ಕೇಡು

ಸಾರ್ವಜನಿಕರಿಗೆ ಅಥವಾ ಯಾರಾದರೊಬ್ಬ ವ್ಯಕ್ತಿಗೆ ಅನ್ಯಾಯವಾದ ನಷ್ಟ ಅಥವಾ ಹಾನಿ ಉಂಟುಮಾಡುವ ಉದ್ದೇಶದಿಂದ, ಅಥವಾ ಉಂಟುಮಾಡುವ ಸಂಭವವಿದೆಯೆಂದು ತಿಳಿದಿದ್ದೂ, ಯಾವುದೇ ಸ್ವತ್ತಿನ ನಾಶವನ್ನು, ಅಥವಾ ಯಾವುದೇ ಸ್ವತ್ತು ನಾಶವಾಗುವ, ಅಥವಾ ಅದರ ಉಪಯುಕ್ತತೆಯೋ ಮೌಲ್ಯವೋ ಕಡಿಮೆಯಾಗುವ ರೀತಿಯಲ್ಲಿ ಅದರ ಸ್ಥಿತಿಯಲ್ಲಿ ಬದಲಾವಣೆಯನ್ನು ಅಥವಾ ಅದಕ್ಕೆ ಹಾನಿಯಾಗುವಂಥ ಪರಿಣಾಮವನ್ನು, ಯಾರಾದರೂ ಮಾಡಿದರೆ ಅದು ಕೇಡು (ಮಿಸ್ಚಿಫ್) ಎನಿಸಿಕೊಳ್ಳುತ್ತದೆಂಬುದು ಭಾರತೀಯ ದಂಡಸಂಹಿತೆಯಲ್ಲಿ ನೀಡಿರುವ ವ್ಯಾಖ್ಯೆ. ಹಾಳು ಮಾಡಲಾದ ಅಥವಾ ನಷ್ಟವನ್ನುಂಟು ಮಾಡಿದ ಸ್ವತ್ತಿನ ಒಡೆಯನಿಗೆ ನಷ್ಟ ಅಥವಾ ಹಾನಿ ತರುವ ಉದ್ದೇಶ ಅಪರಾಧಿಗೆ ಇರಬೇಕೆಂದಿಲ್ಲ. ಯಾವುದೇ ಸ್ವತ್ತಿಗೆ ಹಾನಿ ಉಂಟು ಮಾಡುವುದರಿಂದ ಯಾವನೋ ವ್ಯಕ್ತಿಗೆ, ಆ ಸ್ವತ್ತು ಅವನದಾಗಿರಲಿ ಇಲ್ಲದಿರಲಿ, ಅನ್ಯಾಯದ ನಷ್ಟ ಅಥವಾ ಹಾನಿ ಉಂಟು ಮಾಡಬೇಕೆಂಬ ಇಚ್ಛೆ ಒಬ್ಬನಿಗೆ ಇದ್ದರೂ ಅಥವಾ ಅವನಿಗೆ ಅನ್ಯಾಯದ ನಷ್ಟ ಅಥವಾ ಹಾನಿ ಆಗಬಹುದೆಂಬ ತಿಳಿವಳಿಕೆ ಇದ್ದರೂ ಸಾಕು, ಅಂಥವನು ಕೇಡು ಮಾಡಿದಂತೆಯೇ. ತನಗೆ ಸೇರಿದ ಅಥವಾ ತನ್ನ ಮತ್ತು ಇತರರ ಸಂಯುಕ್ತ ಒಡೆತನಕ್ಕೆ ಸೇರಿದ ಒಂದು ಸ್ವತ್ತಿನ ಮೇಲೆ ಪರಿಣಾಮ ಉಂಟಾಗಬಹುದಾದ ಕೃತಿಯಿಂದಲೂ ಕೇಡು ಮಾಡಬಹುದು.

ಒಬ್ಬ ಇನ್ನೊಬ್ಬನಿಗೆ ಅನ್ಯಾಯವಾಗಿ ನಷ್ಟ ಮಾಡುವ ಉದ್ದೇಶದಿಂದ ಆ ಇನ್ನೊಬ್ಬನಿಗೆ ಸೇರಿದ ಯಾವುದೇ ಮೌಲ್ಯವತ್ ಪ್ರತಿಭೂತಿಯನ್ನು ತಾನಾಗಿಯೇ ಸುಡುವುದು; ಒಬ್ಬ ತನ್ನ ವಾಹನವೊಂದಕ್ಕೆ ವಿಮೆ ಇಳಿಸಿ, ವಿಮಾ ಸಂಸ್ಥೆಗೆ ನಷ್ಟ ಉಂಟುಮಾಡುವ ಉದ್ದೇಶದಿಂದ ಅದನ್ನು ಅಪಘಾತಕ್ಕೀಡುಮಾಡುವುದು; ಒಬ್ಬ ತನ್ನ ಮತ್ತು ಇನ್ನೊಬ್ಬನ ಸಂಯುಕ್ತ ಒಡೆತನಕ್ಕೆ ಸೇರಿದ ಕುದುರೆಯನ್ನು, ಆ ಇನ್ನೊಬ್ಬನಿಗೆ ಅನ್ಯಾಯವಾದ ನಷ್ಟವಾಗಲೆಂಬ ಉದ್ದೇಶದಿಂದ, ಗುಂಡಿಟ್ಟು ಕೊಲ್ಲುವುದು; ಒಬ್ಬ ಇನ್ನೊಬ್ಬನ ಬೆಳೆಗೆ ನಷ್ಟವಾಗಬಹುದೆಂದು ತಿಳಿದಿದ್ದೂ ಆ ಇನ್ನೊಬ್ಬನ ಹೊಲದೊಳಕ್ಕೆ ದನಗಳನ್ನು ಹೊಡೆಯುವುದು-ಇವು ಕೇಡಿನ ಕೆಲವು ಉದಾಹರಣೆಗೆಳು. (ಕೆ.ಜಿ.ಬಿ.)