ಕುಣಿಗಲ್
ತುಮಕೂರು ಜಿಲ್ಲೆಯ ಒಂದು ಪಟ್ಟಣ; ಅದೇ ಹೆಸರಿನ ತಾಲ್ಲೂಕಿನ ಕೇಂದ್ರ. ತೂಮಕೂರಿನ ದಕ್ಷಿಣಕ್ಕೆ 22 ಮೈಲಿ ದೂರದಲ್ಲಿದೆ. ಬೆಂಗಳೂರು-ಹಾಸನ ರಸ್ತೆಯಲ್ಲಿ ಸಮುದ್ರಮಟ್ಟದಿಂದ 2,554' ಎತ್ತರದಲ್ಲಿದೆ. ಶಿವ ಇಲ್ಲಿಯ ಕಲ್ಲುಬಂಡೆಯ ಮೇಲೆ ನೃತ್ಯ (ಕುಣಿ) ಮಾಡಿದನೆಂದೂ ಆದ್ದರಿಂದ ಇದಕ್ಕೆ ಕುಣಿಗಲ್ಲೆಂಬ ಹೆಸರು ಬಂತೆಂದೂ ಇದನ್ನು ಕುರಿತ ಐತಿಹ್ಯವಿದೆ. ಆದರೆ ಶಾಸನಗಳಲ್ಲಿ ಇದರ ಹೆಸರನ್ನು ಕುಣಿಗಿಲ್ ಅಥವಾ ಕುಣಿಂಗಿಲ್ ಎಂದು ಹೇಳಲಾಗಿದೆ. ಶಿವಗಂಗೆಯಲ್ಲಿ ಹುಟ್ಟುವ ನಳಿನಿ. ನಾಗಿನಿ ಮತ್ತು ಕಮಲಾ ನದಿಗಳು ಈ ಸ್ಥಳದಲ್ಲಿ ಸಂಗಮವಾಗುವುವೆಂದು ಜನರ ನಂಬಿಕೆ. ನೃಗನೆಂಬ ಒಬ್ಬ ಚಕ್ರವರ್ತಿ ಇಲ್ಲಿ ಸ್ನಾನ ಮಾಡಿ ತನ್ನ ಕುಷ್ಠರೋಗವನ್ನು ಕಳೆದುಕೊಂಡನೆಂಬುದಾಗಿ ಸ್ಥಳಪುರಾಣ ಹೇಳುತ್ತದೆ. ಇಲ್ಲಿರುವ ಭಾರಿ ಕೆರೆಯನ್ನು ಅವನೇ ಕಟ್ಟಿಸಿದಂತೆ. ಅನಂತರ ಹಿಮಾಲಯದಿಂದ ಏಳು ಮಂದಿ ಲಿಪಿ-ಜೋಗಿಗಳು ಬಂದು ಕೆರೆಯ ಅಡಿಯಲ್ಲಿ ಹುದುಗಿದ್ದ ಐಶ್ವರ್ಯವನ್ನು ಕಾಯುತ್ತಿದ್ದ ಏಳು ಹೆಡೆಗಳ ಘಟಸರ್ಪವನ್ನು ಕೊಂದು ಆ ಐಶ್ವರ್ಯವನ್ನೆಲ್ಲ ಎತ್ತಿಕೊಂಡು ಹೋದರಂತೆ.
ಸಂಪೂರ್ಣ ತುಂಬಿದಾಗ ಸುಮಾರು 14ಮೈಲಿ ಸುತ್ತಳತೆಯುಳ್ಳದ್ದಾಗಿರುವುದೆಂದು ಹೇಳಲಾದ ಕುಣಿಗಲ್ ಕೆರೆಯೇ ಅಲ್ಲದೆ ಇಲ್ಲಿ ಒಂದು ಹಳೆಯ ಕೋಟೆಯೂ ಕೆಲವು ದೇವಾಲಯಗಳೂ ಇವೆ. ಹೊಯ್ಸಳರ ಕಾಲದಲ್ಲಿ ಕಟ್ಟಲಾದ ನರಸಿಂಹ ದೇವಾಲಯವನ್ನು ವಿಜಯನಗರ ಕಾಲದಲ್ಲಿ ಪುನರ್ನಿರ್ಮಿಸಲಾಯಿತು. ಇದಕ್ಕೆ ನರಸಿಂಹ ದೇವಾಲಯವೆಂಬ ಹೆಸರಿರುವುದಾದರೂ ಇಲ್ಲಿರುವುದು ಜನಾರ್ದನ ಮೂರ್ತಿ. ಇದನ್ನು ಹುಲಿಯೂರುದುರ್ಗದಿಂದ ತರಲಾಯಿತಂತೆ. ದೇಗುಲದ ಮುಂಗಡೆಯಲ್ಲಿ ಚಕ್ರ ಶಂಖ ಕಲಶಪಾಣಿಯಾದ ಚತುರ್ಭುಜ ಗರುಡವಿಗ್ರಹವಿದೆ. ಇಂಥ ಗುರುಡವಿಗ್ರಹ ವಿರಳವಾದ್ದು. ಸೋಮೇಶ್ವರ ದೇವಸ್ಥಾನವೂ ವಿಸ್ತಾರವಾಗಿದೆ. ಇಲ್ಲಿರುವ ಲಿಂಗ ಸ್ವಯಂಉದ್ಭವವಾದ್ದೆಂದು ನಂಬಿಕೆಯಿದೆ. ಪದ್ಮೇಶ್ವರ ದೇವಾಲಯ ಹೊಯ್ಸಳ ಶೈಲಿಯದು. ಇದಕ್ಕೆ ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳಿವೆ. ಇನ್ನೊಂದು ದೇವಸ್ಥಾನ ವೆಂಕಟರಮಣನದು. ಇಲ್ಲಿ ಸಾಲಾಗಿರುವ ಮೂರು ಸನ್ನಿಧಿಗಳಲ್ಲಿ ಮಧ್ಯದ್ದರಲ್ಲಿ ಸು. 3 1/2 ಎತ್ತರದ ಶ್ರೀನಿವಾಸನ ಭವ್ಯ ವಿಗ್ರಹವಿದೆ. ಶಿವರಾಮೇಶ್ವರ ದೇಗುಲ ಉಳಿದ ಎಲ್ಲಕ್ಕಿಂತ ಈಚಿನದು. ಇಲ್ಲಿರುವ ಮಹಿಷಸುರ ಮರ್ದಿನಿಯ ವಿಗ್ರಹ ಗಂಗಶೈಲಿಯದು. ಕೊಟ್ಟಗೆರೆಯಲ್ಲಿ ಶಿಥಿಲವಾಗಿದ್ದ ದೇವಸ್ಥಾನದಿಂದ ಈ ಮೂರ್ತಿಯನ್ನು ತರಲಾಯಿತೆಂದು ಹೇಳಲಾಗಿದೆ.
ಕುಣಿಗಲಿನಲ್ಲಿ ಅಖಿಲಭಾರತ ಖ್ಯಾತಿಯ ಕುದುರೆಕಾವಲಿದೆ (ಸ್ಟಡ್-ಫಾರ್ಮ್). ಬೆಂಗಳೂರಿನ ಕಡೆಯಿಂದ ಕುಣಿಗಲಿಗೆ ಪ್ರವೇಶಿಸುವಾಗಲೇ ಕಾಣಬರುವ ಈ ಕಾವಲು ಭಾರತದಲ್ಲಿ ಅತ್ಯಂತ ಹಳೆಯದು ಮತ್ತು ಶ್ರೇಷ್ಠವಾದ್ದು. ಮೈಸೂರು ಸೈನ್ಯಕ್ಕೆ ಅಗತ್ಯವಾದ ಕುದುರೆ ತಳಿಗಳನ್ನು ಬೆಳೆಸುವ ಉದ್ದೇಶದಿಂದ 170 ವರ್ಷಗಳ ಹಿಂದೆ ಇದನ್ನು ಸ್ಥಾಪಿಸಲಾಯಿತು. 1886ರಿಂದೀಚಿಗೆ ಜೂಜಿನ ಕುದುರೆಗಳ ತಳಿಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ವಿದೇಶೀ ತಳಿಗಳಿಗೆ ಕಡಿಮೆಯಿಲ್ಲದ ಶ್ರೇಷ್ಠ ದರ್ಜೆಯ ತಳಿಗಳು ಇಲ್ಲಿವೆ. ರೇಷ್ಮೆಯ ಹುಳುಗಳು ಸಾಕಣೆ ಇಲ್ಲಿಯ ಇನ್ನೊಂದು ಉದ್ಯಮ. ಇಲ್ಲಿಯ ರೇಷ್ಮೆ ಕ್ಷೇತ್ರದಲ್ಲಿ ಸಂಶೋಧನೆಯ ಕಾರ್ಯ ನಡೆಯುತ್ತಿದೆ. ಕುಣಿಗಲ್ ಕೆರೆಯಿಂದ ಬತ್ತದ ಗದ್ದೆಗಳಿಗೂ ಅಡಕೆ ತೆಂಗು ತೋಟಗಳಿಗೂ ನೀರಾವರಿ ಸೌಲಭ್ಯ ಒದಗಿದೆ.
ವೀರಶೈವ ಮತ್ತು ಅದ್ವೈತ ಮತಗಳಿಗೆ ಸಂಬಂಧಿಸಿದ ಅನೇಕ ಕನ್ನಡ-ಸಂಸ್ಕøತ ಪ್ರಾಚೀನ ಗ್ರಂಥಗಳು ಇಲ್ಲಿ ದೊರಕಿವೆ. ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುಪ್ಪೆ ಪಾಳ್ಯದ ಸು. 785ರ ದಾಖಲೆಯೊಂದರಲ್ಲಿ ಈ ಸ್ಥಳದ ಉಲ್ಲೇಖವಿದೆ. ಈಗಿನ ಕುಣಿಗಲ್ ಪಟ್ಟಣವಿರುವ ಪ್ರದೇಶವಾದ ಕುಣಿಗಲ್ ನಾಡನ್ನು ಗಂಗ ದೊರೆ ಶಿವರಾಮ ಆಳುತ್ತಿದ್ದನೆಂದು ಅದರಲ್ಲಿ ಹೇಳಲಾಗಿದೆ. ಇಲ್ಲಿಯ ಕೋಟೆಯನ್ನು ಸ್ಥಾಪಿಸಿದವನು (1290) ವೀರ ಕಂಬಲರಾಯ. ಹೊಯ್ಸಳರ ಕಾಲದಲ್ಲಿ ಇದು ಒಂದು ಅಗ್ರಹಾರವಾಗಿದ್ದಿರಬಹುದು. ಮಾಗಡಿ ಒಡೆಯನ ಅಧೀನಕ್ಕೆ ಬಂದಾಗ ಪಟ್ಟಣ ಬೆಳೆಯಿತು. ಕೋಟೆಯೂ ವಿಸ್ತಾರಗೊಂಡಿತು.
ಕುಣಿಗಲ್ ಪುರಸಭೆಯ ಸ್ಥಾಪನೆಯಾದ್ದು 1918ರಲ್ಲಿ. 1951ರ ಪುರಸಭಾ ಕಾಯಿದೆಯ ಪ್ರಕಾರ 1957ರಲ್ಲಿ ಇದನ್ನು ಪುನರ್ರಚಿಸಲಾಯಿತು. ಪುರಸಭೆಯ ಅಧಿಕಾರವ್ಯಾಪ್ತಿ 2 1/2 ಚ.ಮೈ. ಪಟ್ಟಣದ ಜನಸಂಖ್ಯೆ 30,291 (2001). 1961ರಲ್ಲಿ ಇಲ್ಲಿ 1943 ಮನೆಗಳಿದ್ದುವು ಪುರಸಭೆಯ ಪ್ರದೇಶವನ್ನು ಐದು ವಿಭಾಗಗಳಾಗಿ ಮಾಡಿದೆ. ಐದು ಕೊಳವೆ ಬಾವಿಗಳಿಂದ ಪಟ್ಟಣಕ್ಕೆ ಸುರಕ್ಷಿತ ನೀರು ಸರಬರಾಜು ಮಾಡಲಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳೂ ಆಸ್ಪತ್ರೆಗಳೂ ಉಂಟು. ಇಲ್ಲಿಂದ ತುಮಕೂರು, ಮಾಗಡಿ, ಬೆಂಗಳೂರು ಮುಂತಾದ ಕಡೆಗಳಿಗೆ ರಸ್ತೆಗಳಿವೆ.
ಕುಣಿಗಲ್ ತಾಲ್ಲೂಕಿನ ವಿಸ್ತೀರ್ಣ 380.5 ಚ.ಮೈ. ಜನಸಂಖ್ಯೆ 2,35,182 (2001) ಕುಣಿಗಲ್, ಯೆಡೆಯೂರು, ಅಮೃತೂರು, ಹುಲಿಯೂರುದುರ್ಗ ಮತ್ತು ಕೋಠಿಗೆರೆ ಹೋಬಳಿಗಳಿಂದ ಕೂಡಿದ ಈ ತಾಲ್ಲೂಕಿನಲ್ಲಿ 290 ಗ್ರಾಮಗಳಿವೆ. ಅನೇಕ ದೊಡ್ಡ ಕೆರೆಗಳಿರುವ ಈ ತಾಲ್ಲೂಕಿನಲ್ಲಿ ಬೇಸಾಯ ಮುಖ್ಯವೃತ್ತಿ. ಬತ್ತ, ಕಬ್ಬು, ರಾಗಿ, ಹುರುಳಿ, ಜೋಳ, ತೆಂಗು, ಎಳ್ಳು ನೆಲಗಡಲೆ ಮತ್ತು ಹರಳು ಮುಖ್ಯಬೆಳೆಗಳು ರೇಷ್ಮೆ ವ್ಯವಸಾಯವೂ ನಡೆಯುತ್ತದೆ.
ಈ ತಾಲ್ಲೂಕಿನ ಎಡೆಯೂರಿನ ತೋಂಟದ ಸಿದ್ದಲಿಂಗೇಶ್ವರ ದೇವಾಲಯದ ಮಹಾದ್ವಾರಗಳಲ್ಲಿ ಅಷ್ಟದಿಕ್ಪಾಲಕರ ಚಿತ್ರಗಳಿವೆ. ಮುಖ-ಮಂಟಪಗಳಲ್ಲಿಯೂ ಪಾತಾಳಾಂಕಣದಲ್ಲಿಯೂ ವೀರಶೈವಗುರುಗಳ ಜೀವನಕ್ಕೆ ಸಂಬಂಧಿಸಿದ ಸಂಗತಿಗಳೂ ಶಿವನ ಇಪ್ಪತ್ತೈದು ಲೀಲೆಗಳೂ ಚಿತ್ರಿತವಾಗಿದೆ.
(ಎಂ.ಜಿ.ಕೆ.)