ದಕ್ಷಿಣ ಅಮೆರಿಕದ ಒಂದು ಗಣರಾಜ್ಯ. ಉತ್ತರದಲ್ಲಿ ಅಟ್ಲಾಂಟಿಕ್ ಸಾಗರ, ಪೂರ್ವದಲ್ಲಿ ಸುರಿನಾಂ, ದಕ್ಷಿಣ ನೈರುತ್ಯಗಳಲ್ಲಿ ಬ್ರೆಜಿಲ್, ಪಶ್ಚಿಮದಲ್ಲಿ ವೆನಿಜು಼ವೇಲ - ಇವು ಇದರ ಮೇರೆಗಳು. ವಿಸ್ತೀರ್ಣ 214, 969 ಚ.ಕಿಮೀ. ಜನಸಂಖ್ಯೆ 7,62,000 (20 ಸು.). ರಾಜಧಾನಿ ಜಾರ್ಜ್ಟೌನ್.

ಗಯಾನ


ಭೌತಲಕ್ಷಣ, ವಾಯುಗುಣ, ಜನಜೀವನ

ಸಂಪಾದಿಸಿ

432 ಕಿಮೀ. ಉದ್ದದ ಕಡಲ ಕರೆ ಇರುವ ಈ ದೇಶದ ಕರಾವಳಿ ತಗ್ಗಿನ ಮೈದಾನ. ದಕ್ಷಿಣ ಭಾಗ ಪ್ರಸ್ಥಭೂಮಿ ಪರ್ವತಗಳಿಂದ ಕೂಡಿದೆ. ಕರಾವಳಿಯ ಮೈದಾನದ ವಿಸ್ತೀರ್ಣ 6,250 ಚಮೈ. ಇದರಲ್ಲಿ ಸು. 700ಕಿಮೀ ಪ್ರದೇಶ ಸಾಗುವಳಿಗೆ ಒಳಪಟ್ಟಿದೆ. ಜನಸಂಖ್ಯೆಯ ಬಹುಭಾಗ ವಾಸಿಸುವುದು ಕರಾವಳಿಯ ಮೈದಾನದಲ್ಲಿ. ದೇಶದ ಶೇ. 85 ಭಾಗ ಕಾಡಿನಿಂದ ಆವೃತವಾಗಿದೆ. ಪೂರ್ವ ಆಗ್ನೇಯಗಳ ಕಾಡು ಈಗಲೂ ಬಹಳ ಮಟ್ಟಿಗೆ ನಿರ್ಜನವಾಗಿದೆ, ಜನಕ್ಕೆ ಅಪರಿಚಿತವಾಗಿದೆ. ಕರಾವಳಿಯ ಪ್ರದೇಶದ ವಾಯುಗುಣ ಉಳಿದ ಭಾಗದ್ದಕ್ಕಿಂತ ಹಿತಕರ. ಏಪ್ರಿಲ್ನಿಂದ ಆಗಸ್ಟ್‌ವರೆಗೆ ಹೆಚ್ಚು ಮಳೆ. ಸೆಪ್ಟೆಂಬರ್-ನವೆಂಬರ್ಗಳಲ್ಲಿ ಒಣ ಹವೆ. ಒಳನಾಡಿನಲ್ಲಿ ಫೆಬ್ರುವರಿಯ ವರೆಗೂ ಒಣಹವೆ ಇರುತ್ತದೆ. ಸರಾಸರಿ ಉಷ್ಣತೆ 80° ಫ್ಯಾ.


ಗಯಾನದ ಆರ್ಥಿಕತೆ ಕೃಷಿಪ್ರಧಾನವಾದ್ದು, ಕಬ್ಬು, ಬತ್ತ ಮುಖ್ಯ ಬೆಳೆಗಳು. ಬಾಳೆ ಮುಖ್ಯ ನಿರ್ಯಾತ ಬೆಳೆ. ತೆಂಗೂ ಬೆಳೆಯುತ್ತದೆ. ಕಿತ್ತಳೆ ಜಾತಿಯ ಗಿಡಗಳ ವ್ಯವಸಾಯ ಅಧಿಕವಾಗುತ್ತಿದೆ. ಅರಣ್ಯೋತ್ಪನ್ನ ಮುಖ್ಯ ವರಮಾನ ಮೂಲವಾದರೂ ಸಾರಿಗೆ ಸೌಲಭ್ಯಕ್ಕೆ ಪರಿಮಿತವಾಗಿದೆ. ಬಾಕ್ಸೈಟ್, ಚಿನ್ನ, ವಜ್ರ, ತಾಮ್ರ, ಮಾಲಿಬ್ಡೆನಂ-ಇವು ಮುಖ್ಯ ಖನಿಜ ನಿಕ್ಷೇಪಗಳು. 1966ರಲ್ಲಿ ಏಳು ವರ್ಷಗಳ ಅಭಿವೃದ್ಧಿ ಯೋಜನೆಯೊಂದು ಜಾರಿಗೆ ಬಂತು. ಇದರ ವೆಚ್ಚ 30 ಕೋಟಿ ಡಾಲರ್. ಶೇ. 5-6 ವಾರ್ಷಿಕದರದಲ್ಲಿ ಆರ್ಥಿಕ ಬೆಳೆವಣಿಗೆ ಸಾಧಿಸಬೇಕೆಂಬುದು ಈ ಯೋಜನೆಯ ಉದ್ದೇಶ. ಜಲವಿದ್ಯುತ್ ಕಾಮಗಾರಿಗಳ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಸಕ್ಕರೆ, ಅಕ್ಕಿ, ಬಾಕ್ಸೈಟ್ ನಿರ್ಯಾತವನ್ನೇ ದೇಶ ಅವಲಂಬಿಸಬೇಕಾಗಿ ಬಂದಿರುವ ಪರಿಸ್ಥಿತಿಯನ್ನು ತಪ್ಪಿಸಲು ಅಲ್ಯೂಮಿನಿಯಂ ಮುಂತಾದ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.


ತೀರ ಪ್ರದೇಶದಲ್ಲಿ ರಸ್ತೆ ವ್ಯವಸ್ಥೆ ಅಭಿವೃದ್ಧಿಹೊಂದಿದೆ. ಒಟ್ಟು 128 ಕಿಮೀ ದೂರದ ಎರಡು ರೈಲುಮಾರ್ಗಗಳಿವೆ. ಇವು ಸರ್ಕಾರಿ ಒಡೆತನದಲ್ಲಿವೆ. ದಮ್ಮಸು ಮಾಡಿದ ರಸ್ತೆಯ ಉದ್ದ 383 ಕಿಮೀ ಒಟ್ಟು 1760 ಕಿಮೀ ರಸ್ತೆಗಳುಂಟು. ಜಾರ್ಜ್ ಟೌನ್ನಿಂದ ಬಾಕ್ಸೈಟ್ ಗಣಿಕೇಂದ್ರವಾದ ಮಕೆನ್‌ಜ಼ಿಗೆ 1968ರಲ್ಲಿ ಬಿಟ್ಯೂಮಿನಸ್ ರಸ್ತೆ ನಿರ್ಮಿಸಲಾಯಿತು. ಒಳನಾಡಿನಲ್ಲಿ ನದಿಗಳೇ ಈಗಲೂ ಮುಖ್ಯ ಸಂಪರ್ಕ ಸಾಧನಗಳು. ಮ್ಯಾಜ಼ರೂನಿ, ಕೂಯೂನಿ, ಎಸೆಕ್ವೀಬೋ, ಡೆಮೆರೇರ, ಬರ್ಬೀಸ್-ಇವು ಈ ದೃಷ್ಟಿಯಿಂದ ಉಪಯುಕ್ತ ವಾದ ನದಿಗಳು. ಒಳನಾಡಿನ ಮುಖ್ಯ ವಸತಿಗಳಲ್ಲಿ ವಿಮಾನ ಇಳಿದಾಣಗಳುಂಟು. ಆಟ್ಕಿನ್ಸನ್ ಫೀಲ್ಡ್ ನಲ್ಲಿ 1968ರಲ್ಲಿ ವಿಮಾನ ನಿಲ್ದಾಣವೊಂದು ನಿರ್ಮಿತವಾಯಿತು.


ಜಾರ್ಜ್ಟೌನ್ ರಾಜಧಾನಿ. ಮಕೆನ್ಜಿû, ನ್ಯೂ ಆಮ್ಸ್ಟರ್ಡಾಂ ಇತರ ಪಟ್ಟಣಗಳು. ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ಈಸ್ಟ್ ಇಂಡಿಯನರು. ಅನಂತರ ಬರುವವರು ಆಫ್ರಿಕನರು. ಮಿಶ್ರಬುಡಕಟ್ಟಿನವರೂ ಪೋರ್ಚುಗೀಸರೂ ಚೀನೀಯರೂ ಐರೋಪ್ಯರೂ ಅಮೆರಿಂಡಿಯನರೂ ಇದ್ದಾರೆ. ಕ್ರೈಸ್ತ, ಹಿಂದೂ, ಇಸ್ಲಾಂ ಮುಖ್ಯ ಧರ್ಮಗಳು.


೫ ರಿಂದ ೧೬ನೆಯ ವಯಸ್ಸಿನವರೆಗೆ ಶಿಕ್ಷಣ ಉಚಿತ; 6ರಿಂದ 14ನೆಯ ವಂiÀÄಸ್ಸಿನ ವರೆಗೆ ಕಡ್ಡಾಯ, ಶೇ. 80-85ರಷ್ಟು ಜನ ಅಕ್ಷರಸ್ಥರು. ಜಾರ್ಜ್ಟೌನಿನಲ್ಲಿ ಗಯಾನ ವಿಶ್ವವಿದ್ಯಾಲಯವಿದೆ. ದೇಶದ ನಾಣ್ಯ ಗಯಾನನ್ ಡಾಲರ್, ಕ್ರಿಕೆಟ್ ಆಟ ಅತ್ಯಂತ ಜನಪ್ರಿಯ. ಹಾಕಿ, ಬ್ಯಾಸ್ಕೆಟ್ಬಾಲ್, ಟೇಬಲ್ ಟೆನಿಸ್, ಲಾನ್ ಟೆನಿಸ್, ಫುಟ್ಬಾಲ್ ಇತರ ಕ್ರೀಡೆಗಳು.


1970ರ ಫೆಬ್ರುವರಿಯಿಂದ ಗಯಾನ ಗಣರಾಜ್ಯವಾಗಿದೆ. ಅಧ್ಯಕ್ಷನಿಂದ ನೇಮಕವಾದ ಮಂತ್ರಿ ಸಂಪುಟಕ್ಕೆ ಪ್ರಧಾನ ಮಂತ್ರಿಯೇ ಮುಖ್ಯ. ಇದು ದ್ವಿಸದನ ಸಂಸತ್ತಿನ ಜವಾಬ್ದಾರಿ ಹೊಂದಿದೆ. ರಾಷ್ಟ್ರೀಯ ಸಭೆಯ ಸದಸ್ಯ ಸಂಖ್ಯೆ 53. ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಆಡಳಿತಸೌಲಭ್ಯಕ್ಕಾಗಿ ದೇಶವನ್ನು ಒಂಬತ್ತು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಇಂಗ್ಲಿಷ್ ಅಧಿಕೃತ ಭಾಷೆ. ಇಂಡಿಯನ್ ಭಾಷೆಗಳೂ ಜಾರಿಯಲ್ಲಿವೆ.


ಇತಿಹಾಸ

ಸಂಪಾದಿಸಿ

ಗಯಾನ ಮೊದಲು ಬ್ರಿಟಿಷ್ ಗಯಾನವಾಗಿತ್ತು. 18ನೆಯ ಶತಮಾನದ ಆದಿಯಲ್ಲಿ ಈ ಪ್ರದೇಶದಲ್ಲಿ ಬ್ರಿಟಿಷರ ವಶದಲ್ಲಿದ್ದ ವಸಾಹತುಗಳಾದ ಬರ್ಬೀಸ್, ಎಸೆಕ್ವೀಬೋ, ಡೆಮೆರೇರ-ಈ ಮೂರನ್ನೂ ಅವರು 1831ರಲ್ಲಿ ಸೇರಿಸಿ ಬ್ರಿಟಿಷ್ ಗಯಾನವನ್ನು ರಚಿಸಿದರು.


ಬ್ರಿಟಿಷ್ ಗಯಾನ ಉದಯವಾದ ಕಾಲದಿಂದಲೂ ಅಲ್ಲಿಯ ಆರ್ಥಿಕಾಭಿವೃದ್ಧಿಗೆ ಪರದೇಶದಿಂದ ಬಂದ ವಿವಿಧ ಜನಾಂಗಗಳವರು ದುಡಿದರು. ಮೊದಲಲ್ಲಿ ಗುಲಾಮರನ್ನು ಆಫ್ರಿಕದಿಂದ ತರಲಾಯಿತು. ಈ ನೀಗ್ರೋ ಗುಲಾಮರು ಬ್ರಿಟಿಷರಿಗೆ ಸೇರಿದ್ದ ಕಬ್ಬಿನ ತೋಟಗಳಲ್ಲಿ ದುಡಿಯಬೇಕಾಗಿತ್ತು. 1807ರಲ್ಲಿ ಬ್ರಿಟಿಷ್ ಸರ್ಕಾರ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸಿತು. ಆ ವರ್ಷ ಬ್ರಿಟಿಷ್ ಗಯಾನದಲ್ಲಿ ಸುಮಾರು 10,000 ಗುಲಾಮರಿದ್ದರು. ಗುಲಾಮವ್ಯಾಪಾರ ನಿಂತರೂ ಗುಲಾಮಗಿರಿ ಹೋಗಲಿಲ್ಲ. ಕಡೆಗೆ 1839ರಲ್ಲಿ ಗುಲಾಮಗಿರಿಯೂ ಕೊನೆಗೊಂಡಿತು. 1900ರ ಹೊತ್ತಿಗೆ ಚಿನ್ನದ ಮತ್ತು ವಜ್ರದ ಗಣಿಗಳು ತಲೆಯೆತ್ತಿಕೊಂಡು ಆರ್ಥಿಕಾಭಿವೃದ್ಧಿಯಾಗಲು ಸಹಾಯಕವಾದವು.


1928ರವರೆಗೆ ವಸಾಹತುವಿನ ಒಳಾಡಳಿತದಲ್ಲಿ ಅಲ್ಲಿಯ ಜನರಿಗೆ ಬ್ರಿಟಿಷರು ಯಾವ ರೀತಿಯ ಸ್ವಾತಂತ್ರ್ಯವನ್ನಾಗಲಿ ಸೌಲಭ್ಯವನ್ನಾಗಲಿ ಕೊಟ್ಟಿರಲಿಲ್ಲ. 1928ರಲ್ಲಿ ಪರಿಮಿತ ಪ್ರತಿನಿಧಿ ಸರ್ಕಾರವೊಂದನ್ನು ಬ್ರಿಟಿಷರು ಸ್ಥಾಪಿಸಿದರು. 1943ರಲ್ಲಿ ಮತ್ತು 1945ರಲ್ಲಿ ಮತ್ತಷ್ಟು ಸುಧಾರಣೆಗಳನ್ನು ಜಾರಿಗೆ ತರಲಾಯಿತು.


1953-57ರ ಅವಧಿಯಲ್ಲಿ ಬ್ರಿಟಿಷರು ಇನ್ನೂ ಮುಂದೆ ಹೋಗಿ ಅಲ್ಲಿಯ ಜನರಿಗೆ ಒಂದು ಸಂವಿಧಾನವನ್ನು ನೀಡಿದರು. ಇದರ ಪ್ರಕಾರ, ದ್ವಿಸದನ ವಿಧಾನ ಮಂಡಲವನ್ನು ರಚಿಸಲಾಯಿತು. ಅಲ್ಲದೆ ದೇಶದ ಮಂತ್ರಿಗಳು ಶಾಸಕಾಂಗಕ್ಕೆ ಅಧೀನರಾಗಿ, ಅದಕ್ಕೆ ಜವಾಬ್ದಾರಿಯುಳ್ಳವರಾಗಿರಬೇಕೆಂಬ ನಿಯಮವನ್ನು ಜಾರಿಗೆ ತರಲಾಯಿತು. ಸಾರ್ವತ್ರಿಕ ಚುನಾವಣೆಯಲ್ಲಿ ವಯಸ್ಕರ ಮತದಾನಪದ್ಧತಿಯನ್ನು ಬ್ರಿಟಿಷರು ಜಾರಿಗೆ ತಂದರು. ಶಾಸಕಾಂಗಕ್ಕೆ ಹೊಸ ಸಂವಿಧಾನದ ಪ್ರಕಾರ ಚುನಾವಣೆಗಳು ನಡೆದವು. ಚೆಡ್ಡಿ ಜಗನ್ ನಾಯಕತ್ವದಲ್ಲಿ ಪೀಪಲ್ಸ್ ಪ್ರೋಗ್ರೆಸಿವ್ ಪಾರ್ಟಿ ಬಹುಮತ ಪಡೆದು ಸರ್ಕಾರ ರಚಿಸಿತು. ಕಮ್ಯೂನಿಸ್ಟರು ಬ್ರಿಟಿಷ್ ಗಯಾನದ ಸರ್ಕಾರವನ್ನು ಉರುಳಿಸಲು ಒಳಸಂಚನ್ನು ನಡೆಸುತ್ತಿರುವರೆಂಬ ನೆಪದ ಮೇಲೆ 6 ತಿಂಗಳುಗಳಲ್ಲೇ ಬ್ರಿಟಿಷರು ಸಂವಿಧಾನವನ್ನು ತಡೆಹಿಡಿಯಲು ಆಜ್ಞಾಪಿಸಿದರು. ಮಧ್ಯಂತರ ಸರ್ಕಾರವೊಂದನ್ನು ರಚಿಸಲಾಯಿತು.


1960ರಲ್ಲಿ ಬ್ರಿಟಿಷ್ ಗಯಾನದ ಜನತೆಯ ಸ್ವಾತಂತ್ರ್ಯದಾಹ ಅಧಿಕವಾಯಿತು. ಆ ವರ್ಷ ಸೇರಿದ ಸಂವಿಧಾನದ ಸಮ್ಮೇಳನದಲ್ಲಿ ಸ್ವಾತಂತ್ರ್ಯಕ್ಕೆ ತಾತ್ತ್ವಿಕವಾಗಿ ಸಮ್ಮತಿ ದೊರಕಿತು. ಸ್ವಾತಂತ್ರ್ಯಗಳಿಸಿದ ಮೇಲೆ ಗಯಾನ ಬ್ರಿಟಿಷ್ ಕಾಮನ್ವೆಲ್ತಿನಲ್ಲೇ ಅಧಿರಾಜ್ಯವಾಗಿ ಮುಂದುವರಿಯತಕ್ಕದ್ದೆಂಬುದು ಇದರ ತೀರ್ಮಾನ. ಮರುವರ್ಷವೇ, ಅಂದರೆ 1961ರಲ್ಲಿ, ಗಯಾನ ಒಳಾಡಳಿತದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಪಡೆಯಿತು. ಹೊಸ ಸಂವಿಧಾನ ಜಾರಿಗೆ ಬಂದು, ಚುನಾವಣೆಗಳು ನಡೆದವು. ಚೆಡ್ಡಿ ಜಗನ್ ಗಯಾನದ ಪ್ರಧಾನಮಂತ್ರಿಯಾದರು.


1962-64ರ ನಡುವೆ ಪೀಪಲ್ಸ್ ಪ್ರೊಗ್ರೆಸಿವ್ ಪಕ್ಷಕ್ಕೂ, ನೀಗ್ರೊಗಳಿಂದ ಬೆಂಬಲಪಡೆದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೂ ಸ್ಪರ್ಧೆ ಏರ್ಪಟ್ಟಿತು. ಇದು ಹಿಂಸಾತ್ಮಕ ಚಳವಳಿಯಲ್ಲಿ ಮುಕ್ತಾಯಗೊಂಡಾಗ, ಗಯಾನದ ಎಲ್ಲ ಪಕ್ಷಗಳೂ ಸೇರಿಕೊಂಡು, ಎಲ್ಲರಿಗೂ ಒಪ್ಪಿಗೆಯಾಗುವಂತೆ, ಸಂಯುಕ್ತರಂಗವೊಂದನ್ನು ಸ್ಥಾಪಿಸಿ, ಮಂತ್ರಿಮಂಡಲವನ್ನು ಅಸ್ತಿತ್ವಕ್ಕೆ ತಂದವು. ಈ ಸರ್ಕಾರದ ಮುಖಂಡರಾಗಿ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಫೋರ್ಬ್ಸ್ ಬರ್ನ್‌ಹ್ಯಾಂ ಆಯ್ಕೆಗೊಂಡರು. ಈ ಮಧ್ಯೆ ಕೋಮುಗಲಭೆಗಳು ಮತ್ತೆ ಸಂಭವಿಸಿದಾಗ ಸರ್ಕಾರ ತುರ್ತುಪರಿಸ್ಥಿತಿಯನ್ನು ಘೋಷಿಸಿ, ಬ್ರಿಟಿಷ್ ಸೇನೆಯ ನೆರವಿನಿಂದ ಪರಿಸ್ಥಿತಿಯನ್ನು ಹತೋಟಿಗೆ ತಂದಿತು.


1966ರಲ್ಲಿ ಗಯಾನ ಅಧಿರಾಜ್ಯವಾಯಿತು. 1968ರ ಸಾರ್ವತ್ರಿಕ ಚುನಾವಣೆಯಲ್ಲಿ ಬರ್ನ್ಹ್ಯಾಮರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ಬಹುಮತಗಳಿಸಿ ಬರ್ನ್ಹ್ಯಾಂ ಮತ್ತೆ ಪ್ರಧಾನಿಯಾದರು. 1970ರ ಫೆಬ್ರುವರಿ 23 ರಂದು ಗಯಾನ ಗಣರಾಜ್ಯವಾಯಿತು. ಬರ್ನ್ ಹ್ಯಾಂ 1980ರ ವರೆಗೆ ಪ್ರಧಾನಿಯಾಗಿದ್ದರು. ಇವರು ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಹೊಂದಿರಬೇಕೆಂದು 1980ರಲ್ಲಿ ಒಂದು ಚಳವಳಿ ನಡೆಸಿ ಅಧ್ಯಕ್ಷ ಪದ್ಧತಿಯನ್ನು ತಂದು 1985ರಲ್ಲಿ ಅವರೇ ನಿಧನರಾಗುವ ತನಕ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು. 1997ರಲ್ಲಿ ನಡೆದ ಚುನಾವಣೆಯಲ್ಲಿ ಚೆಡ್ಡಿಜಗನ್ರವರ ಪತ್ನಿ ಜನೆಟ್ ಜಗನ್ ಅಧ್ಯಕ್ಷೆಯಾದರು.


1999 ಜನೆಟ್ ಜಗನ್ ತಮ್ಮ ದೇಹಸ್ಥಿತಿಯ ಕಾರಣದಿಂದ ಅಧ್ಯಕ್ಷೆ ಹುದ್ದೆಗೆ ರಾಜೀನಾಮೆ ಕೊಟ್ಟರು. ಆಗ ಪ್ರಧಾನ ಮಂತ್ರಿಯಾಗಿದ್ದ ಭರತ್ ಜಗದೇವ್ ಅಧ್ಯಕ್ಷರಾದರು.