇ ಶ್ರೀಭಾಷ್ಯದ ವೈಶಿಷ್ಟ್ಯ. ಇದಾದಮೇಲೆ ರಾಮಾನುಜರು ವೇದಾಂತದೀಪ, ವೇದಾಂತಸಾರ, ವೇದಾರ್ಥಸಂಗ್ರಹ ಎಂಬ ಗ್ರಂಥಗಳನ್ನು ಬರೆದರು. ಉಪನಿಷತ್ತುಗಳ ಮೇಲೆ ಭಾಷ್ಯ ಬರೆಯದಿದ್ದರೂ ವೇದಾರ್ಥಸಂಗ್ರಹದಲ್ಲಿ ಅವುಗಳ ಸಾರವನ್ನು ಇವರು ತಿಳಿಸಿದ್ದಾರೆ. ಇವರು ಆಳ್ವಾರುಗಳ ಪ್ರಬಂಧಗಳನ್ನು ದ್ರಾವಿಡವೇದವೆಂದು ಕರೆದು ಅವುಗಳಿಗೆ ವೇದಕ್ಕೆ ಸಮಾನವಾದ ಸ್ಥಾನವನ್ನು ಕೊಟ್ಟರು. ಬ್ರಹ್ಮಸೂತ್ರಗಳ, ಭಗವದ್ಗೀತೆಯ ಮತ್ತು ಪ್ರಬಂಧಗಳ ತತ್ತ್ವ ವಿಶೇಷ ಸಹಿತವಾದ ಬ್ರಹ್ಮನ್- ಎಂಬ ವಿಶಿಷ್ಟಾದ್ವೈತ ತತ್ತ್ವವನ್ನು ರಾಮಾನುಜರು ಸ್ಪಷ್ಟಪಡಿಸಿದರು.
ಪರತತ್ತ್ವವೆಂಬುದು ನಾರಾಯಣನೇ. ಜಗತ್ತಿಗೆ ಕಾರಣವಾದ ಪ್ರಕೃತಿಯ ಕಾರಣ ನಾರಾಯಣನೇ. ಜೀವೇಶ್ವರಭೇದ ಸಹಜವಾದದ್ದು. ಆತ್ಮ ಪರಮಾತ್ಮದ ಅಂಶ. ಪರಮೇಶ್ವರನಾದ ನಾರಾಯಣನಲ್ಲಿ ಶ್ರದ್ಧೆ ಇಡುವುದರಿಂದ ಮಾತ್ರ ಮುಕ್ತಿ. ಪ್ರೇಮರೂಪವಾದ ಭಕ್ತಿಯೇ ಈ ಶ್ರದ್ಧೆ. ಇದೇ ಶರಣಾಗತಿ. ಶರಣಾಗತಿಯೇ ಪ್ರಪತ್ತಿ. ಇದೇ ಮೋಕ್ಷಸಾಧನೆಗೆ ನೇರವಾದ ಮಾರ್ಗ. ಇದು ರಾಮಾನುಜರ ತತ್ತ್ವದ ಸಾರ. ದೋಷರಹಿತನೂ ನಿತ್ಯನೂ ಚೇತನಾಚೇತನ ವಸ್ತುಗಳಲ್ಲಿ ವ್ಯಾಪ್ತನೂ ಅಂತರ್ಯಾಮಿ ಸ್ವರೂಪನೂ ಸಚ್ಚಿದಾಂನದಸ್ವರೂಪನೂ ಆದ ಈಶ್ವರ ಐದು ಬಗೆಯಾಗಿ ಪ್ರಕಟವಾಗುವನೆಂಬುದು ಶ್ರೀವೈಷ್ಣವಧರ್ಮಕ್ಕೆ ವಿಶಿಷ್ಟವಾದ ಭಾವನೆ.
ರಾಮಾನುಜರ ಸುಧಾರಕ ಮನೋಧರ್ಮಕ್ಕೆ ಅಂತ್ಯಜರಲ್ಲಿ ಅವರು ತೋರಿದ ಪ್ರೇಮ ಒಂದು ಕುರುಹು. ಗಾಂಧಿಯವರು ಅಂತ್ಯಜರನ್ನು ಹರಿಜನರೆಂದು ಕರೆದರು. ಅವರಿಗಿಂತ ಎಂಟನೂರು ವರ್ಷಗಳ ಹಿಂದೆ ರಾಮಾನುಜರು ಅವರನ್ನು ತಿರುಕುಲತ್ತಾರ್ ಎಂದರೆ ಶ್ರೇಷ್ಠಕುಲದವರು ಎಂದು ಕರೆದರು. ಮೇಲುಕೋಟೆಯ ಚೆಲುವನಾರಾಯಣ ದೇವಸ್ಥಾನಕ್ಕೆ ಇವರಿಗೆ ವರ್ಷದಲ್ಲಿ ಮೂರು ದಿನಗಳ ಪ್ರವೇಶ ದೊರೆಯುವಂತೆ ಕಟ್ಟುಮಾಡಿದರು; ಜಾತಿಭೇದವನ್ನೆಣಿಸದೆ ಎಲ್ಲರಿಗೂ ಪಂಚಸಂಸ್ಕಾರಗಳು ದೊರೆಯುವಂತೆ ಮಾಡಿದರು.
ರಾಮಾನುಜರ ಅನಂತರ ವೈಷ್ಣವಧರ್ಮ ವಿಶೇಷವಾಗಿ ಬೆಳೆಯಿತು. ಮೈಸೂರು ಪ್ರಾಂತ್ಯದಲ್ಲಿ ಶ್ರೀವೈಷ್ಣವರು ಹೇರಳವಾಗಿದ್ದಾರೆ. ರಾಮಾನುಜರ ಅನಂತರ ಶ್ರೀವೈಷ್ಣವರಲ್ಲಿ ತೆಂಗಲೈ (ದಕ್ಷಿಣದ) ವಡಗಲೈ (ಉತ್ತರದ) ಎಂಬ ಎರಡು ಬೇಧಗಳು ಹುಟ್ಟಿಕೊಂಡುವು. ನೀನೇ ಗತಿ ಎಂದು ನಾರಾಯಣನಲ್ಲಿ ಶರಣಾಗತ ಭಾವ ತಳೆದ ಜೀವರಿಗೆ ಪ್ರಯತ್ನವಿಲ್ಲದೆಯೇ ಮುಕ್ತಿಕೊಡುವಷ್ಟು ನಾರಾಯಣಪ್ರೇಮ ಅಪಾರ ಎಂಬುದು ತೆಂಗಲೆಯವರ ಮತ. ಮೋಕ್ಷಸಾಧನೆಗೆ ಮಾನವ ಪ್ರಯತ್ನ ಅಗತ್ಯ ಎಂಬುದು ವಡಗಲೆಯವರ ಮತ. ಪಿಳ್ಳೈಲೋಕಾಚಾರ್ಯರು ತೆಂಗಲೈ ಆಚಾರ್ಯರು, ವೇದಾಂತ ದೇಶಿಕರು ವಡಗಲೈ ಆಚಾರ್ಯರು.
ಅದ್ವೈತ ವೇದಾಂತದಂತೆ ವಿಶಿಷ್ಟಾದ್ವೈತವೇದಾಂತವೂ ದಕ್ಷಿಣದಲ್ಲಿ ಹುಟ್ಟಿ ಉತ್ತರದ ದೇಶಗಳಿಗೆ ಹಬ್ಬಿತು. ವಿಶಿಷ್ಟಾದ್ವೈತ ಮತದಿಂದ ಸ್ಫೂರ್ತಿಪಡೆದ ರಮಾನಂದರು ೧೪-೧೫ನೆಯ ಶತಮಾನಗಳಲ್ಲಿ ಉತ್ತರದೇಶಗಳಲ್ಲಿ ಈ ಮತವನ್ನು ಪ್ರಚಾರ ಮಾಡಿದರು.
ಮಾಧ್ವಮತ
ಸಂಪಾದಿಸಿವೈಷ್ಣವಸಂಪ್ರದಾಯಗಳಲ್ಲಿ ಮಾಧ್ವಮತ ಬ್ರಹ್ಮ ಸಂಪ್ರದಾಯಕ್ಕೆ ಸೇರಿದ್ದು. ಇದೂ ಭಕ್ತಿಮಾರ್ಗದ ಪಂಥವೇ. ಇದರದು ಅದ್ವೈತ, ವಿಶಿಷ್ಟಾದ್ವೈತ ತತ್ತ್ವಗಳಿಗಿಂತ ಭಿನ್ನವಾದ ದ್ವೈತತ್ತ್ವ. ಶಂಕರಾಚಾರ್ಯರ ಪ್ರಕಾರ ಭೇದರಹಿತವಾದ ನಿರ್ಗುಣಬ್ರಹ್ಮವೇ ಪರಮಾತ್ಮ. ರಾಮಾನುಜಾಚಾರ್ಯರ ಪ್ರಕಾರ ವಿಶೇಷಸಹಿತವಾದ ಪ್ರಕೃತಿಯನ್ನು ಶರೀರವಾಗಿ ಉಳ್ಳ, ಆತ್ಮಗಳನ್ನು ಅಂಶಗಳಾಗಿ ಉಳ್ಳ, ಗುಣಪರಿಪೂರ್ಣವಾದ ಬ್ರಹ್ಮವೇ ಪರಮಾತ್ಮ. ಮಧ್ವಾಚಾರ್ಯರ ಪ್ರಕಾರ ಬ್ರಹ್ಮ ಪ್ರಕೃತಿಗಿಂತ ಬೇರೆ ; ಜೀವಾತ್ಮರು ಇವೆರಡಕ್ಕಿಂತ ಭಿನ್ನ. ಜೀವಪ್ರಕೃತಿಗಳು ಬ್ರಹ್ಮಕ್ಕೆ ಅಧೀನ. ಬ್ರಹ್ಮವೊಂದೇ ಸ್ವತಂತ್ರ. ಉಳಿದವು ಪರತಂತ್ರ. ಇದೂ ಪ್ರಸ್ಥಾನತ್ರಯಗಳ ಆಧಾರದ ಮೇಲೆಯೇ ರೂಪಗೊಂಡ ತತ್ತ್ವ. ಮಧ್ವಾಚಾರ್ಯರು ಈ ಮೂರರ ಮೇಲೂ ಭಾಷ್ಯಗಳನ್ನು ಬರೆದಿದ್ದಾರೆ. ಇವುಗಳಲ್ಲದೆ ಅವರು ಹತ್ತು ಪ್ರಕರಣ ಗ್ರಂಥಗಳನ್ನೂ ಬರೆದಿದ್ದಾರೆ. ಇವುಗಳ ಮೇಲೆ ಜಯತೀರ್ಥರೂ ವ್ಯಾಸರಾಜರೂ ವ್ಯಾಖ್ಯಾನಗಳನ್ನು ಬರಿದಿರುವರಲ್ಲದೆ ಸ್ವತಂತ್ರ ಗ್ರಂಥಗಳನ್ನೂ ಬರೆದಿದ್ದಾರೆ. ರಾಘವೇಂದ್ರಸ್ವಾಮಿಗಳು ಎಲ್ಲ ಟೀಕೆಗಳ ಮೇಲೂ ಟಿಪ್ಪಣಿಗಳನ್ನು ರಚಿಸಿದ್ದಾರೆ. ದ್ವೈತವೇದಾಂತ ಸಾಹಿತ್ಯ ಅಪರಿಮಿತವಾಗಿದೆ. ವ್ಯಾಸರಾಯಸ್ವಾಮಿಗಳು ಮಧ್ವಮತದ ಮುಖ್ಯ ತತ್ತ್ವಗಳನ್ನು ಒಂದು ಶ್ಲೋಕದಲ್ಲಿ ಸಂಗ್ರಹಿಸಿ ಹೇಳಿದ್ದಾರೆ. ಅದರ ತಾತ್ಪರ್ಯ ಹೀಗಿದೆ : ಹರಿಯೇ ಪರಬ್ರಹ್ಮ. ಜಗತ್ತು ಮಿಥ್ಯೆಯಲ್ಲ ಸತ್ಯ. ಎಲ್ಲೆಲ್ಲೂ ಕಾಣಬರುವ ಭೇದ ನಿಜವಾದದ್ದು. ಜೀವಾತ್ಮರು ಪರಮಾತ್ಮನ ದಾಸರು. ಅವರಲ್ಲಿ ಉಚ್ಚನೀಚ ಎಂಬ ಭೇದಗಳಿವೆ. ನೈಜಸುಖಾನುಭವವೇ ಮುಕ್ತಿ. ನಿರ್ಮಲವಾದ ಭಕ್ತಿಯೇ ಅದಕ್ಕೆ ಸಾಧನ. ಪ್ರತ್ಯಕ್ಷ, ಅನುಮಾನ, ಆಗಮಗಳೆಂಬ ಮೂರೇ ಪ್ರಮಾಣಗಳು. ಎಲ್ಲ ವೇದಗಳಲ್ಲೂ ಪ್ರಶಂಸನೀಯವಾದ ಮುಖ್ಯದೇವತೆ ಹರಿಯೊಬ್ಬನೇ. ಈ ಒಂಬತ್ತು ಮುಖ್ಯಾಂಶಗಳು ಮಧ್ವಮತದ ನವರತ್ನಗಳೆಂದು ಪ್ರಸಿದ್ಧವಾಗಿವೆ.
ಮಧ್ವಾಚಾರ್ಯರು ಕರ್ನಾಟಕದವರು. ಉಡುಪಿಯ ಹತ್ತಿರದಲ್ಲಿರುವ ಪಾಜಕವೆಂಬ ಗ್ರಾಮದಲ್ಲಿ ಜನಿಸಿದರು (೧೨೩೮). ಸಂನ್ಯಾಸಾಶ್ರಮ ಪಡೆದಮೇಲೆ ಪೂರ್ಣಪ್ರಜ್ಞ, ಆನಂದತೀರ್ಥ ಎಂಬ ಹೆಸರುಗಳಿಂದ ಪ್ರಸಿದ್ಧಿ ಪಡೆದರು. ಕರ್ಣಾಟಕ, ತಮಿಳುನಾಡು ಮತ್ತು ಹಿಮಾಚಲದವರೆಗಿನ ಉತ್ತರದೇಶಗಳನ್ನು ಸುತ್ತಿ ತಮ್ಮ ವೈಷ್ಣವಮತವನ್ನು ಪ್ರಚಾರ ಮಾಡಿದರು. ಉತ್ತರ ಹಿಂದೂಸ್ಥಾನದಲ್ಲಿ ಈಗ ಪ್ರಚಾರದಲ್ಲಿರುವ ಚೈತನ್ಯ ಮತ ಮಧ್ವಮತದ ಶಾಖೆಯಾಗಿದೆ.
ದಾಸ ಪಂಥ
ಸಂಪಾದಿಸಿಮಧ್ವಾಚಾರ್ಯರ ತರುವಾಯ ಅವರ ಮತ ವಿಶೇಷವಾಗಿ ಪ್ರಚಾರಕ್ಕೆ ಬಂದದ್ದು ಕನ್ನಡದಲ್ಲಿ ರಚನೆಯಾದ ದಾಸ ಸಾಹಿತ್ಯದ ಮೂಲಕ. ಸುಲಭವಾಗಿ ಅರ್ಥವಾಗುವ ಶೈಲಿಯಲ್ಲಿ ರಚನೆಗೊಂಡ ಕರ್ಣಾಮೃತವಾದ ಪದಗಳು, ದೇವರ ನಾಮಗಳು, ಸುಳಾದಿ, ಸುವ್ವಾಲೆ, ತ್ರಿಪದಿ, ಚೌಪದಿ, ಕಂದ, ವಚನ ಮುಂತಾದುವುಗಳ ಮೂಲಕ ಅವರ ತತ್ತ್ವ ಪ್ರಚಾರಕ್ಕೆ ಬಂತು. ಶಿವನ ಸೇವೆಗೆ ಶರಣರು ದುಡಿದಂತೆ ಹರಿದಾಸರು ವಿಷ್ಣುಸೇವೆಗೆ ಶ್ರಮಿಸಿದರು.
ಪ್ರಾಯಶಃ ಹರಿದಾಸರಲ್ಲಿ ನರಹರಿತೀರ್ಥ ಮೊದಲಿಗರು (೧೩೦೦). ಶ್ರೀಪಾದ ರಾಜ ವಿಜಯನಗರದ ರಾಜರಿಂದ ಸನ್ಮಾನಿತರು (೧೪೫೦). ಇವರು ಕನ್ನಡದಲ್ಲಿ ಬರೆದಿರುವ ವೇಣುಗೀತೆ, ಭ್ರಮರಗೀತೆ, ಗೋಪಾಲಗೀತೆಗಳನ್ನು ಶ್ರೀರಂಗದ ಮಠದಲ್ಲಿ ಪೂಜೆಯ ಕಾಲದಲ್ಲಿ ಹಾಡುತ್ತಾರೆ. ವ್ಯಾಸರಾಯರು ಬನ್ನೂರಿನವರು (೧೪೪೯-೧೫೩೭) ; ಶ್ರೀಪಾದರಾಯನಿಂದ ದೀಕ್ಷೆ ಪಡೆದು ತರ್ಕತಾಂಡವ, ನ್ಯಾಯಾಮೃತ, ಚಂದ್ರಿಕೆ ಎಂಬ ಉದ್ದಾಮ ಸಂಸ್ಕೃತಗ್ರಂಥಗಳನ್ನಲ್ಲದೆ ಕನ್ನಡದಲ್ಲಿ ಕೀರ್ತನೆಗಳನ್ನೂ ಬರೆದಿದ್ದಾರೆ. ಇವರ ಕಾಲದಲ್ಲಿ ವ್ಯಾಸಕೂಟ, ದಾಸಕೂಟಗಳು ಪ್ರಚಾರಕ್ಕೆ ಬಂದುವು. ವ್ಯಾಸರಾಯ ದಾಸಕೂಟಕ್ಕೆ ಪ್ರಮುಖರು. ಪುರಂದರದಾಸ, ಕನಕದಾಸ, ವಿಜಯೀಂದ್ರಸ್ವಾಮಿ, ವಾದಿರಾಜ, ವೈಕುಂಠರಾಜ- ಈ ಮೊದಲಾದವರು ವ್ಯಾಸರಾಯರ ಶಿಷ್ಯರು. ವ್ಯಾಸರಾಯರು ವಿಜಯನಗರದ ರಾಜರಿಗೆ ಗುರು. ಪುರಂದರದಾಸರು ದಾಸಾಗ್ರಗಣ್ಯರು. ಈತನ ಸಂಗೀತ ಪ್ರತಿಭೆಯನ್ನು ಕಂಡು ಈತನನ್ನು ನಾರದರ ಅವತಾರರೆಂದು ಭಾವಿಸಲಾಗಿತ್ತು. ಈತನ ಕೀರ್ತನೆಗಳು ಈತ ಬದುಕಿದ್ದ ಹದಿನೈದನೆಯ ಶತಮಾನದಿಂದ ಇಂದಿನವರೆಗೂ ಅತಿಶಯವಾದ ಮೆಚ್ಚುಗೆಗೆ ಪಾತ್ರವಾಗಿವೆ. ತ್ಯಾಗರಾಜರಿಗೆ ಈ ಕೀರ್ತನೆಗಳು ಸ್ಫೂರ್ತಿಕೊಟ್ಟುವು. ಕನಕದಾಸರ ಪ್ರಭಾವ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದ ಉಡುಪಿಯವರೆಗೆ ಹಬ್ಬಿತ್ತು. ಇವರು ಕೀರ್ತನೆಗಳನ್ನಲ್ಲದೆ ಹರಿಭಕ್ತಿಸಾರ, ನಳಚರಿತ್ರೆ, ರಾಮಧಾನ್ಯಚರಿತ್ರೆ, ಮೋಹನತರಂಗಿಣಿ ಎಂಬ ಗ್ರಂಥಗಳನ್ನೂ ಬರೆದಿದ್ದಾರೆ. ಜಗನ್ನಾಥದಾಸ ರಾಯಚೂರು ಜಿಲ್ಲೆಯವರು (೧೭೨೭). ಅನೇಕ ಕೀರ್ತನೆಗಳನ್ನೂ ಪದ್ಯಗಳನ್ನೂ ಸುಳಾದಿಗಳನ್ನೂ ರಚಿಸಿರುವುದಲ್ಲದೆ ಬ್ರಹ್ಮಸೂತ್ರ ಮತ್ತು ದಶೋಪನಿಷತ್ತುಗಳಿಗೆ ವ್ಯಾಖ್ಯಾನವನ್ನೂ ಮಧ್ವಮತ ತತ್ತ್ವಗಳನ್ನು ಒಳಗೊಂಡ ಹರಿಕಥಾಮೃತಸಾರವೆಂಬ ಕನ್ನಡ ಗ್ರಂಥವನ್ನೂ ಬರೆದಿದ್ದಾರೆ. ದಾಸಪಂಥದವರಲ್ಲಿ ಹೆಂಗಸರೂ ಇದ್ದರು.
ಕ್ರೈಸ್ತಧರ್ಮ
ಸಂಪಾದಿಸಿಇದು ಪ್ರಪಂಚದ ಧರ್ಮಗಳಲ್ಲಿ ಹಿರಿದಾದ ಧರ್ಮ; ಭೌಗೋಳಿಕ ಎಲ್ಲೆಯನ್ನು ದಾಟಿ ಇದು ವಿಶ್ವದ ಎಲ್ಲ ದೇಶಗಳಲ್ಲೂ ಪ್ರಚಾರದಲ್ಲಿದೆ. ಹುಟ್ಟಿದ ಎರಡು ಶತಮಾನಗಳಲ್ಲೇ ಸಂತರು ಈ ಧರ್ಮವನ್ನು ದಕ್ಷಿಣಭಾರತದ ಕೊಚಿನ್ ಪ್ರದೇಶಕ್ಕೆ ತಂದರು. ೧೬ನೆಯ ಶತಮಾನದಲ್ಲಿ ಪೋರ್ಚುಗೀಸರೂ ಅನಂತರ ಡಚ್ಚರೂ ಇಲ್ಲಿಗೆ ವ್ಯಾಪಾರಿಗಳಾಗಿ ಬಂದು ಭಾರತದ ಕೆಲವು ಸಮುದ್ರತೀರಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡು ಆ ಪ್ರದೇಶಗಳಲ್ಲಿ ಕ್ರೈಸ್ತಮತವನ್ನು ಪ್ರಚಾರಮಾಡಿದರು. ಅನಂತರ ಫ್ರೆಂಚರೂ ಆಂಗ್ಲೇಯರೂ ಭಾರತದಲ್ಲಿ ಕಾಲಿಟ್ಟರು. ಆಂಗ್ಲೇಯರು ಭಾರತವನ್ನು ಗೆದ್ದು ಅದನ್ನು ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಒಳಪಡಿಸಿಕೊಂಡ ಮೇಲೆ ಅನೇಕ ಭಾರತೀಯರನ್ನು ಕ್ರೈಸ್ತರನ್ನಾಗಿ ಪರಿವರ್ತಿಸಿದರು. ಅನೇಕ ಬಗೆಯ ಕ್ರೈಸ್ತಧರ್ಮ ಪ್ರಚಾರಸಂಘಗಳು ಭಾರತದ ಎಲ್ಲ ಭಾಗಗಳಲ್ಲೂ ತಮ್ಮ ಧರ್ಮಪ್ರಚಾರವನ್ನು ಬಿರುಸಿನಿಂದ ನಡೆಸಿದುವು. ಈ ಸಂಘಗಳಿಗೆ ಆಗಿನ ಬ್ರಿಟಿಷ್ ಸರ್ಕಾರದ ಬೆಂಬಲವೂ ಇತ್ತು.
ಕರ್ನಾಟಕದಲ್ಲಿ ಸುಮಾರು ಒಂದು ಶತಮಾನದ ಹಿಂದೆ ಕ್ರೈಸ್ತಧರ್ಮ ಪ್ರಚಾರ ಸಂಘಗಳು ಕಾಲಿಟ್ಟವು. ಬಾಸೆಲ್ ಮಿಷನ್, ವೆಸ್ಲಿಯನ್ ಮಿಷನ್ ಮುಂತಾದ ಪ್ರಚಾರ ಸಂಘಗಳು ಮಂಗಳೂರು, ಉತ್ತರ ಕರ್ನಾಟಕ ಮತ್ತು ಹಳೆಯ ಮೈಸೂರು ಪ್ರಾಂತ್ಯಗಳಲ್ಲಿ ತುಂಬ ಚಟುವಟಿಕೆಯಿಂದ ಕೆಲಸಮಾಡಿದುವು; ಜನರ ಸಂಪರ್ಕವನ್ನು ಬೆಳೆಸಿಕೊಳ್ಳಲು ಪಾಠಶಾಲೆಗಳನ್ನೂ ಆಸ್ಪತ್ರೆಗಳನ್ನೂ ಸ್ಥಾಪಿಸಿದುವು. ತಮ್ಮ ಪವಿತ್ರ ಗ್ರಂಥಗಳನ್ನು ಕನ್ನಡ ಜನರಿಗೆ ಪರಿಚಯ ಮಾಡಿಕೊಡಲು ಕ್ರೈಸ್ತಧರ್ಮಪ್ರಚಾರಕರು ಅವನ್ನು ಕನ್ನಡಕ್ಕೆ ಭಾಷಾಂತರಿಸಿದರು. ಧರ್ಮಪ್ರಚಾರಕ್ಕಾಗಿ ಕನ್ನಡ ಭಾಷೆಯನ್ನು ಕಲಿಯುವುದು ಅಗತ್ಯವೆನಿಸಿದಾಗ ಇವರು ತುಂಬ ಆಸಕ್ತಿಯಿಂದ ಕನ್ನಡಸಾಹಿತ್ಯದ ಪರಿಚಯ ಮಾಡಿಕೊಂಡರು. ಅಲ್ಲದೆ ಕಲಿಕೆಗೆ ಅಗತ್ಯವಾದ ಕೋಶಗಳನ್ನು ಸಿದ್ಧಮಾಡಿದರು; ಉದ್ದಾಮ ಗ್ರಂಥಗಳನ್ನು ತಿದ್ದಿ ಪ್ರಕಟಿಸಿದರು.
ಕ್ರೈಸ್ತಧರ್ಮ ಭಾರತದ ಧಾರ್ಮಿಕ ಭಾವನೆಗಳಲ್ಲಿ ಉದಾರತೆಯನ್ನು ಹುಟ್ಟಿಸಿ ಧರ್ಮಸುಧಾರಣೆಗೆ ಪ್ರೇರಕವಾಗಿದೆ. ಕನ್ನಡನಾಡಿನ ಕ್ರೈಸ್ತರೂ ಕನ್ನಡಕ್ಕೆ ಸೇವೆ ಸಲ್ಲಿಸಿದ್ದಾರೆ. ಉತ್ತಂಗಿ ಚನ್ನಪ್ಪನವರು ಸರ್ವಜ್ಞವಚನಗಳನ್ನು ಸಂಪಾದಿಸಿದ್ದಾರೆ. ದೇಶೀಯ ಕ್ರೈಸ್ತರಲ್ಲಿ ಒಂದು ವಿಧವಾದ ವಿನಯವಿದೆ. ಯಾವ ಒಂದು ಮತೀಯ ಇಕ್ಕಟ್ಟಿಗೂ ಕಾರಣರಾಗದೆ ಹಿಂದೂಗಳೊಡನೆ ಅವರು ಸಹಬಾಳ್ವೆ ನಡೆಸುತ್ತಿದ್ದಾರೆ. ಇನ್ನು ಕೆಲವರು ಇನ್ನೂ ಮುಂದೆ ಹೋಗಿ ಭಾರತದ ಧರ್ಮಗಳಲ್ಲಿ ಸಾರವತ್ತಾದ ಭಾವನೆಗಳನ್ನು ಕ್ರೈಸ್ತಧರ್ಮಕ್ಕೆ ಅಳವಡಿಸುತ್ತಿದ್ದಾರೆ.
ಇಸ್ಲಾಂ ಧರ್ಮ
ಸಂಪಾದಿಸಿಈ ಧರ್ಮದ ತತ್ತ್ವ ತುಂಬ ಸರಳ. ಇದರ ಮುಖ್ಯಾಂಶಗಳು ಹೀಗಿವೆ. ದೇವರು ಒಬ್ಬನೇ. ಅವನು ಕರುಣಾಳು, ದುಷ್ಟಶಿಕ್ಷಕ, ಶಿಷ್ಟರಕ್ಷಕ, ಸರ್ವಶಕ್ತ, ಪವಿತ್ರ ಕುರಾನ ದೇವರ ವಾಕ್ಯ. ಇದರಲ್ಲಿ ಮುಸಲ್ಮಾನ ಆಚರಿಸಬೇಕಾದ ಎಲ್ಲ ವಿಷಯಗಳೂ ಸೇರಿವೆ. ದೇವರು ಪ್ರತಿಯೊಬ್ಬನ ಬಾಳಿನ ಸರಿ ತಪ್ಪುಗಳನ್ನು ತೂಗಿ ಕೊನೆಯ ದಿನ ಸಚ್ಚಾರಿತ್ರರಿಗೆ ಸ್ವರ್ಗವಾಸವನ್ನೂ ಪಾಪಿಗಳಿಗೆ ಘೋರ ನರಕವನ್ನೂ ವಿಧಿಸುತ್ತಾನೆ. ಕುರಾನಿನಲ್ಲಿ ಮದುವೆ ಮತ್ತು ದಾಯ ಭಾಗಕ್ಕೆ ಸಂಬಂಧಪಟ್ಟ ನ್ಯಾಯನಿಬಂಧನೆಗಳಿವೆ. ಪ್ರಾರ್ಥನೆ, ಉಪವಾಸ, ದಾನ, ಯಾತ್ರೆಗಳ ವಿಧಾನವನ್ನು ಇದು ಸ್ಪಷ್ಟವಾಗಿ ತಿಳಿಸುತ್ತದೆ; ಭ್ರಾತೃತ್ವ, ಮಾತಾಪಿತೃ ಸೇವೆ, ಕಾಯಕ ಗೌರವ- ಇವುಗಳಿಗೆ ಪ್ರಾಧಾನ್ಯ ಕೊಟ್ಟಿದೆ. ಕುರಾನಿನ ಪ್ರಕಾರ ಪುನರ್ಜನ್ಮವಿಲ್ಲ. ಈ ಜನ್ಮದಲ್ಲಿ ಮಾಡಿದ್ದೇ ಜೀವರುಗಳ ಅಂತಿಮಗತಿಗೆ ಕಾರಣವಾದ್ದರಿಂದ ಈ ಜನ್ಮದಲ್ಲಿ ತುಂಬ ಎಚ್ಚರದಿಂದ ಬಾಳಬೇಕೆಂದು ಇದು ತಿಳಿಸುತ್ತದೆ. ದೇವದೂತರು ಉತ್ತಮರನ್ನು ಸನ್ಮಾರ್ಗದಲ್ಲಿ ನಡೆಸಿ ಸ್ವರ್ಗಕ್ಕೆ ಒಯ್ಯುವರು. ಸೈತಾನರು ನೀಚರನ್ನು ದುರ್ಮಾರ್ಗಕ್ಕೆಳೆದು ನರಕಕ್ಕೆ ನೂಕುವರು.
ಹುಟ್ಟಿದ ಒಂದು ಶತಮಾನದೊಳಗೆ ಇಸ್ಲಾಂ ಧರ್ಮ ಸಿಂಧೂ ಪ್ರಾಂತ್ಯದೊಳಗೆ ಪ್ರವೇಶಿಸಿತು. ಮುಸಲ್ಮಾನ ಜೈತ್ಯಯಾತ್ರೆಗಳು ಯಶಸ್ವಿಯಾಗಿ ಕೊನೆಯಲ್ಲಿ ಭಾರತದಲ್ಲಿ ಮುಸ್ಲಿಮರ ಚಕ್ರಾಧಿಪತ್ಯ ಸ್ಥಾಪನೆಯಾದ ಮೇಲೆ ಉತ್ತರ ದೇಶಗಳಲ್ಲಿ ಬಹುಮುಖವಾಗಿ ವರ್ಧಿಸಿತು. ದಕ್ಷಿಣದಲ್ಲಿ ಇದು ೧೩ನೆಯ ಶತಮಾನದಲ್ಲಿ ಪ್ರಬಲವಾಗಿ ಬಹಮನಿ ರಾಜ್ಯಸ್ಥಾಪನೆಯಿಂದ ಇನ್ನೂ ಬೆಳೆಯಿತು. ವಿಜಯನಗರ ರಾಜ್ಯ ಮುಸಲ್ಮಾನ ದಾಳಿಯಿಂದ ನುಚ್ಚುನೂರಾದ ಅನಂತರ ದಕ್ಷಿಣದಲ್ಲಿ ಮುಸಲ್ಮಾನರ ಪ್ರಾಬಲ್ಯ ಹೆಚ್ಚಿತು. ಹೈದರಾಬಾದಿನ ನಿಜಾಮಶಾಹೀ ಮತ್ತು ಮೈಸೂರಿನ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ ಆಳ್ವಿಕೆಯಲ್ಲಿ ರಾಜಾಶ್ರಯ ದೊರಕಿ ಇಸ್ಲಾಂ ಧರ್ಮ ಕರ್ನಾಟಕದಲ್ಲಿ ವರ್ಧಿಸಿತು.
ಮಹಾತ್ಮ ಗಾಂಧಿಯವರ ಬೋಧೆಯ ಪರಿಣಾಮವಾಗಿ ಈ ಎರಡು ಧರ್ಮದವರಲ್ಲೂ ಶಾಂತಿಯ ಸಹಬಾಳ್ವೆ ಕುದುರುವ ಚಿಹ್ನೆಗಳಿದ್ದರೂ ಹಿಂದೂ ಧರ್ಮದವರಿಗೂ ಮುಸ್ಲಿಮರಿಗೂ ಆಗಾಗ ತಿಕ್ಕಾಟ ನಡೆಯುತ್ತಿರುತ್ತದೆ. ಮುಸ್ಲಿಮರಲ್ಲಿ ಕನ್ನಡದ ಪರಿಚಯ ಹೆಚ್ಚುತ್ತಿದೆ. ಕುರಾನಿನ ಕನ್ನಡದ ಭಾಷಾಂತರ ಹೊರಬಿದ್ದಿದೆ. ಮಹಮ್ಮದನ ಜೀವನಚರಿತ್ರೆಯನ್ನೂ ಅವನ ಧಾರ್ಮಿಕ ಸಂದೇಶವನ್ನೂ ಕನ್ನಡ ಪುಸ್ತಕಗಳ ಮೂಲಕ, ಭಾಷಣಗಳ ಮೂಲಕ ಕನ್ನಡ ಜನತೆಗೆ ಪರಿಚಯ ಮಾಡಿಕೊಡುತ್ತಿದ್ದಾರೆ. ಕರ್ನಾಟಕದ ಎಲ್ಲ ಧರ್ಮದವರಿಗೂ ಮುಸ್ಲಿಮರಿಗೂ ಇನ್ನೂ ಹೆಚ್ಚಿನ ಸ್ನೇಹ ವರ್ಧಿಸಬೇಕಾಗಿದೆ.
ಕರ್ನಾಟಕದಲ್ಲಿ ಪರಮತ ಸಹಿಷ್ಣುತೆ
ಸಂಪಾದಿಸಿಅಶೋಕ ಇಡೀ ಭಾರತದಲ್ಲೂ ಕರ್ನಾಟಕದಲ್ಲೂ ಸಾರಿದ ಪರಮತ ಸಹಿಷ್ಣುತೆಯ ಸಂದೇಶ ಕರ್ನಾಟಕದ ಚರಿತ್ರೆಯುದ್ದಕ್ಕೂ ಪ್ರತಿಧ್ವನಿಸುತ್ತಿದ್ದು, ಕರ್ನಾಟಕ ಅನೇಕ ಧರ್ಮಗಳ ಸಹಬಾಳ್ವೆಗೆ ಅವಕಾಶ ಮಾಡಿಕೊಟ್ಟಿದೆ. ಶಿವ, ವಿಷ್ಣು, ಅಂಬಿಕೆ, ಗಣಪತಿ, ಸೂರ್ಯ ಈ ಎಲ್ಲ ದೇವತೆಗಳನ್ನೂ ಸಮಾನರೆಂದು ಭಾವಿಸಿ ಪುಜಿಸಬೇಕೆಂದು ಶಂಕರಾಚಾರ್ಯರು ಬೋಧಿಸಿದರು. ಉತ್ತರದಿಂದ ಬಂದ ಜೈನಧರ್ಮದವರು ಕರ್ನಾಟಕದಲ್ಲಿ ಚೆನ್ನಾಗಿ ಬಾಳಿ ಈ ಸಂಸ್ಕೃತಿಯ ಬೆಳೆವಣಿಗೆಗೆ ಕಾರಣರಾದರು.
ವಿಜಯನಗರದ ಅರಸರ ಕಾಲದಲ್ಲಿ ಶೈವ, ವೈಷ್ಣವ, ಜೈನಧರ್ಮದವರು ಒಂದೇ ಸಮನಾದ ರಾಜಾಶ್ರಯಕ್ಕೆ ಪಾತ್ರರಾಗಿದ್ದರು. ಆಕಸ್ಮಿಕವಾಗಿ ಇವರಲ್ಲಿ ವೈಮನಸ್ಯ ಹುಟ್ಟಿದ ಸಂದರ್ಭಗಳಲ್ಲಿ ರಾಜರು ಉದಾರ ಮನಸ್ಸಿನಿಂದ ಅದನ್ನು ಶಾಂತಗೊಳಿಸುತ್ತಿದ್ದರು. ಬುಕ್ಕರಾಯನ ಒಂದು ಶಾಸನ ಅವರ ಉದಾರನೀತಿಗೆ ಹೆಗ್ಗುರುತಾಗಿದೆ. ಅಧಿಕಸಂಖ್ಯಾತರಾದ ಶ್ರೀವೈಷ್ಣವರು ಅಲ್ಪಸಂಖ್ಯಾತರಾದ ಜೈನರಿಗೆ ತೊಂದರೆ ಮಾಡಿದಾಗ ಬುಕ್ಕರಾಯ ಅವರಲ್ಲಿ ಮೈತ್ರಿಯನ್ನೇರ್ಪಡಿಸಬೇಕೆಂದು ಒಂದು ಶಾಸನದಲ್ಲಿ ಹೇಳಿದೆ. ಎಲ್ಲ ಮತಗಳೂ ಪುಜ್ಯವೆಂದೂ ಅವು ಭಾವಿಸಿದ ವಸ್ತು ಒಂದೇ ಎಂದೂ ಹರಿಹರ ದೇವನ ಕಾಲದ ಬೇಲೂರು ಶಾಸನದ ಪ್ರಾರ್ಥನಾಶ್ಲೋಕ ಪ್ರತಿಬಿಂಬಿಸುತ್ತದೆ.
- ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ |
- ಬೌದ್ಧಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾಃ ||
- ಅರ್ಹಶ್ಚೇತಿಹ ಜೈನಶಾಸನಮತಿಃ ಕರ್ಮೇತಿ ಮೀಮಾಂಸಕಾಃ |
- ಸೋsಯಂ ವೋ ವಿದಧಾತು ವಾಂಛಿತಫಲಂ ಶ್ರೀಕೇಶವಸ್ಸರ್ವದಾ ||
ಇದರ ಕನ್ನಡ ಭಾಷಾಂತರವಿದು: ಶಿವನೆಂದು ಶೈವರೂ ಬ್ರಹ್ಮನೆಂದು ವೇದಾಂತಿಗಳೂ ಬುದ್ಧನೆಂದು ಬೌದ್ಧರೂ ಕರ್ತನೆಂದು ಪ್ರಮಾಣಪಟುಗಳಾದ ನೈಯಾಯಿಕರೂ ಅರ್ಹನೆಂದು ಜೈನಧರ್ಮದವರೂ ಕರ್ಮವೆಂದು ಮೀಮಾಂಸಕರೂ ಉಪಾಸಿಸುವ ಆ ಕೇಶವ ಸದಾ ನಮ್ಮ ಬಯಕೆಯನ್ನು ಪುರೈಸಲಿ. ಈಗಲೂ ಈ ಶ್ಲೋಕವನ್ನು ಸಾರ್ವಜನಿಕ ಸಭೆಗಳ ಆರಂಭದಲ್ಲಿ ಪ್ರಾರ್ಥನಾ ಶ್ಲೋಕವಾಗಿ ಹೇಳುವುದು ಕರ್ನಾಟಕದಲ್ಲಿ ರೂಢಿಯಲ್ಲಿದೆ. (ಜಿ.ಎಚ್.)