ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವ್ಯಲಕ್ಷಣ

■ ಭಾರತೀಯ ಕಾವ್ಯಮೀಮಾಂಸೆ :- ಕಾವ್ಯಲಕ್ಷಣಗಳು

ಉದ್ದೇಶ ಲಕ್ಷಣ ಪರೀಕ್ಷೆ--ಇವು ಎಲ್ಲ ಪದಾರ್ಥಗಳ ಜ್ಞಾನಕ್ಕೂ ಸಾಮಾನ್ಯವಾದ ಕ್ರಮವೆಂದು ಅಂಗೀಕರಿಸಲ್ಪಟ್ಟಿದೆಯಾಗಿ ಅಲಂಕಾರಶಾಸ್ತ್ರದಲ್ಲಿ ಕಾವ್ಯದ ಉದ್ದೇಶ, ಕಾವ್ಯದ ಲಕ್ಷಣ ಮತ್ತು ಕಾವ್ಯದ ಪರೀಕ್ಷೆಗಳಿಗೆ ಸಂಬಂಧಿಸಿದ ವಿವರಗಳು ಬರುತ್ತವೆ. ಕಾವ್ಯದ ಉದ್ದೇಶಾದಿಗಳನ್ನು ಕಾವ್ಯಪ್ರಯೋಜನ ಮತ್ತು ಕಾವ್ಯಹೇತು ಎಂಬ ಲೇಖನಗಳಲ್ಲಿ ಪರಿಶೀಲಿಸಿದೆ. ಕಾವ್ಯಪರೀಕ್ಷೆಯ ವಿಷಯವನ್ನು ಕಾವ್ಯ ಎಂಬ ಲೇಖನದಲ್ಲಿಯೂ ಕಾವ್ಯಮೀಮಾಂಸೆ ಎಂಬ ಲೇಖನದಲ್ಲಿಯೂ ವಿವೇಚಿಸಿದೆ. ಇಲ್ಲಿ ಕಾವ್ಯಲಕ್ಷಣದ ಬಗೆಗಿನ ವಿವರಗಳಿವೆ. ಅಲಂಕಾರಶಾಸ್ತ್ರದ ಪ್ರಥಮ ಪ್ರವರ್ತಕನೆನಿಸಿರುವ ಭಾಮಹನಿಂದ ಹಿಡಿದು ಪ್ರಸಿದ್ಧ ಅಲಂಕಾರಿಕರಲ್ಲಿ ಕೊನೆಯವನೆನಿಸಿರುವ ಜಗನ್ನಾಥನ ವರೆಗೆ ಸುಮಾರು ಇಪ್ಪತ್ತು ಕಾವ್ಯಲಕ್ಷಣಗಳು ಸಿಕ್ಕುತ್ತವೆ. ಪ್ರತಿಯೊಬ್ಬ ಆಲಂಕಾರಿಕನೂ ಹಿಂದಿನ ಪರಂಪರೆಯನ್ನು ಅನುಸರಿಸಿಯೋ ತನ್ನದೇ ಆದ ಮಾರ್ಗವನ್ನು ಹಿಡಿದೋ ಕಾವ್ಯಲಕ್ಷಣವನ್ನು ನಿರೂಪಿಸಿರುತ್ತಾನೆ. ಲಕ್ಷಣವೆಂಬುದು ದೂಷಣತ್ರಯ (ಅವ್ಯಾಪ್ತಿ, ಅತಿವ್ಯಾಪ್ತಿ, ಅಸಂಭವ) ರಹಿತವಾಗಿ ವ್ಯಾವರ್ತಕವೂ ವ್ಯಾವಹಾರಿಕವೂ ಆಗಿರಬೇಕೆಂದು ತರ್ಕಶಾಸ್ತ್ರದಲ್ಲಿ ನಿರ್ಣಯಿಸಲ್ಪಟ್ಟಿದೆ. ಈ ದೃಷ್ಟಿಯಿಂದ ಪ್ರಾಚೀನ ಆಲಂಕಾರಿಕರು ಕಾವ್ಯದ ವಿಚಾರದಲ್ಲಿ ಹೇಳಿರುವ ಕೆಲವು ಮಾತುಗಳು ಸ್ವರೂಪನಿರೂಪಕ ವಾಕ್ಯಗಳೋ ಇಲ್ಲದಿದ್ದರೆ ವಿಷಯದ ಪೂರ್ಣಜ್ಞಾನಕ್ಕೆ ಸಹಾಯಕವಲ್ಲದ ಕೇವಲ ಶಾಬ್ದ ವಿವರಣೆಯೋ (ಉದಾ: ಕವೇಃ ಕರ್ಮ ಕಾವ್ಯಂ) ಆಗುತ್ತವೆಯೋ ಹೊರತು ಖಚಿತವೂ ಪರಿಷ್ಕøತವೂ ಆದ ಕಾವ್ಯಲಕ್ಷಣಗಳಾಗುವುದಿಲ್ಲ. ಪ್ರಾಯಃ 10-12ನೆಯ ಶತಮಾನದಿಂದೀಚೆಗೆ ಈ ಬಗ್ಗೆ ವಿಶೇಷವಾದ ಚರ್ಚೆ ಬೆಳೆದಿದೆಯೆನ್ನಬಹುದು.

 ಕಾವ್ಯಲಕ್ಷಣಗಳನ್ನು ಮೂರು ರೀತಿ ವಿಂಗಡಿಸಬಹುದು. ಮೊದಲನೆಯದಾಗಿ ಪ್ರಸಿದ್ಧವಾದ ರಸ, ಅಲಂಕಾರ, ರೀತಿ, ಧ್ವನಿ, ವಕ್ರೋಕ್ತಿ ಎಂಬ ಐದು ಬಗೆಯಾಗಬಹುದು. ಎರಡನೆಯದಾಗಿ ಕವಿಶಿಕ್ಷೆಯ ದೃಷ್ಟಿಯಿಂದ ಅಥವಾ ವಿಮರ್ಶಕನ ಕಾವ್ಯಪರೀಕ್ಷೆಯ ದೃಷ್ಟಿಯಿಂದ ರಚಿಸಲ್ಪಟ್ಟ ಲಕ್ಷಣಗಳೆಂದು ಎರಡು ವಿಧವಾಗಿಯೂ ವಿಂಗಡಿಸಬಹುದು. ಮೂರನೆಯದಾಗಿ ಶಬ್ದಪ್ರಾಧಾನ್ಯ, ಅರ್ಥಪ್ರಾಧಾನ್ಯ ಅಥವಾ ಉಭಯಪ್ರಾಧಾನ್ಯಗಳನ್ನು ಅನುಸರಿಸಿ ಮೂರು ವಿಧವಾಗಿಯೂ ವಿಂಗಡಿಸಬಹುದು.

 ಭಾಮಹ ಕಾವ್ಯಲಕ್ಷಣವನ್ನು ಶಬ್ದಾರ್ಥೌಸಹಿತೌಕಾವ್ಯಂ ಎಂದು ಮಾತ್ರ ನಿರೂಪಿಸಿರುವನಾದರೂ ವಕ್ರೋಕ್ತಿಗರ್ಭಿತವಾದ ಅಲಂಕಾರಗಳಿಗೇ ಆತ ಪ್ರಾಶಸ್ತ್ಯವನ್ನು ಕೊಟ್ಟಿರುವುದರಿಂದ ಅಲಂಕೃತವಾದ ಶಬ್ದಾರ್ಥಗಳ ಸಹಭಾವವೇ ಕಾವ್ಯಲಕ್ಷಣವೆಂದು ತಾತ್ಪರ್ಯದಿಂದ ತಿಳಿಯಬಹುದಾಗಿದೆ. ದಂಡಿ ತನ್ನ ಕಾವ್ಯಾದರ್ಶದಲ್ಲಿ ಶರೀರಂತಾವದಿಷ್ಟಾರ್ಥ ವ್ಯವಚ್ಛಿನ್ನಾಪದಾವಲೀ ಎಂದು ಹೆಚ್ಚು ಪರಿಪೂರ್ಣವಾದ ಆದರೆ ಸ್ವಲ್ಪವಿವಾದಾಸ್ಪದವಾದ ಲಕ್ಷಣವನ್ನು ರಚಿಸಿದ್ದಾನೆ. ಇಷ್ಟವಾದ ಅರ್ಥದಿಂದ ಒಳಗೂಡಿರುವ ಪದಗಳ ಸಮೂಹವೇ ಕಾವ್ಯ ಎಂಬ ಈ ಲಕ್ಷಣದಲ್ಲಿ ಇಷ್ಟ ಎಂಬ ಶಬ್ದಕ್ಕೆ 'ಕವಿ ಹೇಳಬೇಕೆಂದಿರುವ' ಎಂದು ಅರ್ಥ ಮಾಡಲಾಗಿದೆ. ಇಷ್ಟ ಎಂದರೆ ಆಹ್ಲಾದಕರ, ರುಚಿಸುವ ಎಂದೂ ಅರ್ಥ ಮಾಡಬಹುದು. ಆದರೆ ತರುಣವಾಚಸ್ಪತಿಯೆಂಬ ವ್ಯಾಖ್ಯಾನಕಾರ ಕವಿವಿವಕ್ಷಿತ ಎಂದೇ ಅರ್ಥ ಮಾಡಿರುತ್ತಾನೆ. ಈ ಲಕ್ಷಣ ಪದಾವಲಿಯನ್ನೇ ಮುಖ ಪದಾರ್ಥವನ್ನಾಗಿ ಸ್ವೀಕರಿಸುವುದರಿಂದ, ಶಬ್ದಪ್ರಾಧಾನ್ಯವನ್ನು ಅಂಗೀಕರಿಸುವ ಲಕ್ಷಣಗಳ ಗುಂಪಿಗೆ ಸೇರುತ್ತದೆ.

 ವಾಮನನ 'ರೀತಿರಾತ್ಮಾಕಾವ್ಯಸ್ಯ' ಎಂಬ ಲಕ್ಷಣ ಗುಣಗಳ ಮೂಲಕ ಧರ್ಮ ವೈಶಿಷ್ಟ್ಯವನ್ನು ಅಂಗೀಕರಿಸಿದರೂ ಭಾಮಹನ ಲಕ್ಷಣದಂತೆ ಕಾವ್ಯರಚನೆಯಲ್ಲಿ ಆಸಕ್ತನಾದ ಕವಿಯ ದೃಷ್ಟಿಯಿಂದ ರಚಿಸಲ್ಪಟ್ಟಿದೆಯಲ್ಲದೆ, ಮೊಟ್ಟಮೊದಲಿಗೆ ಆತ್ಮವೆಂಬ ಪದವನ್ನು ಬಳಸಿಕೊಂಡಿದೆ. ಇಲ್ಲಿ ರೀತಿ ಎಂಬುದನ್ನು ವಿಶಿಷ್ಟವಾದ ಪದರಚನೆಯೆಂದೂ ಆ ವಿಶೇಷವನ್ನು ಗುಣಾತ್ಮಕವೆಂದು ವಿವರಿಸಿ ಹತ್ತು ವಿಧವಾದ ಶಬ್ದ ಮತ್ತು ಅರ್ಥ ಗುಣಗಳನ್ನು ಲಕ್ಷಣೋದಾಹರಣೆಗಳ ಸಹಿತ ನಿರೂಪಿಸಲಾಗಿದೆ. ಆತ್ಮದ ವಿಷಯ ಪ್ರಸಕ್ತವಾದುದರಿಂದಲೇ ಕಾವ್ಯದ ಶರೀರವಾವುದೆಂಬ ಅಶಂಕೆ ಉದ್ಭವಿಸಿ ಶಬ್ದ ಮತ್ತು ಅರ್ಥಗಳೇ ಕಾವ್ಯದ ಶರೀರವೆಂದು ಅಂಗೀಕರಿಸಲ್ಪಟ್ಟಿತು. ಹೀಗೆ ಶಬ್ದಾರ್ಥ ಶರೀರವಾದ ಕಾವ್ಯ ಅಲಂಕಾರದ (ಸೌಂದರ್ಯ) ಕಾರಣದಿಂದಲೇ ಗ್ರಾಹ್ಯವಾಗುತ್ತದೆಯೆಂದೂ ಈ ದೋಷಗಳ ವರ್ಜನದಿಂದಲೂ ಗುಣಗಳ ಆದಾನದಿಂದಲೂ ಉಂಟಾಗುತ್ತದೆಯೆಂಬ ಅಂಶವೂ ವಾಮನನಿಗೆ ಸಮ್ಮತವಾಗಿದೆ.

ಧ್ವನಿಪ್ರಸ್ಥಾನವನ್ನು ಸ್ಥಾಪಿಸಿದ ಆನಂದವರ್ಧನ 'ಕಾವ್ಯಸ್ಯಾತ್ಮಾಧ್ವನಿಃ' ಎಂದು ಹಿಂದಿನವರಿಂದ ಹೇಳಲ್ಪಟ್ಟ ವಿಮರ್ಶಕ ಮೌಲ್ಯ ದೃಷ್ಟಿಯ ಲಕ್ಷಣವನ್ನಲ್ಲದೆ ಸಹೃದಯಹೃದಯಾಹ್ಲಾದಿಶಬ್ದಾರ್ಥಮಯತ್ವಮೇವ ಕಾವ್ಯಲಕ್ಷಣಂ--ಎಂಬ ಲಕ್ಷಣವನ್ನೂ ನಿರೂಪಿಸಿರುತ್ತಾನೆ. ಇವೆರೆಡರ ತಾತ್ಪರ್ಯದಿಂದ ಶಬ್ದಾರ್ಥ ಶರೀರವಾದ ಕಾವ್ಯ ಧ್ವನ್ಯಾತ್ಮಕವಾಗಿಯೂ ಸಹೃದಯ ಹೃದಯಾಹ್ಲಾದಕರವೂ ಆಗಿರಬೇಕೆಂಬುದು ಆನಂದವರ್ಧನನ ಆಶಯ. ಈ ಮತ ವ್ಯಂಗದ ಮೂಲಕ ಶಬ್ದಾರ್ಥಗಳ ವೈಶಿಷ್ಟ್ಯವನ್ನು ಕಾವ್ಯದ ಲಕ್ಷಣವನ್ನಾಗಿ ಅಂಗೀಕರಿಸುತ್ತದೆಯಲ್ಲದೆ ಸಹೃದಯಹೃದಯಾಹ್ಲಾದಕತ್ವವೆಂಬ ಒಂದು ಮುಖ್ಯವಾದ ಅಂಶವನ್ನು ಲಕ್ಷಣದಲ್ಲಿ ಸೇರಿಸುತ್ತದೆ.

 ಇಲ್ಲಿಂದ ಮುಂದೆ ಕಾವ್ಯಲಕ್ಷಣದ ನಿರೂಪಣೆಯಲ್ಲಿ ಹೆಚ್ಚಿನ ನಿಷ್ಕರ್ಷವನ್ನು ಸಾಧಿಸುವ ಪ್ರಯತ್ನವೂ ತತ್ಸಂಬಂಧವಾದ ವಿವಾದಗಳೂ ಬೆಳೆದುಬಂದಿದೆ.

 ಧ್ವನಿಮತವನ್ನು ಅಂಗೀಕರಿಸದ ಕುಂತಕ ವ್ಯಾಪಾರ (ಕ್ರಿಯೆ) ಮುಖೇನ ಎಂದರೆ ವಕ್ರತೆಯಿಂದೊಡಗೂಡಿದ ಶಬ್ದಾರ್ಥಗಳಿಗೆ ಕಾವ್ಯತ್ವವನ್ನು ಒಪ್ಪಿ ಈ ರೀತಿ ಲಕ್ಷಣವನ್ನು ಹೇಳಿರುತ್ತಾನೆ: ಶಬ್ದಾರ್ಥೌ ಸಹಿತೌ ವಕ್ರಕವಿವ್ಯಾಪಾರಶಾಲಿನಿ| ಬಂಧೇ ವ್ಯವಸ್ಥಿತೌ ಕಾವ್ಯಂ ತದ್ವಿದಾಹ್ಲಾದಕಾರಿಣಿ. ಈ ಲಕ್ಷಣದಲ್ಲಿ ಪ್ರತಿಯೊಂದು ದಳಕ್ಕೂ ಪ್ರಯೋಜನವನ್ನು ಹೇಳುತ್ತ, ಹಿಂದೆ ಭಾಮಹಾದಿಗಳೂ ಹೇಳಿರುವ ಸಹಿತೌ ಎಂಬ ಶಬ್ದಕ್ಕೆ ಅಪೂರ್ವವಾದ ವಿವರಣೆಯನ್ನು ಕೊಡಲಾಗಿದೆ.

 ಸಾಹಿತ್ಯಮನಯೋಃ ಶೋಭಾಶಾಲಿತಾಂ ಪ್ರತಿಕಾಪ್ಯಸೌ|

ಅನ್ಯೂನಾನತಿರಿಕ್ತತ್ವಮನೋಹಾರಿಣ್ಯವಸ್ಥಿತಿಃ||

ಸೌಂದರ್ಯವನ್ನುಂಟುಮಾಡುವುದರಲ್ಲಿ ಶಬ್ದ ಮತ್ತು ಅರ್ಥಗಳ ನಡುವೆ ಯಾವುದೊಂದೂ ಕಡಿಮೆಯೂ ಯಾವುದೂ ಹೆಚ್ಚೂ ಆಗಿರದೆ ಮನೋಹರವಾಗುವಂತಿರುವುದೇ ಸಾಹಿತ್ಯ. ಈ ಅನ್ಯೂನಾತಿರಿಕ್ತತ್ವವನ್ನು ಹೀಗೆ ವಿವರಿಸಿದೆ: ಕೀದೃಶೀ ಅನ್ಯೂನಾತಿರಿಕ್ತತ್ವಮನೋಹಾರಿಣೀ ಪರಸ್ಪರ ಸ್ಪರ್ಧಿತ್ವರಮಣೀಯಾ.....ತತ್ರವಾಚಕಸ್ಯ ವಾಚಕಾಂತರೇಣ ವಾಚ್ಯಸ್ಯ ವಾಚ್ಯಾಂತರೇಣ ಸಾಹಿತ್ಯಮಭಿಪ್ರೇತಮ್. ಇದರಿಂದ ವಾಚಕವಾದ ಶಬ್ದವೂ ವಾಚ್ಯವಾದ ಅರ್ಥವೂ ಪರಸ್ಪರವಾಗಿಯೂ ಸಹೃದಯ ಹೃದಯಾಹ್ಲಾದವನ್ನುಂಟುಮಾಡುವುದರಲ್ಲಿ ಸ್ಪರ್ಧಿಸುವಂತೆಯೂ ಇರಬೇಕೆಂಬ ಅಮೂಲ್ಯವಾದ ಸಾಹಿತ್ಯದ ರಹಸ್ಯವನ್ನು ವಿವರಿಸಲಾಗಿದೆ. ಶಬ್ದ ಮತ್ತು ಅರ್ಥಗಳ ಪರಸ್ಪರ ಸಂಬಂಧವನ್ನು ಈ ರೀತಿ ಚರ್ಚಿಸಲಾಗಿದೆ:

'ಶಬ್ದಾರ್ಥೌ ಕಾವ್ಯಂ ವಾಚಕೋವಾಚ್ಯಂ ಚೇತಿದ್ವೌ ಸಮ್ಮಿಲಿತೌ ಕಾವ್ಯಂ| ದ್ವಾವೇಕಮಿತಿ ವಿಚಿತ್ರೈವೋಕ್ತಿ| ತೇನಯಕ್ಕೇಷಾಂ ಚಿನ್ಮತಂ ಕವಿಕೌಶಲಕಲ್ಪಿತ ಕಮನೀಯಾ ತಿಶಯಃ ಶಬ್ದ ಏವ ಕೇವಲಂ ಕಾವ್ಯಮಿತಿ ಕೇಷಾಂಚಿದ್ವಾಚ್ಯಮೇವ ರಚನಾವೈಚಿತ್ರ್ಯ ಚಮತ್ಕಾರಕಾರಿ ಕಾವ್ಯಮಿತಿ ಪಕ್ಷದ್ವಯಮಪಿ ನಿರಸ್ತಂ ಭವತಿ| ತಸ್ಮಾತ್ ದ್ವಯೋರಪಿ ಪ್ರತಿತಿಲಮಿವ ತೈಲಂ ತದ್ವಿದಾಹ್ಲಾದಕಾರಿತ್ವಂ ವರ್ತತೇ| ನ ಪುನರೇಕಸ್ಮಿನ್||

ಹೀಗೆ ಶಬ್ದಾರ್ಥಗಳ ಸಮಪ್ರಾಧಾನ್ಯವಾದವನ್ನು (ರುದ್ರಟನ ಕಾವ್ಯಾಲಂಕಾರಕ್ಕೆ ವ್ಯಾಖ್ಯಾನವನ್ನು ರಚಿಸಿರುವ ನಮಿಸಾಧುವೂ ಇದೇ ವಾದವನ್ನು ಎತ್ತಿಹಿಡಿದಿದ್ದಾನೆ.) ಅಂಗೀಕರಿಸಿ ಇಂಥ ಶಬ್ದ ಮತ್ತು ಅರ್ಥಗಳು ವಕ್ರ ಎಂದರೆ ಲೋಕೋತ್ತರವಾದ, ಕಾವ್ಯಜ್ಞರಿಗೆ ಆಹ್ಲಾದಕರವಾದ, ಸುಂದರವಾದ ಬಂಧದಲ್ಲಿ (ಪ್ರಬಂಧ) ಸ್ಥಾಪಿಸಲ್ಪಟ್ಟರುವುದೇ ಕಾವ್ಯವೆಂದು ಕುಂತಕನ ಮತ. ಈ ರೀತಿಯಾದ ಶಬ್ದಾರ್ಥೋಭಯ ಪ್ರಾಧಾನ್ಯ, ಸಹೃದಯ ಹೃದಯಾಹ್ಲಾದಕತ್ವ, ಲೋಕೋತ್ತರ ಚಮತ್ಕಾರಕಾರಿತ್ವ--ಮೊದಲಾದ ಅಂಶಗಳನ್ನು ಈಚಿನ ಆಲಂಕಾರಿಕರಾದ ಭೋಜ, ವಿಶ್ವನಾಥ, ವಿದ್ಯಾನಾಥ ಮೊದಲಾದವರು ತತ್ತ್ವಶಃ ಒಪ್ಪಿದ್ದರೂ ಇವರಲ್ಲನೇಕರು ಧ್ವನಿಮತಾವಲಂಬಿಗಳಾಗಿ ಕಾವ್ಯಲಕ್ಷಣವನ್ನು ಬೇರೆ ಬೇರೆಯ ಶಬ್ದವಿಧಾನಗಳಿಂದ ರಚಿಸಿರುತ್ತಾರೆ.

ಅಲಂಕಾರಶಾಸ್ತ್ರದ ಪ್ರಕ್ರಿಯೆಗಳನ್ನೆಲ್ಲ ಕ್ರೋಡಿಕರಿಸಿ ಪರಿಷ್ಕರಿಸುವುದರಲ್ಲಿ ಪ್ರಧಾನನೆನಿಸಿರುವ ರಾಜಾನಕ ಮಮ್ಮಟನ ಕಾವ್ಯಲಕ್ಷಣ ಈ ರೀತಿ ರೂಪುಗೊಂಡಿದೆ: ತದದೋಷೌ (ಅದೋಷೌ ಎಂಬುದಕ್ಕೆ ಅಲ್ಪದೋಷವುಳ್ಳ ಎಂದೂ ಅರ್ಥ ಮಾಡಬಹುದು. ಆದುದರಿಂದ ಪ್ರಬಲವಾದ ದೋಷವಿರುವಲ್ಲಿ ಕಾವ್ಯತ್ವ ಸಲ್ಲದು.) ಶಬ್ದಾರ್ಥೌ ಸಗುಣಾವನಲಂಕೃತೀ ಪುನಃ ಕ್ವಾಪಿ. ಈ ಲಕ್ಷಣದಲ್ಲಿ ಕಾವ್ಯಶರೀರಭೂತವಾದ ಶಬ್ದ ಮತ್ತು ಅರ್ಥಗಳು ದೋಷವರ್ಜಿತವಾಗಿರಬೇಕೆಂಬ ಅಂಶ ತದಲ್ಪ ಮಪಿ ನೋಪೇಕ್ಷ್ಯಂ ಕಾವ್ಯೇ ದುಷ್ಟಂ ಕಥಂಚನ ಎಂಬ ದಂಡಿಯ ವಚನಕ್ಕನುಸಾರವಾಗಿ ಸೇರಿಸಲ್ವಟ್ಟಿದೆ. ಗುಣಗಳು ರಸದ ಧರ್ಮಗಳೆಂದು, ಧರ್ಮವೆಂದರೆ ಎಡೆಬಿಡದೆ ಇರುವ ಗುಣ ಅಂಗೀಕೃತವಾಗಿರುವುದರಿಂದ ಸಗುಣಾ ಎಂಬ ವಿಶೇಷನ ಕಾವ್ಯಕ್ಕೆ ರಸದ ಅವಶ್ಯಕತೆಯನ್ನು ಸೂಚಿಸುತ್ತದೆ. ಅನಲಂಕೃತೀ ಪುನಃ ಕ್ವಾಪಿ ಎಂಬ ಮಾತಿನಿಂದ ಸ್ಛುಟವಾದ ಅಲಂಕಾರವಿರುವ ಎಲ್ಲ ಸಂದರ್ಭಗಳಲ್ಲಿಯೂ ಕಾವ್ಯತ್ವ ಸಿದ್ಧವಾಗುವುದಲ್ಲದೆ ಅಸ್ಛುಟವಾದ ಅಲಂಕಾರವಿರುವ ಕೆಲವೆಡೆಗಳಲ್ಲಿಯೂ ಕಾವ್ಯತ್ವ ಬರಬಹುದು. ಮಮ್ಮಟ ಧ್ವನಿಮತಾನುಯಾಯಿಯಾದರೂ ಕಾವ್ಯ ಲಕ್ಷಣದಲ್ಲಿ ಧ್ವನಿಯ ಮಾತನ್ನೆತ್ತದೇ ಇರುವುದಕ್ಕೆ ಕಾರಣವನ್ನು ಸುಲಭವಾಗಿ ಊಹಿಸಬಹುದು. ರಸ ಸರ್ವದಾ ವ್ಯಂಗ್ಯವೇ ಆಗಿ ಧ್ವನಿಯ ಭೇದವಾಗಿರುವುದರಿಂದಲೂ ರಸಧರ್ಮಗಳಾದ ಗುಣಗಳು ಇರುವೆಡೆಗಳಲ್ಲೆಲ್ಲ ಧರ್ಮಿಯಾದ ರಸಧ್ವನಿಯ ಸದ್ಭಾವ ನಿಸ್ಸಂದಿಗ್ಥವಾಗಿರುವುದರಿಂದಲೂ ಧ್ವನಿಯನ್ನು ಕಾವ್ಯದ ಲಕ್ಷಣದಲ್ಲಿ ಸೇರಿಸಬೇಕಾಗಿಲ್ಲವೆಂದು ತಾತ್ವರ್ಯ. ಇದಲ್ಲದೆ ವಸ್ತುಧ್ವನಿ ಮತ್ತು ಅಲಂಕಾರಧ್ವನಿಗಳು ರಸಧ್ವನಿಯಲ್ಲೇ ಪರ್ಯವಸಾನ ಹೊಂದುತ್ತವೆಂದೂ ಹೇಳಲಾಗಿದೆ. ಅಲಂಕಾರ ಮಾತ್ರ ವಾಚ್ಯವೂ ಆಗಿರಬಹುದು. ವ್ಯಂಗ್ಯವೂ ಆಗಿರಬಹುದು. ವ್ಯಂಗ್ಯವಾಗಿದ್ದಾಗ ಕಾವ್ಯಕ್ಕೆ ಉತ್ಕರ್ಷವುಂಟಾಗುವುದಾದರೂ ವಾಚ್ಯವಾಗಿದ್ದಾಗಲೂ ಮಮ್ಮಟನ ಕಾವ್ಯಲಕ್ಷಣ ಈಚಿನ ಅನೇಕರಿಗೆ ಉಪಾದೇಯವಾದರೂ ವಿಶ್ವನಾಥ ಮತ್ತು ಜಗನ್ನಾಥ-ಇವರಿಬ್ಬರ ಮಾರ್ಗ ಮಾತ್ರ ಬೇರೆಯಾಗಿದೆ.

 ವಿಶ್ವನಾಥ ಮಮ್ಮಟನ ಲಕ್ಷಣದ ಪ್ರತಿಯೊಂದು ಅಂಶವನ್ನು ಖಂಡಿಸಿ ವಾಕ್ಯಂ ರಸಾತ್ಮಕಂ ಕಾವ್ಯಂ ಎಂಬ ಲಕ್ಷಣವನ್ನು ಮಂಡಿಸಿದ್ದಾನೆ. ಹುಳು ಹೊಡೆದಿರುವ ರತ್ನದ ದೋಷ ಅದರ ರತ್ನತ್ವಕ್ಕೆ ಹೇಗೆ ಬಾಧಕವಾಗುವುದಿಲ್ಲವೋ ಹಾಗೆ ದೋಷ ಕಾವ್ಯದ ಉತ್ಕರ್ಷಾಪಕರ್ಷಗಳಿಗೆ ಕಾರಣವಾಗುತ್ತದೆಯೇ ಹೊರತು ಕಾವ್ಯತ್ವಕ್ಕೆ ಕುಂದನ್ನು ತರಲಾರದೆಂದು ತಿಳಿದು ಈ ಅಂಶವನ್ನು ಕಾವ್ಯಲಕ್ಷಣದಲ್ಲಿ ಸೇರಿಸಬೇಕಾಗಿಲ್ಲ. -ಇದು ವಿಶ್ವನಾಥನ ಅಭಿಪ್ರಾಯ. ಇವನು ಸಹ ಧ್ವನಿಮತವನ್ನೊಪ್ಪಿದರೂ ರಸ ಧ್ವನಿಯನ್ನೇ ಪ್ರಧಾನವಾಗಿ ಕಾವ್ಯತ್ವಕ್ಕೆ ಕಾರಣವನ್ನಾಗಿ ಅಂಗೀಕರಿಸಿದ್ದಾನೆ. ಇವನ ಲಕ್ಷಣದಲ್ಲಿ ವಾಕ್ಯಂ ರಸಾತ್ಮಕಂ ಎಂದು ಹೇಳಿರುವುದರಿಂದ ಶಬ್ಥಾರ್ಥಗಳ ಪ್ರಾಧಾನ್ಯದ ಪ್ರಶ್ನೆ ಏಳುವುದಿಲ್ಲ. ಕಾವ್ಯವನ್ನು ಮನುಷ್ಯನಿಗೆ ಹೋಲಿಸಿದರೆ ರಸ ಆತ್ಮವಿದ್ದಂತೆ, ಗುಣಗಳು ಶೌರ್ಯಾದಿಗಳಂತೆ, ದೋಷಗಳು ಕುಂಟುಕುರುಡುಗಳಿದ್ದಂತೆ, ರೀತಿಗಳು ಅವಯವಗಳ ಜೋಡಣೆಯಂತೆ, ಅಲಂಕಾರಿಗಳು ಬಳೆ, ಓಲೆ ಮೊದಲಾದವುಗಳಂತೆ -ಎಂಬುದೇ ವಿಶ್ವನಾಥನ ಅಭಿಪ್ರಾಯ. ಇವನ ಲಕ್ಷಣದ ಪ್ರಕಾರ ಕೇವಲ ಶಬ್ದ ಚಿತ್ರವನ್ನು ಹೊಂದಿರುವ ಪ್ರಬಂಧಗಳಿಗೆ ಕಾವ್ಯತ್ವ ಸಲ್ಲದು. ಜಗನ್ನಾಥನ ರಮಣೀ ಯಾರ್ಥಪ್ರತಿಪದಕಃ ಶಬ್ದಃ ಕಾವ್ಯಂ ಎಂಬ ಲಕ್ಷಣ ದಂಡಿಯ ಲಕ್ಷಣದಂತೆ ಶಬ್ದವನ್ನೇ ಮುಖಪದಾರ್ಥವನ್ನಾಗಿ ಸ್ವೀಕರಿಸಿದರೂ ರಮಣೀಯಾರ್ಥಪ್ರತಿಪಾದಕಃ ಎಂಬ ವಿಶೇಷಣದಿಂದ ಅರ್ಥದ ಪ್ರಾಧಾನ್ಯಕ್ಕೆ ಭಂಗ ಬರುವುದಿಲ್ಲವೆಂದು ಭಾವಿಸಬಹುದು. ಆದರೆ ಮಮ್ಮಟನ ದೃಷ್ಟಿಯಿಂದ ಇದು ಸರಿಯಲ್ಲ ಶಬ್ದವೆಂಬ ಮುಖಪದಾರ್ಥಕ್ಕೆ ಅರ್ಥ ವಿಶೇಷಣವಾಗುವುದರಿಂದ ಅದಕ್ಕೆ ಕಾವ್ಯಶರೀರತ್ವ ಸಿದ್ಧವಾಗದು. ಸಮ ಪ್ರಾಧಾನ್ಯವೂ ಸಿಕ್ಕಿದಂತಾಗಲಿಲ್ಲ. ಅಲಂಕಾರವೆಂಬುದು ಶರೀರಕ್ಕೆ ಸಂಬಂಧಿಸಿದ್ದಾದ್ದರಿಂದ ಅರ್ಥವೂ ಶರೀರವೆಂದು ಒಪ್ಪಿದವರ ಮತಾನುಸಾರ ಅರ್ಥಾಲಂಕಾರಗಳಿಗೆ ಅಲಂಕಾರತ್ವ ಸಿದ್ಧಿಸದೆಂಬ ಅಕ್ಷೇಪಣೆಗೆ ಜಗನ್ನಾಥನ ಲಕ್ಷಣ ಒಳಗಾಗಿದೆ.

 ಅಲಂಕಾರಕ್ಕೆ ಅಲಂಕಾರ್ಯವಾದ ಶರೀರವೊಂದು ಬೇಕೆಂದೂ ಅದು ಅರ್ಥಾಲಂಕಾರಗಳಿಗೆ ಅರ್ಥವೇ ಆಗಿರಬೇಕೆಂಬುದೂ ಮಮ್ಮಟಾದಿಗಳ ವಾದ. ಜಗನ್ನಾಥನ ಲಕ್ಷಣದಲ್ಲಿ ರಮಣೀಯ ಎಂಬ ವಿಶೇಷಣದಿಂದ ಸಹೃದಯಹೃದಯಾಹ್ಲಾದಕಾರಿತ್ವವನ್ನು ಸೇರಿಸಿದೆಯಲ್ಲದೆ ಶಾಸ್ತ್ರಾದಿಗಳ ವಿಷಯವನ್ನು ಪ್ರತ್ಯೇಕಿಸಿದಂತಾಗಿದೆ. ವ್ಯಂಗ್ಯ ಸರ್ವಥಾ ರಮಣೀಯಾರ್ಥಪ್ರತಿಪಾದಕವಾಗಿರುವುದರಿಂದ ಉತ್ತಮೋತ್ತಮವೆಂದೂ ವಾಚ್ಯ ರಮಣೀಯವಾಗಿರುವಲ್ಲಿ ಅಸ್ಛುಟ ವ್ಯಂಗ್ಯವೂ ಕಾವ್ಯತ್ವಕ್ಕೆ ಭಾದಕವಲ್ಲವೆಂದೂ ತಾತ್ವರ್ಯ.

 ಉಳಿದ ಕಾವ್ಯಲಕ್ಷಣಗಳೆಲ್ಲ ಮೇಲ್ಕಂಡ ಪ್ರಧಾನವಾದ ಮತಗಳಲ್ಲಿ ಅಂತರ್ಭವಿಸುತ್ತವೆ.      (ಎಸ್.ವಿ.ಎಸ್.ಆರ್.)