ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಪ್ಪಿ ಮೀನು

ಸಿಪ್ರಿನಿಡಾಂಟಿಫಾರ್ಮೀಸ್ ಗಣದ ಪೋಯಿಸಿಲಿಡೀ ಕುಟುಂಬಕ್ಕೆ ಸೇರಿದ ಲೆಬಿಸ್ಟೀಸ್ ರೆಟಿಕ್ಯುಲೇಟಸ್ ಎಂಬ ವೈಜ್ಞಾನಿಕ ಹೆಸರುಳ್ಳ ಮೀನಿನ ಜನಪ್ರಿಯ ಹೆಸರು. ಟ್ರಿನಿಡಾಡ್ನಲ್ಲಿದ್ದ ರಾಬರ್ಟ್ ಎಲ್. ಗಪ್ಪಿ ಎಂಬಾತ 1866ರಲ್ಲಿ ಮೊದಲ ಬಾರಿಗೆ ಇದನ್ನು ನೋಡಿ ಇದರ ಬಗ್ಗೆ ವಿಷಯ ಸಂಗ್ರಹಿಸಿ ವರದಿ ಮಾಡಿದ. ಆದ್ದರಿಂದ ಅವನ ಗೌರವಾರ್ಥವಾಗಿ ಇದಕ್ಕೆ ಗಪ್ಪಿ ಎಂದು ಹೆಸರು ಬಂದಿತು. ವೆನಜುವೇಲ, ಲೆಸ್ಸರ್ ಆಂಟೆಲ್ಲಿಸ್ ಮತ್ತು ದಕ್ಷಿಣ ಅಮೆರಿಕದ ಉತ್ತರ ಭಾಗದ ಸಿಹಿನೀರಿನ ಕೊಳ, ಕೆರೆ, ನದಿಗಳಲ್ಲಿ ಇದು ವಾಸಿಸುತ್ತದೆ. ಜಲೋದ್ಯಾನದ ಕೃತಕ ಪರಿಸರಕ್ಕೂ ಹೊಂದಿಕೊಂಡು ಜೀವಿಸುವುದರಿಂದ ಇದನ್ನು ಜಲೋದ್ಯಾನಗಳಲ್ಲಿ (ಅಕ್ವೇರಿಯಂ) ಸಾಕುವುದುಂಟು.

ವಿವಿಧ ಗಪ್ಪಿ ಮೀನುಗಳು


ಗಾತ್ರದಲ್ಲಿ ಬಲು ಪುಟ್ಟ ಮೀನಿದು. ಗಂಡು ಸುಮಾರು 7.5-10 ಸೆಂ.ಮೀ ಉದ್ದವೂ, ಹೆಣ್ಣು ಮೀನು 2.5-3.25 ಸೆಂ.ಮೀ ಉದ್ದವೂ ಇರುತ್ತದೆ. ಗಂಡು ಮೀನುಗಳು ಅತ್ಯಾಕರ್ಷಕ ಬಣ್ಣಗಳಿಂದ ಕೂಡಿರುತ್ತದೆ. ಅತ್ಯಂತ ವರ್ಣರಂಜಿತ, ಕೆಂಪು, ಕಿತ್ತಳೆ, ಹಳದಿ, ಹಸಿರು, ಊದಾ ಬಣ್ಣಗಳ ಹಿನ್ನೆಲೆಯಲ್ಲಿ ಕಪ್ಪು ಚುಕ್ಕೆಗಳಿಂದ ಕೂಡಿರುತ್ತದೆ. ಗಂಡಿನ ದೇಹದ ಬಣ್ಣ ಅನುವಂಶಿ ಮಾತ್ರವಲ್ಲ ಹಾರ್ಮೋನುಗಳ ನಿಯಂತ್ರಣಕ್ಕೂ ಒಳಪಟ್ಟಿದೆ ಎನ್ನಲಾಗಿದೆ. ಹೀಗಾಗಿ ಈ ಮೀನುಗಳನ್ನು ಅನುವಂಶಿಕ ಅಧ್ಯಯನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಈ ಮೀನುಗಳ ಈಜು ರೆಕ್ಕೆಗಳು ಬಹಳ ಆಕರ್ಷಕವಾಗಿದ್ದು ವಿವಿಧ ಆಕಾರದಲ್ಲಿ ಇರುತ್ತವೆ. ಇದರಿಂದಾಗಿ ಈ ಮೀನು ಹೆಚ್ಚು ಜನಪ್ರಿಯವಾಗಿವೆ. ಈ ಮೀನು ಜರಾಯುಜ. ಹೆಣ್ಣು ಮೀನು 3 ತಿಂಗಳು ವಯಸ್ಸಾದ ಅನಂತರ ಫ್ರೌಢಾವಸ್ಥೆ ತಲುಪುತ್ತವೆ. ಗಂಡು ಮೀನು ತನ್ನ ಗುದದ ಈಜುರೆಕ್ಕೆಯ ಮಧ್ಯ ಇರುವ ಗೋನೋಪೋಡಿಯಂನ ಸಹಾಯದಿಂದ ನಿಷೇಚನ ಕ್ರಿಯೆ ನಡೆಸುತ್ತದೆ. ಭ್ರೂಣದ ಬೆಳೆವಣಿಗೆ ಹೆಣ್ಣಿನ ಅಂಡಾಶಯದ ಫಾಲಿಕಲ್ನಲ್ಲಿ ನಡೆಯತ್ತದೆ. ಗರ್ಭಾವಸ್ಥೆಯ ಕಾಲ ಸುಮಾರು 28 ದಿನಗಳು. ಒಂದು ಬಾರಿಗೆ 25-50 ಮರಿಗಳಿಗೆ ಜನ್ಮ ನೀಡುತ್ತವೆ. ಮರಿ ಹಾಕಲು ವರ್ಷದಲ್ಲಿ ನಿರ್ದಿಷ್ಟ ಸಮಯವೇನೂ ಇಲ್ಲ.


ಗಪ್ಪಿ ಮೀನು ಮುಖ್ಯವಾಗಿ ಕೀಟಾಹಾರಿ. ಇತರ ಬಗೆಯ ಆಹಾರವನ್ನು ತಿನ್ನುವು ದುಂಟು. ಕೆಲವು ವೇಳೆ ಇದು ಸ್ವಜಾತಿ ಭಕ್ಷಕವೂ ಹೌದು. ಎಷ್ಟೋ ವೇಳೆ ತನ್ನಮರಿಗಳನ್ನೇ ತಿಂದುಬಿಡುತ್ತದೆ. ಸೊಳ್ಳೆ ಮತ್ತು ಸೊಳ್ಳೆ ಮರಿಗಳನ್ನು ತಿನ್ನುವುದರಿಂದ ಸೊಳ್ಳೆ ನಿಯಂತ್ರಣಕ್ಕೆ ಇವುಗಳನ್ನು ಬಳಸುವುದುಂಟು.