ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷಿ ಉಪಕರಣಗಳು

ಕೃಷಿ ಉಪಕರಣಗಳು

ಒಂದೊಂದು ಸಾಗುವಳಿ ಕೆಲಸಕ್ಕೂ ವಿವಿಧ ಉಪಕರಣಗಳು ಬೇಕು. ಭೂಮಿಯನ್ನು ಉಳಲು ಗುದ್ದಲಿ, ಪಿಕಾಸೆ (ಪಿಕ್ಯಾಕ್ಸ್), ಸನಿಕೆ (ಸಲಾಕಿ), ನೇಗಿಲು, ರಂಟೆ, ಹಲಬೆ, ಕುಂಟೆ, ಕೊರಡುಗಳು ಬೇಕು, ಬಿತ್ತಲಿಕ್ಕೆ ನೇಗಿಲು, ಸಡ್ಡೆ, ಕೂರಿಗೆಗಳು ಬೇಕು. ಸಾಗುವಳಿ ಮಾಡಲು ಕೈಗುದ್ದಲಿ, ಕುರ್ಚಿಗಿ, ವರವರಿ, ಎಡೆಕೂಟೆಗಳು ಬೇಕು. ನೀರೆತ್ತಿ ಉಣ್ಣಿಸಲು ಏತ, ಕಪ್ಪಲಿ (ಕಪಲೆ), ಸನಿಕೆಗಳು ಬೇಕು. ಕೊಯಿಲು ಮಾಡಿ ಸುಗ್ಗಿ ಮಾಡಲು ಕುಡಗೋಲು, ಮಚ್ಚು, ಬಡಿಗೆ, ಬಡಿಮಣಿ, ಕಲ್ಲಿನ ರೂಲು (ರೋಣಗಲ್ಲು), ಜಂತಗುಂಟೆ, ಗ್ವಾರಿ, ಮ್ಯಾಟ, ಬುಟ್ಟಿಗಳು (ಮಂಕರಿ) ಬೇಕು. ಸಾಗಾಟಕ್ಕೆ ಚಕ್ಕಡಿ ಬಂಡಿ ಬೇಕು. ಇವೆಲ್ಲ ಬಹುದಿನಗಳಿಂದ ರೈತರು ಉಪಯೋಗಿಸುತ್ತ ಬಂದ ಕೃಷಿ ಉಪಕರಣಗಳು, ಇವುಗಳಲ್ಲಿ ಬಹುದಿನಗಳಿಂದ ರೈತರು ಉಪಯೋಗಿಸುತ್ತ ಬಂದ ಕೃಷಿ ಉಪಕರಣಗಳು. ಇವುಗಳಲ್ಲಿ ಅನೇಕ ಉಪಕರಣಗಳ ಉಲ್ಲೇಖ ನಮ್ಮ ವೇದ, ಪುರಾಣ, ಪ್ರಾಚೀನ ಗ್ರಂಥಗಳಲ್ಲಿ ಬರುತ್ತದೆ. ನೇಗಿಲು ಬಲರಾಮನ ಆಯುಧ, ಚಕ್ರ (ಬಂಡಿಯ ಗಾಲಿ) ಕೃಷ್ಣನ ಆಯುಧ. ಭೂಮಿ, ಬೆಳೆ, ದೊರೆಯುವ ವಸ್ತುಗಳಿಗೆ ಅನುಗುಣವಾಗಿ ಈ ಉಪಕರಣಗಳಲ್ಲಿ ಅಲ್ಪಸ್ವಲ್ಪ ಮಾರ್ಪಾಡಾಗಿದ್ದರೂ ಸಾವಿರಾರು ವರ್ಷಗಳ ಅವಧಿಯಲ್ಲಿಯೂ ಭಾರತದಲ್ಲಿ ಗಮನಾರ್ಹ ಬದಲಾವಣೆಯಾದುದು ಕಂಡಬರುವುದಿಲ್ಲ. ಕಾರಣವಿಷ್ಟೆ-ಕೃಷಿಯೂ ಮಾರ್ಪಡಲಿಲ್ಲ. ಕೃಷಿಯಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಹೀಗಲ್ಲ. ಸರ್ವಾಂಗೀಣ ಪ್ರಗತಿ ಕಂಡುಬರುತ್ತದೆ.

ಸಾಂಪ್ರದಾಯಿಕ ಕೃಷಿ ಉಪಕರಣಗಳ ಅಸಮರ್ಥತೆ : ಕೃಷಿ ಉತ್ಪಾದನೆ ಮೊದಲು ಕೃಷಿಕನ ಹೊಟ್ಟೆಹೊರೆಯುವಿಕೆಗೆ ಮಾತ್ರ ಸೀಮಿತವಾಗಿತ್ತು. ಆಗ ಹೆಚ್ಚು ನೆಲದಲ್ಲಿ ಕೃಷಿಕ ಕೃಷಿ ಮಾಡುತ್ತಿರಲಿಲ್ಲ. ರಟ್ಟೆ ಮುರಿದು ಹೊಟ್ಟೆ ತುಂಬಿಕೊಳ್ಳುತ್ತಿದ್ದ. ಪ್ರಾರಂಭದಲ್ಲಿಯಂತೂ ಮೊನೆಯಾದ ಕಲ್ಲು, ಚೂಪಾದ ಕಟ್ಟಿಗೆ, ದನಗಳ ಕೊಂಬುಗಳಿಂದ ನೆಲ ಕೊಚ್ಚಿ ಬೀಜ ಹಾಕುತ್ತಿದ್ದ. ಮುಂದೆ ಬರಬರುತ್ತ ಕೊಂಕುಕಟ್ಟಿಗೆ ಅವನ ಕೃಷಿ ಆಯುಧವಾಯಿತು. ಇದೇ ನೇಗಿಲಿಗೆ ಮೂಲಾಧಾರ. ಕ್ರಮೇಣ ಕಬ್ಬಿಣವನ್ನು ಕೃಷಿ ಉಪಕರಣಗಳಿಗೆ ಬಳಸುವುದು ಪ್ರಾರಂಭವಾಯ್ತು. ಮಾನವಸಾಮಥ್ರ್ಯದೊಂದಿಗೆ ಪಶುಸಾಮಥ್ರ್ಯದ ಉಪಯೋಗ ಕೃಷಿ ಸಾಗುವಳಿಯಲ್ಲಿ ಅನಿವಾರ್ಯವಾಯಿತು. ಕೈ ಉಪಕರಣಗಳೊಂದಿಗೆ ಪಶುಚಾಲಿತ ಉಪಕರಣಗಳೂ ಬಳಕೆಯಲ್ಲಿ ಬಂದವು. ನಮ್ಮ ಸದ್ಯದ ಹಲವಾರು ಉಪಕರಣಗಳು ನಮ್ಮ ಕೃಷಿಯಷ್ಟೇ ಹಳೆಯದಾಗಿವೆ; ಅಸಮರ್ಥವಾಗಿವೆ. ರಂಟೆ, ಕುಂಟೆ, ಹಲಬೆ, ಕೊರಡು, ಕೂರಿಗೆ, ಕಪ್ಪಲಿ, ಎಡೆಕುಂಟೆ, ಜಂತಕುಂಟೆ, ಕುರ್ಚಿಗಿ, ಕುಡಗೋಲು, ಸಲಿಕೆ ಗುದ್ದಲಿ, ಚಕ್ಕಡಿ, ಒಕ್ಕಣಿ ಉಪಕರಣಗಳು ಅನಾದಿಯಿಂದ ಇಂದಿನ ವರೆಗೆ ಹೆಚ್ಚು ಬದಲಾವಣೆ ಹೊಂದಿಲ್ಲ. ಹೀಗಾಗಿ ಇಂದು ಉತ್ಪಾದನೆಯ ವೆಚ್ಚ ಹೆಚ್ಚಿದೆ. ಅಧಿಕ ಇಳುವರಿ ಪಡೆಯುವುದು ಕಠಿನಸಾಧ್ಯ. ಉತ್ಪಾದನೆಯಲ್ಲಿ ಕ್ರಾಂತಿ ಸುಧಾರಿಸಿದ ಉಪಕರಣಗಳನ್ನು ಅವಲಂಬಿಸಿದೆ.

ಬದಲಾದ ಕೃಷಿ ಹಾಗೂ ಕೃಷಿ ಉಪಕರಣಗಳು : ಇಂದು ಕೃಷಿಯ ಮುಖ ಬದಲಾಗಿದೆ. ಕೃಷಿ ಉತ್ಪಾದನೆ ಹೆಚ್ಚಿದೆ. ಪ್ರತಿ ಎಕರೆ ಭೂಮಿಯ ಮತ್ತು ಪ್ರತಿಯೊಬ್ಬ ಕೃಷಿಕನ ಉತ್ಪಾದನೆಯ ಸಾಮಥ್ರ್ಯ ಹೆಚ್ಚಿದೆ. ಕೇವಲ ಮಳೆಯನ್ನೇ ಅವಲಂಬಿಸಿ ವರ್ಷದಲ್ಲಿ ಒಂದೇ ಬೆಳೆ ಬೆಳೆಸುತ್ತಿದ್ದ ರೈತ ಇಂದು ನೀರಾವರಿಯ ಉಪಯೋಗ ಮಾಡಿಕೊಂಡು ಬೆಳೆಯುತ್ತಿರುವ ಕೃಷಿವಿe್ಞÁನ ತಾಂತ್ರಿಕತೆಗಳ ಪ್ರಯೋಜನ ಪಡೆದು ವರ್ಷದಲ್ಲಿ ಎರಡು ಮೂರು ನಾಲ್ಕು ಬೆಳೆಗಳನ್ನು ಬೆಳೆಸಲು ಶಕ್ತನಾಗಿದ್ದಾನೆ. ಈ ಬದಲಾವಣೆಯಲ್ಲಿ ಕೃಷಿ ಉಪಕರಣಗಳ ಬದಲಾವಣೆಯೂ ಸೇರಿದೆ. ನೀರೆತ್ತುವ ಏತ ಕಪಿಲೆಗಳು ಮಾಯವಾಗತೊಡಗಿವೆ. ಪಂಪ್ ಸೆಟ್‍ಗಳ ಬಳಕೆ ಹೆಚ್ಚಿದೆ. ನೀರುಣ್ಣಿಸಲು ಭೂಮಿಯನ್ನು ಸಿದ್ಧಪಡಿಸಲು ಹಲವಾರು ನೂತನ ಉಪಕರಣಗಳು ಬಳಕೆಯಲ್ಲಿ ಬಂದಿವೆ. ಬಹುಬೇಗ ಭೂಮಿಯನ್ನು ಉತ್ತಿ ಬಿತ್ತಿ ಸಾಗುವಳಿ ಮಾಡುವುದಕ್ಕೆ ಶಕ್ತವಾಗುವ ರೀತಿಯಲ್ಲಿ ಮೊದಲಿನ ನೇಗಿಲು, ಹಲಬೆ, ಕುಂಟೆ, ಕೂರಿಗೆ, ಎಡೆಕುಂಟೆಗಳಲ್ಲಿ ಸುಧಾರಣೆಗಳಲ್ಲದೆ ಹಲವು ಹೊಸ ಉಪಕರಣಗಳೂ ತಲೆದೋರಿವೆ. ಅಧಿಕ ಬೆಳೆ ಬರಬೇಕಾಗಿದ್ದಲ್ಲಿ ಹೆಚ್ಚು ಇಳುವರಿ ಕೊಡುವ ತಳಿಗಳನ್ನೇ ಬಿತ್ತನೆ ಮಾಡಬೇಕು. ಮೂಲಗೊಬ್ಬರದ ಜೊತೆಗೆ ಮೇಲುಗೊಬ್ಬರಗಳನ್ನೂ ಕೊಡಬೇಕಾಗುವುದು. ಗೊಬ್ಬರಗಳನ್ನು ಕೈಯಿಂದ ಚಲ್ಲುವುದು ಬೆಳೆಗಳ ಸರಿಯಾದ ಬೆಳವಣಿಗೆಗೆ ಸಹಕಾರಿಯಾಗದು. ಗೊಬ್ಬರ ಪೋಲಾಗುವುದನ್ನು ತಪ್ಪಿಸಿ ಮಿತವ್ಯಯ ಸಾಧಿಸಲು ಜಮೀನಿನಲ್ಲಿ ಆಳದಲ್ಲಿ ಬೆಳೆಗಳ ಬೇರುಗಳ ಭಾಗದಲ್ಲಿಯೇ ಗೊಬ್ಬರಗಳು ಬೀಳುವಂತೆ ಮಾಡುವುದನ್ನು ಆಧುನಿಕ ರೈತರು ಮನಗಂಡಿದ್ದಾರೆ. ಈ ಕಾರ್ಯಕ್ಕೆ ಕೆಲವು ಉಪಕರಣಗಳು ಅವರ ನೆರವಿಗೆ ಬಂದಿವೆ. ಹಲವಾರು ಕಾರಣಗಳಿಂದ ಕೀಟ ಹಾಗೂ ರೋಗ ರುಜಿನಗಳ ಬಾಧೆ ಬೆಳೆಗಳಿಗೆ ಹೆಚ್ಚಿದೆ. ಸರಿಯಾದ ಔಷಧಿಗಳನ್ನು ಬಳಸಿ ಬೆಳೆಗಳನ್ನು ರಕ್ಷಿಸಿಕೊಳ್ಳದೆ ನಿರ್ವಾಹಣೆ ಇಲ್ಲದಾಗಿದೆ. ಈ ಔಷಧಿಗಳು ಪುಡಿ ರೂಪದಲ್ಲಿರಬಹುದು; ಇಲ್ಲವೆ ಪ್ರವಾಸಿ ರೂಪದಲ್ಲಿರಬಹುದು. ಈ ಕಾರ್ಯಗಳಿಗೆ ಉಪಕರಣಗಳು ಬೇಕಾಗುತ್ತವೆ. ಇನ್ನು ಕೊಯ್ಲು ಒಕ್ಕಣೆ ವಿಚಾರ. ಅಕಾಲದಲ್ಲಿ ಇವನ್ನು ಮಾಡಬೇಕಾಗಿ ಬಂದಿದೆ. ಈ ಮೊದಲು ಸುಗ್ಗಿಗೊಂದು ನಿರ್ದಿಷ್ಟ ಕಾಲವಿತ್ತು. ಅದು ಹಿಂದಾಗುತ್ತ ನಡೆದಿದೆ. ಮಳೆಗಾಲದ ಮಧ್ಯದಲ್ಲಿ ಅನೇಕ ಬೆಳೆಗಳ ಕೊಯ್ಲು ಒಕ್ಕಣೆ ಇಂದು ನಡೆಯುತ್ತಿವೆ. ಅಂತೂ ಕೃಷಿಯಲ್ಲಾದ ಈ ಭಾರಿ ಬದಲಾವಣೆ ಕೃಷಿ ಉಪಕರಣಗಳಲ್ಲಿಯೂ ತಲೆದೋರಿದೆ. ಈ ಬದಲಾವಣೆಯನ್ನು ಎರಡು ವಿಧಗಳಲ್ಲಿ ಕಾಣಬಹುದು. ಮೊದಲನೆಯದು ಸಾಂಪ್ರದಾಯಿಕ ಉಪಕರಣಗಳಲ್ಲಿ ಆದ ಮಾರ್ಪಾಡು ಇಲ್ಲವೆ ಸುಧಾರಣೆ; ಎರಡನೆಯದು ಹಲಕೆಲವು ಆಧುನಿಕ ಉಪಕರಣಗಳ ಪ್ರವೇಶ. ಮೊದಲಿನ ಗುಂಪಿಗೆ ಸೇರಿದ ಉಪಕರಣಗಳನ್ನು ಹೆಚ್ಚಾಗಿ ಮಾನವ ಸಾಮಥ್ರ್ಯ ಹಾಗೂ ಪಶು ಸಾಮಥ್ರ್ಯಗಳಿಂದಲೇ ನಿರ್ವಹಿಸಬಹುದಾದರೆ ಎರಡನೆಯ ಗುಂಪಿಗೆ ಸೇರಿದ ಕೆಲವು ಯಂತ್ರ ಸಾಮಥ್ರ್ಯದಿಂದ ನಡೆಯುತ್ತವೆ.

ಸುಧಾರಿತ ಉಪಕರಣಗಳು : ದೇಶೀಯ ಉಪಕರಣಗಳಲ್ಲಿ ಆದ ಹಲಕೆಲವು ಸುಧಾರಣೆಗಳು ತೀರ ಅಲ್ಪ. ಹೊಸದಾಗಿ ಬಳಕೆಯಲ್ಲಿ ಬಂದ ಉಪಕರಣಗಳೇ ಬಹಳಷ್ಟನ್ನು ಹಳ್ಳಿಯ ಆಯಗಾರರಾದ ಬಡಿಗ ಕಮ್ಮಾರರೇ ಸಿದ್ಧಪಡಿಸಲು ಸಾಧ್ಯವಿದೆ. ಹರಿಮುರಿ ಆದಲ್ಲಿ ನಿರಾಯಾಸವಾಗಿ ಹಳ್ಳಿಗಳಲ್ಲಿಯೇ ದುರಸ್ತಿ ಮಾಡಿಕೊಳ್ಳಬಹುದು. ಕೆಲವು ಸುಧಾರಿತ ಉಪಕರಣಗಳನ್ನು ಇಲ್ಲಿ ಉಲ್ಲೇಖಿಸಿದೆ : ಉಳಲು ಕಬ್ಬಿಣನೇಗಿಲು, ಹೆಂಟೆಯೊಡೆಯಲು ನಾರ್ವೇಜಿಯನ್ ಹ್ಯಾರೋ, ಸಾಲು ಬಿಡಲು ಮಣ್ಣೇರಿಸಲು ಎರಡು ರೆಕ್ಕೆಗಳ ರಂಟೆ (ರಿಡ್ಜರ್), ಮಣ್ಣೇರಿಸಲು ಕೊಪ್ಪರಿಗೆ (ಅಮೆರಿಕನ್ ಲೆವೆಲರ್), ನೆಲ ಪೊಳ್ಳು ಮಾಡಲು ಕಬ್ಬಿಣ ತಾಳಿನ ಗುರ್ರಾ, ನೆಲ ಕೊಚ್ಚಲು ತವೆಗುಂಟೆ (ಡಿಸ್ಕ್‍ಹ್ಯಾರೋ), ಬೀಜ ಹಾಗೂ ಗೊಬ್ಬರ ಏಕಕಾಲದಲ್ಲಿ ಬಿತ್ತಲು ಬೀಜಗೊಬ್ಬರ ಕೂರಿಗೆ (ಸೀಡ್ ಕಮ್ ಫರ್ಟಿಲೈಸರ್ ಡ್ರಿಲ್), ಕೈಯಿಂದ ತಿರುವಲು ವ್ಯವಸ್ಥೆಯಿರುವ ಯಾಂತ್ರಿಕ ಕೂರಿಗೆ(ಹ್ಯಾಂಡ್ ಆಪರೇಟೆಡ್ ಸೀಡ್ ಡ್ರಿಲ್), ಮೇಲು ಗೊಬ್ಬರ ಕೊಡಲು ಯೋಗ್ಯವಾಗಿರುವ ಗೊಬ್ಬರ ಕೂರಿಗೆ, ವಿವಿಧ ಆಕಾರದ ತಾಳುಗಳುಳ್ಳ ಕಲ್ಟಿವೇಟರ್‍ಗಳು, ಬತ್ತದ ಬೆಳೆಯಲ್ಲಿ ಕಳೆ ಕಸಿ ಕಿತ್ತುವ ವೀಡರ್‍ಗಳು, ಒಕ್ಕಣೆ ಉಪಕರಣಗಳು (ರೋಣಗಲ್ಲು, ಗೋದಿ ತುಳಿಸುವ ಉಪಕರಣ, ಧಾನ್ಯ ಒಕ್ಕಣೆ ಯಂತ್ರಗಳು, ಅನಿಲ ಚಕ್ರ), ಆಲೂಗೆಡ್ಡೆ ಅಗೆಯಲು ಡಿಗ್ಗರ್, ಮೇವು ಕತ್ತರಿಸಲು ಚಕ್ರಗತ್ತರಿ, ನೀರಾವರಿಗೆ ಭೂಮಿ ಸಿದ್ದಪಡಿಸುವ ಉಪಕರಣಗಳು [ಭೂಮಿ ಸಮಗೊಳಿಸುವ ತೇಲ್ಗುಂಟೆ, ಸಾಲು ಬಿಡುವ ವಿ ಡಿಚ್ಚರ್, ದಿನ್ನೆ ನಿರ್ಮಿಸುವ ಚಟ್ಟು (ಬಂಡ್ ಫಾರ್ಮರ್), ಮಣ್ಣೆಳೆಸುವ ತಟ್ಟೆಗಳು (ಲೆವಲ್ಲರ್‍ಗಳು)], ಹುಡಿ ಎರಚಲು ದೂಳುಕೋವಿ (ಡಸ್ಟ್‍ಗನ್ನುಗಳ) ಸಿಂಪಡಿಕೆಗಾಗಿ ಸಿಂಚಕಗಳು (ಸ್ಟ್ರೇಯರುಗಳು), ತೋಟಗಾರಿಕೆಯ ಸುಧಾರಿತ ಉಪಕರಣಗಳು [ಪಿಕಾಸಿ, ಕ್ರೋಬಾರ್, ಮಮಟೆ, ಶಾವೆಲ್, ಡಿಗ್ಗಿಂಗ್ ಫೋರ್ಕ್, ಡಿಬ್ಲರ್ ಟ್ರೊವಲ್, ಸ್ಟೀಲ್ ಹ್ಯಾಂಡ್ ಬ್ರೂಮ್, ಡಬಲ್ ಹೋ, ವರವರಿ, ಹ್ಯಾಂಡ್ ಕಲ್ಟಿವೇಟರ್, ಗಾರ್ಡನ್ ಫೋರ್ಕ್, ಪಲ್ವರೈಸರ್, ಗಾರ್ಡನ್ ರೇಕ್, ಹೆಡ್ಜ್‍ಕಟರ್, ಬಿಲ್ ಹುಕ್ (ಕಂದಲಿ, ಮಚ್ಚು), ಕೊಡಲಿ, ಸಿಕೇಚಿಯರ್, ಫ್ರೂನಿಂಗ್ ನೈಫ್, ಬಡಿಂಗ್ ನೈಫ್, ಪ್ರೂನಿಂಗ್ ಸಾ (ಗರಗಸ), ವಾಟರ್ ಕ್ಯಾನ್, ವ್ಹೀಲ್ ಬಾರೋ, ಹ್ಯಾಂಡ್ ಸ್ಪೇಡ್ (ಕೈಗುದ್ದಲಿ)- ಈ ಉಪಕರಣಗಳು ಪಶು ಇಲ್ಲವೆ ಮಾನವ ಸಾಮಥ್ರ್ಯದಿಂದ ನಡೆಯುವಂಥವು).

ಯಂತ್ರಚಾಲಿತ ಕೃಷಿ ಉಪಕರಣಗಳು : ಇತ್ತೀಚೆಗೆ ಯಂತ್ರಚಾಲಿತ ಉಪಕರಣಗಳ ಬಳಕೆಯೂ ಜನಪ್ರಿಯವಾಗುತ್ತಿದೆ. ಅವುಗಳಲ್ಲಿ ಮುಖ್ಯವಾದವೆಂದರೆ; ಪಂಪ್ ಸೆಟ್ (ಎಣ್ಣೆ ಇಲ್ಲವೆ ವಿದ್ಯುತ್ ಚಾಲಿತ), ಪವರ್ ಡಸ್ಟರ್ (ಪೆಟ್ರೋಲ್ ಚಾಲಿತ), ಪವರ್ ಸ್ಪ್ರೇಯರ್ (ಪೆಟ್ರೋಲ್ ಚಾಲಿತ), ಟ್ರಾಕ್ಟರ್ ಎಳೆಯುವ ಕಬ್ಬಿಣ ನೇಗಿಲುಗಳು, ಡಿಸ್ಕ್ ಹ್ಯಾರೊ, ಸ್ಪ್ರಿಂಗ್ ಟೂಥ್ ಹ್ಯಾರೊ, ಮ್ಯಾನುಅರ್ ಸ್ಪ್ರೆಡರ್ ಹಾಗೂ ಮಿಕ್ಸರ್, ಸೀಡ್‍ಡ್ರಿಲ್, ಪ್ಲಾಂಟರ್, ಕಲ್ಟಿವೇಟರ್, ಪಿಕ್ಕರ್, ಹಸ್ಕರ್, ಶಿಲ್ಲರ್, ಕಂಬಾಯಿನ್, ಹಾರ್ಮೇವೇಸ್ಟರ್, ಬುಲ್‍ಡೋಝರ್.

ಟ್ರಾಕ್ಟರುಗಳು ಎರಡು ವಿಧ ಇವೆ : 1. ಚಕ್ರವುಳ್ಳವು. ಈ ಚಕ್ರಗಳು ಕಬ್ಬಿಣದವು ಇರಬಹುದು. ಇಲ್ಲವೆ ರಬ್ಬರಿನವು ಇರಬಹುದು. 2. ಕ್ರಾಲರ್ ಪ್ರರೂಪದ್ದು. ಇದಕ್ಕೆ ಕ್ಯಾಟರ್‍ಪಿಲ್ಲರ್ ಪ್ರರೂಪವೆಂದೂ ಹೆಸರಿದೆ. ಟ್ರಾಕ್ಟರುಗಳನ್ನು ದೊಡ್ಡವು ಹಾಗೂ ಚಿಕ್ಕವುಗಳೆಂದೂ ವಿಂಗಡಿಸಬಹುದು. ಚಕ್ರಗಳುಳ್ಳವು ಚಿಕ್ಕವು; ಕ್ಯಾಟರ್‍ಪಿಲ್ಲರ್ ಪ್ರರೂಪ ದೊಡ್ಡವು. ಹತ್ತು ಅಶ್ವಸಾಮರ್ಥ್ಯದಿಂದ ನೂರಾರು ಅಶ್ವಸಾಮಥ್ರ್ಯಗಳ ತನಕ ಟ್ರಾಕ್ಟರುಗಳು ಇರುತ್ತವೆ. ಹಿಂಬದಿಯಲ್ಲಿ ಓಡಾಡಿ ಮೇಲೆ ಕುಳಿತು ನಡೆಯಿಸುವ ಯಂತ್ರಚಾಲಿತ ಕೆಲ ಉಪಕರಣಗಳು ಇತ್ತೀಚೆಗೆ ಭರದಿಂದ ಜನಪ್ರಿಯವಾಗುತ್ತಿವೆ. ಅವೇ ಟಿಲ್ಲರ್‍ಗಳು, ಪವರ್ ಟಿಲ್ಲರ್‍ಗಳೆಂದೇ ಅವು ಪ್ರಸಿದ್ಧಿ ಪಡೆದಿವೆ. ಇವು 10 ಅಶ್ವಸಾಮಥ್ರ್ಯಗಳವು. ಒಣ ನೆಲದಲ್ಲಿಯೂ ಕೆಸರಿನಲ್ಲಿಯೂ ಕೆಲಸ ಮಾಡುತ್ತವೆ. ನೆಲ ಪೊಳ್ಳು ಮಾಡಲು, ಮಣ್ಣು ಕೊಚ್ಚಲು, ಕೆಸರಗದ್ದೆ ಸಿದ್ಧಪಡಿಸಲು, ಬಿತ್ತನೆ ಮಾಡಲು, ಹುಡಿ ಹಾಕಲು, ಸಿಂಪಡಿಸಲು, ಅಂತರ ಬೇಸಾಯ ಸಾಗುವಳಿ ಮಾಡಲು, ನೀರೆತ್ತಲು, ಸಾಗಾಟಕ್ಕೆ ಹಿಂದೆ ಕಟ್ಟಿದ ಟ್ರೇಲರ್ ಎಳೆಯಲು ಇವುಗಳಿಂದ ಪ್ರಯೋಜನ ಉಂಟು. ಸಮನೆಲದಲ್ಲಿ ಅಲ್ಲದೆ ಬೆಟ್ಟಗಳ ಇಳಿಜಾರಿನಲ್ಲಿ ಇವು ಉಪಯೋಗಕ್ಕೆ ಬರುತ್ತವೆ. 3 ರಿಂದ 30 ಎಕರೆ ಹಿಡುವಳಿಯುಳ್ಳ ರೈತರು ಈ ಟಿಲ್ಲರ್‍ಗಳ ಪ್ರಯೋಜನ ಪಡೆಯಬಹುದಾಗಿದೆ. ಕೃಷಿ ಉಪಕರಣಗಳಿಗೆ ಸಾಮರ್ಥ್ಯದ ಮೂಲಗಳು ಮುಖ್ಯವಾಗಿ ಮೂರು - ಮನುಷ್ಯ, ಪಶು ಮತ್ತು ಯಂತ್ರ. ಯಂತ್ರಗಳಿಗೆ ಶಕ್ತಿ ಪೂರೈಕೆ ಮಾಡಲು ಬಳಸುವ ಇಂಧನಗಳು ಗ್ಯಾಸೊಲಿನ್, ಸೀಮೆಎಣ್ಣೆ, ಡೀಸೆಲ್, ಪೆಟ್ರೋಲ್.

ಆಧುನಿಕ ಕೃಷಿ ಉಪಕರಣಗಳಿಂದ ಲಾಭಗಳು : ಆಧುನಿಕ ಕೃಷಿ ಉಪಕರಣಗಳನ್ನು ಉಪಯೋಗಿಸುವುದರಿಂದ ಕಷ್ಟತರ ಕೃಷಿ ಸುಲಭವಾಗುತ್ತದೆ. ರೈತರಿಗೆ ಇದರಿಂದ ಹೆಚ್ಚು ವಿರಾಮ ದೊರೆತು ಸಾಮಾಜಿಕ ರಾಜಕೀಯ ಹಾಗೂ ಸಾಂಸ್ಕøತಿಕ ಕಾರ್ಯಗಳಲ್ಲಿ ಭಾಗವಹಿಸಲು ಬಿಡುವೇಳೆ ದೊರೆಯುವುದು. ಹೆಂಗಸರು ಮಕ್ಕಳಿಗೂ ಸಾಕಷ್ಟು ವಿರಾಮ ದೊರೆಯುವುದರಿಂದ ವಿದ್ಯೆ ಸಾಂಸ್ಕøತಿಕ ಚಟುವಟಿಕೆಗಳು ಮುಂತಾದವಲ್ಲಿ ಅವರು ಪ್ರಗತಿಗೊಳ್ಳಬಹುದು. ಆಳಿನ ಕೊರತೆಗೂ ಪರಿಹಾರ ದೊರೆಯುವುದು. ಯಂತ್ರೋಪಕರಣಗಳ ಬಳಕೆಯಿಂದ ನಿರುದ್ಯೋಗ ಹೆಚ್ಚಾಗುವುದೆಂದು ಸಾಮಾನ್ಯ ತಿಳಿವಳಿಕೆ. ಇದು ಸರಿಯಲ್ಲ. ಯಂತ್ರಗಳನ್ನು ಉಪಯೋಗಿಸಿದಾಗ ಸಾಂದ್ರ ಬೆಳೆ ಬೆಳೆಸಲು ಸಾಧ್ಯವಾಗುತ್ತದೆ. ಬಹುಬೆಳೆ ಯೋಜನೆ ಅನುಷ್ಠಾನಕ್ಕೆ ಸಾಧ್ಯವಿರುವೆಡೆ ತರಬಹುದು. ಆಗ ಅನೇಕರು ಕೃಷಿಯಲ್ಲಿ ತೊಡಗಬಹುದಾಗಿದೆ. ಅಲ್ಪ ಸಮಯದಲ್ಲಿ ಮಿತವ್ಯಯ ವೆಚ್ಚದಲ್ಲಿ ಅಧಿಕ ಉತ್ಪಾದನೆಯನ್ನು ಸಾಧಿಸಬಹುದು.

ಕೆಲವು ಸುಧಾರಿತ ಕೃಷಿ ಉಪಕರಣಗಳು : ಕೃಷಿ ಉಪಕರಣಗಳಲ್ಲಿ ಮುಖ್ಯವಾದ ಕೆಲವನ್ನು ಕುರಿತು ಇಲ್ಲಿ ಬರೆದಿದೆ.

ಕಬ್ಬಿಣ ನೇಗಿಲು: ಇದರಲ್ಲಿ ರೆಕ್ಕೆ (ಮೌಲ್ಡ್‍ಬೋರ್ಡ್) ಎಂಬ ಸಾಧನೆ ಇರುವುದರಿಂದ ಇದರಿಂದ ಉತ್ತಾಗ ಮಣ್ಣು ತಿರುವಿ ಬಿದ್ದು ಕಿತ್ತ ಕಳೆಕಸಗಳೆಲ್ಲ ಸರಿಯಾಗಿ ಮಣ್ಣಿನಲ್ಲಿ ಹೂತುಹೋಗುತ್ತವೆ. ಮರದ ನೇಗಿಲಿಗಿಂತಲೂ ಇದು ಆಳವಾಗಿ ನೆಲ ಉಳುತ್ತದಲ್ಲದೆ ಮಣ್ಣನ್ನು ಸರಿಯಾಗಿ ಪುಡಿ ಮಾಡುತ್ತದೆ; ಹೊರಳಿಸಿ ಹಾಕುತ್ತದೆ. ಇದು ಚೌಕೋನಾಕೃತಿಯ ಸಾಲು ಕೊರೆಯುವುದರಿಂದ ಮರದ ನೇಗಿಲಿನಂತೆ ಮಧ್ಯದಲ್ಲಿ ಉಳದ ನೆಲ ಉಳಿಯುವುದಿಲ್ಲ. ಇದು ಉಳಲಿಕ್ಕಲ್ಲದೆ ಸಾಲು ಬಿಡಲು ಮಣ್ಣೇರಿಸಲು ಹಸುರು ಗೊಬ್ಬರ ಮುಗ್ಗು ಹೊಡೆಯಲು ಸಹ ಉಪಯೋಗ ಬೀಳುವುದು. ಕಬ್ಬಿಣ ನೇಗಿಲುಗಳ ಚಿಕ್ಕ ದೊಡ್ಡ ಬಗೆ ಬಗೆಯ ಪ್ರಕಾರಗಳು ಪೇಟೆಯಲ್ಲಿ ಮಾರಾಟಕ್ಕೆ ದೊರೆಯುತ್ತವೆ. ಈ ಉಪಕರಣದಲ್ಲಿ ಆಗಾಗ ಬದಲು ಮಾಡಬೇಕಾದುದು ಗುಳವೊಂದೇ. ಅದಕ್ಕೂ ಹೆಚ್ಚಿನ ಬೆಲೆಯಿಲ್ಲ. ಬಿಚ್ಚಿ ಜೋಡಿಸುವುದೂ ಸುಲಭ.

ಮಣ್ಣೇರಿಸುವ ನೇಗಿಲು (ರಿಡ್ಜರ್): ಕಬ್ಬಿಣ ನೇಗಿಲಿಗೆ ಬಂದ ಕಡೆಗೆ ಮಾತ್ರ ರೆಕ್ಕೆಯಿದ್ದರೆ ಇದಕ್ಕೆ ಎರಡೂ ಕಡೆಗೆ ರೆಕ್ಕೆಗಳಿವೆ. ಸಾಲು ಬಿಡಲು ಹಾಗೂ ಮಣ್ಣೇರಿಸಲು ಬಲು ಉಪಯುಕ್ತ ಉಪಕರಣವಿದು.

ತವೆಗುಂಟೆ: ಇದರಲ್ಲಿ 8-10 ಉಕ್ಕಿನ ತವೆಗಳಿವೆ. ಇವು ಎರಡು ಗುಂಪುಗಳಲ್ಲಿ ವಿಂಗಡಿಸಲ್ಪಟ್ಟು ಪ್ರತಿ ಗುಂಪನ್ನು ಸನ್ನೆಯ ಸಹಾಯದಿಂದ ಬೇಕಾದ ಕೋನದಲ್ಲಿ ನಿಯಂತ್ರಿಸುವ ವ್ಯವಸ್ಥೆಯಿರುತ್ತದೆ. ಮೇಲ್ಗಡೆಯಲ್ಲಿ ಕೆಲಸಗಾರರಿಗೆ ಕೂರಲು ಆಸನದ ವ್ಯವಸ್ಥೆ ಕೂಡ ಉಂಟು. ಪ್ರತಿಯೊಂದು ಗುಂಪಿನಲ್ಲಿಯ ತವೆಗಳನ್ನು ಅಚ್ಚಿನ ನೆರವಿನಿಂದ ಜೋಡಿಸಲಾಗಿದೆ. ಒಂದು ಗುಂಪಿನ ತವೆಗಳು ಒಂದು ಬದಿಗೆ ಮುಖ ಮಾಡಿದ್ದರೆ ಇನ್ನೊಂದು ಗುಂಪಿನಲ್ಲಿಯ ತವೆಗಳು ಇನ್ನೊಂದು ಕಡೆಗೆ ಮುಖ ತಿರುವಿರುತ್ತವೆ. ತವೆಗಳು ಮೊಂಡಾದಲ್ಲಿ ಪುನಃ ಹರಿತ ಮಾಡಬಹುದು. ಈ ಉಪಕರಣ ನೆಲವನ್ನು ಕೊಚ್ಚುತ್ತದೆ. ಜಬ್ಬಲು ಬೆಳೆದು ಕಬ್ಬಿಣ ನೇಗಿಲು ಹಿಡಿಯದ ಭೂಮಿಯಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಬ್ಬಿಣ ನೇಗಿಲು ಉತ್ತ ಭೂಮಿಯಲ್ಲಿಯ ಹೆಂಟೆ ಒಡೆದು, ನೆಲ ಕೊಚ್ಚಲೂ ಇದನ್ನು ಉಪಯೋಗಿಸಬಹುದು.

ಬೀಜ-ಗೊಬ್ಬರ ಸಂಯುಕ್ತ ಕೂರಿಗೆ: ಇದರಲ್ಲಿ ಬೀಜ ಹಾಗೂ ಗೊಬ್ಬರಗಳನ್ನು ಏಕಕಾಲದಲ್ಲಿ ಬಿತ್ತುವ ವ್ಯವಸ್ಥೆ ಉಂಟು. ಎರಡು ಜೊತೆ ಸೆಡ್ಡಿಕೋಲು ಹಾಗೂ ಬಟ್ಟಲುಗಳು ಇವೆ. ಒಂದರಲ್ಲಿ ಒಬ್ಬ ಬೀಜ ಬಿತ್ತುವನು, ಅದೇ ಕಾಲಕ್ಕೆ ಇನ್ನೊಂದರಲ್ಲಿ ಇನ್ನೊಬ್ಬ ಗೊಬ್ಬರ ಹಾಕಬಹುದು. ಬೀಜದೊಂದಿಗೆ ಗೊಬ್ಬರ ಕೊಡಲು ಹಾಗೂ ಒಂದೆರಡು ಆಳಿನ ಶ್ರಮ ಉಳಿಸಲು ಇದು ಸಹಕಾರಿ. ಜೊತೆಗೆ ಗೊಬ್ಬರವು ನೇರವಾಗಿ ಮಣ್ಣಿಗೆ ಸೇರುವುದರಿಂದ, ಬೆಳೆಯ ಇಳುವರಿಯು ಅಧಿಕ.

ಕಲ್ಟಿವೇಟರ್‍ಗಳು: ಬಗೆಬಗೆಯ ತಾಳುಗಳುಳ್ಳ ಕಲ್ಟಿವೇಟರ್‍ಗಳು ಬಳಕೆಯಲ್ಲಿವೆ. ಅವುಗಳಲ್ಲಿ ಕೆಳಗಿನವು ಮುಖ್ಯ. ಟೇನ್ಡ್ ಕಲ್ಟಿವೇಟರ್, ಸ್ಪೈಕ್ ಟೂತ್ ಕಲ್ಟಿವೇಟರ್, ರಿಡ್ಜಿಂಗ್ ಅರೇಂಜ್‍ಮೆಂಟ್ ಕಲ್ಟಿವೇಟರ್. ಮೋಲ್ಡ್ ಬೋರ್ಡ್ ಅರೇಂಜ್‍ಮೆಂಟ್ ಕಲ್ಟಿವೇಟರ್. ಈ ಉಪಕರಣಗಳು ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸಲು ಹಾಗೂ ಎಡೆಹೊಡೆಯಲು ಉಪಯೋಗ ಬೀಳುತ್ತದೆ. ಸಾಲಿನ ನಡುವಣ ಅಂತರಗಳಿಗೆ ಅನುಗುಣವಾಗಿ ಇವನ್ನು ಚಿಕ್ಕವು ದೊಡ್ಡವು ಮಾಡಿಕೊಳ್ಳುವುದರ ಜೊತೆಗೆ ಕಡಿದು ಬಳಿದು ಮಾಡಿಕೊಂಡು ಜಮೀನಿನಲ್ಲಿ ಹೆಚ್ಚು ಕಡಿಮೆ ಆಳ ಇಳಿಸಲೂಬಹುದು, ತೇಲಿಸಲೂಬಹುದು. ಇವುಗಳಲ್ಲಿ ಕೆಲವು ಕೈ ಉಪಕರಣಗಳೂ ಇವೆ.

ಮೇಲುಗೊಬ್ಬರ ಕೂರಿಗೆ: ಬೆಲೆ ಒಂದೆರಡು ಅಡಿ ಎತ್ತರವಿರುವ ತನಕ ಈ ಉಪಕರಣಗಳಿಂದ ಸಾಲುಗಳಲ್ಲಿ ಮೇಲುಗೊಬ್ಬರ ಕೊಡಲು ಸಾಧ್ಯವಿದೆ. ಬೆಳೆಗಳಿಗೆ ಧಕ್ಕೆಯಾಗದಂತೆ ಸಾಲುಗಳ ಎರಡೂ ಮಗ್ಗಲು ಗೊಬ್ಬರ ಬೀಳುವುದು.

ಫ್ಲೋಟ್, ಭೂಮಿ ಸಮಗೊಳಿಸುವ ತೇಲ್ಗುಂಟೆ: ಇದೊಂದು ನೆಲಸಮಗೊಳಿಸುವ ಉಪಕರಣ. ನೀರುಣ್ಣಿಸಲು ಭೂಮಿಯನ್ನು ಸಿದ್ಧಪಡಿಸುವುದಕ್ಕೆ ಈ ಉಪಕರಣ ಸಹಾಯಕವಾಗುವುದು. ಇದು ಕಾಟಕೋನ ಚೌಕೋನಾಕೃತಿಯ ಕಟ್ಟಿಗೆ ಹಲಗೆಗಳಿಂದ ಮಾಡಿದ ತೀರ ಸಾದಾ ಉಪಕರಣ.

ವಿ ಡಿಚ್ಚರ್, ಸಾಲು ಬಿಡುವ ವಿ ಸಾಧನ : ಇದು ದಿಂಡು ನಿರ್ಮಿಸುವ ಉಪಕರಣ. ನೇಗಿಲಿನಿಂದ ಉತ್ತು ಮಣ್ಣನ್ನು ಪೊಳ್ಳು ಮಾಡಿದ ಮೇಲೆ ಇದರಿಂದ ಚಿಕ್ಕ ದೊಡ್ಡ ಸಾಲುಗಳನ್ನು ನಿರ್ಮಿಸಬಹುದು. ಬಾರ್ಡರ್ ಸ್ಟ್ರಿಪ್ ಹಾಗೂ ಕಾಂಟೂರ್ ಡಿಚ್ಚ್ ಪದ್ಧತಿಗಳಿಂದ ನೀರುಣ್ಣಿಸಲು ಭೂಮಿಯನ್ನು ಸಿದ್ದಪಡಿಸುವುದರಲ್ಲಿ ಇದು ಬಹುವಾಗಿ ಉಪಯೋಗ ಬೀಳುವುದು.

ಬಂಡ್‍ಫಾರ್ಮರ್, ಮಣ್ಣೇರಿಸುವ ಚಟ್ಟು : ದಿನ್ನೆ (ಒಡ್ಡು) ನಿರ್ಮಿಸಲು ಈ ಉಪಕರಣ ಉಪಯೋಗ ಬೀಳುವುದು. ಇದು ಮುಂಭಾಗದಲ್ಲಿ ವಿಶಾಲವಾಗಿದ್ದು. ಹಿಂಬದಿಯಲ್ಲಿ ಸಂಕುಚಿತವಾಗಿರುತ್ತದೆ. ಮುಂಬದಿಯಲ್ಲಿ ಸೇರಿದ ಮಣ್ಣು ಹಿಂಭಾಗದಲ್ಲಿ ಸೇರಿ ದಿನ್ನೆ ನಿರ್ಮಾಣವಾಗುವುದು. ಮಣ್ಣೆಳೆಸುವ ತಟ್ಟೆಗಳು: ಇವು ಮೂರು ತೆರನಾಗಿವೆ. ಮುಖ್ಯವಾದುದು ಅಮೆರಿಕನ್ ಲೆವೆಲರ್. ಇದಕ್ಕೆ ಬಕ್ ಸ್ಕ್ರೇಪರ್ ಎಂದೂ ಹೆಸರುಂಟು. ಇದು ಆನೆಯ ಕಿವಿಯಾಕಾರದ ಕಬ್ಬಿಣದ ಉಪಕರಣ. ಪೊಳ್ಳು ಮಾಡಿದೆ ಭೂಮಿಯಲ್ಲಿಯ ಮಣ್ಣನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಯ್ದು ತಗ್ಗು ಉಬ್ಬು ಸಮಗೊಳಿಸಲು ತೀರ ಸಹಕಾರಿ. ಇದಕ್ಕೆ ಚಿಕ್ಕ ಬುಲ್‍ಡೋಜûರ್ (ಮಾರಿಹಲುಬೆ) ಎಂಬುದು ಅನ್ವರ್ಥನಾಮ.

ಮಿಕ್ಕ ಮಣ್ಣೆಳೆಸುವ ತಟ್ಟೆಗಳು. ವಕ್ರ ತಟ್ಟೆ: 2 ದಪ್ಪ 2 ಅಗಲದ ಎರಡು ರಕ್ಕೆಯಾಕಾರದ ತಟ್ಟೆಗೆ ಹಲಗೆಗಳನ್ನು 160º ಕೋನದಲ್ಲಿ ಕೂಡಿಸಿದ್ದು ಅವುಗಳ ಮುಂಭಾಗದ ಅಂತರ 7 ಇರುತ್ತದೆ. ಹಲಗೆಗಳನ್ನು ಕೂಡಿಸಿದ ಮೂಲೆಯಲ್ಲಿ ಎತ್ತಲು ಅನುಕೂಲವಾಗಲೆಂದು ಒಂದು ಹಿಡಿಕೆ ಇರುತ್ತದೆ. ಎತ್ತರ ಸ್ಧಳದಲ್ಲಿಯ ಮಣ್ಣನ್ನು ತಗ್ಗಿನ ಕಡೆಗೆ ಸಾಗಿಸಲು ಇದು ಒಳ್ಳೆ ಉಪಕರಣ.

ಸರಳ ತಟ್ಟೆ: ಇದು ವಕ್ರವಾಗಿಲ್ಲ, ಸರಳವಾಗಿದೆ. ಒಂದೇ ಹಲಗೆಯಿಂದ ಇದನ್ನು ಮಾಡಿರುತ್ತಾರೆ. ಇದರ ಕಾರ್ಯ ಕೂಡ ಒಂದು ಸ್ಧಳದಿಂದ ಇನ್ನೊಂದು ಸ್ಧಳಕ್ಕೆ ಮಣ್ಣೆಳೆಸುವುದೇ ಆಗಿದೆ.

ತೋಟಗಾರಿಕೆಯ ಉಪಕರಣಗಳು (ಮುಟ್ಟುಗಳು): ಇವೆಲ್ಲ ಕೈ ಉಪಕರಣಗಳು, ಬಿತ್ತನೆಗೆ ಭೂಮಿಯನ್ನು ಸಿದ್ಧಮಾಡುವುದರಿಂದ ಮೊದಲು ಮಾಡಿಕೊಂಡು ಯಾವತ್ತೂ ತೋಟದ ಕಾರ್ಯಗಳನ್ನು ನಿರ್ವಹಿಸಲು ಈ ಉಪಕರಣಗಳಲ್ಲಿ ಒಂದಿಲ್ಲೊಂದು ಬೇಕಾಗುತ್ತದೆ.

ಚಕ್ರಗಳುಳ್ಳ ಟ್ರಾಕ್ಟರ್: ಪ್ರಾರಂಭದಲ್ಲಿ ಕಬ್ಬಿಣದ ಚಕ್ರಗಳಿದ್ದುವು. ಈಗ ರಬ್ಬರ್ ಟಯರಿನ ಚಕ್ರಗಳು ಬಳಕೆಯಲ್ಲಿ ಬಂದಿವೆ. ಇವು ವೇಗವಾಗಿ ಓಡಾಡಬಲ್ಲವು. ಉತ್ತುವುದು ಬಿತ್ತುವುದು ಬೆಳೆ ಸಂರಕ್ಷಣೆ ಮಾಡುವುದು ಪೋಷಿಸುವುದು ಮತ್ತು ಒಕ್ಕಣೆ ಮಾಡಿ ಸುಗ್ಗಿ ಮಾಡುವ ಎಲ್ಲ ವ್ಯವಸಾಯ ಕಾರ್ಯಗಳಿಗೂ ಇವು ಸಾಮಥ್ರ್ಯವನ್ನು ಒದಗಿಸುತ್ತವೆ.

ಕ್ರಾಲರ್ ಟ್ರಾಕ್ಟರುಗಳು: ಇವು ಭಾರವಾದ ಅತಿ ಹೆಚ್ಚು ಅಶ್ವಸಾಮಥ್ರ್ಯದ ಟ್ರಾಕ್ಟರುಗಳು. ಇವುಗಳಲ್ಲಿ ಗಾಲಿಗಳ ಬದಲು ಕಬ್ಬಿಣದ ಸರಪಳಿಗಳಿವೆ. ಹೆಚ್ಚಾಗಿ ಜಮೀನು ಸಮಗೊಳಿಸುವ ಕಾರ್ಯಕ್ಕೆ ಪ್ರಯೋಜನಕಾರಿಗಳಿವು.

ಭೂಮಿ ಸಿದ್ಧಪಡಿಸುವ ಹಾಗೂ ಬಿತ್ತನೆ ಮಾಡುವ ಯಾಂತ್ರಿಕ ಉಪಕರಣಗಳು. 1. ನಾಲ್ಕು ನೇಗಿಲು ಹಚ್ಚಿದ ಟ್ರಾಕ್ಟರ್ : ಇದಕ್ಕೆ ಹೈಡ್ರೋಲಿಕ್ ನಿಯಂತ್ರಣ ವ್ಯವಸ್ಥೆ ಉಂಟು. ಇದರಿಂದ ಭೂಮಿ 1 ಗಿಂತಲೂ ಹೆಚ್ಚು ಆಳವಾಗುತ್ತದೆ. 2. ಡಿಸ್ಕ್ ಹ್ಯಾರೋ ಹಚ್ಚಿದ ಟ್ರಾಕ್ಟರ್, 3. ಕೂರಿಗೆ ಜೋಡಿಸಿದ ಟ್ರಾಕ್ಟರ್ : ಇದರಲ್ಲಿ ಬಿತ್ತನೆ ಬೀಜ ಹಾಕುವ ಪೆಟ್ಟಿಗೆ ಹಾಗೂ ಸರಿಯಾದ ಅಂತರ ಹಾಗೂ ಆಳದಲ್ಲಿ ಬೀಜ ಬೀಳುವ ಹಂಚಿಕೆ ವಿಧಾನಗಳಿವೆ. ಎರಡು ಸಾಲು ನಾಲ್ಕು ಸಾಲು ಹಾಗೂ ಆರು ಸಾಲು ಒಮ್ಮೆಲೇ ಬಿತ್ತನೆ ಮಾಡುವ ಉಪಕರಣಗಳಿವೆ. ಬಿತ್ತಿದ ಬಿತ್ತನೆಯನ್ನು ಹಿಂದಿನಿಂದ ಮುಚ್ಚುವ ವ್ಯವಸ್ಥೆಯೂ ಉಂಟು.

ಗೊಬ್ಬರ ಹರಡುವ ಸಾಧನ: ಇದರ ಉಪಯೋಗದಿಂದ ಗೊಬ್ಬರ ಹರಡುವ ಕಾರ್ಯ ಎಲ್ಲೆಡೆಯಲ್ಲಿಯೂ ಸಮವಾಗಿ ನಡೆದು ಭೂಸತ್ತ್ವದ ಸ್ಥಿರತೆ ಸ್ಥಾಪಿತವಾಗುವುದು. ಬೆಳೆಗಳಿಗೆ ಸಮವಾದ ಆಹಾರಾಂಶ ಸಿಕ್ಕಿ ಜಮೀನಿನಲ್ಲಿಯ ಬೆಳೆ ಏಕರೂಪವಾಗಿ ಬೆಳೆದು ಹೆಚ್ಚಿನ ಇಳುವರಿ ದೊರೆಯಲು ಸಾಧ್ಯವಾಗುತ್ತದೆ.

ಅಂತರ ಬೇಸಾಯ ಸಾಗುವಳಿ ಸಾಧನ: ಇದರ ಉಪಯೋಗದಿಂದ ಏಕಕಾಲದಲ್ಲಿ ನಾಲ್ಕು, ಆರು ಸಾಲುಗಳಲ್ಲಿ ಅಂತರ ಬೇಸಾಯ ಸಾಗುವಳಿ ನಡೆದು, ಬೆಳೆಗಳು ಸಮೃದ್ಧವಾಗಿ ಬೆಳೆಯಲು ಅನುಕೂಲತೆ ಏರ್ಪಡುವುದು.

ಒಕ್ಕಣೆ ಸಾಧನಗಳು: ಪಿಕ್ಕರ್-ಶೆಲ್ಲರ್, ಕಂಬಾಯಿನ್ ಹಾರ್ವೇಸ್ಟರ್ ಇತ್ಯಾದಿ. ಈ ಯಂತ್ರಗಳು ಕೊಯಿಲು ಮಾಡಿ ಬಡಿದು ತೂರಿ ಕಾಳನ್ನು ಬೇರ್ಪಡಿಸುತ್ತವೆ. ಮೂಟೆಗಳಲ್ಲಿ ತುಂಬುವ ವ್ಯವಸ್ಥೆ ಕೂಡ ಉಂಟು. ಇದೊಂದು ಆಧುನಿಕ ಯುಗದ ಭಾರಿ ಕೊಡುಗೆ. ಮುಸುಕಿನ ಜೋಳದ ಒಕ್ಕಣೆಗೆ ಪಿಕ್ಕರ್-ಶೆಲ್ಲರ್‍ನ್ನು ಉಪಯೋಗಿಸಿದಾಗ ತೆನೆ ಮುರಿಯುವ ಸಿಪ್ಪೆ ಸುಲಿಯುವ ಕಾಳು ಬೇರ್ಪಡಿಸುವ ಕಾರ್ಯಗಳು ಏಕಕಾಲದಲ್ಲಿ ಕೈಗೂಡಿಬರುತ್ತವೆ. ಹುಲ್ಲಿನ ಜಾತಿಯ ಬೆಳೆಗಳಾದ ಗೋದಿ ಬತ್ತಗಳಲ್ಲಿ ಕಂಬಾಯಿನ್ ಹಾರ್ವೆಸ್ಟರ್ ಕಂಬಾಯಿನ್ ಉಪಯೋಗಿಸಿದಾಗ ಹುಲ್ಲು ಕೊಯ್ಯಲ್ಪಟ್ಟು ಒಕ್ಕಣೆ ಕಾರ್ಯ ನಡೆದು ತೂರುವುದು ಮುಗಿದು ಸ್ವಚ್ಛ ಕಾಳು ಬೇರ್ಪಟ್ಟು ಮೂಟೆಗಳಲ್ಲಿ ತುಂಬುವ ಕಾರ್ಯವೂ ಒಂದೇ ಸಲದಲ್ಲಿ ನಡೆದು ಬಿಡುವುದು. ಹತ್ತಿಯನ್ನು ಬಿಡಿಸಿ ಕೊಳ್ಳುವ, ಆಲೂಗೆಡ್ಡೆ ಹೆಚ್ಚುವ, ಸಂಗ್ರಹಿಸುವ, ಸುಗ್ಗಿ ಮಾಡುವ ಉಪಕರಣಗಳಿವೆ. ಈ ಸಾಧನೆಗಳ ನೆರವಿನಿಂದ ರೈತರು ತಮ್ಮ ಬೆಳೆಗಳನ್ನು ಪೂರ್ತಿ ಮುಗಿದ ಕಾಲದಲ್ಲಿ ಅಲ್ಪ ಅವಧಿಯಲ್ಲಿ ಗಾಳಿ ಬಿಸಿಲುಗಳ ಅನುಕೂಲತೆಯನ್ನು ನಿರೀಕ್ಷಿಸದೆ ಕೊಯಿಲು ಮಾಡಿ ಒಕ್ಕಣೆ ಮಾಡಲು ಸಾಧ್ಯವಾಗಿದೆ. ಇದರಿಂದ ಗಂಡಾಂತರಗಳಿಗೆ ಅವಕಾಶವೇ ಉಳಿಯುವುದಿಲ್ಲ. ರೈತರು ತಮ್ಮ ಶ್ರಮಕ್ಕೆ ಯೋಗ್ಯ ಪ್ರತಿಫಲ ಪಡೆದು ಅಧಿಕ ಆದಾಯ ಸಂಪಾದಿಸಲು ಸಹಾಯಕವಾಗುವುದು.

ನೀರೆತ್ತಲು ಪಂಪ್‍ಸೆಟ್: ಈಗ ರೈತರು ಮಳೆಯ ದಾರಿಯನ್ನೇ ಕಾಯಬೇಕಾಗಿಲ್ಲ. ಬೇಕಾದಾಗ ಬೆಳೆಗೆ ನೀರು ಹರಿಸಲು ಇದರಿಂದ ಸಾಧ್ಯವಾಗಿದೆ.

ಸಿಂಚನ ಮತ್ತು ಹನಿ ನೀರಾವರಿ: ಇದರಿಂದ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಬಹುದು. ಬೇಕಾದಷ್ಟೆ ನೀರನ್ನು ಬೇಕಾದ ಕಾಲದಲ್ಲಿ ಒದಗಿಸಬಹುದು. ತಗ್ಗು ಉಬ್ಬು ಭೂಮಿಯಲ್ಲಿಯೂ ಬೆಳೆಗಳಿಗೆ ನೀರು ದೊರೆಯುವಂತೆ ಮಾಡಬಹುದು. ಮಳೆ ಬಿದ್ದು ಬೆಳೆ ಸಂತುಷ್ಟಿ ಪಡೆಯುವಂತೆಯೇ ಸಿಂಚನ ನೀರಾವರಿಯಿಂದಲೂ ಪಡೆಯುತ್ತದೆ. ಸಿಂಚನ ನೀರಿನೊಂದಿಗೆ ರಾಸಾಯನಿಕ ಗೊಬ್ಬರ ಪೂರೈಸಲು ಸಹ ಸಾಧ್ಯವಿದೆ.

ವಿಮಾನಗಳಿಂದ ಬೆಳೆಗಳ ಸಂರಕ್ಷಣೆ: ಹುಡಿ ಹರಡುವಿಕೆ, ಔಷಧಿಗಳ ಸಿಂಪಡಿಕೆ ಇಂದು ವಿಮಾನಗಳಿಂದ ನಡೆಯುತ್ತಿರುವುದು ಸಾಮಾನ್ಯ ಮಾತು. ಕಡಿಮೆ ಅವಧಿಯಲ್ಲಿ ಹೆಚ್ಚು ವಿಸ್ತಾರ ಪ್ರದೇಶದಲ್ಲಿಯ ಬೆಳೆರಕ್ಷಣೆ ಇದರಿಂದ ಸಾಧ್ಯವಾಗಿದೆ.

										(ಬಿ.ವಿ.ವಿ.,ವಿ.ಸಿ.ಎಚ್.)

(ಪರಿಷ್ಕರಣೆ ; ವಿ.ಕುಮಾರಗೌಡ)