ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಲೆಮೆನ್ಸೋ, ಜಾರ್ಜ್

ಕ್ಲೆಮೆನ್ಸೋ, ಜಾರ್ಜ್

1841-1929. ಫ್ರೆಂಚ್ ರಾಜಕಾರಣಿ, ಪ್ರಧಾನಿ, ಪತ್ರಕರ್ತ, ಫ್ರಾನ್ಸಿನ ವೆಂಡೀ ಪ್ರಾಂತ್ಯದಲ್ಲಿ 1841ರಲ್ಲಿ ಜನಿಸಿದ. ಒಂದನೆಯ ಮಹಾಯುದ್ಧದ ಕಾಲದ ಯೂರೋಪಿನ ಪ್ರಖ್ಯಾತ ಮುತ್ಸದ್ದಿಗಳಲ್ಲಿ ಒಬ್ಬನೆಂದು ಪ್ರಸಿದ್ಧನಾದ ಕ್ಲೆಮೆನ್ಸೋಗೆ ಮೊದಲಿನಿಂದಲೂ ಪ್ರಜಾಪ್ರಭುತ್ವದಲ್ಲಿ ವಿಶೇಷ ನಂಬಿಕೆಯಿತ್ತು. ಇವನಿಗೆ ಇಪ್ಪತ್ತು ವರ್ಷಗಳಾಗಿದ್ದಾಗ ಪ್ರಜಾಸತ್ತೆಗೆ ಬೆಂಬಲವಿತ್ತುದಕ್ಕಾಗಿ ಈತ ಜೈಲುವಾಸ ಅನುಭವಿಸಬೇಕಾಯಿತು. ಕ್ಲೆಮೆನ್ಸೋ ಪ್ಯಾರಿಸಿನಲ್ಲಿ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಿದರೂ ವೈದ್ಯವೃತ್ತಿಗಿಂತ ರಾಜಕೀಯ ಕ್ಷೇತ್ರ ಇವನನ್ನು ಹೆಚ್ಚಾಗಿ ಆಕರ್ಷಿಸಿತು. ಇದಕ್ಕಾಗಿ ತನ್ನ ದೇಶವನ್ನು ಬಿಟ್ಟು ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ನೆಲಸಿದ. ಪುನಃ 1869ರಲ್ಲಿ ಸ್ವದೇಶಕ್ಕೆ ಹಿಂದಿರುಗಿ ರಾಜಕೀಯವನ್ನು ಪ್ರವೇಶಿಸಿದ.

ಕ್ಲೆಮೆನ್ಸೋ 1906-1909 ಮತ್ತು 1917-1919ರಲ್ಲಿ ಫ್ರಾನ್ಸಿನ ಪ್ರಧಾನಿಯಾಗಿದ್ದ. ಈತ ಧೈರ್ಯಶಾಲಿ, ಯುಕ್ತಿವಂತ; ಫ್ರಾನ್ಸಿನ ಹುಲಿ ಎಂದು ಹೆಸರು ಗಳಿಸಿದ್ದ. ಒಂದನೆಯ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳ ವಿಜಯಕ್ಕೆ ಕ್ಲೆಮೆನ್ಸೋ ರಚಿಸಿದ ಪವಿತ್ರ ಒಕ್ಕೂಟ (ಸೇಕ್ರೆಡ್ ಯೂನಿಯನ್) ಮಂತ್ರಿ ಮಂಡಲ ಬಹಳಮಟ್ಟಿಗೆ ಕಾರಣವಾಯಿತು. ಒಂದನೆಯ ಮಹಾಯುದ್ಧವಾದ ಅನಂತರ ಪ್ಯಾರಿಸಿನಲ್ಲಿ ನಡೆದ ಶಾಂತಿಸಮ್ಮೇಳನದಲ್ಲಿ ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನನನ್ನು ಈತ ಅನೇಕ ವಿಷಯಗಳಲ್ಲಿ ವಿರೋಧಿಸಿದ. ವರ್ಸೇಲ್ಸ್ ಒಪ್ಪಂದ ಬಹು ಉದಾರವಾದ್ದೆಂಬುದು ಈತನ ಅಭಿಪ್ರಾಯವಾಗಿತ್ತಾದರೂ ಜರ್ಮನಿಯ ಬಗ್ಗೆ ಈತ ತಳೆದಿದ್ದ ಮಿತವಾದಿ ಧೋರಣೆಯ ಫಲವಾಗಿ 1919ರ ಚುನಾವಣೆಗಳಲ್ಲಿ ಪರಾಜಯ ಹೊಂದಿದ. ಅನಂತರ ಫ್ರಾನ್ಸಿನ ರಾಜಕೀಯದಲ್ಲಿ ಕ್ಲೆಮೆನ್ಸೋನ ಪ್ರಭಾವ ಕಡಿಮೆಯಾಯಿತು. ಈತ ಅನೇಕ ಗ್ರಂಥಗಳನ್ನು ರಚಿಸಿದನಲ್ಲದೆ ಸ್ವಲ್ಪಕಾಲ ಪತ್ರಿಕೆಗಳನ್ನೂ ಪ್ರಕಟಿಸುತ್ತಿದ್ದ. ಕ್ಲೆಮೆನ್ಸೋ 1929ರಲ್ಲಿ ಪ್ಯಾರಿಸಿನಲ್ಲಿ ಮರಣಹೊಂದಿದ. (ಬಿ.ಎಸ್.ಎ.)