ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಬೆಲ್ಸ್, ಜೋಸೆಫ್

1897-1945. ಜರ್ಮನಿಯ ಒಬ್ಬ ರಾಜಕಾರಣಿ. ಜರ್ಮನ್ ರಾಷ್ಟ್ರೀಯ ಸಮಾಜವಾದಿ (ನಾಜಿ಼) ಪಕ್ಷದ ಪ್ರಮುಖ ಪ್ರಚಾರಕ. ಇವನ ಪುರ್ಣ ಹೆಸರು ಪಾಲ್ ಜೋಸೆಫ್ ಗಬೆಲ್ಸ್. ಇವನು 1897ರ ಅಕ್ಟೋಬರ್ 29 ರಂದು, ರೈನ್ಲ್ಯಾಂಡಿನ ರೈನ್ ಲ್ಯಾಂಡ್ ನಲ್ಲಿ ಜನಿಸಿದ. ತಂದೆ ಒಬ್ಬ ಶ್ರಮಜೀವಿ. ಪೋಲಿಯೋ ವ್ಯಾಧಿಯಿಂದಾಗಿ ಗಬೆಲ್ಸ್ ಕುಂಟನಾಗಿದ್ದುದರಿಂದ ಅವನು ಸೈನ್ಯ ಸೇರಲಾಗಲಿಲ್ಲ. ಬಾನ್ ಮತ್ತು ಹೈಡೆಲ್ ಬರ್ಗ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ ಡಾಕ್ಟೊರಲ್ ಪದವಿ ಪಡೆದು ಪ್ರತಿಕೋದ್ಯಮಿಯಾದ (1921). ನಾಜಿ಼ ಮುಖಂಡ ಗ್ರೆಗೊರ್ ಸ್ಟ್ರಾಸರನ ಕಾರ್ಯದರ್ಶಿಯಾಗಿ ಕೆಲಸಮಾಡಿದ (1925). ಹಿಟ್ಲರನಿಗೂ ಸ್ಟ್ರಾಸರನಿಗೂ ವಿರಸ ಬೆಳೆದಾಗ ಗಬೆಲ್ಸ್ ಹಿಟ್ಲರನ ಕಡೆ ಸೇರಿದ (1926). ಇದಕ್ಕಾಗಿ ಅವನಿಗೆ ಬಹುಮಾನ ಕಾದಿತ್ತು. ಬರ್ಲಿನ್ ಜಿಲ್ಲಾ ಪಕ್ಷನಾಯಕನಾಗಿ ಅವನನ್ನು ಹಿಟ್ಲರ್ ನೇಮಿಸಿದ. ಗಬೆಲ್ಸ್ ನ ಪ್ರಚಾರಶಕ್ತಿ, ಚಳುವಳಿಯ ಸಾಮರ್ಥ್ಯ ಆಗ ಬೆಳಕಿಗೆ ಬಂದುವು. 1928ರಲ್ಲಿ ಗಬೆಲ್ಸ್ ರೀಕ್ ಸ್ಟ್ಯಾಗ್ ಸಭೆಗೆ ಆಯ್ಕೆ ಹೊಂದಿದ. ಪಕ್ಷ ಪ್ರಚಾರಕಾರ್ಯದ ಹೊಣೆ 1929ರಲ್ಲಿ ಅವನದಾಯಿತು. ನಾಜಿ಼ ಪಕ್ಷ ಪ್ರಬಲವಾಗಲು ಗಬೆಲ್ಸ್ ಎಲ್ಲ ತಂತ್ರಗಳನ್ನೂ ಬಳಸಿದ. ಹೊಡೆ ದಾಟವೊಂದರಲ್ಲಿ ಮೃತನಾದ ನೀತಿಹೀನನೊಬ್ಬ ಗೀಚಿದ್ದ ಪದ್ಯವನ್ನು ಪಕ್ಷದ ಗೀತೆಯಾಗಿ ಗಬೆಲ್ಸ್ ಆರಿಸಿಕೊಂಡ. ಗಬೆಲ್ಸ್ ನ ಪ್ರಚಾರದಿಂದಾಗಿ ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಿತು. ಅದು ಅತ್ಯಂತ ಪ್ರಬಲವಾಯಿತು. ಹಿಟ್ಲರ್ ಅಧಿಕಾರರೂಢನಾಗಲು ಗಬೆಲ್ಸ್ ಬಹುಮಟ್ಟಿಗೆ ಕಾರಣ. ಅಲ್ಲಿಂದ ಮುಂದೆ ಗಬೆಲ್ಸನ ಪ್ರಭಾವ ಬಹಳ ಹೆಚ್ಚಿತು. ಪ್ರಚಾರ ಕಾರ್ಯಕ್ಕೆ ರಾಷ್ಟ್ರದ ಎಲ್ಲ ಸಾಧನಗಳೂ ಅವನಿಗೆ ಒದಗಿಬಂದವು. ಅವನಿಗೆ ಯಾವ ನೀತಿ ನಿಯಮಗಳೂ ಇರಲಿಲ್ಲ. ಅವನೊಬ್ಬ ಶೂನ್ಯವಾದಿ. ರೇಡಿಯೋ, ಚಲನಚಿತ್ರ ಮುಂತಾದ ಸಾಧನಗಳನ್ನು ಎಷ್ಟರಮಟ್ಟಿಗೆ ಪಕ್ಷದ ಉದ್ದೇಶ ಸಾಧನೆಗೆ ಬಳಸಿಕೊಳ್ಳಬಹುದೆಂಬುದನ್ನು ಅರಿತುಕೊಂಡ ಗಬೆಲ್ಸ್ ಈ ವಿದ್ಯೆಯಲ್ಲಿ ಎಲ್ಲರನ್ನೂ ಮೀರಿಸಿದ. ಯೆಹೂದ್ಯರ ವಿರುದ್ಧವಾಗಿ ವಿಷಪ್ರಚಾರದ ಹೊಳೆಯೇ ಹರಿಯಿತು.

ಗಬೆಲ್ಸ್, ಜೋಸೆಫ್


ಗಬೆಲ್ಸ್ 1931ರಲ್ಲಿ ಮ್ಯಾಗ್ಡ ಕ್ವಾಂಟಳೊಂದಿಗೆ ವಿವಾಹವಾದ. ಅವಳಲ್ಲಿ ಅವನಿಗೆ ಆರು ಮಕ್ಕಳಾದವು. ಆದರೆ ಅನೇಕ ಹೆಂಗಸರೊಂದಿಗೆ ಅವನು ಅಕ್ರಮ ಸಂಬಂಧ ಹೊಂದಿದ್ದನೆಂದೂ ಒಮ್ಮೆ ಪರಿಸ್ಥಿತಿ ತುಂಬ ಕೆಟ್ಟು, ಅವನ ಹೆಂಡತಿ ವಿವಾಹವಿಚ್ಛೇದನ ಮಾಡಿಕೊಳ್ಳಬೇಕೆಂದು ತೀರ್ಮಾನಿ ಸುವ ಘಟ್ಟ ಮುಟ್ಟಿದಾಗ ಹಿಟ್ಲರ್ ನಡುವೆ ಪ್ರವೇಶಿಸಿ ಅದನ್ನು ತಪ್ಪಿಸಿ ಗಬೆಲ್ಸನಿಗೆ ಬುದ್ಧಿ ಹೇಳಿದನೆಂದೂ ತಿಳಿದುಬರುತ್ತದೆ.


ಎರಡನೆಯ ಮಹಾಯುದ್ಧ ಕಾಲದಲ್ಲಿ ಜರ್ಮನಿಯ ಸಾಧನೆ ಗಳನ್ನು ಕ್ರೋಡೀಕರಿಸಲು ತೀವ್ರಕ್ರಮ ಗಳನ್ನು ಕೈಗೊಳ್ಳಬೇಕೆಂದು ಇವನು ಭಾವಿಸಿದ್ದ. ರಷ್ಯದ ವಿರುದ್ಧ ಅತೃಪ್ತಿ ಬೆಳೆಸುವ ಪ್ರಚಾರ ಕೈಗೊಂಡ ಗಬೆಲ್ಸ್ ಕೊನೆಕೊನೆಗೆ ಜರ್ಮನಿಯ ಸ್ಥಿತಿ ಕೆಟ್ಟಾಗ ರಷ್ಯದೊಡನೆ ಒಪ್ಪಂದ ಮಾಡಿಕೊಳ್ಳಲು ಯತ್ನಿಸಿದ. ಅದು ಫಲಿಸದಿದ್ದಾಗ ಅವನು ಇನ್ನೂ ಕಟುವಾದ. ಬರ್ಲಿನ್ ನಗರ ಧಾಳಿಗೆ ಒಳಗಾದಾಗ ಗಬೆಲ್ಸ್ ಅಲ್ಲೇ ಇದ್ದು ನಗರಾಡಳಿತ ಕಾರ್ಯ ಮುಂದುವರಿಸಿದ. ಶರಣಾದರೆ ನಿಮ್ಮ ಗತಿ ತೀರಿತು-ಎಂದು ಜನರನ್ನು ಹೆದರಿಸಿ ಯುದ್ಧಕ್ಕೆ ಪುಸಲಾಯಿಸಿದ. ಜಿನೀವ ಒಡಂಬಡಿಕೆಯನ್ನು ತಿರಸ್ಕರಿಸಿ, ಸೆರೆ ಸಿಕ್ಕ ವೈಮಾನಿಕರನ್ನು ಗುಂಡಿಟ್ಟು ಕೊಲ್ಲಬೇಕೆಂಬುದು ಅವನ ಬೋಧನೆಯಾಗಿತ್ತು. ಹಿಟ್ಲರನ ಪ್ರಾಣ ತೆಗೆಯುವ ಸಂಚು ವಿಫಲವಾದ ಮೇಲೆ (1944 ಜುಲೈ 20) ಹಿಟ್ಲರ್ ಗಬೆಲ್ಸನಿಗೆ ಯುದ್ಧಕಾರ್ಯಕ್ಕಾಗಿ ಜನಧನಬಲವನ್ನೆಲ್ಲ ಸಜ್ಜುಗೊಳಿಸುವ ಪೂರ್ಣ ಅಧಿಕಾರ ನೀಡಿದ. 1945ರ ಏಪ್ರಿಲ್ ಬಂತು. ಹಿಟ್ಲರ್ ಬರ್ಲಿನಿನ ತನ್ನ ಕಚೇರಿ ಬಿಟ್ಟು ಹೊರಬರಬಾರದೆಂದು ಗಬೆಲ್ಸ್ ಕೇಳಿಕೊಂಡ. ಏನಾದರೂ ಪವಾಡ ಸಂಭವಿಸಿ ಹಿಟ್ಲರ್ ಅಂತಿಮ ವಿಜಯ ಸಾಧಿಸುವನೆಂಬುದು ಗಬೆಲ್ಸ್ ನ ಭ್ರಮೆಯಾಗಿತ್ತು. ಆದರೆ ಅಂಥದೇನೂ ಆಗಲಿಲ್ಲ. ತನ್ನ ಅನಂತರ ಗಬೆಲ್ಸ್ ಚಾನ್ಸಲರ್ ಆಗತಕ್ಕದ್ದೆಂದು ಹಿಟ್ಲರ್ ತನ್ನ ಉಯಿಲಿನಲ್ಲಿ ಸೂಚಿಸಿದ್ದನಾದರೂ ಹಿಟ್ಲರ್ ಸತ್ತ ಮರುದಿನ ಗಬೆಲ್ಸ್ ಮತ್ತು ಅವನ ಪತ್ನಿ ಮ್ಯಾಗ್ಡ ತಮ್ಮ ಮಕ್ಕಳಿಗೂ ವಿಷಹಾಕಿ ಕೊಂದರು. ನಂತರ ಗಬೆಲ್ಸ್ ನ ಸೇವಕ ಇವರಿಬ್ಬರ ಕೋರಿಕೆಯಂತೆ ಇವರಿಗೆ ಗುಂಡು ಹೊಡೆದು ಸಾಯಿಸಿದ (1945ರ ಮೇ 1). ಗಬೆಲ್ಸ್ ನ ದಿನಚರಿ 1948ರಲ್ಲಿ ಪ್ರಕಟವಾಯಿತು.