ಮೆಕ್ಸಿಕೋ ಕೊಲ್ಲಿಯಲ್ಲಿ (ಗಲ್ಫ್) ಉಗಮಿಸಿ, ಫ್ಲಾರಿಡ ಜಲಸಂಧಿಯ ಮೂಲಕ ಸಾಗಿ, ಅಮೆರಿಕ ಸಂಯುಕ್ತಸಂಸ್ಥಾನದ ತೀರಕ್ಕೆ ಸಮಾನಾಂತರದಲ್ಲಿ ಈಶಾನ್ಯ ದಿಕ್ಕಿನಲ್ಲಿ ಹರಿದು ಹೋಗುವ ಪ್ರವಾಹ (ಸ್ಟ್ರೀಂ). ಬ್ರಿಟಿಷ್ ದ್ವೀಪಗಳ ಆಚೆಗೂ ವ್ಯಾಪಿಸಿಕೊಂಡಿರುವ ಪ್ರವಾಹದ ಈ ಹೆಸರು ವಾಸ್ತವವಾಗಿ ಹ್ಯಾಟೆರಸ್ ಮತ್ತು ನ್ಯೂಫಂಡ್ಲ್ಯಾಂಡ್ ತೀರಗಳ ನಡುವಣ ಭಾಗಕ್ಕೆ ಮಾತ್ರ ಅನ್ವಯಿಸುತ್ತದೆ. ಗಾಢ ಅಥವಾ ಕಡು ನೀಲಿ ಬಣ್ಣದ ಈ ಉದಕದ ಮೇಲ್ಮೈನಲ್ಲಿ ಶೇ. 36ರಷ್ಟು ಲವಣವೂ, 80° ಫ್ಯಾ. ಉಷ್ಣತೆಯೂ ಇರುವುದೆಂದು ಹೇಳಲಾಗಿದೆ. ಕೊಲ್ಲಿಯನ್ನು ಬಿಟ್ಟು ಹೊರಡುವಾಗ 80 ರಿಂದ 160 ಕಿಮೀಗಳಷ್ಟು ಅಗಲವಾಗಿಯೂ ಸುಮಾರು 610 ಮೀಟರ್ಗಿಂತಲೂ ಹೆಚ್ಚು ಆಳವಾಗಿಯೂ ಇದ್ದು, ದಿನವೊಂದಕ್ಕೆ ಸುಮಾರು 108 ಕಿಮೀ ವೇಗದಲ್ಲಿ ಪ್ರವಹಿಸುತ್ತದೆ. ಈ ವೇಗ ಮಿಸಿಸಿಪಿ ನದಿಯ ವೇಗಕ್ಕಿಂತ 1000 ಪಟ್ಟು ಹೆಚ್ಚು ಅಂಟಾರ್ಕ್ಟಿಕ್ ವೃತ್ತದ ಬಳಿಯ ಪ್ರವಾಹವನ್ನು ಬಿಟ್ಟರೆ ಇದೇ ಜಗತ್ತಿನ ದೊಡ್ಡ ಸಾಗರೋದಕ ಪ್ರವಾಹ.
ಅಟ್ಲಾಂಟಿಕ್ ಸಮುದ್ರದ ಸಮಭಾಜಕ ವೃತ್ತದ ಬಳಿಯಲ್ಲಿ ಬೀಸುವ ವಾಣಿಜ್ಯ ಮಾರುತಗಳು ನೀರಿನ ಪ್ರವಾಹವನ್ನು ಪಶ್ಚಿಮದತ್ತ ತಿರುಗಿಸುತ್ತವೆ. ಆ ಪ್ರವಾಹದ ಕವಲುಗಳು ಉತ್ತರ ಮತ್ತು ದಕ್ಷಿಣ ಸಮಭಾಜಕೀಯ ಪ್ರವಾಹಗಳೆಂದು ಹೆಸರಾಗಿವೆ. ದಕ್ಷಿಣ ಸಮಭಾಜಕೀಯ ಪ್ರವಾಹ ಪಶ್ಚಿಮದತ್ತ ಹರಿದು ಬ್ರೆಜಿûಲಿನ ಉತ್ತರ ಕರಾವಳಿಗೆ ಅಪ್ಪಳಿಸಿದಾಗ ಅಲ್ಲಿಯ ನೀರು ಕ್ಯಾರಿಬೀಯನ್ ಸಾಗರಕ್ಕೆ ನುಗ್ಗುತ್ತದೆ; ಅದು ಉತ್ತರ ಸಮಭಾಜಕೀಯ ಪ್ರವಾಹದ ಉಷ್ಣಪ್ರವಾಹದೊಂದಿಗೆ ಬೆರೆತು ಅದರ ಉಷ್ಣತೆಯನ್ನು ಹೆಚ್ಚಿಸುತ್ತದೆ. ಈ ಸಂಯುಕ್ತ ಪ್ರವಾಹ ಇಕ್ಕಟ್ಟಾಗಿರುವ ಯುಕಟ್ಯಾನ್ ಕಾಲುವೆ ಮತ್ತು ಫ್ಲಾರಿಡ ಜಲಸಂಧಿ ಇವುಗಳ ಮೂಲಕ ಹಾಯ್ದುಬಂದಾಗ ಗಲ್ಫ್ ಸ್ಟ್ರೀಂ ಎನ್ನಿಸಿಕೊಳ್ಳುತ್ತದೆ.
ಈ ಉಷ್ಣೋದಕ ಪ್ರವಾಹ ಬಹಾಮ ಕರಾವಳಿಯನ್ನು ದಾಟಿ ಹೋಗುವಾಗ ಆಂಟಿಲೆಸ್ ಪ್ರವಾಹದೊಡನೆ ಬೆರೆಯುತ್ತದೆ. ಇದು ವೆಸ್ಟ್ ಇಂಡೀಸಿನ ಅಟ್ಲಾಂಟಿಕ್ ಪಾರ್ಶ್ವದಲ್ಲಿ ವಾಯವ್ಯಾಭಿಮುಖವಾಗಿ ಹರಿಯುವ ಪ್ರವಾಹ. ಈ ಸಂಯುಕ್ತ ಪ್ರವಾಹ ಮುಂದೆ ಸಾಗಿದಂತೆ ಇದರ ವೇಗ ಕಡಿಮೆಯಾಗುತ್ತದೆ, ಪಾತ್ರ ಅಗಲವಾಗುತ್ತದೆ. ಮುಂದೆ ಉತ್ತರ ಅಮೆರಿಕದ ಅಟ್ಲಾಂಟಿಕ್ ಕರಾವಳಿಗೆ ಸಮಾನಾಂತರದಲ್ಲಿ ಸಾಗುತ್ತದೆ. ಕರಾವಳಿಗೂ ಈ ಉಷ್ಣೋದಕ ಪ್ರವಾಹಕ್ಕೂ ನಡುವೆ ಇರುವ ನೀರಿನ ಕಿರುಧಾರೆಗೆ ಕೋಲ್ಡ್ ವಾಲ್ (ತಂಪುಗೋಡೆ) ಎಂದು ಹೆಸರು. ನ್ಯೂಫಂಡ್‌ಲ್ಯಾಂಡ್ ತೀರವನ್ನು ತಲಪುವ ಹೊತ್ತಿಗೆ ಇದರ ವೇಗ ತುಂಬ ಕಡಿಮೆಯಾಗಿರುತ್ತದೆ. ಅಲ್ಲಿ ಇದು ಮತ್ತಷ್ಟು ಹರಡಿಕೊಂಡು ಸಾಧಾರಣ ಉಷ್ಣೋದಕ ಪ್ರವಾಹವಾಗಿ, ಪೂರ್ವಾಭಿಮುಖವಾಗಿ ಯುರೋಪಿನತ್ತ ಹರಿಯುತ್ತದೆ. ಇಲ್ಲಿಂದ ಮುಂದೆ ಇದು ಉತ್ತರ ಅಟ್ಲಾಂಟಿಕ್ ಪ್ರವಾಹ ಎನಿಸಿಕೊಳ್ಳುತ್ತದೆ. ಯುರೋಪಿನ ಬಳಿಗೆ ಬಂದಮೇಲೆ ಈ ಪ್ರವಾಹ ಎರಡು ಕವಲುಗಳಾಗಿ ಒಡೆಯುತ್ತದೆ. ಒಂದು ಕವಲು ದಕ್ಷಿಣಾಭಿಮುಖವಾಗಿ ಹರಿಯತೊಡಗಿ ಆಫ್ರಿಕದ ಪಶ್ಚಿಮ ಕರಾವಳಿಯನ್ನು ಸೇರುತ್ತದೆ. ಇನ್ನೊಂದು ಕವಲು ಬ್ರಿಟಿಷ್ ದ್ವೀಪಗಳತ್ತ ಸಾಗುತ್ತದೆ. ಈ ಕವಲು ಮುಂದೆ ಮತ್ತೆ ಮೂರು ಭಾಗಗಳಾಗಿ ಒಡೆಯುತ್ತದೆ. ಒಂದು ಉಪಕವಲು ಸ್ಕಾಟ್ಲೆಂಡಿನ ಉತ್ತರಕ್ಕಿರುವ ಫೇರೋ ಮತ್ತು ಶೆಟ್ಲೆಂಡ್ ದ್ವೀಪಸ್ತೋಮಗಳ ನಡುವೆ ಸಾಗಿ, ಆರ್ಕ್ಟಿಕ್ ಸಮುದ್ರದಲ್ಲಿ ಲೀನವಾಗುತ್ತದೆ. ಎರಡನೆಯ ಉಪಕವಲು ಐಸ್ಲೆಂಡಿನ ಪಶ್ಚಿಮ ಕರಾವಳಿಯಲ್ಲಿ ಸಾಗುತ್ತದೆ. ಮೂರನೆಯ ಉಪಕವಲು ಗ್ರೀನ್ಲೆಂಡಿನ ಕರಾವಳಿಯಲ್ಲಿ ಸಾಗಿ ಡೇವಿಸ್ ಜಲಸಂಧಿಯಲ್ಲಿ ಹರಿದು ಬ್ಯಾಫಿನ್ ಕೊಲ್ಲಿಯಲ್ಲಿ ಲೀನವಾಗುತ್ತದೆ.
ಗ್ರೇಟ್ ಬ್ರಿಟನ್ ಮತ್ತು ವಾಯವ್ಯ ಯುರೋಪ್ ವಾಯುಗುಣ ಅಷ್ಟೇ ಉತ್ತರಕ್ಕಿರುವ ಉತ್ತರ ಅಮೆರಿಕನ್ ಪ್ರದೇಶಗಳಿಗಿಂತ ಹಿತಕರವಾಗಿರುವುದಕ್ಕೆ ಗಲ್ಫ್ ಸ್ಟ್ರೀಮಿನ ಮೇಲಿನಿಂದ ಬೀಸುವ ಮಾರುತಗಳೇ ಕಾರಣ. ಈ ಮಾರುತಗಳು ಹಾದುಹೋಗುವ ಪ್ರದೇಶದಲ್ಲೆಲ್ಲ ವಾತಾವರಣ ಬೆಚ್ಚಗಿರುತ್ತದೆ. ಜನವರಿ ತಿಂಗಳಿನಲ್ಲಿ ಉತ್ತರ ನಾರ್ವೆಯ ಉಷ್ಣತೆ ಆ ಅಕ್ಷಾಂಶದಲ್ಲಿರುವ ಇತರ ಪ್ರದೇಶಗಳಿಗಿಂತ 45° ಫ್ಯಾ. ಅಧಿಕವಾಗಿರುತ್ತದೆ. ಈ ಉಷ್ಣೋದಕ ಪ್ರವಾಹದಿಂದಾಗಿ ವಾಯವ್ಯ ಯುರೋಪಿನ ಅನೇಕ ಬಂದರುಗಳು ಚಳಿಗಾಲದಲ್ಲಿ ಹಿಮಗಟ್ಟಿರುವುದಿಲ್ಲ. ಈ ಪ್ರವಾಹದ ಪ್ರಭಾವಕ್ಕೊಳಗಾದ, ಉತ್ತರ ನಾರ್ವೆಯ ಹಾಮೆರ್ಫೆಸ್ಟ್ ನಗರ (ಉ.ಅ. 70° 38') ಚಳಿಗಾಲದಲ್ಲೂ ಹಿಮಮುಕ್ತವಾಗಿ ರುತ್ತದೆ. ಇದು ಪ್ರಮುಖ ಮೀನುಗಾರಿಕೆ ಕೇಂದ್ರ. ಆದರೆ ಇದಕ್ಕೆ 1200 ಕಿಮೀ ದಕ್ಷಿಣದಲ್ಲಿ ರಷ್ಯ ಗಣರಾಜ್ಯದ ರೀಗ ಬಂದರು ಚಳಿಗಾಲದಲ್ಲಿ ಹಿಮಾವೃತವಾಗಿರುತ್ತದೆ.
ಗಲ್ಫ್ ಸ್ಟ್ರೀಂ ನೌಕಾ ಸಾರಿಗೆಗೂ ನೆರವಾಗುತ್ತದೆ. ದಕ್ಷಿಣ ಅಮೆರಿಕದಿಂದ ಅಟ್ಲಾಂಟಿಕ್ ಕರಾವಳಿಯ ಬಂದರುಗಳತ್ತ ಯಾನಮಾಡುವ ತೈಲವಾಹಕ ಮತ್ತು ಅದಿರುಸಾಗಣೆ ನೌಕೆಗಳು ತಮ್ಮ ಉತ್ತರಾಭಿಮುಖ ಯಾನದಲ್ಲಿ ಈ ಪ್ರವಾಹ ಪಥವನ್ನೇರುತ್ತದೆ. ಇದರಿಂದ ಯಾನದ ಅವಧಿ ಕಡಿಮೆಯಾಗುತ್ತದೆ. ಹೀಗೆ ಇದು ವಾಣಿಜ್ಯ ಹಾಗೂ ವಾಯುಗುಣ ದೃಷ್ಟಿಯಿಂದ ತುಂಬ ಮಹತ್ತ್ವಪುರ್ಣವೆನಿಸಿದ ಪ್ರವಾಹ.