ಗಣೇಶ, ರಾಜಾ : ಬಂಗಾಳವನ್ನಾಳುತ್ತಿದ್ದ ಸುಲ್ತಾನರಿಂದ ರಾಜ್ಯ ಸೂತ್ರಗಳನ್ನು ಕಸಿದುಕೊಂಡಿದ್ದ ಒಬ್ಬ ಹಿಂದೂ ಪ್ರಮುಖ. ಮುಸ್ಲಿಂ ದೊರೆಗಳಿಂದ ಹಿಂದೂ ಆದವನೊಬ್ಬ ರಾಜ್ಯಾಡಳಿತ ಕಸಿದುಕೊಂಡ ವಿರಳ ಪ್ರಸಂಗವಿದಾದ್ದರಿಂದ ಇದಕ್ಕೆ ಪ್ರಾಮುಖ್ಯವುಂಟು. ಈ ಘಟನೆ ನಡೆದದ್ದುಂಟೆಂಬುದು ನಿಸ್ಸಂದೇಹವಾದರೂ ಇದರ ಬಗ್ಗೆ ಖಚಿತವಾದ ವಿವರಗಳು ತಿಳಿದಿಲ್ಲ. ಇವನನ್ನು ಮುಸ್ಲಿಂ ಇತಿಹಾಸಕಾರರು ರಾಜಾ ಕಾನ್್ಸ ಅಥವಾ ಕಾನ್ಸಿ ಎಂದು ಕರೆದಿದ್ದಾರೆ. ಕೆಲವು ಹಿಂದೂ ಆಧಾರಗಳಿಂದ ಈತನ ಹೆಸರು ಗಣೇಶ ಎಂದು ತಿಳಿದುಬರುತ್ತದೆ. ಇದೇ ಈತನ ನಿಜವಾದ ಹೆಸರು ಎಂಬುದು ಈಗ ಬಹುತೇಕ ನಿಸ್ಸಂದೇಹ. ಈತ ಉತ್ತರ ಬಂಗಾಳದ ಒಬ್ಬ ಜಮೀನ್ದಾರ. 400 ವರ್ಷಗಳಿಗೂ ಹಳೆಯ ವಂಶವೊಂದರಲ್ಲಿ ಹುಟ್ಟಿದಾತ. 1389-1393ರ ನಡುವೆ ಸಿಂಹಾಸನವೇರಿದ್ದಿರಬಹುದಾದ ಘಿಯಾಸುದ್ದೀನ್ ಆಜ಼ಂ ಷಹನ ಕಾಲದಲ್ಲಿ ಈತ ಪ್ರಾಮುಖ್ಯ ಗಳಿಸಿದ. ಆಜ಼ಂ ಷಹನನ್ನು ಇವನು ಕೊಲ್ಲಿಸಿದನೆಂದು 1788ರಲ್ಲಿ ರಚಿಸಲಾದ ರಿಯಾeóï ಎಂಬ ಮುಸ್ಲಿಂ ಉದಂತವೊಂದರಲ್ಲಿ ಹೇಳಲಾಗಿದೆಯಾದರೂ ಇದಕ್ಕೆ ಬೇರಾವ ಆಧಾರವೂ ಸಿಗುವುದಿಲ್ಲ. ಅಂತೂ ಅಜ಼ಂ ಷಹನ ಅನಂತರ ಸೈಫುದ್ದೀನ್ ಹಂeóÁ ಷಹ ಪಟ್ಟಿಕ್ಕೆ ಬಂದ. ಈತ ತುಂಬ ದುರ್ಬಲ ಅರಸ. ಇವನ ಆಳ್ವಿಕೆಯ ಕಾಲದಲ್ಲಿ ಆಸ್ಥಾನಿಕರೂ ಸೇನಾ ನಾಯಕರೂ ಪ್ರಬಲರಾದರು. ಇವರ ಪೈಕಿ ಗಣೇಶ ಪ್ರಮುಖ. ಹಂeóÁ ಷಹನ ಅನಂತರ ಬಂದ ಸುಲ್ತಾನನಾದ ಷಿಹಾಬುದ್ದೀನನ ಮರಣಾನಂತರ (ಅವನನ್ನು ಕೊಲ್ಲಿಸಿದವನು ಗಣೇಶನೇ ಎಂಬುದಾಗಿಯೂ ಒಂದು ಮೂಲ ತಿಳಿಸುತ್ತದೆ) ಗಣೇಶ ಅಧಿಕಾರ ಗಳಿಸಿಕೊಂಡನೆಂದೂ ಹೇಳಲಾಗಿದೆ. ಗಣೇಶ ವಾಸ್ತವವಾಗಿ ರಾಜ ನಿರ್ಮಾಪಕನಾಗಿದ್ದನೆಂಬುದಂತೂ ನಿಜ. ಈತನೇ ಸಿಂಹಾಸನವನ್ನೇರಿದನೆಂದೂ ಕೆಲವರು ಹೇಳುತ್ತಾರೆ. ರಾಜಾ ಗಣೇಶನ ನಾಣ್ಯಗಳು ಯಾವುವೂ ಇದುವರೆಗೂ ಸಿಕ್ಕಿಲ್ಲ. ಇವನಿಗೆ ಹಿಂದಿನ ಮತ್ತು ಮುಂದಿನ ಸುಲ್ತಾನರ ನಾಣ್ಯಗಳಿವೆ. ರಾಜಾ ಗಣೇಶ ರಾಜ್ಯವಾಳಿದನೆಂದೂ ಸಿಂಹಾಸನವನ್ನೇರಿದ ಮೇಲೆ ದನುಜಮರ್ದನದೇವ, ಮಹೇಂದ್ರದೇವ ಎಂಬ ಹೆಸರುಗಳನ್ನೂ ತಳೆದನೆಂದೂ ಕೆಲವರು ಊಹಿಸಿದ್ದಾರೆ. ಇದೇ ರೀತಿ ಇನ್ನೂ ಅನೇಕ ಊಹೆಗಳಿವೆ.
ಅಂತೂ ಈತ 15ನೆಯ ಶತಮಾನದ ಆದಿಯಲ್ಲಿ ಅಧಿಕೃತವಾಗಿಯೋ ಅನಧಿಕೃತವಾಗಿಯೋ ಆಡಳಿತ ನಡೆಸಿದ್ದು ನಿಜ. ಗಣೇಶ ಏಳು ವರ್ಷಗಳ ಕಾಲ ರಾಜ್ಯವಾಳಿದನೆಂದೂ ಇವನ ಅನಂತರ ಇವನ ಎರಡನೆಯ ಮಗ ಜಲಾಲುದ್ದೀನ್ ಸಿಂಹಾಸನವನ್ನೇರಿದನೆಂದೂ ಷಿರಿಷ್ತಾನಿಂದ ತಿಳಿದುಬರುತ್ತದೆ. ಈತ 1415 ರಿಂದ 1431ರ ವರೆಗೆ ಆಳಿದ. ರಾಜಾ ಗಣೇಶನ ಕಾಲದಲ್ಲಿ ಮುಸ್ಲಿಮರ ಒತ್ತಡದಿಂದಾಗಿ ಅವನ ಎರಡನೆಯ ಮಗ ಮುಸ್ಲಿಮನಾದನೆಂಬುದು ಒಂದು ವಾದ. ಗಣೇಶ ಸ್ವತಃ ಅಧಿಕಾರವನ್ನು ತನ್ನ ಮಗ ಜಾದುವಿಗೆ ವಹಿಸಿಕೊಟ್ಟನೆಂದೂ ಅವನು ಅನಂತರ ಮುಸ್ಲಿಂ ಮತಕ್ಕೆ ಪರಿವರ್ತನೆ ಹೊಂದಿ ಜಲಾಲುದ್ದೀನ್ ಮುಹಮ್ಮದ್ ಷಹ ಎಂಬ ಹೆಸರಿನಿಂದ ರಾಜ್ಯವಾಳಿದನೆಂದೂ ಕೆಲವು ಮುಸ್ಲಿಂ ಇತಿಹಾಸಕಾರರು ಹೇಳಿದ್ದಾರೆ. ಜಲಾಲುದ್ದೀನನ ಮರಣಾನಂತರ ಅವನ ಮಗ 1435ರ ವರೆಗೆ ಆಳಿದ. ಈತ ಕೊಲೆಗೆ ಗುರಿಯಾದ. ರಾಜಾ ಗಣೇಶನ ವಂಶದ ಅಧಿಕಾರ ಕೊನೆಗೊಂಡಿತು. ಸ್ವಲ್ಪ ಕಾಲಾನಂತರ ರಾಜ್ಯಸೂತ್ರ ಮತ್ತೆ ಹಿಂದಿನ ಸುಲ್ತಾನವಂಶಕ್ಕೆ ಹೋಯಿತು.