ಗಾಳಿಪಟ

ಸಂಪಾದಿಸಿ

ನೆಲದೆಡೆಗೆ ಸಾಗಿರುವ ಉದ್ದವಾದ ದಾರದ ಒಂದು ಕೊನೆಗೆ ಬಂಧಿತವಾಗಿರುವ ಹಾರಾಟ ಸಾಧನ (ಕೈಟ್) ಗಾಳಿಪಟ ಹಾರಿಸುವಾತ ನೆಲದ ಮೇಲೆ ನಿಂತು ಇಲ್ಲವೇ ಚಲಿಸುತ್ತ, ದಾರವನ್ನು ಹಿಡಿದು ಜಗ್ಗುವುದರ ಅಥವಾ ಸಡಿಲಬಿಡುವುದರ ಮೂಲಕ ಗಾಳಿಪಟವನ್ನು ನಿಯಂತ್ರಿಸುತ್ತಾನೆ. ಇದರಿಂದ ಮತ್ತು ವಾಯುವಿಗೆ ಸಹಜವಾಗಿ ಇರಬಹುದಾದ ಚಲನೆಯಿಂದ ಜನಿಸುವ ವಾಯುವಿನ ಸಾಪೇಕ್ಷಚಲನೆ ಉತ್ಪಾದಿಸುವ ವಾಯುಗತೀಯ ಬಲಗಳು ಗಾಳಿಪಟಕ್ಕೆ ಅದರ ದಾರದ ಸಮೇತ ಸಮತೋಲವನ್ನು ಕಾಪಾಡಿಕೊಳ್ಳಲು ಬೇಕಾದ ಆಧಾರವನ್ನು ಒದಗಿಸುತ್ತವೆ. ವಾಯುವನ್ನು ಕೆಳಮುಖವಾಗಿ ವಿಚಲನೆಗೊಳಿಸುವುದರಿಂದ ಗಾಳಿಪಟವನ್ನು ಮೇಲೆತ್ತಲು ಬೇಕಾಗುವ ನೆಗಪುಬಲ (ಲಿಫ್ಟಿಂಗ್ ಫೋರ್ಸ್) ಒದಗಿಬರುತ್ತದೆ. ಇದರ ಪರಿಣಾಮವಾಗಿ ಸಂವೇಗದಲ್ಲಿ (ಮೊಮೆಂಟಂ) ಉಂಟಾಗುವ ಬದಲಾವಣೆ ಮೇಲ್ಮುಖಬಲವನ್ನು ಗಾಳಿಪಟದ ಮೇಲೆ ಪ್ರಯುಕ್ತಿಸುತ್ತದೆ. ಆದ್ದರಿಂದ ಒಂದು ಗಾಳಿಪಟ ಯಶಸ್ವಿ ಆಗಬೇಕಾದರೆ ಅತ್ಯಂತ ಕಡಿಮೆ ರೆಕ್ಕೆ ಹೊರೆ (ವಿಂಗ್ ಲೋಡಿಂಗ್) ಎಂದರೆ ತೂಕ/ವಿಸ್ತೀರ್ಣ ಇರಬೇಕು. ಅಲ್ಲದೇ ಅದರ ನೆಗಪು-ವಿಕರ್ಷಣ (ಲಿಫ್ಟ-ಡ್ರ್ಯಾಗ್) ನಿಷ್ಪತ್ತಿ (ರೇಷಿಯೊ) ಸಾಧ್ಯವಾಗುವಷ್ಟು ದೊಡ್ಡದಾಗಿರಬೇಕು. ಒಂದು ಗಾಳಿಪಟಕ್ಕೆ ಈ ನಿಷ್ಪತ್ತಿ ಹಾಗೂ ಸ್ಥಿರತೆ (ಸ್ಟೆಬಿಲಿಟಿ) ಎರಡೂ ದಾರದ ಉದ್ದವನ್ನು ಅವಲಂಬಿಸಿರುವ ಉತ್ಪನ್ನಗಳು (ಫಂಕ್ಷನ್್ಸ). ದಾರವನ್ನು ಹೆಚ್ಚು ಹೆಚ್ಚು ಸಡಿಲ ಬಿಟ್ಟಂತೆ ಹೆಚ್ಚು ಹೆಚ್ಚು ವಿಕರ್ಷಣ (ಡ್ರ್ಯಾಗ್) ಉಂಟಾಗುತ್ತದೆ. ಹೀಗೆ ಅಧಿಕಗೊಂಡ ವಿಕರ್ಷಣವೂ ಗಾಳಿಪಟ ಮತ್ತು ದಾರದ ಒಟ್ಟು ತೂಕವೂ ಸೇರಿ ಗಾಳಿಪಟ ಕೆಳಮುಖವಾಗಿ ಜೋಲುವಂತೆ ಮಾಡುತ್ತವೆ. ಆದ್ದರಿಂದ ಒಂದು ಗಾಳಿಪಟವನ್ನು ಅನಿರ್ಬಂಧಿತವಾಗಿ ಮೇಲೆ ಮೇಲೆ ಏರಿಸಲು ಸಾಧ್ಯವಿಲ್ಲ ಎಂಬುದು ಸಿದ್ಧವಾಗುತ್ತದೆ.

ಗಾಳಿಪಟ ಹಾರಿಸುವುದು ಜಗತ್ತಿನಲ್ಲಿ ಒಂದು ವಿಶೇಷ ಬಗೆಯ ಆಟ. ಭಾರತೀಯರಿಗೂ ಇದರ ಬಗ್ಗೆ ಹೆಚ್ಚಾದ ಒಲವುಂಟು. ಬಹಳಮಟ್ಟಿಗೆ ಈ ಆಟ ಬಾಲಕರಿಗೆ ಮೀಸಲಾದುದಾದರೂ ದೊಡ್ಡವರೂ ಭಾಗವಹಿಸುವುದುಂಟು. ಹಳ್ಳಿಗಳಲ್ಲೆಂತೊ ಅಂತೆಯೇ ಪಟ್ಟಣಗಳಲ್ಲೂ ಇದು ರೂಢಿಯಲ್ಲಿದೆ. ಗಾಳಿಪಟ ಹಾರಿಸುವುದು ಹೇಗೆ ಒಂದು ಮನೋರಂಜಕ ಆಟವೋ ಹಾಗೆ ಅದನ್ನು ಕಟ್ಟುವುದು ಒಂದು ಕುಶಲ ಕಲೆಯೂ ಹೌದು. ಕಡ್ಡಿಗಳನ್ನು ಒಂದು ಗೊತ್ತಾದ ಆಕೃತಿಯಲ್ಲಿ ಕಟ್ಟಿ, ಅದಕ್ಕೆ ಬಣ್ಣಬಣ್ಣದ ಕಾಗದವನ್ನು ಅಂಟಿಸಿ ಗಾಳಿಪಟವನ್ನು ತಯಾರಿಸುತ್ತಾರೆ. ಅನಂತರ ಅದಕ್ಕೊಂದು ಸೂತ್ರ ಕಟ್ಟಿ ಪಟಕ್ಕೆ ಅನುಕೂಲವಾದ ಬಾಲಂಗೋಚಿಯೊಂದನ್ನು ಹೊಂದಿಸಿ ದಾರ ಕಟ್ಟಿ ಗಾಳಿಯಲ್ಲಿ ಹಾರಿಸುತ್ತಾರೆ. ಗಾಳಿಯ ಪಟದ ಆಕಾರ ಪಟದಂತಿದ್ದು ಅದು ಗಾಳಿಯಲ್ಲಿ ಹಾರುವುದರಿಂದ ಇದಕ್ಕೆ ಗಾಳಿಪಟ ಎಂಬ ಹೆಸರು ಬಂದಿದೆ. ಪಟ ಗಾಳಿಯಲ್ಲಿ ನಾಗರಹಾವಿನ ಹೆಡೆಯ ಹಾಗೆ ಮೇಲಕ್ಕೂ ಕೆಳಕ್ಕೂ ಅಕ್ಕಕ್ಕೂ ಪಕ್ಕಕ್ಕೂ ಬಾಗಿ, ಬಳುಕಿ, ತೂಗಿ ನಲಿಯುವುದರಿಂದ ನೋಡುವವರಿಗೆ ರಂಜಕವಾಗಿರುತ್ತದೆ. ದೊರೆತಿರುವ ಒಂದು ಸಂಪ್ರದಾಯದ ಆಧಾರದ ಮೇಲೆ ಪ್ರ.ಶ.ಪು. 4ನೆಯ ಶತಮಾನದಲ್ಲಿ ಆರ್ಕಿಟಾಸ್ ಎಂಬ ಗ್ರೀಕ್ ವಿಜ್ಞಾನಿ ಗಾಳಿಪಟವನ್ನು ಮೊದಲ ಬಾರಿಗೆ ರೂಪಿಸಿದನೆಂದು ಗೊತ್ತಾಗಿದೆ. ಆದರೆ ಪಟಹಾರಿಸುವ ಹವ್ಯಾಸ ಏಷ್ಯನ್ ಜನತೆಯಲ್ಲಿ ಗುರುತು ಸಿಗದ ಎಷ್ಟೋ ಕಾಲದಿಂದ ಪ್ರಚಲಿತವಿತ್ತೆಂದು ಊಹಿಸಬಹುದಾಗಿದೆ. ಅಲ್ಲದೆ ಕೊರಿಯ, ಚೀನ, ಜಪಾನ್, ಮತ್ತು ಮಲಯ ದೇಶಗಳಲ್ಲಿ ಗಾಳಿಪಟ ಹಾರಿಸುವುದು ಬಹಳ ಕಾಲದವರೆಗೆ ರಾಷ್ಟ್ರೀಯ ಆಟವಾಗಿ ಖ್ಯಾತಿಯನ್ನು ಪಡೆದಿತ್ತು. ರಾತ್ರಿ ವೇಳೆಯಲ್ಲಿ ಮನೆಗಳ ಮೇಲೆ ಗಾಳಿಪಟ ಹಾರಿಸುವುದರಿಂದ ದುಷ್ಟಶಕ್ತಿಗಳನ್ನು ದೂರಕ್ಕೆ ತಳ್ಳಬಹುದು ಎಂಬ ನಂಬಿಕೆಯೂ ಜನರಲ್ಲಿತ್ತು. ಏಷ್ಯಖಂಡದಲ್ಲಿ ಕೆಲವು ಸಂದರ್ಭಗಳಲ್ಲಿ ಪಟ ಹಾರಿಸುವುದು ಒಂದು ಬಗೆಯ ಧಾರ್ಮಿಕ ಸಂಕೇತವಾಗಿತ್ತು. ಕರ್ನಾಟಕದ ಕೆಲವು ಕಡೆ ಆಷಾಢದ ಏಕಾದಶಿಯ ಸಮಯದಲ್ಲಿ ಗಾಳಿಪಟದ ಹಬ್ಬವನ್ನು ಆಚರಿಸುತ್ತಾರೆ. ಇದನ್ನು ಪಟದ ಹಬ್ಬ ಎಂದು ಕರೆಯುವುದು ರೂಢಿ. ಈ ಹಬ್ಬದ ದಿನ ಮನೆಯನ್ನು ಸಾರಿಸಿ ಗುಡಿಸಿ, ಸ್ವಚ್ಛಮಾಡಿ ಉಪವಾಸವಿರುತ್ತಾರೆ. ಸಂಜೆ ಗಂಡಸರು ಮತ್ತು ಮಕ್ಕಳು ಬಯಲಿಗೆ ಹೋಗಿ ಪಟ ಹಾರಿಸುತ್ತಾರೆ. ರಾತ್ರಿ ಎಲ್ಲರೂ ದೇವರನ್ನು ಪುಜಿಸಿ ಫಲಾಹಾರ ಸೇವಿಸುತ್ತಾರೆ. ಕರ್ಣಾಟಕದ ಕೆಲವು ಜಿಲ್ಲೆಗಳಲ್ಲಿ ಅಳಿಯ ಮನೆ ಬಂದಾಗ ತಿಂಡಿಯ ಬುಟ್ಟಿಯಲ್ಲಿ ಗಾಳಿಪಟವನ್ನೂ ಇಟ್ಟುಕೊಡುತ್ತಾರೆ. ಗಾಳಿಪಟದ ಮುಖ್ಯ ಉಪಯೋಗ ಮನೋರಂಜನೆಯಾದರೂ ಇದರ ಇತರ ಉಪಯೋಗಗಳೂ ಗಮನಾರ್ಹವಾಗಿವೆ. ಕವಿಗಳು ಪಟವನ್ನು ಮಾನವನ ಅನಿಶ್ಚಿತ ಗತಿಗೆ ಸಂಕೇತವಾಗಿ ಬಳಸಿರುವುದುಂಟು. ಹಿಂದೆ ಕೆಲವು ದೇಶಗಳಲ್ಲಿ ಗಾಳಿಪಟವನ್ನು ಯುದ್ಧಭೂಮಿಯಲ್ಲಿ ಸಂಕೇತವಾಗಿ ಬಳಸುತ್ತಿದ್ದರು. ದೊಡ್ಡ ದೊಡ್ಡ ಪಟಗಳಿಗೆ ಕ್ಯಾಮರಾಗಳನ್ನು ಕಟ್ಟಿ ಸುಂದರವಾದ ಭೂಪ್ರದೇಶಗಳ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದುದೂ ಉಂಟು. 1860 ರಿಂದ 1901ರಲ್ಲಿ ಗಾಳಿಪಟವನ್ನು ಹಲವಾರು ವೈಜ್ಞಾನಿಕ ಉದ್ದೇಶಗಳಿಗಾಗಿ ಬಳಸಿದ್ದಾರೆ. ಏರೋನಾಟಿಕ್ಸ್, ತಂತಿರಹಿತ ದೂರಸಂಪರ್ಕ ಹಾಗೂ ಫೋಟೋಗ್ರಫಿಗಳಲ್ಲಿ ಬಳಸುತ್ತಿದ್ದರು.

1752ರಲ್ಲಿ ಬೆಂಜಮಿನ್ ಫ್ರಾಂಕ್ಲಿನ್ ಎಂಬ ವಿಜ್ಞಾನಿ ಗಾಳಿಪಟಕ್ಕೆ ಲೋಹದ ಬೀಗದ ಕೈಯನ್ನು ತೂಗುಹಾಕಿ, ಪ್ರಚಂಡ ಬಿರುಗಾಳಿಯಲ್ಲಿ ವಿದ್ಯುಚ್ಛಕ್ತಿಯನ್ನು ಆಕರ್ಷಿಸಿ ಅದರಲ್ಲಿನ ಬೆಳಕಿನ ಗುಣವನ್ನು ತೋರಿಸಿಕೊಟ್ಟ. ಗಾಳಿಪಟವನ್ನು ಅನೇಕ ವರ್ಷಗಳ ವರೆಗೆ ವಾಯುಮಂಡಲ ಪರಿಶೀಲನೆಗೆ ಸಹಾಯಕ ಸಾಧನವಾಗಿ ಬಳಸುತ್ತಿದ್ದರು. ಗೊತ್ತಾದ ಯಂತ್ರವನ್ನು ಬಹಳ ಎತ್ತರವಾದ ಪ್ರದೇಶಕ್ಕೆ ಪಟದ ಮೂಲಕವಾಗಿ ಏರಿಸಿ ಅಲ್ಲಿನ ಹವೆಯ ಸ್ಥಿತಿಯನ್ನು ಗುರುತಿಸುತ್ತಿದ್ದರು. ಹೀಗೆ ಯಾವುದೇ ಪಟ ಹಾರಿದ ಅತ್ಯಂತ ದೊಡ್ಡ ಎತ್ತರ 23,835 ಅಡಿಗಳಾಗಿದೆ. ವಿಮಾನ ಮತ್ತು ಬಲೂನುಗಳ ಬಳಕೆಯಿಂದಾಗಿ ಅಮೆರಿಕನರು 1931ರ ತರುವಾಯ ಗಾಳಿಪಟವನ್ನು ವಾಯುಮಂಡಲ ಶಾಸ್ತ್ರದ ಸಾಧನ ಸಾಮಗ್ರಿಯನ್ನಾಗಿ ಬಳಸುವುದನ್ನು ನಿಲ್ಲಿಸಿಬಿಟ್ಟರು. ಆದರೆ 20ನೆಯ ಶತಮಾನಕ್ಕೆ ಮುಂಚೆ ಕೆಲವು ದೇಶಗಳಲ್ಲಿ ದೊಡ್ಡ ದೊಡ್ಡ ಪಟಗಳ ಮೂಲಕವಾಗಿ ಮಾನವನನ್ನು ಆಕಾಶಕ್ಕೇರಿಸುವ ಪ್ರಯತ್ನಗಳು ನಡೆದವು. ಇದು ಸೈನಿಕ ಇಲಾಖೆಯವರ ಪ್ರಯತ್ನವಾಗಿತ್ತು. ಮಿಲಿಟರಿ ಶಕ್ತಿಯನ್ನು ಹೊಂದಿದ್ದ ಕೆಲವು ದೊಡ್ಡ ರಾಷ್ಟ್ರಗಳು ವಿಮಾನದ ಕಂಡುಹಿಡಿಯುವಿಕೆಯಿಂದಾಗಿ ಪಟಗಳಲ್ಲಿ ನಡೆಸುತ್ತಿದ್ದ ಪ್ರಯೋಗಗಳನ್ನು ನಿಲ್ಲಿಸಿಬಿಟ್ಟವು. ಪ್ರಪಂಚಾದ್ಯಂತ ಗಾಳಿಪಟ ಉತ್ಸವವು ಆಚರಿಸಲ್ಪಡುತ್ತದೆ. ಏಷ್ಯಖಂಡದಲ್ಲಿ ಗಾಳಿಪಟ ಪಂದ್ಯಗಳು ನಡೆಯುತ್ತವೆ. ಆಫ್ಘಾನಿಸ್ತಾನದಲ್ಲಿ ನಡೆಯುವ ಗಾಳಿಪಟ ಪಂದ್ಯವನ್ನು ಗುರಿ ಪರಣ್ಬಾಜಿ ಎನ್ನುತ್ತಾರೆ. ಈ ಪಂದ್ಯಗಳನ್ನಾಡುವ ಕೆಲವರು ಗಾಳಿಪಟದ ದಾರಕ್ಕೆ ಗ್ಲಾಸ್ಪೌಡರ್ ಹಾಗೂ ಗ್ಲೂಗಳನ್ನು ಹಾಕಿರುತ್ತಾರೆ. ಇದರಿಂದ ತಮ್ಮ ವಿರೋಧಿ ಬಣದ ಗಾಳಿಪಟದ ದಾರವನ್ನು ಬೇಗ ಕತ್ತರಿಸಲು ಸಹಾಯವಾಗುತ್ತದೆ.

ಪಾಕಿಸ್ತಾನದಲ್ಲಿ ಇದನ್ನು ಗುರಿಬಾಜಿ ಅಥವಾ ಪಂತಗ್ಬಾಜಿ ಅನ್ನುತ್ತಾರೆ. ಗಾಳಿಪಟದ ಪಂದ್ಯ ಇಡೀ ಪಾಕಿಸ್ತಾನದಲ್ಲಿ ಪ್ರಸಿದ್ಧವಾಗಿದೆ. ವಿಯೆಟ್ನಾಂನಲ್ಲಿ ಗಾಳಿಪಟಕ್ಕೆ ಬಾಲಂಗೋಚಿ ಬದಲು ಸಣ್ಣ ಕೊಳಲುಗಳನ್ನು ಕಟ್ಟಿರುತ್ತಾರೆ. ಪಟಗಾಳಿಯಲ್ಲಿ ಹಾರಿದಾಗ ‘ಹಂ’ ಎನ್ನುವ ಸಂಗೀತದ ಸ್ವರ ಕೇಳುತ್ತದೆ. ದಕ್ಷಿಣ ಅಮೆರಿಕದ ಚಿಲಿಯಲ್ಲಿ ಗಾಳಿಪಟ ಉತ್ಸವ ಬಹಳ ಪ್ರಸಿದ್ಧವಾಗಿದ್ದು, ಸ್ವಾತಂತ್ರ್ಯೋತ್ಸವದ ದಿನ ಸೆಪ್ಟೆಂಬರ್ 18ರಂದು ವಿಶೇಷವಾಗಿ ಆಚರಿಸಲ್ಪಡುತ್ತದೆ. ಗಯಾನದಲ್ಲಿ ಈಸ್ಟರ್ ದಿನದಂದು ಧಾರ್ಮಿಕ ಗುಂಪುಗಳು ಹಾಗೂ ಬುಡಕಟ್ಟು ಜನಾಂಗದವರು ಸೇರಿ ಗಾಳಿಪಟ ಹಾರಿಸುವ ಉತ್ಸವದಲ್ಲಿ ಭಾಗವಹಿಸುತ್ತಾರೆ. ಗಾಳಿಪಟಗಳಲ್ಲಿ ಅನೇಕ ಬಗೆಯ ಪ್ರತಿರೂಪಗಳನ್ನು ಕಾಣಬಹುದು. ಮುಖ್ಯವಾಗಿ ಪ್ರಸಿದ್ಧವಾದ ಮೂರು ಬಗೆಗಳನ್ನಿಲ್ಲಿ ವಿವರಿಸಿದೆ.

  1. ಷಟ್ಕೋಣಾಕೃತಿಯ ಪಟಗಳು: ಈ ಪಟಕ್ಕೆ ಆರು ಮುಖಗಳು (ಕೋನಗಳು) ಇರುವುದರಿಂದ ಇದನ್ನು ಷಟ್ಕೋಣಾಕೃತಿಯ ಪಟ ಎಂಬುದಾಗಿ ಕರೆಯುತ್ತಾರೆ. ಇದಕ್ಕೆ ಮೂರು ಕಡ್ಡಿಗಳನ್ನು ರಚನೆಯ ಸಾಧನವಾಗಿ ಬಳಸುವುದರಿಂದ ಇದನ್ನು ಮೂರು ಕಡ್ಡಿಯ ಪಟ ಎಂದೂ ಕರೆವುದಿದೆ. ಇದರ ರಚನೆಗೆ ಬಳಸುವ ಮೂರು ಕಡ್ಡಿಗಳೂ ಒಂದೇ ಅಳತೆಯವಾಗಿರುತ್ತವೆ. ಇವನ್ನು ಅಡ್ಡಡ್ಡಲಾಗಿ ಸೇರಿಸಿ ಒಳ್ಳೆಯ ಹೊಂದಾಣಿಕೆಯೊಂದಿಗೆ ದಾರದ ಸಹಾಯದಿಂದ ಭದ್ರವಾಗಿ ಕಡ್ಡಿಗಳ ಮಧ್ಯದಲ್ಲಿಯೂ ಮತ್ತು ಅಂಚಿನಲ್ಲಿಯೂ ಕಟ್ಟ ಲಾಗುತ್ತದೆ. ಅನಂತರ ಇಡೀ ರಚನೆಯನ್ನು ಹಗುರವಾದ ಕಾಗದ ಮುಂತಾದ ವಸ್ತುಗಳನ್ನು ಹೊಂದಿಸಿ ಅಂಟಿಸಲಾಗುತ್ತದೆ. ಬಳಿಕ ಪಟದ ಕೆಳಗಡೆಯ ಎರಡು ಕೋನಬಿಂದುಗಳಿಗೆ ಸೇರಿದ ವಂಕಿ ಯೊಂದಕ್ಕೆ ಬಾಲವನ್ನು ತೂಗು ಬಿಡುತ್ತಾರೆ. ಪಟವನ್ನು ಗಾಳಿಗೆ ಒಡ್ಡಿ ಹಾರಿಸಲು ಸಹಾಯಕವಾಗುವಂತೆ ಅದರ ಮಧ್ಯಕ್ಕೆ ಸೂತ್ರದ ಹುರಿ ಯೊಂದನ್ನು ಕಟ್ಟುತ್ತಾರೆ. ಆ ಹುರಿ ಅನೇಕ ಪಾದಗಳಿಂದ ಕೂಡಿದ್ದು, ಆ ಪಾದಗಳು ಪಟದ ಅಂಚಿನ ನಾನಾ ಸಂದುಗಳನ್ನು ಬಂಧಿಸಿ ಇರುತ್ತವೆ. ಆ ಪಾದಗಳ ಉದ್ದ ಪಟದ ಒಟ್ಟು ಉದ್ದದ ಅರ್ಧದಷ್ಟು.
  2. ವಜ್ರಾಕೃತಿಯ ಪಟ: ವಜ್ರಾಕೃತಿಯನ್ನು ಹೋಲುವುದ ರಿಂದ ಈ ಪಟಕ್ಕೆ ಈ ಹೆಸರು. ಇದರಲ್ಲಿ ಸಮಾನ ಅಳತೆಯ ಎರಡು ಕಡ್ಡಿಗಳನ್ನು ಅಡ್ಡಡ್ಡಲಾಗಿ ಸೇರಿಸಿ ಮಧ್ಯದಲ್ಲಿ ದಾರದ ಸಹಾಯದಿಂದ ಬಲವಾಗಿ ಕಟ್ಟಿರುತ್ತಾರೆ. ಇದಕ್ಕೆ ಕಟ್ಟಿದ ಸೂತ್ರಕ್ಕೆ (ಮೂಗುದಾರ) ಎರಡು ಪಾದಗಳು ಇವೆ. ಒಂದು ಪಾದವನ್ನು ಪಟದ ಮೇಲ್ಭಾಗದ ಬಿಂದುವಿಗೂ ಇನ್ನೊಂದು ಪಾದವನ್ನು ಪಟದ ಕೆಳಭಾಗದ ಬಿಂದುವಿಗೂ ಸೇರಿಸಿ ಕಟ್ಟಲಾಗಿರುತ್ತದೆ.
  3. ಪೆಟ್ಟಿಗೆ ಪಟ: ಇದನ್ನು 1890ರಲ್ಲಿ ಆಸ್ಟ್ರೇಲಿಯ ದೇಶದ ಲಾರೆನ್್ಸ ಹಾರ್ಗ್ರೇವ್ ಎಂಬಾತ ಕಂಡುಹಿಡಿದ. ಇದು ಸಮಚತುಷ್ಕೋಣಾಕೃತಿಯಲ್ಲಿದ್ದು ರಚನೆಯಲ್ಲಿ ಪೆಟ್ಟಿಗೆಯನ್ನು ಹೋಲುವುದರಿಂದ ಇದನ್ನು ಪೆಟ್ಟಿಗೆ ಪಟ ಎಂದು ಕರೆಯಲಾಗಿದೆ. ಇದರಲ್ಲಿ ಚೌಕಾಕೃತಿಯ ಎರಡು ಮೈಕಟ್ಟಿನ ರಚನೆ ಉಂಟು. ಉದ್ದ ಮತ್ತು ಅಗಲ ಒಂದೇ ಅಳತೆಯದು. ಪಟದ ಮೈಕಟ್ಟಿನ ಅಂಚಿಗೆ ಯಾವ ಬಗೆಯ ಹೊದಿಕೆಯೂ ಇರುವುದಿಲ್ಲ. ಸೂತ್ರ ಪಟದ ಮೈಕಟ್ಟಿನ ಮೇಲ್ಭಾಗದ ಮಧ್ಯದಲ್ಲಿ ಲಂಬವಾಗಿ ಸೇರಿರುವ ಕಡ್ಡಿಗಳನ್ನು ತನ್ನೆರಡು ಪಾದಗಳಿಂದ ಬಂಧಿಸಿರುತ್ತದೆ. ಪಟ ಗಾಳಿಯಲ್ಲಿ ಏಕಮುಖ ಕೋನದಿಂದ ನಿರಾಯಾಸವಾಗಿ ತೇಲುತ್ತದೆ. ಇದಕ್ಕೆ ಬಾಲದ ಅಗತ್ಯವಿಲ್ಲ. ಸೂತ್ರದಲ್ಲಿ ನಾಲ್ಕು ಪಾದಗಳು ಇದ್ದಾಗ ಪಟ ವಿಶಾಲವಾಗಿ ಎಲ್ಲ ಕಡೆಯೂ ಹಾರಲು ಅನುಕೂಲವಾಗುತ್ತದೆ. ಇದರಲ್ಲಿ ತ್ರಿಕೋನಪಟ, ದುಂಡುಪಟ (ಕೊಳವೆ ಆಕೃತಿಯ ಪಟ) ಮತ್ತು ಷಟ್ಕೋಣಾಕೃತಿಯ ಪಟಗಳನ್ನು ರಚಿಸುವುದೂ ಸಾಧ್ಯ.

ಇತ್ತೀಚೆಗೆ ಹಕ್ಕಿ ಆಕೃತಿಯಲ್ಲಿ, ಮನುಷ್ಯಾಕೃತಿಯಲ್ಲಿ, ದೋಣಿಯಾಕೃತಿಯಲ್ಲಿ, ಚಿಟ್ಟೆಯಾಕೃತಿಯಲ್ಲಿ ಪಟಗಳನ್ನು ರಚಿಸಿರುವ ನಿದರ್ಶನಗಳಿವೆ. ಡ್ರೇಗನ್ ಮಾದರಿ ಚೀನದ ಅಚ್ಚುಮೆಚ್ಚಿನ ಪಟದಾಕೃತಿಯಾಗಿದೆ. ಕನ್ನಡದಲ್ಲಿ ಗಾಳಿಪಟ ಎಂಬ ಹೆಸರಿನಲ್ಲಿಯೇ ಪ್ರಬಂಧ ಸಂಕಲನವೊಂದನ್ನು ಪ್ರಕಟಿಸಿರುವ ರಾ. ಕು. ಅವರು ತಮ್ಮ ಕೃತಿಯಲ್ಲಿ ಚೌಕುಪಟ, ಬುಗಲಿ, ಕಿಳ್ಳಿಕೇತ (ರೊಯ್ ಪಟ), ಜೋಡು ಪಟಗಳನ್ನು ಹೆಸರಿಸಿ ಅವುಗಳ ವಿಶಿಷ್ಟತೆಯನ್ನು ತಿಳಿಸಿದ್ದಾರೆ. ಅಲ್ಲದೆ ಗಾಳಿಪಟಕ್ಕೆ ಕೋತಿಪಟ ಎಂಬ ಹೆಸರಿರುವುದನ್ನು ಅವರು ತಿಳಿಸಿದ್ದಾರೆ.

ಗಾಳಿಪಟದ ರಚನೆಯ ಬಗ್ಗೆ ಒಂದೆರಡು ಅಂಶಗಳನ್ನು ಅಗತ್ಯವಾಗಿ ಗಮನಿಸ ಬಹುದಾಗಿದೆ. ಕಡ್ಡಿಗಳು ಸೇರುವ ಸಂದುಗಳನ್ನು ದಪ್ಪ ಹುರಿಯಿಂದ ಒಂದೆರಡು ಸುತ್ತು ಗಂಟುಹಾಕುವುದಕ್ಕಿಂತ ಸಣ್ಣ ದಾರದಲ್ಲಿ ಅನೇಕ ಸುತ್ತು ಬಳಸಿ ಗಂಟು ಹಾಕುವುದು ಉತ್ತಮ. ದಪ್ಪ ಹುರಿಯಲ್ಲಿ ಗಂಟು ಹಾಕುವುದರಿಂದ ಕಡ್ಡಿಗಳು ಜಾರಿಗೋಗುವ ಸಂಭವ ಉಂಟು. ಈ ಸಂದುಗಳನ್ನು ಸೇರಿಸಿ ಭದ್ರಪಡಿಸಲು ಕೆಲವು ಸಾರಿ ಗೋಂದು (ಮೇಣ), ಅರಗು, ವಜ್ರ ಮೊದಲಾದ ಅಂಟುವ ಪದಾರ್ಥಗಳನ್ನು ಬಳಸುತ್ತಾರೆ. ಪಟದ ಪ್ರಮುಖ ಸಾಧನಗಳಲ್ಲಿ ಬಾಲವೂ ಒಂದು. ಇದನ್ನು ಗಾಳಿಗೆ ಪ್ರತಿರೋಧಕ ಶಕ್ತಿಯಾಗಿ ಉಪಯೋಗಿಸುತ್ತಾರೆಯೆ ಹೊರತು ತೂಕಕ್ಕಾಗಿ ಅಲ್ಲ. ಮನೆ, ಕಂಬ, ಮರ ಮೊದಲಾದ ಅಡಚಣೆಗಳಿಲ್ಲದ ಬಂiÀÄಲು ಪ್ರದೇಶ ಪಟ ಹಾರಿಸಲು ಒಳ್ಳೆಯ ಸ್ಥಳ. ಗಾಳಿ ಹೆಚ್ಚು ರಭಸದಿಂದ ಬೀಸಿದರೆ ಪಟ ಜೋಲಿ ಹೊಡೆದು ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಉಂಟು. ಅಥವಾ ತೀರ ಮಂದಗತಿಯಲ್ಲಿ ಬೀಸಿದರೆ ಪಟ ಮೇಲೇರದೆಯೂ ಹೋಗಬಹುದು.

ಸಾಮಾನ್ಯವಾಗಿ ಪಟವನ್ನು ಗಾಳಿ ಬೀಸುವ ದಿಕ್ಕಿಗೆ ಪ್ರತಿಮುಖವಾಗಿ ಹಾರಿಸುತ್ತಾರೆ. ಉದಾಹರಣೆಗೆ, ಪುರ್ವದಿಂದ ಪಶ್ಚಿಮದ ಕಡೆಗೆ ಗಾಳಿ ಬೀಸುತ್ತಿದ್ದರೆ ಪುರ್ವದ ಕಡೆಗೆ ದಾರ ಹಿಡಿದುಕೊಂಡು ಓಡುತ್ತಾರೆ. ಪಟದ ಗಾತ್ರಕ್ಕೆ ಅನುಗುಣವಾಗಿ ಅದನ್ನಾಡಿಸುವ ದಾರದ ಗಾತ್ರವೂ ಇರಬೇಕಾಗುತ್ತದೆ. ಏಕೆಂದರೆ ತುಂಬ ದೊಡ್ಡ ಪಟವನ್ನು ನೂಲೆಳೆಯಲ್ಲಿ ಆಡಿಸಲು ಹೋದಾಗ ದಾರ ತುಂಡಾಗಿ ಪಟ ಭೂಮಿಗೆ ಬಿದ್ದುಹೋಗುತ್ತದೆ. ವಿದ್ಯುತ್ ತಂತಿಗಳಿರುವಲ್ಲಿ ಪಟವನ್ನು ಹಾರಿಸುವುದು ಅಪಾಯಕರ. ಗಾಳಿಪಟದ ಮುಖ್ಯ ಉಪಯೋಗ ಮನೋರಂಜನೆ. ಇದು ಮನಸ್ಸಿಗೆ ಹರ್ಷವನ್ನೂ ಉಲ್ಲಾಸವನ್ನೂ ತಂದುಕೊಡುತ್ತದೆ. ಈಗಲೂ ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಗಾಳಿಪಟಗಳನ್ನು ಮೇಲಕ್ಕೆ ಹಾರಿಸಿ ಅದರ ಹುರಿಯನ್ನು ತುಂಬ ಎತ್ತರವಾದ ಮರದ ತುದಿಗೆ ಕಟ್ಟಿ ಪಟ ಹಾರುವುದನ್ನು ಬೆಳಗ್ಗೆಯಿಂದ ಸಂಜೆಯವರೆಗೆ ನೋಡಿ ಆನಂದಿಸುವುದುಂಟು. ಒಟ್ಟಿನಲ್ಲಿ, ಆರಂಭದಲ್ಲಿ ಜನಪದದ್ದಾಗಿದ್ದ ಈ ಆಟ-ಕ್ರಮೇಣ ನಾಗರಿಕ ಆಟವಾಗಿ, ಇಂದು ವಿಶ್ವದೆಲ್ಲೆಡೆಯಲ್ಲಿ ಮಾನ್ಯತೆ ಪಡೆದಿದೆ.