ಕರ್ನಾಟಕದ ಶಾಸನಗಳು : ಬಹುಶಃ ತಮಿಳುನಾಡನ್ನು ಬಿಟ್ಟರೆ ಕರ್ನಾಟಕದಲ್ಲಿ ದೊರೆಯುವಷ್ಟು ಶಾಸನಗಳು ಭಾರತದ ಯಾವ ಪ್ರಾಂತದಲ್ಲಿಯೂ ಇಲ್ಲ. ಸು. ೨೦,೦೦೦ಕ್ಕೂ ಹೆಚ್ಚು ಶಾಸನಗಳು ಕರ್ನಾಟಕದಲ್ಲಿ ಈವರೆಗೆ ದೊರಕಿವೆ. ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಶಾಸನಗಳು ಅಚ್ಚಾಗಿವೆ. ಕರ್ನಾಟಕದಲ್ಲಿ ದೊರೆಯುವ ಅತ್ಯಂತ ಪ್ರಾಚೀನವಾದ ಶಾಸನಗಳೆಂದರೆ ಮೌರ್ಯ ವಂಶದ ಅಶೋಕ ಚಕ್ರವರ್ತಿಯ (ಪ್ರ.ಶ.ಪೂ. ೨೭೨-೨೩೨) ಧರ್ಮಲಿಪಿಗಳು. ಭಾರತದ ಇತರೆಡೆಗಳಲ್ಲೂ ಈ ವರೆಗೆ ದೊರಕಿರುವ ಅತ್ಯಂತ ಪ್ರಾಚೀನ ಬರೆಹಗಳೆಂದರೆ ಈತನ ಧರ್ಮಶಾಸನಗಳೇ. ಇದಕ್ಕೂ ಪೂರ್ವದ ಹರಪ್ಪ್ಪ ಸಂಸ್ಕೃತಿಯ ಮುದ್ರೆಗಳ ಮೇಲಿರುವ ಚಿತ್ರಲಿಪಿಯನ್ನು ಇನ್ನೂ ಸಮರ್ಪಕವಾಗಿ ಓದಿ ಗುರುತಿಸಿಲ್ಲ. ಇಡೀ ಭಾರತದಲ್ಲಿ ಇದುವರೆಗೆ ದೊರೆತ ಅಶೋಕನ ಒಟ್ಟು ೧೩ ಲಘು ಶಿಲಾಲೇಖಗಳಲ್ಲಿ (ಮೈನರ್ ರಾಕ್ ಈಡಿಕ್ಟ್ಸ್ ) ೬ ಶಾಸನಗಳು ಕರ್ನಾಟಕದಲ್ಲಿಯ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ಧಾಪುರ ಮತ್ತು ಜಟಿಂಗರಾಮೇಶ್ವರಗಳಲ್ಲಿಯೂ ರಾಯಚೂರು ಜಿಲ್ಲೆಯ ಮಾಸ್ಕಿ, ಗವಿಮಠ ಮತ್ತು ಪಾಲ್ಕಿಗುಂಡು ಎಂಬಲ್ಲಿಯೂ ದೊರೆತಿವೆ. ಇವು ಮೌರ್ಯಕಾಲದ ಬ್ರಾಹ್ಮೀ ಲಿಪಿಯಲ್ಲಿ ಪ್ರಾಕೃತ ಭಾಷೆಯಲ್ಲಿವೆ. ಬ್ರಹ್ಮಗಿರಿ ಗುಂಪಿನ ಮೂರು ಶಾಸನಗಳ ಕೊನೆಯ ವಾಕ್ಯವಾದ ಚಪಡೇನ ಲಿಖಿತೇ ಲಿಪಿಕರೇಣ ಎಂಬಲ್ಲಿ ಮೊದಲಿನ ಎರಡು ಶಬ್ದಗಳನ್ನು ಬ್ರಾಹ್ಮೀ ಲಿಪಿಯಲ್ಲಿ ಮತ್ತು ಲಿಪಿಕರೇಣ ಎಂಬ ಶಬ್ದವನ್ನು ಖರೋಷ್ಠೀ ಲಿಪಿಯಲ್ಲಿ ಬರೆಯಲಾಗಿದೆ. ಕರ್ನಾಟಕ ಶಾಸನಗಳ ಮೊದಲ ಲಿಪಿಕಾರ ಚಪಡ ತನಗೆ ಖರೋಷ್ಠೀಲಿಪಿಯ ಜ್ಞಾನ ಇದ್ದಿತೆಂದು ತಿಳಿಸುವುದಕ್ಕಾಗಿ ಆ ಶಬ್ದವನ್ನು ಖರೋಷ್ಠೀಯಲ್ಲಿ ಬರೆದಿರಬಹುದು. ಅಶೋಕನ ಶಾಸನಗಳಲ್ಲಿ ಉಪಯೋಗಿಸಿದ ಬ್ರಾಹ್ಮೀ ಲಿಪಿಯಿಂದಲೇ ಉತ್ತರ ಹಾಗೂ ದಕ್ಷಿಣ ಭಾರತದ ಎಲ್ಲ ಪ್ರಚಲಿತ ಲಿಪಿಗಳು ಉದ್ಭವಿಸಿರುತ್ತವೆ. ಕರ್ನಾಟಕದಲ್ಲಿ ದೊರೆತ ಅಶೋಕ ಚಕ್ರವರ್ತಿಯ ಶಾಸನಗಳಿಂದ ಈ ಭಾಗ ಆತನ ರಾಜ್ಯಕ್ಕೆ ಒಳಪಟ್ಟಿತ್ತೆಂದು ಗೊತ್ತಾಗುತ್ತದೆ. ಈ ಭಾಗಕ್ಕೆ ಇಸಿಲ ಎಂಬ ಹೆಸರಿದ್ದು, ಇದು ಸುವರ್ಣಗಿರಿ ಪ್ರಾಂತ್ಯಕ್ಕೆ ಸೇರಿತ್ತೆಂಬುದು ಚಿತ್ರದುರ್ಗ ಜಿಲ್ಲೆಯಲ್ಲಿ ದೊರೆತ ಆತನ ಶಾಸನಗಳಿಂದ ತಿಳಿಯುತ್ತದೆ. ರಾಯಚೂರು ಜಿಲ್ಲೆಯ ಮಸ್ಕಿ ಶಾಸನದಲ್ಲಿ ಅಶೋಕನ ಹೆಸರನ್ನೇ ಉಲ್ಲೇಖಿಸಿದ್ದುದರಿಂದ ಉಳಿದ ಶಾಸನಗಳಲ್ಲಿ ಉಕ್ತವಾದ ದೇವಾನಾಂ ಪ್ರಿಯ ಪ್ರಿಯದರ್ಶಿ ರಾಜಾ ಅಥವಾ ದೇವಾನಾಂಪ್ರಿಯ ರಾಜಾ ಎಂಬ ಹೆಸರು ಅಶೋಕನಿಗೆ ಅನ್ವಯಿಸುತ್ತದೆಂಬ ವಿಷಯ ಖಚಿತವಾಯಿತು.
ಮೌರ್ಯರ ತರುವಾಯ ಕರ್ನಾಟಕದಲ್ಲಿ ರಾಜ್ಯವಾಳಿದ ಸಾತವಾಹನರ ಶಾಸನಗಳು ಈಗಿನ ಮೈಸೂರು ರಾಜ್ಯದಲ್ಲಿ ದೊರೆತಿಲ್ಲವಾದರೂ ಮೊದಲು ಬಳ್ಳಾರಿ ಜಿಲ್ಲೆಗೆ ಸೇರಿದ ಹಾಗೂ ಈಗ ಕರ್ನೂಲು ಜಿಲ್ಲೆಯಲ್ಲಿ ಸಮಾವೇಶಗೊಂಡಿರುವ ಆದವಾನಿ ತಾಲ್ಲೂಕಿನ ಮ್ಯಾಕದೋನಿ ಎಂಬಲ್ಲಿ ಆ ವಂಶದ ಸಿರಿಪುಳುಮಾವಿಯ ಶಾಸನವೊಂದಿದೆ. ಈತ ೨ನೆಯ ವಾಸಿಠೀಪುತ ಪುಳುಮಾವಿ (೧೩೦-೫೯) ಎಂದು ವಿದ್ವಾಂಸರ ಅಭಿಪ್ರಾಯ. ಸಾತವಾಹನರ ಸಾಮಂತರಾದ ಚುಟುಕುಲ ಸಾತಕಣ್ಣಿಗಳು ಬನವಾಸಿ ಪ್ರಾಂತದಲ್ಲಿ ೩ನೆಯ ಶತಮಾನದಲ್ಲಿ ಆಳುತ್ತಿದ್ದು, ಆ ವಂಶದ ಅರಸು ಹಾರಿತೀಪುತ ವಿಣ್ಹುಕಡ ಚುಟುಕುಲಾನಂದ ಸಾತಕಣ್ಣಿ ಎಂಬಾತನ ಎರಡು ಶಾಸನಗಳು ಬನವಾಸಿ ಮತ್ತು ಮಳವಳ್ಳಿಗಳಲ್ಲಿ ದೊರೆತಿವೆ. ಇತ್ತೀಚೆಗೆ ಗುಲ್ಬರ್ಗ ಜಿಲ್ಲೆಯ ಸನ್ನತಿ ಎಂಬಲ್ಲಿ ಸು. ಮೂರನೆಯ ಶತಮಾನದ ಲಿಪಿಯಲ್ಲಿ ಬರೆದ ಮತ್ತು ನಾಗಾರ್ಜುನಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಲಿಪಿಯನ್ನು ಹೋಲುವ ೩೦ರಷ್ಟು ಚಿಕ್ಕಪುಟ್ಟ ಶಾಸನಗಳು ದೊರೆತಿವೆ. ಅವುಗಳಿಂದ ಮತ್ತು ಅಲ್ಲಿ ದೊರೆತ ಬೇರೆ ಅವಶೇಷಗಳಿಂದ ಆ ಸ್ಥಳ ಮೂರನೆಯ ಶತಮಾನದಲ್ಲಿ ಬೌದ್ಧರ ಪ್ರಮುಖ ಕೇಂದ್ರವಾಗಿತ್ತೆಂದು ತಿಳಿಯುವುದು. ಈ ಶಾಸನಗಳು ಪ್ರಾಕೃತ ಭಾಷೆಯಲ್ಲಿವೆ. ಮೇಲೆ ಹೇಳಿದ ಮ್ಯಾಕದೋನಿ ಶಾಸನದಿಂದಲೂ ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಎಂಬಲ್ಲಿ ದೊರೆತ ಪಲ್ಲವ ರಾಜ ಶಿವಸ್ಕಂದ ವರ್ಮನ ಪ್ರಾಕೃತಭಾಷೆಯ ತಾಮ್ರಶಾಸನದಿಂದಲೂ ಬಳ್ಳಾರಿಯ ಬಹುಭಾಗ ಸಾತವಹನಿಹಾರ ಅಥವಾ ಸಾತಾಹನಿರಟ್ಠ ಅಂದರೆ ಸಾತವಾಹನ ರಾಷ್ಟ್ರ ಎಂಬ ಪ್ರಾಂತವನ್ನೊಳಗೊಂಡಿತ್ತೆಂಬುದಾಗಿ ತಿಳಿಯುತ್ತದೆ. ಸಾತವಾಹನರ ತರುವಾಯ ಈ ಭಾಗ ಪಲ್ಲವರ ವಶದಲ್ಲಿತ್ತೆಂಬ ವಿಷಯವೂ ಈ ತಾಮ್ರಶಾಸನದಿಂದ ವಿಶದವಾಗುವುದು. ೩-೪ನೆಯ ಶತಮಾನದ ಈ ಶಾಸನ ಭಾರತದಲ್ಲಿ ಇದುವರೆಗೆ ದೊರೆತ ಅತ್ಯಂತ ಪ್ರಾಚೀನ ತಾಮ್ರದಾನಪತ್ರವಾಗಿರುತ್ತದೆ.
ನಾಲ್ಕನೆಯ ಶತಮಾನದ ಆದಿಭಾಗದಲ್ಲಿ ಪಲ್ಲವರನ್ನು ಸೋಲಿಸಿ ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ಸ್ವತಂತ್ರವಾದ ರಾಜ್ಯವನ್ನು ಸ್ಥಾಪಿಸಿದವರು ಕದಂಬರು. ಈ ವಂಶದ ಮೂಲಪುರಷ ಮಯೂರಶರ್ಮನ ಶಾಸನವೊಂದು ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಬಳಿ ಬಂಡೆಗಲ್ಲಿನ ಮೇಲಿದೆ. ಇದು ಸು. ನಾಲ್ಕನೆಯ ಶತಮಾನದ ಬ್ರಾಹ್ಮೀ ಲಿಪಿಯಲ್ಲಿ ಮತ್ತು ಪ್ರಾಕೃತ ಭಾಷೆಯಲ್ಲಿದೆ. ಹೀಗೆ ಕರ್ನಾಟಕದಲ್ಲಿ ಅಶೋಕನ ಕಾಲದಿಂದ ಮಯೂರಶರ್ಮನ ಕಾಲದವರೆಗೆ ದೊರೆತ ಎಲ್ಲ ಶಾಸನಗಳೂ ಬಾಹ್ಮೀಲಿಪಿಯಲ್ಲಿ ಮತ್ತು ಪ್ರಾಕೃತ ಭಾಷೆಯಲ್ಲಿವೆ. ಆದುದರಿಂದ ಜನಸಾಮಾನ್ಯರ ಭಾಷೆ ಕನ್ನಡವಾದರೂ ಸುಶಿಕ್ಷಿತರಿಗೆ ಪ್ರಾಕೃತ ಭಾಷೆ ತಿಳಿಯುತ್ತಿತ್ತೆಂದು ತೋರುತ್ತದೆ.
ನಾಲ್ಕನೆಯ ಶತಮಾನದಿಂದ ೧೬-೧೭ನೆಯ ಶತಮಾನದವರೆಗಿನ ನಾಡಿನ ಚರಿತ್ರೆಯನ್ನು ತಿಳಿದುಕೊಳ್ಳಲು ಸಹಸ್ರಾರು ಶಾಸನಗಳು ಮೂಲಾಧಾರವಾಗಿವೆ. ಕದಂಬ, ಬಾದಾಮಿ ಚಾಳುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ಕಳಚುರ್ಯ, ಸೇವುಣ, ಹೊಯ್ಸಳ, ವಿಜಯನಗರದ ಅರಸರು ಮುಂತಾದ ಅರಸುಮನೆತನಗಳ ಮತ್ತು ಅಧೀನ ಅರಸುಮನೆತನಗಳ ಚರಿತ್ರೆಯನ್ನು ರೂಪಿಸಲು ಶಾಸನಗಳು ಬಹಳ ಉಪಯುಕ್ತವಾಗಿವೆ. ಅರಸುಮನೆತನಗಳ ವಂಶಾವಳಿ-ಚರಿತ್ರೆಯಷ್ಟೇ ಅಲ್ಲದೆ ನಾಡಿನ ಸಂಸ್ಕೃತಿಯ ಪರಂಪರೆಯನ್ನು ತಿಳಿದುಕೊಳ್ಳಲೂ ಶಾಸನಗಳು ಅತ್ಯಮೂಲ್ಯ ಸಾಧನಗಳಾಗಿವೆ. ಆಯಾ ಕಾಲದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಭೌಗೋಲಿಕ ಮುಂತಾದ ಅನೇಕ ವಿಷಯಗಳ ಬಗ್ಗೆ ಶಾಸನಗಳು ವಿಪುಲವಾದ ಹಾಗೂ ನಿರ್ದುಷ್ಟವಾದ ಸಾಮಗ್ರಿಗಳನ್ನು ಒದಗಿಸುತ್ತವೆ. ಆಡಳಿತ ಕ್ಷೇತ್ರದಲ್ಲಿ ರಾಜ್ಯದ ವಿವಿಧ ಮಟ್ಟಗಳಲ್ಲಿರುವ ಆಡಳಿತ ವ್ಯವಸ್ಥೆ, ಆಡಳಿತಾಧಿಕಾರಿಗಳು, ಸೈನ್ಯಾಧಿಕಾರಿಗಳು, ಆದಾಯ, ತೆರಿಗೆ, ಸುಂಕ-ಸಾರಿಗೆ, ಸ್ವಾಯತ್ತೆ ಪಡೆದಿರುವ ಸಂಘ-ಸಂಸ್ಥೆಗಳು, ನ್ಯಾಯವಿತರಣೆ, ಭೂಮಿಯ ಸಾಗುವಳಿ, ಒಕ್ಕಲತನ, ನೀರಾವರಿ, ಬೆಳೆ ಮುಂತಾದ ವಿಷಯಗಳ ಬಗ್ಗೆಯೂ ಶಾಸನಗಳಿಂದ ವಿವರಗಳು ದೊರಕುತ್ತವೆ.
ಮೇಲೆ ಉಲ್ಲೇಖಿಸಿದ ಕದಂಬ ಮಯೂರಶರ್ಮನ ಚಂದ್ರವಳ್ಳಿ ಶಾಸನವನ್ನುಳಿದು ಈ ವಂಶದ ರಾಜರ ಎಲ್ಲ ಶಾಸನಗಳು ಸಂಸ್ಕೃತ ಭಾಷೆಯಲ್ಲಿವೆ. ರಾಜಾಸ್ಥಾನದ ಭಾಷೆ ಸಂಸ್ಕೃತವಿದ್ದುದರಿಂದ ಈ ಶಾಸನಗಳು ಆ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಆದರೆ ೫ನೆಯ ಶತಮಾನದ ಕನ್ನಡ ಲಿಪಿಯಲ್ಲಿ ಬರೆದ ಹಲ್ಮಿಡಿ ಶಾಸನದಲ್ಲಿ ಆರಂಭದ ಶ್ಲೋಕ ಸಂಸ್ಕೃತ ಭಾಷೆಯಲ್ಲಿಯೂ ಉಳಿದ ಭಾಗ ಕನ್ನಡದಲ್ಲಿಯೂ ಬರೆಯಲ್ಪಟ್ಟಿವೆ. ಇದೇ ಇದುವರೆಗೆ ದೊರೆತ ಅತ್ಯಂತ ಪ್ರಾಚೀನ ಕನ್ನಡ ಶಾಸನ. ಭಾಷಾದೃಷ್ಟಿಯಿಂದ ಕರ್ನಾಟಕದ ಶಾಸನಗಳನ್ನು ಪ್ರಾಕೃತ, ಸಂಸ್ಕೃತ, ಕನ್ನಡ ಹಾಗೂ ಮಿಶ್ರ ಭಾಷೆಯ ಶಾಸನಗಳೆಂದು ವಿಂಗಡಿಸಬಹುದು. ಕದಂಬರ ತರುವಾಯ ಕರ್ನಾಟಕದಲ್ಲಿ ರಾಜ್ಯವಾಳಿದ ಅರಸರ ಶಾಸನಗಳಲ್ಲಿ ಸಾಮಾನ್ಯವಾಗಿ ತಾಮ್ರಶಾಸನ ಗಳು ಸಂಸ್ಕೃತ ಭಾಷೆಯಲ್ಲಿಯೂ ಶಿಲಾಶಾಸನಗಳು ಕನ್ನಡ ಭಾಷೆಯಲ್ಲಿಯೂ ಇವೆ. ರಾಷ್ಟ್ರಕೂಟರ ತಾಮ್ರಶಾಸನಗಳಲ್ಲಿ ಈಗ ಬ್ರಿಟಷ್ ವಸ್ತುಸಂಗ್ರಹಾಲಯ ದಲ್ಲಿರುವ ಮೂರನೆಯ ಗೋವಿಂದನ ೮೦೪ರ ತಾಮ್ರಪತ್ರ ವೊಂದು ಮಾತ್ರ ಕನ್ನಡದಲ್ಲಿದೆ. ಇದೇ ಕನ್ನಡದ ಅತ್ಯಂತ ಪ್ರಾಚೀನ ತಾಮ್ರಶಾಸನ. ಬಾದಾಮಿ ಚಾಳುಕ್ಯರ ೨ನೆಯ ಪುಲಕೇಶಿಯನ್ನು ಸೋಲಿಸಿದ ಪಲ್ಲವ ನರಸಿಂಹವರ್ಮನ ಶಿಲಾಶಾಸನವೊಂದು ಬಾದಾಮಿ ಯಲ್ಲಿ ದೊರೆತಿದೆ. ಇದು ಸಂಸ್ಕೃತ ಭಾಷೆಯಲ್ಲಿ ಪಲ್ಲವರ ಗ್ರಂಥಲಿಪಿಯಲ್ಲಿದೆ. ಇನ್ನು ಕರ್ನಾಟಕದ ನೆರೆಹೊರೆಯ ಪ್ರಾಂತ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಗಡಿ ಪ್ರದೇಶಗಳು ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶವಾಗಿದ್ದುದ್ದರಿಂದ ಅಲ್ಲಿ ಕರ್ನಾಟಕದ ಅರಸುಮನೆತನಗಳಿಗೆ ಸಂಬಂಧಿಸಿದ ಅನೇಕ ಶಾಸನಗಳು ಸಂಸ್ಕೃತ ಕನ್ನಡ ಮತ್ತು ಇವೆರಡರ ಮಿಶ್ರಭಾಷೆಯಲ್ಲಿಯೂ ದೊರಕಿವೆ. ಹಾಗೂ ರಾಯಚೂರು ಬಳ್ಳಾರಿ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ತಮಿಳು ಭಾಷೆಯ ಅನೇಕ ಶಾಸನಗಳು ದೊರಕಿವೆ.
ಕರ್ನಾಟಕದ ಶಾಸನಗಳನ್ನು ತಾಮ್ರಶಾಸನ ಮತ್ತು ಶಿಲಾಶಾಸನ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ತಾಮ್ರಶಾಸನಗಳು ಸಾಮಾನ್ಯವಾಗಿ ರಾಜರಿಂದ ಮನ್ನಣೆ ಪಡೆದ ಮತ್ತು ವೇದ, ಶಾಸ್ತ್ರ, ಪುರಾಣ, ಇತಿಹಾಸಗಳಲ್ಲಿ ಪರಿಣತಿ ಹೊಂದಿದ ಬ್ರಾಹ್ಮಣ ವಿದ್ವಾಂಸರಿಗೆ ತಮ್ಮ ಕರ್ಮಾನುಷ್ಠಾನಕ್ಕಾಗಿ ಅಗ್ರಹಾರ ಗ್ರಾಮಗಳನ್ನೂ ಇತರ ದತ್ತಿಗಳನ್ನೂ ಬಿಟ್ಟ ವಿಷಯವನ್ನು ನಿರೂಪಿಸುತ್ತವೆ. ಶಿಲಾ ಶಾಸನಗಳು ರಾಜರೂ ಅವರ ಪರಿವಾರದವರೂ ನಿರ್ಮಿಸಿದ ದೇವಾಲಯಗಳ ಪೂಜೆ ಪುರಸ್ಕಾರಗಳಿಗೂ ಜೀರ್ಣೋದ್ಧಾರಕ್ಕೂ ಬಿಟ್ಟ ದತ್ತಿಗಳ ವಿವರಗಳನ್ನು ತಿಳಿಸಲು ಬರೆದವುಗಳಾಗಿರುತ್ತವೆ. ಇಂಥ ಶಾಸನಗಳು ದೇವಾಲಯದ ವಿವಿಧ ಭಾಗಗಳಲ್ಲಿ ಗೋಡೆ, ಕಂಬ, ಅಸ್ತಿಭಾರ, ಬಾಗಿಲು, ಚಾವಣಿ, ಬೋದಿಗೆ ಮುಂತಾದ ಕಡೆಗಳಲ್ಲಿಯೂ ಪ್ರತ್ಯೇಕವಾಗಿ ತಯಾರಿಸಿ ನಿಲ್ಲಿಸಿದ ಶಿಲಾಫಲಕಗಳ ಮೇಲೆಯೂ ಕೆತ್ತಲ್ಪಟ್ಟಿರುತ್ತವೆ. ಕರ್ನಾಟಕದಲ್ಲಿ ದೊರೆತ ಶಾಸನಗಳಲ್ಲಿ ೧೦೦ಕ್ಕೆ ೮೦ರಷ್ಟು ವ್ಯಕ್ತಿಗಳಿಗೆ ಅಥವಾ ದೇವಾಲಯಗಳಿಗೆ ಕೊಟ್ಟ ದಾನಶಾಸನಗಳಾಗಿರುತ್ತವೆ. ಉಳಿದವು ಕೋಟೆಕೊತ್ತಲ, ಕೆರೆಬಾವಿಗಳ ನಿರ್ಮಾಣ ಮತ್ತು ಅವುಗಳ ನಿರ್ಮಾಪಕರ ವಿಷಯವನ್ನು ತಿಳಿಸುವುದಕ್ಕಾಗಿಯೂ ರಾಜರ ವಿಜಯಯಾತ್ರೆಗಳನ್ನು ವರ್ಣಿಸುವುದಕ್ಕಾಗಿಯೂ ಕೆತ್ತಲ್ಪಟ್ಟಿರುತ್ತವೆ. ಅಲ್ಲದೆ ವೀರಗಲ್ಲು, ಮಾಸ್ತಿಕಲ್ಲು, ಗರುಡಗಲ್ಲು, ಜೈನರು ಸಲ್ಲೇಖನದಿಂದ ಮಡಿದುದನ್ನು ಸೂಚಿಸುವ ನಿಸಿದಿಗಲ್ಲು ಮುಂತಾದ ರೀತಿಯ ಶಾಸನಗಳೂ ಕರ್ನಾಟಕದಲ್ಲಿ ಹೇರಳವಾಗಿವೆ. ಬಾದಾಮಿ ಚಾಳುಕ್ಯರ ಮೂಲಪುರುಷ ೧ನೆಯ ಪುಲಕೇಶಿಯ ೫೪೩ರ ಶಾಸನದ ಉದ್ದೇಶ ಆ ರಾಜ ವಾತಾಪಿಯಲ್ಲಿ ದುರ್ಗಮವಾದ ಕೋಟೆಯನ್ನು ಕಟ್ಟಿಸಿದನೆಂದು ತಿಳಿಸುವುದು. ಕದಂಬ ಶಾಂತಿವರ್ಮನ ತಾಳಗುಂದ ಶಾಸನದ ಉದ್ದೇಶ ಅವನ ತಂದೆ ಕಾಕುತ್ಸ್ಥವರ್ಮ, ಸ್ಥಾನಕುಂದೂರ ಅಂದರೆ ತಾಳಗುಂದದಲ್ಲಿ ಒಂದು ಕೆರೆಯನ್ನು ಕಟ್ಟಿಸಿದ ವಿಷಯವನ್ನು ತಿಳಿಸುವುದಾಗಿದೆ.
ಒಂಬತ್ತನೆಯ ಶತಮಾನದಲ್ಲಿ ಬರೆದ, ಅತ್ಯಂತ ಪ್ರಾಚೀನ ಕನ್ನಡ ಗ್ರಂಥವಾದ ನೃಪತುಂಗ ಕೃತ ಕವಿರಾಜಮಾರ್ಗಕ್ಕೂ ಮೊದಲಿನ ಕನ್ನಡ ಭಾಷೆಯ ಸ್ವರೂಪವನ್ನು ತಿಳಿದುಕೊಳ್ಳುವುದಕ್ಕೆ ಶಾಸನಗಳೇ ಆಧಾರ. ೫ನೆಯ ಶತಮಾನದಿಂದ ೯ನೆಯ ಶತಮಾನದವರೆಗೆ ದೊರೆತ ಅನೇಕ ಕನ್ನಡ ಶಾಸನಗಳಿಂದ ಆ ಭಾಷೆಯ ಬೆಳೆವಣಿಗೆಯನ್ನು ತಿಳಿದುಕೊಳ್ಳಬಹುದು. ೯ನೆಯ ಶತಮಾನದ ಅನಂತರವೂ ಕನ್ನಡ ಶಾಸನಗಳು ಸಹಸ್ರಾರು ಸಂಖ್ಯೆಯಲ್ಲಿ ದೊರೆಯುವುದರಿಂದ ಮತ್ತು ಅವುಗಳಲ್ಲಿ ವಿಶೇಷವಾಗಿ ದತ್ತಿಗಳನ್ನು ವಿವರಿಸುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ತಿಳಿಯುವ ಭಾಷೆಯನ್ನು ಬಳಸಿರುವುದರಿಂದ ಕನ್ನಡ ಭಾಷೆಯ ಚರಿತ್ರೆಯನ್ನು ತಿಳಿಯಲು ಇವು ಮಹತ್ತ್ವದ ಸಾಧನಗಳಾಗಿವೆ.
ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಕರ್ಣಾಟಕದ ಶಾಸನಗಳು ವಿಪುಲ ಸಾಮಗ್ರಿಗಳನ್ನೊದಗಿಸುತ್ತವೆ. ಅನೇಕ ಕವಿಗಳು ಈ ಶಾಸನಗಳಿಂದಲೇ ನಮಗೆ ಪರಿಚಿತರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಎದುರಿಗಿನ ಕಂಬದಲ್ಲಿರುವ ಕದಂಬ ಶಾಂತಿವರ್ಮನ ಕಾಲದ ಸಂಸ್ಕೃತ ಶಾಸನ ಮಾತ್ರಾ-ಸಮಕವೆಂಬ ಅಪೂರ್ವ ಛಂದಸ್ಸಿನಲ್ಲಿ ಬರೆಯಲ್ಪಟ್ಟಿದೆ. ಇದನ್ನು ಕುಬ್ಜನೆಂಬ ಕವಿ ರಚಿಸಿದ್ದು ಶಾಸನವನ್ನು ಅವನೇ ಕಾವ್ಯವೆಂದು ಕರೆದಿದ್ದಾನೆ. ಕರ್ಣಾಟಕದ ಇನ್ನೊಬ್ಬ ಶಾಸನಕವಿ ರವಿಕೀರ್ತಿ ಬಿಜಾಪುರ ಜಿಲ್ಲೆಯ ಐಹೊಳೆಯ ಮೇಗುಟಿ ದೇವಾಸ್ಥಾನದ ಗೋಡೆಯಲ್ಲಿರುವ ಶಾಸನದಲ್ಲಿ (೬೩೪) ಬಾದಾಮಿ ಚಳುಕ್ಯ ೨ನೆಯ ಪುಲಕೇಶಿಯ ಪ್ರಶಸ್ತಿಯನ್ನು ಹಾಡಿದ್ದಾನೆ. ಈ ಕವಿ ತನ್ನನ್ನು ಕಾಳಿದಾಸ ಮತ್ತು ಭಾರವಿಗಳಿಗೆ ಹೋಲಿಸಿಕೊಂಡಿದ್ದಾನೆ. ಪುಲಕೇಶಿಯ ಚಿಕ್ಕಪ್ಪ ಮಂಗಲೀಶನ, ೬೦೨ರ, ರವಿಕೀರ್ತಿ ರಚಿಸಿರಬಹುದೆಂದು ಊಹಿಸಲಾಗಿರುವ, ಮಹಾಕೂಟದ ಸ್ತಂಭ ಶಾಸನದಲ್ಲಿ ಚಾಳುಕ್ಯ ವಂಶವನ್ನು ವರ್ಣಿಸುವಾಗ ಬರುವ, ಯಥಾವಿಧಿ ಹುತಾಗ್ನೀನಾಂಯಥಾ ಕಾಮಾರ್ಚಿತಾರ್ಥಿನಾಂ ಎಂಬ ಮಾತುಗಳು ರಘುವಂಶದಿಂದ ಉದ್ಧೃತವಾಗಿವೆ. ಐಹೊಳೆ ಮತ್ತು ಮಹಾಕೂಟದ ಶಾಸನಗಳು ಕಾಳಿದಾಸನ ಕಾಲನಿರ್ಣಯವಿಷಯದಲ್ಲಿ ಮಹತ್ತ್ವದ್ದಾಗಿವೆ. ಕನ್ನಡದ ಕೆಲವು ಶಾಸನಗಳು ಪುಟ್ಟ ಕಾವ್ಯಗಳಂತಿವೆ. ಧಾರವಾಡ ಜಿಲ್ಲೆಯ ಕಳಸದಲ್ಲಿರುವ ರಾಷ್ಟ್ರಕೂಟ ಗೋವಿಂದನ ೯೩೦ರ ಶಾಸನ, ಅದೇ ಜಿಲ್ಲೆಯ ಲಕ್ಕುಂಡಿಯಲ್ಲಿರುವ ಕಲ್ಯಾಣ ಚಾಳುಕ್ಯರ ಇ¾Âವಬೆಡಂಗ ಸತ್ಯಾಶ್ರಯನ ಕಾಲದ ೧೦೦೭ರ ಅತ್ತಿಮಬ್ಬೆಯ ಶಾಸನ, ಬೆಳಗಾಂವಿ ಜಿಲ್ಲೆಯ ಶಿರಸಂಗಿಯ ೧೧೮೬ರ ಶಾಸನ, ಶ್ರವಣಬೆಳಗೊಳದ ದೊಡ್ಡಬೆಟ್ಟದ ಮೇಲಿರುವ ಬೊಪ್ಪಣಪಂಡಿತನ ಗೊಮ್ಮಟ ಸ್ತುತಿಯ ಶಾಸನಗಳನ್ನು ಈ ವಿಷಯದಲ್ಲಿ ಉದಾಹರಿಸಬಹುದು. ಕಳಸದ ಶಾಸನವನ್ನು ರಚಿಸಿರುವ ಕವಿರಾಜ, ಮಹಾಸ್ರಗ್ಧರೆ, ಉತ್ಪಲಮಾಲೆ, ಚಂಪಕ ಮಾಲೆ ಮತ್ತು ಮತ್ತೇಭವಿಕ್ರೀಡಿತ ವೃತ್ತಗಳಲ್ಲಿ ಸೊಗಸಾದ ಪದ್ಯಗಳನ್ನು ಬರೆದಿದ್ದಾನೆ. ದಾನಚಿಂತಾಮಣಿ ಅತ್ತಿಮಬ್ಬೆಯ ಪ್ರಶಿಸ್ತಿಯಾದ ಲಕ್ಕುಂಡಿಯ ಶಾಸನವನ್ನು ರನ್ನಕವಿಯೇ ರಚಿಸಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಬಾದಾಮಿಯ ಕಪ್ಪೆ ಅರಭಟ್ಟನ ೭ನೆಯ ಶತಮಾನದ ಶಾಸನ, ದಕ್ಷಿಣ ಕನ್ನಡಜಿಲ್ಲೆಯ ತಳಂಗೆರೆಯ ೧೦-೧೧ನೆಯ ಶತಮಾನದ ಜಯಸಿಂಹನ ಶಾಸನ, ಬಿಜಾಪುರ ಜಿಲ್ಲೆಯ ಚಡಚಣದ ೧೧ನೆಯ ಶತಮಾನದ ಕಳಚುರ್ಯ ತನ್ನಮರಸನ ಶಾಸನ ಮುಂತಾದವು ಕನ್ನಡ ಛಂದಸ್ಸಿನ ಅಭ್ಯಾಸದ ದೃಷ್ಟಿಯಿಂದ ಅಮೂಲ್ಯವಾಗಿವೆ. ಅಲ್ಲದೆ ಬಳ್ಳಾರಿ ಜಿಲ್ಲೆಯ ಕೋಗಳಿಯಲ್ಲಿ ದೊರೆತ ೧೧ನೆಯ ಶತಮಾನದ ಶಾಸನವೊಂದರಲ್ಲಿ ಬರೆದ ಪದ್ಯವನ್ನು ತೋಮರ ರಗಳೆಯೆಂದು ಕರೆಯಲಾಗಿದೆ. ಇಲ್ಲಿರುವ ತೋಮರ ರಗಳೆಗೂ ಸುಪ್ರಸಿದ್ಧ ಲಲಿತ ರಗಳೆಗೂ ವ್ಯತ್ಯಾಸವಿಲ್ಲ.
ಕರ್ನಾಟಕದ ಶಾಸನಗಳಲ್ಲಿ ತೇದಿಯ ವಿವರಗಳನ್ನು ವಿವಿಧ ರೀತಿಯಾಗಿ ಕೊಡಲಾಗಿದೆ. ಇಲ್ಲಿ ದೊರೆತ ಅಶೋಕನ ಶಾಸನಗಳಲ್ಲಿ ಯಾವ ತೇದಿಯ ನಿರ್ದೇಶನವೂ ಇಲ್ಲ. ಬನವಾಸಿಯ ವಿಣ್ಹುಕಡ ಚುಟುಕುಲಾನಂದ ಸಾತಕಣ್ಣಿಯ ಶಾಸನದಲ್ಲಿ ರಾಜನ ಆಳ್ವಿಕೆಯ ಹನ್ನೆರಡನೆಯ ವರ್ಷ ಹಾಗೂ ಹೇಮಂತಋತುವಿನ ಏಳನೆಯ ಪಕ್ಷದ ಒಂದನೆಯ ದಿವಸ ಎಂದು ತೇದಿಯನ್ನು ಉಲ್ಲೇಖಿಸಿದೆ. ಇದರಿಂದ ಒಂದು ವರ್ಷವನ್ನು ಹೇಮಂತ, ಶಿಶಿರ, ಗ್ರೀಷ್ಮ ಎಂಬ ಮೂರು ಋತುಗಳಾಗಿ ವಿಂಗಡಿಸಿ ಪ್ರತಿಯೊಂದು ಋತುವಿನಲ್ಲಿ ಎಂಟು ಪಕ್ಷಗಳನ್ನು ಗಣಿಸುತ್ತಿದ್ದರೆಂದು ತಿಳಿಯುತ್ತದೆ. ಈ ಪದ್ಧತಿ ಕದಂಬರ ಕಾಲದ ಒಂದೆರಡು ಶಾಸನಗಳಲ್ಲಿ ಕಂಡುಬಂದರೂ ಅಲ್ಲಿ ಸಾಮಾನ್ಯವಾಗಿ ರಾಜನ ಆಳ್ವಿಕೆಯ ವರ್ಷವನ್ನೂ ಚೈತ್ರಾದಿ ಮಾಸಗಳು ಮತ್ತು ಶುಕ್ಲ ಹಾಗೂ ಬಹುಳ ಪಕ್ಷಗಳನ್ನು ನಿರ್ದೇಶಿಸಲಾಗಿದೆ. ೭೮ರಲ್ಲಿ ಕುಷಾಣ ಅರಸು ಕನಿಷ್ಕ ಪ್ರಾರಂಭಿಸಿದನೆಂದು ತಿಳಿಯಲಾದ ಶಕವರ್ಷದ ಉಲ್ಲೇಖ ಕರ್ನಾಟಕ ಶಾಸನಗಳಲ್ಲಿ ಮೊಟ್ಟಮೊದಲು ಬಾದಾಮಿ ಚಳುಕ್ಯರ ಶಾಸನಗಳಲ್ಲಿ ಬರುತ್ತದೆ. ಈ ವಂಶದ ಒಂದನೆಯ ಪುಲಕೇಶಿಯ ಬಾದಾಮಿ ಬಂಡೆಗಳಲ್ಲಿನ ಶಾಸನದಲ್ಲಿ ಶಕವರ್ಷೇಷು ಚತುಶ್ಯತೇಷು ಪಞ್ಚಷಷ್ಟಿಯು ತೇಷು ಎಂದು ತೇದಿಯನ್ನು ಕೊಡಲಾಗಿದೆ. ಶಕ ೪೬೫ ಅಂದರೆ ಕ್ರಿ.ಶ. ೫೪೩ ಎಂದಾಗುತ್ತದೆ. ಈ ಶಾಸನ ಹೀಗೆ ಶಕವರ್ಷದ ನಿಶ್ಚಿತ ಉಲ್ಲೇಖವಿರುವ ಭಾರತ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದದ್ದು. ೨ನೆಯ ಪುಲಕೇಶಿಯ ಐಹೊಳೆ ಪ್ರಶಸ್ತಿ ಶಾಸನದಲ್ಲಿ ಶಕವರ್ಷ ೫೫೬ರ ಜೊತೆಗೆ ಭಾರತ ಯುದ್ಧಾನಂತರ ೩೨೩೫ನೆಯ ವರ್ಷದ ಅಪೂರ್ವವಾದ ಉಲ್ಲೇಖವೂ ಇರುತ್ತದೆ. ಚಾಳುಕ್ಯರ ಉಳಿದ ಶಾಸನಗಳಲ್ಲಿ ಶಕವರ್ಷ, ಅರಸನ ಆಳ್ವಿಕೆಯ ವರ್ಷ, ಚೈತ್ರಾದಿಮಾಸ, ಪಕ್ಷ (ಶುಕ್ಲ ಅಥವಾ ಬಹುಳ) ಮತ್ತು ತಿಥಿಗಳನ್ನು ವಿವರಿಸಲಾಗಿದೆ. ಮಂಗಳೇಶನ ಮಹಾಕೂಟಶಾಸನದಲ್ಲಿ ಮಾತ್ರ ಚಾಂದ್ರಮಾನದ ೬೦ ವರ್ಷಗಳ ಸಂವತ್ಸರಗಳ ಪೈಕಿ ಸಿದ್ಧಾರ್ಥಿ ಸಂವತ್ಸರವನ್ನು ಉಲ್ಲೇಖಿಸಿದೆ, ಅದರಂತೆ ಒಂದನೆಯ ವಿಕ್ರಮಾದಿತ್ಯನ ಶಕ ೫೯೬ರ (೬೭೪) ಗದ್ವಾಲ ತಾಮ್ರಶಾಸನ ಮತ್ತು ವಿನಯಾದಿತ್ಯನ ಶಕ ೬೧೪ರ (೬೯೨) ಸೊರಬ ತಾಮ್ರಶಾಸನ ಮುಂತಾದ ಕೆಲವೇ ಶಾಸನಗಳಲ್ಲಿ ತಿಥಿಯ ಜೊತೆಗೆ ವಾರದ ಉಲ್ಲೇಖವೂ ಇರುತ್ತದೆ. ಮುಂದೆ ರಾಷ್ಟ್ರಕೂಟರ ಶಾಸನಗಳಲ್ಲಿ ಎಲ್ಲ ವಿವರಗಳನ್ನು-ಶಕವರ್ಷ, ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ, ನಕ್ಷತ್ರ, ವ್ಯತೀಪಾತ, ಗ್ರಹಣ ಮುಂತಾದವುಗಳನ್ನು-ಕೊಡಲಾಗಿದೆ. ಈ ವಿವರಗಳು ಕರ್ಣಾಟಕದ ಉಳಿದ ಅರಸುಮನೆತನಗಳ ಶಾಸನಗಳಲ್ಲೂ ಕಂಡುಬರುತ್ತವೆ. ಕಲ್ಯಾಣ ಚಾಳುಕ್ಯ ೬ನೆಯ ವಿಕ್ರಮಾದಿತ್ಯ ಪಟ್ಟವನ್ನೇರಿದ ಅನಂತರ (೧೦೭೬) ಚಾಳುಕ್ಯ ವಿಕ್ರಮ ವರ್ಷವೆಂಬ ಕಾಲಮಾನವನ್ನು ಸ್ಥಾಪಿಸಿದ. ಇದು ಆತನ ಆಳ್ವಿಕೆಯ ೫೦-೫೧ ವರ್ಷ ಮತ್ತು ಮುಂದೆ ಕೆಲವೇ ವರ್ಷಗಳವರೆಗೆ ಪ್ರಚಲಿತವಾಗಿದ್ದಿತು. ಈ ಚಾಳುಕ್ಯರ ಮಾಂಡಲಿಕರಾದ ಗೋವೆಯ ಕದಂಬರ ಶಾಸನಗಳಲ್ಲಿ ಪ್ರ.ಶ.ಪೂ. ೩೧೦೨ರಲ್ಲಿ ಪ್ರಾರಂಭವಾದ ಕಲಿಯುಗ ಸಂವತ್ಸರದ ತೇದಿಗಳನ್ನು ಉಲ್ಲೇಖಿಸಲಾಗಿದೆ. ಶಕವರ್ಷ ಎಂಬ ಶಬ್ದ ಮೊಟ್ಟಮೊದಲು ಬಾದಾಮಿ ಚಳುಕ್ಯರ ಶಾಸನಗಳಲ್ಲಿ ಕಾಣಿಸಿಕೊಂಡರೆ ಶಾಲಿವಾಹನ ಶಕ ಎಂಬ ಪದವನ್ನು ದೇವಗಿರಿಯ ಯಾದವರ ಶಾಸನಗಳಲ್ಲಿ ಮೊದಲಿಗೆ ಬರೆಯಲಾಗಿದೆ. ಅಂತೂ ೭೮ರಲ್ಲಿ ಆರಂಭವಾದ ಶಕ ಅಥವಾ ಶಾಲಿವಾಹನ ಶಕವರ್ಷ ಕರ್ನಾಟಕದ ಶಾಸನಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದುದಾಗಿ ತಿಳಿಯುತ್ತದೆ. ಬೆಳಗಾಂವಿ ಜಿಲ್ಲೆಯ ಗೋಕಾಕದಲ್ಲಿ ದೊರೆತ ರಾಷ್ಟ್ರಕೂಟ ದೆಜ್ಜ ಮಹಾರಾಜನ ೬-೭ನೆಯ ಶತಮಾನದ ತಾಮ್ರಶಾಸನದಲ್ಲಿ ತೇದಿಯನ್ನು ಆಗುಪ್ತಾಯಿಕ ಅರಸರ ೮೪೫ ವರ್ಷಗಳು ಸಂದಾಗ ಎಂದು ಉಲ್ಲೇಖಿಸಿದೆ. ಈ ರೀತಿಯಾಗಿ ತೇದಿಯನ್ನು ಉಲ್ಲೇಖಿಸಿರುವ ಶಾಸನ ಇದೊಂದೇ ಇರುವುದರಿಂದ ಆಗುಪ್ತಾಯಿಕ ಅರಸರು ಯಾರು ಮತ್ತು ಈ ಗಣನೆಯನ್ನು ಯಾವಾಗ ಆರಂಭಿಸಿದರು ಎಂಬುದರ ಬಗ್ಗೆ ಏನೂ ತಿಳಿದಿಲ್ಲ.
ಕರ್ನಾಟಕ ಶಾಸನಗಳ ಒಂದು ವೈಶಿಷ್ಟ್ಯವೆಂದರೆ ಊರು, ಗ್ರಾಮ, ನಾಡು ಮುಂತಾದ ಸ್ಥಳನಾಮಗಳ ಮುಂದೆ ಬರುವ ಸಂಖ್ಯಾವಾಚಕಗಳು. ಉದಾ : ಬನವಾಸಿ-೧೨,೦೦೦ ; ಪಲಸಿಗೆ-೧೨,೦೦೦ ; ಗಂಗವಾಡಿ-೯೫,೦೦೦ ; ನೊಳಂಬವಾಡಿ-೩೨,೦೦೦; ಪಾನುಂಗಲ್ಲ-೫೦೦ ; ಪುರಿಗೆರೆ-೩೦೦ ; ಬೆಳ್ವೊಲ-೩೦೦ ; ಕುಕ್ಕನೂರು-೩೦-ಇತ್ಯಾದಿ. ಈ ಸಂಖ್ಯೆಗಳ ಉದ್ದೇಶದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಈ ಸಂಖ್ಯೆಗಳು ರಾಷ್ಟ್ರಬೊಕ್ಕಸಕ್ಕೆ ಆಯಾ ಭಾಗಗಳಿಂದ ಬರುವ ಆದಾಯದ ಹಣದ ಮೊತ್ತವನ್ನು ಸೂಚಿಸುತ್ತವೆಂದು ಹೇಳಿದರೆ ಇನ್ನು ಕೆಲವರು ಇವು ಜನಸಂಖ್ಯೆಯನ್ನು ಸೂಚಿಸುತ್ತವೆಂದು ಭಾವಿಸಿದ್ದಾರೆ. ಈ ಅಭಿಪ್ರಾಯಗಳು ಸಮಂಜಸವಾಗಿ ತೋರುವುದಿಲ್ಲ. ಕಡಿಮೆ ಸಂಖ್ಯೆಗಳುಳ್ಳ ಸ್ಥಳ ನಾಮಗಳಲ್ಲಿ-ಪುರಿಗೆರೆ-೩೦೦ ಮತ್ತು ಬೆಳ್ವೊಲ ೩೦೦-ಆ ಸಂಖ್ಯೆಗಳು ಅವುಗಳ ಆದಾಯ ಅಥವಾ ಜನಸಂಖ್ಯೆಗಳನ್ನು ಸೂಚಿಸುತ್ತವೆಯೆಂದು ತಿಳಿಯುವುದು ಅಸಾಧ್ಯ. ಈ ಸಂಖ್ಯೆಗಳು ಆಯಾ ಭಾಗಗಳಲ್ಲಿ ಸಮಾವೇಶಗೊಂಡಿದ್ದ ಗ್ರಾಮಗಳನ್ನು ಸೂಚಿಸುತ್ತವೆಂಬ ಅಭಿಪ್ರಾಯವನ್ನು ಬಹುಜನ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಕಡಿಮೆ ಸಂಖ್ಯೆಯುಳ್ಳ ಭಾಗಗಳಲ್ಲಿ ನಿಜವಾಗಿ ಸಂಖ್ಯೆಗಳು ಸೂಚಿಸುವಷ್ಟು ಗ್ರಾಮಗಳು ಇರುತ್ತವೆಯೆಂದೂ ೧೨,೦೦೦, ೩೨,೦೦೦ ಮತ್ತು ೯೬,೦೦೦ ಮುಂತಾದ ಭಾಗಗಳಲ್ಲಿ ಸಂಖ್ಯೆಯನ್ನು ಸಾಂಕೇತಿಕವಾಗಿ ಅಥವಾ ಅತಿಶಯೋಕ್ತಿಯಿಂದ ಹೇಳಿದೆಯೆಂದು ತಿಳಿಯುವುದು. ಮೇಲಿನ ವಿವೇಚನೆಯಿಂದ ಕರ್ನಾಟಕದ ಶಾಸನಗಳು ಕರ್ನಾಟಕದ ಮೂಲಕ ಭಾರತ ದೇಶದ ಇತಿಹಾಸ-ಸಂಸ್ಕೃತಿಗಳ ಶಾಸ್ತ್ರೀಯ ಅಧ್ಯಯನಕ್ಕೆ ಅಮೂಲ್ಯವಾದ ಸಾಧನಗಳೆಂಬುದು ಸ್ಪಷ್ಟವಾಗುತ್ತದೆ. ಈ ಶಾಸನಗಳ ಬಗ್ಗೆ ಇನ್ನಷ್ಟು ವಿವರಗಳಿಗೆ ಕನ್ನಡ ಶಾಸನಗಳು ಎಂಬ ಲೇಖನವನ್ನೂ ಪ್ರಮುಖ ಶಾಸನಗಳ ಬಗ್ಗೆ ಕೊಟ್ಟಿರುವ ಪ್ರತ್ಯೇಕ ಲೇಖನಗಳನ್ನೂ ನೋಡಿ (ನೋಡಿ- ಕನ್ನಡ ಶಾಸನಗಳು). (ಜಿ.ಎಸ್.ಜಿ.)