ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಷೇತ್ರಜ್ಞ

ಕ್ಷೇತ್ರಜ್ಞ

ಪದ (ಹಾಡು) ರಚನೆಯ ಮೂಲಪುರುಷನೆಂದು ಬಹಳ ಪ್ರಸಿದ್ಧನಾಗಿರುವ ಸಂಗೀತಶಾಸ್ತ್ರಕೋವಿದ. ವೆಂಕಟಮಖಿಯ (ಹದಿನೇಳನೆಯ ಶತಮಾನ) ಸಮಕಾಲೀನವೆಂದು ನಂಬಲಾಗಿದೆ. ಪದರಚನಕಾರರಲ್ಲಿ ಮೊದಲಿಗನಾಗಿ 4,200ಕ್ಕೂ ಹೆಚ್ಚಿನ ಪದಗಳನ್ನು ರಚಿಸಿರುವ ಈತನ ಜೀವನ ಚರಿತ್ರೆಯ ವಿಷಯವಾಗಿ ಖಚಿತವಾದ ವಿಷಯಗಳು ತಿಳಿದುಬಂದಿಲ್ಲ. ಕೆಲವು ಪಂಡಿತರು ಈತ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಗೆ ಸೇರಿದ ಘಂಟಸಾಲೆ ಬಳಿಯಿರುವ ಮುವ್ವಪುರಿ ಸೇರಿದವನೆಂತಲೂ ಮತ್ತೆ ಕೆಲವರು ಚಿತ್ತೂರು ಜಿಲ್ಲೆಗೆ ಸೇರಿದ ಚಂದ್ರಗಿರಿ ಬಳಿಯಿರುವ ಮುವ್ವಪುರಿಗೆ ಎಂಬ ಹಳ್ಳಿಗೆ ಸೇರಿದವನೆಂತಲೂ ಅಭಿಪ್ರಾಯಪಟ್ಟಿದ್ದಾರೆ.

ತ್ರೈಲಿಂಗ್ಯಬ್ರಾಹ್ಮಣ ಪಂಗಡಕ್ಕೆ ಸೇರಿದವನಾದ ಈತ ಬಾಲ್ಯದಲ್ಲೇ ಸಂಗೀತ ಸಾಹಿತ್ಯಗಳೆರಡರಲ್ಲೂ ಪಾಂಡಿತ್ಯವನ್ನು ಸಂಪಾದಿಸಿ, ಒಬ್ಬ ಮಹಾತ್ಮನಿಂದ ಗೋಪಾಲ ಮೂಲಮಂತ್ರೋಪದೇಶವನ್ನು ಪಡೆದ. ಇಷ್ಟದೈವವಾದ ಗೋಪಾಲನನ್ನು ಭಕ್ತಿಯಿಂದ ಆರಾಧಿಸಿ ಆತನ ಅನುಗ್ರಹಕ್ಕೆ ಪಾತ್ರನಾಗಿ ದರ್ಶನಭಾಗ್ಯವನ್ನು ಪಡೆದ ತಕ್ಷಣವೇ ಈತನಲ್ಲಿ ಕವಿತ್ವಶಕ್ತಿಯುಂಟಾಯಿತಾಗಿ ಈತ ಶ್ರೀಪತಿ ಸುತುಬಾರಿಕಿ ನೇನೋಲೇಕ ನಿನುವೇಡಿತೆ ಎಂಬ ಪದವನ್ನು ಆನಂದಭೈರವಿ ರಾಗದಲ್ಲಿ ರಚಿಸಿದನೆಂದು ತಿಳಿಯಬರುತ್ತದೆ.

ಕ್ಷೇತ್ರಜ್ಞನ ಮೊದಲಿನ ಹೆಸರು ವರದಯ್ಯ. ಕಂಚಿ, ಮಧುರೆ, ರಾಮೇಶ್ವರ ಮುಂತಾದ ಅನೇಕ ಪುಣ್ಯಕ್ಷೇತ್ರಗಳಲ್ಲಿ ಸಂಚರಿಸಿ ಅಲ್ಲಿರುವ ದೇವತಾ ಮೂರ್ತಿಗಳನ್ನು ವರ್ಣಿಸಿ ಸುತ್ತಿಸಿ ಹಾಡಿದುದರಿಂದಲೇ ಈತನನ್ನು ಕ್ಷೇತ್ರಜ್ಞ, ಕ್ಷೇತ್ರಯ್ಯ ಎಂಬ ಹೆಸರುಗಳಿಂದ ಕರೆಯುವುದು ರೂಢಿಗೆ ಬಂತು. 1625-30 ಹಾಗೂ 1670-75ರಲ್ಲಿ ಈತ ಅನೇಕ ರಾಜಾಸ್ಥಾನಗಳಿಗೆ ಭೇಟಿಯಿತ್ತು ತನ್ನ ರಚನೆಗಳನ್ನು ಅಲ್ಲಿನ ರಾಜರುಗಳ ಮುಂದೆ ಹಾಡಿ ಅವರ ಗೌರವಾದರಗಳಿಗೆ ಪಾತ್ರನಾದ. ತಂಜಾವೂರು, ಮಧುರೆ, ಗೊಲ್ಕೊಂಡ ಮುಂತಾದ ಸಂಸ್ಥಾನಾಧಿಪತಿಗಳಿಂದ ಗೌರವಿಸಲ್ಪಟ್ಟ ಸಂದರ್ಭದಲ್ಲಿ ತಾನು ರಚಿಸಿರತಕ್ಕ ಪದಗಳ ಸಂಖ್ಯೆ ಎಷ್ಟೆಂಬುದನ್ನು ವೇಡುಕತೋ ನಡಚುಕೊನ್ನ ವಿಟರಾಯುಡೇ ಎಂಬ ಪದದಲ್ಲಿ ನಿರೂಪಿಸಿದ್ದಾನೆ. ತಂಜಾವೂರಿನ ವಿಜಯರಾಘವ ನಾಯಕನ ಕಾಲದಲ್ಲಿ ಆತನ ಅನುಜ್ಞೆಯ ಮೇರೆಗೆ ರಾಜಾಂಕಿತದಲ್ಲಿ ಈತ ಐದು ಪದಗಳನ್ನು ರಚಿಸಿದ್ದಾನೆ. ಅವು ವಿಜಯರಾಘವ ಪಂಚರತ್ನ ಮತ್ತು ಮುವ್ವ ಗೋಪಾಲ ಪಂಚರತ್ನ ಎಂಬ ಎರಡು ಹೆಸರಿನಿಂದ ಪ್ರಸಿದ್ಧವಾಗಿವೆ.

ರಸಿಕಾಗ್ರೇಸರನಾದ ವಿಜಯರಾಘವ ಭೂಪಾಲ ಕ್ಷೇತ್ರಜ್ಞನನ್ನು ಆದರಿಸಿ ಗೌರವಿಸಿದುದಕ್ಕಾಗಿ ಅಸೂಯೆಗೊಂಡ ಆಸ್ಥಾನ ಪಂಡಿತರನೇಕರು ಇದೇಮಿ? ಏರಾ, ರಾರಾ, ಪೋರಾ-ಎಂದು ಏಕವಚನದಲ್ಲಿ ಸಂಬೋಧಿಸುವ ಕ್ಷೇತ್ರಜ್ಞನ ಮೇಲೆ ರಾಜನಿಗಿಷ್ಟು ಮೋಹವೆ? ಎಂದು ಟೀಕಿಸಿದರು. ಆ ಮಾತನ್ನು ಕ್ಷೇತ್ರಜ್ಞನಿಗೆ ತಿಳಿಸಲು, ಅವರು ಹೇಳುವುದು ಸರಿಯಾಗಿಯೇ ಇದೆಯೆಂದು ಕ್ಷೇತ್ರಜ್ಞ ವಿನಯದಿಂದ ಒಪ್ಪಿಕೊಂಡ ಕೆಲವು ಕಾಲದ ಅನಂತರ ವದರಕಪೋವೆ ಎಂಬ ಕಾಂಭೋಜಿ ರಾಗದ ಪದವೊಂದರ ಪಲ್ಲವಿ ಅನುಪಲ್ಲವಿ ಮತ್ತು 2 ಚರಣಗಳನ್ನು ರಚಿಸಿ, ತಾನು ಯಾತ್ರೆ ಮುಗಿಸಿಕೊಂಡು ಬರುವ ವೇಳೆಗೆ ಪಂಡಿತರು ಮುಂದಿನ ಅರ್ಧಭಾಗವನ್ನು ಪೂರ್ಣಗೊಳಿಸಲು ಹೇಳಿ ಯಾತ್ರೆ ಹೊರಟ. ಪಂಡಿತರಿಗೆ ಇದೊಂದು ಸತ್ತ್ವಪರೀಕ್ಷೆಯ ಸಂದರ್ಭವಾಯಿತು. ಆ ಪದವನ್ನು ಪೂರ್ಣಮಾಡಲು ತಮ್ಮ ಪಾಂಡಿತ್ಯ ಸಾಲದೆ ಅವರು ಚಿಂತೆಗೀಡಾದರು. ಯಾತ್ರೆಯಿಂದ ಹಿಂದಿರುಗಿದ ಕ್ಷೇತ್ರಜ್ಞನ ಸಮಕ್ಷಮದಲ್ಲಿ ಅವರು ತಮ್ಮ ಸೋಲನ್ನೊಪ್ಪಿಕೊಂಡರು. ತತ್‍ಕ್ಷಣವೇ ಕ್ಷೇತ್ರಜ್ಞ ಆ ಪದವನ್ನು ಪೂರೈಸಲಾಗಿ ಅವರು ಆತನ ಪ್ರತಿಭೆಗೆ ಮಾರುಹೋಗಿ ನೀನು ಸಾಕ್ಷಾತ್ ಗೋಪಾಲನೇ ಎಂದು ಹೊಗಳಿದರು.

ಜಯದೇವ ಮತ್ತು ನಾರಾಯಣ ತೀರ್ಥರಂತೆ ಕ್ಷೇತ್ರಜ್ಞ ಮಧುರಭಕ್ತಿಯ ಪಂಥಕ್ಕೆ ಸೇರಿದವ. ಈತನ ಪದಗಳಲ್ಲಿ ಮಧುರಭಕ್ತಿಯೇ ಮುಖ್ಯ ವಿಷಯ. ಪದಗಳ ಸಾಹಿತ್ಯ ಹೊರನೋಟಕ್ಕೆ ಶೃಂಗಾರ ಪ್ರಧಾನವಾಗಿ ಕಂಡರೂ ಅವುಗಳ ಮುಖ್ಯೋದ್ದೇಶ ಜೀವಾತ್ಮ ಪರಮಾತ್ಮನಲ್ಲಿ ಐಕ್ಯವಾಗಲು ಹಂಬಲಿಸುವುದೇ ಆಗಿರುತ್ತದೆ.

ಕ್ಷೇತ್ರಜ್ಞ ತನ್ನ ಪದಗಳಿಗೆ ಪ್ರಮುಖವಾಗಿ ಕೃಷ್ಣನನ್ನೇ ನಾಯಕನನ್ನಾಗಿ ಆರಿಸಿಕೊಂಡಿದ್ದರೂ ಅನೇಕ ಕಡೆ ಕಂಚಿ ವರದ, ಚೆಲ್ವಲಿಂಗ ಮುಂತಾದ ದೇವರಲ್ಲೂ ಕುರಿತು ಪದರಚನೆ ಮಾಡಿದ್ದಾನೆ. ವ್ಯಾಕರಣ ಪಂಡಿತನಾದರೂ ತನ್ನ ರಚನೆಗಳಲ್ಲೀತ ತೆಲುಗಿನ ಗ್ರಾಮ್ಯ ಪದಗಳನ್ನು ವಿಶೇಷವಾಗಿ ಉಪಯೋಗಿಸಿದ್ದಾನೆ. ನಾಯಕ, ನಾಯಕಿಯರ ಮನೋಭಾವವನ್ನು ತಿಳಿಯಪಡಿಸಲು ಗ್ರಾಮ್ಯ ಪದಗಳೇ ಸೂಕ್ತವೆಂದು ಈತನ ಅಭಿಪ್ರಾಯವಿದ್ದಿರಬಹುದೆಂದು ಊಹಿಸಬಹುದು. ತನ್ನ ಪದಗಳಲ್ಲಿ ನಾಯಕಿಯ ಸ್ಥಾನದಲ್ಲಿ ತಾನೇ ನಿಂತು ನಾಯಕ-ನಾಯಕೀ ಭಾವವನ್ನು ನಿರೂಪಿಸಿರುವುದೊಂದು ಇಲ್ಲಿನ ಸ್ವಾರಸ್ಯ. ಈತನ ಪದಗಳು ಕೈಶಿಕೀ ರೀತಿಯಿಂದ ಕೂಡಿದ್ದು ಮಾಧುರ್ಯಭರಿತವಾಗಿವೆಯಲ್ಲದೆ ಭಾವಭರಿತವೂ ಅರ್ಥಪೂರ್ಣವೂ ಆಗಿ ಸಂದರ್ಭೋಚಿತವಾಗಿ ರಸವನ್ನು ಹರಿಯಿಸಿ ಸಹೃದಯವನ್ನು ತಣಿಸುತ್ತವೆ. ಪ್ರತಿಯೊಂದು ಪದವೂ ಪಲ್ಲವಿ ಅನುಪಲ್ಲವಿ ಮತ್ತು 3 ಅಥವಾ 4 ಚರಣಗಳನ್ನು ಹೊಂದಿ ಪಲ್ಲವಿ ಅನುಪಲ್ಲವಿ ಭಾಗಗಳು 4 ಅಥವಾ 8 ಪಾದಗಳಿಂದಲೂ ಚರಣದ ಭಾಗಗಳು ಎಂಟು ಅಥವಾ ಹದಿನಾರು ಪಾದಗಳಿಂದಲೂ ಕೂಡಿದ್ದು ಕಡೆಯದು ಮುದ್ರಾಚರಣವಾಗಿರುತ್ತದೆ. ಸಾಮಾನ್ಯವಾಗಿ ಅನುಪಲ್ಲವಿಯನ್ನು ಮೊದಲು ಹಾಡಿ ಅನಂತರ ಪಲ್ಲವಿ ಮತ್ತು ಚರಣದ ಭಾಗಗಳನ್ನು ಹಾಡುವುದು ರೂಢಿಯಲ್ಲಿದೆ. ಒಂದೇ ಧಾತು ಕೆಲವೆಡೆಗಳಲ್ಲಿ ಪುನರಾವರ್ತಿಸಿರುವುದನ್ನು ಇಲ್ಲಿ ಕಾಣಬಹುದಾಗಿದೆ. ಇದು ಪದಗಳಲ್ಲಿ ಕಂಡುಬರುವ ಇನ್ನೊಂದು ವಿಶೇಷ.

ಕ್ಷೇತ್ರಜ್ಞನ ಪದರಚನೆಗಳಿಗೆ ಸರಿದೂಗುವ ಗೇಯ ಕವಿತ್ವವನ್ನು ಇದೇ ಧಾಟಿಯಲ್ಲಿ ಈತನ ಕಾಲಕ್ಕೆ ಹಿಂದೆಯಾಗಲೀ ಮುಂದೆಯಾಗಲೀ ಯಾರೂ ರಚಿಸಿಲ್ಲವೆಂದು ಹೇಳಲಾಗಿದೆ. ಈತನ ಪದಗಳಲ್ಲಿ ಕುಹಕ, ವ್ಯಂಗ್ಯ, ವಿರಹ ಮುಂತಾದ ಅನೇಕ ಅಲಂಕಾರಗಳನ್ನು ಕಾಣುತ್ತೇವೆ. ಕವಿ ಇಲ್ಲಿ ತಾನು ತನ್ನ ಅಂತಃಚಕ್ಷುವಿನಿಂದ ಕಂಡು ಅನುಭವಿಸಿದ ಚಿತ್ರಗಳನ್ನು ಸುಮಧುರವಾದ ತೆಲುಗು ಭಾಷೆಯಲ್ಲಿ ಸಂಗೀತಕ್ಕಳವಡಿಸಿ ಅದರ ಪೂರ್ಣ ಚಿತ್ರಣವನ್ನು ತನ್ನ ಪದದ ಮೂಲಕ ನೀಡುತ್ತ ಶ್ರೋತೃವೃಂದವನ್ನು ಬೇರೊಂದು ಪ್ರಪಂಚಕ್ಕೆ ಸೆಳೆದೊಯ್ಯುತ್ತಾನೆ. ಪದದಲ್ಲಿನ ರಾಗಭಾವಗಳು ಶ್ರೇಷ್ಠವಾಗಿದ್ದು ಸಾಹಿತ್ಯಭಾಗವನ್ನು ಸುಂದರವಾಗಿ ನಿರೂಪಿಸುತ್ತವೆ. ಘಂಟಾ, ನವರೋಜ್ ಮುಂತಾದ ರಾಗಗಳ ಕಲ್ಪನೆ ಸಿಗುವುದು ಕ್ಷೇತ್ರಜ್ಞನ ಪದಗಳಲ್ಲೇ. ರಾಗಚರಿತ್ರೆಯ ಬಗ್ಗೆ ಆಸಕ್ತಿಯುಳ್ಳವರು ರಾಗಲಕ್ಷಣವನ್ನು ತಿಳಿಯುವಾಗ ಈತನ ಪದಗಳಲ್ಲಿ ಕೆಲವು ಅಪರೂಪ ಸಂಚಾರಗಳನ್ನು ಗಮನಿಸಬಹುದು. ಕಾಂಭೋಜಿ, ಬೇಗಡೆ, ಭೈರವಿ, ಕಲ್ಯಾಣಿ ರಾಗಗಳಲ್ಲಿ ರಚಿತವಾಗಿರುವ ಪದಗಳಲ್ಲಾದರೋ ರಾಗಭಾವ ತುಂಬಿತುಳುಕಾಡುತ್ತದೆ. ಈತನ ಪದಗಳಲ್ಲಿ ಮುವ್ವಗೋಪಾಲ, ಮವ್ವಗೋಪಾಲ ಎಂಬೆರಡು ಅಂಕಿತಗಳನ್ನು ಕಾಣಬಹುದು. ಕೆಲವು ಪದಗಳಲ್ಲಿ ಗೋಪಾಲ ಎಂಬ ಅಂಕಿತವಷ್ಟೇ ಕಂಡುಬರುತ್ತದೆ.

ಕ್ಷೇತ್ರಜ್ಞನ ಪದಗಳ ಪೈಕಿ ಉಪಲಬ್ಧವಾಗಿರುವುದು 332 ಮಾತ್ರವೇ. ಅವುಗಳಲ್ಲಿ ಹೆಚ್ಚು ಪರಿಚಿತವಾಗಿರುವುವು ಸುಮಾರು 128. ಕೈಬರೆಹದ ಪ್ರತಿಯಲ್ಲಿ ಪ್ರತಿಯೊಂದು ಪದದ ಮೊದಲಿಗೂ ಆ ಪದ ಯಾವ ಸಂದರ್ಭಕ್ಕಾಗಿ ರಚಿತವಾದುದು, ಅದನ್ನು ಹೇಳುವ ನಾಯಕ ಅಥವಾ ನಾಯಕಿ ಆ ಪದವನ್ನು ಹಾಡುವಾಗ್ಗೆ ಯಾವ ಮನೋಭಾವವುಳ್ಳವರಾಗಿರಬೇಕು ಎಂಬ ವಿವರಣೆಗಳಿವೆ. ಅಭಿನಯದಲ್ಲೂ ಬಳಸುವುದರಿಂದ ಇವನ್ನು ವಿಳಂಬಗತಿಯಲ್ಲಿ ಹಾಡುವುದು ರೂಢಿಯಲ್ಲಿದೆ. ಹಾಗೆ ವಿಳಂಬ ಗತಿಯಲ್ಲಿ ಹಾಡಬೇಕಾದ ರಚನಾಪ್ರಕಾರವಾದುದರಿಂದಲೇ ಇವು ಕಷ್ಟಸಾಧ್ಯವೆನಿಸಿ, ಸಂಗೀತದಲ್ಲಿ ಸಂಪೂರ್ಣ ಪರಿಶ್ರಮವಿದ್ದು ರಾಗ ತಾಳಗಳ ಮೇಲೆ ಹತೋಟಿಯಿರುವ ವಿದ್ವಾಂಸರು ಮಾತ್ರವೇ ಹಾಡಲು ತಕ್ಕವಾಗಿವೆ.

ಪದವೆಂದರೆ ನಾಯಕ ನಾಯಕೀ ಭಾವವುಳ್ಳದ್ದಾಗಿ, ಮಧುರಭಕ್ತಿಯಿಂದ ರಚಿಸಿರತಕ್ಕ ಸಂಗೀತದ ರಚನಾಪ್ರಕಾರವೊಂದು-ಎಂಬ ಅಭಿಪ್ರಾಯ ಕ್ಷೇತ್ರಜ್ಞನ ಕಾಲದಿಂದೀಚೆಗೆ ಬಂದಿರುವ ಅರ್ಥ. ಇವಕ್ಕೂ ಮುಂಚೆ ಪದ ಎಂಬುದು ದಾಸರ ಪದಗಳಲ್ಲಿ ಸೂಚಿಸುತ್ತಿತ್ತು. ಈಗ್ಗೆ ಕೆಲವು ಶತಮಾನಗಳ ಹಿಂದೆ ಸಂಗೀತ ಕಚೇರಿಗಳಲ್ಲಿ ಪದಾಂತೇ ಸಂಗೀತಂ ಎಂಬ ಹೇಳಿಕೆಯಿದ್ದು ಕ್ಷೇತ್ರಜ್ಞನ ಪದವನ್ನು ಹಾಡದೆ ಅಥವಾ ನುಡಿಸದೆ ಕಚೇರಿ ಮುಕ್ತಾಯಗೊಳ್ಳುತ್ತಿರಲಿಲ್ಲ. ಕ್ಷೇತ್ರಜ್ಞನಾದರೋ ತನ್ನ ರಚನೆಗಳಿಗೆ ತಿರುಪತಿಯಲ್ಲಿದ್ದ ತಾಳ್ಳಪಾಕಂ ಅನ್ನಮಾಚಾರ್ಯರ ಶೃಂಗಾರ ಸಂಕೀರ್ತನೆಗಳಿಂದ ಸ್ಫೂರ್ತಿ ಪಡೆದಿರುವಂತೆ ತೋರುತ್ತದೆ. ಈತನ ಪದಗಳ ಸಂಗೀತಸಿರಿಯಿಂದ ಪ್ರಭಾವಿತರಾಗಿ ಅನಂತರದ ವಾಗ್ಗೇಯಕಾರರನೇಕರು ಕರ್ನಾಟಕ ಸಂಗೀತದ ಸಂಪದ್ಭಂಡಾರವನ್ನೇ ನಿರ್ಮಿಸಿದ್ದಾರೆ.

       							(ಪಿ.ಆರ್.ಆರ್.)