ಗುಣಕ

ವಿನಿಯೋಜನೆಯಲ್ಲಿ (ಇನ್ವಸ್ಟ್‍ಮೆಂಟ್) ವ್ಯತ್ಯಾಸದ ಪರಿಣಾಮವಾಗಿ ವರಮಾನದಲ್ಲಾಗುವ ವ್ಯತ್ಯಾಸವೆಷ್ಟೆಂಬುದನ್ನು ಸೂಚಿಸುವ ಸಂಖ್ಯೆ (ಮಲ್ಟಿಪ್ಲೈಯರ್). ಅರ್ಥಶಾಸ್ತ್ರಜ್ಞ ಜೆ. ಎಂ. ಕೇನ್ಸನ ಒಂದು ವಿವರಣೆ. ಒಂದು ಆರ್ಥಿಕತೆಯಲ್ಲಿಯ ವಿನಿಯೋಜನೆಯಲ್ಲಾಗುವ ಬದಲಾವಣೆಗಳು ಅನುಭೋಗದ ಮೇಲೆ ಪ್ರಭಾವ ಬೀರುವುದರ ಮೂಲಕ ವರಮಾನದ ಮೇಲೆ ಉಂಟುಮಾಡುವ ಸಂಚಿತ ಪರಿಣಾಮವನ್ನು ಗುಣಕತತ್ತ್ವ ವಿವರಿಸುತ್ತದೆ. ಗುಣಕತತ್ತ್ವ ಕೆಲಸಮಾಡುವ ಬಗೆಯನ್ನು ವಿವರಿಸಲು ಒಂದು ಉದಾಹರಣೆಯನ್ನು ಕೊಡಬಹುದು. ರಾಷ್ಟ್ರೀಯ ವರಮಾನ ರೂ. 100 ಕೋಟಿ ಆಗಿದ್ದು, ಅದರಲ್ಲಿ ರೂ. 80 ಕೋಟಿಗಳನ್ನು ಅನುಭೋಗಕ್ಕಾಗಿಯೂ ರೂ. 20 ಕೋಟಿಗಳನ್ನು ಉತ್ಪಾದನೆಯ ಮೇಲೂ ಖರ್ಚು ಮಾಡಲಾಗುತ್ತಿರಬಹುದು. ಅನುಭೋಗ ಪ್ರವೃತ್ತಿ (ಪ್ರೊಪೆನ್ಸಿಟಿ ಟು ಕನ್ಸ್ಯೂಂ) ಮತ್ತು ವಿನಿಯೋಜನೆಗಳು ಸ್ಥಿರವಾಗಿರುವವರೆಗೆ ರಾಷ್ಟ್ರೀಯ ವರಮಾನದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.

ಯಾವುದೇ ಕಾರಣದಿಂದ ವಿನಿಯೋಜನೆ ರೂ. 10 ಕೋಟಿಗಳಷ್ಟು ಹೆಚ್ಚಿದಾಗ ಒಟ್ಟು ವಿನಿಯೋಜನೆ ರೂ. 30 ಕೋಟಿ ಆಗುತ್ತದೆ. ಇದರಿಂದ ರಾಷ್ಟ್ರೀಯ ವರಮಾನದ ಮೇಲೆ ಯಾವ ಬದಲಾವಣೆಯಾಗುತ್ತದೆ ಎಂಬುದನ್ನು ನೋಡಬೇಕು. ರೂ. 10 ಕೋಟಿಗಳ ಹೆಚ್ಚು ವಿನಿಯೋಜನೆಯಿಂದ ಬಂಡವಾಳ ಸರಕುಗಳ ಉತ್ಪಾದನೆಯಲ್ಲಿ ನಿರತರಾದವರ ವರಮಾನ ರೂ. 10 ಕೋಟಿಗಳಷ್ಟು ಅಧಿಕವಾಗುತ್ತದೆ. ಅವರ ವರಮಾನ ಅಧಿಕವಾಗುವುದರಿಂದ ಅವರು ಅನುಭೋಗ ಸರಕುಗಳ ಮೇಲೆ ಹೆಚ್ಚಾಗಿ ಖರ್ಚು ಮಾಡುತ್ತಾರೆ. ಅನುಭೋಗ ಸರಕುಗಳ ಮೇಲೆ ಮಾಡುವ ಖರ್ಚು ಸೀಮಾಂತ ಅನುಭೋಗ ಪ್ರವೃತ್ತಿಯಿಂದ ನಿರ್ಧರಿಸಲ್ಪಡುತ್ತದೆ. ವರಮಾನದಲ್ಲಿ ಬದಲಾವಣೆಯಾದಾಗ ಅನುಭೋಗ ಖರ್ಚು ಯಾವ ಪ್ರಮಾಣದಲ್ಲಿ ಬದಲಾಗುತ್ತದೆಯೆಂಬುದೇ ಸೀಮಾಂತ ಅನುಭೋಗ ಪ್ರವೃತ್ತಿ. ಸೀಮಾಂತ ಅನುಭೋಗ ಪ್ರವೃತ್ತಿ ವರಮಾನದ 1/2 ಅಥವಾ 0.5 ಎಂದು ಭಾವಿಸಬಹುದು. ಬಂಡವಾಳ ಸರಕುಗಳನ್ನು ವಿಕ್ರಯಿಸಿ ಬಂದ ರೂ. 10 ಕೋಟಿ ವರಮಾನದಲ್ಲಿ ರೂ. 5 ಕೋಟಿ (1/2 ಅಥವಾ 0.5) ಅನುಭೋಗಕ್ಕಾಗಿ ಖರ್ಚಾಗುತ್ತದೆ. ಆಗ ಅನುಭೋಗ ಸರಕುಗಳ ಉತ್ಪಾದಕರ ವರಮಾನ ರೂ. 5 ಕೋಟಿಗಳಷ್ಟು ಅಧಿಕವಾಗುತ್ತದೆ. ಅವರು ರೂ. 5 ಕೋಟಿಗಳ 1/2 ಭಾಗವನ್ನು ಅಂದರೆ 2.5 ಕೋಟಿ ರೂಪಾಯಿಗಳನ್ನು ಅನುಭೋಗಕ್ಕಾಗಿ ಖರ್ಚು ಮಾಡುತ್ತಾರೆ. ವರಮಾನದ ಮೊತ್ತ ಬರಿದಾಗುವವರೆಗೆ ಇದೇ ಬಗೆಯ ಪ್ರಕ್ರಿಯೆ ಮುಂದುವರಿಯುತ್ತದೆ. ಹೀಗೆ ಜನರು ತಮ್ಮ ವರಮಾನ ಹೆಚ್ಚಿದಂತೆಲ್ಲ ಅದರ 1/2 ಭಾಗವನ್ನು ಅನುಭೋಗದ ಮೇಲೆ ಖರ್ಚು ಮಾಡುತ್ತ ಹೋದರೆ ಕೊನೆಯಲ್ಲಿ ಒಟ್ಟು ವರಮಾನ ರೂ. 20 ಕೋಟಿಗಳಷ್ಟು ಅಧಿಕವಾಗುತ್ತದೆ. ( 10 + 5 + 2.5 + 1.25 + 0.625 + 0.3125 + 0.15625 ........) ಎಂದರೆ ರೂ. 10 ಕೋಟಿಗಳ ವಿನಿಯೋಜನೆಯಿಂದ ರಾಷ್ಟ್ರೀಯ ವರಮಾನ ರೂ. 20 ಕೋಟಿಗಳವರೆಗೆ ವಿಸ್ತರಣೆಯಾಗುತ್ತದೆ. ಇದರಲ್ಲಿ ರೂ. 10 ಕೋಟಿ ಪ್ರಾಥಮಿಕ ವಿನಿಯೋಜನೆ ರೂ. 10 ಕೋಟಿ ದ್ವಿತೀಯಕ ಅನುಭೋಗ ಪುನರ್ ಖರ್ಚು.

ಗುಣಕ ಮತ್ತು ಸೀಮಾಂತ ಅನುಭೋಗ ಪ್ರವೃತ್ತಿ: ಗುಣಕದ ಬೆಲೆಗೂ ಸೀಮಾಂತ ಅನುಭೋಗ ಪ್ರವೃತ್ತಿಗೂ ಸಂಬಂಧ ನಿಕಟವಾದ್ದು. ಸೀಮಾಂತ ಅನುಭೋಗ ಪ್ರವೃತ್ತಿ ಅಧಿಕವಾದರೆ ಗುಣಕವೂ ಅಧಿಕವಾಗುತ್ತದೆ. ವರಮಾನದ ಪ್ರಮಾಣ ಹೆಚ್ಚಾಗುತ್ತದೆ. ಸೀಮಾಂತ ಕಡಿಮೆಯಾದರೆ ಗುಣಕವೂ ಕಡಿಮೆಯಾಗುತ್ತದೆ. ವರಮಾನದ ಪ್ರಮಾಣವೂ ಕಡಿಮೆಯಾಗುತ್ತದೆ. ಗುಣಕ, ಸೀಮಾಂತ ಅನುಭೋಗ ಪ್ರವೃತ್ತಿ ಇವುಗಳ ಸಂಬಂಧವನ್ನು ಸೂಚಿಸುವ ಸಮೀಕರಣವನ್ನು ಮುಂದೆ ಕೊಟ್ಟಿದೆ.

ಇಲ್ಲಿ ಗುಣಕ, ಸೀಮಾಂತ ಅನುಭೋಗ ಪ್ರವೃತ್ತಿ.

ಕೇನ್ಸನ ಗುಣಕ ತತ್ತ್ವದ ವಿರುದ್ಧವಾಗಿ ಮೂರು ಮುಖ್ಯ ಟೀಕೆಗಳುಂಟು: 1 ವರಮಾನದ ಮೇಲೆ ಪ್ರಚೋದಿತ ಅನುಭೋಗದ ಪರಿಣಾಮವನ್ನು ಮಾತ್ರ ಗುಣಕ ಗಣನೆಗೆ ತೆಗೆದುಕೊಂಡು, ವಿನಿಯೋಜನೆಯ ಮೇಲೆ ಪ್ರಚೋದಿತ ಅನುಭೋಗದ ಪರಿಣಾಮವೇನೆಂಬುದನ್ನು ಕಡಿಗಣಿಸಿದೆ. 2 ಕೇನ್ಸನ ಗುಣಕ ತತ್ತ್ವ ನಿಂತಿರುವುದು ಎರಡು ಸಾಮಾನ್ಯ ಊಹೆಗಳ ಆಧಾರದ ಮೇಲೆ: ವರಮಾನಗಳನ್ನು ಅನುಭೋಗ ಅವಲಂಬಿಸಿದೆ ಎಂಬುದು ಒಂದು ಊಹೆ. ಆದ್ದರಿಂದ ವರಮಾನ ಆಧಿಕವಾದಾಗ ಅನುಭೋಗವೂ ಅಧಿಕವಾಗುತ್ತದೆಯೆನ್ನಲಾಗಿದೆ. ಸೀಮಾಂತ ಅನುಭೋಗ ಪ್ರವೃತ್ತಿ ವರಮಾನದ ಸಮಾನತೆಗಿಂತ ಕಡಿಮೆ ಇದ್ದು ಸ್ಥಿರವಾಗಿದೆ ಎಂಬುದು ಇನ್ನೊಂದು ಊಹೆ. ಆದರೆ ವಾಸ್ತವವಾಗಿ ವರಮಾನವನ್ನು ಅನುಭೋಗ ಅವಲಂಬಿಸಿರುವುದಿಲ್ಲ ಮತ್ತು ಸೀಮಾಂತ ಪ್ರವೃತ್ತಿ ಸ್ಥಿರವಾಗಿರುವುದಿಲ್ಲ. 3 ಕೇನ್ಸನ ಗುಣಕ ತತ್ತ್ವ ಸ್ಥಿತ್ಯಾತ್ಮಕವಾದ್ದೇ ಹೊರತು ಚಲನಾತ್ಮಕವಾದ್ದಲ್ಲ.

ಕೇನ್ಸನ ಗುಣಕ ತತ್ತ್ವದ ವಿರುದ್ಧ ಇರುವ ಟೀಕೆಗಳಲ್ಲಿ ಸತ್ಯಾಂಶವಿರದಿದ್ದರೂ ಆರ್ಥಿಕ ವಿಶ್ಲೇಷಣೆಯಲ್ಲಿ ಅದರ ಮಹತ್ತ್ವವನ್ನು ಯಾರೂ ಕಡೆಗಣಿಸುವಂತಿಲ್ಲ. ಆರ್ಥಿಕ ನಿಯಮಗಳ ಮೇಲೆ ಗುಣಕದ ಪ್ರಭಾವ ಬಹಳವಿದೆ. ಕೇನ್ಸ್ ಗುಣಕವನ್ನು ವರಮಾನ ವೃದ್ಧಿ ವಿಶ್ಲೇಷಣೆಗೆ ಒಂದು ಪ್ರಮುಖ ಸಾಧನವಾಗಿಸಿದ್ದಾನೆ. ಕೇನ್ಸ್ ಗುಣಕದ ಆಧಾರದ ಮೇಲೆ ಮುಗ್ಗಟ್ಟಿನ ಸಮಯದಲ್ಲಿ ಸಾರ್ವಜನಿಕ ವಿನಿಯೋಜನೆಯನ್ನು ಪ್ರತಿಪಾದಿಸಿದ್ದಾನೆ. ವಿನಿಯೋಜನೆ ಅಧಿಕವಾದರೆ ವರಮಾನ ಅಧಿಕವಾಗುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ-ಎಂಬುದನ್ನು ಗುಣಕ ತತ್ತ್ವ ಸಾರುತ್ತದೆ. ಮುಗ್ಗಟ್ಟಿನ ಕಾಲದಲ್ಲಿ ಸರ್ಕಾರ ಲೋಕೋಪಯೋಗಿ ಕಾರ್ಯಗಳಲ್ಲಿ ವಿನಿಯೋಜನೆಯನ್ನು ಹೆಚ್ಚಿಸುವುದರ ಮೂಲಕ ವರಮಾನ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದು. ವ್ಯಾಪಾರ ಆವರ್ತಗಳ ವಿವಿಧಾವಸ್ಥೆಗಳನ್ನು ವಿವರಿಸಲು ಗುಣಕ ವಿಧಾನ ಉಪಯುಕ್ತವಾಗಿದೆ. (ಕೆ.ಜಿ.ಒ.)