ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಜರಾತಿನ ಶಾಸನಗಳು, ನಾಣ್ಯಗಳು

ಶಾಸನಗಳು

ಸಂಪಾದಿಸಿ

ಗುಜರಾತು ಪ್ರ.ಶ.ಪು. ಸು. 3ನೆಯ ಶತಮಾನದಿಂದ ಪ್ರ.ಶ. 14ನೆಯ ಶತಮಾನದವರೆಗೆ ಕ್ರಮವಾಗಿ ಮೌರ್ಯ, ಕ್ಷತ್ರಪ, ಗುಪ್ತ, ತ್ರೈಕೂಟಕ, ಗೂರ್ಜರ, ಚಾಳುಕ್ಯ, ರಾಷ್ಟ್ರಕೂಟ, ವಲ್ಲಭಿ, ಮೈತ್ರಕ, ಸೋಲಂಕಿ ಮತ್ತು ವಾಘೇಲದ ಚಾಳುಕ್ಯ ಮುಂತಾದ ರಾಜವಂಶದವರ ಆಳ್ವಿಕೆಗೆ ಒಳಪಟ್ಟಿತ್ತೆಂಬುದೂ ಅವರಲ್ಲಿ ಕೆಲವರ ವಂಶಾವಳಿಯೂ ಧಾರ್ಮಿಕ ರಾಜಕೀಯ ಲೋಕೋಪಯೋಗಿ ವಿಷಯಗಳೂ ಚಟುವಟಿಕೆಗಳೂ ಇದುವರೆಗೆ ದೊರೆತ ಸುಮಾರು 300 ಶಾಸನಗಳಿಂದ ತಿಳಿದಿವೆ.


ಅಶೋಕ ಪ್ರಾಣಿಹತ್ಯೆಯನ್ನು ನಿಷೇಧಿಸಿದ್ದು, ಮಾರ್ಗಬದಿಗಳಲ್ಲಿ ಗಿಡ ಮರಗಳನ್ನು ನೆಡಿಸಿದ್ದು, ಬಾವಿಗಳನ್ನು ತೋಡಿಸಿದ್ದು, ಧರ್ಮಪ್ರಚಾರಕ್ಕೂ ನ್ಯಾಯ ಪರಿಪಾಲನೆಗೂ ಅಧಿಕಾರಿಗಳನ್ನು ನೇಮಿಸಿ ಅವರ ಕರ್ತವ್ಯಗಳನ್ನು ನಿರೂಪಿಸಿದ್ದು, ಜನಸಾಮಾನ್ಯರಲ್ಲಿ ನೀತಿಯ ಮಟ್ಟವನ್ನು ಹೆಚ್ಚಿಸಿ ಧರ್ಮಾಂಧತೆಯನ್ನು ಹೋಗಲಾಡಿಸಿ ಧರ್ಮಸಮನ್ವಯಕ್ಕೆ ಪ್ರಯತ್ನ ಮಾಡಿದ್ದು-ಮುಂತಾದ ವಿಷಯಗಳು ಗಿರ್ನಾರ್ನಲ್ಲಿ ದೊರೆತ, ಅಶೋಕ ಚಕ್ರವರ್ತಿಯ 14 ಕಲ್ಲುಬಂಡೆ ಶಾಸನಗಳಲ್ಲಿವೆ. ತರುವಾಯದ ಕ್ಷತ್ರಪರ ಶಾಸನಗಳಲ್ಲಿ ಮುಖ್ಯವಾದವೆಂದರೆ ಜುನಾಗಢದ ರುದ್ರದಾಮನ ಶಾಸನ. ಭೀಕರ ಮಳೆಗಾಳಿಯಿಂದಾಗಿ ಅಲ್ಲಿಯ ಸುದರ್ಶನ ಸರೋವರದ ಕಟ್ಟೆ ಒಡೆದು ಅದನ್ನು ತಿರುಗಿ ಕಟ್ಟಿಸಲಸಾಧ್ಯವೆನ್ನುವಂಥ ಸ್ಥಿತಿಯಲ್ಲಿದಾಗ ಕ್ಷತ್ರಪರುದ್ರದಾಮನ್ ಧೈರ್ಯದಿಂದ ತನ್ನ ಪ್ರಾಂತ್ಯಾಧಿಕಾರಿ ಸುವಿಶಾಖನಿಂದ (ಕುಲೇಪನ ಮಗ) ಮತ್ತೆ ಅದನ್ನು ಕಟ್ಟಿಸಿದನೆಂದು ತಿಳಿಸುತ್ತದೆ. ಅಲ್ಲದೆ, ಈ ಸರೋವರವನ್ನು ಚಂದ್ರಗುಪ್ತ ಮೌರ್ಯನ ಪ್ರಾಂತ್ಯಾಧಿಕಾರಿಯಾಗಿದ್ದ ವೈಶ್ಯ ಪುಪ್ಯಗುಪ್ತ ನಿರ್ಮಿಸಿದನೆಂದೂ ಅನಂತರ ಅಶೋಕಮೌರ್ಯನ ಪ್ರಾಂತ್ಯಾಧಿಕಾರಿ ತುಶಾಷ್ಪ ಅದಕ್ಕೆ ಕಾಲುವೆಗಳನ್ನು ಮಾಡಿಸಿ ಜನರಿಗೆ ಹೆಚ್ಚು ಉಪಯೋಗವಾಗುವ ಹಾಗೆ ಮಾಡಿದನೆಂದೂ ಇದರಲ್ಲಿ ಹೇಳಿದೆ. ಸ್ಕಂದಗುಪ್ತ ಈ ಸರೋವರವನ್ನು ಮತ್ತೆ ಜೀರ್ಣೋದ್ಧಾರ ಮಾಡಿಸಿದನೆಂಬುದೂ ಇವರ ಪ್ರಾಂತ್ಯಾಧಿಕಾರಿಯಾದ ಚಕ್ರಪಾಲಿತ ಒಂದು ವಿಷ್ಣು ದೇವಾಲಯವನ್ನು ಇಲ್ಲಿ ಕಟ್ಟಿಸಿದನೆಂಬುದೂ ಇಲ್ಲಿ ದೊರಕಿರುವ ಸ್ಕಂದಗುಪ್ತನ ಶಾಸನದಿಂದ ತಿಳಿದುಬರುತ್ತದೆ.


ಗೂರ್ಜರ ವಂಶದ ಮುಮ್ಮಡಿ ಜಯಭಟನ ತಾಮ್ರಶಾಸನದಲ್ಲಿ (ಶಕವರ್ಷ 456) ಅವನ ವಂಶಾವಳಿ ಮತ್ತು ಸಮಿಪದ್ರಕ ಗ್ರಾಮದಲ್ಲಿಯ ಭೂಮಿದಾನದ ವಿಷಯ ಇವೆ. ನವಸರಿತದ ಚಾಳುಕ್ಯರ ಶ್ರ್ಯಾಶ್ರಯ ಶೀಲಾದಿತ್ಯನ ತಾಮ್ರಶಾಸನದಲ್ಲಿ (ಶ.ವ. 421) ಆ ರಾಜನ ವಂಶಾವಳಿಯ ಜೊತೆಗೆ ಆಸಟ್ಟಿ ಗ್ರಾಮ ದಾನಮಾಡಿದ್ದಾಗಿ ಹೇಳಿದೆ. ಸೂರತ್ ಸಮೀಪದ ಅಂತ್ರೋಳಿ-ಚ್ಚರೋಳಿಯಲ್ಲಿ ದೊರೆತ, ರಾಷ್ಟ್ರಕೂಟ ಇಮ್ಮಡಿ ಕಕ್ಕನ ತಾಮ್ರಶಾಸನದಲ್ಲಿ(ಶ.ವ. 679) ಇವನ ಗ್ರಾಮದಾನದ ವಿಷಯ ಹೇಳುವಾಗ ಇವನ ವಂಶಾವಳಿ ಇದೆ. ಮೌಂಟ್ ಅಬುದಲ್ಲಿಯ ವಿಮಲದೇವಸ್ಥಾನ ಚಾಳುಕ್ಯ (ಸೋಲಂಕಿ) ವಂಶದ ಒಂದನೆಯ ಭೀಮನ ಕಾಲದಲ್ಲಿ ಕಟ್ಟಲ್ಪಟ್ಟಿತೆಂದು ಆ ದೇವಾಲಯದಲ್ಲಿಯ ಶಾಸನ (ಶ.ವ. 1119) ತಿಳಿಸುತ್ತದೆ. ಇದೇ ವಂಶದ ಜಯಸಿಂಹ ಮಾಳವದ ಯಶೋವರ್ಮನನ್ನು ಸೋಲಿಸಿದನೆಂದೂ ಅವಂತಿಮಂಡಳ ಅವನ ಅಧೀನವಾಗಿತ್ತೆಂದೂ ಉಜ್ಜಯನಿಯ ಒಂದು ಶಾಸನದಲ್ಲಿದೆ (ಪ್ರ.ಶ. 1195). ವಡನಗರದ ಪ್ರಶಸ್ತಿಯಲ್ಲಿ (ಶ.ವ. 1208) ಮೂಲರಾಜನಿಂದ ಹಿಡಿದು, ಚಾಮುಂಡ, ವಲ್ಲಭ ಮತ್ತು ದುರ್ಲಭರಿಂದ ಕೂಡಿದ ಚಾಳುಕ್ಯ ರಾಜರ ವಂಶಾವಳಿಯನ್ನು ಹಾಗೂ ಈ ವಂಶದ ಕುಮಾರಪಾಲ ಕೋಟೆಯನ್ನು ಕಟ್ಟಿಸಿದನೆಂಬ ವಿಷಯವನ್ನು ಹೇಳಿದೆ. ಕುಮಾರಪಾಲನ ಕಾಲದಲ್ಲಿ ಗಂಡ ಬೃಹಸ್ಪತಿ ಸೋಮನಾಥ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದನೆಂದು ಪ್ರಭಾಸ್ ಪಾಟನ್ ಶಾಸನದಲ್ಲಿ (ವಿಕ್ರಮ ಶಕೆ 850) ಇದೆ. ಈಗ ಸಿಂತ್ರದಲ್ಲಿಟ್ಟಿರುವ (ಪೋರ್ಚುಗಲ್), ಸೋಮನಾಥದಲ್ಲಿಯ ಒಂದು ಶಾಸನದಲ್ಲಿ (ಶ.ವ. 1342) ತ್ರಿಪುರಾಂತಕನೆಂಬ ಲಾಕುಳಿಶ ಪಾಶುಪತ ಸಂನ್ಯಾಸಿ ಸೋಮನಾಥ ದೇವಾಲಯಕ್ಕೆ ಕೊಡಮಾಡಿದ ದತ್ತಿಯ ವಿಷಯವಿದೆ.


ವಲ್ಲಭಿಯಿಂದ ಆಳಿದ ಮೈತ್ರಕರ ಶಾಸನಗಳು ಸುಮಾರು 110 ದೊರೆತಿವೆ. ಇವುಗಳಲ್ಲಿ 90ಕ್ಕೂ ಹೆಚ್ಚಿನವು ತಾಮ್ರ ಶಾಸನಗಳು. ಮೈತ್ರಕರ ಶಾಸನಗಳಲ್ಲಿ ಕಂಡುಬರುವ ರಾಜಮುದ್ರೆಯ ಮೇಲಿನ ಚಿಹ್ನೆ ಕುಳಿತಿರುವ ನಂದಿಯದು. ಇದರ ಕೆಳಗೆ ಶ್ರೀ ಭಟ್ಟಾಕಃ ಎಂಬ ಅಂಕಿತ ಕಂಡುಬಂದಿದೆ. ಇದು ಮನೆತನದ ಮೂಲಪುರುಷನಾದ ಭಟ್ಟಾರ್ಕನ ಅಂಕಿತ. ಅನಂತರ ಆಳಿದ ಎಲ್ಲರೂ ಇದನ್ನೇ ಬಳಸಿರುವುದು ಗಮನಾರ್ಹ.


ಪ್ರಾಚೀನತಮ ತಾಮ್ರ ಶಾಸನ ಭಾವನಗರ ಜಿಲ್ಲೆಯ ಭಮೋದ್ರ - ಮೊಹೊತದಲ್ಲಿ ದೊರೆತ. ಗುಪ್ತವಲ್ಲಭೀ 183ನೆಯ ಸಂವತ್ಸರದ (ಪ್ರ.ಶ. 502) ದ್ರೋಣಸಿಂಹನದು. ಹಸ್ತವಪ್ರ ಆಹಾರದಲ್ಲಿಯ ಭಗವತೀ ದೇವಾಲಯಕ್ಕೆ ತ್ರಿಸಂಗಮಕ ಗ್ರಾಮವನ್ನು ದತ್ತಿಯಾಗಿ ಬಿಟ್ಟಿದ್ದು ಶಾಸನ ವಿಷಯ. ಶಾಸನವನ್ನು ಅರಸನ ಆಜ್ಞೆಯ ಮೇರೆಗೆ ಬರೆದ ಲೇಖಕ ಷಷ್ಟಿದತ್ತನ ಮಗ ಕುಮಾರಿಲ ಕ್ಷತ್ರಿಕ. ಇದು ದ್ರೋಣಸಿಂಹನ ಏಕೈಕ ಶಾಸನ.


ಒಂದನೆಯ ಧ್ರುವಸೇನನ 15 ತಾಮ್ರ ಶಾಸನಗಳಲ್ಲಿ ಹದಿನಾಲ್ಕರ ಲೇಖಕ ಕಿಕ್ಕುಕ; ಹದಿನೈದನೆಯದರ ಲೇಖಕ ಭದ್ರ. ಇಮ್ಮಡಿ ಧರಸೇನನ ಹನ್ನೆರಡು ಶಾಸನಗಳನ್ನೂ ಅತನಿಗೆ ಮೊದಲು ಆಳಿದ ಗುಹಸೇನನ ಎರಡು ಶಾಸನಗಳನ್ನೂ ಬರೆದಿರುವ ಅಧಿಕಾರಿ ಸ್ಕಂದಭುಟ್ಟ. ಅಂತೆಯೇ ಶೀಲಾದಿತ್ಯನ 9 ಶಾಸನಗಳ, ಖರಗ್ರಹನ 2 ಶಾಸನಗಳ, ಮುಮ್ಮಡಿ ಧರಸೇನನ 1 ಶಾಸನದ, ಇಮ್ಮಡಿ ಧ್ರುವಸೇನನ 3 ಶಾಸನಗಳ ಲೇಖಕ ವತ್ರಭಟ್ಟಿ. ಇವರ ಕೆಲವು ಶಾಸನಗಳ ಸಾಹಿತ್ಯದಲ್ಲಿ ಪ್ರಸಿದ್ಧ ಕವಿಗಳಾದ ಕಾಳಿದಾಸ ಮುಂತಾದವರ ಶೈಲಿಯ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು.


ಇದುವರೆಗೆ ದೊರೆತಿರುವ ಶಿಲಾಶಾಸನಗಳೆಲ್ಲ ಭಗ್ನಗೊಂಡ ಸ್ಥಿತಿಯಲ್ಲಿವೆ. ಯಾವ ಒಂದು ಶಾಸನವೂ ಸಂಪೂರ್ಣವಾಗಿಲ್ಲ. ಕೆಲವರಲ್ಲಿ ಹಲವರ ಹೆಸರುಗಳ ಅಥವಾ ತಥಾಗತನಿಗೆ ಸಂಬಂಧಿಸಿದ ಉಲ್ಲೇಖಗಳನ್ನು ಕಾಣಬಹುದು. ಇವಲ್ಲದೆ ಇವರ ಶಾಸನಗಳಿರುವ ಮುದ್ರೆಗಳೂ ಹಲವಾರು ದೊರೆತಿವೆ. ಇವುಗಳಲ್ಲಿ ಬಹಳ ಮಟ್ಟಿಗೆ ಬೌದ್ಧಧರ್ಮಕ್ಕೆ ಸಂಬಂಧಿಸಿದ, ಯೇ ಧಮ್ಮ ಹೇತು ಪ್ರಭವಾ ಎಂದು ಆರಂಭವಾಗುವ ಸೂತ್ರವನ್ನು ಕೆತ್ತಲಾಗಿದೆ. ಸುಮಾರು 1.3 ಸೆಂ.ಮೀ ಕಾಗದದ ಮೇಲೆ ಒತ್ತುವ ಮುದ್ರೆಯೊಂದರಲ್ಲಿ ಶ್ರೀ ಶೀಲಾದಿತ್ಯನೆಂಬ ಹೆಸರನ್ನು ಹಿಮ್ಮುಖವಾಗಿ ಕೆತ್ತಲಾಗಿದೆ.


ನಾಣ್ಯಗಳು

ಸಂಪಾದಿಸಿ

ಭಾರತದ ವಾಯುವ್ಯ ಭಾಗದಲ್ಲಿ ಪ್ರ.ಶ.ಪು. 2ನೆಯ ಶತಮಾನದಿಂದ ಪ್ರ.ಶ. 1ನೆಯ ಶತಮಾನದವರೆಗೆ ಆಳುತ್ತಿದ್ದ ಗ್ರೀಕರಿಂದ ಗುಜರಾತಿನ ಭಾಗದಲ್ಲಿ ನಾಣ್ಯ ಪದ್ಧತಿ ಸ್ಥಿರವಾಯಿತೆಂದು ಹೇಳಬಹುದು. ಇವರ ಪೂರ್ವದಲ್ಲಿ 5 ಗ್ರೇನ್ ತೂಕದ ಸ್ವಸ್ತಿಕ, ತ್ರಿಶೂಲ, ವೃತ್ತ, ಆನೆ, ಚಕ್ರ ಮುಂತಾದ ಚಿಹ್ನೆಗಳುಳ್ಳ ನಾಣ್ಯಗಳು ಉಪಯೋಗದಲ್ಲಿದ್ದುವು. ಕಾಮ್ರೇಜ್ನಲ್ಲಿ ದೊರೆತ ನಾಣ್ಯಗಳಲ್ಲಿ ಕೆಲವು ಅಚ್ಚೊತ್ತಿದವು. ಕೆಲವು ಎರಕ ಹೊಯ್ದವು; ಮತ್ತು ಆವಂತಿ, ಉಜ್ಜಯನಿ ನಾಣ್ಯಗಳು. ಗ್ರೀಕರ ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳು ವೃತ್ತಾಕಾರ ಅಥವಾ ಸಮಬಾಹುಗಳುಳ್ಳ ಚತುರ್ಭುಜಾಕಾರದವಾಗಿವೆ; ಅವುಗಳ ಮೇಲೆ ಗ್ರೀಕ್ ಮತ್ತು ಖರೋಷ್ಠಿ ಅಕ್ಷರಗಳೂ ರಾಜನ ತಲೆಯ ಚಿತ್ರವೂ ಇವೆ. ಕ್ಷಹರಾತ ಮತ್ತು ಕ್ಷತ್ರಪರ ನಾಣ್ಯಗಳಲ್ಲಿ ಬಾಣ, ಚಕ್ರ, ವಜ್ರಾಯುಧ, ಧರ್ಮಚಕ್ರ ಮುಂತಾದ ಚಿತ್ರಗಳು, ರಾಜನ ತಲೆಯ ಚಿತ್ರ ಮತ್ತು ಬ್ರಾಹ್ಮಿ ಮತ್ತು ಖರೋಷ್ಠಿ ಅಕ್ಷರಗಳಿವೆ. ಕಾರ್ದಮಕ ಕ್ಷತ್ರಪರ ನಾಣ್ಯಗಳು ಮಾತ್ರ ಹೆಚ್ಚು ವೈವಿಧ್ಯಪೂರ್ಣವಾದಂಥವು. ಇವು ತಾಮ್ರ, ಬೆಳ್ಳಿ ಮತ್ತು ಸತುವಿನಿಂದ ಮಾಡಿದವು; ವೃತ್ತಾಕಾರ ಅಥವಾ ಸಮಬಾಹುಗಳುಳ್ಳ ಚತುರ್ಭುಜಾಕಾರದವು. ಇವುಗಳ ಒಂದು ಬದಿಯಲ್ಲಿ ರಾಜನ ತಲೆಯ ಚಿತ್ರವೂ ಗ್ರೀಕ್ ಅಕ್ಷರವೂ ಮತ್ತೊಂದು ಬದಿಯಲ್ಲಿ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಯಲ್ಲಿ ರಾಜನ ಹೆಸರೂ ಇವೆ. ಬ್ರಾಹ್ಮಿ ಸಂಖ್ಯೆಯಲ್ಲಿ ಶಾಲಿವಾಹನ ಶಕೆಯೂ ನಕ್ಷತ್ರ, ಚಂದ್ರ, ಚೈತ್ಯ ಮುಂತಾದ ಚಿಹ್ನೆಗಳೂ ಇರುತ್ತವೆ. ಭಾರತ - ರೋಂ ವ್ಯಾಪಾರಕ್ಕೆ ಭಡೋಚ ಒಂದು ಕೇಂದ್ರವಾಗಿದ್ದುದರಿಂದ ಇಲ್ಲೂ ಬೆಳ್ಳಿ ಚಿನ್ನಗಳ ರೋಮನ್ ನಾಣ್ಯಗಳು ಇದ್ದಿರಬೇಕು. ರೋಮನ್ ಚಕ್ರವರ್ತಿ ಲೂಸಿಯಸ್ ವೀರಸನ (130 - 169) ಒಂದು ನಾಣ್ಯ ದೊರೆತಿದೆ. ಉಳಿದ ನಾಣ್ಯಗಳನ್ನು ಚಿನ್ನ ಬೆಳ್ಳಿಗಾಗಿ ಪ್ರಾಯಶಃ ಕರಗಿಸಿರಬೇಕು. ಗುಪ್ತರವು ಬೆಳ್ಳಿ ಮತ್ತು ತಾಮ್ರ ನಾಣ್ಯಗಳು. ಇಲ್ಲವೇ ರಜತಲೇಪಿತ ತಾಮ್ರ ನಾಣ್ಯಗಳು; ವೃತ್ತಾಕಾರದವು. ರಾಜನ ತಲೆಯ ಚಿತ್ರ, ಗುಪ್ತ ಶಕೆ, ರಾಜನ ಹೆಸರು ಮತ್ತು ಗರುಡ, ವಕ್ರಗೆರೆ, ಮಲಗಿದ ನಂದಿ, ಅಗ್ನಿಯುಳ್ಳ ವೇದಿಕೆ ಮುಂತಾದ ಚಿಹ್ನೆಗಳಿವೆ. ತ್ರೈಕೂಟಕರ ನಾಣ್ಯಗಳು ದುಂಡಾಗಿವೆ; ಬೆಳ್ಳಿಯವು. ರಾಜನ ತಲೆ, ಚೈತ್ಯ ನಕ್ಷತ್ರಗಳ ಚಿಹ್ನೆ ರಾಜನ ಹೆಸರು ಇವೆ. ಹೆಸರನ್ನು ಸೂಚಿಸುವಲ್ಲಿ ಕ್ಷತ್ರಪರ, ಗುಪ್ತರ ಪ್ರಭಾವವನ್ನು ಕಾಣಬಹುದು.


ಗುಜರಾತಿನ ನಾಣ್ಯಪದ್ಧತಿಯ ವೈಶಿಷ್ಟ್ಯವೆಂದರೆ ಇಂಡೋ - ಗ್ರೀಕರ ಕಾಲದಿಂದ ತ್ರೈಕೂಟಕರವರೆಗೆ ಬೆಳ್ಳಿಯ ಬಳಕೆ ಒಂದೇ ತೆರನಾಗಿರುವುದು ಮತ್ತು ರಾಜನ ತಲೆಯನ್ನು ಮೂಡಿಸುವ ಪದ್ಧತಿ ಏಕಪ್ರಕಾರವಾಗಿ ಉಳಿದುಬಂದಿರುವುದು.


ತ್ರೈಕೂಟಕರ ಅನಂತರ ಬಂದ ರಾಜರ ನಾಣ್ಯಗಳು, ವಲ್ಲಭಿಯ ಮೈತ್ರಕರವು ಹೊರತು, ಸಿಕ್ಕಿಲ್ಲ. ಮೈತ್ರಕರು ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳನ್ನು ಅಚ್ಚು ಹಾಕಿಸಿದರು ಬೆಳ್ಳಿ ನಾಣ್ಯಗಳು ಸಂಪೂರ್ಣ ಬೆಳ್ಳಿಯವಾಗಿರದೆ ಬೆಳ್ಳಿಯ ಲೇಪನವನ್ನು ಹೊಂದಿವೆ. ಇವರ ಮೊದಲಿಗೆ ಅಚ್ಚಾದ ನಾಣ್ಯಗಳು ಸಾಧಾರಣವಾಗಿ 15 ಸೆಂಮೀ ಸುತ್ತಳತೆ ಹೊಂದಿದ್ದು 29 ಗ್ರೇನ್ ತೂಕದವಾಗಿವೆ. ನಾಣ್ಯದ ಒಂದು ಬದಿಯಲ್ಲಿ ಅರಸರ ಬಲಮುಖವನ್ನು ಕಾಣಬಹುದು. ಇನ್ನೊಂದು ಬದಿಯಲ್ಲಿ ತ್ರಿಶೂಲದ ಚಿಹ್ನೆಯಿದೆ. ಇದರ ಸುತ್ತಲೂ ಬ್ರಾಹ್ಮೀಲಿಪಿಯಲ್ಲಿ ಬರೆಹವಿದೆ. ಇದನ್ನು ಓದಲು ಅನೇಕರು ಪ್ರಯತ್ನಿಸಿರುವರಾದರೂ, ಅಕ್ಷರದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ತೊಡಕುಗಳೂ ಭಿನ್ನಾಭಿಪ್ರಾಯಗಳೂ ಉಂಟಾಗಿವೆ. ಭಟಾರ್ಕ ಎಂಬಷ್ಟನ್ನು ಮಾತ್ರ ಎಲ್ಲರೂ ಓದಿದ್ದಾರೆ. ಈ ನಾಣ್ಯಗಳು ಬಹಳ ಮಟ್ಟಿಗೆ ಅನಂತರದ ಗುಪ್ತರ ನಾಣ್ಯಗಳನ್ನು ಹೋಲುತ್ತಿದ್ದುವು. ಆವುಗಳಿಂದ ಪ್ರಭಾವಿತಗೊಂಡಿವೆ ಎನ್ನಬಹುದು.


ಗುಜರಾತಿನಲ್ಲಿ ಸ್ವತಂತ್ರವಾಗಿ ಆಳಿದ ಸುಲ್ತಾನರ ನಾಣ್ಯಗಳು ದೊರೆತಿವೆ. ಇವನ್ನು ಮೊದಲು ಅಚ್ಚು ಹಾಕಿಸಿದವನು 1ನೆಯ ಅಹಮದ್ ಷಹ. ಸುಲ್ತಾನರ ನಾಣ್ಯಗಳೆಲ್ಲ ಹೆಚ್ಚಾಗಿ ಬೆಳ್ಳಿ ಹಾಗೂ ತಾಮ್ರದಲ್ಲಿ ಎರಕ ಹೊಯ್ದಂಥವು. ಚಿನ್ನದ ನಾಣ್ಯಗಳೂ ಇಲ್ಲದಿಲ್ಲ; ಆದರೆ ಅಪರೂಪ. ಅಹಮದಾಬಾದ್, ಅಹಮದ್ನಗರ (ಇದರ್), ಮುಸ್ತಫಾಬಾದ್ (ಗಿರಿನಗರ), ಮಹಮದಾಬಾದ್ (ಚಂಪಾನೇರ್) ಮತ್ತು ಖಾನ್ಪುರಗಳಲ್ಲಿ ಇವರ ಟಂಕಸಾಲೆಗಳಿದ್ದುವು. ಆದರೆ ಸಾಮಾನ್ಯವಾಗಿ ನಾಣ್ಯಗಳ ಮೇಲೆ ಇವುಗಳ ಸೂಚನೆ ಇರದೆ ಕೇವಲ ಷಹರ್ ಇ ಮುಕರ್ರಮ್ ಎಂದಿದೆ.


ಸಾಮಾನ್ಯವಾಗಿ ಸುಲ್ತಾನನ ಹೆಸರನ್ನು ಚೌಕಾಕಾರವಾಗಿ ಕೆತ್ತಲಾಗಿದ್ದು, ಪಕ್ಕದಲ್ಲಿ ಟಂಕಸಾಲೆಯ ಹೆಸರು ಅಥವಾ ಷಹರ್ ಇ ಮುಕರ್ರಮ್ ಎಂಬ ಅಕ್ಷರಗಳಿರುತ್ತವೆ. ಅಲ್ ಸುಲ್ತಾನ, ಅಲ್ ಅಜ಼ಮ್ ಎಂಬ ಇವರ ಬಿರುದುಗಳನ್ನು, ಒಮ್ಮೊಮ್ಮೆ ಇವರ ಧರ್ಮಸೂಚಕವಾದ ಅಬು ಅಲ್ ಮುಹಮ್ಮದ್, ಅಬುಲ್ಫತ್, ಅಲ್ ಮುತಸ್ಸಿಮ್ ಬೆ ಅಲ್ಲಾಹ್ ಅಲ್ ರಹ್ಮಾನ್ ಎಂಬ ಮತೀಯ ಬಿರುದುಗಳನ್ನು ಕಾಣಬಹುದು. ಇಮ್ಮಡಿ ಮುಹಮ್ಮದ್ ಷಹನ ನಾಣ್ಯಗಳಲ್ಲಿ ಪದ್ಯಗಳ ಛಾಯೆ ಕಂಡುಬರುತ್ತದೆ.


ಹೆಚ್ಚು ಗಮನಾರ್ಹವೆಂದರೆ ಇವರ ವಂಶಾವಳಿಯನ್ನು ಕೊಟ್ಟಿರುವ ನಾಣ್ಯಗಳು. ಇವುಗಳಲ್ಲಿ ವಂಶದ ಮೂಲಪುರುಷನಿಂದಾರಂಭಿಸಿ, ಆಳುತ್ತಿರುವ ಸುಲ್ತಾನನವರೆಗಿನ ರಾಜವಂಶಾವಳಿ ಇದೆ. 1ನೆಯ ಅಹಮದ್, 1ನೆಯ ಮಹಮ್ಮದ್ ಮತ್ತು ಬಹದೂರ್ ಷಹ-ಇವರ ನಾಣ್ಯಗಳನ್ನು ಇಲ್ಲಿ ಉದಾಹರಿಸಬಹುದು.


ಮುಮ್ಮಡಿ ಮಹಮದ್ ಮತ್ತು ಇಮ್ಮಡಿ ಮುಜ಼ಫರರ ಚಿನ್ನದ ನಾಣ್ಯಗಳು 185 ಗ್ರೇನ್ ತೂಕದವು. ಮೊದಲ ಅರಸರ ನಾಣ್ಯಗಳು 176-180 ಗ್ರೇನ್ ತೂಗುತ್ತವೆ. ಬೆಳ್ಳಿ ನಾಣ್ಯಗಳು 163-176 ಗ್ರೇನ್, ಅರ್ಧನಾಣ್ಯಗಳು 88 ಗ್ರೇನ್, ಕಾಲು ನಾಣ್ಯಗಳು 44 ಗ್ರೇನ್ ತೂಕದವಾಗಿವೆ. ಇಮ್ಮಡಿ ಮಹಮದ್ 229 ಗ್ರೇನ್ ತೂಕದ ತಾಮ್ರದ ನಾಣ್ಯಗಳನ್ನು ಅಚ್ಚುಹಾಕಿಸಿದ. ಆದರೆ ಅವನ ನಾಣ್ಯಗಳು ಸಾಮಾನ್ಯವಾಗಿ 148 ಗ್ರೇನ್ ತೂಕದವುಗಳಾಗಿದ್ದುವು.


ಅನ್ಹಿಲ್ವಾಡದ ಚಾಳುಕ್ಯರು ರಾಜ್ಯವನ್ನು ಕಟ್ಟಿ ವೈಭವದಿಂದ ಸಾಕಷ್ಟು ಸಮಯ ಆಳಿದರೂ ಅವರ ನಾಣ್ಯಗಳೊಂದೂ ಸಿಗದಿರುವುದು ಆಶ್ಚರ್ಯಕರ.