ಗಣೇಶ್ವರ : ರಾಜಸ್ತಾನ ರಾಜ್ಯದ ಸೀಕರ್ ಜಿಲ್ಲೆಯ ನೀಮ್-ಕ-ಥಾಣ ತಾಲ್ಲೂಕಿನಲ್ಲಿರುವ ಪ್ರಾಚೀನ ನೆಲೆ. ಇಲ್ಲಿ ದೊರೆತ ಪ್ರಾಚ್ಯಾವಶೇಷಗಳು ವಿಭಿನ್ನವೂ ವಿಶಿಷ್ಟವೂ ಆಗಿವೆ. ಇಲ್ಲಿ ಪ್ರತಿನಿಧಿತವಾದ ಸಂಸ್ಕೃತಿಯನ್ನು ಗಣೇಶ್ವರ ಸಂಸ್ಕೃತಿ ಎಂಬ ಹೆಸರಿನಿಂದ ಕರೆಯಲಾಗಿದೆ. ಗಣೇಶ್ವರದ ಸುತ್ತಮುತ್ತ ನಡೆಸಿದ ಸರ್ವೇಕ್ಷಣೆಯಲ್ಲಿ ಹಾಗೂ ಗಣೇಶ್ವರದಲ್ಲಿ ನಡೆದ ಉತ್ಖನನದಲ್ಲಿ ಸು. 1000 ತಾಮ್ರದ ಉಪಕರಣಗಳು ಸಿಕ್ಕವು. ಭಾರತದ ಇತರ ಯಾವ ಪುರಾತತ್ತ್ವ ನೆಲೆಯಲ್ಲೂ ಈ ಸಂಖ್ಯೆಯಲ್ಲಿ ತಾಮ್ರೋಪಕರಣಗಳು ದೊರೆತಿಲ್ಲ. ಇದೇ ಗಣೇಶ್ವರ ನೆಲೆಯ ಮತ್ತು ಸಂಸ್ಕೃತಿಯ ವಿಶೇಷತೆ. ಈ ಸಂಸ್ಕೃತಿ ಪ್ರ.ಶ. 20ನೆಯ ಶತಮಾನದ 70ರ ದಶಕದಲ್ಲಿ ಬೆಳಕಿಗೆ ಬಂದಿತು. ಚಪ್ಪಟೆಯಾದ ಕೊಡಲಿ, ಬಾಣದ ಮೊನೆ, ಭರ್ಜಿಯ ಮೊನೆ, ಅಲಗು, ಮೀನಿನ ಗಾಳದ ಕೊಕ್ಕೆ, ತಂತಿ, ಮೊಳೆ, ಉಳಿ-ಹೀಗೆ ಹಲವಾರು ಬಗೆಯ ಉಪಕರಣಗಳು ಈ ಸಂಸ್ಕೃತಿಯ ನೆಲೆಗಳಲ್ಲಿ ದೊರೆತಿವೆ. ಇವುಗಳಲ್ಲಿ ಅಲಗು, ಬಾಣದ ಮೊನೆ, ಗಾಳದ ಕೊಕ್ಕೆ ಮುಂತಾದ ನಮೂನೆಗಳು ಹರಪ್ಪ ಸಂಸ್ಕೃತಿಯ ನೆಲೆಗಳಲ್ಲೂ ಸಾಮಾನ್ಯವಾಗಿ ಕಂಡುಬರುತ್ತವೆ. ಮೀನುಗಾರಿಕೆ ಮತ್ತು ಬೇಟೆ ಗಣೇಶ್ವರ ಸಂಸ್ಕೃತಿಯ ಜೀವನಾಧಾರಗಳಾಗಿದ್ದವೆಂಬುದು ಉಪಕರಣಗಳ ನಮೂನೆಗಳಿಂದ ಸೂಚಿತವಾಗುತ್ತದೆ. ಈ ಸಂಸ್ಕೃತಿಯನ್ನು ಸಮಕಾಲೀನ - ತಾಮ್ರಶಿಲಾ, ತಾಮ್ರೋಪಕರಣ ಗುಡ್ಡೆ ಅಥವಾ ಹರಪ್ಪ ಯಾವ ಸಂಸ್ಕೃತಿಗೆ ಸೇರಿಸಬೇಕೆಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಗಣೇಶ್ವರದ ಉಪಕರಣಗಳಿಗೂ ಗಂಗಾ-ಯಮುನ ನದಿ ಬಂiÀÄಲಿನಲ್ಲಿ ದೊರೆಯುವ ತಾಮ್ರೋಪಕರಣ ಗುಡ್ಡೆ ಸಂಸ್ಕೃತಿಯ ಉಪಕರಣಗಳಿಗೂ ಯಾವುದೇ ಸಾಮ್ಯವಿಲ್ಲ ಎಂಬುದು ಗಮನಿಸಬೇಕಾದ ವಿಷಯ. ಬ್ರಿಜೆಟ್ ಮತ್ತು ರೇಮಂಡ್ ಅಲ್ಚಿನ್ ಅವರ ಪ್ರಕಾರ ಗಣೇಶ್ವರ ಮತ್ತು ಆಹಾರ್ ಸಂಸ್ಕೃತಿಗಳು ಸ್ವತಂತ್ರ ಪ್ರಾದೇಶಿಕ ಸಂಸ್ಕೃತಿಗಳಾಗಿದ್ದವು. ಆದರೆ ಇವು ನಗರೀಕೃತ ಹರಪ್ಪ ಸಂಸ್ಕೃತಿಯೊಂದಿಗೆ ವ್ಯಾಪಾರ ಸಂಬಂಧವನ್ನಿಟ್ಟು ಕೊಂಡಿದ್ದವು. ಗಣೇಶ್ವರದ ಸಿದ್ಧ ಉಪಕರಣಗಳನ್ನು ಹರಪ್ಪ ಮತ್ತು ಅಹಾರ್ ಸಂಸ್ಕೃತಿಯ ವಸತಿಗಳು ಪ್ರಾಯಶಃ ತರಿಸಿಕೊಳ್ಳುತ್ತಿದ್ದವು. ಗಣೇಶ್ವರ ಮತ್ತು ಕಾಲಿಬಂಗನ್ ನಡುವೆ ಹರಪ್ಪ ಪುರ್ವ ಮತ್ತು ಹರಪ್ಪ ಕಾಲಗಳಲ್ಲಿದ್ದ ಸಂಪರ್ಕಕ್ಕೆ ಸಾಕಷ್ಟು ಪುರಾವೆಗಳಿವೆ. ಗಣೇಶ್ವರ ಖೇತ್ರಿ ತಾಮ್ರಗಣಿಗಳಿಂದ 75ಕಿಮೀ ದೂರದಲ್ಲಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಗಣೇಶ್ವರ ಸಂಸ್ಕೃತಿಗೆ ಸೇರುವ 5,000ಕ್ಕೂ ಹೆಚ್ಚು ತಾಮ್ರ ಉಪಕರಣಗಳು ಈ ವಲಯದಿಂದ ಲಭಿಸಿವೆ. ಆರ್.ಸಿ. ಅಗ್ರವಾಲರ ಅಭಿಪ್ರಾಯದಲ್ಲಿ ಗಣೇಶ್ವರ ಸಂಸ್ಕೃತಿಯ ಜನರೇ ಖೇತ್ರಿ ಪ್ರದೇಶದ ಮೂಲ ನಿವಾಸಿಗಳು. ಗಣೇಶ್ವರ ಸಂಸ್ಕೃತಿಯ ನಿವೇಶನಗಳು ಖೇತ್ರಿ ಗಣಿಗಳನ್ನು ಆರ್ಥಿಕವಾಗಿ ಅವಲಂಬಿಸಿದ್ದವು ಎಂಬುದನ್ನು ಅಲ್ಚಿನ್ ದಂಪತಿಗಳೂ ಸಮರ್ಥಿಸುತ್ತಾರೆ. ತಾಮ್ರ ಉಪಕರಣಗಳ ಜತೆಗೆ ಮಣ್ಪಾತ್ರೆಗಳೂ ಈ ನಿವೇಶನಗಳಲ್ಲಿ ಸಿಕ್ಕಿವೆ. ಇವನ್ನು ಗಣೇಶ್ವರ ಪಾತ್ರೆಗಳೆಂದೇ ಹೇಳಲಾಗುತ್ತದೆ. ಇವು ಹೆಚ್ಚಾಗಿ ಸೀಕರ್ ಜಿಲ್ಲೆಯಲ್ಲಿ ಕಾಣಸಿಗುತ್ತವೆ. ಗಣೇಶ್ವರ ಸಂಸ್ಕೃತಿ ಪ್ರ.ಶ.ಪು. 3000-2800ರ ಅವಧಿಯಲ್ಲಿ ಆರಂಭವಾಗಿರಬೇಕೆಂದು ಮಣ್ಪಾತ್ರೆಗಳ ತೌಲನಿಕ ಅಧ್ಯಯನದಿಂದ ತಿಳಿದುಬಂದಿದೆ. ಈ ಮಣ್ಪಾತ್ರೆಗಳು ಇಲ್ಲಿಂದ 40 ಕಿಮೀ ದೂರದಲ್ಲಿರುವ ಜೋಧಪುರದಲ್ಲಿ ದೊರೆತ ಕಾವಿಬಣ್ಣದ ಮಣ್ಪಾತ್ರೆಗಳನ್ನು ಹೋಲುತ್ತವೆ. ಜೋಧಪುರದ ಪಾತ್ರೆಗಳು ಇಂಗಾಲ14ರ ಕಾಲನಿರ್ಣಯಕ್ಕೆ ಒಳಗಾಗಿವೆ. ಈ ಕಾಲಮಾನವನ್ನು ನಿರ್ಣಯಿಸಿದ ಡಿ.ಪಿ. ಅಗ್ರವಾಲರು ಇದೇ ಆಧಾರದ ಮೇಲೆ ಗಣೇಶ್ವರ ಸಂಸ್ಕೃತಿ ಪ್ರ.ಶ.ಪು. 3000ದ ಆಸುಪಾಸಿನಲ್ಲಿ ಪ್ರಾರಂಭವಾಯಿತೆಂದು ಅಭಿಪ್ರಾಯಪಟ್ಟಿದ್ದಾರೆ.