ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಳಿ೧ ಮತ್ತು ಗಾಳಿ೨

ಗಾಳಿ೧ ಮತ್ತು ಗಾಳಿ೨

ಸಂಪಾದಿಸಿ

ಭೂಮೇಲ್ಮೈಗೆ ಸಾಪೇಕ್ಷವಾಗಿ ಚಲಿಸುವ ವಾಯು (ವಿಂಡ್). ಸಾಮಾನ್ಯವಾಗಿ ವಾಯುವಿನ (ಏರ್) ಕ್ಷಿತಿಜೀಯ ಚಲನೆಗೆ (ಊಧರ್್ವ ಚಲನೆಗಲ್ಲ) ಹಾಗೂ 1-3 ಮಿನಿಟುಗಳ ವರೆಗೆ ಆಯ್ದ ಅವಧಿಯಲ್ಲಿ ವಾಯುಚಲನೆಯ ಸರಾಸರಿಗೆ ಗಾಳಿ ಎನ್ನುತ್ತೇವೆ. ಆದ್ದರಿಂದ ಸೂಕ್ಷ್ಮಹವಾವೈಜ್ಞಾನಿಕ ಪರಿಚಲನೆಗಳೇ (ಮೈಕ್ರೊ ಮೀಟಿಯರಲಾಜಿಕಲ್ ಸಕುರ್್ಯಲೇಷನ್್ಸ) ಮುಂತಾದ ಸೂಕ್ಷ್ಮ ವಾಯುಚಲನೆಗಳು ನಮ್ಮ ಪರಿಗಣನೆಯಲ್ಲಿ ಬರುವುದಿಲ್ಲ. 1-3 ಮಿನಿಟ್ ಅಂತರದ ಆಯ್ಕೆ ನಮಗೆ ಎರಡು ರೀತಿಯಲ್ಲಿ ಸಮರ್ಪಕವಾಗಿದೆ: 1) ವಾಯುಮಂಡಲದ ಪರಿಚಲನೆಯ ಪ್ರರೂಪದಲ್ಲಿ (ಸಕುರ್್ಯಲೇಷನ್ ಪ್ಯಾಟರ್ನ್) ಗಂಟೆಯಿಂದ ಗಂಟೆಗೆ ಮತ್ತು ದಿವಸದಿಂದ ದಿವಸಕ್ಕೆ ಆಗುವ ಬದಲಾವಣೆಗಳನ್ನು ಅಧ್ಯಯಿಸಲು; 2) ವಾಯುಮಂಡಲದ ಸಾರ್ವತ್ರಿಕ ಪರಿಚಲನೆಯ ದೊಡ್ಡ ಗಾತ್ರದ ಪರಿಣಾಮಗಳನ್ನು ಅಧ್ಯಯಿಸಲು. ಭೂಮಿಯ ಮೇಲ್ಮೈಯಲ್ಲಿ ಗಾಳಿಯ ಪ್ರತ್ಯಕ್ಷ ಪರಿಣಾಮಗಳನ್ನು ನೆಲಕೊರೆತ, ಸಸ್ಯಲಕ್ಷಣ, ಕಟ್ಟಡಗಳಿಗೆ ಘಾಸಿ, ಜಲತರಂಗಗಳ ಉತ್ಪಾದನೆ ಇವೇ ಮುಂತಾದವುಗಳಲ್ಲಿ ಕಾಣಬಹುದು. ಎತ್ತರಕ್ಕೆ ಸಾಗಿದಂತೆ ವಾಯುವಿಮಾನಗಳ ಚಲನೆ, ಕ್ಷಿಪಣಿಗಳ ಗಮನ, ವಿಕಿರಣಪಟು ಉತ್ಪನ್ನಗಳ ಹರಡುವಿಕೆ, ಕಾರ್ಖಾನೆಗಳ ಅನಿಲೋಚ್ಚಾಟನೆಗಳ ವಿತರಣೆ ಇವುಗಳ ಮೇಲೆಲ್ಲ ಗಾಳಿ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ. ಮೋಡಗಳ ಸಂಚಾರ, ಮಳೆಸುರಿತ, ಹವೆ ಮುಂತಾದವುಗಳ ಮೇಲೆ ಕೂಡ ಗಾಳಿಯ ಪ್ರಭಾವ ಉಂಟು. ಗಾಳಿಯ ವೇಗವನ್ನು ಅನುಸರಿಸಿ ಅದರಲ್ಲಿ ಪ್ರಭೇದಗಳನ್ನು ಮಾಡಲಾಗಿದೆ.

ಗಾಳಿ ಎಂಬ ಶಬ್ದಕ್ಕೆ ಎರಡು ಅರ್ಥಗಳುಂಟು. ಒಂದು-ಚಲಿಸುತ್ತಿರುವ ವಾಯು ಎಂದು; ಎರಡು-ದೆವ್ವ ಎಂದು. ಎರಡನೆಯ ಅರ್ಥದಲ್ಲಿ ಅದನ್ನು ಇಲ್ಲಿ ವಿವೇಚಿಸಲಾಗಿದೆ. ಅಕಾಲಮರಣಕ್ಕೆ ತುತ್ತಾದ ಅತೃಪ್ತಜೀವಗಳು ದೆವ್ವ ಪಿಶಾಚಿಗಳಾಗಿ ಅಲೆಯುತ್ತ ಹಲವರ ಮೈ ಹೊಕ್ಕು, ಅವರ ಮುಖಾಂತರ ಅತೃಪ್ತ ಆಸೆಗಳನ್ನು ಈಡೇರಿಸಿಕೊಂಡು ತೃಪ್ತಿಪಟ್ಟುಕೊಳ್ಳುತ್ತವೆ ಎಂಬುದು ಜನಪದ ನಂಬಿಕೆ. ಅಷ್ಟೇ ಅಲ್ಲ, ಅನ್ಯಾಯದಿಂದ ಕೊಲೆಗೀಡಾದವರು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ದೆವ್ವವಾಗಿ ಅವರಿಗೆ ಕಾಟ ಕೊಡುತ್ತಾರೆಂದೂ ಆಸ್ತಿಪಾಸ್ತಿ ಒಡವೆ ವಸ್ತುಗಳ ಮೇಲೆ ಅತಿಯಾದ ಆಸೆಯುಳ್ಳವರು, ಜಿಪುಣರು ಸತ್ತರೂ ಅವರ ಆತ್ಮ ಐಹಿಕ ಆಸೆ ಅಪೇಕ್ಷೆಗಳಿಂದ ಮುಕ್ತವಾಗದೆ ಹೀಗೇ ದೆವ್ವವಾಗಿ ಅಲೆಯುತ್ತ ಕಾಟ ಕೊಡುತ್ತಾರೆಂದೂ ನಂಬಿಕೆ. ಅಕಾಲಮರಣಕ್ಕೆ ತುತ್ತಾದವರ ಜೀವಗಳು ಅಗೋಚರವಾಗಿ ಇಹಲೋಕದಲ್ಲೇ ಅಲೆದಾಡುತ್ತಿದ್ದು ಕಾಲಪ್ರಾಪ್ತಿಯಾದಾಗ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತವೆಂದು ತತ್ತ್ವಶಾಸ್ತ್ರ ಹೇಳುತ್ತದೆ. ಇದು ವೈಜ್ಞಾನಿಕ ಸತ್ಯವೋ ಅಲ್ಲವೋ. ಆದರೂ ಅನೂಚಾನವಾಗಿ ಜನಮನದಲ್ಲಿ ಬೇರೂರಿ ಬೆಳೆದು ಬಂದಿರುವ ಅಂಶವಿದು. ನೀನು ಗಾಳಿಪಾಲಾಗ ಎಂಬ ಬೈಗಳೂ ಗಾಳಿ ಹಿಡಿದವನ್ಹಂಗೆ, ಗಾಳಿ ಹೊಕ್ಕವನ್ಹಂಗೆ ಎಂಬ ಮಾತುಗಳೂ ಗಾಳಿಯ ಅಸ್ತಿತ್ವವನ್ನು ಸೂಚಿಸುತ್ತವೆ. ಮನೋವಿಜ್ಞಾನ ಇದನ್ನು ಉನ್ಮಾದವೆಂದೂ ಅದುಮಿಟ್ಟ ಅತೃಪ್ತ ಭಾವನೆಗಳಿಂದ ಹದಗೆಟ್ಟ ಚಿತ್ತಕ್ಷೋಭೆಯೆಂದೂ ಹೇಳಬಹುದು. ಆದರೆ ಗಾಳಿ ಹಿಡಿದವರ ಮಾತುಕತೆಗಳನ್ನು ಕೇಳಿದವರಿಗೆ ಕಣ್ಣಾರೆ ನೋಡಿದವರಿಗೆ ವಿಜ್ಞಾನ ಒದಗಿಸುವ ಕಾರಣಗಳಲ್ಲಿ ಅಷ್ಟಾಗಿ ನಂಬಿಕೆ ಬರುವುದಿಲ್ಲ. ಪ್ರಪಂಚಾದ್ಯಂತ ಆದಿವಾಸಿಗಳಲ್ಲಿ ದೆವ್ವ ಬಿಡಿಸುವ ವಿಶಿಷ್ಟ ವೈದ್ಯರಿದ್ದರೆಂದು ತಿಳಿದುಬಂದಿದೆ. ಅವರು ತಮ್ಮ ವಿಚಿತ್ರ ಉಪಕರಣಗಳಿಂದ ವಿಶಿಷ್ಟ ಮಂತ್ರಗಳಿಂದ ದೆವ್ವವನ್ನು ಬಿಡಿಸುತ್ತಿದ್ದರು. ಗಾಳಿ ಹಿಡಿದ ಹೆಣ್ಣೊಬ್ಬಳನ್ನು ಒಮ್ಮೆ ಸಿದ್ಧಗಂಗಾಕ್ಷೇತ್ರಕ್ಕೆ ಕರೆತಂದಿದ್ದರು. ಸ್ವಾಮಿಗಳು ಆಕೆಯ ಸ್ವಲ್ಪ ಕೂದಲನ್ನು ಬೆರಳಲ್ಲಿ ಸುತ್ತಿಕೊಂಡು (ಹಾಗೆ ಸುತ್ತಿಕೊಂಡರೆ ಮೈಮೇಲಿರುವ ಗಾಳಿ ಪರಾರಿಯಾಗಲು ಸಾಧ್ಯವಿಲ್ಲವಂತೆ) ಮಂತ್ರಗಳನ್ನು ಪಠಿಸಿ ವಿಭೂತಿಯ ಧೂಳನ್ನು ಆಕೆಯ ಮೈಮೇಲೆ ಉರುಬಿದಾಗ ಸುಟ್ಟುಕೊಂಡವಳಂತೆ ಬೆವರಿದ ಆಕೆ ಎಲ್ಲವನ್ನೂ ಹೇಳುವುದಾಗಿ ಬಾಯಿಬಿಟ್ಟಳು. ಸ್ವಾಮಿಗಳು ಒಂದೊಂದೇ ಪ್ರಶ್ನೆ ಕೇಳುತ್ತ ಹೊರಟರು. ಅವಳ ಮೈಮೇಲಿದ್ದ ಗಾಳಿ ಉತ್ತರಿಸುತ್ತ ಹೋಯಿತು. ತಾನು ಇಂಥವಳೆಂದೂ ಹಗೆಗಳು ಅನ್ಯಾಯದಿಂದ ತನ್ನನ್ನು ಸಾಯಿಸಿದರೆಂದೂ ಅದಕ್ಕಾಗಿ ದೆವ್ವವಾಗಿ ಅವರ ಮನೆಯ ಇಷ್ಟು ಜನರನ್ನು ಆಹುತಿ ತೆಗೆದುಕೊಂಡೆನೆಂದೂ ಗಾಳಿ ಹೇಳಿತು. ಬಾವಿಯ ಬಳಿ ನೀರು ಕುಡಿಯಲು ಬಂದಾಗ ಅವರನ್ನು ಬಾವಿಗೆ ತಳ್ಳಿದನೆಂದೂ ಅವರ ಹೆಸರು ಇಂಥದೆಂದೂ ಗಾಳಿ ಹೇಳಿದ ಮಾತುಗಳು ವಾಸ್ತವ ವಿಷಯಗಳಾಗಿದ್ದವು. ಇಷ್ಟು ಜನರನ್ನು ಕೊಂದು ಗಳಿಸಿದ ಶಾಪ ಸಾಕೆಂದೂ ಇನ್ನು ಆ ಕ್ಷೇತ್ರದಲ್ಲೇ ತಮಗೆ ಪಾಪ ಪರಿಹಾರ ಮಾಡಿಕೊಳ್ಳಬೇಕೆಂದೂ, ಒಪ್ಪಿಗೆಯಿದ್ದರೆ ಏನಾದರೂ ಗುರುತು ಕೊಡತಕ್ಕದೆಂದೂ ಸ್ವಾಮಿಗಳು ಕೇಳಿದಾಗ ಗಾಳಿಹಿಡಿದ ಹೆಣ್ಣು ತನ್ನ ತಲೆಯಿಂದ ಒಂದು ಹಿಡಿಕೂದಲನ್ನು ಕಿತ್ತುಕೊಟ್ಟಳು. ಆಮೇಲೆ ಮತ್ತೆ ದೆವ್ವ ಬರಲಿಲ್ಲವೆಂದೂ ಸುಖವಾಗಿದ್ದಾಳೆಂದೂ ತಿಳಿದುಬಂತು. ಗಾಳಿ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಹಿಡಿದ ಗಾಳಿಯನ್ನು ಬಿಡಿಸಲು ಅನುಸರಿಸುವ ಪ್ರಮುಖ ವಿಧಾನವೊಂದರ ವಿವರಗಳಿಗೆ ನೋಡಿ- ಕಲ್ಲುಹುಯ್ಯಿಸುವುದು.