ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷ್ಣರಾವ್ ಯು ಎಸ್ - ಚಂದ್ರಭಾಗಾದೇವಿ
ಕೃಷ್ಣರಾವ್ ಯು ಎಸ್ - ಚಂದ್ರಭಾಗಾದೇವಿ
ಪರಂಪರೆಯಿಂದ “ಸೋಲೋ (ಸಾದಿರ್) ವಾಗಿಯೇ ರೂಪಗೊಂಡ ಭರತನಾಟ್ಯ ಶೈಲಿಯನ್ನು ಪ್ರಪ್ರಥಮವಾಗಿ ಯುಗಳ ನೃತ್ಯಕ್ಕೆ ಅಳವಡಿಸಿದ ಕೀರ್ತಿ ಬೆಂಗಳೂರಿನ ಯು.ಎಸ್. ಕೃಷ್ಣರಾವ್-ಚಂದ್ರಭಾಗಾದೇವಿ ಅವರಿಗೆ ಸಲ್ಲಬೇಕು. ಅಂತೆಯೇ ಹೆಣ್ಣು-ಗಂಡು, ಸತಿ-ಪತಿಗಳು ಜೋಡಿಯಾಗಿ ನರ್ತಿಸುವ ಪರಿಪಾಠವೂ ಇವರಿಂದಲೇ ಮೊದಲುಗೊಂಡಿದ್ದು ಎಂಬುದೂ ನಿಜ. ಅದೇ ಧಾಟಿಯಲ್ಲಿ ಸುಮಾರು ಐದು ದಶಕಗಳ ಪರ್ಯಂತ ಪ್ರದರ್ಶನಗಳನ್ನು ನಿರ್ವಹಿಸಿ, ನೃತ್ಯ ಶಿಕ್ಷಣವನ್ನು ಆಸಕ್ತರನೇಕರಿಗೆ ಒದಗಿಸಿ, ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ ಈ ದಂಪತಿಗಳ ಕಾರ್ಯಕ್ಷೇತ್ರ ಬೆಂಗಳೂರಾದರೂ ಇಬ್ಬರೂ ದಕ್ಷಿಣ ಕನ್ನಡ ಜಿಲ್ಲೆಯವರು, ಕೃಷ್ಣರಾಯರು ಹುಟ್ಟಿದ್ದು (ಡಿಸೆಂಬರ್ 31, 1912) ಉತ್ತರ ಕನ್ನಡ ಜಿಲ್ಲೆಯ ಮಲ್ಲಾಪುರ. ಬೆಳೆದದ್ದು ಬೆಂಗಳೂರು. ತಂದೆ ಶಿವರಾಮ, ತಾಯಿ ಗಿರಿಜಾ ಬಾಯಿ. ಚಂದ್ರಭಾಗಾದೇವಿ (ಜನ್ಮ 1921 ಆಗಸ್ಟ್ 11) ತಂದೆ ಪಡುಕೋಣೆ ರಮಾನಂದರಾಯರು, ತಾಯಿ ಸೀತಾದೇವಿ. ಇಬ್ಬರೂ ಬರಹಗಾರರು. ಇವರುಗಳ ವಿದ್ಯಾಭ್ಯಾಸಕೇಂದ್ರ ಕರ್ನಾಟಕದ ರಾಜಧಾನಿ. ಪತಿ ಕೃಷ್ಣರಾವ್ ಸ್ನಾತಕೋತ್ತರ ಪದವಿ ಪಡೆದು, ಅದೇ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾದರೆ, ಪತ್ನಿ ಚಂದ್ರಭಾಗಾ ಪದವೀಧರೆ. ಇಬ್ಬರಿಗೂ ರಸಾಯನಶಾಸ್ತ್ರದಷ್ಟೇ ನೃತ್ಯದಲ್ಲೂ ಮೊದಲಿನಿಂದಲೂ ಆಸಕ್ತಿ. ಕೃಷ್ಣರಾಯರು ನಗರದಲ್ಲಿ ಕೋಲಾರ ಪುಟ್ಟಪ್ಪನವರಲ್ಲಿ ನೃತ್ಯಾಭ್ಯಾಸಕ್ಕೆ ತೊಡಗಿದ್ದರು, ಚಂದ್ರಭಾಗಾದೇವಿ ಚಿಕ್ಕಂದಿನಿಂದಲೇ ಶಿವರಾಮ ಕಾರಂತರ ವಿವಿಧ ನೃತ್ಯ ರೂಪಕ ಪ್ರಯೋಗಗಳಲ್ಲಿ ನರ್ತಿಸಿದ ಅನುಭವ. ಇಂತಹ ಹಲವಾರು ಸಮಾನತೆಗಳಿಂದ ಕೂಡಿದ ಈರ್ವರೂ ಸತಿ ಪತಿಗಳಾದದ್ದು ಯೋಗಾಯೋಗ. ನೃತ್ಯವನ್ನು ಕೀಳಾಗಿ ಪರಿಗಣಿಸುತ್ತಿದ್ದ ಅಂದಿನ ಸಮಾಜದಲ್ಲಿ ಸುಸಂಸ್ಕøತ, ವಿದ್ಯಾವಂತ ಕುಟುಂಬಕ್ಕೆ ಸೇರಿದ ಕಲಾವಿದರಲ್ಲಿ ಈ ದಂಪತಿಗಳೇ ಮೊದಲಿಗರು ಎಂದರೂ ತಪ್ಪಾಗಲಾರದು.
ಕೃಷ್ಣರಾಯರು ಕೋಲಾರದ ಪುಟ್ಟಪ್ಪನವರಲ್ಲಿ ಮೈಸೂರು ಶೈಲಿಯ ಭರತನಾಟ್ಯ, ಪಂದವೆಲ್ಲೂರ್ ಶೈಲಿಯನ್ನು ಮೀನಾಕ್ಷಿ ಸುಂದರಂ ಪಿಳ್ಳೆ ಅವರಲ್ಲಿ, ಕುಮಾರನ್ ಮತ್ತು ಕುರುಪ್ ಅವರಿಂದ ಕಥಕ್ಕಳಿಯನ್ನು ಕಲಿತರು. ಚಂದ್ರಭಾಗಾದೇವಿ ಮೊದಲ ನೃತ್ಯ ಹೆಜ್ಜೆ ಇಡಲು ಕಲಿತದ್ದು ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ. ಶ್ರೀನಿವಾಸ ಕುಲಕರ್ಣಿ ಅವರಿಂದ ಕಥಕ್ಕಳಿ ನೃತ್ಯ ಬಂಧಗಳನ್ನು, ಭರತನಾಟ್ಯವನ್ನು ಕೋಲಾರ ಪುಟ್ಟಪ್ಪ ಮತ್ತು ಕೃಷ್ಣರಾಯರಿಂದ ಕಲಿತರು.
ಇವರುಗಳ ನೃತ್ಯಾಸಕ್ತಿಯನ್ನು ಚುರುಕು ಗೊಳಿಸಿದ್ದು, 20ನೇ ಶತಮಾನದ ನಾಲ್ವತ್ತರಲ್ಲಿ, ಅದೇತಾನೆ, ಎರಡನೆಯ ಮಹಾಯುದ್ಧದ ಅಡಚಣೆಯಿಂದ ತಮ್ಮ ಇಂಗ್ಲೆಂಡ್ ಯೂರೋಪ್ ನೃತ್ಯ ಪ್ರವಾಸವನ್ನು ಮೊಟಕುಗೊಳಿಸಿ ತಾಯ್ನಾಡಿಗೆ ಹಿಂದಿರುಗಿದ, ಖ್ಯಾತ ನೃತ್ಯ ಕಲಾವಿದ ರಾಂಗೋಪಾಲ್‍ರ ಸಂಪರ್ಕ. ಆ ಹೊತ್ತಿಗೆ ಆ ಅತ್ಯಾಕರ್ಷಕ ನರ್ತಕರ ತಂಡದ ಪ್ರದರ್ಶನಗಳು ಜರುಗಿದ್ದು, ಅವು ಜನಮನವನ್ನು ಗೆದ್ದಿದ್ದವು. ಅಂತಹ 1948ರ ಪ್ರದರ್ಶನ ಒಂದರಲ್ಲಿ ಕೃಷ್ಣರಾವ್ ದಂಪತಿಗಳಿಗೂ ನರ್ತಿಸುವ ಅವಕಾಶ ಒದಗಿ ಬಂತು. ಆ ಪ್ರದರ್ಶನ ಅನೇಕ ರಸಿಕರ, ನೃತ್ಯಾಸಕ್ತರ ಗಮನವನ್ನು ಸೆಳೆಯಿತು. ಕೃಷ್ಣರಾಯರು ಹಾಗೂ ಚಂದ್ರಭಾಗಾದೇವಿ ಅವರ ಕಲಾಜೀವನದ ನಾಂದಿಯಾಯಿತು ಕೂಡ. ಪರಿಣಾಮ ಅನೇಕ ನೃತ್ಯಾಸಕ್ತರಿಂದ ನೃತ್ಯ ಕಲಿಯಲು ಬೇಡಿಕೆ. ಹೀಗೆ ಪ್ರಾರಂಭವಾದದ್ದು ಇವರ “ಮಹಾಮಾಯಾ” ನೃತ್ಯ ಶಾಲೆ. ಈ ಮಧ್ಯೆ ಮದರಾಸಿನ (ಈಗ ಚೆನ್ನೈ) ನೃತ್ಯೋದಯ ಸಂಸ್ಥೆಯಲ್ಲಿ (ಖ್ಯಾತ ನರ್ತಕಿ ಪದ್ಮಾ ಸುಬ್ರಹ್ಯಣ್ಯಂರ ಚಿಕ್ಕಪ್ಪ ಕೆ. ವಿಶ್ವನಾಥನ್‍ರಿಂದ ಸ್ಥಾಪಿಸಲಾದ ಈ ಸಂಸ್ಥೆ ಪದ್ಮಾರ ಆಡಳಿತದಲ್ಲಿ ಹೆಸರು ಗಳಿಸಿ, ಈಗ ಲೋಕ ವಿಖ್ಯಾತವಾಗಿದೆ) ಕೆಲಕಾಲ ನೃತ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದರು. ಆದರೆ ನೃತ್ಯದಲ್ಲಿ ಹೆಚ್ಚಿನ ತರಬೇತಿ ಪಡೆಯುವುದರ ಉದ್ದೇಶದಿಂದ ಆ ಕೆಲಸವನ್ನು ತ್ಯಜಿಸಿ ಪಂದನಲ್ಲೂರಿನತ್ತ ಪ್ರಯಾಣ ಬೆಳೆಸಿದರು. ಅಲ್ಲಿನ ಸುವಿಖ್ಯಾತ ಮೀನಾಕ್ಷಿ ಸುಂದರಂ ಪಿಳ್ಳೆಯವರಲ್ಲಿ ಕೆಲಕಾಲ ಸಾಧನೆಯಲ್ಲಿ ತೊಡಗಿ, ಬೆಂಗಳೂರಿಗೆ ಹಿಂದಿರುಗಿದಾಗ ಅವರ ಆತ್ಮವಿಶ್ವಾಸ ಇಮ್ಮಡಿಯಾಗಿತ್ತು. ಪ್ರದರ್ಶನ ಮತ್ತು ಶಿಕ್ಷಣಗಳೆರಡರಲ್ಲೂ ಹೆಚ್ಚು ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡರು.
ಜೊತೆಜೊತೆಯಲ್ಲಿ ಕೃಷ್ಣರಾಯರ ಕಾಲೇಜಿನ ಅಧ್ಯಾಪಕ ವೃತ್ತಿಯೂ ಮುಂದುವರಿದಿತ್ತು. ತನ್ಮೂಲಕ ವಿದ್ಯಾರ್ಥಿ ಸಮೂಹಗಳಲ್ಲಿ ಭರತನಾಟ್ಯವನ್ನು ಕುರಿತ ಪ್ರಾತ್ಯಕ್ಷಿಕೆಗಳನ್ನು ನೀಡಿ ಆ ಕಲೆಯ ಅಭಿರುಚಿ ಬೆಳೆಯಲು ಸಹಾಕಯರಾದರಲ್ಲದೇ ತಮ್ಮ ಕಲಿಕೆಯ ಬಗ್ಗೆ ಪ್ರಚಾರವನ್ನು ಗಳಿಸಿಕೊಂಡರು. ಇದರಿಂದ ಇವರೀರ್ವರ ಪ್ರದರ್ಶನಗಳ, ಶಿಕ್ಷಣದ ಬೇಡಿಕೆಯು ಬೆಳೆಯುತ್ತಾ ಹೋಯಿತು. ಇವರು ಈ ಮಧ್ಯೆ ನಿರ್ಮಿಸಿದ ಮಹಾಮಾಯಾ ಈ ದಂಪತಿಗಳ ವಾಸಕ್ಕೂ, ನೃತ್ಯ ಶಾಲೆಗೂ ಅಲ್ಲದೇ ನೃತ್ಯ ಪ್ರದರ್ಶನಗಳಿಗೂ ಕೇಂದ್ರವಾಯಿತು. ಇವರ ಶಿಷ್ಯರನೇಕರು ಅದರ ರಂಗಸ್ಥಳದಲ್ಲಿ ರಂಗಪ್ರವೇಶ, ನೃತ್ಯ ಪ್ರದರ್ಶನಗಳನ್ನಿತ್ತಿದ್ದಾರೆ. ಅವರುಗಳಲ್ಲಿ ಹಿರಿಯರನೇಕರು ಹೊರನಾಡಿನಲ್ಲಿ ನೃತ್ಯ ಶಾಲೆಗಳನ್ನು ಆರಂಭಿಸಿ ತಮ್ಮ, ತಮ್ಮ ಗುರುಗಳ ಕೀರ್ತಿಗೆ ಭಾಜನರಾಗಿದ್ದಾರೆ. ಅಂತೆಯೇ ಸ್ಥಳೀಯವಾಗಿ ತರಗತಿಗಳನ್ನು ನಡೆಸುತ್ತಾ, ಪ್ರದರ್ಶನಗಳಲ್ಲಿ ಭಾಗವಹಿಸುತ್ತಿರುವ ಇವರ ಶಿಷ್ಯರೂ ಕಡಿಮೆ ಏನಿಲ್ಲ, ಇಂಥವರಲ್ಲಿ ಅಂತರರಾಷ್ಟ್ರೀಯ ಖ್ಯಾತಿಗಳಿಸಿರುವ ಪ್ರತಿಭಾ ಪ್ರಹ್ಲಾದ್ ರಂಥವರನ್ನೂ ಹೆಸರಿಸಬಹುದು.
ಕೃಷ್ಣರಾವ್ ದಂಪತಿಗಳ ವಿದೇಶ ಪ್ರವಾಸಗಳೂ ಅಷ್ಟೇ ಫಲಪ್ರದ. ವಿದೇಶಗಳಲ್ಲಿ ನೆಲೆಸಿರುವ ತಮ್ಮ ಶಿಷ್ಯರ ಅಭಿಲಾಷೆಯಂತೆ ಆ ರಾಜ್ಯಗಳಲ್ಲೆಲ್ಲಾ ಪ್ರಾತ್ಯಕ್ಷಿಕೆಗಳನ್ನು ನಡೆಸಿ ಪ್ರದರ್ಶನಗಳನ್ನಿತ್ತು ಅಲ್ಲಿನ ರಸಿಕರ ವಿಶ್ವಾಸಕ್ಕೆ ಪಾತ್ರರಾದರಲ್ಲದೇ ಅಂತಹವರನೇಕರು ಬೆಂಗಳೂರಿಗೇ ಬಂದು ಇವರಲ್ಲಿ ನೃತ್ಯಾಭ್ಯಾಸವನ್ನು ಮುಂದುವರಿಸಿದ್ದೂ ಉಂಟು.
ಹೀಗೆ ಕೃಷ್ಣರಾವ್ ಚಂದ್ರಭಾಗಾದೇವಿಯವರ ಖ್ಯಾತಿ ಬೆಳೆದು ರಾಜ್ಯ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ (1980) ಕೇಂದ್ರ ಸಂಗೀತ ನೃತ್ಯ ಅಕಾಡೆಮಿ(1988), ಕರ್ನಾಟಕದ ಶ್ರೇಷ್ಠ ಪ್ರಶಸ್ತಿಯಾದ ಶಾಂತಲಾ ಪ್ರಶಸ್ತಿ, (1996)ಗಳಿಂದ ಪುರಸ್ಕøತರಾದರು. ಕೃಷ್ಣರಾವ್ ನೃತ್ಯ ಕಲೆಗೆಂದೇ ಮೀಸಲಾದ ಕರ್ನಾಟಕ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರಾಗಿ ಕೆಲಕಾಲ ಉಪಯುಕ್ತ ಸೇವೆ ಸಲ್ಲಿಸಿದರು. ಚಂದ್ರಭಾಗ ರಾಜ್ಯದ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ (1995) ಗಣನೀಯ ಸೇವೆ ಸಲ್ಲಿಸಿದರು. ಈರ್ವರೂ ಬೇರೆ ಬೇರೆಯಾಗಿ, ಜೋಡಿಯಾಗಿ ನೃತ್ಯಕ್ಕೆ ಸಂಬಂಧಿಸಿದಂತೆ `ಆಧುನಿಕ ಭಾರತದಲ್ಲಿ ನೃತ್ಯಕಲೆ ಅಭಿನಯ ಕಲೆ ಸೇರಿದಂತೆ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ “ನೃತ್ಯಕಲೆ” ಎರಡನೆಯ ಆವೃತ್ತಿಯನ್ನು ಕಂಡಿದೆ. ಇವರ ಕೀರ್ತಿ ಶಾಶ್ವತವಾಗಲು ನೆರವಾಗಿದೆ. ಇ ಕೃಷ್ಣಯ್ಯರ್ ಸ್ಮಾರಕ ಚಿನ್ನದ ಪದಕ (2002) ಚಂದ್ರಭಾಗಾದೇವಿ ನಿಧನಾನಂತರ (1996) ಕೃಷ್ಣ ರಾಯರು ಒಂಟಿಯಾಗಿ ಸ್ವೀಕರಿಸಿದ ಪ್ರಶಸ್ತಿ. ಕೃಷ್ಣರಾಯರು 2005 ಮಾರ್ಚ್‍ನಲ್ಲಿ ವಿಧಿವಶರಾದರು. (ಎಸ್.ಎನ್.ಸಿ.)