ಗಣೇಶ ದೈವಜ್ಞ : ಪ್ರಾಚೀನ ಭರತಖಂಡದ ಪ್ರಸಿದ್ಧ ಜ್ಯೋತಿಷ್ಕರಲ್ಲಿ ಒಬ್ಬ. ಪಶ್ಚಿಮ ಸಮುದ್ರತೀರದಲ್ಲಿರುವ ನಂದಗಾವ್ ಎಂಬುದು ಈತನ ಊರು. ತಂದೆ ಕೇಶವ ದೈವಜ್ಞ, ತಾಯಿ ಲಕ್ಷ್ಮಿ. ಕೌಶಿಕ ಗೋತ್ರದವ. ಕಾಲ ಪ್ರ.ಶ.ಸು. 1500. ಗ್ರಹ ಲಾಘವ (ಪ್ರ.ಶ. 1520), ಲಘುತಿಥಿ ಚಿಂತಾಮಣಿ (ಪ್ರ.ಶ. 1525). ಬೃಹತ್ತಿಥಿ ಚಿಂತಾಮಣಿ, ಸಿದ್ಧಾಂತ ಶಿರೋಮಣಿ ಟೀಕೆ, ಲೀಲಾವತಿ ಟೀಕೆ (ಪ್ರ.ಶ. 1545), ವಿವಾಹ ಬೃಂದಾವನ ಟೀಕೆ, ಮುಹೂರ್ತತತ್ತ್ವ ಟೀಕೆ, ಶ್ರಾದ್ಧ ನಿರ್ಣಯ, ಛಂದೋರ್ಣವ ಟೀಕೆ, ತರ್ಜನೀಯಂತ್ರ, ಕಷ್ಣಾಷ್ಟಮೀ ನಿರ್ಣಯ, ಹೋಲಿಕಾ ನಿರ್ಣಯ, ಲಘೂಪಾಯ ಪಾಕ (ಪಾತ ಸರಣಿ ಪ್ರ.ಶ. 1538)-ಈ ಕೃತಿಗಳನ್ನು ಗಣೇಶ ದೈವಜ್ಞ ರಚಿಸಿದ್ದಾನೆ. ಇಷ್ಟಲ್ಲದೆ ಪರ್ವನಿರ್ಣಯ ಎಂಬ ಗ್ರಂಥದ ಕರ್ತೃ ಈತನೇ ಎಂದು ಕೆಲವರ ಅಭಿಪ್ರಾಯ. ಈತನ ಜನ್ಮವಿಚಾರದಲ್ಲಿ ಒಂದು ದಂತಕಥೆ ಇದೆ. ತಂದೆಯಾದ ಕೇಶವ ದೈವಜ್ಞ ಒಮ್ಮೆ ಮಾಡಿದ ಗ್ರಹಣ ಗಣಿತ ತಾಳೆಯಾಗಲಿಲ್ಲ. ಅದನ್ನು ಗಮನಿಸಿದ ರಾಜ ಅವನನ್ನು ಹಾಸ್ಯ ಮಾಡಿದ. ನೊಂದ ಕೇಶವ ನಂದಿಗ್ರಾಮಕ್ಕೆ ಹೋಗಿ ಗಣಪತಿ ದೇವಾಲಯದಲ್ಲಿ ಏಕಮನಸ್ಕನಾಗಿ ಗಣೇಶನನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಗಣಪತಿ ಸ್ವಪ್ನದಲ್ಲಿ ಬಂದು ದೃಕ್ಸಮವಾದ ಗ್ರಹಣಗಣಿತ ಆತನಿಂದ ಸಾಧ್ಯವೆಂತಲೂ ಗಣಪತಿಯ ಅಂಶದಿಂದ ಹುಟ್ಟುವ ಮಗ ಅದನ್ನು ಸಾಧಿಸುತ್ತಾನೆ ಎಂತಲೂ ತಿಳಿಸಿ ಅದೃಶ್ಯನಾದ. ಕೇಶವನ ಮಗ ಗಣೇಶ ದೃವಜ್ಞ ಈಶ್ವರಾಂಶದಿಂದ ಹುಟ್ಟಿದವನೆಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ ಈತ ದೈವಜ್ಞ: ದೈವಾಂಶಸಂಭೂತನೆಂಬುದು ಸರ್ವಸಮ್ಮತ. ಸೂರ್ಯ ಸಿದ್ಧಾಂತ, ಆರ್ಯಭಟ ಸಿದ್ಧಾಂತ, ಬ್ರಹ್ಮ ಸಿದ್ಧಾಂತಗಳಿಂದ ಮೂಲಭೂತ ಅಂಶಗಳನ್ನು ಸ್ವೀಕರಿಸಿ ದೃಗ್ಗಣಿತೈಕ್ಯ ಸಾಧನೆಗಾಗಿ ಅಲ್ಪ ಮಾರ್ಪಾಡು ಗಳನ್ನು ಮಾಡಿಕೊಂಡು ದೈವಜ್ಞ ಗ್ರಹಲಾಘವ ಗ್ರಂಥವನ್ನು ಸುಲಭ ಶೈಲಿಯಲ್ಲಿ ರಚಿಸಿದ್ದಾನೆ. ಈ ಕೃತಿ ಆಸೇತುಹಿಮಾಚಲಪರ್ಯಂತ ಜ್ಯೋತಿಷ ಸಿದ್ಧಾಂತ ಗಣಿತಜ್ಞರಿಗೆ ಅತ್ಯುಪಯುಕ್ತವಾಗಿದೆ. ಇದಕ್ಕೆ ಗಂಗಾಧರ (ಪ್ರ.ಶ. 1586), ಮಲ್ಲಾರಿ (ಪ್ರ.ಶ. 1602), ವಿಶ್ವನಾಥ್ (ಪ್ರ.ಶ. 1612)- ಇವರು ಟೀಕೆಗಳನ್ನು ರಚಿಸಿದ್ದಾರೆ. ಈ ಗ್ರಂಥದಲ್ಲಿ 14 ಅಧಿಕಾರಗಳಿವೆ. ಮಲ್ಲಾರಿ ಮತ್ತು ವಿಶ್ವನಾಥರ ಟೀಕೆಗಳಿಂದ ಇದರಲ್ಲಿ 15 ಅಧಿಕಾರಗಳಿರು ವಂತೆ ತಿಳಿದುಬರುತ್ತದೆ. ಒಟ್ಟು ಶ್ಲೋಕಸಂಖ್ಯೆ 187. ತಿಥಿ, ನಕ್ಷತ್ರ, ಯೋಗ, ಕರಣಗಳನ್ನು ಸುಲಭಕ್ರಮದಲ್ಲಿ ಗಣಿತ ಮಾಡುವ ವಿಧಾನ ಲಘು ಮತ್ತು ಬೃಹಚ್ಚಿಂತಾಮಣಿ ಗ್ರಂಥಗಳಲ್ಲಿದೆ. ತರ್ಜನೀ ಯಂತ್ರ ಎಂಬ ಕೃತಿಯಲ್ಲಿ ಕಾಲ ಸಾಧನ ವಿಚಾರ ಉಕ್ತವಾಗಿದೆ. ಇದಕ್ಕೆ ಪ್ರತೋದಯ ಎಂಬ ಹೆಸರೂ ಉಂಟು. ಸಖಾರಾಮ ನೃಪ ಎಂಬಾತನೂ ಸಂಗಮೇಶ್ವರದ ಗೋಪೀನಾಥ ಎಂಬಾತನೂ ಇದಕ್ಕೆ ಟೀಕೆ ಬರೆದಿದ್ದಾರೆ. ಈ ಕೃತಿಗಳ ಅವಲೋಕನದಿಂದ ಗಣೇಶ ದೈವಜ್ಞನ ಗಣಿತ ಪ್ರೌಢಿಮೆ, ಜ್ಯೋತಿಷ, ಧರ್ಮಶಾಸ್ತ್ರಗಳಲ್ಲಿನ ವಿದ್ವತ್ತು ಮತ್ತು ಗ್ರಂಥರಚನಾ ಸಾಮಥರ್್ಯಗಳು ಯಾವ ಮಟ್ಟದವು ಎಂಬುದು ತಿಳಿಯುತ್ತದೆ. ಇದೇ ಹೆಸರಿನ ಬೇರೆ ಇಬ್ಬರು ದೈವಜ್ಞರ ಹೆಸರಗಳೂ ಪ್ರಚಾರದಲ್ಲಿವೆ. ತಾಜಕಭೂಷಣ ಮತ್ತು ಜಾತಕಾಲಂಕಾರ ಇವರ ಕೃತಿಗಳು.