ಕಾರ್ಪೆಂಟರ್, ಎಡ್ವರ್ಡ್
1844-1929. ಇಂಗ್ಲಿಷ್ ಲೇಖಕ, ಸಮಾಜ ಸುಧಾರಕ, ಹಳ್ಳಿಯ ಸರಳ ಬದುಕಿನ ಪ್ರತಿಪಾದಕ. ಸಸೆಕ್ಸಿನ ಬ್ರೈಟನಿನಲ್ಲಿ 1844ರ ಆಗಸ್ಟ್ 29ರಂದು ಹುಟ್ಟಿದ. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಈತ ತನ್ನ ಕಾಲದ ಸಾಮಾಜಿಕ ಹಾಗೂ ಮತೀಯ ಭಾವನೆಗಳನ್ನು ವಿರೋಧಿಸಿದ. ಆಗ ಹೊಸದಾಗಿ ಪ್ರಾರಂಭವಾದ ವಿಶ್ವವಿದ್ಯಾಲಯ ವಿಸ್ತರಣ ಚಳವಳಿಯಲ್ಲಿ ಉಪನ್ಯಾಸಕನಾದ. ವಾಲ್ಟ್ ವ್ಹಿಟ್‍ಮನನ ಪದ್ಯಗಳಿಂದ ಬಹಳಮಟ್ಟಿಗೆ ಪ್ರಭಾವಿತನಾಗಿದ್ದು ಅದರಿಂದ ತನ್ನ ಬಾಳಿನ ಗತಿಯನ್ನೇ ಬದಲಾಯಿಸಿಕೊಂಡಿದ್ದ ಕಾರ್ಪೆಂಟರನಿಗೆ ಅಲ್ಲಿ ಕವಿ ವ್ಹಿಟ್‍ಮನನ ಪರಿಚಯವಾಯಿತು. ವ್ಹಿಟ್‍ಮನನ ಕಾವ್ಯ ಮಾರ್ಗವನ್ನು ಈತನೂ ಅನುಸರಿಸಿ ಟುವರ್ಡ್ ಡೆಮಾಕ್ರಸಿ ಎಂಬ ಉದ್ದನೆಯ ಪದ್ಯ ರಚಿಸಿದ. 1883ರಲ್ಲಿ ಡರ್ಬಿಷೈರ್ ಹತ್ತಿರ ಸ್ವಲ್ಪ ಜಮೀನನ್ನು ಕೊಂಡು ಅಲ್ಲಿ 1922ರ ವರೆಗೆ ವಾಸಿಸುತ್ತಿದ್ದ. ಈ ಕಾಲದಲ್ಲಿ ಇವನಿಗೆ ಕೂಲಿಕಾರರೊಡನೆ ಅತ್ಯಂತ ನಿಕಟ ಸಂಬಂಧ ಬೆಳೆಯಿತು.
ಕಾರ್ಪೆಂಟರ್ ಸಮಾಜವಾದಿಯಾಗಿದ್ದ. ವಿಲಿಯಂ ಮಾರಿಸನ ತತ್ತ್ವಗಳಲ್ಲಿ ಇವನಿಗೆ ನಂಬಿಕೆಯಿತ್ತು. ರಾಜಕೀಯ ಕ್ರಾಂತಿಗಿಂತ ಸಮಾಜ ಸುಧಾರಣೆಯನ್ನೆ ಇವನು ಬೋಧಿಸಿದ. ಗ್ರಾಮಗಳಲ್ಲಿ ಪ್ರಚಲಿತವಾಗಿದ್ದ ಕುಶಲಕಲೆಗಳನ್ನು ಪುನರುದ್ಧರಿಸುವುದು ಇವನ ಉದ್ದೇಶವಾಗಿತ್ತು. ಇಂಗ್ಲೆಂಡ್ಸ್ ಐಡಿಯಲ್ (1887), ಸಿವಿಲಿಸೇಷನ್: ಇಟ್ಸ್‍ಕಾಸ್ ಅಂಡ್ ಕ್ಯೂರ್ (1889) ಎಂಬ ಇವನ ಪ್ರಬಂಧಗಳು ಪ್ರಖ್ಯಾತವಾದುದಲ್ಲದೆ ಇವನಿಗೆ ಅನೇಕ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟುವು. ಕಲೆ ಮತ್ತು ಜೀವನವನ್ನು ಕುರಿತು ಈತ ಎರಡು ಕೃತಿಗಳನ್ನು ರಚಿಸಿದ. ಹ್ಯಾವ್‍ಲಾಕ್ ಎಲಿಸನ ಪ್ರಭಾವದ ಫಲವಾಗಿ ಗಂಡು-ಹೆಣ್ಣುಗಳ ಸಂಬಂಧದ ಬಗ್ಗೆಯೂ ಕೃತಿರಚನೆ ಮಾಡಿದ. ಇವೆಲ್ಲ ಹಲವು ಭಾಷೆಗಳಿಗೆ ಅನುವಾದವಾಗಿವೆ. ಕಾರ್ಪೆಂಟರ್ ತೀರಿಕೊಂಡದ್ದು 1929ರ ಜೂನ್ 28ರಂದು.
(ಎಸ್.ಕೆ.ಎಸ್.)