ಗತಿಶೀಲತೆ : ಉತ್ಪಾದನಾಂಗಗಳು ಒಂದು ಕ್ಷೇತ್ರದಿಂದ ಅಥವಾ ಒಂದು ಉದ್ಯೋಗದಿಂದ ಮತ್ತೊಂದಕ್ಕೆ ಚಲಿಸುವ ಪ್ರವೃತ್ತಿ, ಸುಗಮತೆ (ಮೊಬಿಲಿಟಿ). ಮಾರುಕಟ್ಟೆಯಲ್ಲಿ ಉತ್ಪಾದನಾಂಗಗಳ ಸರಬರಾಯಿ ಅವುಗಳ ಬೇಡಿಕೆಗೆ ಸರಿದೂಗುವಂತೆ ಮಾಡುವ ಅಂಶ. ಆದ್ದರಿಂದ ಉತ್ಪಾದನಾಂಗಗಳ ಮಾರುಕಟ್ಟೆಯ ಕಾರ್ಯಗತಿಯನ್ನು ಅರ್ಥಮಾಡಿಕೊಳ್ಳ ಬೇಕಾದರೆ ಗತಿಶೀಲತೆಯ ವಿಶ್ಲೇಷಣೆ ಅತ್ಯಾವಶ್ಯಕ. ಪರಿಪುರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಉತ್ಪಾದನಾಂಗಗಳ ಪ್ರತಿಯೊಂದು ಏಕಮಾನದ ಮಾರುಕಟ್ಟೆ ಬೆಲೆ ಅದರ ಪ್ರತಿಯೊಂದು ಉಪಯೋಗದಲ್ಲೂ ಪ್ರತಿಯೊಂದೂ ಕ್ಷೇತ್ರದಲ್ಲೂ ಒಂದೇ ಆಗಿರುತ್ತದೆ. ಅವುಗಳ ಬೆಲೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅದು ಅವುಗಳ ಸಾಪೇಕ್ಷ ಉತ್ಪಾದನ ಸಾಮಥರ್್ಯಗಳಿಗೆ ಅನುಗುಣವಾಗಿರುತ್ತದೆ; ಇಲ್ಲವೆ ಆಯಾ ಕ್ಷೇತ್ರದಲ್ಲಿಯ ಅನುಪಯುಕ್ತತೆಗೆ ಅನುಗುಣವಾಗಿರುತ್ತವೆ. ಈ ಕಾರಣದಿಂದಾಗಿ ಉಂಟಾಗಬಹುದಾದ ವ್ಯತ್ಯಾಸವನ್ನು ಬಿಟ್ಟರೆ ಉತ್ಪಾದನಾಂಗ ಏಕಮಾನ ಬೆಲೆಗಳು ಯಾವುದೇ ಮಾರುಕಟ್ಟೆಯಲ್ಲಿ ಸಮನಾಗಿರುತ್ತವೆ. ಅವುಗಳ ಬೆಲೆಗಳಲ್ಲಿ ಸಮಾನತೆಯನ್ನುಂಟುಮಾಡುವ ಅಂಶವೆಂದರೆ ಗತಿಶೀಲತೆ. ಆದರೆ ಮಾರುಕಟ್ಟೆಯಲ್ಲಿ ಪರಿಪುರ್ಣ ಸ್ಪರ್ಧೆಯಿಲ್ಲದಿರುವುದರಿಂದ ಪರಿಪುರ್ಣ ಗತಿಶೀಲತೆಗೆ ಅವಕಾಶ ಇರುವುದಿಲ್ಲ. ಈ ಕಾರಣದಿಂದಾಗಿ ಉತ್ಪಾದನಾಂಗದ ಘಟಕಗಳ ಬೆಲೆಗಳು ಒಂದೊಂದು ವೃತ್ತಿಯಲ್ಲೂ ಒಂದೊಂದು ಕ್ಷೇತ್ರದಲ್ಲೂ ಬೇರೆಬೇರೆಯಾಗಿರುತ್ತವೆ. ಉತ್ಪಾದನಾಂಗಗಳಲ್ಲಿ ಕಂಡುಬರುವ ಗತಿ ಶೀಲತೆಯನ್ನು ಪರೀಕ್ಷಿಸಿ ತಿಳಿಯಬಹುದು.
ಭೂಮಿ
ಸಂಪಾದಿಸಿಉತ್ಪಾದನಾಂಗಗಳಲ್ಲಿ ಪರಿಪುರ್ಣ ಗತಿಶೀಲತೆ ಕಂಡುಬರದಿದ್ದರೂ ಈ ಪ್ರವೃತ್ತಿ ಒಂದೊಂದು ಉತ್ಪಾದನಾಂಗದಲ್ಲೂ ಒಂದೊಂದು ಪ್ರಮಾಣದಲ್ಲಿ ಕಂಡುಬರುತ್ತದೆ. ಉತ್ಪಾದನಾಂಗಗಳಲ್ಲಿ ಮುಖ್ಯವಾದ ಭೂಮಿಯಲ್ಲಿ ಗತಿಶೀಲತೆಯೇ ಇಲ್ಲ. ಜಮೀನು, ವಾಯುಗುಣ, ನದಿ ಮುಂತಾದವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಭೌತಿಕವಾಗಿ ಸಾಗಿಸುವುದು ಅಸಾಧ್ಯ. ಆದರೂ ಈ ಉತ್ಪಾದನಾಂಗವನ್ನು ಬೇರೆ ಬೇರೆ ಉಪಯೋಗಗಳಿಗೆ ಅಳವಡಿಸಿಕೊಳ್ಳುವುದರ ಮೂಲಕ ಅದರಲ್ಲಿ ಗತಿಶೀಲತೆಯನ್ನುಂಟು ಮಾಡಬಹುದು. ಉದಾಹರಣೆಗೆ, ಧಾನ್ಯವನ್ನು ಬೆಳೆಯುತ್ತಿದ್ದ ಜಮೀನನ್ನು ಕಾರ್ಖಾನೆ ಕಟ್ಟಡ ಕಟ್ಟಲು ಬಳಸಿಕೊಳ್ಳಬಹುದು. ಈ ಬಗೆಯ ಗತಿಶೀಲತೆ ಸಾಧ್ಯವಿರುವುದರಿಂದ ಯಾವುದೇ ಕ್ಷೇತ್ರದಲ್ಲಿ ಭೂಮಿಯ ಬೇರೆ ಬೇರೆ ಉಪಯೋಗಗಳಲ್ಲಿ ಒಂದೇ ಮಟ್ಟದ ಗೇಣಿ ಇರುವಂತೆ ಮಾಡಲು ಸಾಧ್ಯ. ಆದರೂ ಭೂಮಿಯನ್ನು ಭೌತಿಕವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಸಾಧ್ಯತೆಯಿಲ್ಲದಿರು ವುದರಿಂದ ಗೇಣಿ ಅದರ ಬೇಡಿಕೆಗೆ ಅನುಗುಣವಾಗಿ ಮಾತ್ರ ಬದಲಾಗುತ್ತದೆಯೇ ಹೊರತು ಸರಬರಾಜಿನಿಂದ ಪ್ರಭಾವಿತಗೊಳ್ಳುವುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಅಧಿಕ ಬೇಡಿಕೆಯ ಕಾರಣದಿಂದಾಗಿ ಗೇಣಿಯ ಮಟ್ಟ ಏರಿದಾಗ ಅದು ಕಡಿಮೆ ಇರುವ ಕ್ಷೇತ್ರಗಳಿಂದ ಭೂಮಿ ಆ ಕ್ಷೇತ್ರಕ್ಕೆ ಚಲಿಸಿ ಆ ಕ್ಷೇತ್ರದಲ್ಲಿಯ ಸರಬರಾಜನ್ನು ಹೆಚ್ಚಿಸಿ ಅಲ್ಲಿಯ ಗೇಣಿಯನ್ನು ಇಳಿಸುವ ಸಾಧ್ಯತೆ ಇಲ್ಲ. ಆದಕಾರಣ ಬೇರೆಬೇರೆ ಕ್ಷೇತ್ರಗಳಲ್ಲಿ ಗೇಣಿ ಬೇರೆ ಬೇರೆ ಮಟ್ಟದಲ್ಲಿರುತ್ತವೆ.
ಬಂಡವಾಳ
ಸಂಪಾದಿಸಿಬಂಡವಾಳ ಎರಡು ಬಗೆ: ಹಣ ಬಂಡವಾಳ ಮತ್ತು ಭೌತಿಕ ಬಂಡವಾಳ. ಹಣ ಬಂಡವಾಳದಲ್ಲಿ ತಕ್ಕಮಟ್ಟಿನ ಗತಿಶೀಲತೆಯಿರುವುದರಲ್ಲಿ ಸಂದೇಹವಿಲ್ಲ. ಬಡ್ಡಿಯ ದರದ ವ್ಯತ್ಯಾಸಗಳಿಗೆ ತಕ್ಕಂತೆ ಹಣ ಬಂಡವಾಳ ಒಂದು ಕ್ಷೇತ್ರದಿಂದ ಅಥವಾ ಒಂದು ಉಪಯೋಗದಿಂದ ಮತ್ತೊಂದಕ್ಕೆ ಚಲಿಸಿ ಬಂಡವಾಳ ಮಾರುಕಟ್ಟೆಯಲ್ಲಿ ಸಮಾನವಾದ ಬಡ್ಡಿಯ ದರಕ್ಕೆ ಎಡೆ ಮಾಡಿಕೊಡುತ್ತದೆ. ಆದರೂ ಇದರಲ್ಲಿ ಪರಿಪುರ್ಣ ಗತಿಶೀಲತೆಯಿದೆಯೆಂದು ಹೇಳುವುದು ಸರಿಯಲ್ಲ. ಸ್ಥಳೀಯ ಬಂಡವಾಳ ಮಾರುಕಟ್ಟೆಯಲ್ಲಿ ಅದರ ಚಲನೆಗೆ ಅಡೆತಡೆಗಳಿರುವುದನ್ನು ಗಮನಿಸ ಬಹುದು. ಉದಾಹರಣೆಗೆ, ರಾಜಕೀಯ ಕಾರಣಗಳಿಂದಾಗಿ ಹೊರದೇಶಗಳಿಂದ ಬಂಡವಾಳದ ಆಗಮನವನ್ನು ನಿಷೇಧಿಸಿರಬಹುದು; ಇಲ್ಲವೇ ಪಾವತಿ ಶಿಲ್ಕಿನಲ್ಲಿ ಅಸಮತೋಲನ ಉಂಟಾಗಬಹುದೆಂಬ ಭಯದಿಂದ ಬಂಡವಾಳ ಹೊರದೇಶಗಳಿಗೆ ಹರಿಯುವುದನ್ನು ಸರ್ಕಾರಗಳು ತಡೆದಿಟ್ಟಿರಬಹುದು. ಭೌತಿಕ ಬಂಡವಾಳದ ಗತಿಶೀಲತೆ ತೀರ ಕಡಿಮೆ. ಈ ಬಗೆಯ ಬಂಡವಾಳವನ್ನು ಬೇರೆಬೇರೆ ಉಪಯೋಗಗಳಿಗೆ ಹಾಕುವುದು ಕಷ್ಟ. ವಿಶಿಷ್ಟ ರೂಪದ ಬಂಡವಾಳವಾಗಿದ್ದ ರಂತೂ ಅದನ್ನು ಯಾವ ಕಾರ್ಯಕ್ಕೆ ಉಪಯೋಗಿಸಬೇಕೋ ಅದನ್ನು ಬಿಟ್ಟು ಬೇರೆಯದಕ್ಕೆ ಉಪಯೋಗಿಸುವ ಸಾಧ್ಯತೆ ಇಲ್ಲ.
ಶ್ರಮ
ಸಂಪಾದಿಸಿಸಂಘಟನೆಯನ್ನೂ ಒಂದು ಬಗೆಯ ಶ್ರಮವೆಂದು ಪರಿಗಣಿಸಿದ ಪಕ್ಷದಲ್ಲಿ ಗತಿಶೀಲತೆಯನ್ನೂ ವಿಶ್ಲೇಷಿಸಬೇಕಾಗಿ ಉಳಿದಿರುವ ಉತ್ಪಾದನಾಂಗ ಶ್ರಮ ಅಥವಾ ಕಾರ್ಮಿಕರು. ಭೂಮಿ ಮತ್ತು ಬಂಡವಾಳಕ್ಕಿಂತ ಕಾರ್ಮಿಕರಲ್ಲಿ ಗತಿಶೀಲತೆ ಅಧಿಕ ಪ್ರಮಾಣದಲ್ಲಿರಬೇಕೆಂಬುದು ಸಾಮಾನ್ಯ ಭಾವನೆ. ಆದರೆ ಆಡಮ್ ಸ್ಮಿತ್ 18 ನೆಯ ಶತಮಾನದಲ್ಲಿ ಬರೆಯುತ್ತ, ಸಾಗಿಸಲಾಗದ ಗಂಟುಮೂಟೆಯೇ ಮಾನವ ಎಂದು ಅಭಿಪ್ರಾಯಪಟ್ಟಿದ್ದ. ಕಾರ್ಮಿಕರ ಗತಿಶೀಲತೆ ಎರಡು ಬಗೆ: 1. ಉದಗ್ರ (ವರ್ಟಿಕಲ್) ಮತ್ತು 2. ಕ್ಷಿತಿಜೀಯ (ಹಾರಿಜಾಂಟಲ್). ಇವೆರಡೂ ಅನುಕ್ರಮವಾಗಿ ಔದ್ಯೋಗಿಕ ಮತ್ತು ಭೌಗೋಳಿಕ ಗತಿಶೀಲತೆಗಳನ್ನು ಸೂಚಿಸುತ್ತವೆ. ಉದಗ್ರ ಗತಿಶೀಲತೆ: ಕೆಳಗಿನ, ನೀಲಿಕಾಲರಿನ ವೃತ್ತಿಗಳಲ್ಲಿ ನಿರತರಾಗಿರುವ ಕಾರ್ಮಿಕರು ಮೇಲಣ, ಶ್ವೇತಕಾಲರಿನ ವೃತ್ತಿಗಳಿಗೆ ಚಲಿಸುವ ಪ್ರವೃತ್ತಿಯನ್ನು ಉದಗ್ರ ಅಥವಾ ಔದ್ಯೋಗಿಕ ಗತಿಶೀಲತೆ ಸೂಚಿಸುತ್ತದೆ. ಈ ಬಗೆಯ ಗತಿಶೀಲತೆ ವಾಸ್ತವವಾಗಿ ಎಷ್ಟರಮಟ್ಟಿಗೆ ಕಂಡುಬರುತ್ತದೆಯೆಂಬುದನ್ನು ಅರಿಯುವ ದೃಷ್ಟಿಯಿಂದ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಅಂತರತಲೆಮಾರಿನ ಅಥವಾ ತಂದೆಮಕ್ಕಳಲ್ಲಿ ಕಂಡುಬರುವ ಔದ್ಯೋಗಿಕ ಗತಿಶೀಲತೆಯನ್ನು ವಿಶ್ಲೇಷಿಸುವ ಅನೇಕ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಇಂಥ ಅಧ್ಯಯನಗಳಿಂದ ಹೊರಬಿದ್ದಿರುವ ಗಮನಾರ್ಹವಾದ ಅಂಶವೇನೆಂದರೆ, ಕೆಳಗಿನ ಹಾಗೂ ಮೇಲಿನ ಉದ್ಯೋಗಗಳಲ್ಲಿ ನಿರತರಾಗಿರುವವರ ಮಕ್ಕಳು ತಂತಮ್ಮ ತಂದೆಯರ ಉದ್ಯೋಗಗಳನ್ನೇ ಆರಿಸಿಕೊಳ್ಳುತ್ತಾರೆಂಬುದು; ಎಂದರೆ ಕೆಳಗಿನ ಉದ್ಯೋಗದಲ್ಲಿರುವವರ ಮಕ್ಕಳು ಮೇಲಿನ ಉದ್ಯೋಗಗಳಿಗೆ ಚಲಿಸದಿರುವುದು ಕಾರ್ಮಿಕರಲ್ಲಿ ಔದ್ಯೋಗಿಕ ಗತಿಶೀಲತೆ ಇಲ್ಲದಿರುವುದಕ್ಕೆ ಜೆ. ಇ. ಕೈರನ್್ಸ ಮಂಡಿಸಿರುವ, ಸ್ಪರ್ಧಿಸದ ಗುಂಪುಗಳ ಸಿದ್ಧಾಂತದಲ್ಲಿ ವಿವರಣೆಯಿದೆ. ಈ ಸೂತ್ರದ ಪ್ರಕಾರ ಸಮಾಜದಲ್ಲಿಯ ನಾನಾ ಪಂಗಡಗಳ ನಡುವೆ ಸುಲಭವಾಗಿ ಸ್ಪರ್ಧೆ ಸಾಧ್ಯವಿಲ್ಲದ್ದಿದ್ದರೆ ಔದ್ಯೋಗಿಕ ಗತಿಶೀಲತೆ ಸುಸೂತ್ರವಾಗಿ ನಡೆದು, ಈಗ ಕಂಡುಬರುವ ಔದ್ಯೋಗಿಕ ವೇತನಗಳಲ್ಲಿಯ ಅಂತರ ತೀರ ಕಡಿಮೆಯಾಗುತ್ತಿತ್ತು - ಎಂಬುದಾಗಿ ಇದು ವಿವರಿಸುತ್ತದೆ. ಆದರೆ ಇಲ್ಲಿ ಸ್ಪರ್ಧೆ ಸಾಧ್ಯವಿಲ್ಲ. ಏಕೆಂದರೆ ಕೆಳಮಟ್ಟದ ಉದ್ಯೋಗಗಳಲ್ಲಿ ನಿರತನಾಗಿರುವ ವ್ಯಕ್ತಿಗೆ ತನ್ನ ಮಕ್ಕಳಿಗೆ ಮೇಲ್ಮಟ್ಟದ ಉದ್ಯೋಗಕ್ಕೆ ಬೇಕಾದ ಅರ್ಹತೆ ದೊರಕಿಸಿಕೊಡಲು ಅಗತ್ಯವಾದ ವಿದ್ಯಾಭ್ಯಾಸದ ವೆಚ್ಚವನ್ನು ಹೊರುವ ಶಕ್ತಿ ಇಲ್ಲದ ಕಾರಣ ಅಂಥವನ ಮಕ್ಕಳು ಔದ್ಯೋಗಿಕ ಗತಿಶೀಲತೆ ಪಡೆಯಲು ಅಸಮರ್ಥ ರಾಗಿರುವುದು ಸ್ವಾಭಾವಿಕ. ಮೇಲ್ಮಟ್ಟದ ಉದ್ಯೋಗಗಳಲ್ಲಿರುವ ವ್ಯಕ್ತಿಗಳು ತಮ್ಮ ಮಕ್ಕಳಿಗೆ ತಮ್ಮದೇ ಉದ್ಯೋಗಗಳಿಗೆ ಬೇಕಾಗುವ ಅರ್ಹತೆಗಳನ್ನು ಒದಗಿಸುವುದರಲ್ಲಿ ಸಮರ್ಥರಾಗಿರುವುದರಿಂದ ಅಂಥ ಮಕ್ಕಳು ತಮ್ಮ ತಂದೆಯರ ಉದ್ಯೋಗಗಳನ್ನು ಸಾಮಾನ್ಯವಾಗಿ ಪಡೆಯುವ ಸಾಧ್ಯತೆ ಉಂಟಾಗುತ್ತದೆ. ಹೀಗಾಗಿ ಕೆಳಮಟ್ಟದ ಹುದ್ದೆಗಳಲ್ಲಿರುವವರ ಮಕ್ಕಳು ಮೇಲ್ಮಟ್ಟದ ಹುದ್ದೆಗಳಲ್ಲಿರುವವರ ಮಕ್ಕಳೊಡನೆ ಈ ಹುದ್ದೆಗಳಿಗಾಗಿ ಸ್ಪರ್ಧೆ ಹೂಡುವ ಸಾಮಥರ್್ಯ ಪಡೆದಿಲ್ಲದ ಕಾರಣ ಈ ಹುದ್ದೆಗಳಲ್ಲಿ ಒಂದು ಬಗೆಯ ಏಕಸ್ವಾಮ್ಯ ಲಕ್ಷಣ ಬೆಳೆದು ಬಂದು, ಇವುಗಳಲ್ಲಿ ಅವಶ್ಯಕತೆಗಿಂತ ಅಧಿಕ ಗಾತ್ರದ ವೇತನವಿರುವ ಪ್ರವೃತ್ತಿ ಇರುತ್ತದೆ. ಬಂಡವಾಳ ಪದ್ಧತಿಯ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿ ಇರುವುದೆಂದು ಭಾವಿಸಲಾಗಿದೆ. ಸಮಾಜವಾದಿ ರಾಷ್ಟ್ರಗಳಲ್ಲಿ ಸರ್ಕಾರ ವಿದ್ಯಾರ್ಥಿವೇತನ, ಉಚಿತ ವಿದ್ಯಾಭ್ಯಾಸ ಮೊದಲಾದ ಪ್ರೋತ್ಸಾಹಕ ನೀತಿ ಪಾಲಿಸುವುದ ರಿಂದ ಕೆಳಮಟ್ಟದ ಹುದ್ದೆಗಳಲ್ಲಿರುವ ವ್ಯಕ್ತಿಗಳ ಮಕ್ಕಳಿಗೆ ಮೇಲ್ಮಟ್ಟದ ಹುದ್ದೆಗಳಿಗೆ ಬೇಕಾದ ಅರ್ಹತೆಯನ್ನು ಸಂಪಾದಿಸುವ ಅವಕಾಶವುಂಟಾಗುತ್ತದೆ. ಆದಕಾರಣ ಅಂಥ ರಾಷ್ಟ್ರಗಳಲ್ಲಿ ಔದ್ಯೋಗಿಕ ಗತಿಶೀಲತೆ ಸ್ವಲ್ಪ ಮಟ್ಟಿಗೆ ಕಂಡು ಬರುವುದಲ್ಲದೆ, ಮೇಲ್ಮಟ್ಟದ ಉದ್ಯೋಗಗಳಲ್ಲಿಯ ಏಕಸ್ವಾಮ್ಯದ ಅಂಶ ತೊಡೆದು ಹೋಗಿ ಔದ್ಯೋಗಿಕ ವೇತನಗಳ ವ್ಯತ್ಯಾಸ ಸಂಕುಚಿತಗೊಳ್ಳುವ ಪ್ರವೃತ್ತಿ ಇದೆಯೆಂದು ಹೇಳಲಾಗಿದೆ.
ಕ್ಷಿತೀಜೀಯ ಗತಿಶೀಲತೆ
ಸಂಪಾದಿಸಿಕಾರ್ಮಿಕ ಒಂದು ಕಾರ್ಖಾನೆಯಿಂದ, ಒಂದು ಕೈಗಾರಿಕೆಯಿಂದ ಅಥವಾ ಒಂದು ಪ್ರದೇಶದಿಂದ ಮತ್ತೊಂದಕ್ಕೆ ಚಲಿಸುವ ಪ್ರವೃತ್ತಿಯೇ ಕ್ಷಿತಿಜೀಯ ಗತಿಶೀಲತೆ. ಈ ಬಗೆಯ ಚಲನೆ ಸ್ವಯಂಪ್ರೇರಿತವಾಗಿರಬಹುದು ಇಲ್ಲವೆ ಕಾರ್ಮಿಕನ ಮೇಲೆ ಹೊರಿಸಿದ್ದಾಗಿರಬಹುದು. ಅಧಿಕವೇತನ ಅಥವಾ ಉತ್ತಮ ಕೆಲಸದ ಸ್ಥಿತಿಯನ್ನರಸಿ ಕಾರ್ಮಿಕ ಚಲಿಸುವುದು ಸ್ವಯಂಪ್ರೇರಣೆಯಿಂದ. ಹುದ್ದೆಯಿಂದ ವಜಾ ಆದ ಅಥವಾ ರಾಜಕೀಯ ಕಾರಣಗಳಿಗಾಗಿ ದೇಶದಿಂದ ದೂಡಲ್ಪಟ್ಟ ಕಾರ್ಮಿಕ ಒಂದು ಉದ್ಯೋಗದಿಂದ ಅಥವಾ ಒಂದು ದೇಶದಿಂದ ಮತ್ತೊಂದಕ್ಕೆ ಚಲಿಸ ಬೇಕಾಗುತ್ತದೆ. ಆದರೆ ಈ ಬಗೆಯ ಗತಿಶೀಲತೆ ವಿರಳ.
ಸ್ವಯಂಪ್ರೇರಿತವಾದ ಕ್ಷಿತಿಜೀಯ ಗತಿಶೀಲತೆಗೆ ಕಾರಣವಾಗುವ ಪ್ರಭಾವಗಳು ಹಲವಾರು. ಸಾಮಾಜಿಕ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಮಹಿಳೆಯರಿಗಿಂತ ಗಂಡಸರಲ್ಲಿ ಇದು ಹೆಚ್ಚು. ವಯಸ್ಸಾದ ಕಾರ್ಮಿಕರಿಗಿಂತ ತರುಣ ಕಾರ್ಮಿಕರಲ್ಲಿ ಅಧಿಕ. ಉದ್ಯೋಗದಾತರು ಸಾಮಾನ್ಯವಾಗಿ ತರುಣ ಕಾರ್ಮಿಕರ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಾರೆ. ವಯಸ್ಸಾದ ಕಾರ್ಮಿಕರು ತಾವು ಉದ್ಯೋಗ ಮಾಡುತ್ತಿರುವ ಕಾರ್ಖಾನೆಯಲ್ಲಿ ಸಾಕಷ್ಟು ಜ್ಯೇಷ್ಠತೆ (ಸೀನಿಯಾರಿಟಿ) ಪಡೆದಿರುವುದರಿಂದ ಅವರು ಕೆಲಸ ಬದಲಾಯಿಬೇಕಾದಾಗ ತಮ್ಮ ಜ್ಯೇಷ್ಠತೆಗೆ ಅನುಗುಣವಾಗಿ ಉದ್ಯೋಗ ಭದ್ರತೆ, ವಿಶ್ರಾಂತಿ ವೇತನ, ಮೊದಲಾದ ಅನುಕೂಲಗಳನ್ನು ಬಿಟ್ಟು ಹೋಗಬೇಕಾಗುವುದರಿಂದ ಅವರಲ್ಲಿ ಕೆಲಸ ಬದಲಾಯಿಸುವ ಪ್ರೇರಣೆ ಕಡಿಮೆ. ಅವಿದ್ಯಾವಂತರಿಗಿಂತ ವಿದ್ಯಾವಂತರಲ್ಲಿ ಗತಿಶೀಲತೆ ಹೆಚ್ಚಾಗಿ ಕಂಡುಬರುತ್ತದೆ. ವಿದ್ಯಾವಂತರಿಗೆ ವಿಶಾಲವಾದÀ ಶ್ರಮ ಮಾರುಕಟ್ಟೆಯುಂಟು. ಅವಿದ್ಯಾವಂತ ದುಡಿಮೆಗಾರರ ಮಾರುಕಟ್ಟೆ ಕಿರಿದು. ಕಾರ್ಮಿಕ ಮಾರುಕಟ್ಟೆಯಲ್ಲಿ ಗತಿಶೀಲತೆ ಕಡಿಮೆಯಿರಲು ಇನ್ನೊಂದು ಕಾರಣವೆಂದರೆ ಉದ್ಯೋಗದಾತರು ಅನುಸರಿಸುತ್ತಿರುವ ಅನೌಪಚಾರಿಕ (ಇನ್ಫಾರ್ಮಲ್) ನೇಮಕ ನೀತಿ ಮತ್ತು ಅಂತರಿಕ ಬಡ್ತಿ ನೀಡಿಕೆ ನೀತಿ. ನೇಮಕ ಮಾಡಿಕೊಳ್ಳಲು ಯಾವ ವಿಧ್ಯುಕ್ತನೀತಿಯನ್ನೂ ಪಾಲಿಸದಿದ್ದಾಗ. ಅಭ್ಯರ್ಥನ ಪತ್ರಗಳನ್ನು ಕರೆಯುವ ಪ್ರಕಟನೆಯೇ ಮುಂತಾದ ಕ್ರಮಗಳನ್ನು ಅನುಸರಿಸದಿದ್ದಾಗ, ಉದ್ಯೋಗಾವಕಾಶಗಳ ಬಗ್ಗೆ ಹೊರಗಿನ ಉದ್ಯೋಗಾರ್ಥಿಗಳಿಗೆ ತಿಳಿವಳಿಕೆ ಲಭ್ಯವಾಗದೆ ಗತಿಶೀಲತೆಗೆ ಅವಕಾಶ ಇಲ್ಲದಂತಾಗುತ್ತದೆ. ಕೆಳಗಿನ ಹುದ್ದೆಗಳಲ್ಲಿರುವವರಿಗೆ ಬಡ್ತಿ ನೀಡಿ ಅವರನ್ನು ಮೇಲಣ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದರಿಂದಲೂ ಹೊರಗಿನವರು ಈ ಹುದ್ದೆಗಳಿಗೆ ಚಲಿಸಲು ಅಡ್ಡಿಯಾಗುತ್ತದೆ. ಈ ನಾನಾ ಕಾರಣಗಳಿಂದಾಗಿ ಪರಿಪುರ್ಣ ಗತಿಶೀಲತೆ ಇಲ್ಲದಂತಾಗಿ, ಕಾರ್ಮಿಕ ಮಾರುಕಟ್ಟೆಯಲ್ಲಿ ಬೇಡಿಕೆ - ಸರಬರಾಯಿಗಳಲ್ಲಿ ಸಮತೋಲನೆ ಏರ್ಪಡದೆ, ಪರಿಪುರ್ಣ ಸ್ಪರ್ಧೆಗೆ ಕುಂದುಂಟಾಗುತ್ತದೆ; ಯಾವುದೇ ಹುದ್ದೆಗೆ ಏಕರೂಪದ ವೇತನವಿಲ್ಲದಂತಾಗುತ್ತದೆ; ಅದು ಕಾರ್ಖಾನೆಯಿಂದ ಕಾರ್ಖಾನೆಗೂ ಕೈಗಾರಿಕೆಯಿಂದ ಕೈಗಾರಿಕೆಗೂ ಪ್ರದೇಶದಿಂದ ಪ್ರದೇಶಕ್ಕೂ ಭಿನ್ನವಾಗಿರುತ್ತದೆ.