ಗಣಿ : ನೆಲದ ಅಡಿಯಲ್ಲಿ ಇರಬಹುದಾದ ಖನಿಜವನ್ನು ಅರಸಲೆಂದು ಮತ್ತು ಖನಿಜ ದೊರೆತಾಗ ಅದನ್ನು ಹೊರತೆಗೆಯಲೆಂದು ತೋಡಿದ ಕೂಪ (ಮೈನ್). ಖನಿಜದ ಸ್ವರೂಪ, ಅದು ದೊರೆಯುವ ಆಕರ ಮುಂತಾದವನ್ನು ಆಧರಿಸಿ ಗಣಿ ಅನಾವೃತವಾಗಿರಬಹುದು ಇಲ್ಲವೇ ಭೂಗತವಾಗಿರಬಹುದು ಇಲ್ಲವೇ ಮಿಶ್ರವಾಗಿರ ಬಹುದು. ಇವನ್ನು ಅನುಸರಿಸಿ ಗಣಿ ಕೆಲಸದಲ್ಲೂ ಮೂರು ಮುಖ್ಯ ಪ್ರಭೇದಗಳು ಇವೆ (ನೋಡಿ- ಗಣಿಗಾರಿಕೆ).

ಗಣಿ ಅಪಘಾತ

ಸಂಪಾದಿಸಿ

ಕೈಗಾರಿಕಾ ಅಪಘಾತಗಳಲ್ಲೆಲ್ಲ ಅತ್ಯಂತ ಅಪಾಯಕಾರಿಯೂ ತೀವ್ರ ಸ್ವರೂಪದ್ದೂ ಆದ್ದು ಗಣಿಗಳಲ್ಲಿಯ ಅಪಘಾತ. ಇದಕ್ಕೆ ಈ ಕೈಗಾರಿಕೆಯ ಸ್ವರೂಪವೇ ಮುಖ್ಯವಾದ ಕಾರಣ. ಗಣಿಗಾರಿಕೆಯಲ್ಲಿ ಅಪಘಾತದಿಂದ ಮೃತರಾಗುವವರ ಸಂಖ್ಯೆ ಕೂಡ ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಹೆಚ್ಚು, ನೆಲದಡಿಯಲ್ಲಿರುವ ಅದಿರು ತೆಗೆಯುವ ಕೆಲಸದಲ್ಲಿ ತೊಡಗಿದಾಗ ಅನಿರೀಕ್ಷಿತವಾದ ಅಪಾಯಗಳು ಬಂದೊದಗುವುದು ಸಹಜ. ಅಪಘಾತದ ಸ್ವರೂಪ ಗಣಿಯಿಂದ ಗಣಿಗೆ ಭಿನ್ನವಾಗಿರುತ್ತದೆ. ಸ್ಫೋಟ, ಮಣ್ಣಿನ ಕುಸಿತ, ಮೇಲಿನಿಂದ ಭಾರವಾದ ವಸ್ತುವಿನ ಪತನ-ಇಂಥ ಅಪಘಾತಗಳಿಗೆ ಕಾರ್ಮಿಕರು ಈಡಾಗಬೇಕಾಗುತ್ತದೆ.

ಗಣಿಗಾರಿಕೆಯಲ್ಲಿ ಅಪಘಾತಗಳ ಸಾಧ್ಯತೆ ಹೆಚ್ಚಾಗಿರುವುದರಿಂದ ಇತರ ಕೈಗಾರಿಕೆಗಳಿಗಿಂತ ಇದರಲ್ಲಿ ಇವುಗಳ ವಿರುದ್ಧ ಹೆಚ್ಚಿನ ರಕ್ಷಣೆಯನ್ನೊದಗಿಸುವುದು ಅತ್ಯಂತ ಅವಶ್ಯಕ. ಎಲ್ಲ ರಾಷ್ಟ್ರಗಳೂ ಗಣಿ ಕಾನೂನುಗಳ ಮೂಲಕ ಅಪಘಾತಗಳ ವಿರುದ್ಧ ಕಾರ್ಮಿಕನಿಗೆ ರಕ್ಷಣೆಯನ್ನೊದಗಿಸುತ್ತಿವೆ. ಗಣಿಗಳಲ್ಲಿ ಅಪಘಾತ ನಡೆಯದಂತೆ ವಿಶೇಷವಾದ ಎಚ್ಚರಿಕೆ ವಹಿಸುವುದು ಅಗತ್ಯ. ಗಣಿಯೊಳಗೆ ಉತ್ತಮವಾದ ಬೆಳಕಿರುವಂತೆ ನೋಡಿಕೊಳ್ಳುವುದು, ಆಸ್ಫೋಟಕಗಳನ್ನು ಎಚ್ಚರಿಕೆಯಿಂದ ಉಪಯೋಗಿಸುವುದು, ಗಣಿ ಉತ್ಪಾದಿತ ವಸ್ತುಗಳನ್ನು ಜಾಗರೂಕತೆಯಿಂದ ಮೇಲಕ್ಕೆ ಸಾಗಿಸುವುದು, ಶೋಧಪ್ರದೇಶಗಳನ್ನು ಉತ್ತಮವಾಗಿಟ್ಟಿರುವುದು- ಈ ಕ್ರಮಗಳನ್ನು ಪ್ರತಿಯೊಂದು ಗಣಿಯಲ್ಲೂ ಅನುಸರಿಸಬೇಕಾಗುತ್ತದೆ. ಎಷ್ಟೇ ಎಚ್ಚರಿಕೆಯಿಂದಿದ್ದರೂ ಅಪಘಾತಗಳು ಸಂಭವಿಸುವುದರಿಂದ ಅವಕ್ಕೆ ಈಡಾದವರಿಗೆ ಕಾನೂನಿನ ಮೂಲಕ ಪರಿಹಾರ ದೊರಕಿಸಿಕೊಡಲಾಗುತ್ತದೆ. ಗಣಿ ಅಪಘಾತಗಳು ಮತ್ತು ಅವುಗಳ ಪರಿಣಾಮವಾಗಿ ಉಂಟಾಗುವ ಸಾವು, ಹಾನಿ ಇವುಗಳ ಬಗ್ಗೆ ಪ್ರತಿಯೊಂದು ರಾಷ್ಟ್ರದಲ್ಲೂ ಕರಾರುವಾಕ್ಕಾದ ಅಂಕಿ ಅಂಶಗಳನ್ನು, ಅಪಘಾತದ ವಿರುದ್ಧ ರಕ್ಷಣೆ ದೊರಕಿಸಿಕೊಡುವ ಉದ್ದೇಶದಿಂದ, ಸಂಗ್ರಹಿಸಲಾಗುತ್ತಿದೆ. ಅಂಕಿ ಅಂಶಗಳಿಂದ ವ್ಯಕ್ತವಾಗುವಂತೆ ಅನೇಕ ಸುರಕ್ಷಣೆಯ ಕ್ರಮಗಳಿಂದಾಗಿ ಗಣಿ ಅಪಘಾತದಿಂದ ತೀವ್ರವಾಗಿ ಅಪಾಯಕ್ಕೀಡಾಗುವವರ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಭಾರತದಲ್ಲಿ ಕಲ್ಲಿದ್ದಲು ಗಣಿಗಳಲ್ಲಿ ಅತ್ಯಂತ ಹೆಚ್ಚಿನ ಅಪಘಾತಗಳು ನಡೆಯುತ್ತವೆ. ಚಾವಣಿ ಕುಸಿತ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ. ಅನಂತರದ ಕಾರಣಗಳೆಂದರೆ ಆಸ್ಫೋಟನೆಗಳು, ಗಣಿಯ ಒಳಗಣ ಸಾರಿಗೆ ಅಪಘಾತಗಳು, ವಿದ್ಯುತ್ ಅಪಾಯಗಳು ಇತ್ಯಾದಿ. 1952ರ ಗಣಿ ಕಾಯಿದೆ ಭಾರತದಲ್ಲಿ ಗಣಿ ಕಾರ್ಮಿಕರಿಗೆ ಅಪಘಾತಗಳ ವಿರುದ್ಧ ಅನೇಕ ರಕ್ಷಣೆಗಳನ್ನೊದಗಿಸಿಕೊಡುತ್ತಿದೆ. ಈ ಕಾಯಿದೆ ಗಣಿಗಳಲ್ಲಿ ಕಾರ್ಮಿಕರನ್ನು ಅಪಘಾತದಿಂದ ರಕ್ಷಿಸಲು ಯಾವ ಯಾವ ಸೌಲಭ್ಯಗಳನ್ನು ಅವರಿಗೆ ದೊರಕಿಸಿಕೊಡಬೇಕು ಎಂಬುದನ್ನು ವಿವರವಾಗಿ ಗೊತ್ತುಪಡಿಸಿದೆ. ಇದಲ್ಲದೆ 1963ರ ಜುಲೈಯಲ್ಲಿ ಗಣಿಗಳಲ್ಲಿ ಕಾರ್ಮಿಕ ಸಂರಕ್ಷಣೆಗಾಗಿ ಒಂದು ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಗಣಿ ಮಾಲೀಕರು, ಗಣಿ ಕಾರ್ಮಿಕರು ಮತ್ತು ವ್ಯವಸ್ಥಾಪಕರು ಪ್ರಾತಿನಿಧ್ಯ ಪಡೆದಿರುತ್ತಾರೆ. ಅಪಘಾತಗಳ ವಿರುದ್ಧ ಸಂರಕ್ಷಣೆಯ ಕ್ರಮಗಳ ಬಗ್ಗೆ ಕಾರ್ಮಿಕರಿಗೆ ತಿಳಿವಳಿಕೆ ನೀಡುವುದು ಈ ಸಮಿತಿಯ ಮುಖ್ಯ ಕಾರ್ಯ. ಗಣಿ ಅಪಘಾತಗಳ ಬಗ್ಗೆ ಪ್ರಸಾರ ಕಾರ್ಯ ಕೈಗೊಳ್ಳುವುದಲ್ಲದೆ, ಗಣಿ ಉದ್ಯಮಿಗಳಿಗೆ ಸರಿಯಾದ ತಿಳಿವಳಿಕೆ ಉಂಟಾಗುವಂತೆ ತರಬೇತಿ ಕೂಡ ನೀಡುತ್ತದೆ. ಈ ಬಗ್ಗೆ ಒಂದು ಮಾಸಿಕೆಯನ್ನೂ ಇದು ಪ್ರಕಟಿಸುತ್ತಿದೆ.

ಕಲ್ಲಿದ್ದಲು ಗಣಿಗಳ ನಿಯಮಗಳ ಪ್ರಕಾರ ಕಲ್ಲಿದ್ದಲು ಗಣಿಗಳಲ್ಲಿ ಅಪಾಯದ ವಿರುದ್ಧ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವು ಕಲ್ಲಿದ್ದಲು ಗಣಿಯಲ್ಲಿಯ ಸ್ಫೋಟ, ಬೆಂಕಿ ಮುಂತಾದ ಅಪಾಯಗಳ ವಿರುದ್ಧ ತತ್ಕ್ಷಣ ರಕ್ಷಣೆಯನ್ನೊದಗಿಸುತ್ತವೆ. 1923ರ ಕಾರ್ಮಿಕ ಪರಿಹಾರ ಕಾಯಿದೆ, 1948ರ ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ ಇವು ತಮ್ಮ ವ್ಯಾಪ್ತಿಯೊಳಗೆ ಬರುವ ಗಣಿ ಕಾರ್ಮಿಕರಿಗೆ ಕೈಗಾರಿಕಾ ಅಪಘಾತದ ವಿರುದ್ಧ ಧನ ಪರಿಹಾರವನ್ನು ಒದಗಿಸುತ್ತವೆ. ಗಣಿ ಕಾರ್ಮಿಕ ರಕ್ಷಣೆಯ ಕ್ರಮಗಳನ್ನು ಜಾಗರೂಕತೆಯಿಂದ ಅನುಸರಿಸಿದಲ್ಲಿ ಗಣಿ ಅಪಘಾತಗಳ ಸಂಖ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುವ ಅಂಶ ಅನೇಕ ಅಧ್ಯಯನಗಳಿಂದಲೂ ಅನುಭವದಿಂದಲೂ ಬೆಳಕಿಗೆ ಬಂದಿದೆ (ನೋಡಿ- ಕೈಗಾರಿಕಾ ಅಪಘಾತಗಳು). (ಸಿ.ಕೆ.ಆರ್) ಗಣಿ ಕಾರ್ಮಿಕರು : ಭೂಮಿಯ ಮೇಲೆ ಅಥವಾ ಒಳಗೆ ಇರುವ ಪ್ರಕೃತಿದತ್ತವಾದ ಖನಿಜ ಮತ್ತು ಇತರ ಸ್ವಾಭಾವಿಕ ಸಂಪತ್ತನ್ನು ಹೊರಕ್ಕೆ ತೆಗೆಯುವ ಕಾರ್ಯದಲ್ಲಿ ನೆರವಾಗಲು ಕೂಲಿಯ ಆಧಾರದ ಮೇಲೆ ನೇಮಕ ಹೊಂದುವ ದುಡಿಮೆಗಾರರು. ಕೃಷಿಯಂತೆ ಗಣಿ ಉದ್ಯಮವೂ ಪುರಾತನವಾದದ್ದು. ಹತ್ತೊಂಬತ್ತನೆಯ ಶತಮಾನಕ್ಕೆ ಮುಂಚೆ ಗಣಿಗಾರಿಕೆ ಅಲ್ಪಗಾತ್ರದ ಉದ್ಯಮವಾಗಿದ್ದು ಅದರಲ್ಲಿದ್ದ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿರುತ್ತಿತ್ತು. ಆದರೆ ಕೈಗಾರಿಕಾ ಕ್ರಾಂತಿಯಿಂದಲೂ 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಉಂಟಾದ ಎರಡು ಮಹಾಯುದ್ಧಗಳಿಂದಾಗಿಯೂ ವಿಶ್ವರಾಷ್ಟ್ರಗಳ ಆರ್ಥಿಕ ಬೆಳೆವಣಿಗೆಯಿಂದಾಗಿಯೂ ಖನಿಜಗಳಿಗಾಗಿ ಬೇಡಿಕೆ ಬಹಳ ಅಧಿಕವಾದ್ದರಿಂದ ಗಣಿ ಉದ್ಯಮ ಬೃಹದ್ಗಾತ್ರ ಉದ್ಯಮವಾಗಿ ಪರಿವರ್ತನೆ ಹೊಂದಿ ಗಣಿ ಕಾರ್ಮಿಕರ ಸಂಖ್ಯೆಯೂ ಅನೇಕ ಪಟ್ಟು ಹೆಚ್ಚಾಯಿತು. ಇಂದು ಗಣಿ ಉದ್ಯಮದಲ್ಲಿ ಯಾಂತ್ರೀಕರಣ ಬಹಳವಾಗಿ ಬಳಕೆಗೆ ಬಂದಿದ್ದರೂ ಗಣಿ ಕಾರ್ಮಿಕರ ಸಂಖ್ಯೆ ಕುಗ್ಗಿಲ್ಲ.

ಗಣಿ ಕಾರ್ಮಿಕರು ಕೃಷಿ ಮತ್ತು ಕೈಗಾರಿಕಾ ಉದ್ಯಮಗಳಲ್ಲಿಯ ಕಾರ್ಮಿಕರಂತಲ್ಲ. ಅವರ ವೈಶಿಷ್ಟ್ಯ, ಅವರು ಕೆಲಸ ಮಾಡುವ ಸ್ಥಳ, ಅವರ ಕೆಲಸದ ಲಕ್ಷಣ ಇವು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಗಣಿಗಳನ್ನು ತೋಡುವುದಕ್ಕೆ ಉಪಯೋಗಿ ಸುವ ಸ್ಫೋಟಕ ವಸ್ತುಗಳನ್ನು ಉಪಯೋಗಿಸುವುದರಿಂದ ಹಿಡಿದು, ಅದಿರನ್ನು ಹೊರಕ್ಕೆ ತೆಗೆಯುವವರೆಗೆ ಗಣಿಯಲ್ಲಿಯ ಎಲ್ಲ ಕೆಲಸಗಳಿಗೂ ನೈಪುಣ್ಯ ಇರಬೇಕಾದ್ದ ರಿಂದ ಗಣಿ ಕಾರ್ಮಿಕರು ತಂತಮ್ಮ ಕೆಲಸಗಳಲ್ಲಿ ಅನುಭವ ಹೊಂದಿದವರಾಗಿರಬೇಕು.

ಗಣಿ ಕಾರ್ಮಿಕರಿಗೆ ಇತರ ಉದ್ಯಮಗಳಲ್ಲಿಯ ಕಾರ್ಮಿಕರ ಸಂಪರ್ಕ ಹೆಚ್ಚಾಗಿರುವುದಿಲ್ಲ. ಅವರು ವಿಶೇಷವಾಗಿ ಭೂಮಿಯಡಿಯಲ್ಲಿ ಕೆಲಸ ಮಾಡುತ್ತಾರೆ. ಗಣಿಯೊಳಗೆ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಒಟ್ಟು ಗಣಿ ಕಾರ್ಮಿಕರ ಸಂಖ್ಯೆಯ ಶೇ. 60-70 ರಷ್ಟಿರುತ್ತದೆ. ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಗಣಿಯೊಳಗಡೆ ಹೆಂಗಸರು ಮತ್ತು ಮಕ್ಕಳನ್ನು ಕೆಲಸಕ್ಕೆ ನೇಮಿಸುವುದನ್ನು ನಿಷೇಧಿಸಲಾಗಿದೆ.

ಭೂಮಿಯೊಳಗಡೆ, ಕತ್ತಲೆಯಲ್ಲಿ, ಗಾಳಿಸಂಚಾರವಿಲ್ಲದಿರುವಲ್ಲಿ ಹಾಗೂ ಅಧಿಕ ಉಷ್ಣತೆಯಲ್ಲಿ ಕೆಲಸ ಮಾಡುವುದು ಶ್ರಮದಾಯಕವಾದದ್ದು. ಜೊತೆಗೆ ಅದು ಅಪಾಯಕಾರಿಯೂ ಹೌದು. ಗಣಿಗಳಲ್ಲಿ ವಿಷವಾಯು ಉತ್ಪಾದನೆ, ಉಸಿರು ಕಟ್ಟುವುದು, ಭೂ ಕುಸಿತ ಇತ್ಯಾದಿ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ. ಅದರಿಂದ ಗಣಿ ಕಾರ್ಮಿಕರು ಸಾವು ನೋವುಗಳಿಗೆ ಈಡಾಗುವುದುಂಟು. ಅನೇಕ ಗಣಿಗಳಲ್ಲಿ ಕಾರ್ಮಿಕರು ಪ್ರತಿನಿಮಿಷವೂ ಸಾವನ್ನು ಎದುರು ನೋಡುತ್ತ ಕೆಲಸದಲ್ಲಿ ನಿರತರಾಗಿರುತ್ತಾರೆ. ಇತ್ತೀಚೆಗೆ ಪ್ರತಿಯೊಂದು ದೇಶದಲ್ಲೂ ಸರ್ಕಾರ ಮತ್ತು ಗಣಿ ಮಾಲೀಕರು ಕಾರ್ಮಿಕರ ರಕ್ಷಣೆಗಾಗಿ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿರುವುದರಿಂದ ಅಪಘಾತಗಳ ಸಂಖ್ಯೆ ಇಳಿಯುತ್ತಿದೆ. ಆದರೂ ಅವನ್ನು ಸಂಪುರ್ಣವಾಗಿ ತಡೆಗಟ್ಟಲಾಗಿಲ್ಲ. ಗಣಿಗಳಲ್ಲಿಯ ಅಪಘಾತಗಳ ಭೀಕರ ಪರಿಣಾಮವನ್ನು ತಗ್ಗಿಸಲು ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳಲ್ಲಿ ಅಪಘಾತ ವಿಮೆ ಮುಖ್ಯವಾದದ್ದು. ಗಣಿ ಕೆಲಸ ಕೆಲವು ಆರ್ಥಿಕ ಮತ್ತು ಸಾಮಾಜಿಕ ವೈಲಕ್ಷಣ್ಯಗಳಿಂದ ಕೂಡಿದ್ದು. ಗಣಿ ಕಾರ್ಮಿಕರಿಗೆ ಇತರ ಎಲ್ಲ ಉದ್ಯಮಗಳ ಕಾರ್ಮಿಕರಿಗಿಂತ ಹೆಚ್ಚು ವೇತನ ಮತ್ತು ಸೌಲಭ್ಯಗಳನ್ನೊದಗಿಸಿ ಅವರನ್ನು ಆಕರ್ಷಿಸಬೇಕಾಗುತ್ತದೆ. ಗಣಿ ಉದ್ಯಮದಲ್ಲಿ ಕಾರ್ಮಿಕರ ಸರಬರಾಯಿ ಮತ್ತು ಬೇಡಿಕೆಗಳನ್ನು ಸರಿದೂಗಿಸುವುದು ಅನೇಕ ವೇಳೆ ಕಷ್ಟ. ಈ ಮಾತು ಗಣಿ ಉದ್ಯಮವಿರುವ ಎಲ್ಲ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನ್ವಯಿಸುತ್ತದೆ. ಗಣಿ ಕಾರ್ಮಿಕರು ಅತ್ಯಂತ ಪ್ರತಿಕೂಲಕರ ಸನ್ನಿವೇಶದಲ್ಲಿ ಕೆಲಸ ಮಾಡುವುದರಿಂದ ಅವರಲ್ಲಿ ಜೀವದ ಹಾಗೂ ಜೀವನದ ಮೇಲಿನ ವ್ಯಾಮೋಹ ಅಷ್ಟಾಗಿ ಇರದೆ ಒಂದು ವಿಧವಾದ ಅಸಡ್ಡೆಯ ಮನೋಭಾವ ಉಂಟಾಗುವುದು ಸಹಜ. ಇದರಿಂದಾಗಿ ಅವರು ಸಾಮಾಜಿಕ ದೃಷ್ಟಿಯಿಂದ ಅನಪೇಕ್ಷಣೀಯವೆಂದು ಪರಿಗಣಿಸಲಾದ - ಉದಾಹರಣೆಗೆ ಮದ್ಯಪಾನ, ಜೂಜು ಮುಂತಾದ- ಚಟುವಟಿಕೆಗಳಲ್ಲಿ ನಿರತರಾಗುವುದುಂಟು. ಅಷ್ಟೇ ಅಲ್ಲದೆ ಗಣಿ ಕಾರ್ಮಿಕರು ಸೀಮಿತ ಸ್ಥಳಗಳಲ್ಲಿ ಹೆಚ್ಚು ಸಂಖ್ಯೆಗಳಲ್ಲಿ ಕೆಲಸ ಮಾಡುವುದರಿಂದ ಕೃಷಿ ಕಾರ್ಮಿಕರಿಗಿಂತಲೂ ಅವರಲ್ಲಿ ಸಂಘಟನೆಯ ಶಕ್ತಿ ಮಿಗಿಲಾಗಿರುತ್ತದೆ. ಗಣಿಕಾರ್ಮಿಕರ ಸಂಘಗಳು ಕೃಷಿ ಕಾರ್ಮಿಕರ ಸಂಘಗಳಿಗಿಂತಲೂ ಬಲಿಷ್ಠವಾಗಿರುತ್ತವೆ. ಸಾಮಾನ್ಯವಾಗಿ ಗಣಿ ಕಾರ್ಮಿಕರಲ್ಲಿ ತೀವ್ರವಾದಿಗಳೇ ಹೆಚ್ಚು ಸಂಖ್ಯೆಯಲ್ಲಿ ಇರುವುದುಂಟು.

ಮೇಲಿನ ಎಲ್ಲ ಕಾರಣಗಳಿಂದಾಗಿ ಗಣಿ ಕಾರ್ಮಿಕರನ್ನು ವಿಶ್ವದ ಎಲ್ಲ ದೇಶಗಳಲ್ಲೂ ಇತರ ಕಾರ್ಮಿಕ ವರ್ಗಗಳಿಂದ ಪ್ರತ್ಯೇಕಿಸಿ, ಅವರಿಗೆ ಅನ್ವಯವಾಗುವಂತೆ ಪ್ರತ್ಯೇಕವಾದ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳು ಗಣಿ ಕಾರ್ಮಿಕರ ಕ್ಷೇಮಾಭಿವೃದ್ಧಿಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು, ಅವರು ತಮ್ಮ ಜೀವನದಲ್ಲಿ ಹತಾಶ ಮನೋಭಾವ ತೊರೆದು ತಮ್ಮ ಉದ್ಯಮದಲ್ಲಿ ದಕ್ಷತೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿವೆ. ಅಮೆರಿಕ, ಗ್ರೇಟ್ ಬ್ರಿಟನ್, ಜರ್ಮನಿ ಮುಂತಾದ ದೇಶಗಳಲ್ಲಿ ಪ್ರತ್ಯೇಕ ಗಣಿ ಕಾರ್ಮಿಕ ಕಾಯಿದೆಗಳು ಬಹಳ ಹಿಂದಿನಿಂದಲೂ ಜಾರಿಯಲ್ಲಿವೆ. ಭಾರತದಂಥ ದೇಶಗಳಲ್ಲಿ ಅವು ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿವೆ. ಭಾರತದಲ್ಲಿ 1901ರಲ್ಲಿ ಭಾರತದ ಗಣಿಗಳ ಕಾಯಿದೆ ಮೊದಲು ಜಾರಿಗೆ ಬಂತು. ಗಣಿಗಳೊಳಗೆ ಕೆಲವು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವುದೇ ಈ ಕಾಯಿದೆಯ ಮುಖ್ಯ ಉದ್ದೇಶವಾಗಿತ್ತು. ಇದರ ಹಲವಾರು ನ್ಯೂನತೆಗಳನ್ನು ಹೋಗಲಾಡಿಸಿ ಗಣಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಾಧಿಸುವ ದೃಷ್ಟಿಯಿಂದ ಒಂದು ಸಮಗ್ರ ಗಣಿ ಕಾಯಿದೆಯನ್ನು ಜಾರಿಗೆ ತರುವುದಕ್ಕಾಗಿ ಭಾರತ ಸರ್ಕಾರ ಅನೇಕ ಸಲ - ಎಂದರೆ 1919, 1935, 1949, 1951 ಮತ್ತು 1959ರಲ್ಲಿ-ಗಣಿಗಳ ಕಾಯಿದೆಯನ್ನು ಪರಿಷ್ಕರಿಸಿತು. 1959ರ ಭಾರತದ ಗಣಿಗಳ ಕಾಯಿದೆ ಹೆಚ್ಚು ವ್ಯಾಪಕವಾದ್ದು. ಇದರಲ್ಲಿ ಅನೇಕ ಸುಧಾರಣಾ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಹೆಂಗಸರು, 15 ವರ್ಷಗಳೊಳಗಿರುವ ಮಕ್ಕಳು- ಇವರನ್ನು ಗಣಿಯೊಳಗೆ ಕೆಲಸಕ್ಕೆ ನೇಮಿಸುವುದನ್ನು ನಿಷೇಧಿಸಲಾಗಿದೆ. ಹೆಂಗಸರನ್ನು ರಾತ್ರಿಯ ವೇಳೆಯಲ್ಲಿ ಗಣಿಯ ಹೊರಗಿನ ಕೆಲಸದಲ್ಲಿ ನೇಮಿಸುವುದನ್ನು ನಿಷೇಧಿಸಲಾಗಿದೆ. ವಾರಕ್ಕೆ ಒಟ್ಟು 48 ಗಂಟೆಗಳ ಕಾಲ ಕೆಲಸ- ಎಂದರೆ ನಡುವೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಿರಾಮವೂ ಸೇರಿ ಗಣಿಯೊಳಗಿನ ಕಾರ್ಮಿಕರಿಗೆ ದಿನಕ್ಕೆ 8 ಗಂಟೆಯಂತೆಯೂ, ಗಣಿಯ ಮೇಲಿನ ಕಾರ್ಮಿಕರಿಗೆ ದಿನಕ್ಕೆ 9 ಗಂಟೆಯಂತೆಯೂ ಕೆಲಸದ ವೇಳೆಯನ್ನು ನಿರ್ಧರಿಸಲಾಗಿದೆ. ವಾರದ ರಜಾ ದಿನದ ಜೊತೆಗೆ ಇತರ ರಜಾ ಸೌಲಭ್ಯಗಳುಂಟು. 1948ರ ಕಾರ್ಖಾನೆ ಕಾಯಿದೆಯ ಮಾದರಿಯಲ್ಲಿ ಗಣಿ ಕಾರ್ಮಿಕರಿಗೂ ಸುರಕ್ಷತೆ, ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಧಿಸಲಾಗಿದೆ. ಗಣಿ ಕಾರ್ಮಿಕರಿಗೆ ಉಪಾಹಾರ ಗೃಹ, ಶಿಶುಪಾಲನಾ ಗೃಹ, ಸ್ನಾನ ಗೃಹ, ಆಂಬ್ಯುಲೆನ್್ಸ, ಪ್ರಥಮ ಚಿಕಿತ್ಸೆಯ ಕೊಠಡಿ ಮುಂತಾದ ಸೌಕರ್ಯಗಳೆನ್ನೊದಗಿಸಬೇಕು. ಈ ಕ್ರಮಗಳನ್ನೆಲ್ಲ ಗಣಿ ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೆ ತರಲು 1959ರ ಭಾರತದ ಗಣಿಗಳ ಕಾಯಿದೆ ಗಣಿ ಮಾಲೀಕರನ್ನು ಒತ್ತಾಯಪಡಿಸುತ್ತದೆ.

ಗಣಿ ಕಾರ್ಮಿಕರಿಗೆಲ್ಲ ಸಾಮೂಹಿಕವಾಗಿ ಅನ್ವಯಿಸುವ ಭಾರತದ ಗಣಿಗಳ ಕಾಯಿದೆಯ ಜೊತೆಗೆ ಬೇರೆ ಬೇರೆ ಗಣಿಗಳ ಕಾರ್ಮಿಕರಿಗೆ ವಿಶಿಷ್ಟವಾಗಿ ಅನ್ವಯಿಸುವ ಕೆಲವು ಪ್ರತ್ಯೇಕ ಗಣಿ ಕಾಯಿದೆಗಳೂ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿವೆ. ಉದಾಹರಣೆಗಾಗಿ, ಅಭ್ರಕ ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1946). ಕಲ್ಲಿದ್ದಲು ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1947), ಕಬ್ಬಿಣ ಅದಿರು ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1947), ಕಬ್ಬಿಣ ಅದಿರು ಗಣಿ ಕಾರ್ಮಿಕರ ಯೋಗಕ್ಷೇಮ ತೆರಿಗೆ ಕಾಯಿದೆ (1961)- ಇವು ಆಯಾ ಗಣಿ ಕಾರ್ಮಿಕರ ವಸತಿ ಸೌಕರ್ಯ, ವಿದ್ಯಾಭ್ಯಾಸ, ಮನೋರಂಜನೆ, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದ ಕಾರ್ಮಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು, ಆವಶ್ಯಕವಾದ ನಿಧಿಯನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿವೆ. ಇವೆಲ್ಲ ಪಾಶ್ಚಾತ್ಯ ದೇಶಗಳಲ್ಲಿರುವಂತೆ ಭಾರತದಲ್ಲೂ ಗಣಿಕಾರ್ಮಿಕರ ಕ್ಷೇಮಸಾಧನೆಯ ಸಲುವಾಗಿ ಕೈಗೊಂಡಿರುವ ಪ್ರಯತ್ನಗಳಾಗಿವೆ. ಇಂದು ಗಣಿ ಕಾರ್ಮಿಕರ ಹಿತಸಾಧನೆಯಲ್ಲಿ ಸರ್ಕಾರ ದೃಢವಾದ ಆಸಕ್ತಿ ತಳೆದಿದೆ.