ಗತಿ ಅರ್ಥಶಾಸ್ತ್ರ : ಬದಲಾವಣೆಯೇ ಎಲ್ಲ ವಾಸ್ತವ ಪರಿಸ್ಥಿತಿಗಳ ಲಕ್ಷಣ-ಎಂಬ ಸಂಗತಿಯನ್ನಾಧರಿಸಿದ ಆರ್ಥಿಕ ಸಿದ್ಧಾಂತ (ಡೈನಾಮಿಕ್ ಎಕನಾಮಿಕ್್ಸ). ಅಸ್ತವ್ಯಸ್ತಗೊಳಿಸುವ ಬದಲಾವಣೆಗಳು ಯಾವುವೂ ಸಂಭವಿಸುವುದಿಲ್ಲವೆಂಬುದಾಗಿ ಸಿದ್ಧಾಂತದ ಸಲುವಾಗಿ ಊಹೆಯನ್ನಾಧರಿಸಿರುವ ಸ್ಥಿರ ಅರ್ಥಶಾಸ್ತ್ರದಿಂದ (ಸ್ಟ್ಯಾಟಿಕ್ ಎಕನಾಮಿಕ್್ಸ) ಇದು ಭಿನ್ನವಾದ್ದು. ಯಾವುದಾದೊಂದು ವಿದ್ಯಮಾನದ ಮೇಲೆ ಪ್ರಭಾವ ಬೀರಬಹುದಾದ ಕೆಲವು ಅಂಶಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಅವನ್ನು ಬದಲಾವಣೆಗೆ ಗುರಿಪಡಿಸಬಹುದಾದ ಇತರ ಅಂಶಗಳು. ಬಲಗಳು ಅಥವಾ ಪ್ರಾಚಲಗಳು ಸದ್ಯಕ್ಕೆ ತಟಸ್ಥವಾಗಿವೆಯೆಂದು, ಇದ್ದಂತೆಯೇ ಇರುತ್ತವೆಂದು, ಊಹಿಸಿ ಕೊಂಡು ಮುಂದುವರಿಯುವುದು ಸ್ಥಿರ ವಿಶ್ಲೇಷಣೆಯ ವಿಧಾನ. ಇದು ಸಮಸ್ಯೆಯನ್ನು ಸರಳೀಕರಿಸುವ ಒಂದು ಬಗೆ. ಉದಾಹರಣೆಗೆ, ಒಂದು ಪದಾರ್ಥದ ಬೇಡಿಕೆ-ಸರಬರಾಯಿಗಳಿಂದ ಅದರ ಬೆಲೆ ಹೇಗೆ ನಿಷ್ಕರ್ಷಿಸಲ್ಪಡುತ್ತದೆಯೆಂಬುದನ್ನು ಪರಿಶೀಲಿಸುವಾಗ ಜನಸಂಖ್ಯೆ, ಸಂಪನ್ಮೂಲಗಳು, ತಂತ್ರ ಮುಂತಾದ ಇತರ ಅಂಶಗಳಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲವೆಂದು ಭಾವಿಸಿಕೊಳ್ಳವುದುಂಟು. ಕಾಲದ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಯಾವುದೋ ದತ್ತ ಕ್ಷಣದಲ್ಲಿ ಬೇಡಿಕೆ-ಸರಬರಾಯಿ-ಬೆಲೆಗಳ ನಡುವಣ ಬಾಂಧವ್ಯ ಯಾವ ರೀತಿ ಇರುತ್ತದೆಯೆಂಬುದನ್ನು ಇಲ್ಲಿ ಪರಿಶೀಲಿಸಲಾಗುತ್ತದೆ. ಅಸ್ಥಿರತೆಗೆ ಕಾರಣವಾದ ಅನೇಕಾನೇಕ ಬಲಗಳ ಪೈಕಿ ಒಂದೊಂದನ್ನೇ ಎತ್ತಿಕೊಂಡು ಅವುಗಳ ವ್ಯತ್ಯಾಸದಿಂದ ಏನು ಪರಿಣಾಮ ಉಂಟಾಗುವುದೆಂಬುದು ಸ್ಥಿರ ಅರ್ಥಶಾಸ್ತ್ರದ ಅಧ್ಯಯನ ವಿಷಯ. ಹೀಗೆಂದ ಮಾತ್ರಕ್ಕೆ ಆರ್ಥಿಕತೆಯಲ್ಲಿ ಚಲನೆಯೇ ಇಲ್ಲವೆಂದು ಅದು ಹೇಳವುದಿಲ್ಲ. ಆರ್ಥಿಕತೆಯಲ್ಲಿ ಬದಲಾವಣೆಗಳಾಗುವುದನ್ನು ಕೂಡ ಅದು ಒಪ್ಪಿಕೊಂಡರೂ ಆ ಬದಲಾವಣೆ ಒಂದು ಸ್ಥಿರವಾದ ದರದಲ್ಲಿ ಆಗುತ್ತಿದೆಯೆಂಬುದು ಅದರ ಪರಿಭಾವನೆ. ಈ ಊಹೆಯ ಮೇಲೆಯೇ ಆ ಸಿದ್ಧಾಂತದ ರಚನೆಯಾಗಿದೆ.
ಚಲನಾತ್ಮಕವಾದ, ವ್ಯತ್ಯಾಸಕ್ಕೆ ಒಳಗಾಗಿರುವ ಆರ್ಥಿಕತೆಯ ಅಧ್ಯಯನವೇ ಗತಿ ಅರ್ಥಶಾಸ್ತ್ರದ ಗುರಿ. ಒಂದಾದ ಮೇಲೊಂದರಂತೆ ಸಂಭವಿಸುವ ಬದಲಾವಣೆಗಳ ಅನಂತರ ಸ್ಥಾಪಿತವಾದ ಸಮತೋಲಗಳನ್ನು ತೌಲನಿಕ ಸ್ಥಿತಿಶಾಸ್ತ್ರ ಪರಿಶೀಲಿಸುತ್ತದೆ. ಆದರೆ ಒಂದು ತೌಲನಿಕ ಸ್ಥಿತಿ ಮಟ್ಟದಿಂದ ಇನ್ನೊಂದು ತೌಲನಿಕ ಸ್ಥಿತಿ ಮಟ್ಟವನ್ನು ತಲಪುವಾಗ ಒಂದು ವ್ಯವಸ್ಥೆ ಅನುಸರಿಸುವ ಮಾರ್ಗವನ್ನು ಅಧ್ಯಯನ ಮಾಡುವುದು ಗತಿ ವಿಶ್ಲೇಷಣೆಯ ಉದ್ದೇಶ. ವ್ಯತ್ಯಾಸಕಾರಕವಾದ ಒಂದೊಂದೇ ಅಥವಾ ಕೆಲವೇ ಅಂಶಗಳನ್ನು ಪ್ರತ್ಯೇಕಿಸಿ, ಇತರ ಅಂಶಗಳು ಸಮನಾಗಿವೆಯೆಂದು ಭಾವಿಸಿ ಮುಂದುವರಿಯು ವುದು ಇದರ ವಿಧಾನವಲ್ಲ. ಎಲ್ಲ ಬದಲಾವಣೆಗಳನ್ನೂ ಗತಿವಿಲಂಬಗಳನ್ನೂ ಕ್ರಮಾನುಗತಿ ಗಳನ್ನೂ ಸಂಚಿತ ಪರಿಮಾಣಗಳನ್ನೂ ನಿರೀಕ್ಷೆಗಳನ್ನೂ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಹೆಚ್ಚು ವಾಸ್ತವವಾದ ವಿಧಾನ. ಇದು ಅತ್ಯಂತ ವ್ಯಾಪಕವಾದ ವಿಧಾನ. ಈ ವಿಶ್ಲೇಷಣೆಯಲ್ಲಿ ಯಾವ ಅಂಶವನ್ನೂ, ಅದು ಎಷ್ಟೇ ಸಣ್ಣದಾಗಿರಲಿ, ಪರಿಗಣನೆಗೆ ತೆಗೆದು ಕೊಳ್ಳದೆ ಇರುವುದಿಲ್ಲ. ಆದ್ದರಿಂದ ಇದು ಅತ್ಯಂತ ಸಂಕೀರ್ಣವಾದ ವಿಶ್ಲೇಷಣ ವಿಧಾನ.
ಕಾಲವನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳುವುದು ಅವಶ್ಯ. ಅದಿಲ್ಲದಿದ್ದರೆ ಚಿತ್ರ ಸಂಪುರ್ಣವಾಗದು. ಉದಾಹರಣೆಗೆ, ಒಂದು ಅವಧಿಯಲ್ಲಿ ಆಗುವ ಉತ್ಪತ್ತಿ ಅದಕ್ಕೆ ಹಿಂದಿನ ಅವಧಿಯಲ್ಲಿ ಕೈಗೊಳ್ಳಲಾದ ಅನೇಕ ತೀರ್ಮಾನಗಳ ಪರಿಣಾಮ. ಒಂದು ಪದಾರ್ಥದ ಸರಬರಾಯಿಯಾದರೂ ಆ ಸಮಯದಲ್ಲಿ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಮಾತ್ರವೇ ಅವಲಂಬಿಸಿರುವುದಿಲ್ಲ. ಭವಿಷ್ಯದಲ್ಲಿಯ ಬೆಲೆಗಳ ಬಗ್ಗೆ ಉತ್ಪಾದಕರ ನಿರೀಕ್ಷೆ ಏನೆಂಬುದನ್ನೂ ಅದು ಅವಲಂಬಿಸಿರುತ್ತದೆ.
ಆರ್ಥಿಕ ವಿಶ್ಲೇಷಣೆಯ ಇತಿಹಾಸದ ಆರಂಭದ ಕಾಲದಲ್ಲಿ ಸ್ಥಿತಿ ಮತ್ತು ಗತಿ ವಿಶ್ಲೇಷಣೆಗಳ ನಡುವೆ ಯಾವ ಖಚಿತ ವ್ಯತ್ಯಾಸವೂ ಇರಲಿಲ್ಲ. ಆಡಳಿತಗಾರರಿಗೆ ಉಪಯುಕ್ತವಾದ ಸಲಹೆ ನೀಡುವುದಷ್ಟೇ ಅರ್ಥಶಾಸ್ತ್ರಜ್ಞರ ಉದ್ದೇಶವಾಗಿತ್ತು. ವೈಜ್ಞಾನಿಕ ವಿಶ್ಲೇಷಣೆಯ ಆಧಾರದ ಮೇಲೆ ಕ್ರಮಬದ್ಧವಾದ ಅಧ್ಯಯನ ನಡೆಸುವುದು ಅವರ ಪದ್ಧತಿಯಾಗಿರಲಿಲ್ಲ. ಆದ್ಯ ಅಭಿಜಾತ ಅರ್ಥಶಾಸ್ತ್ರಜ್ಞರು ಇವೆರಡೂ ವಿಶ್ಲೇಷಣ ವಿಧಾನಗಳ ನಡುವೆ ಸಂಲಗ್ನವನ್ನು ಸಾಧಿಸಿದ್ದರು. ಮಾಲ್ಥಸ್, ರಿಕಾರ್ಡೊ, ಜೆ. ಎಸ್. ಮಿಲ್ ಈ ವಿಧಾನ ಅನುಸರಿಸಿದ್ದರು. ಕೂಲಿ, ಲಾಭ, ಗೇಣಿ ಇವನ್ನು ಕುರಿತ ಶುದ್ಧ ಸ್ಥಿರ ಸಿದ್ಧಾಂತವನ್ನು ಬಂಡವಾಳ ಮತ್ತು ಜನಸಂಖ್ಯೆ ಬೆಳೆವಣಿಗೆಯ ದರಗಳಿಗೆ ಕಾರಣವಾದ ಕ್ರಿಯಾವಿನ್ಯಾಸಕ್ಕೆ ಹೊಂದಿಸಲಾಗಿತ್ತು. ಆ ಮಾದರಿಯನ್ನು ಹೀಗೆ ವಿವರಿಸಬಹುದು: ಅಲ್ಪಾವಧಿಯಲ್ಲಿ ಕಾರ್ಮಿಕರಿಗಾಗಿ ಇರುವ ಬೇಡಿಕೆಯೇ ಕೂಲಿಯನ್ನು ನಿರ್ಣಯಿಸುತ್ತದೆ. ಬಂಡವಾಳದ ಸರಬರಾಯಿ ಅಧಿಕವಾದಂತೆ ಈ ಬೇಡಿಕೆಯೂ ಅಧಿಕವಾಗುತ್ತದೆ. ಕಾರ್ಮಿಕರಿಗಾಗಿ ಬೇಡಿಕೆ ಅಧಿಕವಾದಾಗ ಕೂಲಿಯೂ ಅಧಿಕವಾಗುತ್ತದೆ; ಇದರಿಂದ ಜನಸಂಖ್ಯೆಯ ಬೆಳೆವಣಿಗೆಗೆ ಪ್ರೋತ್ಸಾಹ ದೊರಕುತ್ತದೆ. ಇದರಿಂದ ಕಾರ್ಮಿಕರ ಸರಬರಾಯಿ ಹೆಚ್ಚುತ್ತದೆ. ಇದು ಕೂಲಿಯ ಇಳಿತಾಯಕ್ಕೆ ಕಾರಣ. ಆಗ ಲಾಭ ಅಧಿಕವಾಗಬೇಕು. ಅದರ ಫಲ ಬಂಡವಾಳದ ಸರಬರಾಯಿ ಹೆಚ್ಚಳ. ಹೀಗೆ ಕಾಲಾನುಕ್ರಮದಲ್ಲಿ ಬಂಡವಾಳದ ಸರಬರಾಜು, ಜನಸಂಖ್ಯೆ ಮತ್ತು ಕಾರ್ಮಿಕರ ಸರಬರಾಯಿ ಈ ಮೂರೂ ಅಧಿಕವಾಗುತ್ತವೆ. ತತ್ಪರಿಣಾಮವಾಗಿ ಕೂಲಿಯೂ ಅಧಿಕವಾಗಬೇಕು. ಆದರೆ ಈ ಪ್ರವೃತ್ತಿ ಅನಿರ್ದಿಷ್ಟಕಾಲ ಮುಂದುವರಿಯಲಾರದು. ಏಕೆಂದರೆ ನೆಲ ಮತ್ತು ಇತರ ನಿಸರ್ಗ ಸಾಧನಗಳು ಅಮಿತವಾಗಿಲ್ಲ. ಜನಸಂಖ್ಯೆ ಅಧಿಕವಾದಾಗ ನಿಸರ್ಗ ಸಾಧನಗಳು ಅಮಿತವಾಗಿಲ್ಲ. ಜನಸಂಖ್ಯೆ ಅಧಿಕವಾದಾಗ ನಿಸರ್ಗ ಸಾಧನಗಳ ದೃಷ್ಟಿಯಲ್ಲಿ ಕಾರ್ಮಿಕ ಸರಬರಾಜಿನ ಪ್ರಮಾಣ ಅಧಿಕವಾಗುತ್ತದೆ. ನಿಸರ್ಗ ಸಾಧನಗಳು ಅಚಲವಾಗಿದ್ದು ಕಾರ್ಮಿಕ ಸರಬರಾಜು ಅಧಿಕವಾದರೆ ತತ್ಕ್ಷಣವೋ ಸ್ವಲ್ಪ ಕಾಲಾ ನಂತರವೋ ಅಂಚಿನ ಪ್ರತಿಫಲ ಇಳಿಮುಖವಾಗುವುದೆಂಬ ನಿಯಮ-ಇಳಿಮುಖ ಪ್ರತಿಫಲ ನಿಯಮ-ಪ್ರವೇಶಿಸುತ್ತದೆ. ಆದ್ದರಿಂದ ಜನಸಂಖ್ಯೆ ಬೆಳೆವಣಿಗೆಯ ಪ್ರಕ್ರಿಯೆಯಿಂದಾಗಿ ಉತ್ಪತ್ತಿ ಕಡಿಮೆಯಾಗಿ, ಲಾಭ ಇಳಿದು, ಬಂಡವಾಳ ಶೇಖರಣೆ ತಗ್ಗಿ, ಕಾರ್ಮಿಕರಿಗೆ ಬೇಡಿಕೆಯೂ ಇಳಿಯುತ್ತದೆ, ಕೂಲಿ ತಗ್ಗುತ್ತದೆ. ಆಗ ಜನಸಂಖ್ಯೆಯ ಬೆಳೆವಣಿಗೆಗೆ ತಡೆ ಉಂಟಾಗುತ್ತದೆ. ಹೀಗೆ ಇಳಿಮುಖ ಪ್ರತಿಫಲ ನಿಯಮದಿಂದಾಗಿ ಆರ್ಥಿಕತೆ ಸ್ಥಿತವಾಗಿರುತ್ತದೆ, ಕೂಲಿ ಲಾಭಗಳು ತಗ್ಗಿನಲ್ಲಿರುತ್ತವೆ; ಒಟ್ಟು ಜನರ ಕಲ್ಯಾಣ ಸಾಧಿಸದು.
ಈ ಬಗೆಯ ಚಿಂತನದಿಂದಾಗಿ ಆಗ ಅನೇಕ ನೀತಿಗಳು ರೂಪಿತವಾದುವು. ಎಲ್ಲೆಲ್ಲೂ ನಿರಾಶೆ ಹಬ್ಬಲು ಇದು ಕಾರಣವಾಯಿತು. ಸ್ಥಿರ-ಗತಿ ದೃಷ್ಟಿಗಳ ಅವೈಜ್ಞಾನಿಕ ಬೆರಕೆಯೇ ಇಂಥ ತೀರ್ಮಾನಗಳಿಗೆ ಕಾರಣ. ಆದರೆ 19ನೆಯ ಶತಮಾನದ ಅಂತ್ಯದ ವೇಳೆಗೆ ಆರ್ಥಿಕ ವಿಶ್ಲೇಷಣೆಯಲ್ಲಿ ವೈಜ್ಞಾನಿಕ ವಿಧಾನವನ್ನನುಸರಿಸಲು ಆರಂಭವಾಯಿತು. ಸ್ಥಿರ ಮತ್ತು ಗತಿ ವಿಧಾನಗಳನ್ನು ಖಚಿತಗೊಳಿಸಿ ಪ್ರತ್ಯೇಕಿಸಲಾಯಿತು. ಮೊದಮೊದಲು ಕ್ರಮಬದ್ಧವಾದ ಗತಿ ವಿಶ್ಲೇಷಣೆಯನ್ನು ಬಹುತೇಕ ತ್ಯಜಿಸಲಾಯಿತು. ಗಮನ ಹೆಚ್ಚಾಗಿ ಸಂದದ್ದು ಸ್ಥಿರ ವಿಶ್ಲೇಷಣೆಗೆ. ಆದರೆ ಈಚಿನ ಕೆಲವು ದಶಕಗಳಲ್ಲಿ ಗತಿ ವಿಶ್ಲೇಷಣೆಯನ್ನು ಸ್ವತಂತ್ರವಾಗಿ ಬೆಳೆಸಲಾಗಿದೆ. ಇದು ಸಂಕೀರ್ಣವಾಗಿ ಪರಿಣಮಿಸಿದೆ. ಗತಿ ವಿಶ್ಲೇಷಣೆಯ ಬೆಳೆವಣಿಗೆಗೆ ಮೊದಲು ಬಳಕೆಗೆ ಬಂದ ವಿಧಾನವೇ ತೌಲನಿಕ ಸ್ಥಿತಿಶಾಸ್ತ್ರ. ಇಂದು ಗತಿ ವಿಶ್ಲೇಷಣ ವಿಧಾನ ಬಹಳಮಟ್ಟಿಗೆ ಗಣಿತವನ್ನವಲಂಬಿಸಿದೆ. ಬದಲಾಗುವ ಹಲವಾರು ಪ್ರಾಚಲಗಳನ್ನೆಲ್ಲ ಒಳಗೊಂಡ ವಿಶ್ಲೇಷಣೆಗೆ ಇದು ಅತ್ಯಂತ ಅವಶ್ಯಕ. ವ್ಯಾಪಾರ ಆವರ್ತ, ಜನಸಂಖ್ಯೆ, ದೀರ್ಘಾವಧಿಯ ಆರ್ಥಿಕ ಬೆಳೆವಣಿಗೆ ಮುಂತಾದವುಗಳ ವಿಶ್ಲೇಷಣೆಗೆ ಈ ವಿಧಾನವನ್ನು ಅನ್ವಯಿಸಲಾಗಿದೆ. ಇವಕ್ಕಾಗಿ ಆಧುನಿಕ ಅರ್ಥಶಾಸ್ತ್ರಜ್ಞರು ತಂತಮ್ಮವೇ ಆದ ಅನೇಕ ಮಾದರಿಗಳನ್ನು ರಚಿಸಿದ್ದಾರೆ. ಜೆ.ಎಂ. ಕ್ಲಾರ್ಕ್, ರ್ಯಾಗ್ನಾರ್ ಫ್ರಿಶ್, ಸಿ.ಎಫ್. ಹೂಸ್, ಟಿನ್ ಬರ್ಜನ್, ಕಾಲೆಕಿ, ರಾಬರ್ಟ್ ಸನ್, ಕೇನ್್ಸ, ಹೆಬರ್ಲರ್, ಗುನ್ನಾರ್ ಮಿರ್ಡಾಲ್, ಬರ್ಟಿಲ್ ಓಡ್ಲಿನ್, ಲಿಂಡ್ಹಾಲ್, ಲುನ್ಬರ್ಗ್, ಸಾಮ್ಯುಯೆಲ್ ಸನ್, ಗುಡ್ವಿನ್, ಸ್ಮಿಥೀಸ್, ಡೋಮರ್, ಮೆಟ್ಜಲರ್, ಬಾವೆಲ್ಮೋ, ರಾಬರ್ಟ್ ಕೈನ್, ಜೆ. ಆರ್. ಹಿಕ್್ಸ, ಆಸ್ಕರ್ ಲಾಂಜ್, ಕೂಪ್ಮನ್್ಸ ಮತ್ತು ಟಿಂಟರ್ ಗತಿ ಅರ್ಥಶಾಸ್ತ್ರದ ಅಭಿವೃದ್ಧಿಗೆ ಮಹತ್ವಪುರ್ಣ ಕಾಣಿಕೆ ನೀಡಿದ್ದಾರೆ.