ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗವರ್ನರ್-ಜನರಲ್

ಒಂದು ದೇಶದ ಅತ್ಯುನ್ನತ ಅಧಿಕಾರಿ. ಗವರ್ನರ್, ಲೆಫ್ಟೆನಂಟ್ ಗವರ್ನರ್ ಮುಂತಾದ ಹಲವಾರು ಅಧಿಕಾರಿಗಳ ಮೇಲೆ ಇರುವವ. ಗವರ್ನರ್-ಇನ್-ಚೀಫ್ ಎಂದೂ ಇವನನ್ನು ಕರೆಯುವುದಿದೆ.

ಗವರ್ನರ್ ಕಾರ್ನ್‌ವಾಲಿಸ್


ಬ್ರಿಟಿಷ್ ಸಂವಿಧಾನ ಪದ್ಧತಿಯಲ್ಲಿ ಗವರ್ನರ್-ಜನರಲನ ಅಧಿಕಾರ ದೊರೆಯಿಂದ (ಅಥವಾ ರಾಣಿಯಿಂದ) ಇಲ್ಲವೇ ಸಾಮ್ರಾಜ್ಯೀಯ ಅಥವಾ ಸ್ಥಳೀಯ ಕಾನೂನಿನಿಂದ ಪ್ರಾಪ್ತವಾದದ್ದು. ಬ್ರಿಟನಿನ ಅಧೀನ ಪ್ರದೇಶಗಳಲ್ಲಿ ಹಲವಾರು ವಿಭಾಗ ಗಳ ಒಕ್ಕೂಟದ ಉನ್ನತಾಧಿಕಾರಿ ಯನ್ನು ಗವರ್ನರ್-ಜನರಲ್ ಎಂದು ಕರೆಯಲಾಗುತ್ತದೆ.


ಬ್ರಿಟಿಷ್ ಸಾಮ್ರಾಜ್ಯದ ಇತಿಹಾಸದಲ್ಲಿ ಗವರ್ನರ್-ಜನರಲ್ ಹುದ್ದೆಯ ಸ್ಥಾನಮಾನ ಕಾರ್ಯ ಭಾರಗಳು ಕಾಲಾನುಗುಣವಾಗಿ ವಿಶೇಷವಾದ ಬದಲಾವಣೆಗಳಿಗೆ ಒಳಗಾಗಿವೆ. ಅದರ ಅಧೀನ ಪ್ರದೇಶ ಗಳು ಸ್ವಯಮಾಡಳಿತದತ್ತ ವಿಕಾಸ ಗೊಂಡಂತೆಲ್ಲ ಆ ಹುದ್ದೆಯ ಸ್ವರೂಪ ವ್ಯತ್ಯಾಸಗೊಂಡಿದೆ. ನಾಮಕರಣಗೊಂಡ ಸದಸ್ಯರಿದ್ದ ವಿಧಾನ ಮಂಡಲಗಳು ಚುನಾಯಿತ ಸದನಗಳುಳ್ಳ ಮಂಡಲಗಳಾದಂತೆ ಗವರ್ನರ್ - ಜನರಲನ ಹುದ್ದೆಯೂ ಪ್ರಜಾಸತ್ತಾತ್ಮಕವಾಗಿ ಪರಿಣಮಿಸಿದೆ.


ಬ್ರಿಟಿಷ್ ಚಕ್ರಾಧಿಪತ್ಯದೊಳಗಿನ ಸ್ವಯಮಾಡಳಿತ ವಸಾಹತುಗಳ ಗವರ್ನರ್-ಜನರಲ್ಗಳನ್ನು ಬ್ರಿಟಿಷ್ ಸರ್ಕಾರ ನೇಮಕ ಮಾಡುವಾಗ ಆ ನೇಮಕಗಳನ್ನು ಸಂಬಂಧಪಟ್ಟ ಸರ್ಕಾರಗಳ ಒಪ್ಪಿಗೆ ಪಡೆಯುವ ಪದ್ಧತಿ 1890ರ ವೇಳೆಗೆ ಬಂದಿತ್ತು. 1922ರಲ್ಲಿ ಐರಿಷ್ ಸ್ವತಂತ್ರ ರಾಜ್ಯ ಸ್ಥಾಪನೆ ಆದಾಗ ಈ ವಿಚಾರದಲ್ಲಿ ಇನ್ನೊಂದು ಮಹತ್ತ್ವದ ಸುಧಾರಣೆ ಆಯಿತು. ಸ್ವತಂತ್ರ ರಾಜ್ಯ ಸರ್ಕಾರವೇ ಗವರ್ನರ್ - ಜನರಲನನ್ನು ಆಯ್ಕೆ ಮಾಡತೊಡಗಿತು: ಇದಕ್ಕೆ ದೊರೆ ಅನುಮತಿ ನೀಡುತ್ತಿದ್ದ. ಅದಕ್ಕೆ ಮುಂಚೆ ಐರ್ಲೆಂಡಿನಲ್ಲಿದ್ದ ರಾಜಪ್ರತಿನಿಧಿ ವೈಸ್ರಾಯ್ ಸ್ಥಾನಮಾನ ಪಡೆದಿದ್ದ. 1920ರ ಕಾಯಿದೆಯ ಪ್ರಕಾರ ಐರಿಷ್ ಸ್ವತಂತ್ರ ರಾಜ್ಯಕ್ಕೆ ಗವರ್ನರ್-ಜನರಲ್ ಹುದ್ದೆಯನ್ನು ರಚಿಸಲಾಯಿತು. ಐರಿಷ್ ಸ್ವತಂತ್ರ ರಾಜ್ಯ ಅಧಿರಾಜ್ಯದ (ಡೊಮಿನಿಯನ್) ಸ್ಥಾನ ಪಡೆಯಿತು.


1926ರಲ್ಲಿ ಇನ್ನೊಂದು ಮಹತ್ತರ ಬದಲಾವಣೆ ಆಯಿತು. ಆ ಬಾರಿ ಇದಕ್ಕೆ ಕಾರಣವಾದದ್ದು ಕೆನಡ. ಅಧಿರಾಜ್ಯವೊಂದರ ಗವರ್ನರ್-ಜನರಲ್ ಸಾಮಾನ್ಯವಾಗಿ ದೊರೆಯ ಪ್ರತಿನಿಧಿಯಾಗಿ ಮಾತ್ರ ಇರತಕ್ಕದ್ದೆಂದು, ಆತ ಬ್ರಿಟಿಷ್ ಸರ್ಕಾರದ ಪರವಾಗಿ ಯಾವುದೇ ಕಾರ್ಯಭಾರ ನಿರ್ವಹಿಸಬೇಕೆಂದು ಸಂಬಂಧಪಟ್ಟ ಅಧಿರಾಜ್ಯ ಕೇಳಿಕೊಂಡ ವಿನಾ ಅವನು ಅದನ್ನು ನಿರ್ವಹಿಸತಕ್ಕದ್ದಲ್ಲವೆಂದು ತೀರ್ಮಾನವಾಯಿತು.


1930ರಲ್ಲಿ ನಡೆದ ಸಾಮ್ರಾಜ್ಯ ಸಮ್ಮೇಳನದಲ್ಲಿ ಕೈಗೊಂಡ ತೀರ್ಮಾನ ಇನ್ನಷ್ಟು ಪ್ರಗತಿಪರವಾದ್ದು. ಗವರ್ನರ್-ಜನರಲನನ್ನು ನೇಮಿಸುವುದು ಸಂಬಂಧಪಟ್ಟ ಅಧಿರಾಜ್ಯದ ಪ್ರಾಧಿಕಾರವೆಂಬುದಾಗಿ ಆ ಸಮ್ಮೇಳನದಲ್ಲಿ ತೀರ್ಮಾನವಾಯಿತು. ಇದರ ಫಲವಾಗಿ ಕೆಲವು ಅಧಿರಾಜ್ಯಗಳು ತಮ್ಮ ಪ್ರಜೆಗಳನ್ನೇ ಗವರ್ನರ್-ಜನರಲನನ್ನಾಗಿ ಆರಿಸಿಕೊಂಡವು. ಗವರ್ನರ್-ಜನರಲನ ನೇಮಕದ ಪ್ರಶ್ನೆ ಅಧಿರಾಜ್ಯಕ್ಕೂ ಬ್ರಿಟಿಷ್ ರಾಜತ್ವಕ್ಕೂ ಸಂಬಂಧಿಸಿದ್ದು. ಬ್ರಿಟನಿನ ದೊರೆ ತನ್ನ ಸಚಿವಮಂಡಲಿಯ ಸಲಹೆಯ ಮೇರೆಗೆ ನಡೆಯುವಂತೆ, ಅಧಿರಾಜ್ಯದ ಗವರ್ನರ್-ಜನರಲನ ನೇಮಕವೂ ಅದರ ಸಚಿವರ ಸಲಹೆಯ ಮೇರೆಗೇ ಆಗತಕ್ಕದ್ದು. ನೇಮಕದ ಬಗ್ಗೆ ಅವರು ಮೊದಲು ಅನೌಪಚಾರಿಕ ವಾಗಿ ದೊರೆಯೊಡನೆ ಸಮಾಲೋಚನೆ ನಡೆಸಿ, ಅನಂತರ ಔಪಚಾರಿಕವಾಗಿ ದೊರೆಗೆ ಸಲಹೆ ನೀಡುವರು. ದೊರೆ ಅದನ್ನು ಒಪ್ಪತಕ್ಕದ್ದು. ಹೀಗೆ ಇದು ಅಧಿರಾಜ್ಯ ಸರ್ಕಾರಕ್ಕೂ ದೊರೆಗೂ ನೇರವಾಗಿ ನಡೆಯುವ ವ್ಯವಹಾರ-ಎಂಬುದು ನಿಶ್ಚಿತವಾಯಿತು.


ನೇಮಕ ಹೊಂದಿದ ಗವರ್ನರ್ - ಜನರಲನನ್ನು ವಜ ಮಾಡುವ ಬಗ್ಗೆ ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದು ಐರ್ಲೆಂಡ್. 1932ರಲ್ಲಿ ಈ ಘಟನೆ ಸಂಭವಿಸಿತು. ತನಗೆ ಮೆಚ್ಚುಗೆ ಯಿಲ್ಲದ ಗವರ್ನರ್ -ಜನರಲನನ್ನು ದೊರೆಯಿಂದ ತೆಗೆಸಿ ಹಾಕುವ ಕ್ರಮವನ್ನು ಐರಿಷ್ ಸ್ವತಂತ್ರ ರಾಜ್ಯ ಅನುಸರಿಸಿತು. ಅಧಿರಾಜ್ಯದ ಗವರ್ನರ್ - ಜನರಲನ ಸಂವೈಧಾನಿಕ ಸ್ಥಾನ ಬ್ರಿಟಿಷ್ ದೊರೆಯಂತೆಯೇ ಆದರೂ ಗವರ್ನರ್-ಜನರಲ್ ತತ್ಕಾಲದ ಸರ್ಕಾರದ ಇಚ್ಛಾನುಗುಣವಾಗಿ ಮಾತ್ರವೇ ಅಧಿಕಾರದಲ್ಲಿರಬಲ್ಲ.


ಭಾರತದಲ್ಲಿ

ಬ್ರಿಟಿಷ್ ಭಾರತದಲ್ಲಿ ಗವರ್ನರ್-ಜನರಲನ ಹುದ್ದೆ ವಿಕಾಸಗೊಂಡ ರೀತಿಯೇ ಬೇರೆ. 1773ರಲ್ಲಿ ಜಾರಿಗೆ ಬಂದ ರೆಗ್ಯುಲೇಟಿಂಗ್ ಕಾಯಿದೆಯ ಪ್ರಕಾರ ಗವರ್ನರ್-ಜನರಲನ ಹುದ್ದೆ ರಚಿತವಾಯಿತು. ವಾರನ್ ಹೇಸ್ಟಿಂಗ್ಸ್ ಮೊದಲನೆಯ ಗವರ್ನರ್-ಜನರಲ್ ಆಗಿ ನೇಮಕವಾದ. 1834ರ ವರೆಗೂ ಈ ಅಧಿಕಾರಿಯನ್ನು ಬಂಗಾಳದ ಪೋರ್ಟ್ ವಿಲಿಯಮ್ನ ಗವರ್ನರ್ - ಜನರಲ್ ಎಂದು ಕರೆಯಲಾಗುತ್ತಿತ್ತು. 1833ರ ಚಾರ್ಟರ್ ಕಾಯಿದೆಯ ಪ್ರಕಾರ ಇವನನ್ನು ಭಾರತದ ಗವರ್ನರ್-ಜನರಲ್ ಎಂದು ಕರೆಯಲಾಯಿತು. ವ್ಯಾಪಾರಕ್ಕಾಗಿ ಬಂದಿದ್ದ ಈಸ್ಟ್ ಇಂಡಿಯ ಕಂಪನಿಯಂಥ ಸಂಸ್ಥೆ ದೂರದೇಶವೊಂದರ ಆಳ್ವಿಕೆ ನಡೆಸುವುದು ಯುಕ್ತವೆ ಎಂಬ ವಿಷಯ ಇಂಗ್ಲೆಂಡಿನ ಪಾರ್ಲಿಮೆಂಟಿ ನಲ್ಲಿ ಚರ್ಚೆಗೆ ಬಂದು, ಆ ಆಳ್ವಿಕೆಯ ಮೇಲ್ವಿಚಾರಣೆ ಪಾರ್ಲಿಮೆಂಟಿಗೆ ಸೇರಿರಬೇಕೆಂದು ತೀರ್ಮಾನವಾಗಿ, ಅದರಂತೆ ರೆಗ್ಯುಲೇಟಿಂಗ್ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ಇದರ ಪ್ರಕಾರ, ಭಾರತದಲ್ಲಿ ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆಗೆ ಸೇರಿದ ರಾಜ್ಯಗಳ ಆಡಳಿತ ನಿಯಂತ್ರಣ ಬ್ರಿಟಿಷ್ ಪಾರ್ಲಿಮೆಂಟಿಗೆ ಸೇರಿದ್ದೆಂದು ನಿರ್ಣಯವಾಗಿ, ಗವರ್ನರ್-ಜನರಲನನ್ನು ನೇಮಿಸಲಾಯಿತು. ಇವನ ಅಧಿಕಾರವ್ಯಾಪ್ತಿ ಎಷ್ಟು ಎಂಬುದನ್ನು ಮೊದಲು ಸ್ಪಷ್ಟವಾಗಿ ಗೊತ್ತುಮಾಡಿರಲಿಲ್ಲವಾದ್ದರಿಂದ ಮೊದಲನೆಯ ಗವರ್ನರ್-ಜನರಲ್ ಆದ ವಾರನ್ ಹೇಸ್ಟಿಂಗ್ಸ್ ಬಹಳ ಕಿರುಕುಳಗಳನ್ನನುಭವಿಸ ಬೇಕಾಯಿತು. ಈ ಹೊಸ ಕಾಯಿದೆ ಈಸ್ಟ್ ಇಂಡಿಯ ಕಂಪನಿಯ ಆಡಳಿತದ ಮೇಲೆ ಬ್ರಿಟಿಷ್ ಸರ್ಕಾರಕ್ಕೆ ಖಚಿತವಾದ ಹತೋಟಿಯನ್ನು ಕೊಟ್ಟಿರಲಿಲ್ಲ; ಕಂಪನಿಯ ನಿರ್ದೇಶಕರಿಗೆ ಭಾರತದಲ್ಲಿ ತಮ್ಮ ಅಧಿಕಾರಿಗಳ ಮೇಲೆ ಎಷ್ಟರಮಟ್ಟಿನ ಅಧಿಕಾರ ಇರತಕ್ಕದ್ದೆಂದು ನಿಗದಿ ಮಾಡಿರಲಿಲ್ಲ. ಗವರ್ನರ್-ಜನರಲ್ಗೆ ತನ್ನ ಸಲಹಾ ಮಂಡಲಿಯ ಸದಸ್ಯರ ಮೇಲೆ ಇದ್ದ ಅಧಿಕಾರ ಎಷ್ಟೆಂಬುದನ್ನೂ ತಿಳಿಸಿರಲಿಲ್ಲ; ಮದರಾಸ್, ಮುಂಬಯಿ ಗವರ್ನರುಗಳ ಮೇಲೆ ಗವರ್ನರ್-ಜನರಲ್ಗೆ ಇದ್ದ ಅಧಿಕಾರ ಎಷ್ಟೆಂಬುದನ್ನು ನಿರ್ದಿಷ್ಟಪಡಿಸಿರಲಿಲ್ಲ-ಎಂದು ಒಬ್ಬ ಚರಿತ್ರಕಾರ ಬರೆದಿದ್ದಾನೆ.


ವಾರನ್ ಹೇಸ್ಟಿಂಗ್ಸ್ ಸಮರ್ಥ, ನಿಷ್ಠಾವಂತ. ಆದರೂ ಅವನಿಗೆ ವಿರೋಧಿಗಳಾಗಿದ್ದ ಸಲಹಾ ಮಂಡಲಿಯ ಸದಸ್ಯರಿಂದ ಹೆಜ್ಜೆಹೆಜ್ಜೆಗೂ ವಿರೋಧ ಹುಟ್ಟಿ ಆಡಳಿತ ನಡೆಸುವುದು ಅವನಿಗೆ ಬಹು ಕಷ್ಟವಾಯಿತು; ಪ್ರಾಂತೀಯ ಗವರ್ನರುಗಳು ಸ್ವತಂತ್ರವಾಗಿ ವರ್ತಿಸುತ್ತಿದ್ದರು. 1784ರಲ್ಲಿ ವಿಲಿಯಂ ಪಿಟ್ಟನ ಶ್ರಮದ ಫಲವಾಗಿ ಹೊಸ ಇಂಡಿಯ ಕಾಯಿದೆ (ಪಿಟ್ನ ಇಂಡಿಯ ಕಾಯಿದೆ) ಪಾರ್ಲಿಮೆಂಟಿನ ಅನುಮತಿ ಪಡೆದು ಜಾರಿಗೆ ಬಂದಿತು. ಭಾರತದಲ್ಲಿ ಬ್ರಿಟಿಷರಿಗೆ ಸೇರಿದ್ದ ಪ್ರಾಂತ್ಯಗಳ ಆಡಳಿತದ ಮೇಲ್ವಿಚಾರಣೆಯನ್ನು ಭಾರತದ ಕಾರ್ಯದರ್ಶಿಯನ್ನೊಳಗೊಂಡು ಆರು ಸದಸ್ಯರಿದ್ದ ನಿಯೋಜಿತ ಮಂಡಲಿಗೆ ಒಪ್ಪಿಸಲಾಯಿತು. ಈಸ್ಟ್ ಇಂಡಿಯ ಕಂಪನಿಯ ನಿರ್ದೇಶಕ ಮಂಡಲಿಯ ಆಡಳಿತದ ಮೇಲಿನ ಅಧಿಕಾರ ಇನ್ನೂ ಕುಗ್ಗಿತು. ಗವರ್ನರ್-ಜನರಲನ ಅಧಿಕಾರ ಹೆಚ್ಚು ವ್ಯಾಪಕವಾಯಿತು, ಹೆಚ್ಚು ನಿರ್ದಿಷ್ಟವಾಯಿತು. 1793-1813, 1833 ಮತ್ತು 1853ರಲ್ಲಿ ಈ ಕಾಯಿದೆ ಪರಿಷ್ಕೃತವಾಯಿತು. 1858ರಲ್ಲಿ ಭಾರತದ ಆಡಳಿತ ಈಸ್ಟ್ ಇಂಡಿಯ ಕಂಪನಿಯಿಂದ ಬ್ರಿಟಿಷ್ ಸರ್ಕಾರಕ್ಕೆ ವರ್ಗವಾಯಿತು. ಆಗಿನಿಂದ ಗವರ್ನರ್-ಜನರಲನನ್ನು ವೈಸ್ರಾಯ್ ಎಂದೂ ಕರೆಯಲಾಯಿತು. ಲಾರ್ಡ್ ಕ್ಯಾನಿಂಗ್ ಭಾರತದ ಪ್ರಥಮ ವೈಸ್ರಾಯ್. ಭಾರತದಲ್ಲಿ ಬ್ರಿಟಿಷರ ಆಡಳಿತ ಇರುವವರೆಗೂ ಯಾವ ಭಾರತೀಯನೂ ಈ ಹುದ್ದೆಗೆ ನೇಮಕವಾಗಲಿಲ್ಲ.


ಗವರ್ನರ್-ಜನರಲನ ಅಧಿಕಾರಗಳೂ ಕರ್ತವ್ಯಗಳೂ ಮೊಟ್ಟಮೊದಲಿಗೆ 1773ರ ರೆಗ್ಯುಲೇಟಿಂಗ್ ಕಾಯಿದೆಯಲ್ಲಿ ನಿಬಂಧಿತವಾಗಿದ್ದುವು. 1784ರ ಪಿಟ್ಟನ ಇಂಡಿಯ ಕಾಯಿದೆ ಮತ್ತು 1786ರ ಅನುಬಂಧಿ ಕಾಯಿದೆಗಳಲ್ಲೂ ಇವನ್ನು ವ್ಯಾಖ್ಯಿಸಲಾಗಿದೆ. ಗವರ್ನರ್-ಜನರಲ್ ಸಾಮಾನ್ಯವಾಗಿ ತನ್ನ ಮಂಡಲಿಯ ಸಲಹೆಯ ಮೇರೆಗೆ ಆ ದೇಶದ ಆಡಳಿತ ನಡೆಸಬೇಕು. ಆದರೆ ಅಗತ್ಯವೆನಿಸಿದಾಗ ಆತ ಅದರ ಸಲಹೆಯನ್ನು ತಳ್ಳಿ ತನಗೆ ಸರಿಯೆನಿಸಿದಂತೆ ನಡೆಯಬಹುದು. ಎಂದರೆ ಬ್ರಿಟಿಷ್ ಆಡಳಿತ ಕಾಲದಲ್ಲಿ ಗವರ್ನರ್-ಜನರಲನಿಗೆ ಅತ್ಯುನ್ನತ ಅಧಿಕಾರವಿತ್ತು. ದೂರದಲ್ಲಿ ಇಂಗ್ಲೆಂಡಿನಲ್ಲಿದ್ದ ಪಾರ್ಲಿಮೆಂಟ್ ಹಾಗೂ ಸ್ಟೇಟ್ ಸೆಕ್ರೆಟರಿಗಳ ನಿಯಂತ್ರಣಕ್ಕೆ ಮಾತ್ರ ಇವನು ಒಳಪಟ್ಟಿರುತ್ತಿದ್ದ.


1947ರಲ್ಲಿ ಭಾರತ ಸ್ವಾತಂತ್ರ್ಯ ಕಾಯಿದೆ ಜಾರಿಗೆ ಬಂದಾಗ ಭಾರತದ ಗವರ್ನರ್-ಜನರಲನ ನೇಮಕವೂ ಅಧಿರಾಜ್ಯಗಳ ಗವರ್ನರ್-ಜನರಲರ ನೇಮಕದ ರೀತಿಯಲ್ಲೇ ಆಗಬೇಕಾಯಿತು. ಆದರೆ ರಾಣಿಗೆ ಈ ಬಗ್ಗೆ ಸಲಹೆ ನೀಡಲು ಸಚಿವರು ಇರಲಿಲ್ಲ. ಗವರ್ನರ್-ಜನರಲನ ನೇಮಕವಾಗುವರೆಗೂ ಸಚಿವರು ಅಧಿಕಾರ ಸ್ವೀಕರಿಸುವಂತಿರಲಿಲ್ಲ. ಆಗ ಅನೌಪಚಾರಿಕವಾಗಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ಗಳ ನಾಯಕರೊಂದಿಗೆ ಸಮಾಲೋಚಿಸಿ, ಭಾರತ-ಪಾಕಿಸ್ತಾನಗಳ ಗವರ್ನರ್-ಜನರಲ್ಗಳ ನೇಮಕದ ಬಗ್ಗೆ ಬ್ರಿಟಿಷ್ ಸರ್ಕಾರ ರಾಣಿಗೆ ಸಲಹೆ ಒಪ್ಪಿಸಿತು. ವೈಸ್ರಾಯ್ ಹುದ್ದೆ ಕೊನೆಗೊಂಡಿತು. ಭಾರತ ಸ್ವತಂತ್ರ ಗಣರಾಜ್ಯವಾಗುವವರೆಗೂ ಗವರ್ನರ್-ಜನರಲ್ ಹುದ್ದೆ ಮುಂದುವರೆಯಿತು.


ಭಾರತದಲ್ಲಿ ಅನುಕ್ರಮವಾಗಿ ಗವರ್ನರ್-ಜನರಲ್ಗಳಾಗಿದ್ದವರನ್ನೂ ಅವರ ಅಧಿಕಾರಾವಧಿಗಳನ್ನೂ ಮುಂದೆ ಕೊಡಲಾಗಿದೆ:

ಹೆಸರು ಕಾಲ
ವಾರನ್ ಹೇಸ್ಟಿಂಗ್ಸ್ 1773-1786
ಲಾರ್ಡ್ ಕಾರ್ನ್ವಾಲಿಸ್ 1786-1793
ಸರ್ ಜಾನ್ ಷೋರ್ 1793-1798
ಲಾರ್ಡ್ ವೆಲೆಸ್ಲಿ 1798-1805
ಲಾರ್ಡ್ ಕಾರ್ನ್ವಾಲಿಸ್

(ಎರಡನೆಯ ಬಾರಿ)|| 1805ಜುಲೈ-1805 ಅಕ್ಟೋಬರ್

ಲಾರ್ಡ್ ಮಿಂಟೊ 1807-1813
ಲಾರ್ಡ್ ಹೇಸ್ಟಿಂಗ್ಸ್ 1813-1823
ಲಾರ್ಡ್ ಆಮ್‌ಹರ್ಟ್ಸ್ 1823-1828
ಲಾರ್ಡ್ ವಿಲಿಯಂ ಬೆಂಟಿಂಕ್ 1828-1833
ಲಾರ್ಡ್ ಆಕ್ಲ್ಯಾಂಡ್ 1836-1842
ಲಾರ್ಡ್ ಎಲೆನ್ಬರೊ 1842-1844
ಲಾರ್ಡ್ ಹಾರ್ಡಿಂಜ್ I 1844-1848
ಲಾರ್ಡ್ ಡಾಲ್ಹೌಸಿ 1848-1856
ಲಾರ್ಡ್ ಕ್ಯಾನಿಂಗ್ 1856-1862
ಲಾರ್ಡ್ ಎಲ್ಗಿನ್ I 1862-1863
ಲಾರ್ಡ್ ಲಾರೆನ್ಸ 1864-1869
ಲಾರ್ಡ್ ಮೇಯೊ 1869-1872
ಲಾರ್ಡ್ ನಾರ್ತ್‌ಬ್ರೂಕ್ 1872-1876
ಲಾರ್ಡ್ ಲಿಟನ್ I 1876-1880
ಲಾರ್ಡ್ ರಿಪನ್ 1880-1884
ಲಾರ್ಡ್ ಡಫರಿನ್ 1884-1888
ಲಾರ್ಡ್ ಲ್ಯಾನ್ಸ್‌ಡೌನ್ 1888-1894
ಲಾರ್ಡ್ ಎಲ್ಗಿನ್ I 1894-1899
ಲಾರ್ಡ್ ಕರ್ಜ಼ನ್ 1899-1904
ಲಾರ್ಡ್ ಮಿಂಟೊ II 1905-1910
ಲಾರ್ಡ್ ಹಾರ್ಡಿಂಜ್ II 1910-1916
ಲಾರ್ಡ್ ಜೆಮ್ಸ್‌ಫರ್ಡ್ 1916-1921
ಲಾರ್ಡ್ ರೀಡಿಂಗ್ 1921-1925
ಲಾರ್ಡ್ ಇರ್ವಿನ್ 1925-1931
ಲಾರ್ಡ್ ವಿಲಿಂಗ್ಡನ್ 1931-1935
ಲಾರ್ಡ್ ಲಿನ್ಲಿತ್‌‌ಗೊ 1936-1943
ಲಾರ್ಡ್ ವೇವೆಲ್ 1943-1947
ಲಾರ್ಡ್ ಮೌಂಟ್‌ಬ್ಯಾಟನ್ 1947-1948
ಸಿ. ರಾಜಗೋಪಾಲಾಚಾರಿ 1948-1950