ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಣೇಕಲ್ ಸಂಗವಿಭು

ಗಣೇಕಲ್ ಸಂಗವಿಭು: ಹತ್ತೊಂಬತ್ತನೆಯ ಶತಮಾನದ ವೀರಶೈವ ಕವಿ. ‘ಲಕ್ಷ್ಮೀಶ ನನ್ನ ತಮ್ಮ, ಷಡಕ್ಷರಿ ಅಣ್ಣ’ ಎಂದು ಈತ ಹೇಳಿಕೊಂಡಿರುವುದನ್ನು ನೋಡಿದರೆ ಆ ಇಬ್ಬರು ಜನಪ್ರಿಯ ಕವಿಗಳ ಕಾವ್ಯಗಳನ್ನು ಈತ ವಿಶೇಷ ಅಭ್ಯಾಸ ಮಾಡಿ ಮೈಗೂಡಿಸಿಕೊಂಡಿದ್ದನೆಂದು ಧ್ವನಿತವಾಗುತ್ತದೆ. ಈತ ತನ್ನ ಹುಟ್ಟೂರನ್ನಾಗಲೀ ಗಣೇಕಲ್ಲಿನ ವಿಚಾರವನ್ನಾಗಲೀ ಸ್ಪಷ್ಟವಾಗಿ ತನ್ನ ಕಾವ್ಯಗಳಲ್ಲಿ ಹೇಳಿಕೊಂಡಿಲ್ಲವಾದರೂ ಈತನ ಕುಮಾರವಿಜಯದಲ್ಲಿನ ಕೆಲವು ಆಧಾರಗಳ ಮೇಲೆ ಇಷ್ಟು ಹೇಳಬಹುದು. ಸಂಗವಿಭು ಅಥವಾ ಸಂಗಪ್ಪ ಆದವಾನಿ ತಾಲ್ಲೂಕಿನ ನಂದವಾರ ಗ್ರಾಮದ ನಾಡಗೌಡ ಮನೆತದವನಾಗಿದ್ದ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಣೇಕಲ್ ನಾಡಗೌಡರ ಮನೆತನದ ಹೆಣ್ಣನ್ನು ಮಾಡಿಕೊಂಡು ಸಂಸ್ಥಾನದ ರಾಜ್ಯಕಾರಭಾರ ಮಾಡುತ್ತ ತನ್ನ ಜೀವಿತದ ಬಹುಕಾಲವನ್ನು ಗಣೇಕಲ್ಲಿನಲ್ಲಿ ಕಳೆದ. ಪ್ರ.ಶ. ಸುಮಾರು 1832 ರಿಂದ 1856ರ ಅವಧಿಯಲ್ಲಿ ಈತ ತನ್ನ ಕಾವ್ಯಗಳನ್ನು ರಚಿಸಿರಬೇಕು. ಈ ಕಾವ್ಯಗಳ ಹಸ್ತ ಪ್ರತಿಗಳೆಲ್ಲ ಹುಟ್ಟೂರಾದ ನಂದವಾರದ ಪರಿಸರದಲ್ಲಿ ಸಿಗದೆ ರಾಯಚೂರು ಜಿಲ್ಲೆಯಲ್ಲಿಯೇ ದೊರೆತಿವೆ. ಗಣೇಕಲ್ ಸುತ್ತಣ ಪ್ರದೇಶದಲ್ಲಿ ಈತ ರಚಿಸಿದ ಶತಕಗಳನ್ನೂ ಚಂಪುಕಾವ್ಯಗಳನ್ನೂ ವಿವಿಧ ಜಾತಿಯ ಸಹೃದಯರು ಓದುವ ಪರಿಪಾಠವಿದೆ. ಇದುವರೆಗೆ ದೊರೆತ ಸಂಗವಿಭುವಿನ ಕಾವ್ಯಗಳು ನಾಲ್ಕು: ಭುವನೈಕ ನಾಯಕೀಶತಕ, ಬಸವಶತಕ, ಪಂಪಾಶತಕ, ಕುಮಾರವಿಜಯ ಚಂಪುಮಹಾಕಾವ್ಯ.

ಕುಮಾರವಿಜಯದಲ್ಲಿ ಮಹಾಕಾವ್ಯದ ಲಕ್ಷಣಗಳೆಲ್ಲ ಇವೆ. ಸತ್ಕವಿ ಕಾಳಿದಾಸ ತಾಂ ಪೇಳಿದ ಸತ್ಕಥಾಸರಣಿ ವೈಖರಿಯಂ ಬಣ್ಣಿಪೆಂ ಎಂದು ಕುಮಾರ ಸಂಭವದತ್ತ ಈ ಕವಿ ಬೆರಳು ಮಾಡಿ ತೋರಿಸಿದರೂ ಇದು ಕಾಳಿದಾಸನ ಯಥಾವತ್ ಅನುವಾದವೇನಲ್ಲ. ಷಡಕ್ಷರಿಯ ಕಾಲಕ್ಕೇ ನಿಂತುಹೋಗಿದ್ದ ಚಂಪುಯುಗವನ್ನು ತನ್ನವರೆಗೂ ನಡೆಸಿಕೊಂಡು ಬಂದ ಕೀರ್ತಿ ಸಂಗವಿಭುಗೆ ಸಲ್ಲುತ್ತದೆ.

ಸಂಗವಿಭುವಿನ ಶತಕಗಳಲ್ಲಿ ಶುಷ್ಕನೀತಿಯಿಲ್ಲ. ಹೇಳುವುದನ್ನು ರಸವತ್ತಾಗಿ ಹೇಳಿದ್ದಾನೆ. ಈ ಪದ್ಯ ಕವಿಯ ಚಮತ್ಕಾರಕ್ಕೊಂದು ಉದಾಹರಣೆ:

ಬಾಣನ ಭಕ್ತಿಯಂ ಮನೆಯ ಬಾಗಿಲು ಬಲ್ಲುದು ಪಾರ್ಥಭಕ್ತಿಯಂ ಬಾಣವು ಬಲ್ಲುದೊಂದಡಿಯು ಬಲ್ಲುದು ಕಣ್ಣಪ್ಪನೊಪ್ಪ ಭಕ್ತಿಯಂ | ಮಾಣದ ನಿಮ್ಮ ಭಕ್ತಿಯನು ಚಿತ್ತವು ಬಲ್ಲುದು ಚಿನ್ಮಯಾತ್ಮಕ ಲ್ಯಾಣ ಪುರಪ್ರಸಿದ್ಧ ಶರಣಾ ಶರಣಾಗತವಜ್ರಪಂಜರಾ ||

ಭುವನೈಕನಾಯಕೀಶತಕದಲ್ಲಿ ಪಾರ್ವತಿಯ ವರ್ಣನೆ ಮಾಡುವುದರಲ್ಲಿ ಕವಿಯ ಭಕ್ತಿ, ಗೌರವಗಳ ಜೊತೆಗೆಯೇ ಅವನ ದೃಷ್ಟಿ ಆಕೆಯ ಅಲೌಕಿಕ ಸೌಂದರ್ಯವನ್ನೂ ಕಂಡಿದೆ. ಪಂಪಾಶತಕವಂತೂ ತುಂಬಿ ಹರಿಯುವ ಪ್ರವಾಹದಂತೆ ನಿರರ್ಗಳವಾಗಿ ಸಾಗುತ್ತದೆ.

ಸಂಸ್ಕೃತ ಭೂಯಿಷ್ಠವಾದ ಭಾಷೆಯಷ್ಟೇ ಸಮರ್ಥವಾಗಿ ಅಚ್ಚಗನ್ನಡ ಮತ್ತು ಪ್ರಾದೇಶಿಕ ಶಬ್ದಗಳನ್ನು ಸಂಗವಿಭು ಸುಂದರವಾಗಿ ಬಳಸುತ್ತಾನೆ.

ತೊಗೆಯುಂಟಾದೊಡೆ ತುಪ್ಪಮೆಂಬ ನೆರೆತುಪ್ಪಂ ನೀಡಲೇನೀಬರೇ ಯಗುಳೆಂತುಂಬುವೆನೆಂದು ಸಾರುತರವೇಳಲ್ತಂದು ನೀಡಲ್ಕೆ ಮ | ಜ್ಜಿಗೆ ಬೇಕೆಂಬುವನಪ್ಪು ಗೂಡಿ ಮನುಜಂಗೇನಿರ್ದರೇನಪ್ಪುದೇ ಮಿಗೆ ತೃಪ್ತಿತ್ವಕ್ಕೆ ಸಾಲದೆಂಬನಭವಾ ಪಂಪಾಪುರಾಧೀಶ್ವರಾ ||

ಅಶಾಂತಿ, ಅವ್ಯವಸ್ಥೆಗಳ ಕಾಲದಲ್ಲಿದ್ದವನಾದರೂ ಕವಿ ಮನಸ್ಸಿನ ಸ್ತಿಮಿತವನ್ನು ಬೋಧಿಸುವ ಶತಕಗಳನ್ನೂ ಚಂಪುಕಾವ್ಯವನ್ನೂ ರಚಿಸಬಲ್ಲಂಥ ರಸಪ್ರಜ್ಞೆಯನ್ನೂ ಸೃಜನಶೀಲತೆಯನ್ನೂ ಕಾಯ್ದುಕೊಂಡಿರುವುದು ಮೆಚ್ಚತಕ್ಕ ವಿಷಯ.