ಗಾಲ್ ಸಂಪಾದಿಸಿ

ಈಗಿನ ಫ್ರಾನ್ಸ್, ಬೆಲ್ಜಿಯಂಗಳನ್ನೂ ಜರ್ಮನಿ, ಹಾಲೆಂಡ್, ಸ್ವಿಟ್ಜರ್ಲೆಂಡ್ಗಳ ಭಾಗಗಳನ್ನೂ ಒಳಗೊಂಡ ಪ್ರದೇಶದ ಪ್ರಾಚೀನ ನಾಮ. ಉತ್ತರ ಇಟಲಿಯೂ ಸೇರಿದಂತೆ ಈ ಇಡೀ ಭಾಗವನ್ನು ರೋಮನ್ನರು ಗಾಲ್ ಎಂದು ಕರೆಯುತ್ತಿದ್ದರು. ಪ್ರ.ಶ.ಪು. 58-51ರಲ್ಲಿ ನಡೆದ ಗಾಲಿಕ್ ಯುದ್ಧಗಳಲ್ಲಿ ಜೂಲಿಯಸ್ ಸೀಸರ್ ಈ ಭಾಗವನ್ನು ಗೆದ್ದ. ವಿಸ್ತೃತವಾದ ಗಾಲ್ ಪ್ರದೇಶದ ಎರಡು ವಿಭಾಗಗಳ ಪೈಕಿ ಆಲ್ಪ್ಸಪರ್ವತದ ಉತ್ತರಕ್ಕಿದ್ದ ವಿಭಾಗವನ್ನು ಟ್ರಾನ್ಸ ಆಲ್ಪೈನ್ (ಆಲ್ಪ್ಸಿನಾಚೆಯ) ಗಾಲ್ ಎಂದೂ ದಕ್ಷಿಣಕ್ಕಿದ್ದ ಜಿಲ್ಲೆಯನ್ನು ಸಿಸ್ಆಲ್ಪೈನ್ (ಆಲ್ಪ್ಸಿನೀಚೆಯ) ಗಾಲ್ ಎಂದೂ ಕರೆಯುತ್ತಿದ್ದರು. ಟ್ರಾನ್ಸಆಲ್ಪೈನ್ಗಾಲ್ ರೂಢಿಯಲ್ಲಿ ಗಾಲ್ ಎನಿಸಿಕೊಂಡಿತು. ಈಗಿನ ಫ್ರನ್ಸ್ ನನ್ನು ಕೆಲವು ವೇಳೆ ಗಾಲ್ ಎಂದು ಕರೆಯುವುದುಂಟು.