ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದಕ್ಷಿಣದಲ್ಲಿ ಬೇಟರಾಯನ ಬೆಟ್ಟಸಾಲಿನ ಪೂರ್ವಕ್ಕೆ ಇರುವ ಸ್ಥಳ. ಇದೇ ಹೆಸರಿನ ಪಟ್ಟಣ. ಚಿನ್ನದ ಗಣಿ ಪ್ರದೇಶಕ್ಕೂ ಬೆಂಗಳೂರು-ಚೆನ್ನೈ ರೈಲುಮಾರ್ಗದಲ್ಲಿರುವ ಬಂಗಾರಪೇಟೆ ನಿಲ್ದಾಣಕ್ಕೂ ಚಿನ್ನದ ಗಣಿ ರೈಲ್ವೆ ಸಂಪರ್ಕವಿದೆ. ಬಂಗಾರಪೇಟೆಯಿಂದ ಕಾಮಸಂದ್ರಕ್ಕೆ ಗಣಿ ಪ್ರದೇಶದ ಮೂಲಕ ಹಾದು ಹೋಗುವ ಒಂದು ರಸ್ತೆಯುಂಟು.
ಕೋಲಾರ ಚಿನ್ನದ ಗಣಿ ನಗರ ಇಲ್ಲಿ ಆರಂಭವಾದ ಚಿನ್ನದ ಗಣಿ ಕೈಗಾರಿಕೆಯ ಫಲ. ಇದು ಕಾರ್ಮಿಕರ ನಗರ. 1899ರಲ್ಲಿ ಈ ಪ್ರದೇಶದ ಪೌರಾಡಳಿತಕ್ಕಾಗಿ ಒಂದು ಸ್ಯಾನಿಟರಿ ಬೋರ್ಡ್. ಸ್ಥಾಪಿತವಾಯಿತು. 1964ರವರೆಗೂ ಇದರ ನಗರ ಪ್ರದೇಶಕ್ಕೆ ರಾಬರ್ಟ್‍ಸನ್‍ಪೇಟೆ ಮತ್ತು ಆಂಡರ್ಸನ್‍ಪೇಟೆ, ಸೊಣ್ಣೆಕೊಪ್ಪ, ನಾಚಕಪಲ್ಲಿ, ಉರಿಗಾಂ ಮುಂತಾದ ಸ್ಥಳಗಳು ಮತ್ತು ಕಾರ್ಮಿಕ ವಸತಿಗಳು ಸೇರಿದ್ದವು. 1961ರಲ್ಲಿ ಕೋಲಾರ ಚಿನ್ನದ ಗಣಿ ನಗರದ ವಿಸ್ತೀರ್ಣ 30 ಚ.ಮೈ. ಜನಸಂಖ್ಯೆ 1,46,811. ಆಗ ಇದು ಮೈಸೂರು ರಾಜ್ಯದ ನಾಲ್ಕನೆಯ ದೊಡ್ಡ ನಗರವಾಗಿತ್ತು.
1964ರಲ್ಲಿ ರಾಬರ್ಟ್‍ಸನ್‍ಪೇಟೆ ಪೌರಸಭೆಯ ನಿರ್ಮಾಣವಾದಾಗ ಕೋಲಾರ ಚಿನ್ನದ ಗಣಿ ನಗರದ ವಿಸ್ತೀರ್ಣವೂ ಜನಸಂಖ್ಯೆಯೂ ಕುಗ್ಗಿದವು. 1971ರ ಜನಗಣತಿಯ ಪ್ರಕಾರ ಇದರ ಜನಸಂಖ್ಯೆ 76,143. ರಾಬರ್ಟ್‍ಸನ್‍ಪೇಟೆ ಪೌರಸಭೆಯ ವ್ಯಾಪ್ತಿಯಲ್ಲಿರುವ ಉರಿಗಾಂನಲ್ಲಿ ಒಂದು ಪ್ರಥಮ ದರ್ಜೆ ಕಾಲೇಜಿದೆ. ಕೋಲಾರ ಚಿನ್ನದ ಗಣಿ ಪ್ರದೇಶದ ಕೋರಮಂಡಲದಲ್ಲಿ ಕೈಗಾರಿಕಾ ತರಬೇತು ಕೇಂದ್ರವೊಂದುಂಟು. ಇದು ಸರ್ಕಾರದ ಸಂಸ್ಥೆ.
ಕೋಲಾರದ ಚಿನ್ನದ ಗಣಿಗಾರಿಕೆಯ ಪ್ರಾಚೀನ ಇತಿಹಾಸ ನಿಖರವಾಗಿ ಗೊತ್ತಿಲ್ಲ. ಚಿನ್ನ ತೆಗೆಯುವ ಉದ್ಯಮ ಇಲ್ಲಿ ಯಾವಾಗ ಪ್ರಾರಂಭವಾಯಿತೆಂಬುದು ತಿಳಿದುಬಂದಿಲ್ಲ. ಕ್ಯಾಪಿಟಾಲಿಯ ಪರ್ವತದ (ಅಬು ಶಿಖರ, ರಾಜಸ್ಥಾನ) ಆಚೆಗಿನ ನಾರೇ (ನಾಯರ್) ನಾಡಿನಲ್ಲಿ ಹಲವಾರು ಚಿನ್ನ ಬೆಳ್ಳಿಗಳ ಗಣಿಗಳು ಇದ್ದವೆಂದೂ ಅವನ್ನು ತೆಗೆಯುವ ಉದ್ಯಮದಲ್ಲಿ ಭಾರತೀಯರು ನಿರತರಾಗಿದ್ದರೆಂದೂ ರೋಮನ್ ಇತಿಹಾಸಕಾರ ಪ್ಲಿನಿ (ಕ್ರಿ.ಶ. 77) ಹೇಳಿದ್ದಾನೆ. ಆದರೆ ಮಧ್ಯಯುಗದಲ್ಲಿ ಭಾರತಕ್ಕೆ ಬಂದ ಐರೋಪ್ಯರು ಯಾರೂ ಈ ಬಗ್ಗೆ ಏನೂ ಹೇಳಿಲ್ಲ. ಚಿನ್ನದ ಉತ್ಪಾದನೆ ಏತಕ್ಕೆ ನಿಂತು ಹೋಯಿತೆಂಬುದು ಗೊತ್ತಾಗಿಲ್ಲ. 17-18ನೆಯ ಶತಮಾನಗಳವರೆಗೂ ಇಲ್ಲಿ ಚಿನ್ನ ತೆಗೆಯುವ ಕೆಲಸ ನಡೆಯಲಿಲ್ಲವೆನ್ನಬಹುದು. ಅಂತೂ ಹಿಂದಿನ ಗಣಿಗಾರರು ಸುಮಾರು 300 ಆಳದವರೆಗೂ ನೆಲವನ್ನು ತೋಡಿ ಚಿನ್ನ ತೆಗೆದಿದ್ದರೆಂದು ಗೊತ್ತಾಗುತ್ತದೆ. ಕೋಲಾರ ಗಣಿಗಳಲ್ಲಿ ಬಳಸುತ್ತಿದ್ದ ಮರದ ಕಂಬಗಳನ್ನು ರೇಡಿಯೋಮಾಪನದಿಂದ ಅಳೆದಾಗ ದೊರೆತ ಮಾಹಿತಿಯಂತೆ ಈಗಿನಿಂದ ಹಿಂದಕ್ಕೆ 1290+50 ವರ್ಷ ಹಾಗೂ 1500-115 ವರ್ಷಗಳ ಹಿಂದೆ ಇಲ್ಲಿ ಗಣಿ ಕಾರ್ಯಾಚರಣೆ ದೊಡ್ಡ ಪ್ರಮಾಣದಲ್ಲೇ ನಡೆದಿದೆ. ಆಧುನಿಕರು ಚಿನ್ನದ ಅನ್ವೇಷಣೆ ಮಾಡಿದ್ದು ಈ ಪ್ರಾಚೀನ ಪ್ರಯತ್ನಗಳ ಫಲ. ಹಿಂದಿನ ಗಣಿಗಾರರಿಗೆ ಉಕ್ಕಿನ ಉಪಕರಣಗಳಾಗಲಿ ಸ್ಫೋಟಕಗಳಾಗಲಿ ಇರಲಿಲ್ಲ. ಬಂಡೆಗೆ ಬೆಂಕಿ ಒಟ್ಟಿ ಅದು ಕಾದಾಗ ನೀರು ಸುರಿದು ಬಂಡೆ ಒಡೆಯಸಿ ಚಿನ್ನ ತೆಗೆಯುತ್ತಿದ್ದರೆಂದು ಗೊತ್ತಾಗುತ್ತದೆ. ಈಗ ನಂದಿದುರ್ಗ ಗಣಿಯ ಭಾಗವಾಗಿರುವ ಕೋರಮಂಡಲ ಗಣಿಯಲ್ಲಿ ಸುಮಾರು 200 ಆಳದಲ್ಲಿ ನೀರಿನ ಪಾತ್ರೆಗಳೂ ಹಳ್ಳದ ಬದಿಯಲ್ಲಿ ಜನರು ಹೆಜ್ಜೆಯಿಟ್ಟು ಇಳಿದು ಹತ್ತಲು ಅನುವಾಗಿ ಮಾಡಲಾಗಿದ್ದ ಗೂಡುಗಳೂ ಇದ್ದುವು. ಹಿಂದೆ ಇಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತೆನ್ನುವುದಕ್ಕೆ ಇವು ಆಧಾರಗಳು. ಇತಿಹಾಸದ ಉದ್ದಕ್ಕೂ ಇಲ್ಲಿ ಅವ್ಯವಸ್ಥಿತವಾಗಿ ಗಣಿ ಕೆಲಸ ನಡೆಯುತ್ತಿದ್ದಿರಬೇಕು. ಟಿಪ್ಪುಸುಲ್ತಾನ ಇಲ್ಲಿ ಗಣಿಗಾರಿಕೆ ನಡೆಯಿಸಲು ಪ್ರಯತ್ನಿಸಿ ವಿಫಲನಾದನೆಂದು ತಿಳಿದು ಬರುತ್ತದೆ. ಸ್ಥಳೀಯರು ಪುರಾತನ ಗಣಿಗಳಿಂದ ಇಷ್ಟಷ್ಟು ಚಿನ್ನ ತೆಗೆಯುತ್ತಿದ್ದುದುಂಟು. ಆದರೆ ಇದು ಅಪಾಯಕಾರಿಯಾಗಿತ್ತು. ಆದ್ದರಿಂದ 1859ರಲ್ಲಿ ಕಾನೂನಿನ ಮೂಲಕ ಇದನ್ನು ನಿಷೇಧಿಸಲಾಗಿತ್ತು.
ಟಿಪ್ಪೂ ಸುಲ್ತಾನಿನ ಮರಣಾನಂತರ ಈಸ್ಟ್ ಇಂಡಿಯಾ ಕಂಪನಿ ಆಗಿನ ಮೈಸೂರು ರಾಜ್ಯದ ಗಡಿಯನ್ನು ಗುರುತಿಸಲು ಎಚ್.ಎಂ 33ನೆ ರೆಜಿಮೆಂಟಿನ ಲೆಫ್ಟೆನೆಂಟ್ ಜಾನ್ ವಾರೆನ್ ಎಂಬುವನನ್ನು 1802 ನೇಮಿಸಿತು. ಆತ ಈಗಿನ ಎರ್ರಕೊಂಡದಿಂದಲೇ ಸಮೀಕ್ಷೆ ಪ್ರಾರಂಭಿಸಿದ. ಜಾನ್ ವಾರೆನ್ 1804ರಲ್ಲಿ ಏಷ್ಯಾಟಿಕ್ ಜರ್ನಲ್‍ನಲ್ಲಿ ಇಲ್ಲಿಯ ಚಿನ್ನದ ನಿಕ್ಷೇಪದ ಬಗ್ಗೆ ಮೊಟ್ಟಮೊದಲಿಗೆ ವರದಿ ಮಾಡಿದ. ಮಾರಿಕುಪ್ಪಂ ಮತ್ತು ಉರಿಗಾಂನಲ್ಲಿ ಚಿನ್ನ ಸಿಕ್ಕಿದೆಯೆಂಬ ವದಂತಿಯನ್ನು ಕೇಳಿ ಆತ ಆ ಪ್ರದೇಶದಲ್ಲಿ ಅನ್ವೇಷಣೆ ನಡೆಸಿದ. ಆತ ವರದಿಮಾಡಿ ಸುಮ್ಮನೆ ಕೂರಲಿಲ್ಲ. ಮಾರಿಕುಪ್ಪಮ್‍ಗೆ ಹಿಂತಿರುಗಿ ಹನ್ನೆರಡು ಮಂದಿ ಕೂಲಿಕಾರರೊಡನೆ ಹಳೆಯಗಣಿಯಲ್ಲಿ ಅದುರನ್ನು ತೆಗೆದು ಅರೆದು ಪುಡಿ ಮಾಡಿಸಿದ. ಕೂಲಿಯಾಳುಗಳು ಆಗ 30 ಅಡಿ ಆಳದವರೆಗೆ ಇಳಿಯುತ್ತಿದ್ದರು. ಹೆಂಗಸರು ಅದುರನ್ನು ಅರೆದು ಜಾಲಿಸುತ್ತಿದ್ದರು. ಪರಿಯ ಜನಾಂಗದವರು ಈ ಕೆಲಸದಲ್ಲಿ ಪರಿಣತಿ ಗಳಿಸಿದ್ದರು. ಬೇಸಗೆಯಲ್ಲಿ ಮಾತ್ರ ಕಾರ್ಯಾಚಾರಣೆ ನಡೆಯುತ್ತಿತ್ತು. ಆಗ ಗಣಿ ಮಾಡಲು ಬೇಕಾಗಿದ್ದ ಹಗ್ಗ, ಬುಟ್ಟಿ, ಕಂದೀಲು, ಕಟ್ಟಿ ಇವುಗಳ ಬೆಲೆ ದುಬಾರಿಯಾಗಿದ್ದರಿಂದ ಗುಂಡಿಮಾಡಿ ಚಿನ್ನ ತೆಗೆಯುವುದು ಅಷ್ಟೇನೂ ಆಕರ್ಷಕವಾದ ಉದ್ಯಮವಾಗಿರಲಿಲ್ಲ. ಹನ್ನೆರಡು ಮಂದಿ ಕೆಲಸ ಮಾಡಿದರೆ ಒಂದು ದಿನದಲ್ಲಿ ಒಂದು ಗುಂಡಿ ತೆಗೆಯಬಹುದಾಗಿತ್ತು. ಹಳೆಯ ಗಣಿಗಳಲ್ಲಿ ಸಂಗ್ರಹಿಸಿದ ಅದುರನ್ನು ಪುಡಿ ಮಾಡಿಸಿ, ಜಾಲಿಸಿ, ವಾರನ್ ಮೂವತ್ತು ಪಗೋಡ ತೂಕದ ಚಿನ್ನವನ್ನು ಸಂಗ್ರಹಿಸಿದ್ದ. ಅದರ ಪರಿಶುದ್ಧತೆಯನ್ನು ತಿಳಿಯಲು ಮದ್ರಾಸಿನ ಟಂಕಸಾಲೆಗೆ ಕಳಿಸಿದ್ದ. ಅಲ್ಲಿಂದ ಇದು ಉತ್ತಮ ಗುಣಮಟ್ಟದ ಚಿನ್ನವೆಂದು ವರದಿ ಬಂತು. ಸರ್ಕಾರ ಈ ಪರಿಶೋಧನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಶಿಫಾರಸು ಮಾಡಿದ. ಆದರೆ ಸರ್ಕಾರ ಆಗ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೂ ಹಲವರು ಪ್ರಯತ್ನ ಮುಂದುವರಿಸಿದರು. ಬೆಂಗಳೂರಿನ ಕೆಲವು ನಿವಾಸಿಗಳು ಇದಕ್ಕಾಗಿ ಒಂದು ಕೂಟ ಮಾಡಿಕೊಂಡಿದ್ದರು. ಅವರಿಗೂ ಫಲ ದೊರಕಲಿಲ್ಲ.
ಮೈಕೇಲ್ ಎಫ್ ಲಾವೆಲ್ ಎಂಬ ನಿವೃತ್ತ ಐರಿಷ್ ಯೋಧನೊಬ್ಬ ಬೆಂಗಳೂರಿನಲ್ಲಿ ನೆಲಸಿದ್ದ. ನ್ಯೂಜೀóಲೆಂಡಿನಲ್ಲಿ ವಯೋರಿ ಯುದ್ಧ ಕಾರ್ಯಚರಣೆಯಲ್ಲಿ ತೊಡಗಿದ್ದಾಗ ಚಿನ್ನದ ಗಣಿಗಾರಿಕೆಯ ಅನುಭವ ಅವನಿಗೆ ಸ್ವಲ್ಪ ಮಟ್ಟಿಗೆ ದೊರಕಿತ್ತು. ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಚಿನ್ನ ದೊರಕುವುದೆಂಬ ವದಂತಿ ಅವನ ಕಿವಿಗೆ ಬಿತ್ತು. 1871ರಲ್ಲಿ ಅವನು ಆ ಪ್ರದೇಶವನ್ನು ಪರಿಶೀಲಿಸಿದ. ಕಲ್ಲಿದ್ದಲು ಮತ್ತು ಇತರ ಲೋಹಗಳ ಅನ್ವೇಷಣೆಗಾಗಿ ಪರವಾನೆ ಬೇಡಿ ಅವನು ಮೈಸೂರು ಸರ್ಕಾರಕ್ಕೆ 1873ರಲ್ಲಿ ಅರ್ಜಿ ಸಲ್ಲಿಸಿದ. ಆದರೆ ಅವನ ದೃಷ್ಟಿ ಇದ್ದದ್ದು ಚಿನ್ನವನ್ನು ಗಣಿ ಮಾಡುವುದರ ಮೇಲೆ. ದೀರ್ಘಕಾಲ ಪತ್ರ ವ್ಯವಹಾರವಾದ ಮೇಲೆ 1875ರಲ್ಲಿ ಅವನಿಗೆ ಈ ಬಗ್ಗೆ ಸಂಪೂರ್ಣ ಹಕ್ಕು ದೊರಕಿತು. ಅವನು ಆರಿಸಿದ ಒಂದು ಕ್ಲಿಪ್ತ ಪ್ರದೇಶದಲ್ಲಿ ಚಿನ್ನ ತೆಗೆಯಲು ಇಪ್ಪತ್ತು ವರ್ಷಗಳ ಗುತ್ತಿಗೆ ನೀಡಲು ಸರ್ಕಾರ ಒಪ್ಪಿತು. ಅವನು ಉರಿಗಾಂ ಬಳಿ ತೋಡುದಾರಿ ತೆಗೆಸಿದ. 1877ರಲ್ಲಿ ಮದ್ರಾಸಿನ ಮೇಜರ್ ಜನರಲ್ ಡಿ ಲಾ ಪೋರ್ ಬಿಯರ್ಸ್‍ಫರ್ಡ್ ಮತ್ತು ಇತರರಿಗೆ ತನ್ನ ಹಕ್ಕನ್ನು ಮಾರಿದ. ಅವರು ಅನಂತರ ಕೋಲಾರ ಕನ್ಸೆಸಷನರೀಸ್ ಲಿಮಿಟೆಡ್ ಎಂಬ ಸಂಸ್ಥೆ ರಚಿಸಿಕೊಂಡು ಕೆಲಸ ಮುಂದುವರಿಸಿದರು. ಆಗ ಈ ಕಂಪೆನಿ ಐದು ಸಾವಿರ ಪೌಂಡ್ ಬಂಡವಾಳ ಹೂಡಿತು. ಆಸ್ಟ್ರೇಲಿಯದಿಂದ ಇಬ್ಬರು ಗಣಿ ತಜ್ಞರನ್ನು ಕರೆಸಿಕೊಂಡು ಗಣಿ ಕೆಲಸ ಪ್ರಾರಂಭಿಸಿತು. ಸ್ವಲ್ಪಕಾಲದ ಅನಂತರ ಅವರ ಪ್ರಯತ್ನಕ್ಕೆ ಫಲ ದೊರಕಿತು. ಮದ್ರಾಸಿನ ಉರಿಗಾಂ ಕಂಪನಿ ಲಿ. ಸ್ಥಾಪಿತವಾಗಿ ಕೆಲಸ ಮಾಡತೊಡಗಿದ ಮೇಲೆ ಇನ್ನೂ ಹಲವಾರು ಕಂಪನಿಗಳು ಆರಂಭವಾದುವು. ವೈನಾಡಿನಲ್ಲಿ ಚಿನ್ನದ ಉದ್ಯಮದಲ್ಲಿ ಕೈಸುಟ್ಟಕೊಂಡ ಅನೇಕ ಮಂದಿ ಇಲ್ಲಿಗೆ ದೌಡಾಯಿಸಿದರು. 1881ರ ವೇಳೆಗೆ ಅಲ್ಲಿ 11 ಕಂಪನಿಗಳಿದ್ದುವು. ಇವುಗಳಲ್ಲಿ ತೊಡಗಿಸಿದ್ದ ಬಂಡವಾಳ 13,00,000 ಫೌಂ. ಆದರೆ ಇವುಗಳಲ್ಲಿ ಹಲವು ಅನಂತರ ತಮ್ಮ ಕೆಲಸ ನಿಲ್ಲಿಸಿದವು.
ಈ ವೇಳೆಗೆ ಲಂಡನಿನ ಜಾನ್ ಟೇಲರ್ ಮತ್ತು ಕಂಪನಿಯವರಿಗೆ ಇಲ್ಲಿಯ ಗಣಿ ಅಭಿವೃದ್ಧಿಯ ಕೆಲಸವನ್ನು ವಹಿಸಿಕೊಡಲಾಗಿತ್ತು (1880). ಇಲ್ಲಿ ಚಿನ್ನ ಸಿಗಲಾರದೆಂಬ ಭಾವನೆ ಬಂದಿದ್ದ ಸಮಯದಲ್ಲಿ ಆ ಸಂಸ್ಥೆಯ ಆಸಕ್ತಿಯಿಂದಾಗಿ ಶೀಘ್ರದಲ್ಲೇ ಚಿನ್ನದ ಆವಿಷ್ಕಾರವಾಯಿತು. ಮೈಸೂರು ಗಣಿಯನ್ನು ಮರುಪರಿಶೀಲಿಸಿದ ಕ್ಯಾಪ್ಟನ್ ಪ್ಲಮರ್ ಎಂಬ ತಜ್ಞ ಪುರಾತನರು ಹಾಗೆಯೇ ಉಳಿಸಿದ್ದ ಭಾಗದಲ್ಲಿ ಗಣಿ ಮಾಡಿದಾಗ ಒಂದು ಟನ್ ಅದುರಿನಲ್ಲಿ ನಾಲ್ಕು ಔನ್ಸ್ ಚಿನ್ನ ಸಿಕ್ಕಿತು. ಅಲ್ಲಿಂದೀಚೆಗೇ ಈ ಉದ್ಯಮ ಲಾಭಪ್ರದವಾದ್ದು. 1894-95ರ ವೇಳೆಗೆ ಅಲ್ಲಿ ಒಟ್ಟು 13 ಕಂಪನಿಗಳು 35,00,000 ಪೌಂ. ಬಂಡವಾಳ ತೊಡಗಿಸಿದ್ದುವು. 1886-87ರ ಚಿನ್ನದ ಉತ್ಪನ್ನ ರೂ.8,88,606 ಮೌಲ್ಯದ 16,325 ಔನ್ಸ್‍ಗಳು.
ಮುಂದಿನ ಮುಕ್ಕಾಲು ಶತಮಾನ ಕಾಲ ಈ ಉದ್ಯಮ ಯಶಃಪ್ರದವಾಗಿ ನಡೆಯಿತು. ಆಗಿನ ಮೈಸೂರು ಸರ್ಕಾರದೊಡನೆ ಒಪ್ಪಂದ ಮಾಡಿಕೊಂಡ ಕಂಪನಿಗಳು ತಮ್ಮ ಆಡಳಿತ ಕೇಂದ್ರವನ್ನು ಲಂಡನ್ನಿನಿಂದ 1949ರಲ್ಲಿ ಭಾರತಕ್ಕೆ ವರ್ಗಾಯಿಸಿದರು. ಮೈಸೂರು ಸರ್ಕಾರ ಈ ಕೈಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಿದ್ದು 1956ರಲ್ಲಿ. ಇದಕ್ಕಾಗಿ ವಿದೇಶೀ ಕಂಪನಿಗಳಿಗೆ ನೀಡಲಾದ ಹಣ ರೂ.1,64,00,000. 1988ರಲ್ಲಿ ಚಿನ್ನದಾಸ್ತಾನು ಬೆಳೆಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಭಾರತ ಕೂಡ ಅಂತಾರಾಷ್ಟ್ರೀಯ ನಿಧಿ ಸಂಸ್ಥೆಯ ಸದಸ್ಯ ರಾಷ್ಟ್ರವಾದ್ದರಿಂದ ಅದು ನಿಗದಿಪಡಿಸಿದ ಬೆಲೆಗೆ ಚಿನ್ನವನ್ನು ಕೊಳ್ಳಬೇಕಾಗಿತ್ತು. ಆಗ ಒಂದು ಔನ್ಸ್ ಚಿನ್ನಕ್ಕಿದ್ದ ಬೆಲೆ 34 ಡಾಲರ್ (ತೊಲಕ್ಕೆ 62.5ರೂ) ಈ ಬೆಲೆಯನ್ನು 1934ರಲ್ಲೇ ನಿಗದಿಪಡಿಸಲಾಗಿತ್ತು. ಮೈಸೂರು ಸರ್ಕಾರ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾದಾಗ ಕೇಂದ್ರ ಸರ್ಕಾರ ಚಿನ್ನದ ಉಸ್ತುವಾರಿ ನೋಡಿಕೊಳ್ಳಲು ಮುಂದೆ ಬರಬೇಕಾಯಿತು.
ಭಾರತ ಸರ್ಕಾರ ಇದನ್ನು 1962ರ ಡಿಸೆಂಬರ್ 1ರಂದು ವಹಿಸಿಕೊಂಡಿತು. ಕೋಲಾರದ ಚಿನ್ನದ ಗಣಿಗಳ ಒಡೆತನ ಬಿಟ್ಟು ಕೂಡಲು ರಾಜ್ಯಕ್ಕೆ, ಕೇಂದ್ರವು 305.32 ಲಕ್ಷ ರೂಪಾಯಿ ಪರಿಹಾರ ನೀಡಿತು. 1965ರಲ್ಲಿ ಮೈಸೂರು ಗಣಿ ಛಾಂಪಿಯನ್ ಗಣಿಯೊಂದಿಗೆ ವಿಲೀನವಾಯಿತು. 1922ರಲ್ಲಿ 'ಕೋಲಾರ ಗೋಲ್ಡ್ ಮೈನಿಂಗ್ ಅಂಡರ್ ಟೈರಿಂಗ್ ಭಾರತ ಗೋಲ್ಡ್ ಮೈನ್ಸ್ ಲಿ. ಎಂಬ ಹೆಸರಿನ ಸಂಸ್ಥೆಯಾಗಿ ಬದಲಾಯಿತು. - ತೊಡಗಿಸಿದ ಬಂಡವಾಳ ಹದಿನೈದು ಕೋಟಿ ರೂಪಾಯಿ. 1925ರಲ್ಲಿ ಇದನ್ನು 25 ಕೋಟಿ ರೂಪಾಯಿಗೆ ಏರಿಸಲಾಯಿತು. 1988ರವರೆಗೆ ಕೋಲಾರ ಚಿನ್ನದ ಗಣಿಯಿಂದ ಉತ್ಪತ್ತಿಯಾದ ಚಿನ್ನವನ್ನು ಅಂತಾರಾಷ್ಟ್ರೀಯ ನಿಧಿ ಸಂಸ್ಥೆ ನಿಗದಿಪಡಿಸಿದ ಬೆಲೆಗೆ ಕೇಂದ್ರ ಸರ್ಕಾರ ಕೊಳ್ಳುತ್ತಿತ್ತು. ಅನಂತರ ಲಂಡನ್ನಿನ ಚಿನ್ನದ ಮಾರುಕಟ್ಟೆ ಬೆಲೆ ಅನುಸರಿಸಿ ಅದಕ್ಕೆ ಶೇ 35 ಹೆಚ್ಚು ಬೆಲೆ ಸೇರಿಸಿ ಸರ್ಕಾರ ಚಿನ್ನವನ್ನು ಕೊಳ್ಳತ್ತಿತ್ತು. ಇದರಿಂದಾಗಿ ಕೋಲಾರ ಚಿನ್ನದ ಗಣಿಗಳು ಅನುಭವಿಸುತ್ತಿದ್ದ ನಷ್ಟದ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. 1988ರಲ್ಲಿ ಅದರ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಲು ಪರವಾನಗಿ ಪಡೆದ ಚಿನ್ನದ ವ್ಯಾಪಾರಿಗಳಿಗೆ ಈ ಗಣಿಯ ಚಿನ್ನದ ಉತ್ಪಾದನೆಯ ಒಂದು ಭಾಗವನ್ನು ಮಾರಲು ಅನುಮತಿ ನೀಡಲಾಯಿತು. 90ರ ದಶಕದಲ್ಲಿ ಚಿನ್ನದ ಮಾರುಕಟ್ಟೆ ಬೆಲೆ 10 ಗ್ರಾಂಗೆ ಸುಮಾರು 4300 ರೂ. ಇತ್ತು. ಆಳ ಗಣಿಗಳಿಂದ ಚಿನ್ನದ ಅದುರನ್ನು ತೆಗೆಯುವುದಕ್ಕೆ ಪ್ರತಿ ಗ್ರಾಂ ಚಿನ್ನಕ್ಕೆ ಈ ಗಣಿಗಳಿಗೆ 11,000 ರೂ. ಖರ್ಚು ಬರುತ್ತಿತ್ತು. ಉತ್ಕøಷ್ಟ ಅದುರು ಬರುಬರುತ್ತ ಕಡಿಮೆಯಾಯಿತು. ಆಡಳಿತಕ್ಕೆ ಈ ಗಣಿಗಳನ್ನು ನಿಗದಿಪಡಿಸುವುದೇ ದುಸ್ತರವಾಯಿತು. ಅನೇಕ ಕಾರ್ಮಿಕರು ಸ್ವಯಂ ನಿವೃತ್ತಿ ಕೋರಲು ಅನುವು ಮಾಡಿಕೊಡಲಾಯಿತು. 2001ರಲ್ಲಿ ಕೋಲಾರ ಚಿನ್ನದ ಗಣಿಗಳನ್ನು ಮುಚ್ಚಲಾಯಿತು. ಕೋಲಾರ ಗಣಿಗಳಿಂದ ಉತ್ಪತ್ತಿಯಾದ ಚಿನ್ನದ ಒಟ್ಟು ಪ್ರಮಾಣ 1985ರ ಹೊತ್ತಿಗೆ 800 ಟನ್ನುಗಳು; ಆಗಿ ಅದರ ಬೆಲೆ 17,000 ಕೋಟಿ ರೂಪಾಯಿ. ಹಣಕಾಸಿನ ಸಚಿವಾಲಯದ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿದ್ದ ಈ ಉದ್ಯಮದ ಒಡೆತನ ನಿರ್ವಹಣೆಗಳಿಗಾಗಿ 1972ರಲ್ಲಿ ಪ್ರತ್ಯೇಕವಾದ ಕಂಪನಿಯೊಂದನ್ನು ರಚಿಸಲಾಯಿತು.
ಇತ್ತೀಚೆಗೆ ಕೋಲಾರ ಚಿನ್ನದ ಗಣಿ ನಗರದಲ್ಲಿ ಸರ್ಕಾರದ ಒಡೆತನದಲ್ಲಿ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ಎಂಬ ಸಂಸ್ಥೆಯೊಂದು ಸ್ಥಾಪಿತವಾಗಿದೆ. ಭಾರತ ಸರ್ಕಾರದ ರಕ್ಷಣ ಸಚಿವಾಲಯದ ರಕ್ಷಣೋತ್ಪಾದನ ಇಲಾಖೆಯ ಆಡಳಿತ ನಿಯಂತ್ರಣಕ್ಕೊಳಪಟ್ಟಿರುವ ಈ ಸಂಸ್ಥೆ ಮಣ್ಣಗೆದು ತಳ್ಳುವ, ಸಾಗಿಸುವ, ಹರಗುವ ಯಂತ್ರಗಳ ತಯಾರಿಕೆಯಲ್ಲಿ ತೊಡಗಿದೆ.
ಕೋಲಾರದ ಚಿನ್ನದ ಗಣಿ: ಭೂವಿಜ್ಞಾನದ ಪ್ರಕಾರ ಈ ಗಣಿಗಳು ಧಾರವಾಡದ ಶ್ರೇಣಿಯ ಹಾರನ್‍ಬ್ಲೆಂಡ್ ಶಿಸ್ಟಿನಲ್ಲಿ ಸ್ಥಾಪಿತವಾಗಿವೆ. ಈ ಶ್ರೇಣಿಯಲ್ಲಿ ಬೆಣಚುಕಲ್ಲಿನ ಶೈಲಭಿತ್ತಿಗಳು (ರೀಫ್ಸ್) ಕುಡಿಗಳೋಪಾದಿಯಲ್ಲಿ ಚಿಗುರಿ ಹರಡಿವೆ. ಖನಿಜ ರಚನೆ ಉತ್ತರ-ದಕ್ಷಿಣ ಮುಖವಾಗಿ ಹಬ್ಬಿ ಪಶ್ಚಿಮದ ಕಡೆಗೆ ಕೆಳಗಿಳಿಯುತ್ತದೆ. ಶಿಸ್ಟಿನ ವಲಯದ ಉದ್ದ 80 ಕಿ.ಮೀ. ಇದರ ಅಗಲ ತುಂಬ ಅಗಲವಾಗಿರುವ ಕಡೆಯಲ್ಲಿ 7 ಕಿ.ಮೀ. ಗಳಷ್ಟಿದ್ದು ಕೆಲವು ಕಡೆಗಳಲ್ಲಿ 1 ಕಿ.ಮೀ.ನಷ್ಟು ಕಿರಿದಾಗುತ್ತದೆ. ಈ ರಚನೆಯ ಪಶ್ಚಿಮದ ಅಂಚಿಗೆ ಪಟ್ಟೆಗಟ್ಟಿರುವ ಆಯಸ್ಸಂಯುಕ್ತ ಮತ್ತು ಜಾಸ್ಪರ್ ಜಾತಿಯ ಬೆಣಚುಕಲ್ಲಿನ ಶಿಲೆಗಳಿವೆ. ಬೆಣಚುಕಲ್ಲಿನ ಶಿಲೆಗಳಲ್ಲಿ (ಇವನ್ನು ಖನಿಜಪ್ರರೋಹಗಳೆಂದು ಕರೆಯುತ್ತಾರೆ) ಚಿನ್ನ ಹೆಚ್ಚು ಕಡಿಮೆ ಅಗಲವುಳ್ಳ ಅಸಮ ಫಲಕಗಳ ರೂಪದಲ್ಲಿವೆ.
ಪೂರ್ವಿಕರು ಈ ಪ್ರದೇಶದಲ್ಲಿ ಚಿನ್ನವನ್ನು ಪಡೆಯುವ ಕೆಲಸದಲ್ಲಿ ತೊಡಗಿದ್ದರು. 400 ವರ್ಷಗಳಷ್ಟು ಹಿಂದಿನಿಂದಲೂ ಇಂಥ ಕೆಲಸ ನಡೆಯುತ್ತಿದ್ದ ಕುರುಹುಗಳು ಈ ಪ್ರದೇಶದಲ್ಲಿ ಗೋಚರಿಸುತ್ತವೆ. ಇಲ್ಲಿನ ಗಣಿಗಳಲ್ಲಿ ಕೆಲವು 2,000 ವರ್ಷಗಳಷ್ಟು ಹಿಂದಿನವೆಂದು ಭಾವಿಸಲಾಗಿದೆ. ಮಣ್ಣಿನ ಮಡಿಕೆಗಳೂ ನೆಲದ ತಳದಲ್ಲಿ ಚಿನ್ನವನ್ನು ಕರಗಿಸುವುದಕ್ಕೆ ಬಳಸುತ್ತಿದ್ದ ಸೌದೆ ಮುಂತಾದವೂ ಹಿಂದಿನ ಕಾಲದ ಜನರು ನೆಲವನ್ನು 200 ಗಳಷ್ಟು ಆಳಕ್ಕೆ ಅಗೆದು ತೋಡಿರುವ ಜಾಗಗಳಲ್ಲಿ ಸಿಕ್ಕಿವೆ. ಇತ್ತೀಚಿನ ಗಣಿ ಕೆಲಸ ಇಲ್ಲಿ ಪ್ರಾರಂಭವಾದದ್ದು 1880ರಲ್ಲಿ. ಮೂರು ಗಣಿಗಳಲ್ಲಿ ಮಾತ್ರ ಚಿನ್ನದ ಅದುರಿನ ಉತ್ಖನನ ನಡೆಯುತ್ತಿತ್ತು. 2001ರ ಹೊತ್ತಿಗೆ ಇಲ್ಲಿನ ಎಲ್ಲ ಗಣಿ ಕಾರ್ಯಾಚರಣೆಯೂ ನಿಂತುಹೋಯಿತು. ಅವುಗಳ ಹೆಸರು ಮೈಸೂರು, ಛಾಂಪಿಯನ್ ಮತ್ತು ನಂದಿದುರ್ಗ. ಈಗಿನ ಗಣಿಯ ಆಡಳಿತಕ್ಕೆ ಕೋಲಾರ್ ಗೋಲ್ಡ್ ಮೈನಿಂಗ್ ಅಂಡರ್‍ಟೇಕಿಂಗ್ಸ್ ಎಂದು ಹೆಸರು. ಇದು ಭಾರತ ಸರ್ಕಾರದ ಹಣಕಾಸಿನ ಸಚಿವಾಲಯದ ಆರ್ಥಿಕ ಆಶ್ರಯದಲ್ಲಿ ನಡೆಯಿತು.
ಪ್ರಪಂಚದ ಅಳತೆಯಿಂದ ನೋಡಿದರೆ ಕೋಲಾರದ ಚಿನ್ನದ ಪ್ರದೇಶದಲ್ಲಿ ದೊರೆಯುವ ಚಿನ್ನ ಅಲ್ಪಪರಿಮಾಣದ್ದು. ಆದರೆ ಬೇರೆ ಅನೇಕ ಕಾರಣಗಳಿಂದ ಇದಕ್ಕೆ ಪ್ರಾಧಾನ್ಯ ದೊರೆತಿದೆಯಲ್ಲದೆ ಖ್ಯಾತಿಯೂ ಬಂದಿದೆ. ಈ ದೊಡ್ಡ ಉಪಖಂಡದಲ್ಲಿ ಇದೊಂದರಲ್ಲೇ ಚಿನ್ನ ನಿರಂತರವಾಗಿ ದೊರೆಯುತ್ತಿರುವುದು. ತಿಳಿದ ದೃಷ್ಟಿಯಿಂದ ಇದು ಜಗತ್ತಿನಲ್ಲಿ ಎರಡನೇ ಗಣಿ. ನೆಲಮಟ್ಟದಿಂದ ಇದು 3,230 ಮೀ.ಗಳಷ್ಟು ಕೆಳಕ್ಕೆ ಹೋಗಿದೆ. ಮೊದಲನೆಯದು ದಕ್ಷಿಣ ಆಫ್ರಿಕಾದ ಕಾರ್ಲ್‍ಟಾಂಗ್‍ವಿಲೆ. ಇದರ ಆಳ 3777 ಮೀ. ವಾಯುನಿಯಂತ್ರಣ ಮತ್ತು ರಾಟೆಯ ಯಂತ್ರಗಳು ಮುಂತಾದ ಅತ್ಯಾಧುನಿಕ ಗಣಿ ಕೆಲಸದ ಕೆಲ ಪದ್ಧತಿಗಳನ್ನು ಇದು ಬೆಳೆಸಿಕೊಂಡಿದೆ. 1964ರ ಅಂತ್ಯದವರೆಗೆ ಇಲ್ಲಿ ಅಗೆದು ತೆಗೆದ ಒಟ್ಟು ಚಿನ್ನದ ಮೊತ್ತ 23.5 ದಶಲಕ್ಷ ಔನ್ಸ್‍ಗಳು; ಇದರ ಬೆಲೆ 250 ಕೋಟಿ ರೂಪಾಯಿಗಳು. ಗಣಿಗಳು ಆಳವಾಗಿರುವುದರಿಂದಲೂ ನೆಲದ ಒತ್ತಡ ಬಹಳ ಹೆಚ್ಚಾಗಿರುವುದರಿಂದಲೂ ಪದೇ ಪದೇ ಸಂಭವಿಸುವ ಬಂಡೆಗಳ ಸಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು ಅವುಗಳ ದುಷ್ಪರಿಣಾಮಗಳನ್ನು ಮಿತಗೊಳಿಸಲು ಕೆಳನೆಲದ ಗಣಿ ಕೆಲಸಗಳಿಗೆ ಈಡುಗಳನ್ನು ಕಟ್ಟುವ ಒಂದು ಸುವ್ಯವಸ್ಥೆಯನ್ನು ಗಣಿಗಳು ಏರ್ಪಡಿಸಿಕೊಂಡಿವೆ. ಇಲ್ಲಿ ನಡೆಸಿರುವ ಸಿಡಿತಗಳ ಶೋಧನೆ ಪ್ರಪಂಚದ ಎಲ್ಲ ಭಾಗಗಳಲ್ಲೂ ಇರುವ ಗಣ್ಯ ಗಣಿ ಎಂಜಿನಿಯರುಗಳ ಗಮನವನ್ನು ಸೆಳೆದಿವೆ. ಈ ಶತಮಾನದ ಮಧ್ಯಕಾಲದವರೆಗೂ ಉತ್ಪಾದಕ ಗಣಿಗಳ ಕೆಲಸದ ಅಧಿಕ ಭಾಗ ಛಾಂಪಿಯನ್ ಸಿರವೆಂಬ ಹೆಸರಿನ ಒಂದು ಪ್ರಧಾನವಾದ ಸಿರದ ಜಾಡನ್ನು ತೋಡಿ ಚಿನ್ನ ತೆಗೆಯುವುದರಲ್ಲಿ ನಿರತವಾಗಿತ್ತು. ಈ ಸಿರದ ಅದುರಿನ ನಾಲೆಯ ನಿಕ್ಷೇಪಗಳು ಕಡಿಮೆಯಾಗುತ್ತ ಬರಲು ಮೇಲು ಮೈಯಲ್ಲಿ ಹಳಬರು ತೋಡಿರುವ ಜಾಡುಗಳನ್ನು ಗಮನಿಸಿ ಚಿನ್ನವಿರಬಹುದಾದ ಎಡೆಗಳನ್ನು ಹುಡುಕಿ ಗಣಿಯ ಸ್ವಾಮ್ಯದ ನೆಲದ ಉತ್ತರ ಮತ್ತು ಪಶ್ಚಿಮದ ಕಡೆಗಳಲ್ಲಿ ಓರಿಯಂಟಲ್ ಸಿರ ಎಂಬ ಮತ್ತೊಂದು ಲಾಭಕರವಾದ ಸಿರದ ನಾಲೆಯಿರುವುದನ್ನು ಕಂಡುಹಿಡಿಯಲಾಯಿತು. ಈ ಓರಿಯಂಟಲ್ ಸಿರವನ್ನೇ ಬಹುವಿಸ್ತಾರವಾಗಿ ಅಭಿವೃದ್ಧಿಗೊಳಿಸಲಾಗಿದೆÉ; ಮತ್ತು ಇದೇ ಹೆಚ್ಚಾಗಿ ಅದುರನ್ನು ಕೊಡುವ ನಿಕ್ಷೇಪವಾಗಿ ಬಹು ದೀರ್ಘಕಾಲ ಗಣಿ ಕಾರ್ಯಾಚರಣೆಗೆ ಒಳಪಟ್ಟಿತು.
ಆಳದ ಗಣಿಕೆಲಸ: ನೆಲವನ್ನು ತುಂಬ ಆಳವಾಗಿ ತೋಡಿದಾಗ ಅಲ್ಲಿ ವಾತಾವರಣ ಸ್ಪರ್ಶವೇ ಇಲ್ಲದ ಬಂಡೆಗಳ ಸುತ್ತ 1500 ಫ್ಯಾ. ಉಷ್ಣತೆ ಇದ್ದುದು ಕಂಡು ಬಂದಿತು. ಅದರ ಪರಿಣಾಮವಾಗಿ ಅಲ್ಲಿ ಕೆಲಸಮಾಡಲು ಸಹಜವಾಗಿಯೇ ಬಲು ಕಷ್ಟವೆನಿಸಿತು. ಇದಕ್ಕಾಗಿ ಅಮೋನಿಯ ಕೂಲರ್ ನಮೂನೆಯ ವಾಯು ಸಂಸ್ಕರಣ (ಏರ್‍ಕಂಡಿಷನಿಂಗ್) ಯಂತ್ರಗಳನ್ನು ಮೇಲು ನೆಲದಲ್ಲಿ ಸ್ಥಾಪಿಸಿ ಸುತ್ತಣ ಗಾಳಿಯನ್ನು 400 ಫ್ಯಾ.ಗೆ ಇಳಿಸಿ ಅದನ್ನು ಗಣಿಯ ತೋಡುದಾರಿಗಳ ಮೂಲಕ ಕೆಳಕ್ಕೆ ಒತ್ತಿ ತನ್ಮೂಲಕ ಗಣಿಯೊಳಗಿನ ಗಾಳಿಯ ಉಷ್ಣತೆಗಳನ್ನು ತಡೆದುಕೊಳ್ಳುವಷ್ಟು ಮಟ್ಟಕ್ಕೆ ತರಲಾಯಿತು. ಕೆಲಸಮಾಡುವ ಜಾಗಗಳಿಗೆ ಬಿಡುವುದಕ್ಕೆ ಮುಂಚೆ ಗಾಳಿಯನ್ನು ಇನ್ನೂ ತಂಪಿಸುವುದಕ್ಕಾಗಿ ಒಂದು ಗಣಿಯಲ್ಲಿ ಫ್ರಿಯಾನ್ ಎಂಬುದನ್ನು ಉಷ್ಣತಾಶಾಮಕ ಮಾಧ್ಯಮವಾಗಿ ಬಳಸಿಕೊಂಡು ಎರಡನೆಯ ದರ್ಜೆಯ ಮತ್ತೊಂದು ತಂಪಿಸುವ ಯಂತ್ರವನ್ನು ನೆಲದಮಟ್ಟಕ್ಕೆ 8,000ಗಳಷ್ಟು ಆಳಕ್ಕೆ ಇಳಿಸಲಾಯಿತು. ಇಷ್ಟು ಏರ್ಪಾಡುಗಳನ್ನು ಮಾಡಿದರೂ ಕೂಡ ಕೆಲವು ಕೆಲಸದ ಜಾಗಗಳಲ್ಲಿ ಪರಿಸರದ ಪರಿಸ್ಥಿತಿಗಳು ಬಹಳ ತೀವ್ರವಾಗಿರುವುದು ಕಂಡುಬಂದಿತು. ಶುಷ್ಕ ಮತ್ತು ಆದ್ರ್ರ ಬಲ್ಬ್ ಉಷ್ಣತೆಗಳನ್ನು (ಡ್ರೈ ಅಂಡ್ ವೆಟ್ ಬಲ್ಬ್ ಟೆಂಪರೇಚರ್ಸ್) ಪರಿಣಾಮಕಾರಿಯಾಗಿ ಕೆಳಕ್ಕಿಳಿಸಲು ಸಣ್ಣ ಜಾಗಗಳನ್ನು ತಂಪಿಸುವ ಪ್ರತ್ಯೇಕ ಯಂತ್ರಗಳನ್ನು ಸ್ಥಾಪಿಸಬೇಕಾದ ಘಟ್ಟವನ್ನು ಈಗ ನಾವು ಮುಟ್ಟಿದ್ದೇವೆ.
ಆಳದ ಗಣಿ ಕೆಲಸ ತೋಡಿದ ಪ್ರದೇಶಕ್ಕೆ ಊರೆಕಟ್ಟುವ ಸಮಸ್ಯೆಯನ್ನು ಸಹ ತಂದೊಡ್ಡಿದೆ. ಆಳವಿಲ್ಲದ ಹಿಂದಿನ ಗಣಿಗಳಿಂದ ಪ್ರಾರಂಭಿಸಿ ಇಂದಿನ ಹೇರಾಳದ ಗಣಿ ಕೆಲಸದ ಪರಿಸ್ಥಿತಿಯವರೆಗೆ ಬಗೆಬಗೆಯಾದ ಊರೆಕಟ್ಟುವ ವಿಧಾನಗಳು ವಿಕಾಸಹೊಂದಿವೆ. ಮೊದಲು ಊರೆಗಳೇ ಇರಲಿಲ್ಲ. ಬಳಿಕ ಅಲ್ಲಲ್ಲಿ ಮರದ ದಿಮ್ಮಿಗಳನ್ನು ಊರೆಗೋಲಾಗಿ ನೆಡುತ್ತಿದ್ದರು. ಬಳಿಕ ಕ್ರಿಬ್‍ಸೆಟ್ಟುಗಳಿಂದ ಹಿಡಿದು, ಕ್ರಿಬ್‍ಸೆಟ್ಟುಗಳಿಗೆ ಶುಷ್ಕ ಕಲ್ಲುಚೂರುಗಳಿಂದ ತುಂಬಿರುವ ಅರೆಗಟ್ಟಿ ಊರೆಗಳು ಮತ್ತು ಪಿಗ್‍ಸ್ಟೈಗಳು, ಕೊನೆಗೆ ಸಂಪೂರ್ಣವಾಗಿ ಬೆಣಚುಕಲ್ಲು ಕಟ್ಟಡದ ಗೋಡೆಗಳು-ಈ ರೀತಿಯಲ್ಲಿ ನಡೆದಿದೆ ಊರೆಗಳ ವಿಕಾಸ. ಈಚಿನ ವರ್ಷಗಳಲ್ಲಿ ಅರೆಯುವಾಗ ತೆಗೆದುಹಾಕಿದ ಕಳಸೆಯ ದೂಳನ್ನು ಅಂಟು ತೆಗೆದು ನೀರು ಬೆರೆಸಿ ಮರಳು ತುಂಬುವ ವಿಧಾನವೊಂದನ್ನು ಅಷ್ಟು ಆಳವಿಲ್ಲದ ಗಣಿಕೆಲಸದ ಕಡೆಗಳಲ್ಲಿ ಜಯಪ್ರದವಾಗಿ ಬಳಸಲಾಗಿದೆ. ಮರದ ದಿಮ್ಮಿಯ ಕ್ರಿಬ್‍ಸೆಟ್ಟುಗಳನ್ನೂ 90 ಪೌಂಡುಗಳ ಅಂಡಾಕಾರದ ರೈಲ್ ಕಮಾನುಗಳನ್ನೂ ಅದುರು ಮತ್ತು ಇತರ ಸಾಮಾನುಗಳನ್ನು ಮೇಲಕ್ಕೆಳೆಸಿ ಇಳಿಸುವುದಕ್ಕೂ ಪ್ರಯಾಣದ ಹಾದಿಗಳಿಗೂ ಉಪಯೋಗಿಸಲಾಗಿದೆ.
ಈ ಉದ್ಯಮಕ್ಕೆ ಬೇಕಾದ ಜಲವಿದ್ಯುಚ್ಛಕ್ತಿ ಕಾವೇರಿ ನದಿಯ ಮೇಲಿರುವ ಶಿವಸಮುದ್ರದಿಂದ 144 ಕಿ.ಮೀ. ಗಳನ್ನು ಹಾಯ್ದುಬರುತ್ತದೆ. ಈ ಶಕ್ತ್ಯುತ್ಪಾದಕ ಯಂತ್ರಾಗಾರವನ್ನು ಕೋಲಾರದ ಗಣಿಯ ಉದ್ಯಮಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುವುದಕ್ಕಾಗಿಯೇ ಸ್ಥಾಪಿಸಲಾಯಿತು. ಭಾರತದಲ್ಲಿ ಮೊದಮೊದಲು ಸ್ಥಾಪಿತವಾದ ಯಂತ್ರಾಗಾರಗಳ ಪೈಕಿ ಇದೊಂದು. ಪಾಲಾರ್ ನದಿಗೆ 12 ಕಿ.ಮೀ. ದೂರದಲ್ಲಿರುವ ಬೇತಮಂಗಲದಲ್ಲಿನ ಕಟ್ಟೆಯಿಂದ ಈ ಉದ್ಯಮಕ್ಷೇತ್ರಕ್ಕೆ ಶುದ್ಧ ನೀರನ್ನು ಒದಗಿಸಲಾಗಿದೆ. ಕಂಪೆನಿಗಳು ಸುಸಜ್ಜಿತವಾದ ಆಸ್ಪತ್ರೆಯನ್ನು ನಡೆಸುತ್ತಿವೆ. ಇದರಲ್ಲಿ 250 ಹಾಸಿಗೆಗಳಿದ್ದು ಎಲ್ಲ ನಮೂನೆಯೂ ವೈದ್ಯಸೌಕರ್ಯಗಳನ್ನೂ ಏರ್ಪಡಿಸಿದೆ. ಇದಕ್ಕಾಗಿ ಸಾಕಷ್ಟು ಸಿಬ್ಬಂದಿಯೂ ಉಂಟು. ಸ್ಥಳೀಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಈ ಊರಿನಲ್ಲಿ ಅನೇಕ ಶಾಲೆಗಳೂ ಕಾಲೇಜುಗಳೂ ಪಾಲಿಟೆಕ್ನಿಕ್ಕುಗಳೂ ಇವೆ. ಜೀವನದ ಇತರ ಸೌಕರ್ಯಗಳನ್ನೂ ಅವಶ್ಯಕತೆಗಳನ್ನೂ ಗಣಿ ಪ್ರದೇಶದಲ್ಲಿ ಒದಗಿಸಲಾಗಿದೆ. ಕ್ರಿ.ಶ 2000ದವರೆಗೆ ಕೋಲಾರದ ಚಿನ್ನದ ಗಣಿಗಳು ಕೆ.ಜಿ.ಎಫ್. ಪ್ರದೇಶದ ಎಲ್ಲ ಅಭಿವೃದ್ಧಿಗಳಿಗೆ ಕಾರಣವಾಗಿದ್ದವು. ಅನೇಕ ಕಾರಣಗಳಿಂದಾಗಿ ನಷ್ಟ ಅನುಭವಿಸಬೇಕಾಗಿ ಬಂದಾಗ ಕ್ರಿ.ಶ. 2001ರಲ್ಲಿ ಎಲ್ಲ ಗಣಿಗಳನ್ನೂ ಮುಚ್ಚಲಾಯಿತು. (ಎಂ.ಎಸ್‍ಯು.)