ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಮನ್ವೆಲ್ತಿನ ಆರ್ಥಿಕತೆ

ಕಾಮನ್‍ವೆಲ್ತಿನ ಆರ್ಥಿಕತೆ

ಟೆಂಪ್ಲೇಟು:WP:DISPUTED Wikipedia:Accuracy dispute#Disputed statement ಇದು ತಪ್ಪು ಮಾಹಿತಿ ಇರುವ ಪುಟ ಭಾರತದ ತಲಾವಾರು ಆದಾಯ $೧೯೦೦ ಆಗಿದೆ. ಇದರಲ್ಲಿ $೧೦೦ ಎಂದಿದೆ.

ಈ ರಾಷ್ಟ್ರಸಮುದಾಯ ವಿಶ್ವದ ಕಾಲು ಭಾಗದಷ್ಟು ವಿಸ್ತೀರ್ಣ ಹಾಗೂ ಜನಸಂಖ್ಯೆಯುಳ್ಳದ್ದಾದರೂ ಆರ್ಥಿಕ ದೃಷ್ಟಿಯಿಂದ ವಿಶ್ವದಲ್ಲಿ ಈ ಕ್ಷೇತ್ರದ ಪಾತ್ರ ಅಷ್ಟು ಗಮನಾರ್ಹವಾದ್ದಲ್ಲ. ಬ್ರಿಟನ್, ಕೆನಡ, ಆಸ್ಟ್ರೇಲಿಯ ಮತ್ತು ನ್ಯೂಜಿûೀಲೆಂಡ್‍ಗಳನ್ನು ಬಿಟ್ಟರೆ ಏಷ್ಯ ಮತ್ತು ಆಫ್ರಿಕದಲ್ಲಿರುವ ಕಾಮನ್‍ವೆಲ್ತ್ ಸದಸ್ಯ ರಾಷ್ಟ್ರಗಳೆಲ್ಲವೂ ಆರ್ಥಿಕ ದೃಷ್ಟಿಯಿಂದ ಹಿಂದುಳಿದಂಥವು. ಈ ಅಂಶ ಅವುಗಳ ತಲಾದಾಯದ ಮಟ್ಟ ಹಾಗೂ ಉತ್ಪಾದನೆಯ ಮಾದರಿಯಿಂದ ವಿದಿತವಾಗುತ್ತದೆ. ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ 500 ಡಾಲರುಗಳಿಗಿಂತ ಕಡಿಮೆ ತಲಾದಾಯವಿರುವ ರಾಷ್ಟ್ರಗಳೆಲ್ಲವನ್ನೂ ಆರ್ಥಿಕ ದೃಷ್ಟಿಯಿಂದ ಹಿಂದುಳಿದ ರಾಷ್ಟ್ರಗಳೆಂದು ಪರಿಗಣಿಸಲಾಗುವುದು. ಆದರೆ ಏಷ್ಯ ಆಫ್ರಿಕಗಳಲ್ಲಿರುವ ಕಾಮನ್‍ವೆಲ್ತ್ ರಾಷ್ಟ್ರಗಳ ತಲಾದಾಯ 100 ಡಾಲರುಗಳಿಗಿಂತಲೂ ಕಡಿಮೆ. ಈ ರಾಷ್ಟ್ರಗಳಲ್ಲಿ ಕೈಗಾರಿಕೆಗಿಂತ ಕೃಷಿಯೇ ಮುಖ್ಯ. ಇವುಗಳ ರಾಷ್ಟ್ರೀಯ ವರಮಾನದ ಸೇ. 50 ರಷ್ಟು ಕೃಷಿಯಿಂದಲೇ ಬರುತ್ತದೆ. ಕೃಷಿಯ ಉತ್ಪಾದನ ಸಾಮಥ್ರ್ಯ ಕೈಗಾರಿಕೆಯದಕ್ಕಿಂತ ಬಹಳ ಕಡಿಮೆ. ಆದ್ದರಿಂದ ಕೃಷಿಪ್ರಧಾನವಾದ ಈ ರಾಷ್ಟ್ರಗಳ ಒಟ್ಟು ಉತ್ಪಾದನ ಸಾಮಥ್ರ್ಯವೂ ಕಡಿಮೆಯೇ.

ಉತ್ಪಾದನೆ : ಈ ರಾಷ್ಟ್ರಸಮುದಾಯದ ಬಹುಪಾಲಿನ ರಾಷ್ಟ್ರಗಳ ಆರ್ಥಿಕತೆಯಲ್ಲಿ ಕೃಷಿ ಉದ್ಯಮ ಪ್ರಮುಖವಾದ ಕಾರಣ. ಕೈಗಾರಿಕೋತ್ಪನ್ನದ ಪ್ರಮಾಣ ಸ್ವಾಭಾವಿಕವಾಗಿಯೇ ಕಡಿಮೆ. ಉದಾಹರಣೆಗೆ, ಇಲ್ಲಿಯ ಒಟ್ಟು ಜನಸಂಖ್ಯೆ ಕಮ್ಯುನಿಸ್ಟ್ ರಾಷ್ಟ್ರಗಳನ್ನುಳಿದ ವಿಶ್ವದ ಮೂರನೆಯ ಒಂದರಷ್ಟಾದರೂ ಇವುಗಳ ಕೈಗಾರಿಕೋತ್ಪನ್ನದ ಪ್ರಮಾಣ ಅದರ ಆರನೆಯ ಒಂದಕ್ಕಿಂತಲೂ ಕಡಿಮೆ. ಈ ಸಮುದಾಯದಲ್ಲಿಯ ಕೈಗಾರಿಕೆಗಳೆಲ್ಲವೂ ಬ್ರಿಟನಿನಲ್ಲಿಯೇ ಹೆಚ್ಚಾಗಿ ಕೇಂದೀಕೃತವಾಗಿವೆ. ಕಾಮನ್‍ವೆಲ್ತಿನ ಅರ್ಧದಷ್ಟು ಕೈಗಾರಿಕೋತ್ಪನ್ನ ಬಿಟನ್ನಿನದೇ. ಇದರ ಜೊತೆಗೆ ಕೆನಡ, ಆಸ್ಟ್ರೇಲಿಯ, ನ್ಯೂಜೀóಲೆಂಡ್ ಮತ್ತು ದಕ್ಷಿಣ ಆಫ್ರಿಕಗಳನ್ನೂ ಸೇರಿಸಿಕೊಂಡರೆ ಇವೆಲ್ಲ ರಾಷ್ಟ್ರಗಳೂ ಸೇರಿ ಕಾಮನ್‍ವೆಲ್ತಿನ ಮುಕ್ಕಾಲು ಭಾಗಕ್ಕೂ ಮೀರಿದ ಕೈಗಾರಿಕೋತ್ಪನ್ನಕ್ಕೆ ಕಾರಣವಾಗುತ್ತವೆ. ಉಳಿದ ರಾಷ್ಟ್ರಗಳ ಪೈಕಿ ಕೈಗಾರಿಕೆಗಳನ್ನುಳ್ಳವುಗಳಲ್ಲಿ ಪ್ರಮುಖವಾಗಿ ಭಾರತವನ್ನು ಪ್ರಸ್ತಾಪಿಸಿಬಹುದು.

ಕೈಗಾರಿಕೋತ್ಪನ್ನದ ಬಗ್ಗೆ ಅಷ್ಟು ಪ್ರಾಮುಖ್ಯ ಪಡೆಯದಿದ್ದರೂ ವಿಶ್ವದಲ್ಲಿ ಖನಿಜೋತ್ಪನ್ನದ ಬಗ್ಗೆ ಕಾಮನ್‍ವೆಲ್ತ್ ರಾಷ್ಟ್ರಗಳು ಒಳ್ಳೆಯ ಸ್ಥಾನ ಪಡೆದಿವೆ, ಕೆನಡ ಮತ್ತು ದಕ್ಷಿಣ ಆಫ್ರಿಕ-ಇವು ಕಮ್ಯುನಿಸ್ಟ್ ರಾಷ್ಟ್ರಗಳನ್ನುಳಿದ ವಿಶ್ವದ ಮುಕ್ಕಾಲು ಭಾಗಕ್ಕೂ ಮೀರಿದಷ್ಟು ಚಿನ್ನವನ್ನೂ ಮಲಯ ಮತ್ತು ನೈಜೀರಿಯಗಳು ಅರ್ಧದಷ್ಟು ತವರನ್ನೂ ಕೆನಡ ಮೂರನೆಯ ಎರಡರಷ್ಟು ನಿಕಲನ್ನೂ ಉತ್ಪಾದಿಸುತ್ತವೆ. ಹಾಗೂ ಈ ಸಮುದಾಯ ವಿಶ್ವದ ಮೂರನೆಯ ಒಂದರಷ್ಟು ಕಲ್ಲಿದ್ದಲು, ತಾಮ್ರ ಮತ್ತು ಸೀಸಗಳನ್ನು ಉತ್ಪಾದಿಸುತ್ತದೆ.

ಈ ರಾಷ್ಟ್ರಸಮುದಾಯದಲ್ಲಿ ಕೃಷಿ ಉದ್ಯಮ ಪ್ರಮುಖವಾದುದರಿಂದ ಕಮ್ಯುನಿಸ್ಟ್ ರಾಷ್ಟ್ರಗಳನ್ನುಳಿದ ವಿಶ್ವದ ಉತ್ಪನ್ನದ ಬಹುಪಾಲು ಕೃಷಿ ಉತ್ಪನ್ನ ಇಲ್ಲಿಂದಲೇ ಬರುತ್ತದೆ. ಆಸ್ಟ್ರೇಲಿಯ, ನ್ಯೂಜೀóಲೆಂಡ್ ಮತ್ತು ದಕ್ಷಿಣ ಆಫ್ರಿಕಗಳು ಅರ್ಧಕ್ಕೂ ಮೀರಿದ ಉಣ್ಣೆಯನ್ನು. ಭಾರತ ಮತ್ತು ಸಿಂಹಳ ಮುಕ್ಕಾಲು ಭಾಗಕ್ಕೂ ಮೀರಿದಷ್ಟು ಚಹವನ್ನು ಘಾನ ಮತ್ತು ನೈಜೀರಿಯ ಅರ್ಧಕ್ಕೂ ಮೀರಿದಷ್ಟು ಕೋಕೋವನ್ನು, ಭಾರತ ಮತ್ತು ಪಾಕಿಸ್ತಾನ ಮುಕ್ಕಾಲು ಭಾಗಕ್ಕೂ ಹೆಚ್ಚು ಸೆಣಬನ್ನು, ಮಲಯ ಮತ್ತು ಸಿಂಹಳ ಅರ್ಧದಷ್ಟು ರಬ್ಬರನ್ನು ಸರಬರಾಜು ಮಾಡುತ್ತವೆ. ಈ ರಾಷ್ಟ್ರಸಮುದಾಯ ಗೋದಿಯ ಬಗ್ಗೆ ವಿಶ್ವದ ಸರಾಸರಿ ಮಟ್ಟವನ್ನು ಮುಟ್ಟದಿದ್ದರೂ ಬತ್ತದ ಬಗ್ಗೆ ವಿಶ್ವದ ಸರಾಸರಿ ಮಟ್ಟವನ್ನು ಮೀರುತ್ತದೆ.

ಅಂತರರಾಷ್ಟ್ರೀಯ ವ್ಯಾಪಾರ : ಕಾಮನ್‍ವೆಲ್ತ್ ರಾಷ್ಟ್ರಸಮುದಾಯದ ಅಂತರರಾಷ್ಟೀಯ ವ್ಯಾಪಾರ ಅವುಗಳಲ್ಲಿಯ ಉತ್ಪಾದನೆಯ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಈ ಸಮುದಾಯದ ವ್ಯಾಪಾರ ವಿಶ್ವದ (ಕಮ್ಯುನಿಸ್ಟ್ ರಾಷ್ಟ್ರಗಳನ್ನು ಬಿಟ್ಟು) ಮೂರನೆಯ ಒಂದರಷ್ಟು. ಆದರೆ ಇದರ ಪೈಕಿ ಬ್ರಿಟನಿನ ಪಾಲೇ ಅಧಿಕವಾದುದು. ಬ್ರಿಟನಿನ ರಫ್ತು, ಕಾರ್ಖಾನೆಯ ವಸ್ತುಗಳು; ಅದು ಆಮದು ಮಾಡಿಕೊಳ್ಳುವುದು ಆಹಾರ ಪದಾರ್ಥ ಮತ್ತು ಕಚ್ಚಾ ಸಾಮಗ್ರಿಗಳನ್ನು, ಉಳಿದ ರಾಷ್ಟ್ರಗಳು ಸಾಮಾನ್ಯವಾಗಿ ಆಹಾರ ಪದಾರ್ಥಗಳನ್ನೂ ಕಚ್ಚಾ ಸಾಮಗ್ರಿಯನ್ನೂ ರಫ್ತುಮಾಡುತ್ತವೆ; ಕಾರ್ಖಾನೆಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತವೆ. ಭಾರತ ಮತ್ತು ಕೆನಡಗಳ ರಫ್ತುಗಳಲ್ಲಿ ಅರ್ಧ ಪಾಲಿನವು ಕಾರ್ಖಾನೆಯ ವಸ್ತುಗಳು; ಪಾಕಿಸ್ತಾನ, ಸಿಂಹಳ ಮತ್ತು ವಲಯಗಳಲ್ಲಿ ಈ ಪ್ರಮಾಣ ಅರ್ಧಕ್ಕೂ ಕಡಿಮೆ. ಆಸ್ಟ್ರೇಲಿಯ ಉಣ್ಣೆ, ಮಾಂಸ ಮತ್ತು ಗೋದಿಯನ್ನೂ ನ್ಯೂಜೀóಲೆಂಡ್ ಉಣ್ಣೆ ಮಾಂಸ ಮತ್ತು ಹೈನಿನ ವಸ್ತುಗಳನ್ನೂ ಘಾನಾ ಮತ್ತು ನೈಜೀರಿಯ ಕೋಕೋವನ್ನೂ ಪೂರ್ವ ಆಫ್ರಿಕ ಕಾಫಿ ಮತ್ತು ಹತ್ತಿಯನ್ನೂ ಭಾರತ ಚಹ, ಸೆಣಬು ಮತ್ತು ಹತ್ತಿಯನ್ನೂ ಪಾಕಿಸ್ತಾನ ಸೆಣಬು ಮತ್ತು ರಬ್ಬರನ್ನೂ ಸಿಂಹಳ ಚಹ ಮತ್ತು ರಬ್ಬರನ್ನೂ ಮಲಯ ತವರವನ್ನೂ ಮುಖ್ಯವಾಗಿ ರಫ್ತು ಮಾಡುತ್ತವೆ. ಬ್ರಿಟನ್, ಘಾನ, ಪಾಕಿಸ್ತಾನ, ಸಿಂಹಳ, ಮಲಯ ಆಹಾರ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತವೆ. ಹಾಗೂ ಬ್ರಿಟನನ್ನು ಬಿಟ್ಟರೆ ಉಳಿದ ಕಾಮನ್‍ವೆಲ್ತ್ ರಾಷ್ರಗಳು ಪೆಟ್ರೋಲಿಯಂ, ಕೈಗಾರಿಕಾ ಯಂತ್ರಗಳು, ಸಾರಿಗೆ ಸಲಕರಣೆಗಳು-ಇವನ್ನು ಮುಖ್ಯವಾಗಿ ಆಮದು ಮಾಡಿಕೊಳ್ಳುವುವು.

ಆರ್ಥಿಕ ಸಹಾಕಾರ: ಕಾಮನ್‍ವೆಲ್ತಿನ ಅನೇಕ ರಾಷ್ಟ್ರಗಳು ಬ್ರಿಟನ್ನಿನ ವಸಾಹತು ಮತ್ತು ಆಶ್ರಿತರಾಷ್ಟ್ರಗಳಾಗಿದ್ದುವು. ಅವು ಸ್ವಾಭಾವಿಕವಾಗಿಯೇ ಬ್ರಿಟನಿನ ನೇತೃತ್ವದಲ್ಲಿ ಒಟ್ಟುಗೂಡಿದುವು. ಈ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದು ರಾಜಕೀಯ ಅಂಶ. ಆದರೆ ಎರಡನೆಯ ಮಹಾಯುದ್ಧಾನಂತರ ಅನೇಕ ರಾಷ್ಟ್ರಗಳಿಗೆ ಸ್ವಾತಂತ್ರ್ಯ ಸಿಕ್ಕಿತು. ಆದರೂ ಇವು ಸಾಮಾನ್ಯವಾಗಿ ಬ್ರಿಟನಿನ ನೇತೃತ್ವದಲ್ಲಿ ಕಾಮನ್‍ವೆಲ್ತ್ ಸಮುದಾಯದಲ್ಲಿ ಉಳಿದುಕೊಂಡಿರುವುದಕ್ಕೆ ಮುಖ್ಯವಾಗಿ ಆರ್ಥಿಕ ಅಂಶ ಕಾರಣವಾಗಿದೆ. ಈ ರಾಷ್ಟ್ರಸಮುದಾಯದಲ್ಲಿ ಪ್ರಾರಂಭದಿಂದಲೂ ಉಳಿದುಕೊಂಡು ಬಂದಿರುವ ಪರಸ್ಪರ ಸಹಕಾರ ಆರ್ಥಿಕ ಸ್ವರೂಪದ್ದು. ಪರಸ್ಪರ ಸಹಕಾರದ ಕ್ಷೇತ್ರಗಳೆಂದರೆ ಸ್ಟರ್ಲಿಂಗ್ ವಲಯ, ಅಂತರರಾಷ್ಟ್ರೀಯ ವ್ಯಾಪಾರ, ಹಣದ ವಿನಿಯೋಜನೆ ಹಾಗೂ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಾರಿಕೆ ಸಂಪರ್ಕ.

ಸ್ಟರ್ಲಿಂಗ್ ವಲಯದಲ್ಲಿ ಸಹಕಾರ: ಸದಸ್ಯ ರಾಷ್ಟ್ರಗಳು ಬ್ರಿಟನಿನೊಡನೆ ಅಂತರರಾಷ್ಟ್ರೀಯ ಹಣಕಾಸಿನ ವ್ಯವಸ್ಥೆಯ ಬಗ್ಗೆ ಸಹಕರಿಸಿದ ಪರಿಣಾಮವಾಗಿ ಸ್ಟರ್ಲಿಂಗ್ ವಲಯ ಅಸ್ತಿತ್ವಕ್ಕೆ ಬಂತು. ಪ್ರಪಂಚದ ಇತರ ವ್ಯಾಪಾರ ಹಣಕಾಸು ವಲಯಗಳಂತೆ ಸ್ಟರ್ಲಿಂಗ್ ವಲಯ ಯಾವುದೇ ಬಗೆಯ ಒಪ್ಪಂದದ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದುದಲ್ಲ. ಬ್ರಿಟನ್ ಹಾಗೂ ಇತರ ಕಾಮನ್‍ವೆಲ್ತ್ ರಾಷ್ಟ್ರಗಳು ಬಹಳ ವರ್ಷಗಳ ಕಾಲ ಸತತವಾಗಿ ಅಂತರರಾಷ್ಟ್ರೀಯ ಹಣಕಾಸಿನ ಬಗ್ಗೆ ಪರಸ್ಪರ ಸಹಕರಿಸಿದ ಫಲವೇ ಸ್ಟರ್ಲಿಂಗ್ ವಲಯ. ಮೊದಲಿಂದಲೂ ಕಾಮನ್‍ವೆಲ್ತ್ ರಾಷ್ಟ್ರಗಳ ರಫ್ತುಗಳಿಗೆ ಬ್ರಿಟನ್ ಒಳ್ಳೆಯ ಮಾರುಕಟ್ಟೆ ಒದಗಿಸಿತ್ತು. ಅವುಗಳ ವಹಿವಾಟುಗಳಿಗೂ ಅಭಿವೃದ್ಧಿಗೂ ಹಣ ಒದಗಿಸುತ್ತಿದ್ದುದು ಲಂಡನಿನ ಹಣದ ಮತ್ತು ಬಂಡವಾಳದ ಮಾರುಕಟ್ಟೆ. ಜೊತೆಗೆ ಕಾಮನ್‍ವೆಲ್ತ್ ರಾಷ್ಟ್ರಗಳ ಅಂತರರಾಷ್ಟ್ರಿಯ ಸಂದಾಯಗಳನ್ನು ಇತ್ಯರ್ಥಗೊಳಿಸುವುದರಲ್ಲಿ ಪೌಂಡು ದಕ್ಷ ಮಧ್ಯವರ್ತಿಯಾಗಿ ಕಾರ್ಯ ನಡೆಸುತ್ತಿತ್ತು. ಈ ಕಾರಣಗಳಿಂದ ಕಾಮನ್ ವೆಲ್ತ್ ರಾಷ್ಟ್ರಗಳೆಲ್ಲವೂ ತಮ್ಮ ವಿದೇಶಿ ವಿನಿಮಯ ನಿಧಿಯನ್ನು ಲಂಡನಿನಲ್ಲಿಯೇ ಪೌಂಡಿನ ರೂಪದಲ್ಲಿ ಶೇಖರಿಸಿಡುತ್ತ ಬಂದುವು. ಆ ದೇಶಗಳ ನಾಣ್ಯಗಳ ವಿನಿಮಯ ದರಗಳನ್ನು ಪೌಂಡ್ ನಾಣ್ಯದ ಲೆಕ್ಕದಲ್ಲಿ ನಿಷ್ಕರ್ಷಿಸಿಕೊಂಡಿದ್ದುವು. ಆ ನಾಣ್ಯಗಳು ನೇರವಾಗಿ ಚಿನ್ನಕ್ಕೆ ಪರಿವರ್ತನೆಯಾಗುತ್ತಿರಲಿಲ್ಲ. ಅವುಗಳ ಪರಿವರ್ತನೆಯಾಗುತ್ತಿದ್ದದ್ದು ಪೌಂಡಿಗೆ. ಪೌಂಡು ಚಿನ್ನಕ್ಕೆ ಪರಿವರ್ತನೆಗೆ ಹೊಂದುತ್ತಿದ್ದುದರಿಂದ ಪರೋಕ್ಷವಾಗಿ ಈ ನಾಣ್ಯಗಳೂ ಸುವರ್ಣ ಪ್ರಮಿತಿಯನ್ನೇ ಪಾಲಿಸಿದಂತಾಗಿತ್ತು. ಈ ವ್ಯವಸ್ಥೆ 1931 ರ ವರೆಗೆ ಸುಸೂತ್ರವಾಗಿ ನಡೆಯುತ್ತ ಬಂತು. ಆದರೆ ಆ ವರ್ಷ ಬ್ರಿಟಿಷ್ ಪೌಂಡು ಸುವರ್ಣ ಪ್ರಮಿತಿಯನ್ನು ಬಿಟ್ಟಿತು; ಪೌಂಡಿನ ಪರಿವರ್ತನ ವ್ಯವಸ್ಥೆಯನ್ನು ಕಡಿದು ಹಾಕಿತು. ಆಗಲೂ ಈ ದೇಶಗಳು ಸ್ಪರ್ಲಿಂಗಿನೊಂದಿಗೆ ತಮ್ಮ ಹಿಂದಿನ ಸಂಬಂಧವನ್ನೆ ಮುಂದುವರಿಸಿದುವು. ತಮ್ಮ ನಾಣ್ಯಗಳಿಗೆ ನೇರವಾಗಿ ಚಿನ್ನದ ಸಂಬಂಧ ಕಲ್ಪಿಸುವ ಬದಲು ಅವನ್ನು ಸ್ಪರ್ಲಿಂಗಿಗೆ ಗಂಟು ಹಾಕುವುದರಿಂದ ಅವಕ್ಕೆ ಹೆಚ್ಚಿನ ಸ್ಥೈರ್ಯ ಲಭಿಸುವುದೆಂಬುದು ಆ ದೇಶಗಳಿಗೆ ಮನವರಿಕೆಯಾಗಿತ್ತು.

ಸ್ಪರ್ಲಿಂಗ್ ವಲಯಕ್ಕೆ ಕಾಮನ್‍ವೆಲ್ತ್ ದೇಶಗಳಲ್ಲದೆ ಪೌಂಡಿನೊಡನೆ ತಮ್ಮ ನಾಣ್ಯ ಸಂಬಂಧ ಕಲ್ಪಿಸಿಕೊಂಡಿದ್ದು ಹೊರಗಿನ ರಾಷ್ಟ್ರಗಳಾದ ಸ್ಕಾಂಡಿನೇವಿಯ ಹಾಗೂ ಬಾಲ್ಟಿಕ್ ರಾಷ್ಟ್ರಗಳು. ಪೋರ್ಚುಗಲ್, ಆರ್ಜೆಂಟೀನ, ಇರಾಕ್, ಈಜಿಪ್ಟ್, ಥೈಲೆಂಡ್ ಮತ್ತು ಜಪಾನ್‍ಗಳೂ ಸೇರಿಕೊಂಡವು. ಆದರೆ ಎರಡನೆಯ ಮಹಾಯುದ್ಧದ ಕಾಲದಲ್ಲಿ ಬ್ರಿಟನ್ ಬಹು ವ್ಯಾಪಕವಾದ ವಿನಿಮಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದುದರಿಂದ ಸ್ಕಾಂಡಿನೇವಿಯ ರಾಷ್ಟ್ರಗಳು, ಪೋರ್ಚುಗಲ್. ಆರ್ಜೆಂಟೀನ, ಕೆನಡ, ಹಾಂಗ್ ಕಾಂಗ್, ಈಜಿಪ್ಟ್, ಸೂಡಾನ್, ಇರಾಕ್ ಮತ್ತು ಐಸ್‍ಲೆಂಡ್‍ಗಳು ಈ ವಲಯದಿಂದ ನಿರ್ಗಮಿಸಿದುವು. ಈ ವಲಯದ ಮುಖ್ಯ ಉದ್ದೇಶ ಅಂತರರಾಷ್ಟ್ರೀಯ ಸಂದಾಯವನ್ನು ಇತ್ಯರ್ಥಗೊಳಿಸಲು ಅನುಕೂಲವಾಗುವಂತೆ ಸದಸ್ಯ ರಾಷ್ಟ್ರಗಳ ನಾಣ್ಯಗಳ ಮಿತ ಪರಿವರ್ತನೆಯನ್ನು ಪ್ರವರ್ತನಗೊಳಿಸುವುದು; ಈ ಬಗ್ಗೆ ಸದಸ್ಯರು ತಮ್ಮ ಡಾಲರ್ ಸಂಪಾದನೆಯನ್ನು ಒಟ್ಟುಗೂಡಿಸಿ ಡಾಲರ್ ಅಭಾವ ಸಮಸ್ಯೆಯನ್ನು ಪರಿಹರಿಸುವುದಲ್ಲದೆ ತಮ್ಮ ಡಾಲರ್ ಆವಶ್ಯಕತೆಯನ್ನು ಆದಷ್ಟು ಮಟ್ಟಿಗೆ ತೃಪ್ತಿಪಡಿಸಿಕೊಳ್ಳುವುದು. ಈ ಉದ್ದೇಶವನ್ನು ಸಾಧಿಸುವ ದೃಷ್ಟಿಯಿಂದ ವಲಯದ ಸದಸ್ಯ ರಾಷ್ಟ್ರಗಳು ಮುಂದೆ ವಿವರಿಸುವ ವ್ಯವಸ್ಥೆಯನ್ನು ಮಾಡಿಕೊಂಡುವು; ಒಂದನೆಯದಾಗಿ, ಸದಸ್ಯ ರಾಷ್ಟ್ರಗಳು ಪೌಂಡನ್ನು ಅಂತರ ರಾಷ್ಟ್ರೀಯ ವ್ಯಾಪಾರ ಸಂದಾಯಗಳ ಇತ್ಯರ್ಥಕ್ಕಾಗಿ ಉಪಯೋಗಿಸುವುದು. ಎರಡನೆಯದಾಗಿ, ಅಂತರರಾಷ್ಟ್ರೀಯ ವ್ಯಾಪಾರ ನಿಯಂತ್ರಣದ ವ್ಯವಸ್ಥೆಗೆ ಒಪ್ಪಿಕೊಳ್ಳುವುದು. ಈ ವ್ಯವಸ್ಥೆಯ ಪ್ರಕಾರ ವಲಯದ ಒಳಗೆ ಬಂಡವಾಳ ಚಲನೆಯೂ ಸೇರಿ ಎಲ್ಲ ವ್ಯಾಪಾರ ವ್ಯವಹಾರಗಳ ಬಗ್ಗೆ ಬ್ರಿಟನ್ ನಿಯಂತ್ರಣವನ್ನು ವಿಧಿಸಬಹುದಷ್ಟೆ. ವಲಯದ ಹೊರಗಿನ ವ್ಯವಹಾರಗಳ ಮೇಲೆ ಬ್ರಿಟನ್ ಯಾವ ಬಗೆಯ ನಿಯಂತ್ರಣವನ್ನು ಹೇರಿದೆಯೋ ಅದನ್ನು ಎಲ್ಲ ಸದಸ್ಯ ರಾಷ್ಟ್ರಗಳೂ ಅನುಸರಿಸತಕ್ಕದ್ದು. ಹಾಗೂ ತಮ್ಮ ಪೌಂಡ್ ನಿಧಿಯನ್ನು ಲಂಡನಿನಲ್ಲಿ ಶೇಖರಿಸಿಟ್ಟು ಈ ನಿಧಿಗೆ ತಮ್ಮ ಡಾಲರ್ ಆಧಿಕ್ಯವನ್ನು ಕೂಡಿಡುವುದು. ಡಾಲರ್ ವಲಯದ ವ್ಯವಹಾರಗಳ ಮೇಲೆ ಸಾಕಷ್ಟು ನಿಯಂತ್ರಣವನ್ನು ಅನುಸರಿಸುವ ಸದಸ್ಯ ರಾಷ್ಟ್ರಗಳು ಅವಶ್ಯವಾದಾಗ ಈ ನಿಧಿಯಿಂದ ಡಾಲರನ್ನು ಪಡೆದು ತಮ್ಮ ಡಾಲರ್ ಕೊರತೆಯನ್ನು ನೀಗಿಸಿಕೊಳ್ಳತಕ್ಕದ್ದು.

ಹೀಗೆ ಸ್ಟರ್ಲಿಂಗ್, ವಲಯವನ್ನು ಸೃಷ್ಟಿಸಿ ಕಾಮನ್‍ವೆಲ್ತ್ ರಾಷ್ಟ್ರಗಳು ಅಂತರ ರಾಷ್ಟ್ರೀಯ ಹಣಕಾಸಿನ ವ್ಯವಹಾರದ ಬಗ್ಗೆ ಸಹಕರಿಸಿ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರದ ಪ್ರಯತ್ನಗಳನ್ನು ಕೈಗೊಂಡುವು. ಸ್ಟರ್ಲಿಂಗ್ ವಲಯದಿಂದ ಸದಸ್ಯರಾಷ್ಟ್ರಗಳಿಗೆ ದೊರಕಿದ ಅನುಕೂಲಗಳು ಅನೇಕ. ಬ್ರಿಟನ್ ಈ ವಲಯದ ಒಳಗೆ ಬಂಡವಾಳದ ಚಲನೆ ಹಾಗೂ ವ್ಯಾಪಾರದ ಮೇಲೆ ನಿಯಂತ್ರಣವನ್ನು ಹೇರದ ಕಾರಣ ಬ್ರಿಟನಿನೊಡನೆ ಸದಸ್ಯ ರಾಷ್ಟ್ರಗಳ ವ್ಯಾಪಾರ ಅಧಿಕಗೊಂಡಿತು. ಸದಸ್ಯ ರಾಷ್ಟ್ರಗಳು ತಮ್ಮ ಕೈಗಾರಿಕೆಗಳ ವೃದ್ಧಿಗೆ ಆವಶ್ಯಕವಾದ ಬಂಡವಾಳವನ್ನು ಸುಲಭವಾಗಿ ಪಡೆಯುವ ಅನುಕೂಲ ಸಿಕ್ಕಿತು. ವಲಯದೊಳಗಿನ ವ್ಯಾಪಾರ ವ್ಯವಹಾರಗಳನ್ನು ಪೌಂಡಿನ ಮೂಲಕ ಇತ್ಯರ್ಥಗೊಳಿಸುವ ಅನುಕೂಲವಿದ್ದ ಕಾರಣ ಸದಸ್ಯ ರಾಷ್ಟ್ರಗಳ ವ್ಯಾಪಾರ ಸರಾಗವಾಗಿ ನಡೆಯಲು ಸಾಧ್ಯವಾಯಿತು. ಅಲ್ಲದೆ ವಲಯದಲ್ಲಿಯ ವ್ಯವಸ್ಥೆಯ ಮೂಲಕ ಡಾಲರ್ ಕೊರತೆ ಅನುಭವಿಸುವ ರಾಷ್ಟ್ರಕ್ಕೆ ಡಾಲರ್ ಅಧಿಕ್ಯವುಳ್ಳ ರಾಷ್ಟ್ರದ ಸಹಕಾರವಿದ್ದ ಕಾರಣ ಡಾಲರ್ ವಲಯದಿಂದ ಆವಶ್ಯಕ ವಸ್ತುಗಳನ್ನು ಪಡೆಯಲು ಮೊದಲಿದ್ದ ತೊಂದರೆ ಈಗ ಕಡಿಮೆಯಾಯಿತು. ಸದಸ್ಯ ರಾಷ್ಟ್ರಗಳಿಗೆ ಲಂಡನಿನ ಹಣದ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶ ದೊರಕಿ ಅಲ್ಲಿ ಸಾಲ ವೆತ್ತುವ ಅನುಕೂಲವು ಒದಗಿತು. ಆದರೆ 1958ರಿಂದೀಚೆಗೆ ಸ್ಟರ್ಲಿಂಗ್ ವಲಯದ ಅನುಕೂಲಗಳು ಕಡಿಮೆಯಾಗುತ್ತ ಬಂದುವು. ಅಮೆರಿಕ ಸಂಯುಕ್ತ ಸಂಸ್ಥಾನ ಅರ್ಥಿಕ ನೆರವನ್ನು ನೀಡುವುದರ ಮೂಲಕ ಅಧಿಕ ಪ್ರಮಾಣದಲ್ಲಿ ಡಾಲರ್‍ಗಳನ್ನು ಸರಬರಾಯಿ ಮಾಡಲು ಪ್ರಾರಂಭಿಸಿದ ಕಾರಣ ಡಾಲರ್ ಅಭಾವ ತಕ್ಕ ಮಟ್ಟಿಗೆ ಕಡಿಮೆಯಾಯಿತು. ಜಪಾನ್ ಹಾಗೂ ಪಶ್ಚಿಮ ಯೂರೋಪಿನ ರಾಷ್ಟ್ರಗಳು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಹೆಚ್ಚು ಪ್ರಮುಖವಾದುದರಿಂದ ಕಾಮನ್‍ವೆಲ್ತ್ ರಾಷ್ಟ್ರಗಳ ವಸ್ತುಗಳನ್ನು ಈ ದೇಶಗಳಲ್ಲೂ ಮಾರುವ ಅವಕಾಶ ಸಿಕ್ಕಿತು. ಆದಕಾರಣ ಸ್ಟರ್ಲಿಂಗ್ ವಲಯದ ಸದಸ್ಯರ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ವಿಚಾರದಲ್ಲಿ ಬ್ರಿಟನಿನ ಪ್ರಾಮುಖ್ಯ ಕಡಿಮೆಯಾಯಿತು. ಹಾಗೆಯೇ ಬ್ರಿಟನಿನ ದೃಷ್ಟಿಯಿಂದಲೂ ಸ್ಟರ್ಲಿಂಗ್ ವಲಯದ ರಾಷ್ಟ್ರಗಳ ಪ್ರಾಮುಖ್ಯ ಮೊದಲಿನಷ್ಟಿಲ್ಲವಾಯಿತು. ಬ್ರಿಟನಿನ ಹಣದ ವಿನಿಯೋಜನೆಯ ದೃಷ್ಟಿಯಿಂದಲೂ ಅದರ ವಸ್ತುಗಳ ಮಾರಾಟದ ದೃಷ್ಟಿಯಿಂದಲೂ ಈ ರಾಷ್ಟ್ರಗಳು ಮೊದಲಿನಷ್ಟು ಆಕರ್ಷಕವಲ್ಲವಾದುವು. ಬದಲಾದ ಪರಿಸ್ಥಿತಿಯಲ್ಲಿ ಐರೋಪ್ಯ ರಾಷ್ಟ್ರಗಳು ಬ್ರಿಟನಿನ ಬಂಡವಾಳ ವಿನಿಯೋಜನೆಗೆ ಒಳ್ಳೆಯ ಅವಕಾಶಗಳನ್ನೂ ಅದರ ವಸ್ತುಗಳಿಗೆ ಒಳ್ಳೆಯ ಮಾರುಕಟ್ಟೆಯನ್ನೂ ಒದಗಿಸಲು ಪ್ರಾರಂಭಿಸಿದುವು. ಸ್ಟರ್ಲಿಂಗ್ ವಲಯದ ಅನುಕೂಲಗಳು ಪರಿಣಾಮಕಾರಿಯಾಗಿ ಎಲ್ಲ ಸದಸ್ಯರಿಗೂ ದಕ್ಕಬೇಕಾದರೆ ತಮ್ಮ ನಾಣ್ಯಗಳ ವಿನಿಮಯ ದರವನ್ನು ಹೊಂದಿಕೆ ಮಾಡಿರುವ ಪೌಂಡಿನ ವಿನಿಮಯ ದರ ಸ್ಥಿರವಾಗಿರಬೇಕು. ಸದಸ್ಯ ರಾಷ್ಟ್ರಗಳು ತಮ್ಮ ವಿದೇಶಿ ವಿನಿಮಯವನ್ನು ಪೌಂಡಿನ ರೂಪದಲ್ಲಿ ಶೇಖರಿಸಿರುವುದರಿಂದ, ಪೌಂಡಿನ ವಿನಿಮಯ ದರ ಕಡಿಮೆಯಾದರೆ ಅವುಗಳ ನಿಧಿಯ ಮೌಲ್ಯ ಡಾಲರ್ ಹಾಗೂ ಇತರ ನಾಣ್ಯಗಳಿಗೆ ಹೋಲಿಸಿದಾಗ ಕಡಿಮೆಯಾಗುತ್ತದೆ. ಇದರಿಂದ ಸದಸ್ಯ ರಾಷ್ಟ್ರಗಳಿಗೆ ನಷ್ಟ ಸಂಭವಿಸುತ್ತದೆ. ಆದರೆ ಪೌಂಡಿನ ಮೇಲೆ ಅಪಾರ ಒತ್ತಡ ಬೀಳಲು ಪ್ರಾರಂಭಿಸಿದ ಕಾರಣ ಬ್ರಿಟನ್ ತನ್ನ ನಾಣ್ಯವನ್ನು ಯುದ್ಧಾನಂತರ ಎರಡು ಸಾರಿ ಅಪಮೌಲ್ಯಗೊಳಿಸಿತು. ಈ ನಿರ್ಧಾರವನ್ನು ಮೊದಲೇ ಬಹಿರಂಗಪಡಿಸುವಂತಿರಲಿಲ್ಲವಾದ್ದರಿಂದ ಬ್ರಿಟಿಷ್ ಸರ್ಕಾರ ಈ ಬಗ್ಗೆ ಸದಸ್ಯ ರಾಷ್ಟ್ರಗಳೊಡನೆ ಸಮಾಲೋಚನೆ ಮಾಡಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಮೊದಲೇ ತೆಗೆದುಕೊಳ್ಳುವಂತಿರಲಿಲ್ಲ. ಇದರಿಂದ ಸ್ಟರ್ಲಿಂಗ್ ಆಧಾರಿತ ನಾಣ್ಯ ವ್ಯವಸ್ಥೆಗಳಿಗೆ ತೊಂದರೆಯೇ ಆಯಿತು. ಪೌಂಡಿನ ವಿನಿಮಯ ದರ ಯಾವಾಗ ಸ್ಥಿರವಾಗಿರುವ ಸಂಭವ ಕಡಿಮೆಯಾಯಿತೊ ಅಂದಿನಿಂದ ಸ್ಟರ್ಲಿಂಗ್ ವಲಯ ಸಡಿಲಗೊಳ್ಳಲು ಪ್ರಾರಂಭಿಸಿತು.

ಬ್ಯಾಂಕು ವ್ಯವಸ್ಥೆ : ಕಾಮನ್‍ವೆಲ್ತ್ ರಾಷ್ಟ್ರಸಮುದಾಯದ ದೇಶಗಳು ಸ್ಟರ್ಲಿಂಗ್ ವಲಯ ವ್ಯವಸ್ಥೆಯ ಕಾರಣದಿಂದಾಗಿ ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರಗಳ ನಿಯಂತ್ರಣಕ್ಕೆ ಒಳಪಟ್ಟರೂ ಆಂತರಿಕ ಹಣಕಾಸಿನ ಬಗ್ಗೆ ಅವು ಸ್ವತಂತ್ರ ನೀತಿಯನ್ನು ಪಾಲಿಸಿಕೊಂಡು ಬಂದಿವೆ. ಪ್ರತಿರಾಷ್ಟ್ರದ ನಾಣ್ಯವೂ ಆ ರಾಷ್ಟ್ರದ ಕೇಂದ್ರ ಬ್ಯಾಂಕಿನ ಹತೋಟಿಗೆ ಒಳಪಟ್ಟದ್ದು. ಕೇಂದ್ರೀಯ ಬ್ಯಾಂಕುಗಳು ನೋಟು ಹೊರಡಿಸುವ ಬಗ್ಗೆ ಏಕಸ್ವಾಮ್ಯವನ್ನು ನಿಯಂತ್ರಣಗೊಳಿಸುವುವು. ಈಚೆಗೆ ಕೇಂದ್ರೀಯ ಬ್ಯಾಂಕುಗಳು ಕೃಷಿ ಹಾಗೂ ಕೈಗಾರಿಕೋದ್ಯಮಗಳಿಗೆ ಬೇಕಾದ ಹಣವನ್ನೊದಗಿಸುವ ವ್ಯವಸ್ಥೆ ಮಾಡಿ ರಾಷ್ಟ್ರದ ಆರ್ಥಿಕ ಬೆಳೆವಣಿಗೆಯನ್ನು ಪ್ರವರ್ತನಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿವೆ.

ಕಾಮನ್ ವೆಲ್ತ್ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳಲ್ಲೆಲ್ಲ ಇಂಗ್ಲೆಂಡಿನ ಕೇಂದ್ರೀಯ ಬ್ಯಾಂಕಾದ ಬ್ಯಾಂಕ್ ಆಫ್ ಇಂಗ್ಲೆಂಡ್ ಅತಿ ಹಳೆಯದು. ಉಳಿದ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳೆಲ್ಲವೂ 20ನೆಯ ಶತಮಾನದಲ್ಲಿ ಸ್ಥಾಪಿತವಾದುವು. ಕಾಮನ್‍ವೆಲ್ತ್ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳ ಪೈಕಿ ಕೆಲವು-ಉದಾಹರಣೆಗೆ ಬ್ಯಾಂಕ್ ಆಫ್ ಇಂಗ್ಲೆಂಡ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯ, ರಿಸರ್ವ್ ಬ್ಯಾಂಕ್ ಆಫ್ ನ್ಯೂಜೀóಲೆಂಡ್- ಪ್ರಾರಂಭದಲ್ಲಿ ಷೇರುದಾರರ ಬ್ಯಾಂಕುಗಳಾಗಿದ್ದು ಈಚಿಗೆ ರಾಷ್ಟ್ರೀಕರಣಗೊಂಡುವು. ಬ್ಯಾಂಕ್ ಆಫ್ ಕೆನಡ, ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯ, ಸೆಂಟ್ರಲ್ ಬ್ಯಾಂಕ್ ಆಫ್ ಸಿಲೋನ್, ರೊಡೀಷಿಯ, ಘಾನ, ನೈಜೀರಿಯ ಮತ್ತು ಮಲಯಗಳ ಕೇಂದ್ರೀಯ ಬ್ಯಾಂಕುಗಳು ಪ್ರಾರಂಭದಿಂದಲೂ ಸರ್ಕಾರಿ ಸಂಸ್ಥೆಗಳು. ಆದರೆ ರಿಸರ್ವ ಬ್ಯಾಂಕ್ ಆಫ್ ಸೌತ್ ಆಫ್ರಿಕ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಮಿಶ್ರಬ್ಯಾಂಕುಗಳು, ಸರ್ಕಾರ ಜೊತೆಗೆ ಖಾಸಗಿ ಷೇತುದಾರರು ಈ ಕೇಂದ್ರೀಯ ಬ್ಯಾಂಕುಗಳ ಒಡೆತನ ಹೊಂದಿದ್ದಾರೆ.

ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ನೋಟು ಚಲಾವಣೆ ಕಾನೂನುಬದ್ಧವಾಗಿರುವುದರಿಂದ ಇಲ್ಲಿಯ ಕೇಂದ್ರೀಯ ಬ್ಯಾಂಕುಗಳು ನೋಟು ಚಲಾವಣೆಯ ವಿಷಯದಲ್ಲಿ ನೋಟುಗಳ ಹಿನ್ನೆಲೆಯಾಗಿ ನಿಧಿಯನ್ನಿಡುವ ಬಗ್ಗೆ ಕಾನೂನಿನಲ್ಲಿ ಸೂಚಿಸಿದ ಷರತ್ತುಗಳ ಮೇರೆಗೆ ನಡೆಯಬೇಕು. ಹೀಗಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್ ಗರಿಷ್ಠ ವಿಶ್ವಾಸಾಶ್ರಿತ ಪದ್ಧತಿಯನ್ನು ಅನುಸರಿಸುತ್ತದೆ. ಅನೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳು ಅನುಪಾತಾತ್ಮಕ ಮೀಸಲು ಪದ್ಧತಿಯನ್ನು ಅನುಸರಿಸುತ್ತವೆ, ಎರಡನೆಯ ಗುಂಪಿಗೆ ಸೇರಿದದಂಥವಲ್ಲಿ ಕೆಲವು, ಉದಾಹರಣೆಗೆ ಭಾರತದ ರಿಸರ್ವಬ್ಯಾಂಕ್, ಈಚಿಗೆ ಕನಿಷ್ಠ ಮೀಸಲು ಪದ್ಧತಿಯನ್ನು ಅನುಸರಿಸಲು ಪ್ರಾರಂಭಿಸಿವೆ.

ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿಯ ವಾಣಿಜ್ಯ ಬ್ಯಾಂಕುಗಳು ಬಹುಮಟ್ಟಿಗೆ ಖಾಸಗಿ ಬ್ಯಾಂಕುಗಳು. ಆದರೆ ಭಾರತದಲ್ಲಿಯಂತೆ ಇಲ್ಲಿಯೂ ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವ ಪ್ರವೃತ್ತಿ ಕಂಡುಬರುತ್ತದೆ. ಇಲ್ಲಿಯ ವಾಣಿಜ್ಯ ಬ್ಯಾಂಕುಗಳ ಬಗ್ಗೆ ಗಮನಿಸಬೇಕಾದ ಅಂಶವೇನೆಂದರೆ ದೇಶದ ಬ್ಯಾಂಕು ವ್ಯವಹಾರದ ಬಹುಪಾಲನ್ನು ಕೆಲವೇ ಬ್ಯಾಂಕುಗಳು ತಮ್ಮ ಶಾಖೆಗಳ ಮೂಲಕ ಕೈಗೊಳ್ಳುತ್ತವೆ. ಉದಾಹರಣೆಗೆ ಇಂಗ್ಲೆಂಡಿನ ಐದು ಹಿರಿಯ ಬ್ಯಾಂಕುಗಳು ಹಾಗೂ ಭಾರತದ ಸ್ಟೇಟ್ ಬ್ಯಾಂಕು - ಇವನ್ನು ಇಲ್ಲಿ ಉಲ್ಲೇಖಿಸಬಹುದು.

ಕ್ರೇಂದ್ರೀಯ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳ ಚಟುವಟಿಕೆಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಅನೇಕ ಕ್ರಮಗಳನ್ನು ರೂಪಿಸಿಕೊಂಡಿವೆ. ಕೇಂದ್ರೀಯ ಬ್ಯಾಂಕಿನಲ್ಲಿ ವಾಣಿಜ್ಯ ಬ್ಯಾಂಕುಗಳ ನಗದಿ ಸಂಚಿತಿಯ ನಿಗದಿ, ಬ್ಯಾಂಕು ದರದ ಏರಿಳಿಕೆ, ಕೇಂದ್ರೀಯ ಬ್ಯಾಂಕಿನಿಂದ ಸರ್ಕಾರಿ ಪ್ರತಿಭೂತಿಗಳ (ಸೆಕ್ಯೂರಿಟೀಸ್) ಬಹಿರಂಗ ವಹಿವಾಟು ಮುಂತಾದವು ಕೆಲವು ಮುಖ್ಯ ಕ್ರಮಗಳು. ಆದರೆ ಆಫ್ರಿಕ ಮತ್ತು ಏಷ್ಯದ ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ಸರ್ಕಾರಿ ಪ್ರತಿಭೂತಿಗಳ ಮತ್ತು ವ್ಯಾಪಾರ ಹುಂಡಿಗಳ ಮಾರುಕಟ್ಟೆ ಅಭಿವೃದ್ಧಿಗೊಳ್ಳದಿರುವುದರಿಂದ ಅಲ್ಲಿ ಇಂಥ ಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲ. ಆದಕಾರಣ ಈ ರಾಷ್ಟ್ರಗಳಲ್ಲಿ ವಾಣಿಜ್ಯ ಬ್ಯಾಂಕುಗಳ ಚಟುಚಟಿಕೆಗಳನ್ನು ನಿಯಂತ್ರಿಸುವ ಬಗ್ಗೆ ಮೇಲಿನ ಕ್ರಮಗಳಿಗಿಂತ ಕೇಂದ್ರೀಯ ಬ್ಯಾಂಕುಗಳು ಅವುಗಳ ಮೇಲೆ ನೇರ ಕ್ರಮಗಳನ್ನೇ ಅಧಿಕಾಧಿಕವಾಗಿ ಕೈಗೊಳ್ಳುತ್ತಿವೆ. ವಾಣಿಜ್ಯ ಬ್ಯಾಂಕುಗಳು ಏನನ್ನು ಹೇಗೆ ಮಾಡಬೇಕು, ಬಾರದು-ಎಂದು ಮುಂತಾಗಿ ನೇರವಾಗಿ ಆದೇಶ ನೀಡುವುದು, ನೈತಿಕ ಒತ್ತಡ ಹಾಕುವುದು ಮುಂತಾದವನ್ನೂ ಇಲ್ಲಿ ಪ್ರಯೋಗಿಸಲಾಗುತ್ತಿದೆ.

ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಬ್ರಿಟನಿನ ಹಣದ ವಿನಿಯೋಜನೆ; 1940 ರಿಂದೀಚಿಗೆ ಆರ್ಥಿಕ ಅಭಿವೃದ್ಧಿಯನ್ನು ಪ್ರವರ್ತನಗೊಳಿಸುವ ಪ್ರಯತ್ನ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಸಾಗಿದೆ. ಈ ಸಮುದಾಯದ ಮುಂದುವರಿದ ರಾಷ್ಟ್ರಗಳು ಹಿಂದುಳಿದವುಗಳಿಗೆ ಈ ಬಗ್ಗೆ ನೆರವು ನೀಡಲು ಮುಂದೆ ಬಂದಿದೆ. ಕಾಮನ್‍ವೆಲ್ತ್ ಆರ್ಥಿಕ ಸಮ್ಮೇಳನಗಳಲ್ಲಿ ಈ ಅಂಶವನ್ನು ಆಗಿಂದಾಗ್ಗೆ ಒತ್ತಿ ಹೇಳಲಾಗುತ್ತಿದೆ. ಇದರ ಪರಿಣಾಮವಾಗಿ ಬ್ರಿಟನ್ ಮತ್ತು ಇತರ ಮುಂದುವರಿದ ರಾಷ್ಟ್ರಗಳು ಆರ್ಥಿಕ ನೆರವು ನೀಡುವುದಕ್ಕೆ ಮುಂದೆ ಬಂದಿವೆ. ಬ್ರಿಟನ್ 1940 ರಲ್ಲಿ ವಸಾಹತು ಅಭಿವೃದ್ಧಿ ಮತ್ತು ಕ್ಷೇಮಾಭ್ಯುದಯದ ಕಾಯಿದೆಯನ್ನು ಜಾರಿಗೆ ತಂದು ಸರ್ಕಾರದ ಬೊಕ್ಕಸದಿಂದಲೂ ಇತರ ಮೂಲಗಳಿಂದಲೂ ಹಿಂದುಳಿದ ರಾಷ್ಟ್ರಗಳಿಗೆ ಧನಸಹಾಯ ಮಾಡುತ್ತಬಂದಿದೆ. ಹಾಗೂ ಅವುಗಳಿಗೆ ಮಾರ್ಗದರ್ಶನ ಮತ್ತು ತಾಂತ್ರಿಕ ಸಹಾಯ ಕೊಡುತ್ತಿದೆ. ಆಫ್ರಿಕದಲ್ಲಿಯ ತನ್ನ ಆಶ್ರಿತ ರಾಜ್ಯಗಳಲ್ಲಿ ಕೃಷಿ ಹಾಗೂ ಗಣಿ ಉದ್ಯಮಿಗಳು ವೃದ್ಧಿಯಾಗಲೆಂದು ಬ್ರಿಟನ್ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ನೀಡಿದೆ. ಏಷ್ಯದ ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳ ಆರ್ಥಿಕ ಅಬಿವೃದ್ಧಿಯನ್ನು ಪ್ರವರ್ತನಗೊಳಿಸುವ ದೃಷ್ಟಿಯಿಂದ ಕೊಲಂಬೊ ಯೋಜನೆಯಿಂದ ಧನ ಹಾಗೂ ಆರ್ಥಿಕ ನೆರವು ಕೊಡಲಾಗುತ್ತಿದೆ. 1950 ರಲ್ಲಿ ಆಸ್ತಿತ್ವಕ್ಕೆ ಬಂದ ಕೊಲಂಬೊ ಯೋಜನೆಯ ಮೂಲಕ ಅನುಕೂಲಸ್ಥ ಕಾಮನ್ ವೆಲ್ತ್ ರಾಷ್ಟ್ರಗಳಾದ ಬ್ರಿಟನ್, ಕೆನಡ ಆಸ್ಟ್ರೇಲಿಯ ಮತ್ತು ನ್ಯೂಜಿûಲೆಂಡ್ ಪ್ರಾರಂಭದಲ್ಲಿ ಏಷ್ಯದ ಹಿಂದುಳಿದ ಕಾಮನ್ ವೆಲ್ತ್ ರಾಷ್ಟ್ರಗಳಿಗೆ ನೆರವು ನೀಡುತ್ತಿದ್ದು, ಅನಂತರ ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ವಿಶ್ವ ಬ್ಯಾಂಕು ಈ ಯೋಜನೆಗೆ ಸೇರಿಕೊಂಡುವು.

ಹಿಂದುಳಿದ ಕಾಮನ್ ವೆಲ್ತ್, ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೊರಗಿನಿಂದ ಸಹಾಯ ಸಿಕ್ಕರೂ ಅವುಗಳ ಅಭಿವೃದ್ಧಿ ಯೋಜನೆಗಳು ಬಹುಮಟ್ಟಿಗೆ ತಮ್ಮದೇ ಆದ ಸಾಧನಸಂಪತ್ತನ್ನೇ ಅವಲಂಬಿಸಿವೆ. ಹೀಗೆ ಭಾರತ, ಪಾಕಿಸ್ತಾನ, ವಲಯ ಮೊದಲಾದವು ಪಂಚವಾರ್ಷಿಕ ಯೋಜನೆಗಳ ಮೂಲಕ ತಮ್ಮ ಅರ್ಥ ವ್ಯವಸ್ಥೆಗಳನ್ನು ಬಲಪಡಿಸುವ ಪ್ರಯತ್ನದಲ್ಲಿ ತೊಡಗಿವೆ. ಸಿಂಹಳ ತನ್ನ ರಬ್ಬರ್ ಕೈಗಾರಿಕೆಯೊಂದನ್ನೇ ಅವಲಂಬಿಸಿರುವುದನ್ನು ತಪ್ಪಿಸುವ ದೃಷ್ಟಿಯಿಂದ 1955 ರಿಂದ ಹೊಸ ಕೈಗಾರಿಕೆಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದ್ದ, ಒಂದು ಬೃಹದ್ ವಿನಿಯೋಜನ ಕಾರ್ಯಕ್ರಮವನ್ನು ಕೈಗೊಂಡಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಕಾಮನ್‍ವೆಲ್ತ್ ರಾಷ್ಟ್ರಗಳ ಕೈಗಾರಿಕೆಗಳು ವೃದ್ಧಿ ಹೊಂದುವಂತೆ ಬ್ರಿಟನ್ ಈ ರಾಷ್ಟ್ರಗಳಲ್ಲಿ ಹಣವನ್ನು ವಿನಿಯೋಜಿಸಿದ್ದು. 1945-1965 ರಲ್ಲಿ ಕಾಮನ್ ವೆಲ್ತ್ ರಾಷ್ಟ್ರಗಳು ಪಡೆದ ವಿದೇಶಿ ಬಂಡವಾಳದ ಸೇ.60 ರಷ್ಟ್ರು ಬ್ರಿಟನಿಂದಲೇ ಸರಬರಾಯಿಯಾಯಿತೆಂದು ಅಂದಾಜು ಮಾಡಲಾಗಿದೆ. ಈ ಬಂಡವಾಳವನ್ನು ಎರಡು ರೂಪಗಳಲ್ಲಿ ನೀಡಲಾಗಿದೆ. ಒಂದು, ಬ್ರಿಟನಿನಲ್ಲಿಯ ಕಂಪನಿಗಳು ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ನೇರವಾಗಿ ಹಣ ಹೂಡಿ ತಮ್ಮ ಶಾಖೆಗಳನ್ನು ಸ್ಥಾಪಿಸುವುದು. ಎರಡನೆಯದಾಗಿ, ಬ್ರಿಟನಿನ ಸಾರ್ವಜನಿಕರು ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಸಾಲಪತ್ರಗಳನ್ನು ಕೊಳ್ಳುವುದರ ಮೂಲಕ ಬಂಡವಾಳ ಹೂಡುವುದು. ಕಾಮನ್‍ವೆಲ್ತ್ ಸದಸ್ಯರಾಷ್ಟ್ರಗಳಿಗೆ ಲಂಡನಿನ ಬಂಡವಾಳ ಮಾರುಕಟ್ಟೆಗೆ ಸುಲಭ ಪ್ರವೇಶವಿರುವುದರಿಂದ ಅವು ಅಲ್ಲಿ ಬಂಡವಾಳವನ್ನೆತ್ತುವ ಅನುಕೂಲ ಪಡೆದುವು. ಕಾಮನ್‍ವೆಲ್ತ್ ರಾಷ್ಟ್ರಗಳಿಗೆ ಖಾಸಗಿ ಬಂಡವಾಳ ಚಲಿಸುವಂತೆ ಅನುಕೂಲಪಡಿಸುವ ದೃಷ್ಟಿಯಿಂದ ಬ್ರಿಟಿಷ್ ಸರ್ಕಾರ ಮತ್ತು ಖಾಸಗಿ ಬಂಡವಾಳಗಾರರು ಸೇರಿ 1953 ರಲ್ಲಿ ಕಾಮನ್ ವೆಲ್ತ್ ಅಭಿವೃದ್ಧಿ ಹಣಕಾಸು ಕಂಪನಿಯನ್ನು ಸ್ಥಾಪಿಸಿದುವು. ಈ ಕಂಪನಿಯ ಚಟುವಟಿಕೆಯ ಕಾರಣ ಗಮನಾರ್ಹವಾದ ಪ್ರಮಾಣದ ಖಾಸಗಿ ಬಂಡವಾಳ ಕಾಮನ್ ವೆಲ್ತ್ ರಾಷ್ಟ್ರಗಳಿಗೆ ಸಿಗುವಂತಾಯಿತು.

ಸುದ್ದಿ ಸಂಪರ್ಕ ಸಹಕಾರ : ಕಾಮನ್ ವೆಲ್ತ್ ರಾಷ್ಟ್ರಸಮುದಾಯದಲ್ಲಿ ಆರ್ಥಿಕ ಮತ್ತು ರಾಜಕೀಯ ಸಹಕಾರವೇರ್ಪಟಿದ್ದುದರಿಂದ ರಾಷ್ಟ್ರಗಳ ನಡುವೆ ಸಾರಿಗೆ ಮತ್ತು ಸುದ್ದಿಸಂಪರ್ಕಗಳ ಆವಶ್ಯಕತೆ ಹೆಚ್ಚಿತು. ಕಾಮನ್ ವೆಲ್ತ್ ರಾಷ್ಟ್ರಗಳು ಸಾರಿಗೆ ಮತ್ತು ಸುದ್ದಿಸಂಪರ್ಕಗಳನ್ನು ವೃದ್ಧಿಗೊಳಿಸುವ ಬಗ್ಗೆಯೂ ಸಹಕರಿಸಿವೆ.

ಪ್ರಾರಂಭದಲ್ಲಿ ಬ್ರಿಟನಿನ ನೌಕೆಗಳು ಕಾಮನ್ ವೆಲ್ತ್ ರಾಷ್ಟ್ರಗಳ ಅತ್ಯಧಿಕ ಪ್ರಮಾಣದ ಸಾಗಣೆಯನ್ನು ಕೈಗೊಳ್ಳುತ್ತಿದ್ದವು. ಆದರೆ ಎರಡನೆಯ ಮಹಾಯುದ್ಧದ ಅನಂತರ ಇತರ ಕಾಮನ್ ವೆಲ್ತ್ ರಾಷ್ಟ್ರಗಳೂ ದೊಡ್ಡ ಪರಿಮಾಣದಲ್ಲಿ ಈ ಕ್ಷೇತ್ರಕ್ಕೆ ಇಳಿದುವು. ಇವುಗಳ ಪೈಕಿ ಭಾರತ, ಪಾಕಿಸ್ತಾನ, ಘಾನ, ನೈಜೀರಿಯ ಹಾಗೂ ದಕ್ಷಿಣ ಆಫ್ರಿಕಗಳು ಮುಖ್ಯ. ನೌಕಾ ಸಾರಿಗೆಗೆ ಸಂಬಂಧಿಸಿದಂತೆ ಕಾಮನ್ ವೆಲ್ತ್ ರಾಷ್ಟ್ರಗಳ ಸಹಕಾರ ಕಾಮನ್ ವೆಲ್ತ್ ನೌಕಾಮಂಡಳಿಯ ಸ್ಥಾಪನೆಯ ರೂಪ ತಾಳಿತು. ಕಾಮನ್ ವೆಲ್ತ್ ರಾಷ್ಟ್ರಗಳ ಜಲಮಾರ್ಗಗಳಲ್ಲಿ ಓಡಾಡುವ ನೌಕೆಗಳಿಗೆ ಸೌಲಭ್ಯ ಕಲ್ಪನೆ, ಹಡಗುಬಾಡಿಗೆಗೂ ನೌಕೆಗಳಿಗೂ ಸಂಬಂಧಿಸಿದ ದೂರುಗಳ ವಿಚಾರಣೆ- ಇವು ಈ ಮಂಡಳಿಯ ಕಾರ್ಯಗಳಲ್ಲಿ ಮುಖ್ಯವಾದವು. ಕಾಮನ್ ವೆಲ್ತ್ ರಾಷ್ಟ್ರಗಳ ಸಮುದ್ರ ಸಾರಿಗೆಯ ಬಗ್ಗೆ ಸಾಕಷ್ಟು ಅಂಕಿ ಅಂಶಗಳನ್ನು ಇದು ಒದಗಿಸಿಕೊಟ್ಟಿದೆ.

ವಾಯುಮಾರ್ಗ ಸಂಪರ್ಕ ಎರಡನೆಯ ಮಹಾಯುದ್ಧದ ಮೊದಲಿನಿಂದಲೇ ಪ್ರಾರಂಭವಾಯಿತು. ಈ ಸಂಪರ್ಕ ಪ್ರಾರಂಭದಲ್ಲಿ ಅಲ್ಪವಾಗಿತ್ತು. ಈಚೆಗೆ ಕಾಮನ್‍ವೆಲ್ತ್ ರಾಷ್ಟ್ರಗಳನ್ನು ಕೂಡಿಸುವಂಥ ಮೂರು ಪ್ರಧಾನ ವಾಯುಮಾರ್ಗಗಳನ್ನು ಸ್ಥಾಪಿಸಲಾಗಿದೆ. ಒಂದನೆಯದು ಬ್ರಿಟನನ್ನು ಮಧ್ಯ ಏಷ್ಯದ ಮೂಲಕ ಪಾಕಿಸ್ತಾನ, ಭಾರತ, ಸಿಂಹಳ, ಮಲಯ ಮತ್ತು ಆಸ್ಟ್ರೇಲಿಯಗಳಿಗೆ ಕೂಡಿಸುತ್ತದೆ. ಇದು ಬ್ರಿಟನನ್ನು ಪೂರ್ವದ ರಾಷ್ಟ್ರಗಳೊಡನೆ ಕೂಡಿಸುವ ಮಾರ್ಗ. ಎರಡನೆಯದು ಪಶ್ಚಿಮ ರಾಷ್ಟ್ರಗಳನ್ನು ಕೂಡಿಸುವ ಮಾರ್ಗ. ಇದು ಬ್ರಿಟನ್ನಿನಿಂದ ಪೆಸಿಫಿಕ್ ಸಾಗರ ಹಾಗೂ ಕೆನಡದ ಮೂಲಕ ಹಾದು ಆಸ್ಟ್ರೇಲಿಯವನ್ನು ತಲುಪುತ್ತದೆ. ಮೂರನೆಯದು ನೈಲ್ ನದೀ ಕಣಿವೆ ಹಾಗೂ ಪೂರ್ವ ಆಫ್ರಿಕನ್ ರಾಷ್ಟ್ರಗಳ ಮೂಲಕ ದಕ್ಷಿಣ ಆಫ್ರಿಕವನ್ನು ತಲಪುತ್ತದೆ. ಕಾಮನ್‍ವೆಲ್ತ್ ರಾಷ್ಟ್ರಗಳು ವಾಯುಮಾರ್ಗಗಳ ಬಗ್ಗೆಯೂ ಸಹಕರಿಸಿ ಅನಾವಶ್ಯಕ ಪೈಪೋಟಿಯನ್ನು ವರ್ಜಿಸುವ ದೃಷ್ಟಿಯಿಂದ ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ಉದಾಹರಣೆಗೆ ಬ್ರಿಟಿಷ್, ಭಾರತೀಯ ಹಾಗೂ ಆಸ್ಟ್ರೇಲಿಯದ ವಿಮಾನಗಳು ವಿಶ್ವಪ್ರದಕ್ಷಿಣ ಹಾರಿಕೆಗಳ ಬಗ್ಗೆ ವ್ಯಾಪಾರ ಹಂಚಿಕೆ ವ್ಯವಸ್ಥೆ ಮಾಡಿಕೊಂಡಿವೆ.

ರೈಲ್ವೆ ಹಾಗೂ ರಸ್ತೆ ಸಾರಿಗೆಗಳಲ್ಲೂ ಕಾಮನ್‍ವೆಲ್ತ್ ರಾಷ್ಟ್ರಗಳು ಸಹಕರಿಸುತ್ತವೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ರೈಲ್ವೆಸಂಪರ್ಕದ ಬಗ್ಗೆ ಸಹಕಾರ ಏರ್ಪಟ್ಟಿದುದು ಒಂದು ಉದಾಹರಣೆ. ಭಾರತೀಯ ರೈಲ್ವೆಗಳು ಬಾಂಗ್ಲಾದೇಶದೊಂದಿಗೆ ಸಂಪರ್ಕ ಸ್ಥಾಪಿಸಿವೆ. ಧನುಷ್ಕೋಟಿ ಮತ್ತು ತಲೈಮನ್ನಾರ್ ರೈಲ್ವೆ ನಿಲ್ದಾಣಗಳ ಮಧ್ಯೆ ದೋಣಿಗಳನ್ನು ನಡೆಸಿ ಭಾರತ ಸಿಂಹಳದೊಡನೆ ಸಾರಿಗೆ ಸಂಪರ್ಕ ಸ್ಥಾಪಿಸಿದೆ. ಕೀನ್ಯ, ಉಗಾಂಡ ಮತ್ತು ಟಾಂಗನ್ಯೀಕಗಳ ನಡುವೆಯೂ ರೈಲ್ವೆ ಸಂಪರ್ಕ ಏರ್ಪಟ್ಟಿದೆ. ರಸ್ತೆಸಾರಿಗೆಯನ್ನು ಸಾಮಾನ್ಯವಾಗಿ ಆಂತರಿಕ ಆವಶ್ಯಕತೆಗಳನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ಮಾತ್ರ ವೃದ್ಧಿಗೊಳಿಸಿದ್ದರೂ ಕಾಮನ್‍ವೆಲ್ತ್ ರಾಷ್ಟ್ರಗಳ ಮಧ್ಯೆ ರಸ್ತೆಸಾರಿಗೆ ಸಂಪರ್ಕವನ್ನು ಏರ್ಪಡಿಸುವ ಯೋಜನೆಗಳಿವೆ. ಉದಾಹರಣೆಗೆ, ಆಫ್ರಿಕದ ರಾಷ್ಟ್ರಗಳ ನಡುವೆ ಸಂಪರ್ಕವೇರ್ಪಡಿಸುವ ದೃಷ್ಟಿಯಿಂದ ಕೈರೋದಿಂದ ಗುಡ್ ಹೋಪ್ ಭೂಶಿರದ ವರೆಗೆ ಹಾದು ಹೋಗುವ ಪ್ರಧಾನ ಮಾರ್ಗವನ್ನು ರಚಿಸುವ ಯೋಜನೆಯೊಂದನ್ನು ರಚಿಸಲಾಗಿದೆ.

ಸುದ್ಧಿಸಂಪರ್ಕದ ಬಗ್ಗೆಯೂ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಸಹಕಾರವುಂಟು. ಕಾಮನ್‍ವೆಲ್ತ್ ರಾಷ್ಟ್ರಗಳು ದೂರವಾಣಿ ಹಾಗೂ ಆಕಾಶವಾಣಿಗಳ ಮೂಲಕ ಸುದ್ಧಿ ಸಂಪರ್ಕವನ್ನು ಏರ್ಪಡಿಸಿಕೊಂಡಿವೆ. ಕಾಮನ್‍ವೆಲ್ತ್ ರಾಷ್ಟ್ರಗಳನ್ನು ಕೂಡಿಸುವಂತೆ ಹಾಕಿರುವ ಕಡಲ ತಂತಿ ಬ್ರಿಟನಿನ ಅಂಚೆಕಚೇರಿಯ ಸ್ವಾಮ್ಯ. ಆದರೂ ಆಯಾ ದೇಶಗಳ ಕಡಲತಂತಿ ಕಚೇರಿ ಹಾಗೂ ದೂರವಾಣಿ ನಿಲಯಗಳು ಆಯಾ ದೇಶಗಳ ಸ್ವಾಮ್ಯವಷ್ಟೆ. ಕಾಮನ್‍ವೆಲ್ತ್ ರಾಷ್ಟ್ರಗಳು ಪರಸ್ಪರ ಒಪ್ಪಂದಕ್ಕೆ ಬಂದು ಅಂಚೆ ಮತ್ತು ತಂತಿ ದರಗಳನ್ನು ಹೊರಗಿನ ರಾಷ್ಟ್ರಗಳಲ್ಲಿಯ ದರಕ್ಕಿಂತ ಕಡಿಮೆಗೊಳಿಸಿದವು. ಸಮಾಚಾರ ತಂತಿದರವನ್ನು ಕಡಿಮೆ ಮಾಡಲಾದ ಕಾರಣ ಕಾಮನ್‍ವೆಲ್ತ್ ರಾಷ್ಟ್ರಗಳ ವರ್ತಮಾನ ಪತ್ರಿಕೆಗಳಿಗೆ ಬೇಕಾದ ಸುದ್ಧಿಗಳಿಗೆ ಲಂಡನ್ ಪ್ರಮುಖ ಕೇಂದ್ರವಾಗಿ ಪರಿಣಮಿಸಿತು. ಕಾಮನ್‍ವೆಲ್ತ್ ರಾಷ್ಟ್ರದ ದೂರವಾಣಿ ಸಂಸ್ಥೆಗಳು ಬ್ರಿಟಿಷ್ ದೂರವಾಣಿ ಸಂಸ್ಥೆಯೊಡನೆ ಸಂಪರ್ಕ ಸ್ಥಾಪಿಸಿಕೊಂಡಿವೆ.

ವ್ಯಾಪಾರ ವ್ಯವಹಾರಗಳಲ್ಲಿ ಸಹಕಾರ : ಕಾಮನ್‍ವೆಲ್ತ್ ರಾಷ್ಟ್ರಸಮುದಾಯದ ವ್ಯಾಪಾರದ ಬಗ್ಗೆ ಗಮನಿಸಬೇಕಾದ ಅಂಶಗಳುಂಟು. ಒಂದನೆಯದಾಗಿ ಈ ಸಮುದಾಯದ ಅರ್ಧದಷ್ಟು ವ್ಯಾಪಾರ ಸಮುದಾಯದ ಒಳಗೂ ಸಮುದಾಯದಲ್ಲಿಯ ಬಹುಪಾಲಿನ ವ್ಯಾಪಾರ ಬ್ರಿಟನಿನೊಡನೆಯೂ ನಡೆಯುತ್ತದೆ. ಎರಡನೆಯದಾಗಿ ಬ್ರಿಟನ್ ಮತ್ತು ಇತರ ಕಾಮನ್‍ವೆಲ್ತ್ ರಾಷ್ಟ್ರಗಳ ನಡುವಣ ವ್ಯಾಪಾರ ಪರಸ್ಪರ ಪೂರಕವಾದ್ದು. ಕೈಗಾರಿಕೋದ್ಯಮಕ್ಕೆ ಪ್ರಧಾನವಾದ ಬ್ರಿಟನ್ ಕಾಮನ್‍ವೆಲ್ತ್ ರಾಷ್ಟ್ರಗಳಿಂದ ತನಗೆ ಬೇಕಾದ ಆಹಾರವಸ್ತುಗಳನ್ನೂ ಕಚ್ಚಾಸಾಮಗ್ರಿಗಳನ್ನೂ ಆಮದು ಮಾಡಿಕೊಂಡಿರೆ, ಕೃಷಿಪ್ರಧಾನವಾದ ಕಾಮನ್‍ವೆಲ್ತ್ ರಾಷ್ಟ್ರಗಳು ಬ್ರಿಟನಿನಿಂದ ತಮಗೆ ಬೇಕಾದ ಕೈಗಾರಿಕಾವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದುವು. ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಈ ಬಗೆಯ ವ್ಯಾಪಾರ ಸಂಬಂಧವಿದ್ದ ಕಾರಣವೇ ಪ್ರಾರಂಭದಿಂದಲೂ ವ್ಯಾಪಾರವನ್ನು ವೃದ್ಧಿಗೊಳಿಸುವ ದೃಷ್ಟಿಯಿಂದ ಅವುಗಳಲ್ಲಿ ಸಹಕಾರ ಏರ್ಪಟ್ಟಿದೆ. ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ವ್ಯಾಪಾರವನ್ನು ವೃದ್ಧಿಪಡಿಸಲು ಮಾಡಿದ ಪ್ರಯತ್ನಗಳಲ್ಲಿ 1932 ರ ಅಟ್ಟಾವದ ಒಪ್ಪಂದದ ಪ್ರಕಾರ ಅಸ್ತಿತ್ವಕ್ಕೆ ಬಂದ ಸಾಮ್ರಾಜ್ಯ ರಿಯಾಯಿತಿಗಳು. ಈ ಒಪ್ಪಂದದ ಪ್ರಕಾರ ಬ್ರಿಟನ್ ತನ್ನ ಆಶ್ರಿತ ರಾಷ್ಟ್ರಗಳ ಹಾಗೂ ಭಾರತದ ವಸ್ತುಗಳನ್ನು ಸುಂಕ ವಿಧಿಸದೆ ಆಮದು ಮಾಡಿಕೊಳ್ಳುವುದು ಹಾಗೂ ಕಾಮನ್‍ವೆಲ್ತ್ ರಾಷ್ಟ್ರಗಳ ವಸ್ತುಗಳೊಡನೆ ಪೈಪೋಟಿಮಾಡುವ ವಿದೇಶಿ ವಸ್ತುಗಳ ಮೇಲೆ ಆಮದು ಸುಂಕದ ಹೇರಿಕೆ ಸಾಧ್ಯವಾಯಿತು. ಈ ರಿಯಾಯಿತಿಗೆ ಬದಲಾಗಿ ಕಾಮನ್‍ವೆಲ್ತ್ ರಾಷ್ಟ್ರಗಳು ಬ್ರಿಟನಿನ ವಸ್ತುಗಳ ಆಮದಿನ ವಿಷಯದಲ್ಲೂ ಕೆಲವು ರಿಯಾಯಿತಿಗಳನ್ನು ನೀಡಿದುವು. ಒಪ್ಪಂದದ ಪ್ರಕಾರ ಈ ಬಗೆಯ ರಿಯಾಯಿತಿ ವ್ಯವಸ್ಥೆಯನ್ನು ಕಾಮನ್‍ವೆಲ್ತ್ ಸದಸ್ಯ ರಾಷ್ಟ್ರಗಳು ತಮ್ಮ ತಮ್ಮಲ್ಲಿಯೆ ಮಾಡಿಕೊಂಡುವು. ಈ ವ್ಯವಸ್ಥೆಯ ಪರಿಣಾಮವಾಗಿ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ವಸ್ತುಗಳು ನಿರುಪಾಧಿಕವಾಗಿ ಚಲಿಸುವ ಅನುಕೂಲವಾಯಿತು. ಆದರೆ ಈ ಕ್ಷೇತ್ರದ ಹೊರಗಿನ ದೇಶಗಳ ವಸ್ತುಗಳ ಮೇಲೆ ಆಮದು ಸುಂಕವನ್ನು ಹೇರುತ್ತಿದ್ದ ಕಾರಣ ಅವು ಈ ಕ್ಷೇತ್ರಕ್ಕೆ ನಿರುಪಾಧಿಕವಾಗಿ ಬರುವಂತಿರಲಿಲ್ಲ. ಸ್ವಾಭಾವಿಕವಾಗಿ ಈ ಕ್ಷೇತ್ರದ ಆಂತರಿಕ ವ್ಯಾಪಾರವೃದ್ಧಿಗೆ ಉತ್ತೇಜನ ಸಿಕ್ಕಂತಾಯಿತು.

ಆದರೆ ಎರಡನೆಯ ಮಹಾಯುದ್ಧದ ಅನಂತರ ಈ ವ್ಯವಸ್ಥೆ ಮುರಿದು ಬೀಳುವ ಸಂದರ್ಭ ಒದಗಿತು. ಮೊದಲನೆಯದಾಗಿ, ಯುದ್ಧಾನಂತರ ಅಂತರರಾಷ್ಟ್ರೀಯ ವ್ಯಾಪಾರವನ್ನು ಪ್ರವರ್ತನಗೊಳಿಸುವ ದೃಷ್ಟಿಯಿಂದ ವಿಶ್ವರಾಷ್ಟ್ರಗಳೆಲ್ಲವೂ ಕೂಡಿ ವ್ಯಾಪಾರ ಹಾಗೂ ಆಮದು ರಫ್ತು ಸುಂಕಗಳ ಸಾಮಾನ್ಯ ಒಪ್ಪಂದವನ್ನು ಜಾರಿಗೆ ತಂದುವು. ಈ ಒಪ್ಪಂದದ ಸದಸ್ಯರು ಅಂತರರಾಷ್ಟ್ರೀಯ ವ್ಯಾಪಾರದ ಮೇಲಿನ ತಡೆಗಳನ್ನು ಸಾವಧಾನವಾಗಿ ತೆಗೆಯುವ ವ್ಯವಸ್ಥೆಗೆ ಒಪ್ಪಿಕೊಂಡರು. ಕಾಮನ್‍ವೆಲ್ತ್ ರಾಷ್ಟ್ರಗಳೂ ಈ ಒಪ್ಪಂದಕ್ಕೆ ಒಳಪಟ್ಟುವಾದ್ದರಿಂದ ಸ್ವಾಭಾವಿಕವಾಗಿಯೆ ಅದರ ನಿರ್ಬಂಧಗಳಿಗೆ ಒಪ್ಪಿಕೊಳ್ಳಬೇಕಾಯಿತು. ಈ ಒಪ್ಪಂದದ ನಿರ್ಬಂಧಗಳಿಗೆ ಅನುಸಾರವಾಗಿ ಕಾಮನ್‍ವೆಲ್ತ್ ರಾಷ್ಟ್ರಗಳು ಇನ್ನು ಮುಂದೆ ತಮ್ಮತಮ್ಮಲ್ಲಿ ಹೊಸದಾಗಿ ರಿಯಾಯಿತಿಗಳನ್ನು ಸ್ಥಾಪಿಸಿಕೊಳ್ಳುವ ಹಕ್ಕನ್ನು ಕಳೆದುಕೊಂಡರೂ ಈ ನಿರ್ಬಂಧದಿಂದ ತಮ್ಮಲ್ಲಿ ಪ್ರಚಾರದಲ್ಲಿದ್ದ ಚಕ್ರಾಧಿಪತ್ಯದ ರಿಯಾಯಿತಿ ವ್ಯವಸ್ಥೆಗೆ ಧಕ್ಕೆ ಏನೂ ಬರಲಿಲ್ಲ. ಆದರೆ ಈ ವ್ಯವಸ್ಥೆಗೆ ಧಕ್ಕೆ ಬರುವ ಸಂಭವ ಬ್ರಿಟನ್ನು ಐರೋಪ್ಯದ ಸಾಮಾನ್ಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರ್ಧಾರ ಕೈಗೊಂಡಾಗ ಉಂಟಾಯಿತು. ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಪ್ರವೇಶಿಸಬೇಕಾದರೆ ಬ್ರಿಟಿನಿನ ಮುಂದೆ ಮೂರು ಷರತ್ತುಗಳನ್ನು ಇಡಲಾಯಿತು. ವಲಯದ ಹೊರಗಿನ ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಹೇರುವುದು, ಕೃಷಿ ಉದ್ಯಮದ ಬಗ್ಗೆ ರಕ್ಷಣಾನೀತಿಯನ್ನು ಅನುಸರಿಸುವುದು ಹಾಗೂ ಚಕ್ರಾಧಿಪತ್ಯದ ರಿಯಾಯಿತಿಗಳನ್ನು ರದ್ದುಗೊಳಿಸುವುದು-ಇವು ಆ ಷರತ್ತುಗಳು. ಬ್ರಿಟನ್ ಈ ಷರತ್ತುಗಳಿಗೆ ಒಪ್ಪಿದ್ದರಿಂದ ಕಾಮನ್‍ವೆಲ್ತ್ ರಾಷ್ಟ್ರಗಳ ವ್ಯಾಪಾರದ ಹಿತಕ್ಕೆ ಗಂಡಾಂತರವಿಟ್ಟಂತೆಯೇ ಸರಿ. ಆದ್ದರಿಂದ ಐರೋಪ್ಯ ಸಾಮಾನ್ಯ ಮಾರುಕಟ್ಟೆಯ ಸದಸ್ಯರೊಡನೆ ಕಾಮನ್‍ವೆಲ್ತ್ ರಾಷ್ಟ್ರಗಳ ಹಿತವನ್ನು ಸಂರಕ್ಷಿಸಿಕೊಳ್ಳುವಂಥ ವ್ಯವಸ್ಥೆಯನ್ನು ರೂಪಿಸುವ ದೃಷ್ಟಿಯಿಂದ ಬ್ರಿಟನ್ ಸಂಧಾನ ನಡೆಸಿತು. ಆದರೆ ಫ್ರಾನ್ಸಿನ ವಿರೋಧದ ಕಾರಣ ಬ್ರಿಟನ್ ಈ ಸಂಧಾನ ಕಾರ್ಯವನ್ನು 1963 ರಲ್ಲಿ ನಿಲ್ಲಿಸಬೇಕಾಯಿತು. ಸದ್ಯದಲ್ಲೇ ಬ್ರಿಟನ್ ಈ ಕೂಟವನ್ನು ಸೇರುವ ಪ್ರಯತ್ನ ಮಾಡಬಹುದೆಂಬ ನಿರೀಕ್ಷೆಯಿಂದ ಕೆಲವು ಕಾಮನ್‍ವೆಲ್ತ್ ರಾಷ್ಟ್ರಗಳು ಬ್ರಿಟನಿನೊಡನೆ ತಮಗಿದ್ದ ವ್ಯಾಪಾರದ ಹಿತವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಒಕ್ಕೂಟದ ರಾಷ್ಟ್ರಗಳೊಡನೆ ಸ್ವತಃ ಸಂಧಾನವನ್ನು ಪ್ರಾರಂಭಿಸಿದುವು. ನಿರೀಕ್ಷಿಸಿದಂತೆಯೇ ಬ್ರಿಟನ್ 1970 ರಿಂದ ಹೊಸ ಸಂಧಾನವನ್ನು ಕೈಗೊಂಡುದರ ಪರಿಣಾಮವಾಗಿ ಕಾಮನ್‍ವೆಲ್ತ್ ರಾಷ್ಟ್ರಗಳಿಗೆ ಕೆಲವು ರಿಯಾಯಿತಿಗಳು ಸಿಗುವಂತಾಗಿದೆ. ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಪ್ರವೇಶಿಸಲು ಬ್ರಿಟನ್ ತೀರ್ಮಾನಮಾಡಿದೆ. ಕಾಮನ್‍ವೆಲ್ತ್ ರಾಷ್ಟ್ರಗಳ ವ್ಯಾಪರ ಹಿತವನ್ನು ಸಂಧಾನದ ಮೂಲಕ ಕಾಪಾಡಲು ಪ್ರಯತ್ನ ನಡೆದಿದೆ.

ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯದ ಸಾಧಕ ಬಾಧಕಗಳು: ವೇಲೆ ವಿವರಿಸಿದಂತೆ ಕಾಮನ್‍ವೆಲ್ತ್ ರಾಷ್ಟ್ರಗಳನ್ನು ಇತ್ತೀಚೆಗೆ ಒಟ್ಟುಗೂಡಿಸಲು ಕಾರಣವಾದ ಅಂಶ ಅವುಗಳಲ್ಲಿ ಆರ್ಥಿಕ ಸಹಕಾರ. ಈ ಬಗೆಯ ಸಹಕಾರದಿಂದ ಕಾಮನ್‍ವೆಲ್ತ್ ರಾಷ್ಟ್ರಗಳಿಗೆ ಅನೇಕ ಅನುಕೂಲಗಳು ಲಭ್ಯವಾಗಿವೆ. ಅವುಗಳ ನಾಣ್ಯಗಳ ವಿನಿಮಯದರವನ್ನು ಪೌಂಡಿನ ವಿನಿಮಯದರಕ್ಕೆ ಸರಿಗೂಡಿಸಿದ ಕಾರಣ ಈ ನಾಣ್ಯಗಳ ದರಕ್ಕೆ ಸ್ವಲ್ಪಮಟ್ಟಿಗೆ ಸ್ಥಿರತೆ ಲಭಿಸಿದಂತಾಯಿತು. ಸ್ಟರ್ಲಿಂಗ್ ವಲಯದ ವ್ಯವಸ್ಥೆಯಿಂದ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಉದ್ಭವಿಸಿದ ಡಾಲರ್ ಕೊರತೆಯನ್ನು ತಕ್ಕಮಟ್ಟಿಗೆ ಪರಿಹರಿಸಿದಂತಾಯಿತು. ಈ ರಾಷ್ಟ್ರಸಮುದಾಯದಿಂದ ಹಿಂದುಳಿದ ಕಾಮನ್‍ವೆಲ್ತ್ ರಾಷ್ಟ್ರಗಳು ಬ್ರಿಟನ್ ಮತ್ತಿತರ ಮುಂದುವರಿದ ರಾಷ್ಟ್ರಗಳಿಂದ ಧನ ಹಾಗೂ ತಾಂತ್ರಿಕ ಸಹಾಯವನ್ನು ಪಡೆದು ತಮ್ಮಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಪ್ರವರ್ತನಗೊಳಿಸುವ ಸಾಧ್ಯತೆ ಪಡೆದುವು. ಈ ರಾಷ್ಟ್ರಗಳಿಗೆ ಲಂಡನ್ ಬಂಡವಾಳ ಮಾರುಕಟ್ಟೆಯೊಳಕ್ಕೆ ಪ್ರವೇಶ ಸಿಕ್ಕಂತಾಗಿ, ತಮ್ಮ ಕೈಗಾರಿಕೆಗಳಿಗೆ ಆವಶ್ಯಕವಾಗಿ ಬೇಕಾದ ಬಂಡವಾಳವನ್ನು ಎತ್ತುವ ಅನುಕೂಲ ಒದಗಿತು. ಈ ಸಮುದಾಯದ ಫಲವಾಗಿ ಕಾಮನ್‍ವೆಲ್ತ್ ರಾಷ್ಟ್ರಗಳ ಮಧ್ಯೆ ಸಾರಿಗೆ ಮತ್ತು ಸುದ್ದಿ ಸಂಪರ್ಕ ಏರ್ಪಟ್ಟಂತಾಯಿತು. ಅಲ್ಲದೆ ಕಾಮನ್‍ವೆಲ್ತ್ ರಾಷ್ಟ್ರಗಳ ನಡುವೆ ವ್ಯಾಪಾರದ ಬಗ್ಗೆ ರಿಯಾಯಿತಿಗಳನ್ನು ಸ್ಥಾಪಿಸಿ ಅವುಗಳಲ್ಲಿ ವ್ಯಾಪಾರ ವೃದ್ಧಿಗೊಳಿಸುವ ಅನುಕೂಲವಾಯಿತು.

ಕಾಮನ್‍ವೆಲ್ತ್ ರಾಷ್ಟ್ರಸಮುದಾಯದ ಅದರ ಸದಸ್ಯರಿಗೆ ಅನೇಕ ಅನುಕೂಲಗಳನ್ನು ಮಾಡಿಕೊಟ್ಟರೂ ಅದರಲ್ಲಿ ಕೆಲವು ಪ್ರತಿಕೂಲಗಳೂ ಉಂಟು: ಕಾಮನ್‍ವೆಲ್ತ್ ರಾಷ್ಟ್ರಗಳು ತಮ್ಮ ವಿದೇಶಿ ವಿನಿಮಯ ನಿಧಿಯನ್ನು ಪೌಂಡಿನ ರೂಪದಲ್ಲಿ ಶೇಖರಿಸಿಟ್ಟಿದ್ದುವಷ್ಟೆ. ಆದರೆ ಪೌಂಡ್ ಅಪಮೌಲ್ಯಗೊಂದ ಕಾರಣ ಈ ರಾಷ್ಟ್ರಗಳ ವಿದೇಶಿ ವಿನಿಮಯ ನಿಧಿಯ ಮೌಲ್ಯ ಡಾಲರ್ ಲೆಕ್ಕದಲ್ಲಿ ಕಡಿಮೆಯಾಗಿ, ಅವು ನಷ್ಟ. ಅನುಭವಿಸಿದಂತಾಯಿತು. ಎರಡನೆಯದಾಗಿ ಪೌಂಡನ್ನು ಅಪಮೌಲ್ಯಗೊಳಿಸಿದಾಗ ಪೌಂಡಿನ ವಿನಿಮಯ ದರಕ್ಕೆ ತಮ್ಮ ನಾಣ್ಯಗಳ ವಿನಿಮಯದರವನ್ನು ಸರಿಗೂಡಿಸಿದ ಬಹುಪಾಲು ರಾಷ್ಟ್ರಗಳು ಸಹ ಅವುಗಳ ಆರ್ಥಿಕತೆ ದುರ್ಬಲವಾಗಿಲ್ಲದಿದ್ದಾಗಲೂ ತಮ್ಮ ನಾಣ್ಯಗಳನ್ನು ಅಪಮೌಲ್ಯಗೊಳಿಸಬೇಕಾಯಿತು. ಇಲ್ಲದಿದ್ದ ಪಕ್ಷದಲ್ಲಿ ಬ್ರಿಟನಿನೊಡನೆ ತಮ್ಮ ವ್ಯಾಪಾರಕ್ಕೆ ದಕ್ಕೆ ಬರುತ್ತಿತ್ತು. ಕೊನೆಯದಾಗಿ ತಮ್ಮಲ್ಲಿಯೇ ವ್ಯಾಪಾರವನ್ನು ವೃದ್ಧಿಗೊಳಿಸುವ ದೃಷ್ಟಿಯಿಂದ ರಿಯಾಯಿತಿಗಳನ್ನು ಸ್ಥಾಪಿಸಿಕೊಂಡು ಕಾಮನ್‍ವೆಲ್ತ್ ರಾಷ್ಟ್ರಗಳು ತಮ್ಮ ವ್ಯಾಪಾರವನ್ನು ಸಮುದಾಯದ ಹೊರಗಿನ ರಾಷ್ಟ್ರಗಳೊಡನೆ ವೃದ್ಧಿಗೊಳಿಸಿಕೊಳ್ಳುವ ಪ್ರಯತ್ನವನ್ನು ಬಿಟ್ಟುವು. ಬ್ರಿಟನ್ ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸೇರಲು ಇಚ್ಚೆಪಟ್ಟಾಗ ಇದರ ಅಪಾಯದ ಅರಿವಾಯಿತು. ಪ್ರಾರಂಭದಿಂದಲೇ ಕಾಮನ್‍ವೆಲ್ತ್ ರಾಷ್ಟ್ರಗಳು ತಮ್ಮ ವ್ಯಾಪಾರವನ್ನು ಆದಷ್ಟು ಹೆಚ್ಚು ಸಂಖ್ಯೆಯ ದೇಶಗಳಿಗೆ ವ್ಯಾಪಕಗೊಳಿಸಿದ್ದ ಪಕ್ಷದಲ್ಲಿ ಈ ತೊಂದರೆ ಆಗುತ್ತಿರಲಿಲ್ಲ.          

(ಎ.ಬಿ.ಎ.)