ಕೊರಟಗೆರೆ

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಕೇಂದ್ರ. ತಾಲ್ಲೂಕು ಸ್ಥೂಲವಾಗಿ ಉ.ಆ.13º 15´ ಮತ್ತು-13º 45´ ಮತ್ತು ಪೂ.ರೇ 70º 0´ -77º 30´ ನಡುವೆ ಇದೆ. ಮಧುಗಿರಿ ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕು ಮಧುಗಿರಿ ತಾಲ್ಲೂಕು, ಕೋಲಾರ ಜಿಲ್ಲೆ, ಬೆಂಗಳೂರು ಜಿಲ್ಲೆ ಮತ್ತು ತುಮಕೂರು ತಾಲ್ಲೂಕು-ಇವುಗಳ ನಡುವೆ ಇದೆ. ಇದರ ವಿಸ್ತೀರ್ಣ 243.8 ಚದರ ಮೈ. ಅಥವಾ 631.4 ಚ.ಕಿ.ಮೀ. ತಾಲ್ಲೂಕನ್ನು ನಾಲ್ಕು ಹೋಬಳಿಗಳನ್ನಾಗಿ ವಿಂಗಡಿಸಲಾಗಿದೆ. 222 ಗ್ರಾಮಗಳು ಮತ್ತು ಒಂದು ಪಟ್ಟಣವನ್ನೊಳಗೊಂಡಿರುವ ತಾಲ್ಲೂಕಿನ ಜನಸಂಖ್ಯೆ 1,69,669 (2001).

ತುಮಕೂರು ಜಿಲ್ಲೆಯ ಪೂರ್ವದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿರುವ ಗ್ರಾನೈಟ್ ಬೆಟ್ಟ ಶ್ರೇಣಿಯೊಂದು ಕೊರಟಗೆರೆಯ ಮೂಲಕ ಹಾದುಹೋಗುತ್ತದೆ. ಚನ್ನರಾಯನದುರ್ಗ (3,734') ಮತ್ತು ಕೊರಟಗಿರಿ (2,885') ಇವು ತಾಲ್ಲೂಕಿನ ಎರಡು ಉನ್ನತ ಶಿಖರಗಳು. ಚನ್ನರಾಯನದುರ್ಗದಲ್ಲಿ ಹುಟ್ಟುವ ಸುವರ್ಣಮುಖಿ ಹೊಳೆ ಕೊರಟಗೆರೆ ತಾಲ್ಲೂಕಿನಲ್ಲಿ 15 ಮೈಲಿಗಳ ದೂರ ಹರಿಯುತ್ತದೆ. 1888-1892ರಲ್ಲಿ ಇದಕ್ಕೆ ಒಂದು ಅಣೆಕಟ್ಟು ಕಟ್ಟಲಾಯಿತು. ಇದರ ನೀರು ಬರಗಾಲದಲ್ಲಿ ನೆರವಾಗಿ ಒದಗುತ್ತಿದ್ದುದರಿಂದ ಇದಕ್ಕೆ ಬರನಕಣಿವೆ ಸರೋವರವೆಂದು ಹೆಸರಾಯಿತು. ದೇವರಾಯನದುರ್ಗದಲ್ಲಿ ಹುಟ್ಟುವ ಜಯಮಂಗಲಿ ಮತ್ತು ಗರುಡಾಚಲ ಹೊಳೆಗಳು ಈ ತಾಲ್ಲೂಕಿನಲ್ಲಿ ಹರಿಯುತ್ತವೆ.

ತಾಲ್ಲೂಕಿನ ವಾಯುಗುಣ ಸಾಮಾನ್ಯವಾಗಿ ಹಿತಕರವಾಗಿಯೇ ಇರುತ್ತದೆ. ಮೇ-ನವೆಂಬರ್‍ನಲ್ಲಿ ಮಳೆಯಾಗುತ್ತದೆ. ನವೆಂಬರಿನಲ್ಲಿ ಅಧಿಕ. ವಾರ್ಷಿಕ ಸರಾಸರಿ ಮಳೆ 658.3 ಮಿಮೀ. ವರ್ಷದಲ್ಲಿ ಸುಮಾರು 40 ಮಳೆ ದಿನಗಳು.

1965-66ರಲ್ಲಿ 82,617 ಎಕರೆ ಪ್ರದೇಶ ಸಾಗುವಳಿಗೆ ಒಳಪಟ್ಟಿತ್ತು. ಕಾಡುಗಳಿಂದ ಆವೃತವಾದ ಪ್ರದೇಶ 7,612 ಎಕರೆ. ಗೋಮಾಳ 26,548 ಎಕರೆ. ಸಾಗುವಳಿಗೆ ಒದಗದ ಬಂಜರು ನೆಲ 6,272 ಎಕರೆ. ಸುಮಾರು 15, 423 ಎಕರೆಗಳಿಗೆ ನೀರಾವರಿ ಸೌಲಭ್ಯವಿತ್ತು. ಕಾಲುವೆ, ಕೆರೆ ಮತ್ತು ಬಾವಿಗಳು ನೀರಾವರಿಯ ಮುಖ್ಯ ಸಾಧನಗಳು. ಜೋಳ (1920), ನವಣೆ (1269), ಹುರುಳಿ (9,500), ಅವರೆ (1557), ನೆಲಗಡಲೆ (10,000), ಕಬ್ಬು (255), ಮತ್ತು ಭತ್ತ (9500) ಇವು ತಾಲ್ಲೂಕಿನ ಮುಖ್ಯ ಬೆಳೆಗಳು. (1965-66ರಲ್ಲಿ ಇವನ್ನು ಬೆಳೆಯುತ್ತಿದ್ದ ಜಮೀನುಗಳ ಒಟ್ಟು ವಿಸ್ತೀರ್ಣಗಳನ್ನು ಎಕರೆಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ). ವಿದ್ಯುತ್ ಮತ್ತು ಡೀಸೆಲ್ ಪಂಪುಗಳನ್ನು ಉಪಯೋಗಿಸಿ ನೀರೆತ್ತುವ ವಾಡಿಕೆ ಬೆಳೆಯುತ್ತಿದೆ.

ಕೋರಂಡಂ ಕ್ವಾಟ್ರ್ಸ್ ಈ ತಾಲ್ಲೂಕಿನಲ್ಲಿ ದೊರಕುವ ಖನಿಜಗಳು.

ಕೊರಟಗೆರೆ ತಾಲ್ಲೂಕಿನಲ್ಲಿ ರೈಲು ಮಾರ್ಗಗಳಿಲ್ಲ. ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ದಾಬಸ್ ಪೇಟೆಯಿಂದ(ಬೆಂಗಳೂರು ಜಿಲ್ಲೆ) ಕೊರಟಗೆರೆಗೆ 15 ಮೈಲಿ ಉದ್ದದ ಒಂದು ರಸ್ತೆ ಇದೆ. ಇದರಿಂದ ಬೆಂಗಳೂರಿನೊಂದಿಗೆ ಕೊರಟಗೆರೆಗೆ ಸಂಪರ್ಕ ಕಲ್ಪಿತವಾಗಿದೆ. ಅಲ್ಲದೆ, ಬೆಂಗಳೂರು ಕಡೆಯಿಂದ ಮಧುಗಿರಿ, ಪಾವಗಡಗಳಿಗೆ ಹೋಗುವ ವಾಹನಗಳು ಈ ಮೂಲಕ ಸಾಗುತ್ತವೆ. ಕೊರಟಗೆರೆ-ಮಾವತ್ತೂರು ರಸ್ತೆ ಇನ್ನೊಂದು. ಇದು ತೊಂಡೆಬಾವಿಯವರೆಗೂ ಮುಂದುವರೆದು ಬೆಂಗಳೂರು-ಗುಂತಕಲ್ ರೈಲುಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಕೊರಟಗೆರೆಯಿಂದ ತುಮಕೂರಿಗೂ ನೀಲಾಹಾಳಿಗೂ ರಸ್ತೆಗಳುಂಟು.

ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಮತ್ತು ದೊಡ್ಡಸಗ್ಗೆರೆಗಳಲ್ಲಿ ವರ್ಷವರ್ಷವೂ ಜಾತ್ರೆಗಳು ನಡೆಯುತ್ತವೆ. ಕ್ಯಾಮೆನಹಳ್ಳಿಯದು ತುಮಕೂರಿನ ದೊಡ್ಡ ಜಾತ್ರೆಗಳಲ್ಲಿ ಒಂದು. ಆಂಜನೇಯಸ್ವಾಮಿ ಇಲ್ಲಿಯ ಆರಾಧ್ಯದೈವ. ಫೆಬ್ರವರಿ-ಮಾರ್ಚ್ ತಿಂಗಳುಗಳ ಸುಮಾರಿಗೆ ರಥೋತ್ಸವದ ಸಮಯದಲ್ಲಿ ನಡೆಯುವ ಈ ಜಾತ್ರೆಯಲ್ಲಿ ದನಗಳ ಪ್ರದರ್ಶನ ಮತ್ತು ಮಾರಾಟಗಳು ನಡೆಯುತ್ತವೆ. ದೊಡ್ಡಸಗ್ಗೆರೆಯ ಜಾತ್ರೆ ನಡೆಯುವುದು ಮಾರ್ಚ್ ತಿಂಗಳಲ್ಲಿ. ಇಲ್ಲಿ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನವಿದೆ. ತೋವಿನ ಕೆರೆ (ಶುಕ್ರವಾರ), ನಾಗೇನಹಳ್ಳಿ(ಶನಿವಾರ), ಅಕ್ಕಿರಾಂಪುರ(ಶನಿವಾರ), ಮಾವತ್ತೂರು (ಭಾನುವಾರ), ಇರಕಸಂದ್ರ (ಮಂಗಳವಾರ) ಮತ್ತು ಎಲೆ ರಾಂಪುರಗಳಲ್ಲಿ (ಬುಧವಾರ) ಸಂತೆಗಳು ನಡೆಯುತ್ತವೆ. (ಸಂತೆಗಳು ನಡೆಯುವ ದಿನಗಳನ್ನು ಆಯಾ ಊರುಗಳ ಹೆಸರುಗಳ ಮುಂದೆ ಆವರಣಗಳಲ್ಲಿ ಕೊಡಲಾಗಿದೆ).

ಕೊರಟಗೆರೆ ಪಟ್ಟಣ ಸುವರ್ಣಮುಖಿಯ ಎಡದಂಡೆಯ ಮೇಲೆ ತುಮಕೂರು-ಮಧುಗಿರಿ ರಸ್ತೆಯಲ್ಲಿ ತುಮಕೂರಿನಿಂದ 16 ಮೈ. ಉತ್ತರಕ್ಕಿದೆ. ತಾಲ್ಲೂಕಿನ ಕೇಂದ್ರ. ಜನಸಂಖ್ಯೆ 13,638 (2001). ಇಲ್ಲೊಂದು ಪೌರಸಭೆ ಇದೆ. ಇಲ್ಲಿಯ ಕೋಟೆಯನ್ನು ಪೇಟೆಯನ್ನು ಹೊಳವನಹಳ್ಳಿ ಪಾಳೆಯಗಾರನೊಬ್ಬ ಸ್ಥಾಪಿಸಿದ. ಕೋಟೆ ಜೀರ್ಣಸ್ಥಿತಿಯಲ್ಲಿದೆ. ಇದನ್ನು ಟಿಪ್ಪುಸುಲ್ತಾನ ಪಾಳುಗೆಡವಿದ. ಪಟ್ಟಣದ ಜನಕ್ಕೆ ಸುವರ್ಣಮುಖಿಯ ನೀರು ವರ್ಷದ ಎಲ್ಲಾ ಕಾಲದಲ್ಲೂ ಒದಗುತ್ತದೆ. ಕೊರಟಗೆರೆ ಬೆಟ್ಟದ ನಡುವೆ ಗವಿಗಂಗಾಧರೇಶ್ವರನ ದೇವಾಲಯವು ಬೆಟ್ಟದ ಮೇಲೆ ಬಸವ ದೇವಾಲಯವೂ ಇವೆ. ಪಟ್ಟಣದೊಳಗೆ ಇರುವ ಆಂಜನೇಯ ದೇವಾಲಯದ ಬಳಿ ಕೆಲವು ಮಾಸ್ತಿ ಕಲ್ಲುಗಳುಂಟು. (ಸಿ.ಬಿ.ಸಿ)