ಕಳ್ಯಾ

 ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿಗೆ ಸೇರಿದ ಒಂದು ಗ್ರಾಮ. ಶಾಸನ ಹಾಗೂ ಕಾವ್ಯಗಳಲ್ಲಿ ಇದನ್ನು  ಕಳ್ಳೆಹ ಎಂದು ಕರೆಯಲಾಗಿದೆ. ಇದು ಜೈನ ಹಾಗೂ ವೀರಶೈವರ ಪವಿತ್ರ ಸ್ಥಳ. ಪಾಳುಬಿದ್ದ ಬಸದಿಯ ಅವಶೇಷಗಳನ್ನು ಇಲ್ಲಿ ಇಂದಿಗೂ ಕಾಣಬಹುದು. ಇಲ್ಲಿ ಅನೇಕ ಶಿಲಾಶಾಸನಗಳಿವೆ. ಗ್ರಾಮದ ಪಶ್ಚಿಮಕ್ಕಿರುವ ಸಣ್ಣ ಬೆಟ್ಟದ ಮೇಲೆ ವೀರಶೈವರ ಒಂದು ಮಠವೂ ಕಲ್ಲೇಶ್ವರ ದೇವಸ್ಥಾನವೂ ಇದೆ. ಈ ಮಠಕ್ಕೆ ವಿಶಾಲವಾದ ಪ್ರಾಂಗಣವಿದ್ದು ಮಠದ ಹೊರಗೆ ಬಸವನ ಪ್ರತಿಮೆಯಿರುವ ಶರಣರ ಮೂರು ಗದ್ದಿಗೆಗಳಿವೆ. ಇವುಗಳಲ್ಲಿ ಒಂದು ಆಂಧ್ರ, ಸಂಸ್ಕøತ ಮತ್ತು ಕನ್ನಡ ಸಾಹಿತ್ಯಗಳಲ್ಲಿ ಉದ್ದಾಮ ಕವಿಯೆನಿಸಿದ ಪಾಲ್ಕುರಿಕೆ ಸೋಮನಾಥನದು. ವೀರಶೈವರು ವರ್ಷಕ್ಕೊಮ್ಮೆ ಇಲ್ಲಿ ಸೋಮನಾಥನ ಪರ್ವವನ್ನು ಆಚರಿಸುತ್ತಾರೆ. 13ನೆಯ ಶತಮಾನದ ಕಡೆಯಲ್ಲಿ ಸರ್ವಶೀಲ ಚನ್ನಮ್ಮ ಎಂಬ ಶರಣೆ ಇಲ್ಲಿ ಆಗಿಹೋಗಿದ್ದಾಳೆಂದು ಪಾಲ್ಕುರಿಕೆ ಸೋಮೇಶ್ವರ ಪುರಾಣದಿಂದಲೂ 12ನೆಯ ಶತಮಾನದಲ್ಲಿದ್ದ ಜ್ಞಾನಿ ಚನ್ನಬಸವಣ್ಣ ಇಲ್ಲಿ ಸಾಯುಜ್ಯ ಹೊಂದಿದನೆಂದು ಚೆನ್ನಬಸವ ಪುರಾಣದಿಂದಲೂ ತಿಳಿದುಬರುತ್ತದೆ.          

  (ಬಿ.ಎಸ್.)